“ಮೀನಾ!”

ಉತ್ತರವಿಲ್ಲ.

ತಾಯಿ ಒಲೆಯ ಮೇಲೆ ಹಿತ್ತಾಳೆಯ ಬೋಗುಣಿಯಲ್ಲಿದ್ದ ಪಲ್ಯವನ್ನು ಸೌಟಿನಿಂದ ತಿರುಗಿಸುತ್ತಿದ್ದುದನ್ನು ನಿಲ್ಲಿಸಿ ಮತ್ತೆ ಗಟ್ಟಿಯಾಗಿ ಕರೆದಳು.

ಮೀನಾಕ್ಷಿ ಮೆಲ್ಲಗೆ “‌ಆ” ಎಂದರು. ತಾಯಿಗೆ ಕೇಳಿಸಲಿಲ್ಲ, ಸ್ವಲ್ಪ ಮುನಿದುಕೊಂಡು ಮತ್ತೆ ಕೂಗಿದಳು:

“ಏ ಮೀನೀ”

“ಏನಮ್ಮಾ?” ಮೀನಾಕ್ಷಿಯೂ ಸ್ವಲ್ಪ ಕೋಪದಿಂದಲೇ ಗಟ್ಟಿಯಾಗಿ ಓಕೊಂಡಿದ್ದಳು.

“ಏನು ಮಾಡುತ್ತಿದ್ದೀಯೇ? ನಿನಗೇನು ಕಿವಿ ಕೆಟ್ಟಿದೆಯೇನೆ? ಓಕೊಳ್ಳಬಾರದೇನೆ?”

ಹೆಣೆದುಕೊಳ್ಳುತ್ತಿದ್ದ ಮಿಂಚುಗಪ್ಪು ಕೂದಲಿನ ಉದ್ದವಾದ ಜಡೆಯನ್ನು ಕೈಯಲ್ಲಿ ಹಿಡಿದುಕೊಂಡೇ ಮೀನಾಕ್ಷಿ ಅಡುಗೆ ಮನೆಯ ಬಾಗಿಲಿಗೆ ಬಂದು “ಏನಮ್ಮಾ?” ಎಂದು ಹೊಸ್ತಿಲ ಮೇಲೆ ನಿಂತಳು.

ಮಗಳನ್ನು ನೋಡಿದೊಡನೆಯೆ ತಾಯಿಯ ಸಿಟ್ಟು ಇಳಿದು ಹೋಯಿತು. ನಗುಮೊಗವಾಗಿ ಹೇಳಿದರು:

“ಮೇಷ್ಟರು ಬಂದಾರಂತಾ ಕಾಣ್ತದೆ ಕಣೇ. ಬೇಗ ತಲೆಬಾಚಿಕೊಂಡು ಹೋಗಬಾರದೇನೆ?”

ಮೇಷ್ಟರು ಎಂಬ ಮಾತನ್ನು ಕೇಳಿದ ಕೂಡಲೆ ಉಪದ್ರವದ ನೆನಪಾದಂತಾಗಿ ಮೀನಾಕ್ಷಿಯ ಮುಖ ನಸು ಕಂದಿತು. ಸಿಡುಕಿನಿಂದ ಹೇಳಿದಳು:

“ಬಂದರೆ ಬರಲಿ! ಕೂತಿರ್ತಾರೆ! ದಿನಾ ಹೊತ್ತಿಗೆ ಮುಂಚೆ ಬರೋದು!….”

“ಇನ್ನೆಷ್ಟು ತಡದೇ ಬರೋದು?”

“ಮೊದಲು ಮೊದಲು ಎಂಟೂವರೆ ಒಂಬತ್ತು ಗಂಟೆ ಮಾಡಿಕೊಂಡು ಬರುತ್ತಿದ್ದರು. ಆಮೇಲೆ ಎಂಟು ಗಂಟೆಗೆ ಬರೋಕೆ ಸುರುಮಾಡಿದರು. ಈಗ ಏಳೂವರೆ ಗಂಟೆಗೆ ಬರ್ತಾರೆ! ಕಾಯ್ಕೊಂಡು ಕೂತಿರಲಿ! ನಾನಿನ್ನೂ ಹೂ ಮುಡಿದುಕೊಂಡಿಲ್ಲ. ಕುಂಕುಮ ಇಟ್ಟುಕೊಂಡಿಲ್ಲ.”

ಮೀನಾಕ್ಷಿ ಹೊರಗೆ ಹೋದಳು. ತಾಯಿ ದಿನದಿನಕ್ಕೂ ಬೆಳೆಯುತ್ತಿದ್ದ ತಮ್ಮ ಮಗಳನ್ನು ನೆನೆದು ಹಿಗ್ಗುತ್ತಾ ಮತ್ತೆ ಪಲ್ಯ ತಿರುಗಿಸತೊಡಗಿದಳು.

ಮೀನಾಕ್ಷಿ ‘ಕಾಯ್ಕೊಂಡು ಕೂತಿರಲಿ!’ ಎಂದು ಹೇಳಿ ಹೋಗಿದ್ದರೂ ಮೇಷ್ಟರು ಬಹಳ ಹೊತ್ತು ಕಾಯಲಿಲ್ಲ. ಓದುವ ಕೋಣೆಯಲ್ಲಿ ಯಾವಾಗಲೂ ಹಾಕಿರುತ್ತಿದ್ದ ಚಾಪೆಯ ಮೇಲೆ ಪದ್ಮಾಸನ ಹಾಕಿ ಕೂತು ಗೋಡೆಗೆ ಒರಗಿಕೊಂಡು, ಯಾವಾಗಲೂ ತೆರದೇ ಇರುತ್ತಿದ್ದ ಬಾಗಿಲ ಕಡೆಗೆ ನೋಡುತ್ತಿದ್ದರು.

ಉಟ್ಟುಕೊಂಡಿದ್ದ ಲಂಗ ಸದ್ದುಮಾಡುವಷ್ಟು ವೇಗದಿಂದ ಮೀನಾಕ್ಷಿ ಬಂದಳು. ತರುಣರಾಗಿದ್ದ ಮೇಷ್ಟರ ಮುಖ ಹರ್ಷದಿಂದ ಅರಳಿತು. ಕಣ್ಣು ತೇಜಸ್ವಿಯಾದುವು. “ಓಹೋ, ಇವತ್ತು ಸೀರೆ ಉಟ್ಟುಕೊಂಡಿಲ್ಲ!” ಎಂದುಕೊಂಡರು ತಮ್ಮೊಳಗೆ ತಾವೆ.

ಮೀನಾಕ್ಷಿಯ ವಯಸ್ಸು ಲಂಗಕ್ಕೂ ಸೀರೆಗೂ ನಡುವೆ ಉಯ್ಯಾಲೆಯಾಡುತ್ತಿತ್ತು. ಆದರೆ ಈಗ ಆಕೆಗೆ ಲಂಗಕ್ಕಿಂತ ಸೀರೆಯೇ ಚೆನ್ನಾಗಿ ಒಪ್ಪುತ್ತಿತ್ತೆಂದು ಆಕೆಯ ಮನೇಮೇಷ್ಟರ ಅಭಿಪ್ರಾಯವಾಗಿತ್ತು. ಅದೂ ನಿಜವೆ. ಸೀರೆ ಹೊಸ ಪರಿಚಯವಾಗಿದ್ದುದರಿಂದ ಅದನ್ನು ಉಟ್ಟುಕೊಂಡಾಗಲೆಲ್ಲಾ ಆಕೆಯ ಮುಖ ನಾಣಿನಿಂದ ಕೆಂಪೇರುತ್ತಿತ್ತು. ಆ ನಾಚಿಕೆಗೆ ಎಲ್ಲರೂ ತನ್ನನ್ನೇ ನೋಡುತ್ತಾರೆಂಬ ಬಿಂಕ ಬೇರೆ ಸೇರುತ್ತಿತ್ತು. ಬಾಲ್ಯವು ಕೌಮಾರಕ್ಕೆ ದಾಟುತ್ತಿದ್ದುದರಿಂದ ನಾಚಿಕೆ ಬಿಂಕಗಳ ದೆಸೆಯಿಂದಲೂ ಆಕೆ ಉಟ್ಟುಕೊಳ್ಳುತ್ತಿದ್ದ ತರತರದ ಬಣ್ಣ ಬಣ್ಣದ ಸೀರೆಗಳ ಪ್ರಭಾವದಿಂದಲೂ ಸಾಧಾರಣವಾಗಿರುತ್ತಿದ್ದ ಮೀನಾಕ್ಷಿಯ ರೂಪ ಒಂದು ತೆರನಾದ ಸೌಂದರ್ಯವಾಗಿ ಕಾಣುತ್ತಿತ್ತು. ಆ ಚೆಲುವಿನ ಬಿರಿಮುಗುಳ ಜೇನಿನ ನೋಟದೌತಣಕ್ಕಾಗಿಯೆ ತುಂಬಿ ಹೊತ್ತಿಗೆ ಮುಂಚೆ ಪಾಠ ಹೇಳಿಕೊಡಲು ಬರುತ್ತಿದ್ದುದು. ಈ ಸತ್ಯ ತುಂಬಿಯ ತಲೆಗೂ ಹೊಕ್ಕಿರಲಿಲ್ಲ; ಮೊಗ್ಗಿನ ಎದೆಗೂ ಸೋಂಕಿರಲಿಲ್ಲ.

ಮೀನಾಕ್ಷಿಯ ಮನೇಮೇಷ್ಟರಿಗೆ ಸುಮಾರು ಇಪ್ಪತ್ತಕ್ಕೆ ಮೀರಿರಬಹುದು ವಯಸ್ಸು. ಆದರೂ ನೋಡುವುದಕ್ಕೆ ಹದಿನೈದು ಹದಿನಾರು ವರ್ಷದವರಾಗಿ ತೋರುತ್ತಿದ್ದರು. ಅದಕ್ಕೆ ಕಾರಣ ಅವರ ಮೈಯಲ್ಲಿದ್ದ ಎಳೆತನವಾಗಿರಲಿಲ್ಲ; ಮನೆಯಲ್ಲಿದ್ದ ಬಡತನವಾಗಿತ್ತು. ಆ ಬಡತನದ ದೆಸೆಯಿಂದಲೆ ಅವರು ನಾಲ್ಕಾರು ಮನೆಗಳಲ್ಲಿ ಹುಡುಗರಿಗೆ ಪಾಠ ಹೇಳಿಕೊಡುತ್ತಾ ದುಡ್ಡು ಸಂಪಾದಿಸಿ ತಾವೂ ಹೈಸ್ಕೂಲಿನಲ್ಲಿ ಓದುತ್ತಿದ್ದರು.

ನೋಡುವುದಕ್ಕೆ ಬಡಕಲಾಗಿದ್ದರೂ, ಅವರು ಹಾಕಿಕೊಳ್ಳುತ್ತಿದ್ದ ಉಡುಪು ಯಾವಾಗಲೂ ಸಡಿಲವಾಗಿ ಹಾಸ್ಯಾಸ್ಪದವಾಗಿ ತೋರುತ್ತಿದ್ದರೂ, ಬಿಳಿಯ ಖಾದಿಯ ಟೋಪಿಯ ಹಿಂಭಾಗದಲ್ಲಿ ಜುಟ್ಟಿನ ಕರಿಯ ಗಂಟು ನಿರಂತರ ದೈನ್ಯಸೂಚಕವಾಗಿರುತ್ತಿದ್ದರೂ, ನೆಮ್ಮದಿಯಾಗಿದ್ದಿದ್ದರೆ ಮೀನಾಕ್ಷಿಯ ಮೇಷ್ಟರು ರೂಪದಲ್ಲಾಗಲಿ ಉಡುಗೆತೊಡುಗೆಗಳಲ್ಲಾಗಲಿ ಷೋಕಿಯಲ್ಲಾಗಲಿ ನವೀನ ಯುವಕರಾರಿಗೂ ಬಿಟ್ಟುಕೊಡುತ್ತಿರಲಿಲ್ಲ ಎಂಬುದನ್ನು ಅವರ ಕಣ್ಣು ಮಾತ್ರ ಸೂಚಿಸುತ್ತಿತ್ತು. ಮೈಯಲ್ಲಿ, ಉಡುಪಿನಲ್ಲಿ, ಮೋರೆಯಲ್ಲಿ ತೋರುತ್ತಿದ್ದ ದೀನಭಾವವು ಕಣ್ಣಿನಲ್ಲಿರಲಿಲ್ಲ. ಕಣ್ಣಿನಲ್ಲಿ ಯಾವುದೊ ಒಂದು ಸಮಯ ನಿರೀಕ್ಷೆ ಮಿಂಚುತ್ತಿತ್ತು. ನೋಟವು ಯಾವುದೊ ಒಂದು ಅವಕಾಶಕ್ಕಾಗಿ ಹೊಂಚುಹಾಕಿಕೊಂಡು ಕಾಯುತ್ತಿರುವಂತೆ, ಇಲಿಯ ಬಿಲದ ಬಾಗಿಲಿನ ಹಸಿದ ಬೆಕ್ಕಿನಂತಿತ್ತು.

ಅವರು ತುಂಬಾ ಬುದ್ಧಿವಂತರೆಂದೇನೊ ಎಲ್ಲರಿಗೂ ಗೊತ್ತಿತ್ತು. ಅವರ ಸ್ಕೂಲಿನಲ್ಲಿ ಅವರ ಪ್ರತಿಭೆಯ ಖ್ಯಾತಿ ಹಬ್ಬಿತ್ತು. ನೋಡುವುದಕ್ಕೆ ಅರಸಿಕ ದರಿದ್ರರಂತಿದ್ದರೂ ಅಂತರಂಗದಲ್ಲಿ ರಸಿಕ ಶ್ರೀಮಂತರಾಗಿದ್ದರು. ಪಠ್ಯಪುಸ್ತಕಗಳನ್ನಲ್ಲದೆ ಇತರ ಸಾಹಿತ್ಯವನ್ನೂ ಓದುತ್ತಿದ್ದರು. ಅದರಲ್ಲಿಯೂ ರಸಸಾಹಿತ್ಯವೆಂದರೆ ಬಹಳ ಪ್ರೀತಿ. ಅವರ ಸ್ಕೂಲಿನ ಪುಸ್ತಕಭಂಡಾರದಲ್ಲಿದ್ದ ಕಾದಂಬರಿಗಳೊಂದನ್ನೂ ಅವರು ಓದದೆ ಬಿಟ್ಟಿರಲಿಲ್ಲ. ಕೆಲವು ಕಾದಂಬರಿ ಮತ್ತು ಕಥೆಗಳನ್ನಂತೂ ಅನೇಕ ಸಾರಿ ಪಾರಾಯಣಮಾಡಿದ್ದರು. ಒಮ್ಮೊಮ್ಮೆ ವಾಸ್ತವ ಲೋಕಕ್ಕಿಂತ ಹೆಚ್ಚಾಗಿ ಪುಸ್ತಕಲೋಕದಲ್ಲಿಯೆ ವಾಸಿಸುತ್ತಿದ್ದರು. ತಮಗೆ ಇಷ್ಟರಾಗಿ ತೋರಿಬಂದ ವಾಸ್ತವ ವ್ಯಕ್ತಿಗಳನ್ನು ತಮ್ಮ ಪುಸ್ತಕಲೋಕದ ಪ್ರಜೆಗಳನ್ನಾಗಿ ಮಾಡಿದ ಹೊರತೂ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಮತ್ತು ಅರ್ಥವಾಗುತ್ತಲೂ ಇರಲಿಲ್ಲ. ಹಾಗೆ ಅವರು ತಮ್ಮ ಪುಸ್ತಕ ಜಗತ್ತಿಗೆ ಸೇರಿಸಿದ್ದ ಪ್ರಜೆಗಳಲ್ಲಿ ನಮ್ಮ ಮೀನಾಕ್ಷಿಯೂ ಒಬ್ಬಳಾಗಿದ್ದಳು. ಅವರ ಪುಸ್ತಕ ಪ್ರಪಂಚದ ಮೀನಾಕ್ಷಿಯ ಮೇಲೆ ಅವರ ಸರ್ವಾಧಿಕಾರ ಸಂಪೂರ್ಣವಾಗಿತ್ತು. ಅಲ್ಲಿ ಅವರಿಗೆ ಮೇಷ್ಟರು ಎಂಬ ಬಿರುದು ಸಂಪೂರ್ಣವಾಗಿ ಸಾರ್ಥಕವಾಗಿತ್ತು. ಗುರುವಾದವನು ಶಿಷ್ಯನ ವ್ಯಕ್ತಿತ್ವವನ್ನು ರಚಿಸಬೇಕಲ್ಲವೆ? ಅಲ್ಲಿ, ಆ ಪುಸ್ತಕ ಪ್ರಪಂಚದಲ್ಲಿ, ತಂದೆ ತಾಯಿಗಳ ಆಡಚಣೆಯಿಲ್ಲದೆ, ಸಮಾಜದ ಕಟ್ಟುಕಟ್ಟಳೆಗಳ ಕಟ್ಟೆಕಾಲುವೆಗಳಿಲ್ಲದೆ, ಕಡೆಗೆ ಮೀನಾಕ್ಷಿಯ ಸ್ವಂತ ಸಂಸ್ಕಾರಗಳ ವ್ಯಕ್ತಿ ಸ್ವಾತಂತ್ರ್ಯವೂ ಇಲ್ಲದೆ, ಮೀನಾಕ್ಷಿಯ ವ್ಯಕ್ತಿತ್ವವನ್ನು ಹೇಗೆ ಬೇಕೆಂದರೆ ಹಾಗೆ ರಚಿಸಬಹುದಾಗಿತ್ತು.

ಆದರೆ ಒಂದೊಂದು ಸಾರಿ ಮೇಷ್ಟರ ಮನಸ್ಸಿನ ಪುಸ್ತಕಪ್ರಪಂಚದ ಮೀನಾಕ್ಷಿಗೂ ವಾಸ್ತವಜಗತ್ತಿನ ಮೀನಾಕ್ಷಿಗೂ ಢಕ್ಕಾಢಿಕ್ಕಿಯಾಗಿ ಗುರುಶಿಷ್ಯರಿಬ್ಬರಿಗೂ ಗಡಿಬಿಡಿಯಾಗುತ್ತಿತ್ತು. ಆ ರಸಜಗತ್ತೊಂದರಲ್ಲಿಯೇ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ಗುರುವಿನ ಪಾಡಿಗೆ ಗುರು, ಶಿಷ್ಯೆ ಪಾಡಿಗೆ ಶಿಷ್ಯೆ ಹೋಗುತ್ತಿದ್ದರು. ಆದರೆ ವಾಸ್ತವಜಗತ್ತಿನಲ್ಲಿ ಗುರುವಿಗೆ ಸಂಬಳದ ಕಟ್ಟೂ, ಶಿಷ್ಯೆಗೆ ತಂದೆತಾಯಿಯರ ಭೀತಿಯ ಕಟ್ಟೂ ಇದ್ದುದರಿಂದ ಅವರು ಪಾಠ ಹೇಳಿಕೊಡುತ್ತಿದ್ದರು. ಇವಳು ಪಾಠ ಕಲಿಯುತ್ತಿದ್ದಳು.

ಮೇಷ್ಟರು ಮೀನಾಕ್ಷಿಯನ್ನು ಅ ಆ ಇ ಈ ಇಂದಲೂ ಬಲ್ಲವರಾಗಿದ್ದರು. ಆಕೆಯನ್ನು ತಮ್ಮ ಕಿರಿತಂಗಿಯಂತೆ ಭಾವಿಸಿ, ಪ್ರೀತಿಸಿ, ಮುದ್ದಿನಿಂದ ಕಲಿಸುತ್ತಿದ್ದರು.

ಮೀನಾಕ್ಷಿ ಕುರೂಪಿಯಲ್ಲದಿದ್ದರೂ ಅಷ್ಟೇನೂ ಮನಮೋಹಿಸುವ ಚೆಲುವೆಯಾಗಿರಲಿಲ್ಲ. ಅವಳಲ್ಲಿದ್ದ ವಿಶೇಷತೆ ಎಂದರೆ ತಲೆ ಕೂದಲು. ಚಿಕ್ಕಂದಿನಲ್ಲಿಯೆ ನೀಳವಾಗಿ ತೋರವಾಗಿ ಕಪ್ಪಗೆ ಬೆಳೆದಿತ್ತು. ಎರಡಲ್ಲ ಮೂರು ಜಡೆಗಳನ್ನು ಬೇಕಾದರೂ ಹಾಕಿಕೊಳ್ಳಬಹುದಿತ್ತು. ಕೆಲವು ಸಾರಿ ಅವಳ ತಾಯಿ ಮೂರು ಜಡೆಗಳನ್ನೂ ಹಾಕುತ್ತಿದ್ದರು. ವಿರಾಮವಿದ್ದಾಗ. ಮೀನಾಕ್ಷಿ ಮೂರು ಜಡೆ ಹಾಕಬೇಕೆಂದು ಪೀಡಿಸಿದರೆ ಜಡೆಗೆರಡರಂತೆ ಕಡುಬು ಕೊಡುತ್ತಿದ್ದರು. ಆದ್ದರಿಂದ ಮೀನಾಕ್ಷಿ ತಾನೇ ಜಡೆ ಹಾಕಿಕೊಳ್ಳುವುದನ್ನು ಕಲಿತಳು. ಅವಸರವಿಲ್ಲದಿದ್ದಾಗ ಕಡೆಯಪಕ್ಷ ಎರಡು ಜಡೆಗಳನ್ನಾದರೂ ಹಾಕಿಕೊಳ್ಳುತ್ತಿದ್ದಳು. ಅದಕ್ಕಾಗಿಯೇ ತಡವಾಗಿ ಪಾಠಕ್ಕೆ ಬರಬೇಕೆಂದು ಮೇಷ್ಟರಿಗೆ ಹೇಳಿದ್ದಳು. ಆದರೆ ಮೇಷ್ಟರಿಗೆ ಆಕೆ ಹೇಗೆ ಜಡೆ ಹಾಕಿಕೊಂಡರೂ ಲಕ್ಷಣವಾಗುತ್ತಿದ್ದುದರಿಂದ ಅವರು ತಡವಾಗಿ ಬರುವುದಕ್ಕೆ ಬದಲಾಗಿ ಹೊತ್ತಿಗೆ ಮುಂಚೆಯೇ ಬರತೊಡಗಿದ್ದರು. ಆ ವಿಚಾರವಾಗಿ ಮೇಷ್ಟರಿಗೂ ಮೀನಾಕ್ಷಿಗೂ ನಾಲ್ಕಾರು ಮಾತುಕತೆ ನಡೆದು ಮೇಷ್ಟರು ಅಂಗಲಾಚಿ ಬೇಡಿಕೊಂಡರು:

“ಅಮ್ಮಾ, ನಾನಿನ್ನೂ ಮೂರು ನಾಲ್ಕು ಮನೆಗಳಲ್ಲಿ ಪಾಠ ಹೇಳಿ ಆಮೇಲೆ ಸ್ಕೂಲಿಗೆ ಹೋಗಬೇಕು. ಅದಕ್ಕೋಸ್ಕರ ಬೇಗ ಬರುತ್ತೇನೆ…”

“ಬೇರೆ ಮನೆಗೆ ಹೋಗಿ ಆಮೇಲೆ ಇಲ್ಲಿಗೆ ಬನ್ನಿ…”

“ಎಲ್ಲರೂ ಹೀಗೇ ಹೇಳಿದರೆ ಹೇಗೆ ಮಾಡೋದಮ್ಮ?”

“ಹಾಗಂತ ಹೇಳಿ ನನಗೊಬ್ಬಳಿಗೇ ಯಾಕೆ ದಿನಾ ಮೊದಲು ಪಾಠಕ್ಕೆ ಬರ್ತೀರಿ. ಅವರ ಮನೆಗಳಿಗೂ ಒಂದೊಂದು ದಿವಸ ಮೊದಲು ಹೋಗಿ.”

ಮೇಷ್ಟರು ಮೀನಾಕ್ಷಿಯ ಗಿಣಿಮೂಗನ್ನೇ ನೋಡುತ್ತಾ ದೀನವಾಣಿಯಿಂದ “ಅಮ್ಮಾ, ಉಳಿದವರಾರೂ ನಿನ್ನ ಹಾಗಲ್ಲಮ್ಮಾ” ಎಂದರು.

ಮುಖ ಕೆಂಪೇರಿ ಮೀನಾಕ್ಷಿ “ಅದೇನು! ನಾನು ಮಾತ್ರ ನೀವು ಹೇಳಿದ್ಹಾಗೆ ಕೇಳ್ತೀನಿ ಅಂತೇನು?” ಎಂದಳು.

“ಹಾಗಲ್ಲಮ್ಮಾ, ಅವರ್ಯಾರೂ ನಿನ್ನಷ್ಟು ಒಳ್ಳೆಯವರಲ್ಲ!”

ಮೀನು ಗಾಳದ ಹುಳುವನ್ನು ಕಚ್ಚಿ ನುಂಗುವಂತೆ ಮೀನಾಕ್ಷಿ ಮೇಷ್ಟರ ಆ ಪ್ರಶಂಸೆಗೆ ಸೋತುಹೋದಳು.

ಅಂದಿನಿಂದ ಮೀನಾಕ್ಷಿ ಮೇಷ್ಟರೊಡನೆ ಬೇರೊಂದು ರೀತಿಯಿಂದ ವರ್ತಿಸತೊಡಗಿದರು. ಮೇಷ್ಟರೂ ಅವಳ ಮೂಗು ಕಣ್ಣು ಹುಬ್ಬು ತಲೆಗೂದಲು ಇವುಗಳ ವಿಚಾರವಾಗಿ ವಿನೋದದಿಂದಲೆಂಬಂತೆ ಹೊಗಳಿಕೆಯ ಮಾತುಗಳನ್ನು ಬಾಯಿಬಿಟ್ಟು ಆಡತೊಡಗಿದರು. ಅಷ್ಟೇನೂ ಸುಂದರಿ ಅಲ್ಲದಿದ್ದರೂ ಸುಂದರಿ ಅನ್ನಿಸಿಕೊಳ್ಳಬೇಕೆಂದು ಮನಸ್ಸಿದ್ದ ಆಕೆಗೆ ಮೇಷ್ಟರ ಮೇಲೆ ವಿಶ್ವಾಸ ಹೆಚ್ಚಿತು. ಕಡೆಗೆ ಮೇಷ್ಟರು ಆದರ್ಶಮೂರ್ತಿಯಾಗಿ ಕಾಣತೊಡಗಿದರು.

ಒಮ್ಮೆ ಮೀನಾಕ್ಷಿ ನೀಲಿರೇಶಿಮೆಯ ಸೀರೆಯುಟ್ಟು, ಹಣೆದೆರಡು ಜಡೆಗಳನ್ನು ಎರಡು ಹೆಗಲುಗಳ ಮೇಲಿಂದ ಎದೆಯ ಮೇಲೆ ಜೋಲಾಡುವಂತೆ ಹಾಕಿಕೊಂಡು ಪಾಠಕ್ಕೆ ಬಂದಾಗ ಮೇಷ್ಟರು ಮುಕ್ತಕಂಠದಿಂದ ಹೊಗಳಿದ್ದರು. ಅಂದಿನಿಂದ ಅವಳು ಲಂಗ ಹಾಕುವುದನ್ನು ಸಂಪೂರ್ಣವಾಗಿ ವರ್ಜಿಸಿಯೇ ಬಿಟ್ಟಳು.

ಒಂದು ದಿನ ಮೇಷ್ಟರು ಓದುಮನೆಯಲ್ಲಿ ಪದ್ಮಾಸನ ಹಾಕಿ ಕೂತು ಮೀನಾಕ್ಷಿಗಾಗಿ ಕಾಯುತ್ತಿದ್ದರು. ಕೆಂಪು ಹೂವಂಚಿನ ಹಸುರು ಸೀರೆಯನ್ನುಟ್ಟು ಮೀನಾಕ್ಷಿ ಪಾಠಕ್ಕೆ ಬಂದಳು. ಅವರ ಕಣ್ಣಿಗೆ ಅವಳು ತಮ್ಮ ಪುಸ್ತಕ ಜಗತ್ತಿನ ಮೀನಾಕ್ಷಿಯಾಗಿಯೇ ತೋರಿದಳು. ಕಲೋಪಾಸಕರೂ ಕಾವ್ಯ ಪ್ರೇಮಿಗಳೂ ಆಗಿದ್ದ ಅವರ ಮನಸ್ಸಿಗೆ ಕನ್ಯೆ ಚೆಲುವಿನಲ್ಲಿ ಏನೊ ಒಂದು ಹೊಸ ರುಚಿ ಕಂಡುಬಂದಿತು. ಎಂದೂ ಕಂಪಿಸದಿದ್ದ ಅವರ ಎದೆ ಏಕೋ ಕಂಪಿಸಿತು. ಮೈ ಬಿಸಿಯಾದ ಹಾಗಾಯಿತು. ಮೀನಾಕ್ಷಿಯ ಕಣ್ಣನ್ನು ಅವರ ಕಣ್ಣು ಎದುರುಗೊಳ್ಳಲಾರದಾಯಿತು. ಪಾಠ ಹೇಳುವುದಕ್ಕೆ ಪ್ರಯತ್ನಿಸಿದರೂ ಆಗಲಿಲ್ಲ. ಕೈಲಿದ್ದ ಪುಸ್ತಕ ನಡುಗತೊಡಗಿತು, ಮೈಸರಿಯಾಗಿಲ್ಲವೆಂದು ಹೇಳಿ ಪಾಠ ಹೇಳದೆಯೇ ಹೊರಟು ಹೋದರು.

ಹೋದವರು ಎರಡು ದಿನಗಳಾದರೂ ಬರಲಿಲ್ಲ. ಮೀನಾಕ್ಷಿಯ ತಂದೆ ಹೇಳಿಕಳಿಸಿದ ಮೇಲೆ ಬಂದು ಏನೇನೋ ನೆವ ಹೇಳಿ ಪುನಃ ಪಾಠಕ್ಕೆ ಪ್ರಾರಂಭಿಸಿದರು.

ಇದಾದ ಕೆಲವು ದಿನಗಳ ಮೇಲೆ ಒಂದು ದಿನ ಬೆಳಗ್ಗೆ ಮೀನಾಕ್ಷಿ ಪಾಠಕ್ಕೆ ಹೋದಾಗ ಮೇಷ್ಟರು ಟೋಪಿಯಿಲ್ಲದೆ ಬಂದಿದ್ದನ್ನು ಕಂಡು ಆಶ್ಚರ್ಯಗೊಂಡಳು. ಜುಟ್ಟು ಮಾಯವಾಗಿ ಕ್ರಾಪು ಬಂದದ್ದನ್ನೂ ಕಂಡು ಬೆರಗಾಗಿ ಮುಗುಳುನಕ್ಕಳು. ಮೇಷ್ಟರಿಗೂ ಆ ನಗು ಗೋಚರವಾಯಿತು. ಆ ದಿನ ಮೇಷ್ಟರಿಗೆ ಸರಿಯಾಗಿ ಪಾಠ ಹೇಳಿಕೊಡುವುದಕ್ಕೇ ಆಗಲಿಲ್ಲ. ಸಲಸಲವೂ ಮೀನಾಕ್ಷಿ ತಮ್ಮ ಕ್ರಾಪಿನ ಕಡೆ ನೋಡುತ್ತಿದ್ದಂತೆ ಭಾಸವಾಗಿ ಅವರ ಮನಸ್ಸು ಗಡಿಬಿಡಿಗೊಂಡಿತು.

ಮತ್ತೊಂದು ದಿನ ಮೇಷ್ಟರು ಪಾಠಕ್ಕೆ ಬಂದಾಗ ಅವರು ಯಾವಾಗಲೂ ಹಾಕಿಕೊಂಡು ಬರುತ್ತಿದ್ದ ಅಂಗಿ ಇರಲಿಲ್ಲ. ಅಡ್ಡಪಂಚೆ ಉಟ್ಟು, ‘ಪಂಜಾಬಿ’ ಹಾಕಿಕೊಂಡು, ಉತ್ತರೀಯ ತೊಟ್ಟಿದ್ದರು. ಕ್ರಾಪನ್ನು ಚೆನ್ನಾಗಿ ಎಣ್ಣೆ ಹಾಕಿ ನೀವಿ ಬಾಚಿದ್ದರು. ಮುಖದಲ್ಲಿ ಒಂದು ಹೊಸ ತೇಜಸ್ಸು ಮೂಡಿತ್ತು. ನಿಜವಾಗಿಯೂ ಲಕ್ಷಣವಾಗಿ ಕಾಣುತ್ತಿದ್ದರು. ಮೀನಾಕ್ಷಿಗೆ ಅವರನ್ನು ಮೊದಲು ನೋಡುತ್ತಿದ್ದಂತೆ ನೇರವಾಗಿ ನೋಡುವುದಕ್ಕಾಗಲಿಲ್ಲ. ಆದರೂ ಸಮಯ ದೊರೆತಾಗಲೆಲ್ಲ ಕದ್ದು ಕದ್ದು ನೋಡಿ ಮುಗುಳುನಗುತ್ತಿದ್ದಳು. ಪ್ರಬುದ್ಧವಾಗುತ್ತಿದ್ದ ಮೀನಾಕ್ಷಿಯ ಚೇತನವೂ ಅದಕ್ಕೆ ಕಾರಣವಾಗಿರಬೇಕು.

ಮೇಷ್ಟರ ರಸಜಗತ್ತಿನಲ್ಲಿ ಒಂದು ಹೊಸ ಭ್ರಮೆ ಮೂಡಿತು; ಮೀನಾಕ್ಷಿಗೆ ಯೋಗ್ಯನಾದ ಪತಿ ದೊರಕಬೇಕು; ಆತನು ತುಂಬಾ ರಸಿಕನಾಗಿರಬೇಕು; ಬರಿ ರಸಿಕನಾಗಿದ್ದರೆ ಸಾಲದು, ಬುದ್ಧಿವಂತನಾಗಿರಬೇಕು; ಬಡವನಾಗಿದ್ದರೂ ಚಿಂತೆಯಿಲ್ಲ; ಬಡವನಾಗಿದ್ದರೇ ಲೇಸು; ಶ್ರೀಮಂತನಾದರೆ ದಕ್ಷಿಣೆಗಲ್ಲದಿದ್ದರೆ ದಾಕ್ಷಿಣ್ಯಕ್ಕಾದರೂ ಕೊಂಡುಕೊಂಡು ಬಿಡುತ್ತಾನೆ; ಅಲ್ಲಿ ಪ್ರೇಮಕ್ಕೆ ಅವಕಾಶವಿಲ್ಲ; ಇತ್ಯಾದಿ, ಇತ್ಯಾದಿ.

ಮೀನಾಕ್ಷಿಯ ಪತಿಯ ಗುಣ ಸ್ಥಾನಮಾನಗಳನ್ನು ನಿರ್ಣಯಿಸುತ್ತಾ ಮೇಷ್ಟರಿಗೆ ಅವುಗಳೆಲ್ಲವೂ ತಮ್ಮಲ್ಲಿರುವಂತೆ ಭಾಸವಾಯಿತು. ಆಮೇಲೆ ತಾವೇ ಆಕೆಗೆ ಸರಿಯಾದ ವರನೆಂದೂ ತರ್ಕ ಮಾಡಿದರು: ನಮ್ಮಿಬ್ಬರಿಗೂ ಬಹುಕಾಲದಿಂದ ಪರಿಚಯವಿದೆ; ಆಕೆ ನನ್ನಲ್ಲಿ ತೀವ್ರವಾಗಿ ಅನುರಕ್ತೆಯಾಗಿದ್ದಾಳೆ; ಇಲ್ಲದಿದ್ದರೆ ಹಾಗೇಕೆ ಕದ್ದು ಕದ್ದು ನೋಡುತ್ತಿದ್ದಳು? ನಾಚುತ್ತಿದ್ದಳು? ಮೊದಲಿಗಿಂತಲೂ ದೂರ ಸರಿದು ಕೂರುತ್ತಿದ್ದಳು? ಆಕೆಯ ನೋಟದಲ್ಲಿ ಎಂತಹ ಬೇಟ ಮಿಂಚುತ್ತದೆ? ಬ್ರಹ್ಮನು ನನ್ನನ್ನು ಆಕೆಗಾಗಿ, ಆಕೆಯನ್ನು ನನಗಾಗಿ ಸೃಷ್ಟಿಸಿರಬೇಕು. ಇಲ್ಲದಿದ್ದರೆ ಆಕೆ ಯಾರೋ? ನಾನಾರೋ? ವಿಧಿ ನಮ್ಮಿಬ್ಬರನ್ನು ಒಂದುಗೂಡಿಸುತ್ತಿತ್ತೆ? ಆಕೆಯ ತಂದೆ ತಾಯಿಯರಿಗೂ ಬಹುಶಃ ಅದೇ ಉದ್ದೇಶವಿರಬೇಕು. ಇಲ್ಲದಿದ್ದರೆ, ಅಪಾಯವೆಂದೂಹಿಸಿ ನಾನು ಪಾಠ ಹೇಳಿಕೊಡುವುದಕ್ಕೆ ಬರುವುದನ್ನೆ ನಿಲ್ಲಿಸಿಬಿಟ್ಟಾಗ ಅವರೇಕೆ ಒತ್ತಾಯ ಮಾಡಿ ಕರೆಯಿಸುತ್ತಿದ್ದರು? ನೆನೆದಂತೆಲ್ಲಾ ನಡೆದಿದ್ದ ನೂರಾರು ಸಂದರ್ಭಗಳು ಮೇಷ್ಟರ ಮನಸ್ಸನ್ನು ಸಮರ್ಥಿಸಿದುವು. ಆಕೆ (ಮೇಷ್ಟರ ಮನಸ್ಸಿನಲ್ಲಿ ಮೀನಾಕ್ಷಿಯ ಮನೋಹರ ಚಿತ್ರವಿತ್ತು) ಇನ್ನಾವ ಪಿಶಾಚಿಯ (ಮೇಷ್ಟರ ಮನಸ್ಸಿನಲ್ಲಿ ಒಂದು ಭಯಂಕರ ಕುರೂಪಿಯ ಚಿತ್ರ ಮೂಡಿತ್ತು) ಕೈಗೂ ಬಾಯಿಗೂ ಹೊಟ್ಟೆಗೂ ಬೀಳದಂತೆ ನೋಡಿಕೊಳ್ಳುವುದು ದೇವದತ್ತವಾದ ನನ್ನ ಪರಮ ಕರ್ತವ್ಯ ಎಂದು ದೃಢನಿಶ್ಚಯ ಮಾಡಿಕೊಂಡರು. ಅದಲ್ಲದೆ ತಮ್ಮ ಪುಸ್ತಕಲೋಕದಲ್ಲಿ ಮೀನಾಕ್ಷಿಯ ಮತ್ತು ತಮ್ಮ ದಾಂಪತ್ಯ ಜೀವನದ ಶೃಂಗಾರ ಚಿತ್ರಗಳನ್ನು ಚಿತ್ರಿಸಿ ಸವಿಯತೊಡಗಿದರು. ಅಲ್ಲದೆ ಮೀನಾಕ್ಷಿಯ ತಂದೆತಾಯಂದಿರನ್ನೂ ಅತ್ತೆಮಾವಂದಿರನ್ನಾಗಿ ಭಾವಿಸತೊಡಗಿದರು.

ಹಿಂದೆ ಮೀನಾಕ್ಷಿಯ ತಾಯಿ ತಮಗೆ ಕಾಫಿತಿಂಡಿ ಕೊಟ್ಟಾಗ ಮೇಷ್ಟರು “ಏನೊ ಬಡ ಹುಡುಗನ ಮೇಲೆ ಕನಿಕರದಿಂದ ವರ್ತಿಸುತ್ತಾರೆ” ಎಂದುಕೊಳ್ಳುತ್ತಿದ್ದರು. ಈಗ ಭಾವಿ ಅಳಿಯನಿಗೆ ಉಪಚಾರ ಮಾಡುತ್ತಿದ್ದಂತೆ ತೋರತೊಡಗಿತ್ತು.

ಒಂದು ಸಾರಿ ಅವರು ತಿಂಡಿ ಕಾಫಿ ಕುಡಿಯುತ್ತಿದ್ದಾಗ ಮೀನಾಕ್ಷಿಯ ತಂದೆ ಅಲ್ಲಿಗೆ ಬಂದವರು “ಏನ್ರೀ, ಒಳ್ಳೆ ಷೋಕಿಯಾಗಿದ್ದೀರಿ? ಎಲ್ಲಿಯಾದರೂ ವರದಕ್ಷಿಣೆ ಗೊತ್ತಾಗಿದೆಯೋ?” ಎಂದು ವಿನೋದವಾಗಿ ನಕ್ಕರು.

ಮೇಷ್ಟರ ಮುಖಕ್ಕೆ ನಾಣ್ಗೆಂಪೇರಿ “ಹಾಗೇನೂ ಇಲ್ಲ. ನಾನು ಡಿಗ್ರಿ ತೆಗೆದುಕೊಳ್ಳುವವರೆಗೂ ಆ ಪ್ರಸ್ತಾಪಕ್ಕೆ ಹೋಗುವುದಿಲ್ಲ’” ಎಂದವರು ಅನೈಚ್ಛಿಕವಾಗಿಯೆ ಎಂಬಂತೆ ಮೀನಾಕ್ಷಿಯ ಕಡೆಗೆ ನೋಡಿದರು.

“ಓಹೋ, ಕಾಲೇಜಿಗೆ ಸೇರಿದ್ದೀರೋ!”

“ನಿಮಗೆ ಸ್ಕಾಲರ್ ಷಿಪ್ ಬಂತಂತೆ! ಹೌದೆ?”

“ಹೌದು!”

“ಬಹಳ ಸಂತೋಷ. ಚೆನ್ನಾಗಿ ಓದಿ ಪಾಸ್ ಮಾಡಿ, ಒಳ್ಳೆಯದಾಗಲಿ.”

ಮೀನಾಕ್ಷಿಯ ತಂದೆ ತಮ್ಮ ಕೊಠಡಿಯೊಳಕ್ಕೆ ಹೋದರು. ಕುರ್ಚಿಯ ಮೇಲೆ ಕುಳಿತಿದ್ದ ಮೇಷ್ಟರು ಒಳಗಡೆಯ ಬಾಗಿಲಿನ ಕಡೆಗೇ ನೋಡುತ್ತಿದ್ದರು. ಮೀನಾಕ್ಷಿಯ ತಂದೆ ಮಾಡಿದ ಆಶೀರ್ವಾದ ಅವರಿಗೆ ಅರ್ಥಪೂರ್ಣವಾಗಿತ್ತು. ಇನ್ನೇನು ಕೆಲದಿನಗಳಲ್ಲಿ ಹೆಣ್ಣು ಕೊಡುವ ಪ್ರಸ್ತಾಪ ಮಾಡುತ್ತಾರೆ ಎಂಬುದು ನಿಸ್ಸಂದೇಹವಾದಂತಾಯ್ತು! ಪರಿಶುದ್ಧ ಪ್ರೇಮಾನುಭವದಿಂದ ಯೌವನ ತುಂಬಿದ್ದ ಮೇಷ್ಟರ ಹೃದಯ ಆನಂದಪೂರ್ಣವಾಯಿತು.

“ದಯವಿಟ್ಟು ತೆಗೆದುಕೊಳ್ಳಿ!” ಒಳಗಡೆ ಬಾಗಿಲನ್ನೇ ನೋಡುತ್ತಿದ್ದ ಮೇಷ್ಟರು ತಿರುಗಿದರು. ತಂದೆ ಕೊಟಡಿಯಿಂದ ಸಂಬಳದ ಹಣವನ್ನು ತಂದು ಕೈನೀಡಿದ್ದರು.

ಮೇಷ್ಟರು ಎದ್ದು ವಿನಯದಿಂದ ಎರಡು ಕೈಗಳನ್ನೂ ಒಡ್ಡಿ ಸ್ವೀಕರಿಸಿದರು.

“ಎಣಿಸಿಕೊಳ್ಳಿ” ಎಂದರು ತಂದೆ.

“ಪರ್ವಾಗಿಲ್ಲ” ಎಂದು ಬಾಯಲ್ಲಿ ಹೇಳಿದರೂ ಮೇಷ್ಟರು ಎಣಿಸತೊಡಗಿದರು.

“ಮತ್ತೇನೂ ತಿಳಿದುಕೊಳ್ಳಬೇಡಿ. ಇನ್ನು ನೀವು ಪಾಠಕ್ಕೆ ಬರುವುದು ಬೇಡ!”

“ಆ!” ಮೇಷ್ಟರು ಎಣಿಸುವುದನ್ನು ಹಾಗೇ ನಿಲ್ಲಿಸಿ ತಲೆಯೆತ್ತಿದ್ದರು.

“ಇನ್ನು ಮೇಲೆ ನಮ್ಮ ಹುಡುಗಿಗೆ ಪಾಠ ಹೇಳುವುದಕ್ಕೆ ಬರುವುದು ಬೇಡ ಎಂದೆ!”

“ಏಕೆ? ಏಕೆ? ಏಕೆ?” ಮೇಷ್ಟರ ಕೊರಳಿನಲ್ಲಿ ಅಳುದನಿಯಿತ್ತು.

“ಏತಕ್ಕೂ ಇಲ್ಲ….”

“ಅದಕ್ಕೇನಂತೆ? ಸುಮ್ಮನೆ ಬಂದು ಪಾಠ ಹೇಳಿಹೋಗ್ತೀನಿ ನೀವೇನೂ ಸಂಬಳ ಕೊಡುವುದು ಬೇಡ.”

“ಛೆ! ಹಾಗೆಲ್ಲಾದರೂ ಉಂಟೆ?”

“ಅಯ್ಯೋ, ಹಾಗೆನ್ನಬೇಡಿ, ನೀವು ಮೊದಲಿನಿಂದಲೂ ನನ್ನನ್ನು ಕೈ ಹಿಡಿದು ಕಾಪಾಡಿದ್ದೀರಿ…”

“ಆದರೂ ಬೇಡ….”

“ನನಗೆ ಸ್ಕಾಲರ್ ಷಿಪ್ ಬರ್ತದೆ!”

“ಇಲ್ಲ; ದಯವಿಟ್ಟು ಕ್ಷಮಿಸಿ!”

ಮೇಷ್ಟರ ಯೌವನಮೂರ್ತಿ ತಲೆಬಾಗಿತು. ಸ್ವಲ್ಪ ಹೊತ್ತು ಸುಮ್ಮನೆ ನೆಲ ನೋಡುತ್ತಾ ನಿಂತರು.

“ಹಾಗಾದರೆ, ಬರ್ತೀನಿ; ನಮಸ್ಕಾರ!” ಎಂದು ಸರಸರನೆ ಹೊರಟು ಹೋದರು.

ಕೆಲದಿನಗಳಲ್ಲಿ ಮೀನಾಕ್ಷಿಗೆ ಮದುವೆ ಗೊತ್ತಾದ ವಾರ್ತೆ ಮೇಷ್ಟರ ಕಿವಿಗೆ ಬಿತ್ತು: ಅವರಾತ್ಮ ತತ್ತರಿಸಿಹೋಯಿತು. ಬಹುಕಾಲದಿಂದ ಕಟ್ಟಿಕೊಂಡಿದ್ದ ಶೃಂಗಾರಮಂದಿರ ಭೂಕಂಪಕೆಂಬಂತೆ ಮುರಿದು ಬಿರಿಯಿತು. ಇದ್ದಕ್ಕಿದ್ದ ಹಾಗೆ ಅವರಲ್ಲಿ ಅದುವರೆಗೂ ಸಪ್ತವಾಗಿದ್ದ ಸಮಾಜ ಸುಧಾರಣಾ ದೃಷ್ಟಿ ಕಣ್ದೆರೆಯಿತು. ಮೂರನೆಯ ಕಣ್ಣು!

ಸಂಜೆ ಅವರೊಡನೆ ವಾಕಿಂಗ್ ಹೋಗುತ್ತಿದ್ದ ಕಾಲೇಜು ಮಿತ್ರರಿಗೆ ಅವರ ವಾಗ್ದೋರಣೆಯ ರಭಸವನ್ನು ಕಂಡು ಬೆಕ್ಕಸವಾಯಿತು. ಇದ್ದಲು ಹಠಾತ್ತಾಗಿ ಕೆಂಡವಾದುದು ಹೇಗೆ? ಯಾವಯಾವುದೊ ಮಾತಿನ ಮಧ್ಯೆ, ಸಂಭಾಷಣೆಗೆ ಹೊಂದಿಕೊಳ್ಳುವುದೊ ಇಲ್ಲವೊ ಎಂಬುದನ್ನು ಸ್ವಲ್ಪವೂ ಪರಿಗಣಿಸದೆ “ನಮ್ಮ ದೇಶ ಹಾಳಾದುದೆ ಇದಕ್ಕಾಗಿ. ಈ ಸಂಪ್ರದಾಯಬದ್ಧರನ್ನೆಲ್ಲಾ ಬಾಂಬ್ ಮಾಡಬೇಕು. ಶಾಕುಂತಲ ನಾಟಕ ಓದಿಲ್ಲವೇ ಇವರು? ಕಾಳಿದಾಸನು ಹೇಳುವುದೇನು? ಪರಸ್ಪರ ಪ್ರೇಮದಿಂದ ದಾಂಪತ್ಯವುಂಟಾಗಬೇಕು ಎಂದಲ್ಲವೆ? ಓದುವುದು ಶಾಸ್ತ್ರ, ಹಾಕುವುದು ಗಾಣ! ಸರ್ದಾ ಬಿಲ್‌ ಬೇರೆ ಬಂದಿದೆ! ಕೆಲಸಕ್ಕೆ ಬಾರದ ಸರ್ಕಾರ! ಲಾ ಮಾಡಿದ ಮೇಲೆ ಅದನ್ನು ಜಾರಿಗೆ ತರದೇ ಇದ್ದರೆ ಅದೆಂಥಾ ಸರ್ಕಾರ! ಉರುಳಿಹೋಗಬೇಕು ಅದು….!”

“ಇದೇನೊ ನೀನು ಹೇಳ್ತಾ ಇರೋದು?”

“ಇದ್ಯಾಕೊ ಹೀಗೆ ಕೋಪ ಮಾಡ್ತಿದ್ದೀಯಾ!”

“ಯಾರ ಮೇಲೊ?”

“ಯಾರಾದರೂ ಏನಾದರೂ ಮಾಡಿದರೇನೊ ನಿನಗೆ?”

ಮೇಷ್ಟರು ಕಣ್ಣು ಕೆಂಪಗೆ ಮಾಡಿಕೊಂಡು: “ನಿಮಗೆ, ನಿಮಗೆ…. ನಿಮಗೆ ತಲೆಯಿಲ್ಲ: ಹೃದಯವಿಲ್ಲ, ಎದೆಯಿಲ್ಲ. ನೀವೆಲ್ಲ ನಪುಂಸಕರು! ಸ್ವಾರ್ಥತೆ! ಸ್ವಾರ್ಥತೆ! ಬರಿಯ ಸ್ವಾರ್ಥತೆ! ಯಾರಿಗೇನಾದರೂ ಆಗಲಿ; ಯಾರು ಎಲ್ಲಾದರೂ ಸಾಯಲಿ! ನೀವು ಮಾತ್ರ ನೆಮ್ಮದಿಯಾಗಿದ್ದರಾಯಿತು! ಅದಕ್ಕೇ ಸೋಷಿಯಲಿಸಂ ಬರಬೇಕು ಅಂತಾ ಬಡುಕೊಳ್ತಿರೋದು ನಾನು…!”

“ಅದೇನೊ ಹೌದು!”

“ಬಡುಕೊಳ್ತಿರೋದು!”

“ಸಾಕೋ: ಬಾಯಿಮುಚ್ಚೋ!” ಎನ್ನುತ್ತಾ ಮೇಷ್ಟರು ಮುಂದುವರಿದರು. ಅವರ ಮುಖವಿಕಾರಕ್ಕೆ ಹೆದರಿ ಯಾರೂ ತಮಾಷೆ ಮಾಡಲಿಲ್ಲ.

ಮೇಷ್ಟರು ಮತ್ತೆ ಕೇಳಿದರು: ಸಂಭಾಷಣೆಗೆ ಬಿಸಿಯೂ ಗಾಂಭೀರ್ಯವೂ ಬರಬೇಕೆಂದು ಇಂಗ್ಲಿಷಿನಲ್ಲಿಯೆ ಮಾತಾಡಿದರು.

“ಒಲಿದು ಮದುವೆಯಾಗುವುದು ಒಳ್ಳೆಯದೆ? ಮದುವೆಯಾಗಿ ಒಲಿಯುವುದು ಒಳ್ಳೆಯದೆ?”

“ಎರಡೂ ಒಳ್ಳೆಯದೆ!”

“ನಿನ್ನ ತಲೆ! ಅದು ಹೇಗೆ?”

“ಒಲಿಯುವುದೊಂದು ಹೌದಾದರೆ ಹಾಗಾದರೇನು ಹೀಗಾದರೇನು?”

“ಹಾಗಾದರೇನು! ಹೀಗಾದರೇನು! ನೀನೂ ಒಬ್ಬ ಸಂಪ್ರದಾಯ ಶರಣನೆ! ಒಲಿದು ಮದುವೆಯಾದರೆ ದಾಂಪತ್ಯ ಜೀವನ ಎಷ್ಟು ರಸಪೂರ್ಣವಾಗಿ ಸುಖವಾಗಿ ಅನ್ಯೋನ್ಯವಾಗಿರುತ್ತದೆ! ಒಲಿಯದೆ ಮದುವೆಯಾದರೆ ಗತಿ? ಆ ಗಂಡ ಪಿಶಾಚಿಯಾಗಿರಬಹುದು! ಮುದುಕನಾಗಿರಬಹುದು! ಕೊಳಕನಾಗಿರಬಹುದು! ರೋಗಿಯಾಗಿರಬಹುದು! ಕ್ರೂರಿಯಾಗಿರಬಹುದು!”

“ಅದು ಬೇರೆಯ ವಿಚಾರ. ನೀ ಹೇಳಿದ್ದೇನು? ಮದುವೆಯಾದ ಮೇಲೆ ಒಲಿದು ಬಾಳುವುದು ಒಳ್ಳೆಯದೋ ಅಲ್ಲವೊ ಎಂದಲ್ಲವೆ? ಈಗ ನೀನು ವರ್ಣಿಸುತ್ತಿರುವು ಅದಕ್ಕೆ ಉದಾಹರಣೆಯಲ್ಲ…!”

“ಹೌದು ಕಣೋ, ಆ ಪಾಯಿಂಟ್ ಬಹು ಮುಖ್ಯ…”

“ಪಾಯಿಂಟಂತೆ ಪಾಯಿಂಟ್! ನಿಮ್ಮಂಥವರೇ ಸಾವಿರಾರು ಹೆಣ್ಣು ಮಕ್ಕಳನ್ನು ತೆಗೆದುಕೊಂಡು ಹೋಗಿ ಕಾಮದ ನರಕಕ್ಕೆ ಬಲಿಗೊಡುತ್ತಿರುವುದು. ಈಗ ನೋಡಿ…. ನನಗೊಂದು ಕೇಸ್ ಈಗತಾನೆ ಗೊತ್ತಾಗಿದೆ…” ಎಂದು ಮೇಷ್ಟರು ಹೆಸರು ಸ್ಥಳ ಒಂದನ್ನೂ ಹೇಳದೆ ಮೀನಾಕ್ಷಿಯ ವಿಚಾರವನ್ನು ಭಾವಪೂರ್ಣವಾಗಿ ವಿವರಿಸಿದರು.

“ಹಾಗಾದರೆ ನೀನು ಹೇಳುವ ಪ್ರಕಾರ ಆ ಹುಡುಗಿ ತಾನು ಮದುವೆಯಾಗುವವನನ್ನು ಒಲಿದಿಲ್ಲ.”

“ಇಲ್ಲ! ಇಲ್ಲ! ಖಂಡಿತ ಇಲ್ಲ!” ಎಂದರು ಮೇಷ್ಟರು.

“ಮದುವೆಯಾದಮೇಲೆ ಒಲಿಯಬಾರದೇನು?”

“ಹೌದು! ಹೌದು! ಒಲಿಯುವುದಿಲ್ಲ ಎಂದು ನಿನಗೆ ಹೇಗೆ ಗೊತ್ತು?”

“ಹೇಗೆ ಗೊತ್ತೆ? ಹೇಗೆ ಗೊತ್ತೆ? ಆ ಹುಡುಗಿ ಎಂಥಾ ಹುಡುಗಿ ಅಂತಾ ತಿಳಿದುಕೊಂಡಿದ್ದೀಯ? ಸೀತೆ ಸಾವಿತ್ರಿಯರಿಗೇನು ಕಡಿಮೆಯಿಲ್ಲ. ಒಬ್ಬನನ್ನು ಪ್ರೀತಿಸಿದಮೇಲೆ ಮತ್ತೊಬ್ಬನನ್ನು ಎಂದಿಗೂ ಒಲಿಯುವುದಿಲ್ಲ.

“ಹಾಗಾದರೆ ಆ ಒಬ್ಬನನ್ನು ಚೆನ್ನಾಗಿ ಒಪ್ಪಿ ಒಲಿದಿದ್ದಾಳೆ?”

“ಹೌದು!”

“ಅದು ನಿನಗೆ ಚೆನ್ನಾಗಿ ಗೊತ್ತೇನು?”

ಮೇಷ್ಟರು ಆ ಪ್ರಶ್ನೆ ಕೇಳಿದವನ ಕಡೆಗೆ ದುರದುರನೆ ನೋಡಿದರು. ಮಾತಾಡಲಿಲ್ಲ. ಮತ್ತೆ ತಡೆದು ಹೇಳಿದರು:

“ಆ ಮುಟ್ಟಾಳ ಗಂಡನಿಗೆ ಒಂದು ಹೆಂಡತಿ ಸತ್ತು ಇವಳು ಎರಡನೆ ಹೆಂಡತಿಯಂತೆ!”

“ಛೇ! ಛೇ! ಹಾಗಾದರೆ ನಿಜವಾಗಿಯೂ ಅನ್ಯಾಯ!”

“ಏನಾದರೂ ಮಾಡಿ ಈ ಮದುವೆ ತಪ್ಪಿಸೋಕೆ ಆಗೋದಿಲ್ಲವೇನೊ?”

“ನೋಡಬೇಕು! ಎಲ್ಲಾ ಪ್ರಯತ್ನಾನೂ ಮಾಡಿ ನೋಡಬೇಕು.”

“ಇಲೋಪ್ ಮಾಡಿದರೆ!”

“ಕಿಡ್‌ನ್ಯಾಪ್ ಅಂತಾ ಆದರೆ!”

“ಅಯ್ಯೋ! ನಿನಗೊಂದು ಹುಚ್ಚು! ಈ ಹಿಂದೂ ಹುಡುಗಿಯರಿಂದ ಇಲೋಪಿಂಗ್ ಸಾಧ್ಯವೇನೋ?”

ಮೇಷ್ಟರು ಮನೆಗೆ ಹಿಂತಿರುಗಿದ ಮೇಲೆ ಮೀನಾಕ್ಷಿಗೊಂದು ಕಾಗದ, ಅವಳ ಭಾವೀಪತಿಗೊಂದು ಕಾಗದ ಬರೆದರು. ಎಡಗೈಯಲ್ಲಿ ಬರೆದು “ಅ ಆ ಇ ಈ” ಎಂದು ರುಜು ಹಾಕಿದರು. ಆ ಕಾಗದಗಳೆರಡೂ ವಾಸ್ತವವಾಗಿಯೂ ಹಾನಿಕರಗಳಾಗಿದ್ದುವು.

ಮೀನಾಕ್ಷಿಯ ಪ್ರಣಯಕ್ಕಾಗಿ ತಾವು ಕಾತರರಾಗಿದ್ದಂತೆಯೆ ಆಕೆಯೂ ತಮ್ಮ ಪ್ರೇಯಸಿಯಾಗಲು ಕುದಿಯುತ್ತಿದ್ದಾಳೆ ಎಂದು ಮೇಷ್ಟರು ತಿಳಿದಿದ್ದರು. ಆದರೆ ಮೀನಾಕ್ಷಿಗೆ ಅದಾವುದೂ ತಿಳಿದಿರಲಿಲ್ಲ. ಪ್ರಕೃತ ಸಂದರ್ಭದಲ್ಲಿ ಮೇಷ್ಟರ ನೆನಪೂ ಆಕೆಗಿರಲಿಲ್ಲ. ಯೌವನವೇರಿದಂತೆಲ್ಲಾ ಹೆಚ್ಚು ಹೆಚ್ಚು ಭಾವುಕರೂ ರಸಿಕರೂ ಶೃಂಗಾರಿಗಳೂ ಆಗುತ್ತಿದ್ದ ತರುಣ ಮೇಷ್ಟರ ಮನಸ್ಸು ತಾರುಣ್ಯಕ್ಕೇರುತ್ತಿದ್ದ ಮೀನಾಕ್ಷಿಯ ಸಹಜವಾದ ಸರಳವಾದ ಹಾವಭಾವಗಳಿಗೆ ಯಾವ ಯಾವ ವ್ಯಂಗ್ಯಾರ್ಥಗಳನ್ನು ಕಲ್ಪಿಸಿದ್ದಿತೊ ಅವುಗಳೊಂದಕ್ಕೂ ಕಾಲಿರಲಿಲ್ಲ. ಅವರ ಪ್ರಶಂಸೆಗಾಗಿ ಆಶಿಸಿದ್ದಳೆಂಬುದೇನೊ ನಿಜ. ಅವರು ಕಾಲೇಜು ವಿದ್ಯಾರ್ಥಿಯಾಗಿ ಕ್ರಾಪು ಬಿಟ್ಟಮೇಲೆ ಅವರನ್ನು ಪ್ರಶಂಸನೀಯ ದೃಷ್ಟಿಯಿಂದ ನೋಡಿದ್ದಳೆಂಬುದೇನೊ ನಿಜ. ಒಮ್ಮೊಮ್ಮೆ ತನ್ನೊಳಗೆ ಮೆಲ್ಲನೆ ಕಣ್ದೆರೆದು ಮೊಳೆತು ಉಕ್ಕಿ ಬರುತ್ತಿದ್ದ ವಧೂತ್ವಕ್ಕೆ ಮೇಷ್ಟರಲ್ಲಿ ವೈರತ್ವವನ್ನು ಊಹಿಸಿ ತಾತ್ಕಾಲಿಕವಾದ ಬಾಲ್ಯಸಹಜವಾದ ನಲ್ಮೆಗೆ ಮಾರುಹೋಗಿದ್ದಳೆಂಬುದೂ ತಕ್ಕಮಟ್ಟಿಗೆ ನಿಜ. ಆದರೆ ಈ ವರತ್ವಾರೋಪಣೆಗೆ ಮೇಷ್ಟರೊಬ್ಬರೇ ಪಾತ್ರರಾಗಿರಲಿಲ್ಲ. ಲಕ್ಷಣವಾಗಿದ್ದ ಇನ್ನೂ ಅನೇಕ ತರುಣರೂ (ಗೊತ್ತಿದ್ದವರೂ ಗೊತ್ತಿಲ್ಲದವರೂ ಸೇರಿ) ಪಾತ್ರರಾಗಿದ್ದರು. ಈಗ ಆಕೆಗೆ ಮದುವೆ ನಿಶ್ಚಯವಾದ ಮೇಲೆ ಆ ಅನೇಕ ಇತರ ತರುಣರಂತೆ ಮೇಷ್ಟರೂ ಅನಾಮಧೇಯರೂ ಅಗಸ್ತ್ಯಭ್ರಾತರೂ ಆಗಿಹೋಗಿದ್ದರು. ಅಷ್ಟೇ ಅಲ್ಲದೆ ಆಕೆಯ ಭಾವೀಪತಿಯೂ ಕೂಡ ಅಸ್ಪಷ್ಟರಾಗಿದ್ದರು. ಒಂದು ವೇಳೆ ಯಾವುದಾದರೊಂದು ಕಾರಣದಿಂದ ಆ ಸಂಬಂಧ ಬೆಳೆಯದೆ ನಿಂತುಹೋದರೆ ಮನಸ್ಸು ಬೇರೆ ಸಂಬಂಧದಲ್ಲಿ ಬಾಧೆಪಡುತ್ತಿರಲಿಲ್ಲ. ಆಕೆಯ ಮನಸ್ಸಿನಲ್ಲಿ ಸತಿಯತನವು ವರಣಮಾಲೆಯನ್ನು ಹಿಡಿದು ಪತಿಯತನಕ್ಕೆ ಅದನ್ನು ಸೂಡಲು ಸಿದ್ಧವಾಗಿ ನಿಂತಿತ್ತು. ಆ ಪತಿಯತನ ನಿರ್ಣಯವು ವಿಧಿಗೆ ಸೇರಿತ್ತು. ತಂದೆ ತಾಯಿಗಳು ಒಪ್ಪಬೇಕು; ಪತಿಯಾಗುವವನೂ ಒಪ್ಪಬೇಕು; ಬಹುಶಃ ಪತಿಯ ಬಂಧುಗಳೂ ಒಪ್ಪಬೇಕು; ಸಮಾಜವೂ ಒಪ್ಪಬೇಕು; ಕಡೆಗೆ ಸರ್ಕಾರವೂ ತಾನೂ ಒಪ್ಪದಿರಬಾರದು! ಹೀಗಿದ್ದಿತು ಮೀನಾಕ್ಷಿಯ ಮನಸ್ಸು.

ಸ್ತ್ರೀಯ ಮನೋಮಯ ಕೋಶವು ಪುರುಷನ ಮನೋಮಯ ಕೋಶಕ್ಕಿಂತಲೂ ಹೆಚ್ಚು ಅಸ್ಪಷ್ಟವಾದುದು, ಮಂಜಾದುದು. ಅದರಲ್ಲಿಯೂ ಮದುವೆಯಾಗುವುದಕ್ಕೆ ಮೊದಲು ಅಮೂರ್ತವಾಗಿಯೆ ಇರುತ್ತದೆ; ಅಸಂಖ್ಯ ಮೂರ್ತವಾಗಿರುತ್ತದೆ ಎಂದರೂ ತಪ್ಪಾಗದು. ಆದ್ದರಿಂದಲೇ ಮುಕ್ಕಾಲು ಮೂರುವೀಸ ಪಾಲು ಸ್ತ್ರೀಯರು ತಮ್ಮ ಪಾಲಿಗೆ ಬಂದದ್ದರಲ್ಲಿ ತೃಪ್ತರಾಗಿ ತಮಗೂ ನೆಮ್ಮದಿ ತಂದುಕೊಳ್ಳುತ್ತಾರೆ; ತಮ್ಮ ಜೀವನದಲ್ಲಿ ಭಾಗಿಯಾಗುವವರಿಗೂ ನೆಮ್ಮದಿಯಾಗುತ್ತಾರೆ. ಎಲ್ಲಿಯೊ ಸಾವಿರಕ್ಕೆ ಒಬ್ಬಿಬ್ಬರಿಗೆ ಮಾತ್ರ ಏಕಾಗ್ರತೆ ಅಥವಾ ಏಕವಿಗ್ರಹತೆ ಇರುತ್ತದೆ. ಅಂತಹವರಿಂದ ಮಾನವನ ಜೀವನಕ್ಕೆ ಅನಂತ ಕಲ್ಯಾಣವೂ ಆಗುತ್ತದೆ; ತಪ್ಪಿದರೆ ಅಪಾರ ಕ್ಲೇಶವೂ ದೊರೆಯುತ್ತದೆ. ನಮ್ಮ ಮೀನಾಕ್ಷಿ ಅನಂತ ಕಲ್ಯಾಣಮಯಿಯೂ ಆಗಿರಲಿಲ್ಲಿ. ಅಪಾರ ಕ್ಲೇಶಕಾರಿಣಿಯೂ ಆಗಿರಲಿಲ್ಲ. ಸಾಧಾರಣ ಸ್ತ್ರೀಯಾಗಿದ್ದಳು. ಆದ್ದರಿಂದಲೇ ಉತ್ತಮ ಸ್ತ್ರೀಯೂ ಆಗಿದ್ದಳು. ಸಾಮಾನ್ಯ ದೈನಂದಿನ ಸಂಸಾರ ದೃಷ್ಟಿಯಿಂದ ಅತ್ಯುತ್ತಮಳೂ ಆಗಿದ್ದಳು.

ತನಗೆ ಗಂಡನಾಗುವಾತನಿಗೆ ಮೊದಲನೆಯ ಹೆಂಡತಿ ತೀರಿಹೋಗಿದ್ದಳೆಂಬುದನ್ನು ಕೇಳಿ ಮರುಗಿದಳೆ ಹೊರತು ತಾನು ಎರಡನೆಯ ಹೆಂಡತಿಯಾಗುವೆನಲ್ಲಾ ಎಂದು ಸಂಕಟಪಡಲಿಲ್ಲ. ಅಪ್ಪ ಅಮ್ಮ ಒಪ್ಪಿದ್ದಾರೆ; ಆದ್ದರಿಂದ ಅದು ಸರ್ವಸಮ್ಮತವೆ ಆಗಿರಬೇಕು ಎಂದು ಅವಳ ನಂಬುಗೆ. ಅಲ್ಲದೆ, ಎಲ್ಲದರಲ್ಲಿಯೂ, ಊಟ, ಬಟ್ಟೆ, ಒಡವೆ ವಸ್ತ್ರ ಎಲ್ಲದರಲ್ಲಿಯೂ ತನಗೆ ಅತ್ಯುತ್ತಮವಾದುದನ್ನೇ ಕೊಡುತ್ತಿರುವ ಪ್ರೀತಿಯ ತಂದೆತಾಯಿಗಳು ತನ್ನ ಬಾಳಿನ ಪ್ರಾಣಮೂರ್ತಿಯನ್ನು ತಂದುಕೊಡುವಾಗ ಮಾತ್ರ ಉತ್ತಮವಲ್ಲದುದನ್ನು ಆರಿಸುತ್ತಾರೆಯೆ? ಆದ್ದರಿಂದಲೇ ತನ್ನ ಭಾವೀಪತಿಯಲ್ಲಿ ಆಕೆಗಾಗಲೆ ಅನುರಾಗ ಮೊಳೆಯತೊಡಗಿತ್ತು.

ಒಮ್ಮೆ ನೋಡಿದ ಮಾತ್ರದಿಂದಲೇ ಕಣ್ಣಿನಿಂದ ಕಣ್ಣಿಗೆ ಚಿಮ್ಮುವ ಪ್ರೇಮವು ಮಿಂಚಿನಂತೆ ಉಜ್ವಲವಾಗಿರಬಹುದು. ಆದರೆ ಮಿಂಚಿನಂತೆಯೆ ಕ್ಷಣಿಕವಾಗಿಯೂ ಚಂಚಲವಾಗಿಯೂ ಇರಬಹುದು. ಅಂತಹ ಪ್ರೇಮದಿಂದಲೂ ನಿಜವಾದ ದಾಂಪತ್ಯ ಪ್ರೇಮವು ಮೂಡಬಹುದು. ಆದರೆ ಅದು ಕ್ಷಣಿಕೋತ್ಸಾಹದಿಂದ ಬಿಡುಗಡೆ ಹೊಂದಿ ಚಿರಕಾಲ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಬಾಳಿನ ಒರೆಗಲ್ಲಿನಲ್ಲಿ ಬಹುಕಾಲದವರೆಗೂ ಪರೀಕ್ಷೆಗೊಳಗಾಗಿ ನಿಲ್ಲುವ ಚಿರ ಪ್ರೇಮವು ಮಿಂಚಿನಂತಲ್ಲ; ನಂದಾದೀಪದಂತಿರುತ್ತದೆ. ಅಂತಹ ನಂದಾದೀಪಕ್ಕೆ ಪ್ರೇಮತೈಲವನ್ನು ತುಂಬಿಟ್ಟುಕೊಂಡ ಹೊನ್ನಿನ ಹಣತೆಯಾಗಿದ್ದಳು ನಮ್ಮ ಮೀನಾಕ್ಷಿ.

ಮೀನಾಕ್ಷಿಯನ್ನು ನೋಡಿಕೊಂಡು ಹೋಗಿದ್ದ ಆಕೆಯ ಭಾವೀಪತಿಗೂ ಅದು ವೇದ್ಯವಾಗಿತ್ತು. ಮೊದಲನೆಯ ಸಂಬಂಧದಲ್ಲಿ ಆತನಿಗೆ ಸ್ತ್ರೀಹೃದಯ ಪರಿಚಯ ತಕ್ಕಮಟ್ಟಿಗಾಗಿತ್ತು. ಆತನ ದೃಷ್ಟಿ ಹೊಸದಾಗಿ ಮದುವೆಯಾಗುವವನ ದೃಷ್ಟಿಯಂತಲ್ಲದೆ ಚೆನ್ನಾಗಿ ಪಳಗಿ ಪಕ್ವವಾಗಿತ್ತು. ಆದ್ದರಿಂದಲೇ ಧಾರೆಗೆ ಹಿಂದಿನ ದಿನ ಆತನಿಗೆ ಕೈಸೇರಿದ ಮೇಷ್ಟರ ಹೆಸರಿಲ್ಲದ ಎಡಗೈ ಬರಹದ ನಾಟ್‌ಪೆಯ್ಡ್ ಕಾಗದದಿಂದ ಯಾವ ಭಯಂಕರವಾದ ಅನಾಹುತವೂ ಆಗಲಿಲ್ಲ. ಆ ಕಾಗದವನ್ನು ಓದಿ ಆತನ ಚಿತ್ತ ತತ್ತರಿಸಲಿಲ್ಲ ಎಂದಲ್ಲ. ಮೀನಾಕ್ಷಿಯ ಬಾಳನ್ನು ಹಾಳುಮಾಡಲು ಅದು ಸಮರ್ಥವಾಗಲಿಲ್ಲ. ಸದವಕಾಶ ಸಿಕ್ಕಿದಾಗ ಮೀನಾಕ್ಷಿಗೆ ತೋರಿಸಬೇಕೆಂದು ಪೆಟ್ಟಿಗೆಯೊಳಗಿಟ್ಟನು.

ಮೇಷ್ಟರು ಮೀನಾಕ್ಷಿಗೆ ಬರೆದ ಕಾಗದ ಆಕೆಯ ಕೈಗೆ ಸೇರಲಿಲ್ಲ. ಆಕೆಯ ತಂದೆಯೆ ಅದನ್ನು ಓದಿ ಹರಿದುಹಾಕಿದರು.

ತಮ್ಮ ಎರಡು ಕಾಗದಗಳ ಸುಂಟರಗಾಳಿಗೆ ಸಿಕ್ಕಿ ಮೀನಾಕ್ಷಿಯ ವಿವಾಹವು ಹಾರಿಹೋಗುವುದೆಂದು ಭಾವಿಸಿದ್ದ ಮೇಷ್ಟರಿಗೆ ಆಕೆಯ ಮದುವೆ ಸಾಂಗವಾಗಿ ನೆರವೇರಿ ಗಂಡಹೆಂಡಿರು ನೆಮ್ಮದಿಯಾಗಿ ಸಂಸಾರ ಮಾಡಿಕೊಂಡಿದ್ದಾರೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು; ಕೋಪವಾಯಿತು; ಜುಗುಪ್ಸೆಯಾಯಿತು; ಕರುಬು ಮೂಡಿತು.

ನಿರಾಶೆಯ ಕಾವಲಿಯಿಂದ ದುರಾಶೆಯ ಬೆಂಕಿಗೆ ಸಿಡಿಯಿತು ಅವರ ಮನಸ್ಸು. ಆದರೆ ಅವರು ಅದನ್ನು ಹಾಗೆ ಭಾವಿಸಲಿಲ್ಲ. ಏಕೆಂದರೆ ಅವರಿಗದು ಗೊತ್ತಾಗಲಿಲ್ಲ. ತಮ್ಮ ಭ್ರಮೆಯನ್ನು ಕಾಮಪಿಶಾಚಿಯ ಕೈಗೆ ಬಿದ್ದು ಗೋಳಾಡುತ್ತಿರುವ ಮೀನಾಕ್ಷಿಯನ್ನು ಉದ್ಧಾರಮಾಡುವ ಧರ್ಮಬುದ್ಧಿ ಎಂದು ಭಾವಿಸಿದರು. ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಿದ ರಾಮನಂತೆ ಮೀನಾಕ್ಷಿಯನ್ನು ಮದುವೆಯಾದ ಕಾಮುಕ ರಾಕ್ಷಸನನ್ನು ಕೊಂದು ಆಕೆಯ ಮಾನವನ್ನು ಕಾಪಾಡಬೇಕೆಂದು ಮನಸ್ಸು ಮಾಡಿ ಒಂದು ಹರಿತವಾದ ಚೂರಿಯನ್ನು ಕೊಂಡುಕೊಂಡರು. ಮೀನಾಕ್ಷಿಯ ಪತಿಯ ಮನೆಯನ್ನು ಗೊತ್ತು ಹಚ್ಚಿದರು. ಚೂರಿಯನ್ನು ಒಳಜೇಬಿನಲ್ಲಿ ಇರುಕಿಕೊಂಡು ಅಲ್ಲಿಗೆ ನಡೆದರು.

ಸಂಜೆ ಕಪ್ಪುಕಪ್ಪಾಗಿತ್ತು. ಭವ್ಯವಾಗಿದ್ದ ಅವರ ತಾರಸಿ ಮನೆ ವಿದ್ಯುದ್ದೀಪಗಳಿಂದ ದೀಪ್ತವಾಗಿತ್ತು. ಮನೆಯ ಮುಂದಣ ಹೂದೋಟದಲ್ಲಿ ಯಾರೊ ತಿರುಗಾಡುತ್ತಿದ್ದರು. ಅಷ್ಟು ಶೌರ್ಯದಿಂದ ಮುಂದುವರಿದಿದ್ದ ಮೇಷ್ಟರಿಗೆ ಏತಕ್ಕೊ ಏನೊ ಎದೆಯಳುಕಿತು. ಸುಮ್ಮನೆ ಹಿಂತಿರುಗಿ ಬಂದುಬಿಡೋಣ ಎನ್ನಿಸಿತು. ಅಷ್ಟರಲ್ಲಿ ಅದೇ ಮನೆಯೊಳಗೆ ಮೀನಾಕ್ಷಿ ಇರುವುದನ್ನು ನೆನೆದರು. ರಾಕ್ಷಸ ಪತಿಯ ಕಾಮದಂಷ್ಟ್ರಗಳಿಗೆ ಸಿಕ್ಕಿರಬಹುದಲ್ಲವೆ ಆ ಕೋಮಲೆ? ಸುಸಂಸ್ಕೃತನೂ ರಸಿಕನೂ ಸುಂದರನೂ ಆದ ನನ್ನನ್ನು ಒಲಿದು ಕಾಡುಮನುಷ್ಯನ ಬಾಯಿಗೆ ತುತ್ತಾದಳಲ್ಲವೆ ಆ ಕೋಮಲೆ ಎಂದು ಯೋಚಿಸುತ್ತ ನಿಂತಿದ್ದ ಮೇಷ್ಟರನ್ನು ಯಾರೊ ಕರೆದಂತಾಯಿತು. ಎಚ್ಚರಗೊಂಡು ನೋಡಿದರು. ಹೂದೋಟದಲ್ಲಿ ತಿರುಗುತ್ತಿದ್ದ ವ್ಯಕ್ತಿ ಇಂಗ್ಲಿಷಿನಲ್ಲಿ ಮಾತಾಡಿಸಿದರು:

“ತಾವು ಯಾರನ್ನಾದರೂ ನೋಡಬೇಕೆ? ನನ್ನಿಂದ ಸಹಾಯವಾಗುವುದಾದರೆ ಮಾಡುತ್ತೇನೆ. ಯಾರದಾದರೂ ಮನೆಯನ್ನು ಹುಡುಕುತ್ತಿದ್ದಿರೇನು?”

ಎಂತಹ ಇಂಪಾದ ಧ್ವನಿ! ಏನು ಸಭ್ಯತೆ ಮಾತಿನಲ್ಲಿ! ಮೇಷ್ಟರು ತೊದಲುತ್ತ “ಹೌ… ಹೌದು!” ಎಂದರು.

“ಯಾರು? ಯಾರ ಮನೆ?”

ಮೇಷ್ಟರು ಹೇಳಿದರು.

ಆ ವ್ಯಕ್ತಿ ಬಹಳ ಸಂತೋಷದಿಂದ ಸಂಭ್ರಮದಿಂದ ಗೇಟು ತೆರೆದು “ಒಳಗೆ ಬನ್ನಿ; ದಯವಿಟ್ಟು ಒಳಗೆ ಬರೋಣವಾಗಲಿ!” ಎಂದಿತು. ಮೇಷ್ಟರು ಆ ವ್ಯಕ್ತಿಯನ್ನು ಹಿಂಬಾಲಿಸಿ ವಿದ್ಯುದ್ದೀಪಗಳಿಂದ ಪ್ರದೀಪ್ತವಾಗಿದ್ದ ಜಗಲಿಗೆ ಹೋದರು.

ಆ ವ್ಯಕ್ತಿ “ಕೂತುಕೊಳ್ಳಿ, ದಯವಿಟ್ಟು ಕೂತುಕೊಳ್ಳಿ”

ಮೇಷ್ಟರು ಮಂಕು ಹಿಡಿದವರಂತೆ ಸೋಫಾದ ಮೇಲೆ ಕೂತುಕೊಂಡರು. ಆ ವ್ಯಕ್ತಿ ಒಳಗೆ ಹೋದರು.

ಮೇಷ್ಟರು ಸುತ್ತಲೂ ನೋಡಿದರು. ಆ ಮನೆ ಸಂಸ್ಕೃತಿಯ ರಸಿಕತೆಯ ಸೌಂದರ್ಯದ ಬೀಡಾಗಿ ತೋರಿತು. ನೆಲಕ್ಕೆ ಹಾಸಿದ್ದ ರತ್ನಗಂಬಳಿಗಳು, ಗೋಡೆಗೆ ತಗುಲಿಸಿದ್ದ ಪಟುಗಳು, ಮೇಜಿನಮೇಲಿದ್ದ ಹೂವಿನ ಪಾತ್ರೆಗಳು, ಕನ್ನಡಿ ಬೀರುವಿನಲ್ಲಿದ್ದ ಲೈಬ್ರರಿ, ಒಂದೊಂದು ಮೇಷ್ಟರ ಮನಸ್ಸನ್ನು ಬೆರಗುಗೊಳಿಸುತ್ತಿದ್ದುವು.

ಅಷ್ಟರಲ್ಲಿ ಒಳಗೆ ಹೋಗಿದ್ದ ವ್ಯಕ್ತಿ ಹೊರಗೆ ಬಂದು ಅತ್ಯಂತ ಸ್ನೇಹಪೂರ್ವಕವಾದ ವಾಣಿಯಿಂದ “ಓಹೋ, ತಾವು ಆಕೆಯ ಮನೇಮೇಷ್ಟರೇನು? ಬಹಳ ಸಂತೋಷ! ಬಹಳ ಸಂತೋಷ ! ತಾವು ಬಂದದ್ದು” ಎಂದು ಕೈ ನೀಡಿದರು. ಮೇಷ್ಟರು ಎದ್ದುನಿಂತು ಕೈ ನೀಡಿದರು! ಹಸ್ತಲಾಘವವಾದ ಮೇಲೆ ಇಬ್ಬರೂ ಎದುರುಬದುರಾಗಿ ಸೋಫಾಗಳ ಮೇಲೆ ಕುಳಿತುಕೊಂಡರು. ಆ ವ್ಯಕ್ತಿಯೇ ಮೀನಾಕ್ಷಿಯ ಪತಿ ಎಂದು ಮೇಷ್ಟರಿಗೆ ಗೊತ್ತಾಯಿತು.

ಮೀನಾಕ್ಷಿಯ ಪತಿ ಸರಸವಾಗಿ ಮಾತಾಡತೊಡಗಿದರು. ಮೇಷ್ಟರು ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದ ಮೇಲಂತೂ ಕವಿಗಳು, ಕಾವ್ಯಗಳು, ಕಾದಂಬರಿಗಳು ಇವುಗಳ ವಿಚಾರವಾಗಿಯೂ ಸ್ವಾರಸ್ಯವಾಗಿ ಸಂಭಾಷಿಸಿದರು. ಅವರು ಆ ಮನೆ ಮತ್ತು ಆ ವ್ಯಕ್ತಿಗಳಲ್ಲಿ ಕಾಣುತ್ತಿದ್ದ ಸಭ್ಯತೆ, ಸಂಸ್ಕೃತಿ ಮತ್ತು ಸೌಂದರ್ಯಗಳಿಗೆ ಮಾರುಹೋದರು. ನಾನೆಲ್ಲಿಯಾದರೂ ಹೆಣ್ಣಾಗಿದ್ದರೆ ಈ ವ್ಯಕ್ತಿಯೊಡನೆ ಪಾಣಿಗ್ರಹಣಕ್ಕಾಗಿ ಪಂಚಾಗ್ನಿ ತಪಸ್ಸನ್ನು ಬೇಕಾದರೂ ಮಾಡುತ್ತಿದೆ ಎಂದುಕೊಂಡಿತು ಅವರ ಒಳಮನಸ್ಸು.

ಅಷ್ಟರಲ್ಲಿ ಕಾಫಿಯ ಗಿಂಡಿಯನ್ನೂ ತಿಂಡಿಯ ತಟ್ಟೆಯನ್ನೂ ಕೈಯಲ್ಲಿ ಹಿಡಿದು, ಸೊಗಸು ಸೂಸುವಂತೆ ಸೀರೆಯುಟ್ಟು, ನಸುಲಜ್ಜೆಯಿಂದ ನಾಣ್ಗೆಂಪೇರಿ ಮೀನಾಕ್ಷಿಯೂ ಬಂದಳು.

ಕಾಫಿ ತಿಂಡಿಯನ್ನು ಮೇಜಿನ ಮೇಲಿಟ್ಟು, ಎದ್ದುನಿಂತು ನಮಸ್ಕಾರ ಮಾಡಿದ ಮೇಷ್ಟರಿಗೆ ನಮಸ್ಕಾರ ಮಾಡಿ, ದೂರದೊಂದು ಕುರ್ಚಿಯ ಮೇಲೆ (ಗಂಡನ ಕಣ್ಣುಸನ್ನೆಯ ಪ್ರೇರಣೆಯಿಂದ ಎಂದು ಗೊತ್ತಾಯಿತು ಮೇಷ್ಟರಿಗೆ) ಕೂತುಕೊಂಡಳು.

ಮೀನಾಕ್ಷಿ ಯಾವ ಪಿಶಾಚಿಯ ಕೈಗೂ ಸಿಕ್ಕಿ ಗೋಳಾಡುವಂತೆ ಕಂಡು ಬರಲಿಲ್ಲ. ದೇವರನ್ನು ಕೈಹಿಡಿದ ದೇವಿಯಂತೆ ತೋರಿದಳು. ಆ ನಾಗರಿಕತೆಯ, ಆ ಸಂಸ್ಕೃತಿಯ, ಆ ಸಭ್ಯತೆಯ, ಆ ರಸಿಕತೆಯ, ಆ ಸೌಹಾರ್ದದ ವಾತಾವರಣದಲ್ಲಿ ಮೇಷ್ಟರ ಹೃದಯದಲ್ಲಿಯೂ ಅದುವರೆಗೆ ತಪ್ಪು ಭಾವನೆಯಿಂದ ಮೂಡಿದ್ದ ದುರಾಶೆಯ ದೆಸೆಯಿಂದ ಮುಳುಗಿಹೋಗಿದ್ದ ಅವುಗಳೆಲ್ಲವೂ ಮೂಡಿದಂತಾಯ್ತು. ತಮ್ಮ ಕೋಟಿನ ಒಳಗೆ ಎದೆಯ ಪಕ್ಕದಲ್ಲಿದ್ದ ಚೂರಿ ತಮ್ಮ ಎದೆಯೊಳಗೇ ಹೊಕ್ಕಂತೆ ಅನುಭವವಾಯಿತು. ಮೀನಾಕ್ಷಿಯೊಡನೆಯೂ ಆಕೆಯ ಪತಿಯೊಡನೆಯೂ ಮಾತನಾಡುತ್ತಿದ್ದರೂ ತಿಂಡಿ ತಿನ್ನುತ್ತಿದ್ದರೂ ಅವರ ಮನಸ್ಸು ಆ ಚೂರಿಯನ್ನು ನೆನೆದು ಜುಗುಪ್ಸೆಪಡುತ್ತಿತ್ತು. ಅದು ಅಲ್ಲಿರುವುದನ್ನು ತಡೆದುಕೊಳ್ಳಲಾಗಲಿಲ್ಲ. ಮೆಲ್ಲಗೆ ಎಡಗೈಯನ್ನು ಕೋಟಿನೊಳಕ್ಕೆ ಹಾಕಿ ಈಚೆಗೆ ತೆಗೆದು ವಿದ್ಯುದ್ದೀಪದಲ್ಲಿ ತಳತಳನೆ ಹೊಳೆಯುತ್ತಿದ್ದ ಅದನ್ನು ಮೇಜಿನ ಮೇಲಿಟ್ಟರು.

ಮೀನಾಕ್ಷಿ ಕಣ್ಣು ಬಾಯಿ ತೆರೆದು ನೋಡುತ್ತಿದ್ದಳು.

ಆಕೆಯ ಪತಿಯೂ ಆಶ್ಚರ್ಯದಿಂದ “ಅದೇನದು?” ಎಂದು ಕೇಳಿದರು. ಮೀನಾಕ್ಷಮ್ಮನವರಿಗೆ ಪಾಠ ಹೇಳಿಕೊಡುತ್ತಿದ್ದಾಗ ತಮಗೊಂದು ಚಾಕು ಬೇಕು ಎಂದು ಕೇಳಿದ್ದರು. ತಂದುಕೊಡುತ್ತೇನೆ ಎಂದು ಮಾತುಕೊಟ್ಟಿದ್ದೆ. ಇದುವರೆಗೂ ಅದನ್ನು ನೆರವೇರಿಸುವುದಕ್ಕೆ ಆಗಿರಲಿಲ್ಲ” ಎನ್ನುತ್ತಾ ಮೇಷ್ಟರು ತಿಂಡಿ ತಿನ್ನುವುದನ್ನು ನಿಲ್ಲಿಸಿ ಕಾಫಿ ಕುಡಿದರು. ಅವರ ಕಣ್ಣು ತೊಯ್ದಿತ್ತು; ಮಾತು ತೊದಲತೊಡಗಿತ್ತು.

ಮೀನಾಕ್ಷಿಯ ಪತಿ ಆ ಚಾಕುವನ್ನು ಕೈಯಲ್ಲಿ ಹಿಡಿದು ನೋಡುತ್ತಾ “ಅಬ್ಬಾ, ಎಷ್ಟು ಹರಿತವಾಗಿದೆ!” ಎಂದರು. ಕಾಫಿ ಕುಡಿದು ಪೂರೈಸಿದ ಮೇಷ್ಟರು ಹಠಾತ್ತಾಗಿ ಸ್ವಲ್ಪ ರಭಸದಿಂದಲೇ ಹೇಳಿದರು: ನಮ್ಮ ಹೆಣ್ಣು ಮಕ್ಕಳಿಗೆಲ್ಲಾ ಒಂದೊಂದು ಚೂರಿ ಕೊಡಬೇಕು ಸ್ವಾಮೀ, ಇಲ್ಲದಿದ್ದರೆ ಪುಂಡರು ಪೋಕರಿಗಳಿಗೆ ಬುದ್ಧಿ ಬರುವುದಿಲ್ಲ. ಮೊನ್ನೆ ನೋಡಿ ಒಬ್ಬ ಜಟಕಾವಾಲನಂತೆ…” ಎಂದು ಕತೆ ಹೇಳಿದರು.

ಆ ಕತೆ ಹೇಳಿದ ಮೇಲೆ, ಏಕೊ ಏನೊ, ಅವರ ಮನಸ್ಸಿಗೆ ನೆಮ್ಮದಿಯಾಯಿತು.

“ನಾನು ಹೊರಡ್ತೇನೆ, ಸ್ವಾಮಿ”

“ಹೊತ್ತಾಯ್ತು, ಊಟಮಾಡಿಕೊಂಡು ಹೋಗಬಹುದು!”

“ಇಲ್ಲ, ಮನೆಯಲ್ಲಿ ನಮ್ಮ ತಾಯಿ ಒಬ್ಬರೇ ಕಾಯ್ತಿರ್ತಾರೆ.”

“ಅವರನ್ನೊಂದು ದಿನ ಕರಕೊಂಡು ಬನ್ನಿ” ಎಂದಳು ಮೀನಾಕ್ಷಿ.

“ಆಗಲಿ ತಾಯಿ” ಎಂದರು ಮೇಷ್ಟರು.

“ಆಗಾಗ್ಗೆ ಬರುತ್ತಾ ಇರಿ” ಎಂದರು ಮೀನಾಕ್ಷಿಯ ಪತಿ.

“ಇವತ್ತಿಲ್ಲಿಗೆ ಬಂದು ಗಂಗಾಸ್ನಾನ ಮಾಡಿದಂತಾಯ್ತು ನನಗೆ. ನಾನೂ ಬರ್ತೀನಿ; ನಮ್ಮಮ್ಮನ್ನೂ ಕರ್ಕೊಂಡು ಬರ್ತೀನಿ” ಎಂದು, ಮೇಷ್ಟರು ದಂಪತಿಗಳಿಗೆ ಕೈಮುಗಿದು ಬೀಳ್ಕೊಂಡರು.