ಚೈತ್ರ ಸಂಧ್ಯೆಯ ಹೊಂಬಿಸಿಲು ಪಶ್ಚಿಮ ದಿಕ್ಕಿನಲ್ಲಿ ರಂಜಿಸುತ್ತಿದ್ದ ಕುಂಕುಮ ವರ್ಣದ ಮುಗಿಲುಗಳಿಂದ ತುಳುಕಿಬಂದು ನಾಡುಕಾಡುಗಳನ್ನೆಲ್ಲ ತಬ್ಬಿ ಮನೋಹರವಾಗಿತ್ತು. ಮೊದಲ ಮುಂಗಾರಿನ ಮೊದಲ ಮಳೆಯ ತೊಯ್ದ ನೆಲದಲ್ಲಿ ಹಸುರುಹುಲ್ಲು ಚಿಲುಮೆ ಚಿಮ್ಮಿದಂತಿತ್ತು, ಮತ್ತೆ ಹಾಸಿದಂತಿತ್ತು; ಕಣ್ಣಿಗೂ ಮನಸ್ಸಿಗೂ ಏನೋ ಒಂದು ಹೊಸ ಹುರುಪು ಕೊಡುತ್ತಿತ್ತು; ಚೇತನ ಮಣ್ಣಿನಲ್ಲಿಯೂ ಅಂತರ್ಯಾಮಿಯಾಗಿದೆ ಎನ್ನುವುದಕ್ಕೊಂದು ಮೂಕಸಾಕ್ಷಿಯಾಗಿತ್ತು. ಹೊಸ ಮಳೆಯಲ್ಲಿ ಮಿಂದ ಕಾಡುಗಳಲ್ಲಂತೂ ಹಸುರಿಗೆ ಹಸುರೇರಿ ಎತ್ತ ನೋಡಿದರೂ ಬಣ್ಣಗಳಲ್ಲೆಲ್ಲ ಹಸುರೇ ಸರ್ವ ವ್ಯಾಪ್ತಿಯಾಗಿ ಸಾಮ್ರಾಜ್ಯವಾಳುತ್ತಿತ್ತು. ಆ ಹಸುರು ಹೊಂಬಿಸಿಲುಗಳ ಸಮಾಗಮದ ರಮಣೀಯತೆ ಸ್ಥೂಲ ಜಗತ್ತನ್ನು ಭಾವಮಯವನ್ನಾಗಿ ಮಾಡಿ ಅದನ್ನು ಸವಿಗನಸಿನ ಎಲ್ಲೆಯವರೆಗೂ ಎಳೆದೊಯ್ದಿತ್ತು. ಹೊರಸು, ಲಾವುಗೆ, ಗಿಳಿ, ಕಾಮಳ್ಳಿ, ಕಾಜಾಣ ಮೊದಲಾದ ಸಾವಿರಾರು ಹಕ್ಕಿಗಳ ಬೈಗುಹಾಡುಗಳಿಂದ ನೋಟದ ಸೊಂಪಿಗೆ ಇಂಪುಗೂಡಿ ನಮ್ಮ ತಿರುಗಾಟ ಸಾರ್ಥಕವಾಗಿತ್ತು.

ಅಂದು ನಾವು ಕೆಲವರು ನಮ್ಮ ಮನೆಗೆ ಎರಡೂವರೆ ಮೈಲಿ ದೂರದಲ್ಲಿರುವ ನೆಂಟರೊಬ್ಬರ ಮನೆಗೆ ನೆಂಟರಾಗಿ ಹೋಗಿದ್ದೆವು. ಸಾಯಂಕಾಲ ಆ ಮನೆಯ ಯಜಮಾನರಾದ ಮಂ-ರವರು ನಮ್ಮನ್ನೆಲ್ಲ ತಿರುಗಾಟಕ್ಕೆ ಕರೆದೊಯ್ದರು. ಆ ರೀತಿಯ ತಿರುಗಾಟ ಅವರಿಗೆ ಸ್ವಾಭಾವಿಕವಲ್ಲ. ಆದರೂ ನನಗೆ ಅದರಲ್ಲಿ ಇಷ್ಟವೆಂದು ತಿಳಿದು ಅವರು ಹಾಗೆ ಮಾಡಿದರೆಂದು ಊಹಿಸುತ್ತೇನೆ. ಅಂತೂ ಮಿತ್ರರ ಸರಸವಾಕ್ಯಗಳೂ ವಿನೋದಗಳೂ ಹಾಸ್ಯಪರಿಹಾಸ್ಯಗಳೂ ಸುತ್ತಣ ಪ್ರಕೃತಿಸೌಂದರ್ಯದಂತೆಯೆ ಆಹ್ಲಾದಕರವಾಗಿದ್ದುವು.

ನಾವು ಸಂಚಾರ ಹೊರಟ ಸ್ಥಳ ಒಂದು ಬೆಟ್ಟದೋರೆ. ದೊಡ್ಡ ದೊಡ್ಡ ಮರಗಳು ಅಲ್ಲಲ್ಲಿ ಬೆಳೆದಿದ್ದರೂ ಕೆಲವೆಡೆ ಸಣ್ಣ ಪೊದರು ಕುರುಚಲು ಗಿಡಗಳಿಂದ ಬಯಲು ಬಯಲಾದಂತಿತ್ತು. ದಾರಿಯಲ್ಲಿ ಹರಟುತ್ತ, ಹಲಕೆಲವು ಸಣ್ಣಪುಟ್ಟ ಸಾಹಸ ಕೃತ್ಯಗಳನ್ನು ಸಾಧಿಸುತ್ತ ಮುಂದುವರಿದೆವು. ಇದ್ದಕ್ಕಿದ್ದ ಹಾಗೆ ಮಂ-ರವರು ನನ್ನನ್ನು ಕುರಿತು “ಇಲ್ಲೊಂದು ಗಂಟುಕಿತ್ತ ಸ್ಥಳವಿದೆ. ನೋಡುತ್ತಿರೇನು?” ಎಂದರು. ನಾನು “ಎಲ್ಲಿ! ನೋಡಬೇಕು” ಎಂದೆ. ಸರಿ, ಎಲ್ಲರೂ ಅಲ್ಲಿಗೆ ಹೊರಟೆವು. ಹೋಗುತ್ತಿರುವಾಗಲೆ ಗಂಟು ಕೀಳುವುದರ ವಿಚಾರವಾಗಿ ಅನೇಕ ಕಥೆಗಳು ಒಬ್ಬೊಬ್ಬರ ಬಾಯಿಂದಲೂ ಹೊರಬಿದ್ದು, ನಾವು ದಾರಿಯಲ್ಲಿ ನಡೆಯುವುದಕ್ಕೆ ಬದಲಾಗಿ ಕಥಾವಾಹಿನಿಯಲ್ಲಿ ತೇಲಿ ಹೋದೆವು.

‘ಗಂಟು ಕೀಳುವುದು’ ಎಂದರೆ ಏನು ಎಂದು ಕಣ್ಣು ಕಣ್ಣು ಬಿಡಬೇಡಿ. ಅದೊಂದು ನಮ್ಮ ಕಡೆಯ ಪರಿಭಾಷೆ. ‘ಗಂಟು’ ಎಂದರೆ ನೆಲದಲ್ಲಿ ಹಿಂದಿನವರು ಹೂಳಿಟ್ಟ ಧನ! ಇಂದಿನವರು ಹೂಳಿಟ್ಟರೆ ಅದು ‘ಗಂಟು’ ಆಗುವುದಿಲ್ಲವೊ ಎಂದು ಕೇಳಬೇಡಿ. ಇಂದಿನವರಾಗಲಿ ಹಿಂದಿನವರಾಗಲಿ ಧನವನ್ನು ಹೂಳಿದರೆ ಗಂಟು ಗಂಟೇ! ಆದರೆ ಇಂದಿನವರ ಪದ್ಧತಿ ಹೂಳಿಡುವುದಲ್ಲ; ಹೂಳಿದ್ದನ್ನು ಕೀಳುವುದು. ಎಷ್ಟಾದರೂ ಭೂಗರ್ಭಶೋಧನೆಯ ಕಾಲವಷ್ಟೆ! ಅದರಲ್ಲಿಯೂ ಇಂದಿನವರಿಗೆ ಕೂಳಿಡುವುದಕ್ಕೇ ಧನವಿಲ್ಲ; ಹೂಳಿಡುವುದಕ್ಕೆ ಎಲ್ಲಿಂದ ತರಬೇಕು? ಈಗ ಹಣವಿದ್ದವರು ಅದನ್ನು ನೆಲದಲ್ಲಿಡುವುದಿಲ್ಲ, ಕಡಲಾಚೆಗೆ ಕಳುಹಿಸುತ್ತಾರೆ!

ಈಗ ನಿಮಗೆ ‘ಗಂಟು’ ಎಂದರೆ ಅರ್ಥವಾಯಿತು. ಇನ್ನು ‘ಕೀಳುವುದು’ ಎಂದರೆ ಏನು? ‘ಕೀಳುವುದು’ ಎಂದರೆ ಕೀಳುವುದು! ಇದೊಳ್ಳೆಯ ಅರ್ಥ ಹೇಳುವ ರೀತಿ ಎಂದು ನಗಬೇಡಿ. ಅನೇಕ ಸ್ಕೂಲುಗಳಲ್ಲಿ ಕನ್ನಡ ಪದ್ಯಗಳಿಗೆ ಇದಕ್ಕಿಂತಲೂ ಹೆಚ್ಚು ಅರ್ಥ ಹೇಳುತ್ತಾರೆಂದು ತಿಳಿದಿರೇನು? “ಜನಮೇಜಯರಾಯ-ಜನಮೇಜಯರಾಯನೇ, ಕೇಳು ಕೇಳು” ಎಂದು ಮೊದಲಾಗಿ ಅರ್ಥ ಹೇಳುವುದನ್ನು ವಿದ್ಯಾರ್ಥಿಗಳಾಗಿದ್ದವರೂ ಆಗಿರುವವರೂ ಎಲ್ಲರೂ ಬಲ್ಲರು. ಅಷ್ಟೇ ಅಲ್ಲ; ಕೆಲವು ಸಾರಿ ‘ಅರಗಿಳಿ’ ಎನ್ನುವುದಕ್ಕೆ ‘ರಾಜಕೀಯ’ ಎಂದೂ, ‘ಬೆಳಕು’ ಎನ್ನುವುದಕ್ಕೆ ‘ದೀಪ್ತಿ’ ಎಂದೂ ಅರ್ಥ ಹೇಳುತ್ತಾರೆ. ಕಾರಣವೇನೆಂದರೆ-ಹುಡುಗರ ದಾರಿಗೆ ಇನ್ನೆಲ್ಲಿಯಾದರೂ ‘ದೀಪ್ತಿ ರಾಜಕೀರ’ಗಳು ಅಡ್ಡಹಾಯ್ದರೆ ‘ಬೆಳಕು ಅರಗಿಳಿ’ಗಳು ಬಂದು ಕಾಪಾಡಲಿ ಎಂದು.

‘ಕೀಳುವುದು’ ಎಂದರೆ ಕೀಳುವುದು ಎಂದೇನೊ ಹೇಳಿಬಿಟ್ಟೆ. ಆದರೆ ಗಂಟು ಕೀಳುವುದು ಅಷ್ಟು ಸುಲಭವಲ್ಲ ಎಂದು ನಿಮಗೆ ಇನ್ನು ಸ್ವಲ್ಪ ಹೊತ್ತಿನಲ್ಲಿಯೆ ಗೊತ್ತಾಗುತ್ತದೆ. ಗಂಟು ಕೀಳಲು ಹೋಗಿ ಪ್ರಾಣ ಕಳೆದುಕೊಂಡವರಿದ್ದಾರೆ; ಮನೆ ಹಾಳುಮಾಡಿಕೊಂಡವರಿದ್ದಾರೆ; ಗಂಟು ಕಿತ್ತು ಶ್ರೀಮಂತರಾದವರಿದ್ದಾರೆ, ದರಿದ್ರರಾದವರಿದ್ದಾರೆ (ಟಿಪ್ಪಣಿ-ಶ್ರೀಮಂತರಾದವರಿಗಿಂತಲೂ ದರಿದ್ರರಾದವರ ಸಂಖ್ಯೆಯೇ ಜಾಸ್ತಿ.) ನಾನು ಟಿಪ್ಪಣಿ ಹಾಕುತ್ತಿರಲಿಲ್ಲ. ಆದರೆ ಟಿಪ್ಪಣಿಗಳು ಎಷ್ಟು ಹೆಚ್ಚಾಗಿದ್ದರೆ ಲೇಖನವೂ ಅಷ್ಟುಮಟ್ಟಿಗೆ ಹೆಚ್ಚು ಪ್ರೌಢವಾಗುತ್ತದೆ ಎಂದು ಅನೇಕ ವಿದ್ವಾಂಸರ ನಂಬಿಕೆಯಾಗಿರುವುದರಿಂದ ಹಾಗೆ ಮಾಡಬೇಕಾಯಿತು. ಟಿಪ್ಪಣಿಗಳು ಲೇಖನಗಳಿಗೆ ಗಡ್ಡದ ಕೂದಲುಗಳಿದ್ದಂತೆ. ಗಡ್ಡವಿಲ್ಲದ ಗಂಡಸಿಗೆ ಅಷ್ಟು ಗೌರವವಿಲ್ಲ ಎಂದು ಅನೇಕರ ಅನುಭವಕ್ಕೆ ಬಂದಿರಬಹುದು. ಗಡ್ಡ ಬಿಟ್ಟಿದ್ದರೆ ಶ್ರೀಮದ್ಗಾಂಭೀರ್ಯ! ಗಡ್ಡ ಎಷ್ಟು ಉದ್ದವಾಗಿದ್ದರೆ ಅಷ್ಟೂ ಗಾಂಭೀರ್ಯ! ಕೆಲವು ಪ್ರಸಿದ್ಧ ವ್ಯಕ್ತಿಗಳಂತೂ ಗಡ್ಡದ ಮೇಲೆಯೇ ನಡೆಯುತ್ತಿದ್ದಾರೆ! ಅವರೆಲ್ಲಿಯಾದರೂ ಗಡ್ಡ ತೆಗೆದುಬಿಟ್ಟರೆ-ದೇವರೇ ಗತಿ! ಲೇಖನಗಳಿಗೂ ಹಾಗೆಯೇ ಟಿಪ್ಪಣಿಗಳು ಉದ್ದವಾಗಿದ್ದು ಹೆಚ್ಚಾಗಿದ್ದರೆ ಅವುಗಳಿಗೆ ಪ್ರೌಢಿಮೆ ದೊರೆಕೊಳ್ಳುವುದರಲ್ಲಿ ಲೇಶವೂ ಸಂದೇಹವಿಲ್ಲ.

ನಾವೆಲ್ಲರೂ ಗಂಟು ಕಿತ್ತಿದ್ದ ಸ್ಥಳವನ್ನು ನೋಡಲು ಉತ್ಸುಕತೆಯಿಂದ ಬೇಗಬೇಗನೆ ಸಾಗಿದೆವು. ಹೋಗುತ್ತ ಹೋಗುತ್ತ ಕಾಡು ದಟ್ಟವಾಗತೊಡಗಿತು. ಒಂದು ಹಳ್ಳಿಯ ಕೊರಕಲು ಕೊರಕಲಾದ ಗಾಡಿದಾರಿಯನ್ನು ದಾಟಿದೆವು. ಮಂ-ರವರು ದೂರದ ಒಂದು ಕಾಡುಮರವನ್ನು ನಿರ್ದೇಶಿಸಿ, “ಅದರ ಬುಡದಲ್ಲಿಯೇ!” ಎಂದರು. ನಾವೆಲ್ಲರೂ ಮತ್ತಷ್ಟು ವೇಗವಾಗಿ ನಡೆದವು.

“ಇಲ್ಲಿ ನೋಡಿ! ಇಲ್ಲಿ!”

“ಓ ಹೋ ಹೋ ಹೋ ಹೋ!” ಎಂದು ಹತ್ತಾರು ಕೊರಳುಗಳು ಕೂಗಿಕೊಂಡವು.

ನಾನು ನಿಂತಲ್ಲಿದ್ದ ಒಂದು ದೊಡ್ಡ ಮರದ ಬುಡದಲ್ಲಿ ಸುಮಾರು ಎರಡಾಳು ಎತ್ತರಕ್ಕೆ ಒಂದೂವರೆ ಅಥವಾ ಎರಡು ಮಾರು ಅಗಲಕ್ಕೆ ಒಂದು ದೊಡ್ಡ ಗುಣಿಯಾಗಿತ್ತು. ಅದರ ಅಂಚಿನಲ್ಲಿ ಕೆಮ್ಮಣ್ಣು ರಾಶಿರಾಶಿಯಾಗಿ ಬಿದ್ದು ಸುತ್ತಮುತ್ತಲಿದ್ದ ಹಸುರಿನ ಮಧ್ಯೆ ಭೂತಕ್ಕೆ ಬಲಿಯಿಟ್ಟ, ಕೆಂಗೊಳೋ ಎಂಬಂತೆ ತೋರುತ್ತಿತ್ತು.

“ಏನ್ರೀ, ಇನ್ನೊಂದು ಸ್ವಲ್ಪ ಕೆಲಸ ಮಾಡಿದ್ದರೆ ಇಲ್ಲೊಂದು ಸೇದುವ ಬಾವಿಯೇ ಆಗುತ್ತಿತ್ತಲ್ಲಾ!”

“ಏನು ದೆವ್ವಗಳಿಗೆ ನೀರು ಕುಡಿಯುವುದಕ್ಕೇನು?”

“ಅಲ್ರೀ ಎಷ್ಟು ಜನ ಎಷ್ಟು ದಿವಸ ಅಗೆದರು ಇಲ್ಲಿ?”

“ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂದು ರಾತ್ರಿ ಹಗಲು ಅಗೆದಿದ್ದಾರೆ ಅಂದ್ರೆ?”

“ಏನಾದರೂ ಸಿಕ್ಕಿತೋ?”

“ಎಂಥದ್ದು ಸಿಕ್ಕಿದ್ದು? ಕೆಮ್ಮಣ್ಣು!”

“ಅಲ್ರೀ, ಇಲ್ಲಿ ಗಂಟಿದೆ ಎಂದು ಅವರಿಗೆ ಯಾರು ಹೆಳಿದ್ದು?”

“ಯಾರು ಹೇಳುತ್ತಾರೆ? ಈ ಮರ!”

ನಾನು ಸ್ವಲ್ಪ ಬೆರಗಾಗಿ ಆ ಮರದ ಕಡೆ ನೋಡಿದೆ. ಮಂ-ರವರು ನನ್ನ ಮುಖವನ್ನು ನೋಡಿ ನಕ್ಕು ವಿವರಿಸತೊಡಗಿದರು.

“ಈ ಮರದಲ್ಲಿ ಒಂದು ಕೈ ಬಂದಿತ್ತು. ಅದನ್ನು ಕಡಿದಿದ್ದಾರೆ. ನೋಡಿ ಗುರುತು ಕಾಣುತ್ತದೆ. ಮರದಲ್ಲಿ ಕೈ ಬಂದರಾಗಲಿ, ಚಿಟ್ಟೆ ಗಿಡದಲ್ಲಿ ಬಂದಿಳಿಕೆ ಬಂದರಾಗಲಿ ಅಲ್ಲಿ ಗಂಟು ಇರುವುದಕ್ಕೆ ಗುರುತಂತೆ. ಮರದ ಬುಡಕ್ಕೂ ಕೈ ಬಂದ ಸ್ಥಳಕ್ಕೂ ಎಷ್ಟು ದೂರವಿರುವುದೋ ಅಷ್ಟು ಆಳದಲ್ಲಿ ನೆಲದೊಳಗೆ ಗಂಟು ಇರುತ್ತದೆ ಎಂದು ಲೆಕ್ಕ-”

ಮರಕ್ಕೆ ಕೈ ಬರುವುದೆಂದರೆ, ಬೇರಿನ ರೂಪದ ಕೊಂಬೆಯೊಂದು (ಅದರಲ್ಲಿ ಎಲೆಗಳಿರುವುದಿಲ್ಲ) ಮರದ ಮೈಯಿಂದ ಮೂಡಿ ನೆಲದ ಕಡೆಗೆ ಮುಖ ಹಾಕುತ್ತದೆ. ಕೈಮರ ದಾರಿ ನಿರ್ದೇಶಿಸುವಂತೆ, ಆದ್ದರಿಂದಲೆ ಅದಕ್ಕೆ ಮರದ ಕೈ ಎಂದು ಹೆಸರು. ಮರಗಳಿಗೆ ಅಂತಹ ಕೈ ಬರುವುದು ಬಹಳ ಅಪೂರ್ವವಾದುದರಿಂದ ಹಳ್ಳಿಯ ಜನಗಳು ಅದಕ್ಕೊಂದು ವಿಶೇಷಾರ್ಥ ಕಲ್ಪನೆಮಾಡಿ ಆ ಕೈ ಗುಪ್ತಧನವಿದೆ ಎಂದು ಮರ ಮಾಡುವ ಸನ್ನೆ ಎಂದು ಭಾವಿಸಿ ನೆಲವನ್ನು ಅಗೆಯುತ್ತಾರೆ. ಅಗೆಯುವಾಗ ಭೂತ ಪಿಶಾಚಿಗಳಿಗೆ ರಕ್ತದ ಬಲಿ ಕೊಡುತ್ತಾರೆ. ಮಂತ್ರವಾದಿಗಳಿಗೆ ಹಣ ಕೊಡುತ್ತಾರೆ. ಯಥೇಚ್ಚವಾಗಿ ಧನ ಲಭಿಸಲಿರುವಾಗ ಸ್ವಲ್ಪ ರೂಪಾಯಿ ವೆಚ್ಚವಾದರೇನಂತೆ! ಪ್ರಯತ್ನ ವಿಫಲವಾಗಿ ಆಶಾಭಂಗವಾದರೆ (ಹಾಗಲ್ಲದೆ ಮತ್ತೇನು?) ಏನೋ ನಮಗೆ ಅದೃಷ್ಟವಿರಲಿಲ್ಲ. ಗಂಟು ಮಾಯವಾಗಿರಬೇಕು ಎಂದು ಸಮಾಧಾನ ಮಾಡಿಕೊಳ್ಳುತ್ತಾರೆಯೆ ಹೊರತು, ಅಲ್ಲಿ ಗಂಟಿರಲಿಲ್ಲ. ನಾವು ಮಾಡಿದ್ದು ಮೂರ್ಖತನ ಎಂದು ಒಪ್ಪಿಕೊಳ್ಳುವುದೇ ಇಲ್ಲ. ಈ ಗಂಟು ಕೀಳುವ ಸಾಹಸ ಬಹು ಪುರಾತನಕಾಲದಿಂದಲೂ ನಡೆದು ಬಂದಿದೆ. ಈಗಲೂ ನಡೆಯುತ್ತಿದೆ. ಆದರೂ ಜನರು ಕಣ್ದೆರೆದಿಲ್ಲ; ನಂಬಿಕೆ ತಪ್ಪಿಲ್ಲ. ಬಹುಶಃ ಹಿಂದೆ ಯಾರಿಗೋ ಎಲ್ಲಿಯೋ ಆಕಸ್ಮಿಕವಾಗಿ ಧನ ಲಭಿಸಿರಬೇಕೆಂದು ತೋರುತ್ತದೆ. ಸಫಲವಾದ ಒಂದು ಪ್ರಯತ್ನವನ್ನೇ ಪ್ರಮಾಣವಾಗಿಟ್ಟುಕೊಂಡು ವಿಫಲವಾದ ನೂರು ಪ್ರಯತ್ನಗಳನ್ನು ಜನರು ಲಕ್ಷಿಸುವುದೇ ಇಲ್ಲ. ಅದೂ ಅಲ್ಲದೆ ಮನುಷ್ಯನಿಗೆ ಸ್ವಾಭಾವಿಕವಾಗಿಯೆ ಸಾಹಸದಲ್ಲಿ ಕುತೂಹಲವಿರುತ್ತದೆ. ಪುರಾಣ ಇತಿಹಾಸಗಳಲ್ಲಿ ಈ ಗಂಟು ಕೀಳುವ ಪ್ರಯತ್ನದಂತಹ ಸಾಹಸಗಳು ಎಷ್ಟು ಜರುಗಿಲ್ಲ! ಪುರಾಣ ಇತಿಹಾಸಗಳಂತಹ ಕಲ್ಪನಾ ಪ್ರಪಂಚದಲ್ಲಿ ಸಾಧ್ಯವಾಗುವ ಕಾರ್ಯಗಳು ವಾಸ್ತವ ಜಗತ್ತಿನಲ್ಲಿ ಸಾಧ್ಯವಿಲ್ಲ ಎಂಬುದು ಹಳ್ಳಿಯವರಿಗೆ ಹೇಗೆ ಗೊತ್ತಾಗಬೇಕು ಆದ್ದರಿಂದಲೇ ಮರಕ್ಕೆ ಕೈ ಬಂದಿತೆಂದರೆ ಮೈಗಳ್ಳನೂ ಕೂಡ ಹಾರೆ ಗುದ್ದಲಿ ತೆಗೆದುಕೊಂಡು ಹಗಲಿರುಳೂ ಮೈಮುರಿಯುವಂತೆ ಅಗೆಯುತ್ತಾನೆ. ಅದೃಷ್ಟ, ಅನಿರ್ದಿಷ್ಟ, ಆಕಸ್ಮಿಕ, ಅಪ್ರಮೇಯ, ಅನಿರ್ವಚನೀಯ-ಇವುಗಳು ಇಲ್ಲದಿದ್ದರೆ ಮನುಷ್ಯನ ಬಾಳು ಎಷ್ಟು ನೀರಸವಾಗುತ್ತಿತ್ತು! ಎಷ್ಟು ಬೇಗನೆ ಬೇಸರವಾಗುತ್ತಿತ್ತು.!

ಗಂಟು ಕಿತ್ತಿದ್ದ ಸ್ಥಳವನ್ನು ನೋಡಿಕೊಂಡು ಮನೆಯ ಕಡೆಗೆ ತಿರುಗಿದೆವು. ಆಗಲೆ ಬೈಗುಗಪ್ಪು ಮುಸುಗುತ್ತಿತ್ತು. ದಾರಿಯಲ್ಲಿ ಮಂ-ರವರೂ ಇತರರೂ ಗಂಟು ಕೀಳುವ ಸಾಹಸಗಳನ್ನು ಕುರಿತು ಅನೇಕ ಕಥೆ ಹೇಳಿದರು. ಒಬ್ಬನು ಗಂಟು ಕೀಳುವ ಗಡಿಬಿಡಿಯಲ್ಲಿ ಹುತ್ತವನ್ನಗೆದು ನಾಗರಹಾವಿನ ವಿಷದಿಂದ ಮಡಿದನಂತೆ. ರಸ್ತೆ ಕೆಲಸ ಮಾಡುತ್ತಿದ್ದ ಕೆಲವು ಮಂದಿ ಕ್ರೈಸ್ತ ಕೂಲಿಯಾಳುಗಳು ದಾರಿಯ ಬಳಿಯಿದ್ದ ಒಂದು ಬಂಡೆಯ ಅಡಿಯಲ್ಲಿ ದೊಡ್ಡದೊಂದು ಕೊಪ್ಪರಿಗೆಯ ತುಂಬ ಹಣವಿದೆ ಎಂಬ ಐತಿಹ್ಯಕ್ಕೆ ಮರುಳಾಗಿ ಮಾಡುವ ಕೆಲಸವನ್ನು ಬಿಟ್ಟು ಆ ಬಂಡೆಯನ್ನು ಬಹು ಪ್ರಯಾಸದಿಂದ ಕಿತ್ತು ತೆಗೆದು ನೋಡುವಲ್ಲಿ ಮಣ್ಣು ಎರೆಯ ಹುಳುಗಳಲ್ಲದೆ ಬೇರೆಯೇನೂ ಇರಲಿಲ್ಲವಂತೆ! ನಿಜವಾಗಿಯೂ ಇರಲಿಲ್ಲ ಎಂದರ್ಥವಲ್ಲ. ಇದ್ದರೂ ಕೂಡ ಕೈಸ್ತರು ಬಲಿಗಿಲಿ ಕೊಟ್ಟು ಹಿಂದೆ ದೇವತೆಗಳನ್ನು ಒಲಿಸಿಕೊಳ್ಳದಿದ್ದುದರಿಂದ ಇದ್ದ ಗಂಟು ಮಾಯವಾಗಿಬಿಟ್ಟಿತಂತೆ! ಹಿಂದೆ ಒಂದು ಸಾರಿ ಗಂಟು ಕೀಳುವ ಸಲುವಾಗಿ ಕೆಲವು ಜನ ಧೂರ್ತರು ಮಂತ್ರವಾದಿಯ ಸಲಹೆಯಂತೆ ಕನ್ನಡ ಜಿಲ್ಲೆಯಿಂದ ಘಟ್ಟದ ಮೇಲೆ ಕೆಲಸಕ್ಕೆ ಬಂದ ಒಬ್ಬ ಕೂಲಿಯ ಹುಡುಗನನ್ನೇ ಬಲಿಕೊಡಲು ಪ್ರಯತ್ನ ಮಾಡಿದ್ದರಂತೆ!

ಇಂತಹ ಅನೇಕ ಸಂಗತಿಗಳನ್ನು ವಿಸ್ತಾರವಾಗಿ ಸ್ವಾರಸ್ಯವಾಗಿ ಅಭಿನಯ ಪೂರ್ವಕವಾಗಿ ಹೇಳಿದರು. ಅದರಲ್ಲಿ ಒಂದನ್ನು ನಿಮಗಿಲ್ಲಿ ವಿಸ್ತಾರವಾಗಿ ಹೇಳುತ್ತೇನೆ. ಏಕೆ? ಗಡಿಯಾರದ ಕಡೆ ನೋಡುತ್ತೀರಿ! ಹೊತ್ತಾಯಿತೆ? ಅಥವಾ ಬೇಸರವಾಯಿತೆ? ಇರಲಿ, ಸ್ವಲ್ಪ ಕೇಳಿಬಿಡಿ. ಪ್ರಾರಂಭಮಾಡಿದ್ದಾಯಿತು. ಹೇಳಿ ಮುಗಿಸಿಬಿಡುತ್ತೇನೆ.

ಮೊಸರೂರು ಮಂಜಣ್ಣ ಒಬ್ಬ ಜಮೀನುದಾರರ ಒಕ್ಕಲು. ಅವನಿಗೆ ಇದ್ದಕ್ಕಿದ್ದ ಹಾಗೆ ಶ್ರೀಮಂತನಾಗಬೇಕೆಂಬ ಹುಚ್ಚು ಹಿಡಿಯಿತು. ಹೆಚ್ಚು ಗದ್ದೆ ಸಾಗುವಳಿ ಮಾಡತೊಡಗಿದನು. ಒಂದು ಸಣ್ಣ ಅಡಕೆ ತೋಟವನ್ನು ಗುತ್ತಿಗೆಗೆ ತೆಗೆದುಕೊಂಡನು. ದೂರದ ಹಳ್ಳಿಯ ಜಾನುವಾರುಗಳು ತನ್ನ ಗದ್ದೆ ತೋಟಗಳಿಗೆ ಬಂದಾಗ ಅವುಗಳನ್ನು ಹಿಡಿದು, ಕಿವಿ ಬಾಲಗಳನ್ನು ಕೊಯ್ದು, ಚಹರೆ ತಪ್ಪಿಸಿ, ತನ್ನ ಕೊಟ್ಟಿಗೆಗೆ ಕೂಡಿಕೊಂಡನು. ನೆರೆಯವರ ಗದ್ದೆಗಳಿಂದ ಹಾರೆ ಗುದ್ದಲಿ ಮೊದಲಾದ ಹತಾರುಗಳನ್ನು ಕದ್ದುತಂದನು. ‘ಕಾಸಿಗೆಕಾಸು ಗಂಟು ಹಾಕಿ, ಹೊಟ್ಟೆಗೆ ಬೆನ್ನು ಅಂಟುಹಾಕಿ’ ಅಂತೂ ಸ್ವಲ್ಪ ದುಡ್ಡು ಮಾಡಿಕೊಂಡನು. ಸೆಗಣಿ ಕೆಸರು ಹಿಡಿದು ಜಿಡ್ಡುಜಿಡ್ಡಾದ ಅಂಗಿ ಪಂಚೆ ಟೋಪಿಗಳನ್ನೆ ಹರಿದು ಚಿಂದಿ ಚಿಂದಿಯಾಗುವವರೆಗೂ ಉಡ ತೊಡಗಿದನು. ಹೆಂಡತಿಗೆ ‘ಮಿತವ್ಯಯ’ವನ್ನು ಕಲಿಸತೊಡಗಿದನು. ಆದರೆ ಅದು ಸಾಗಲಿಲ್ಲ. ಆಕೆಯ ಕಾಟ ಸಹಿಸಲಾರದೆ ಕೆಲವು ಆಭರಣಗಳನ್ನೇನೊ ಮಾಡಿಸಿಕೊಟ್ಟನು. ಹೀಗಾಗಿ ಕೆಲವು ವರುಷಗಳಲ್ಲಿಯೆ ನಿರಂತರ ಶ್ರಮಯಾತನೆಗಳಿಂದ ಮೊಸರೂರು ಮಂಜಣ್ಣನು ಮೊಸರೂರು ಮಂಜಣ್ಣಗೌಡರಾದನು. ಅನೇಕರು ಅವನನ್ನು ‘ಮಂಜಣ್ಣ ಗೌಡರೇ’ ಎಂದು ಕರೆಯಲಾರಂಭಿಸಿದರು. ಮಂಜಣ್ಣನಿಗೆ ಪಿತ್ತ ನೆತ್ತಿಗೇರಿ ಇನ್ನೂ ಹೆಚ್ಚಾಗಿ ಐಶ್ವರ್ಯ ಸಂಪಾದನೆ ಮಾಡಬೇಕೆಂದು ಕಾತರನಾದನು. ಮಾರ್ಗ? ಮಂಜಣ್ಣ ಹಗಲಿರುಳೂ ಐಶ್ವರ್ಯ ಸಂಪಾದನೆ ಮಾಡುವ ಚಿಂತೆಗೊಳಗಾಗಿ ಭೂತಗಳಿಗೂ ದೇವತೆಗಳಿಗೂ ವಿಧವಿಧವಾದ ಕಾಣಿಕೆ ಕಟ್ಟಿ ಪ್ರಾರ್ಥಿಸುತ್ತಿದ್ದನು. ಪುರಾಣ ಭಾಗವತರಾಟಗಳಲ್ಲಿ ಆಕಸ್ಮಿಕವಾದ ಈಶ್ವರ ಕೃಪೆಯಿಂದ ಸಂಪತ್ತು ಲಭಿಸುತ್ತದೆ ಎಂಬುದನ್ನು ಕೇಳಿ ನಂಬಿದ್ದ ಆತನು ಯಾವುದಾದರೊಂದು ಅದ್ಭುತ ರೀತಿಯಿಂದ ತಾನು ಶ್ರೀಮಂತನಾಗುತ್ತೇನೆ ಎಂದು ದಿನದಿನವೂ ಆ ಮಹಾ ಮುಹೂರ್ತವನ್ನು ನಿರೀಕ್ಷಿಸತೊಡಗಿದನು.

ಆಘಟನಘಟನಾಕಾರಿಯಾದ ದೇವರ ಕೃಪೆಯಿಂದ ತನ್ನ ಪೆಟ್ಟಿಗೆಯಲ್ಲಿದ್ದ ರೂಪಾಯಿಗಳು ಮರಿಹಾಕಬಹುದೆಂದು ದಿನವೂ ಅವುಗಳನ್ನು ಎಣಿಸಿ ಎಣಿಸಿ ನೋಡಿದನು. ರೊಕ್ಕ ಚೊಕ್ಕವಾದುವೆ ಹೊರತು ಲೆಕ್ಕ ಹೆಚ್ಚಾಗಲಿಲ್ಲ. ಯಾವುದಾದರೂ ಒಂದು ದೇವತೆ ತನ್ನ ಭಕ್ತಿಗೆ ಮೆಚ್ಚಿ ಹಣದ ಗಂಟನ್ನು ತಂದು ತನ್ನ ಮನೆಯೊಳಗೆ ಹಾಕಬಹುದೆಂದು ದಿನದಿನವೂ ಮನೆಯ ಮೂಲೆ ಮೂಲೆಗಳನ್ನು ಹುಡುಕಿ ನೋಡಿದನು. ಕಸಕಡ್ಡಿ ಕ್ರಿಮಿಕೀಟಗಳು ಕಾಣುತ್ತಿದ್ದುವೆ ಹೊರತು ಗಂಟು ಕಾಣಿಸಲಿಲ್ಲ. ನೆಲದಲ್ಲಿ ಎಲ್ಲಿಯಾದರೂ ಗಂಟು ದೊರಕಬಹುದೆಂದು ಭಾವಿಸಿ, ನಡೆಯುವಾಗ ಧಪ್ಪಧಪ್ಪನೆ ಕಾಲು ಹಾಕಿ ಹಣದ ಸದ್ದಾಗುವುದೊ ಎಂದು ಆಲಿಸಿ ನೋಡಿದನು. ಪರಿಣಾಮವಾಗಿ ಕಾಲು ಕೀಲುಗಳು ನೊಂದು ಸ್ವಲ್ಪ ನೆರಳಿದನೆ ಹೊರತು ಎಲ್ಲಿಯೂ ಗುಪ್ತ ಧನವಿಟ್ಟ ತಾಣ ಸಿಕ್ಕಲಿಲ್ಲ.

ಹೀಗಿರಲು ಒಂದು ದಿನ ಮಂಜಣ್ಣ ತನ್ನ ತೋಟದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿದ್ದ ಒಂದು ಹಲಸಿನ ಮರದಲ್ಲಿ ಒಂದು ಕೈ ಮೂಡಿದ್ದನ್ನು ಕಂಡನು. ಲಕ್ಷ್ಮೀಸಮೇತನಾದ ಶ್ರೀಮನ್ನಾರಾಯಣನೆ ಪ್ರತ್ಯಕ್ಷವಾಗಿದ್ದರೂ ಮಂಜಣ್ಣನಿಗೆ ಅಷ್ಟು ಆನಂದವಾಗುತ್ತಿತ್ತೋ ಇಲ್ಲವೊ! ತನ್ನ ಅದೃಷ್ಟ ಕುಲಾಯಿಸಿತೆಂದು ಹಿಗ್ಗಿ ಹೆಬ್ಬಾಗಿಲಾದನು. ಆ ಮರಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ, ಆ ತೋಟದ ಭೂತನಿಗೆ ಹತ್ತಾರು ಕೋಳಿಗಳನ್ನು ಹೆಚ್ಚಾಗಿ ಹರಕೆ ಕೊಡುವುದಾಗಿ ಹೇಳಿಕೊಂಡು, ಮನೆಗೆ ಬಂದನು. ಗುಟ್ಟನ್ನು ಯಾರಿಗೂ ಹೇಳಲಿಲ್ಲ. ಹೆಂಡತಿಗೆ ಹೇಳಿದರೂ ಕೂಡ ಸುದ್ದಿ ಬಯಲಾಗುತ್ತದೆಂದು ಭಯ. ತಾನೊಬ್ಬನೆ ಗಂಟು ಕೀಳಬೇಕೆಂದು ನಿಶ್ಚಯಿಸಿದನು.

ಆದರೆ ಮಂಜಣ್ಣನಿಗೆ ಐಶ್ವರ್ಯದಲ್ಲಿ ಆಸೆ ಇದ್ದುದಕ್ಕಿಂತಲೂ ಹೆಚ್ಚಾಗಿ ಭೂತಪಿಶಾಚಿಗಳಲ್ಲಿ ನಂಬಿಕೆಯೂ ಭಯವೂ ಇದ್ದುವು. ಸರಿಯಾದ ಮಂತ್ರವಾದಿಗಳ ಸಹಾಯವಿಲ್ಲದೆ, ಭೂತಗಳಿಗೆ ತೃಪ್ತಿಯಾಗುವಂತೆ ಬಲಿಕೊಟ್ಟು ದಿಗ್ಭಂಧನಮಾಡದೆ ಗಂಟು ಕಿತ್ತರೆ ಚಿತ್ರವಿಚಿತ್ರ ಹಿಂಸೆಗಳಿಂದ ಪ್ರಾಣ ಹೋಗುತ್ತದೆಂದು ಆತನು ಕೇಳಿದ್ದನು. ದೆವ್ವಗಳನ್ನು ಲಕ್ಷಿಸದೆ ಗಂಟುಕಿತ್ತ ಒಬ್ಬನು ಅದೇ ಮರಕ್ಕೆ ನೇಣಾಗಿದ್ದನಂತೆ. ಇನ್ನೊಬ್ಬನು ರಕ್ತಕಾರಿ ಸತ್ತನಂತೆ. ಮತ್ತೊಬ್ಬನಿಗೆ ಹುಚ್ಚು ಹಿಡಿಯಿತಂತೆ. ಮಗದೊಬ್ಬನು ತನ್ನ ಆಹಾರದಲ್ಲಿ ಸದಾ ಕ್ರಿಮಿಕೀಟಾದಿ ಅಸಹ್ಯಗಳನ್ನೆ ಕಾಣತೊಡಗಿದನಂತೆ. ಇದನ್ನೆಲ್ಲಾ ಕೇಳಿದ್ದ ಅವನು ತಾನೊಬ್ಬನೆ ಗಂಟು ಕೀಳಲು ಸಾಹಸಮಾಡಲಿಲ್ಲ. ಯಾರಾದರೂ ಒಬ್ಬ ಮಂತ್ರವಾದಿ ತನ್ನೂರಿಗೆ ಬರುವುದನ್ನೇ ನಿರೀಕ್ಷಿಸುತ್ತಿದ್ದನು.

ಈ ಮಧ್ಯೆ ಮಂಜಣ್ಣ ಸ್ವಲ್ಪ ಧಾರಾಳವಾಗಿ ವೆಚ್ಚಮಾಡತೊಡಗಿದನು. ಏಕೆಂದರೆ, ತೋಟದಲ್ಲಿ ಹಲಸಿನಮರದ ಬುಡದಲ್ಲಿ ಬ್ಯಾಂಕು ಇದೆಯಷ್ಟೆ! ಇನ್ನೇಕೆ ಕಾರ್ಪಣ್ಯ? ಭೂತಪಿಶಾಚಿಗಳಿಗೂ ಹೆಚ್ಚು ಹೆಚ್ಚಾಗಿ ಕೋಳಿ ಕುರಿಗಳನ್ನು ಬಲಿಕೊಡತೊಡಗಿದನು. ಪ್ರತಿ ದಿನವೂ ತೋಟದ ಹಲಸಿನ ಮರದ ಬುಡದಲ್ಲಿ ಕುಳಿತು ಹೊಂಗನಸುಗಳನ್ನು ನಿರ್ಮಿಸಿ ಆನಂದಪಡುವನು. ಮಂತ್ರವಾದಿಯ ಆಗಮನಕ್ಕಾಗಿ ಪ್ರಾರ್ಥಿಸಿದನು.

ಹೀಗಿರಲು ಮಂಜಣ್ಣನ ಕಿವಿಗೆ ಒಂದು ಸುದ್ದಿ ಬಿದ್ದಿತು. ನೆರೆಯೂರಿನಲ್ಲಿ ಅದ್ಭುತಶಕ್ತಿಯುಳ್ಳ ಬೈರಾಗಿಯೊಬ್ಬನು ಬಂದಿದ್ದಾನೆ ಎಂದು.

ಆ ಬೈರಾಗಿ ಹಳ್ಳಿಗೆ ಮೊದಲು ಬಂದಾಗ ಅವನಿಗೆ ಗೌರವವಾಗಲಿ ಆಹಾರ ಭೋಗಸಾಮಗ್ರಿಗಳಾಗಲಿ ದೊರಕಲಿಲ್ಲ. ಅವನು ಕೋಪಗೊಂಡು ‘ನಿಮ್ಮ ದನಕರುಗಳೆಲ್ಲ ನಾಶವಾಗುವಂತೆ ಶಾಪಕೊಡುತ್ತೇನೆ’ ಎಂದು ಗದರಿಸಿದನು. ಹಳ್ಳಿಯವರು ಅದನ್ನು ಅಷ್ಟು ಗಮನಕ್ಕೆ ತರಲಿಲ್ಲ. ಕೆಲ ದಿನಗಳಲ್ಲಿಯೆ ಮೇಯಲು ಹೋಗಿದ್ದ ದನಗಳು ಒಂದೊಂದಾಗಿ ಸಾಯತೊಡಗಿದವು. ಕಾರಣ ಗೊತ್ತಾಗಲಿಲ್ಲ. ರೋಗಕ್ಕೆ ಯಾವ ಮದ್ದೂ ಮುಟ್ಟಲಿಲ್ಲ. ಹತ್ತಿಪ್ಪತ್ತು ಕಾಲ್ನಡೆಗಳು ಗತಿಸಿದ ಮೇಲೆ ಬೈರಾಗಿಯ ಶಾಪವೇ ದನಗಳ ಸಾವಿಗೆ ಕಾರಣವಾಗಿರಬೇಕೆಂದು ನಿರ್ಧರಿಸಿ ಹಳ್ಳಿಯ ಜನರು ಆತನೆಡೆಗೆ ಹೋಗಿ ಕ್ಷಮೆ ಬೇಡಿದರು. ಬೇಕುಬೇಕಾದಂತೆ ಹಣ್ಣು ಹಂಪಲು ಹಾಲು ಹಣ ಎಲ್ಲವನ್ನೂ ಕಾಣಿಕೆಯೊಪ್ಪಿಸಿದರು. ಬೈರಾಗಿ ಒಬ್ಬೊಬ್ಬರಿಗೂ ಸ್ವಲ್ಪ ಸ್ವಲ್ಪ ಬೂದಿಯನ್ನು ಮಂತ್ರಿಸಿ ಕೊಟ್ಟು ಅಭಯದಾನ ಮಾಡಿದನು. ತರುವಾಯ ದನಗಳು ಸಾಯಲಿಲ್ಲ. ಬೈರಾಗಿಯ ಮಹಾತ್ಮೆ ಹೆಚ್ಚಿ ಜನಗಳು ರೋಗ ರುಜಿನಗಳಿಗೂ ಕಷ್ಟಸಂಕಷ್ಟಗಳಿಗೂ ಬೈರಾಗಿಯ ‘ಈಬೂತಿಯ’ ಪ್ರಸಾದವೇ ಮದ್ದೆಂದು ಭಾವಿಸಿ ಗುಂಪು ಗುಂಪಾಗಿ ನೆರೆಯತೊಡಗಿದರು.

ಆದರೆ ನಡೆದ ಸಂಗತಿ ಬೇರೆಯಾಗಿತ್ತು. ದನಗಳ ಸಾವಿಗೆ ಬೈರಾಗಿಯ ಕೋಪ ಕಾರಣವಾಗಿದ್ದರೂ ಶಾಪ ಎಷ್ಟು ಮಾತ್ರವೂ ಕಾರಣವಾಗಿರಲಿಲ್ಲ. ಹಳ್ಳಿಯವರನ್ನು ಭಯಗೊಳಿಸಲೋಸುಗವೂ ಶಿಕ್ಷಿಸಲೋಸುಗವೂ ಅವನು ದನಗಳು ಮೇಯುವ ಬಯಲಿನಲ್ಲಿ ತನ್ನಲ್ಲಿದ್ದ ವಿಷದ ಹುಡಿಯನ್ನು ಚೆಲ್ಲುತ್ತಿದ್ದನು. ಮೂಕಪ್ರಾಣಿಗಳು ಹುಲ್ಲಿನೊಡನೆ ವಿಷವನ್ನು ತಿಂದು ಸಾಯುತ್ತಿದ್ದುವು. ಹಳ್ಳಿಯವರು ಶರಣಾಗತರಾಗಲು ವಿಷಪ್ರಯೋಗ ನಿಂತಿತು; ದನಗಳ ಸಾವೂ ನಿಂತಿತು. ಇದನ್ನು ಕೇಳಿ ನೀವೇನೂ ಆಶ್ಚರ್ಯಪಡಬೇಡಿ. ನಮ್ಮ ದೇಶದ ‘ಸನ್ನೇಸಿ ಬೈರಾಗಿ’ಗಳ ಶಾಪಮಹಿಮೆಗೆ ದೈವಿಕ ಕಾರಣಗಳಿಗಿಂತಲೂ ಇಂತಹ ಭೌತಿಕ ಕಾರಣಗಳೆ ಹೆಚ್ಚು. ನನ್ನ ಮಿತ್ರರೊಬ್ಬರು ಇಂತಹ ತಮ್ಮ ಅನುಭವವನ್ನು ಹೇಳಿದರು. ಅದು ಇನ್ನೂ ಭಯಾನಕವಾದುದು. ಬಂಗಾಳಾ ಪ್ರಾಂತದ ಮೈಮೆನ್‌ಸಿಂಗ್‌ನಲ್ಲಿ ಕೆಲವು ಜನ ಕುಪಿತರಾದ ಫಕೀರರು ರಾತ್ರಿ ಕಾಲದಲ್ಲಿ ಗುಟ್ಟಾಗಿ ಕಾಲರಾ ಕ್ರಿಮಿಗಳನ್ನು ಕೆರೆಬಾವಿಗಳಲ್ಲಿ ಹಾಕಿ ತಮ್ಮ ಶಾಪ ಮಹಿಮೆಯನ್ನು ಸ್ಥಿರಪಡಿಸಿಕೊಳ್ಳುತ್ತಿದ್ದರಂತೆ. ಸರ್ಕಾರದವರು ರೋಗವನ್ನು ನಿಲ್ಲಿಸಲು ಎಷ್ಟು ಪ್ರಯತ್ನಪಟ್ಟರೂ ಸಾಗದೆ, ಕಡೆಗೆ ಸ್ವಯಂಸೇವಕನೊಬ್ಬನಿಂದ ಈ ವಿಚಾರವನ್ನು ತಿಳಿದು, ಫಕೀರರು ತಮ್ಮ ಕರಾಳ ಕಾರ್ಯದಲ್ಲಿ ತೊಡಗಿದ್ದಾಗಲೆ ಅವರನ್ನು ದಸ್ತಗಿರಿ ಮಾಡಿ ಐದೈದು ವರುಷ ಕಠಿಣ ಸಜಾ ವಿಧಿಸಿದರಂತೆ. ಮನುಷ್ಯರನ್ನೆ ಕೊಲ್ಲಲು ಹಿಂಜರಿಯದವರು ಪ್ರಾಣಿಗಳನ್ನು ಕೊಲ್ಲಲು ಹೆದರುತ್ತಾರೆಯೆ?

ಮಂಜಣ್ಣ ಆ ಬೈರಾಗಿಯನ್ನು ಹೋಗಿ ಕಂಡನು. ಗುರುಗಳಿಗೆ ಮಾಡಬೇಕಾದ ಸನ್ಮಾನವನ್ನು ನೀಡಬೇಕಾದ ಕಾಣಿಕೆಯನ್ನೂ ನೀಡಿದನು. ಸಿಕ್ಕು ಸಿಕ್ಕಾಗಿ ಕೊಳಕಿನ ರಾಶಿಯಂತಿದ್ದ ವಿಕಟಾಕಾರದ ಜಟೆ, ನೀಳವಾಗಿ ಪೈಶಾಚಿಕವಾಗಿದ್ದ ದಾಡಿ, ಮೈತುಂಬ ಬಳಿದುಕೊಂಡಿದ್ದ ಬೂದಿ, ಕಂಕುಳಲ್ಲಿದ್ದ ಯೋಗದಂಡ, ತ್ರಿಶೂಲ, ಹಾರಾಡುತ್ತಿದ್ದ ಪತಾಕೆ, ಗುಡುಗುಡಿ, ಚೀಲದಲ್ಲಿದ್ದ ಮನುಷ್ಯರ ತಲೆಯೋಡು ಮತ್ತು ಎಲುಬುಗಳು-ಇತ್ಯಾದಿಗಳಿಂದ ವಿಭೂಷಿತನಾಗಿದ್ದ ಆ ರುದ್ರವ್ಯಕ್ತಿ ಮಂಜಣ್ಣನಿಗೆ ಯೋಗ್ಯ ಮಂತ್ರವಾದಿಯಾಗಿ ತೋರಿದನು. ಅವನನ್ನು ಕಂಡರೆ ಎಂಥಹ ಭೂತ ಪಿಶಾಚಿಗಳೂ ಹೆದರುವಂತೆ ತೋರುತ್ತಿತ್ತು. ಮಂಜಣ್ಣ ತನ್ನ ಗುಟ್ಟನ್ನು ಅವನೊಡನೆ ಹೇಳಿ ಹೇಗಾದರೂ ಮಾಡಿ ಆ ಗುಪ್ತಧನವನ್ನು ತನ್ನ ಕೈವಶಮಾಡಬೇಕೆಂದು ಕೇಳಿಕೊಂಡನು. ಬೈರಾಗಿಯು ಸುಸಮಯ ಸಿಕ್ಕಿತೆಂದು ಒಪ್ಪಿಕೊಂಡನು.

ಇಬ್ಬರೂ ಗುಟ್ಟಾಗಿ ಗೊತ್ತುಮಾಡಿಕೊಂಡ ಒಂದು ಅಮಾವಾಸ್ಯೆಯ ರಾತ್ರಿ ಸಕಲ ಸಾಮಗ್ರಿಗಳೊಡನೆ ಹಲಸಿನ ಮರದ ಬುಡವನ್ನು ಸೇರಿದರು. ಬೈರಾಗಿ ನೆಲದ ಮೇಲೆ ವಿಕಾರಾಕೃತಿಗಳನ್ನು ಬರೆದು ಮಂತ್ರಗಳನ್ನು ಹೇಳಿ, ರಕ್ತವರ್ಣದ ಹೂವುಗಳಿಂದ ಆರ್ಚಿಸಿ, ಕೋಳಿಗಳನ್ನು ಬಲಿಕೊಟ್ಟು, ಹೆಂಡವನ್ನು ನಿವೇದಿಸಿದನು. ತರುವಾಯ ಇಬ್ಬರೂ ಸುರಾಪಾನಮಾಡಿ ಮನೆಗೆ ಹಿಂದಿರುಗಿದರು. ಆ ಸ್ಥಳವನ್ನು ಅಗೆಯಲು ಇನ್ನೊಂದು ರಾತ್ರಿಯನ್ನು ಗೊತ್ತು ಮಾಡಿ ಬೈರಾಗಿ ಕೊಪ್ಪಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟು ಹೋದನು. ಹೋದವನು ಒಂದು ದಿನ, ಎರಡು ದಿನ, ಮೂರು ದಿನ ಬರಲಿಲ್ಲಿ. ಮಂಜಣ್ಣನಿಗೆ ಕಳವಳಕ್ಕಾರಂಭವಾಯಿತು. ತಾನು ಮಾಡಿದುದೆಲ್ಲ ವ್ಯರ್ಥವಾಗುವುದೇ ಎಂದು ಚಿಂತಿಸಿದನು. ಆದರೆ ನಾಲ್ಕನೆಯ ದಿನ ಸಾಯಂಕಾಲ ಬೈರಾಗಿ ಬಂದು ರಾತ್ತಿಯೇ ಗಂಟು ಕೀಳಬೇಕೆಂದು ಹೇಳಿದನು.

ನಡುರಾತ್ರಿ ಇಬ್ಬರು ಹಲಸಿನ ಮರದ ಬುಡವನ್ನು ಸೇರಿದರು. ಮಂಜಣ್ಣ ಬೈರಾಗಿಯ ನೇತೃತ್ವದಲ್ಲಿ ಸ್ಥಳವನ್ನು ಅಗೆಯತೊಡಗಿದನು. ಮರದ ಬುಡಕ್ಕೂ ಕೈಮೂಡಿದ ಸ್ಥಳಕ್ಕೂ ಒಂದಾಳು ಎತ್ತರವಿತ್ತು. ಮಂಜಣ್ಣ ತಾನು ಹಿಂದೆ ಎಂದೂ ಕೆಲಸಮಾಡದ ರೀತಿಯಲ್ಲಿ ಕೆಲಸ ಮಾಡಿದನು. ನಡುನಡುವೆ ಬೈರಾಗಿಯೂ ಅವನೂ ಬೇಕಾದಷ್ಟು ಹೆಂಡ ಕುಡಿದರು. ಬೈರಾಗಿ ಮಧ್ಯೆ ಮಧ್ಯೆ ಮಂತ್ರಿಸಿದ ಕುಂಕುಮ, ದಾಸವಾಳದ ಹೂವು, ಎಲುಬಿನ ಚೂರುಗಳನ್ನು ಕುಣಿಯೊಳಗೆ ಎಸೆಯುತ್ತಿದ್ದನು. ಆ ಕಗ್ಗತ್ತಲೆಯ ರಾತ್ರಿಯಲ್ಲಿ ದೀಪದ ಕೆಂಪು ಬೆಳಕಿನಲ್ಲಿ ಅವರಿಬ್ಬರೂ ಕರಾಳಕಾರ್ಯದಲ್ಲಿ ತೊಡಗಿದ ನಿಶಾಚರರಂತೆ ತೋರುತ್ತಿದ್ದಿರಬೇಕು! ಒಂದಾಳುದ್ದ ಅಗೆದರೂ ಗಂಟಿನ ಚಿಹ್ನೆಯೆ ಕಾಣಿಸಲಿಲ್ಲ.

ಮಂಜಣ್ಣ “ಏನು ಗುರುಗಳೇ, ಗಂಟೆಲ್ಲಿ ಹೋಯಿತು?” ಎಂದು ಖಿನ್ನನಾದನು. ಬೈರಾಗಿ “ಹಾಗಂದರೇನು? ಯಾವುದೋ ಪಿಶಾಚಿ ಗಂಟನ್ನು ಮಾಯಮಾಡಿರಬೇಕು. ನನ್ನ ಮುಂದೆ ಅದರ ಆಟ ನಡೆಯಲಾರದು. ಬ್ರಹ್ಮಗರ್ಭದಲ್ಲಿದ್ದರೂ ಗಂಟನ್ನು ತರಿಸಿಯೇಬಿಡುತ್ತೇನೆ. ನೀನು ಆಯಾಸ ಪಟ್ಟಿದ್ದೀಯೆ. ಸ್ವಲ್ಪ ವಿಶ್ರಮಿಸಿಕೊ. ನಾನು ಧ್ಯಾನಮಾಡಿ ಮಂತ್ರಗಳನ್ನು ಹೇಳಿ ಮುಂದಿನ ಕೆಲಸ ನೋಡುತ್ತೇನೆ. ಬೆಳಗಾಗುವುದರೊಳಗಾಗಿ ಗಂಟು ನಿನ್ನ ಕೈಗೆ ಬೀಳುವಂತೆ ಮಾಡಿದರೇನೇ ನಾನು ಬೈರಾಗಿ ಎಂದು ತಿಳಿ. ಇಲ್ಲದಿದ್ದರೆ ಈ ಗಡ್ಡವನ್ನು ಕತ್ತರಿಸಿ ನಿನ್ನ ಕೂಲಿಯಾಳಾಗುತ್ತೇನೆ” ಎಂದು ರಭಸದಿಂದ ನುಡಿದನು.

ಪುನಃ ಇಬ್ಬರೂ ಹೆಂಡ ಕುಡಿದರು. ಮಂಜಣ್ಣ ಕಂಬಳಿ ಹಾಸಿ ಒರಗಿದನು. ಬೈರಾಗಿ ಧ್ಯಾನಕ್ಕೆ ಕುಳಿತನು. ಮಂಜಣ್ಣನಿಗೆ ಆಯಾಸದಿಂದಲೂ ಕುಡಿದ ಹೆಂಡದಿಂದಲೂ ಗಾಢನಿದ್ರೆ ಬಂದಿತು.

ಇದ್ದಕ್ಕಿದ್ದ ಹಾಗೆ ಬೈರಾಗಿಯ ಹೂಂಕಾರದಿಂದ ಮಂಜಣ್ಣನಿಗೆ ಎಚ್ಚರವಾಗಿ ಬೆಚ್ಚಿಬಿದ್ದು ತಟಕ್ಕನೆ ಎದ್ದು ಕುಳಿತನು. ಬೈರಾಗಿ ಕುಣಿಯೊಳಗೆ ದಡಕ್ಕನೆ ಹಾರಿದನು. ಮಂಜಣ್ಣ ಎದ್ದುನಿಂತು ಬೆರಗಾಗಿ ನೋಡುತ್ತಿರಲು ಬೈರಾಗಿ ಕುಂಕುಮ ಹೂವುಗಳಿಂದ ಮುಚ್ಚಿ ಹೋಗಿದ್ದ ಸಣ್ಣ ಕೊಡ ಒಂದನ್ನು ಮೇಲಕ್ಕೆ ಎತ್ತಿಟ್ಟನು. ಸ್ವರ್ಗವೇ ಬಾಗಿಲು ತೆರೆದಂತಾಗಿ ಮಂಜಣ್ಣ ಅತ್ಯಾನಂದದಿಂದ ಓಡಿಹೋಗಿ ಆ ಕೊಡವನ್ನು ತಬ್ಬಿಕೊಳ್ಳಲು ಮುಂದೆ ನುಗ್ಗಿದನು. ಆದರೆ ಬೈರಾಗಿ ಅಧಿಕಾರಯುಕ್ತವಾದ ಅಂಗಭಂಗಿಯಿಂದ ಅವನನ್ನು ತಡೆದು ಹೇಳತೊಡಗಿದನು:

“ಮುಟ್ಟಬೇಡ, ಮಂಜಣ್ಣ. ಈಗ ಮುಟ್ಟಿದರೆ ಸರ್ವನಾಶವಾದೀತು. ಕೊಡ ಮಾಯವಾಗುವುದಲ್ಲದೆ, ನಾವಿಬ್ಬರೂ ಇಲ್ಲಿಯೇ ರಕ್ತ ಕಾರಿಕೊಂಡು ಸಾಯುವ ಪ್ರಸಂಗ ಒದಗಬಹುದು. ನೀನು ಮಲಗಿದ್ದೆ; ನಾನು ಪಟ್ಟ ಕಷ್ಟ ನಿನಗೆ ಗೊತ್ತಿಲ್ಲ. ಎರಡು ಸಾರಿ ಈ ಗಂಟಿನ ಅಧಿದೇವತೆಗೆ ನಾನೇ ಬಲಿಯಾಗುತ್ತಿದ್ದೆ. ಎರಡು ಸಾರಿಯೂ ಅದು ಪ್ರತ್ಯಕ್ಷವಾಗಿ ಭಯಂಕರವಾದ ಕೋರೆದಾಡೆಗಳನ್ನು ಮಸೆಯುತ್ತ ನನ್ನನ್ನು ಸಂಹರಿಸಲು ಬಂದಾಗ ನಾನು ನನ್ನ ರಕ್ತವನ್ನೇ ಚೆಲ್ಲಿ ಮಂತ್ರಗಳ ಬಲದಿಂದ ಅದಕ್ಕೆ ತೃಪ್ತಿಯಾಗಿ ಹಿಂತಿರುಗುವಂತೆ ಮಾಡಿದ್ದೇನೆ ಇಲ್ಲಿ ನೋಡು ರಕ್ತ!”

ಮಂಜಣ್ಣ ಬೆದರಿ ನೋಡಿದನು. ಬೈರಾಗಿಯ ಕೈಮೆಯೆಲ್ಲ ನಿಜವಾಗಿಯೂ ರಕ್ತಮಯವಾಗಿದ್ದಂತೆ ಕಂಡಿತು. ಬೈರಾಗಿ ಬೆವರಿ ನಿಟ್ಟುಸಿರು ಬಿಡುತ್ತ ಮತ್ತೆ ಹೇಳಿದನು:

“ಈ ಕೊಡದ ತುಂಬ ಚಿನ್ನದ ನಾಣ್ಯಗಳು ತುಂಬಿರಬೇಕು, ಇಲ್ಲದಿದ್ದರೆ ಇಷ್ಟು ಭಾರವಾಗುತ್ತಿರಲಿಲ್ಲ. ನೋಡು, ಕೊಡದ ಬಾಯನ್ನು ಚೆನ್ನಾಗಿ ಬೆಸುಗೆ ಹಾಕಿದ್ದಾರೆ. ಇದಕ್ಕೆ ಪೂಜೆಯಾಗಬೇಕು, ಬಲಿಯಿಡಬೇಕು. ಇನ್ನು ಹಲವು ಕರ್ಮಕ್ರಿಯೆಗಳೆಲ್ಲ ಮುಗಿದಮೇಲೆ ಇದು ನಿನ್ನದಾಗುವುದು. ಇದನ್ನು ನಿನ್ನ ಮನೆಗೆ ತೆಗೆದುಕೊಂಡು ಬರುತ್ತೇನೆ. ಅಲ್ಲಿ ಒಂದು ಪ್ರತ್ಯೇಕವಾದ ಕೊಠಡಿಯಲ್ಲಿ ಇದನ್ನು ಪ್ರತಿಷ್ಠೆ ಮಾಡಿ ಒಂದು ತಿಂಗಳು ನಾನಾ ಆಭರಣ ಪುಷ್ಟ ಬಲಿಗಳಿಂದ ಪೂಜೆ ಮಾಡಬೇಕು. ತರುವಾಯ ಇದೆಲ್ಲಾ ನಿನ್ನದೇ. ನನಗೆ ಒಂದು ಕಾಸೂ ಬೇಡ. ನಾನು ಬೈರಾಗಿ, ನನಗೇಕೆ ಈ ಐಶ್ವರ್ಯ? ಇಂತಹ ಗುಪ್ತಧನವನ್ನು ಇನ್ನೆಷ್ಟೋ ಜನಗಳಿಗೆ ಕಿತ್ತುಕೊಟ್ಟಿದ್ದೇನೆ.”

ಆ ಕತ್ತಲೆ, ಆ ಕೆಂಪು ದೀಪ, ಆ ಕುಂಕುಮ ಪುಷ್ಟಶೋಭಿತವಾದ ಕೊಡ, ಆ ರಕ್ತ, ಅಲ್ಲಿ ಬರೆದಿದ್ದ ವಿಕಾರಾಕೃತಿಗಳ ಚಿತ್ರ, ಆ ರುದ್ರರೂಪದ ಬೈರಾಗಿ ಮತ್ತು ಅವನ ಉಪನ್ಯಾಸ-ಇವೆಲ್ಲವನ್ನೂ ನೋಡಿ, ಕೇಳಿ, ಮಂಜಣ್ಣನಿಗೆ ಮಾಯೆ ಕವಿದಂತಾಯಿತು. ಏನಾದರಾಗಲಿ ಗಂಟು ಬಗಲಿಗೆ ಬಿತ್ತು ಎಂದು ಹಿಗ್ಗಿದನು. ಸ್ವಲ್ಪ ಹೊತ್ತಿನಲ್ಲಿಯೆ ಬೈರಾಗಿ ಕೊಡವನ್ನು ಹೊತ್ತುತಂದು ಮಂಜಣ್ಣನ ಮನೆಯ ಒಂದು ಕೊಠಡಿಯಲ್ಲಿ ತಾನು ಹೇಳಿದಂತೆ ಪ್ರತಿಷ್ಠೆ ಮಾಡಿದನು.

ಸರಿ, ದಿನದಿನವೂ ಪೂಜೆ ಔತಣಗಳಿಗೆ ಶುರುವಾಯಿತು. ಮಂಜಣ್ಣನಂತೂ ಮುಕ್ತಹಸ್ತವಾಗಿ ಖರ್ಚು ಮಾಡಿದನು. ಆ ಕೊಡವನ್ನು ಸಿಂಗರಿಸಲು ತನ್ನ ಮನೆಯಲ್ಲಿದ್ದ ಆಭರಣಗಳನ್ನೂ ಎರವಾಗಿ ತಂದ ನೆರೆಯವರ ಆಭರಣಗಳನ್ನೂ ತನ್ನ ಹೆಂಡತಿಯ ಮೈಮೇಲಿದ್ದ ತಾಳಿಯೊಂದುಳಿದು ಎಲ್ಲ ಒಡವೆಗಳನ್ನೂ ಬೈರಾಗಿ ಕೇಳಿದಂತೆಲ್ಲಾ ಕೊಟ್ಟನು. ತನ್ನ ಥೈಲಿ ಬರಿದಾಗುವವರೆಗೂ ದಕ್ಷಿಣೆ ಕೊಟ್ಟನು. ಇಷ್ಟಾದರೂ ನೆರೆಯ ಮನೆಯವರಿಗೆ ಗಂಟು ಕಿತ್ತ ಗುಟ್ಟು ಗೊತ್ತಾಗಲಿಲ್ಲ. ಸನ್ಯಾಸಿಯಿಂದ ದೇವತಾರಾಧನೆ ಮಾಡಿಸುತ್ತಾರೆಂದು ತಿಳಿದರು.

ಹೀಗೆ ಹದಿನೈದು ಇಪ್ಪತ್ತು ದಿನಗಳು ಸಾಗಿದುವು. ಒಂದು ದಿನ ಪ್ರಾತಃಕಾಲ ಇದ್ದಕ್ಕಿದ್ದ ಹಾಗೆ ಮಂಜಣ್ಣನ ಮನೆಯಿಂದ ರೋದನದ ಬೊಬ್ಬೆ ಕೇಳಿಸಿತು. ನೆರೆಯವರು ಗಾಬರಿಗೊಂಡು ಓಡಿಹೋಗಿ ನೋಡಲು ಮಂಜಣ್ಣನೂ ಅವನ ಹೆಂಡತಿಯೂ ಬಾಯಿ ಬಾಯಿ ಎದೆ ಎದೆ ಬಡಿದುಕೊಂಡು ಗಟ್ಟಿಯಾಗಿ ಗೋಳಿಡುತ್ತಿದ್ದರು. ನೆಲದ ಮೇಲೆ ಬಾಯಿ ತೆರೆದು ಕಲ್ಲುಮಣ್ಣು ತುಂಬಿದ ಕೊಡವೊಂದು ಬಿದ್ದಿತ್ತು. ಬೈರಾಗಿ ಅಲ್ಲಿರಲಿಲ್ಲ. ತಾನು ಕೊಪ್ಪಕ್ಕೆ ಹೋಗಿ ಕಲ್ಲು ಮಣ್ಣು ತುಂಬಿ ಬೆಸುಗೆ ಹಾಕಿಸಿಕೊಂಡು ಬಂದಿದ್ದ ಕೊಡವನ್ನು ಮಂಜಣ್ಣನಿಗೆ ಬಿಟ್ಟು, ಅದಕ್ಕೆ ಪ್ರತಿಯಾಗಿ ಮಂಜಣ್ಣ ಪೂಜೆಗಾಗಿ ಕೊಟ್ಟಿದ್ದ ಒಡವೆ ಹಣ ಎಲ್ಲವನ್ನೂ ದೋಚಿಕೊಂಡು ರಾತ್ರಿಯೆ ಪರಾರಿಯಾಗಿದ್ದನು.