ನಾನು ಮಂಡ್ಯದಲ್ಲಿ ಅಮಲ್ದಾರನಾಗಿದ್ದೆ. ಅಲ್ಲಿಂದ ತೀರ್ಥಹಳ್ಳಿಗೆ ವರ್ಗವಾಯಿತು. ನನ್ನನ್ನು ಬೀಳ್ಕೊಡುವಾಗ ನನ್ನ ಮಂಡ್ಯದ ಸ್ನೇಹಿತರೆಲ್ಲ ನಾನು ಉತ್ತರ ಧ್ರುವಕ್ಕೆ ಪ್ರವಾಸ ಹೊರಟೆನೊ ಎಂಬಂತೆ ಬಹಳ ಕಾತರರಾಗಿದ್ದರು. ಅವರ ಉದ್ವೇಗಕ್ಕೆ ಕಾರಣವೇನೆಂದು ಕೇಳಲು “ಅಯ್ಯೊ, ಮಲೆನಾಡಿಗೆ ಹೋಗುತ್ತೀರಿ! ಬಹಳ ಕಷ್ಟ! ಮಲೇರಿಯಾ! ಮಳೆ! ಮಕ್ಕಳು ಮರಿಗಳಿದ್ದವರು ನೀವು. ಸೊಳ್ಳೆ ವಿಪರೀತವಂತೆ” ಎಂದು ಮೊದಲಾಗಿ ಕವಿಗಳು ನರಕದ ವರ್ಣನೆ ಮಾಡುವಂತೆ ಮಾಡಿಬಿಟ್ಟರು. ಆದರೆ ಕವಿಗಳಿಗೆ ನರಕದ ಪರಿಚಯವಿದ್ದುದೆಷ್ಟೊ ನನ್ನ ಮಿತ್ರರಿಗೆ ಮಲೆನಾಡಿನ ಪರಿಚಯವಿದ್ದುದೂ ಅಷ್ಟೆ!

ಏಕೆಂದರೆ ನಾನು ತೀರ್ಥಹಳ್ಳಿಗೆ ಹೋಗಿ ಸಂಸಾರದೊಂದಿಗೆ ನೆಲಸಿದಾಗ ನನ್ನ ಮಂಡ್ಯದ ಸ್ನೇಹಿತರ ಕಲ್ಪನೆಯೆಲ್ಲ ಕಟ್ಟುಕತೆ ಎಂದು ಗೊತ್ತಾಯಿತು. ತೀರ್ಥಹಳ್ಳಿ ಮಲೆನಾಡೇನೊ ಹೌದು. ಮಳೆಯೂ ಹೆಚ್ಚು. ಮಲೇರಿಯಾನೂ ಇದೆ, ಮಂಡ್ಯದಲ್ಲಿರುವಂತೆ. ಅಥವಾ ಇತರ ಕಡೆಗಳಲ್ಲಿ ಇರುವಂತೆ. ಈ ಭೂಮಿಯನ್ನು ಮಾಯೆ ಬಿಟ್ಟರೂ ಮಲೇರಿಯಾ ಬಿಡದು. ಜ್ಞಾನಿಗಳ ಹೃದಯದಲ್ಲಿಯೂ ಕೂಡ ಮಾಯೆಗೆ ಅವಕಾಶವಿಲ್ಲದಿದ್ದರೂ ಮಲೇರಿಯಾಕ್ಕೆ ಅವಕಾಶವಿದ್ದೇ ಇರುತ್ತದೆ. ಹೀಗಿರುವಾಗ ಮಲೇರಿಯಾ ಎಲ್ಲಿ ತಾನೆ ಇರುವುದಿಲ್ಲ? ಅಜಾಗರೂಕತೆಯಿಂದ ಇದ್ದರೆ ಎಲ್ಲಿದ್ದರೂ ರೋಗ ತಪ್ಪುವುದಿಲ್ಲ.

ಅದಕ್ಕೆ ಬದಲಾಗಿ ತೀರ್ಥಹಳ್ಳಿ ನನ್ನ ಮನಸ್ಸಿಗೆ ಬಹಳ ಮನೋಹರವಾಗಿ ತೋರಿತು. ಆ ದೃಶ್ಯಗಳನ್ನು ಮಂಡ್ಯದಲ್ಲಿ ಎಲ್ಲಿಂದ ತರುವುದು? ಊರು ಮಲೆಮಲೆಯಾಗಿ ಹಬ್ಬಿರುವ ಹಸುರು ಮಲೆಗಳ ಹದುಳ ತಕ್ಕೆಯಲ್ಲಿ ಮುದ್ದಾಗಿ ಮಂಡಿಸಿದೆ. ಅಲ್ಲದೆ ಹೆಚ್ಚು ಗಲಿಬಿಲಿ ಇಲ್ಲ. ಹತ್ತಿರದಲ್ಲಿಯೆ ತುಂಗಾನದಿ ಹರಿಯುತ್ತಿದೆ. ಅಲ್ಲಿ ಶಾಂತಿ, ಸೌಂದರ್ಯ, ಸೌಭಾಗ್ಯ ಎಲ್ಲವೂ ತಕ್ಕಮಟ್ಟಿಗೆ ಶ್ಲಾಘನೀಯವಾಗಿಯೇ ಇದ್ದಂತೆ ನನಗೆ ಕಂಡು ಬಂದಿತು. ಅಲ್ಲಿಯ ಜನಗಳು ದೇವತೆಗಳಲ್ಲದಿದ್ದರೂ ರಾಕ್ಷಸರೇನೂ ಅಲ್ಲವೆಂಬುದು ನಿಶ್ಚಯವಾಯಿತು.

ಇತರ ಊರುಗಳಲ್ಲಿರುವಂತೆ ಅಲ್ಲಿಯೂ ಪಾರ್ಟಿ ವ್ಯಾಜ್ಯಗಳಿರಬಹುದು. ಆದರೆ ಅದರಿಂದ ನನಗೆ ಯಾವ ತೊಂದರೆಯೂ ಸಂಭವಿಸಲಿಲ್ಲ. ಆ ಊರಿನ ಇನ್ನೊಂದು ಗುಣವೇನೋ ನನಗೆ ಅಲ್ಲಿಗೆ ಹೋದ ಸ್ವಲ್ಪ ದಿನಗಳಲ್ಲಿಯೇ ತಿಳಿದು ಬಂದಿತು. ಅದೇನೆಂದರೆ ಆರಂಭಶೂರತ್ವ. ಅಲ್ಲಿಯ ಜನಗಳೇ ಅದಕ್ಕೆ ಬೇಕಾದಷ್ಟು ಉದಾಹರಣೆಗಳನ್ನೂ ಕೊಟ್ಟರು. ಅದರಲ್ಲಿ ಒಂದು ಯಾವುದೆಂದರೆ: ಅಲ್ಲಿ ಈಗ ಪಾಳಾಗಿರುವ ಹೆಂಚಿನ ಕಾರ್ಖಾನೆ. ಮೂಲ ಧನವೆಲ್ಲ ಕಾರ್ಖಾನೆ ಕಟ್ಟುವುದರಲ್ಲಿಯೇ ಪೂರೈಸಿಹೋಗಿ ಮುಂದೆ ಕೆಲಸಕ್ಕೆ ಕಾಸೇ ಉಳಿಯಲಿಲ್ಲವಂತೆ. ಇದರಲ್ಲಿ ಎಷ್ಟು ಸುಳ್ಳೋ, ಎಷ್ಟು ನಿಜವೋ, ಯಾರಿಗೆ ಗೊತ್ತು? ಅಂತೂ ನಾನು ಊರಿನ ಹೊರಗೆ ಸಂಚಾರ ಹೋಗುತ್ತಿದ್ದಾಗ ಹೊಳೆಯ ಪಕ್ಕದಲ್ಲಿ ಒಂದು ದೊಡ್ಡ ಕಟ್ಟಡವೇನೋ ಪಾಳಾಗಿದ್ದುದು ಕಣ್ಣಿಗೆ ಬೀಳುತ್ತಿತ್ತು.

ನನಗೆ ಚಿಕ್ಕಂದಿನಿಂದಲೂ ಪ್ರಕೃತಿ ಸೌಂದರ್ಯವೆಂದರೆ ಬಹಳ ಇಷ್ಟ. ಅದಕ್ಕಾಗಿಯೇ ನಾನು ಯಾವ ಊರಿನಲ್ಲಿದ್ದರೂ ವ್ಯಾಯಾಮದ ನೆವದಿಂದ ಬಹುದೂರ ಸಂಚಾರ ಹೋಗುವುದು ವಾಡಿಕೆ. ಅದರಲ್ಲಿಯೂ ತೀರ್ಥಹಳ್ಳಿಯಂತಹ ಊರಿನಲ್ಲಿ ಕೇಳಬೇಕೆ? ಎತ್ತಕಡೆ ಹೋದರೂ ಮೈಗೆ ವ್ಯಾಯಾಮ, ಎಲ್ಲಿ ನೋಡಿದರೂ ಕಣ್ಣಿಗೆ ಹಬ್ಬ… ಹೀಗಾಗಿ ನನ್ನ ವಾಯುಸಂಚಾರ ಹೆಚ್ಚಾಯಿತು. ಕೆಲವು ಸಾರಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆಯಾಗಿಬಿಡುತ್ತಿತ್ತು. ನಮ್ಮ ಮನೆಯಾಕೆ ಸ್ವಲ್ಪ ಮುನಿದುಕೊಂಡು “ಇದೇನು ಬಯಲುಸೀಮೆ ಎಂದು ತಿಳಿದುಕೊಂಡಿರೇನೊ? ಬರಿಯ ಕಾಡು. ಐದು ಗಂಟೆಗೇ ಕತ್ತಲೆಯಾಗಿಬಿಡುತ್ತದೆ. ಅದರಲ್ಲಿಯೂ ಹುಲಿ ಚಿರತೆಗಳ ಕಾಟ. ನೀವೊಬ್ಬರೇ ಹೀಗೆ ಅಲೆಯುವುದು ಒಳ್ಳೆಯದಲ್ಲ” ಎಂದು ಗದರಿಸಿದಳು. ನಾನು ಮುಗುಳ್ನಗೆ ನಗುತ್ತ, ಇನಿಯಳ ಮುಂದೆ ಅದಕ್ಕಿಂತಲೂ ಪ್ರಬಲವಾದ ಪ್ರತಿವಾದವಿರಲಾದೆಂದು ತಿಳಿದು ಸುಮ್ಮನಾಗಿಬಿಡುತ್ತಿದ್ದೆ.

ಒಂದು ದಿನ, ನಾನು ಹೋಗಿ ಇನ್ನೂ ಹದಿನೈದು ದಿನಗಳಾಗಿರಲಿಲ್ಲ, ಕಚೇರಿಯಲ್ಲಿ ಕೆಲಸ ಮುಗಿಸುವುದು ಆರೂವರೆ ಗಂಟೆಯಾಯಿತು. ಮನೆಗೆ ಬಂದೆ. ಸ್ವಲ್ಪ ಕಾಫಿ ತಿಂಡಿ ಪೂರೈಸಿಕೊಂಡು ಕೈಯಲ್ಲೊಂದು ಇಂಗ್ಲಿಷ್ ಕವನಗಳ ಪುಸ್ತಕ ತೆಗೆದುಕೊಂಡು ಹೊರಗೆ ಹೊರಟೆ. ಆಗಲೆ ಕತ್ತಲೆಯಾಗುತ್ತಿತ್ತು. ಆದರೆ ಹುಣ್ಣಿಮೆಯ ದಿನವಾದ್ದರಿಂದ ಬೇಕಾದಷ್ಟು ಬೆಳಕಿರುವುದೆಂದು ಧೈರ್ಯವಿತ್ತು. ನಮ್ಮಾಕೆ “ಇಷ್ಟು ಹೊತ್ತಿನಲ್ಲಿ ಎಲ್ಲಿಗೆ? ಅದರಲ್ಲಿಯೂ ಹುಣ್ಣಿಮೆಯ ದಿನ” ಎಂದು ಕೋಪಿಸಿಕೊಂಡು, ಪೋಲೀಸು ರಂಗಪ್ಪನನ್ನು ಕರೆದು “ನೀನೂ ಹೋಗೊ ಅವರ ಜೊತೆಯಲ್ಲಿ” ಎಂದರು. ನಾನು ರಂಗಪ್ಪನಿಗೆ ಬರಬೇಡ ಎಂದು ಹೇಳಿ “ದೂರ ಎಲ್ಲಿಗೂ ಹೋಗುವುದಿಲ್ಲ. ರಾಮತೀರ್ಥದ ಬಂಡೆಗೆ ಹೋಗಿ ಈಗ ಬಂದುಬಿಡುತ್ತೇನೆ” ಎಂದು ಹೇಳಿ ನಮ್ಮಾಕೆಯನ್ನು ಸಂತೈಸಿ, ಜೊತೆಗೆ ತಾನೂ ಬರುತ್ತೇನೆಂದು ಹಟ ಹಿಡಿದ ರಾಮುವನ್ನು ಹೆದರಿಸಿ ಹಿಂದೆ ಬಿಟ್ಟು ಹೊರಟೆ. ನಮ್ಮ ಮನೆಗೂ ರಾಮತೀರ್ಥಕ್ಕೂ ಒಂದು ಫಲಾಂಗ್ ಕೂಡ ಆಗುತ್ತಿದ್ದಿಲ್ಲ. ಹತ್ತು ನಿಮಿಷದಲ್ಲಿಯೆ ಅಲ್ಲಿಗೆ ಹೋದೆ.

ನಾನು ತೀರ್ಥಹಳ್ಳಿಯ ರಾಮತೀರ್ಥದಂತಹ ಸೌಂದರ್ಯಸ್ಥಾನವನ್ನು ಬೇರೆ ಎಲ್ಲಿಯೂ ನೋಡಿಲ್ಲ. ಶೃಂಗೇರಿಯ ಸ್ನಾನಘಟ್ಟವೂ ಕೂಡ ರಾಮತೀರ್ಥದಷ್ಟು ರಮಣೀಯವಾದುದಲ್ಲ ಎಂದು ನನ್ನ ಭಾವನೆ. ರಾಮತಿರ್ಥ ತುಂಗಾನದಿಯ ನಟ್ಟನಡುವೆ ಇರುವ ಒಂದು ಕಲ್ಲು ಮಂಟಪ. ಪರಶುರಾಮನು ತನ್ನ ತಾಯಿಯನ್ನು ಕಡಿದ ಮೇಲೆ ಕೊಡಲಿಯ ರಕ್ತವನ್ನು ಇನ್ನೆಲ್ಲಿಯೂ ತೊಳೆಯಲಾರದೆ ಇಲ್ಲಿಗೆ ಬಂದು ತೊಳೆದನಂತೆ. ಸುತ್ತಲೂ ಕಲ್ಲುಬಂಡೆಗಳು ಆನೆಗಳಂತೆಯು ತಿಮಿಂಗಿಲಗಳಂತೆಯೂ ಮಲಗಿವೆ. ನದಿಯ ನೀರು, ಕಲ್ಲುಗಳ ಮೇಲೆ ಹರಿಯುವುದರಿಂದ, ಬಗ್ಗಡವಾಗದೆ ತಿಳಿಯಾಗಿ ಎಡೆಬಿಡದೆ ಮೊರೆಯುತ್ತ ಬಂಡೆಗಳಿಂದ ಹಾರಿ ಜಾರಿ ತುಂತುರು ತುಂತುರಾಗಿ ನೊರೆನೊರೆಯಾಗಿ ಸುಳಿಸುಳಿಯಾಗಿ ಸುತ್ತಿ ಹರಿಯುತ್ತದೆ. ಎಷ್ಟೋ ಶತಮಾನಗಳಿಂದ ಹೊಳೆ ಹರಿದೂ ಹರಿದೂ ಕಲ್ಲುಬಂಡೆಗಳೆಲ್ಲ ಎಣ್ಣೆಯಂತೆ ನುಣುಪಾಗಿಹೋಗಿವೆ. ಅಲ್ಲಲ್ಲಿ ನೀರು ಪೂರ್ಣಾಯಮಾನವಾಗಿ ಸುತ್ತಿಸುತ್ತಿ ಹಾಸುಬಂಡೆಗಳಲ್ಲಿಯೂ ನಿಲುಬಂಡೆಗಳಲ್ಲಿಯೂ ದೊಡ್ಡದೊಡ್ಡ ಒರಳುಗಳಾಗಿವೆ. ಆ ಒರಳುಗಳಲ್ಲಿ ಗೋಲಿಯಂತೆ ಗುಂಡಾದ ಹರಳುಗಳು ಕಲ್ಲು ಇಕ್ಕಿದ ತತ್ತಿಗಳಂತೆ ಸೊಗಸಾಗಿವೆ.

ನಾನು ಎತ್ತರವಾದ ಮಂಟಪದ ಬಂಡೆಯ ಮೇಲೆ ಕುಳಿತಿದ್ದೆ. ಅಷ್ಟರಲ್ಲಿ ಸಮೀಪವಾಗಿದ್ದ ದಿಗಂತದ ಹಸುರು ಮಲೆಗಳ ಮೇಲೆ ತಿಂಗಳು ಮೂಡಿದನು. ದಪ್ಪಗೆ ದುಂಡಗೆ ನೀಲಾಕಾಶದಲ್ಲಿ ತೇಲುವ ಹೊನ್ನಿನ ಚೆಂಡಿನಂತೆ ಜ್ಯೋತ್ಸ್ನಾವರ್ಷವನ್ನು ವಿಶ್ವದೆಲ್ಲೆಡೆಗೆ ಚೆಲ್ಲುತ್ತಾ ಮೂಡಿಬಂದನು. ಪೂರ್ಣಿಮಾನಿಶಾಕಾಂತನ ಆಗಮನ ಮಹೋತ್ಸವಕ್ಕೆಂದು ಬಾನ್ದೇವಿ ಗಗನ ವೇದಿಕೆಯಲ್ಲಿ ವಿರಚಿಸಿದ ರಂಗವಲ್ಲಯಂತೆ ಮುದ್ದಾಗಿ ಕಂಗೊಳಿಸುತ್ತಿದ್ದ ಬಿಳಿಯ ಬಣ್ಣದ ಪುಡಿಮುಗಿಲು ಬಣ್ಣವೇರಿ ಸುಣ್ಣದ ನೀರಿಗೆ ಅರಸಿನವೆರಚಿದಂತೆ ನಸುಗೆಂಪಾಯಿತು. ರಮಣೀಯವಾಗಿದ್ದ ದೃಶ್ಯ ರಮಣೀಯತರವಾಯ್ತು. ಕಲ್ಲಿನಿಂದ ಕಲ್ಲಿಗೆ ಧುಮುಕುತ್ತಿದ್ದ ಹೊಳೆಯ ನೀರು ತಿಂಗಳ ಬೆಳಕಿನಲ್ಲಿ ಸಹಸ್ರಾರು ಮಿಣುಕುಹುಳುಗಳಂತೆ ಮಿರಗತೊಡಗಿತು. ಮೆಲ್ಲಗೆ ಬಹು ಮೆಲ್ಲಗೆ ತಂಗಾಳಿ ಬೀಸುತಿತ್ತು. ದೂರ ಪಶ್ಚಿಮ ದಿಕ್ಕಿನಿಂದ ಪರ್ವತ ಕಂದರಗಳ ನಡುವೆ ನುಗ್ಗಿ ಬಂದು ಕಾಣಿಸಿಕೊಂಡು ಮತ್ತೆ ಪೂರ್ವದಿಕ್ಕಿನ ಪರ್ವತಗಳ ಇಡುಕಿನಲ್ಲಿ ನುಸಿದು ಕಣ್ಮರೆಯಾಗುವ ತುಂಗೆ ಅನಂತದಿಂದ ಮಿಂಚಿ ಮರಳಿ ಅನಂತದಲ್ಲಿ ಮರೆಯಾಗುವ ದಿವ್ಯಭಾವದಂತೆ ಮಂಗಳ ಮನೋಹಕವಾಗಿ ತೋರಿದಳು. ನದಿಯ ಇಕ್ಕೆಲಗಳಲ್ಲಿಯೂ ದಿಗಂತ ಪರ್ಯಂತವಾಗಿ ಹಬ್ಬಿ ಏರಿ ಕಿಕ್ಕಿರಿದ ಶ್ಯಾಮಲ ವನಮಾಲೆಗಳು ಹುಣ್ಣಿಮೆಯಿರುಳಿನ ಹೊಂಗನಸಿನಲ್ಲಿ ಮಲಗಿರುವ ಪಸುರ್ಗಡಲ ಪೆರ್ದೆರೆಗಳಂತೆ ಮಾಲೆಮಾಲೆಯಾಗಿ ರಂಜಿಸಿದುವು. ಹೊಳೆಯ ದಡದಲ್ಲಿದ್ದ ಅರಳಿಮರಗಳು ಎಲ್ಲರೊಡನೆ ಮೊರೆದು ಗೊಣಗುತ್ತಿದ್ದುವು. ನಡುನಡುವೆ ಕೌಮುದಿಯ ಮಾಯೆಯಲ್ಲಿ ಕಣ್ಣಿಗೆ ಕಾಣದೆ ಗಗನತಲದಲ್ಲಿ ಹಾರಿ ಕೂಗುತ್ತಿದ್ದ ತೇನೆ ಹಕ್ಕಿಯೊಂದರ ಮಧುರಧ್ವನಿ, ವಿರಹಿಯಾದ ಅಶರೀರ ಗಂಧರ್ವನ ಅಶರೀರ ವಾಣಿಯಂತೆ ಅಲ್ಲಿ ಇಲ್ಲಿ ವಿಸ್ಮಯಕಾರಿಯಾಗಿ ತೊಳಲುತ್ತಿತ್ತು. ನದಿಯ ತೀರದಲ್ಲಿಯೆ ಇದ್ದ ರಾಮೇಶ್ವರ ದೇವಾಲಯದಿಂದ ಆಗಾಗ ಘಂಟೆಗಳ ಲೌಹರವ ಕೇಳಿಬರುತ್ತಿತ್ತು. ಜೊತೆಗೆ ಊರಿನ ಬೀದಿಗಳಲ್ಲಿ ದಿಕ್ಕಿಲ್ಲದೆ ಅಲೆಯುತ್ತಿದ್ದ ಕತ್ತೆಗಳ ತೃಪ್ತಿಸೂಚಕ ವಿಕಟ ನಿರ್ಘೋಷವೂ ಕೇಳಿಸುತ್ತಿತ್ತು. ನಾನು ಅಲ್ಲಿಗೆ ಹೋದಾಗ ನಾಲ್ಕೈದು ಜನಗಳು ಜಪಮಾಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೆ ಎಲ್ಲರೂ ಒಬ್ಬೊಬ್ಬರಾಗಿ ಹೊರಟುಹೋದರು. ನಾನು “ಅಯ್ಯೋ, ತಪಸ್ಸುಮಾಡಿ ಕಡೆಗೆ ಭಗವಂತನು ಪ್ರತ್ಯಕ್ಷನಾಗುವ ಹೊತ್ತಿಗೆ ಸರಿಯಾಗಿ ಪತಿತರಾಗುವ ಸಾಧಕರಂತೆ ತಿಂಗಳು ಮೂಡುವ ಹೊತ್ತಿಗೆ ಸರಿಯಾಗಿ ಎದ್ದುಹೋದರಲ್ಲಾ!” ಎಂದು ಮನಸ್ಸಿನಲ್ಲಿಯೆ ಮುಗುಳ್ನಗೆ ನಕ್ಕೆನು. ಅಂತೂ ಸ್ಥಳ ಸಂಪೂರ್ಣವಾಗಿ ನಿರ್ಜನವಾಯಿತು. ನಾನು ಸೊಬಗನ್ನು ಸವಿಯುತ್ತಾ ಭಾವಪೂರ್ಣವಾದ ವಿಚಾರತರಂಗಗಳಲ್ಲಿ ತೇಲುತ್ತ ಕುಳಿತಿದ್ದೆ.

ಸ್ವಲ್ಪ ಹೊತ್ತಿನಲ್ಲಿಯೆ ನನಗೆ ತುಸು ದೂರದಲ್ಲಿ ಹಾಸುಬಂಡೆಗಳ ನಡುವೆ ತಿಂಗಳ ಬೆಳಕಿನಲ್ಲಿ ಮಿಂದು ಬೆಳ್ಳಗೆ ಶೋಭಿಸುತ್ತಿದ್ದ ಮಳಲು ದಿಣ್ಣೆಯೊಂದರ ಮೇಲೆ ಯಾರೋ ನಡೆದುಬರುವ ಸದ್ದಾಯಿತು. ಆ ಕಡೆ ತಿರುಗಿ ನೋಡಿದೆ, ಸ್ವಲ್ಪ ಕುತೂಹಲದಿಂದಲೆ! ಚಂದ್ರಿಕೆಯಲ್ಲಿ ಯಾರೋ ಒಬ್ಬರು ಬರುತ್ತಿದ್ದುದು ಅವರುಟ್ಟಿದ್ದ ಬಿಳಿಯ ಬಟ್ಟೆಗಳಿಂದ ಸ್ಪಷ್ಟವಾಗಿ ಕಂಡುಬಂದಿತು. ಆ ವ್ಯಕ್ತಿ ನನ್ನ ಕಡೆಗೇ ಅಥವಾ ನಾನಿದ್ದ ಕಡೆಗೇ ಬರುವಂತಿತ್ತು. ನನ್ನಂತೆಯೇ ಬೆಳ್ದಿಂಗಳನ್ನು ಸವಿಯಲು ಬಂದ ಯಾರೋ ಒಬ್ಬ ರಸಿಕರಿರಬೇಕೆಂದು ಊಹಿಸಿ, ನೋಡುತ್ತ ಕುಳಿತೆ. ವ್ಯಕ್ತಿ ಬರುತ್ತ ಬರುತ್ತ ನನೆಗೆ ಬಹಳ ಸಮೀಪವಾಯಿತು. ಉಟ್ಟಿದ್ದ ಬಿಳಿಯ ಪಂಚೆ ತೀಡುತ್ತಿದ್ದ ನಸುಗಾಳಿಯಲ್ಲಿ ಪಟಪಟ ಸದ್ದುಮಾಡಿ ಹಾರುತ್ತಿತ್ತು. ನೋಡುತ್ತಿರಲು ವ್ಯಕ್ತಿ ನನಗೆ ಒಂದು ಮಾರು ದೂರದಲ್ಲಿ ನಿಂತು “ನಮಸ್ಕಾರ ಸ್ವಾಮಿ’ ಎಂದಿತು. ಆ ಧ್ವನಿ ನನಗೆ ಎಲ್ಲಿಯೊ ಪರಿಚಯವಾಗಿದ್ದಂತೆ ಭಾಸವಾಯಿತು. ನಾನೂ ನಮಸ್ಕಾರ ಹೇಳಿ ವ್ಯಕ್ತಿಯ ಮುಖದ ಕಡೆ ನೋಡಿದೆ. ಬೆಳ್ದಿಂಗಳ ಮಬ್ಬಿನಲ್ಲಿ ನನಗೆ ಫಕ್ಕನೆ ಗುರುತಾಗಲಿಲ್ಲ.

ವ್ಯಕ್ತಿ “ತಮಗೆ ನನ್ನ ಗುರುತು ಸಿಕ್ಕಲಿಲ್ಲ ಎಂದು ತೋರುತ್ತದೆ” ಎಂದಿತು.

ನಾನು ಸ್ವಲ್ಪ ಬಾಗಿ ನೋಡಿ “ಡೇವಿಡ್ ಮಾಸ್ಟರಲ್ಲವೇ?” ಎಂದೆ.

“ಹೌದು ಸ್ವಾಮಿ. ನೋಡಿ ಬಹಳಕಾಲವಾಯಿತು.”

“ಕೂತುಕೊಳ್ಳಿ” ಎಂದೆ. ಅವರು ನನ್ನ ಎದುರಾಗಿಯೆ ಹಾಸು ಬಂಡೆಯ ಮೇಲೆ ಕುಳಿತರು.

ನಾನು ಅವರನ್ನು ನೋಡದೆ ಬಹಳ ವರ್ಷಗಳಾಗಿದ್ದುವು. ಆಗ್ಗೂ ಈಗ್ಗೂ ಬಹಳ ಮಾರ್ಪಾಡಾಗಿದ್ದರು. ದೇಹ ಕ್ಷೀಣಿಸಿ ಹೋಗಿತ್ತು. ಮುಖದಲ್ಲಿ ಕಳೆಯೇ ತೋರಲಿಲ್ಲ. ಅಲ್ಲದೆ ಅವರ ಧ್ವನಿಯೂ ಪಾತಾಳ ಸ್ವರವಾಗಿತ್ತು. ಅವರ ಅಂಗಭಂಗಿಯೆಲ್ಲ ಜೀವನದಲ್ಲಿ ಬಹಳ ಜಿಗುಪ್ಸೆಪಟ್ಟವರಂತಿತ್ತು.

ನಾನು ನಮ್ಮೂರಿನ ವಿ.ವಿ.ಸ್ಕೂಲಿನಲ್ಲಿ ಓದುತ್ತಿದ್ದಾಗ ಅವರು ಮೇಷ್ಟರಾಗಿದ್ದರು. ಅವರಿಂದ ಎಷ್ಟೋ ಸಾರಿ ಹೊಡೆತ ತಿಂದಿದ್ದೆವು. ಡೇವಿಡ್ ಮಾಸ್ಟರೆಂದರೆ ಹುಡುಗರಿಗೆಲ್ಲ ಭಯ. ಒಂದು ಸಾರಿ ನಮ್ಮೂರಿನ ಕೆರೆಯಲ್ಲಿ ಒಬ್ಬ ಹುಡುಗ ಮುಳುಗಿ ಸತ್ತನು. ಮರುದಿನ ಸ್ಕೂಲಿನಲ್ಲಿ ಹುಡುಗರಾದ ನಾವೆಲ್ಲ ಸೇರಿ ಅದನ್ನೇ ಕುರಿತು ಬಾಯಿಗೆ ಬಂದಂತೆಲ್ಲ ಮಾತನಾಡುತ್ತಿದ್ದೆವು. ಆಗ ನಮ್ಮಲ್ಲಿ ಒಬ್ಬನು “ನೀರಿನಲ್ಲಿ ಮುಳುಗಿ ಸಾಯುವುದು ಬಹಳ ಸುಖವಂತೆ” ಎಂದು ತಾನು ಹಿರಿಯರಿಂದ ಕೇಳಿ ತಿಳಿದ ವಿಚಾರವನ್ನು ಸವಿಸ್ತಾರವಾಗಿ ಹೇಳಿದನು. ನಮ್ಮಲ್ಲಿ ಕೆಲವರದ್ದು ಸ್ವಲ್ಪ ವೈಜ್ಞಾನಿಕ ಪ್ರಕೃತಿಯಾಗಿತ್ತು. ಅವರು ಸಿದ್ಧಾಂತವನ್ನು ಕಾರ್ಯತಃ ಪ್ರಯೋಗಿಸಿಯೇ ಪರೀಕ್ಷಿಸಿಬಿಡಬೇಕೆಂದು ಮನಸ್ಸು ಮಾಡಿದರು. ಕೈಕೊಂಡ ಸಾಹಸದ ಆನಂದದ ಭರದಲ್ಲಿ ಪರಿಣಾಮವನ್ನು ಯಾರೊಬ್ಬರೂ ಯೋಚಿಸಲೆ ಇಲ್ಲ; ಅಥವಾ ಗಣನೆಗೆ ತರಲೇ ಇಲ್ಲ. ಆ ದಿನ ಸಾಯಂಕಾಲವೆ ನಾವೆಲ್ಲ ಸೇರಿ ಕೆರೆಯಬಳಿ ಹೋಗಿ ಕಿಟ್ಟುವನ್ನು ಬಲಾತ್ಕಾರದಿಂದ ಒಪ್ಪಿಸಿದೆವು. “ನೀನೇನೂ ಹೆದರಬೇಡ; ಸಾಯುವ ಸಮಯದಲ್ಲಿ ಹಾಗೇ ಕೂಗಿಬಿಡು; ನಾವು ಮೇಲೆತ್ತಿ ಬಿಡುತ್ತೇವೆ. ಆಗ ನಿನಗಾದ ಸುಖವನ್ನು ಹೇಳಬಹುದು” ಎಂದೆವು. ಅವನೂ ಒಪ್ಪಿದನು. ನಾವು ನಾಲ್ಕು ಹುಡುಗರು ಸೇರಿ ಅವನನ್ನು ಎದೆಯೆತ್ತರ ನೀರಿಗೆ ಒಯ್ದು ಮುಳುಗಿಸಿದೆವು. ಅವನು ಐದಾರು ಕ್ಷಣಗಳಲ್ಲಿಯೆ ಚಿಮ್ಮಿ ಒದ್ದಾಡಲಾರಂಭಿಸಿದನು. ಕರಾರಿನಂತೆ ಅವನು “ಸತ್ತೇ!” ಎಂದು ಕೂಗಿದ್ದರೆ ನಾವು ಅವನನ್ನು ಆ ರೀತಿ ಅಮುಕುತ್ತಿರಲಿಲ್ಲ. ಅವನು ಸ್ವಲ್ಪವೂ ಸದ್ದುಮಾಡದೆ ಬರಿದೆ ಒದ್ದಾಡುತ್ತಿದ್ದುದರಿಂದ ಅದುಮಿದೆವು. ನೀರಿನೊಳಗೆ ಕೂಗಲಾಗುವುದೂ ಇಲ್ಲ, ಕೂಗಿದರೆ ಕೇಳಿಸುವುದೂ ಇಲ್ಲ ಎಂಬುದು ಆಗಿನ್ನೂ ನಮ್ಮ ವಿಜ್ಞಾನ ಪ್ರಪಂಚಕ್ಕೆ ತಿಳಿದಿರಲಿಲ್ಲ. ಅವನ ಒದ್ದಾಟ ಹೆಚ್ಚಾಯಿತು. ಬಹಳ ಹೆಚ್ಚಾಯಿತು. ಅಯ್ಯೋ, ನಮ್ಮ ಪ್ರಯೋಗವೆಲ್ಲ ಎಲ್ಲಿ ಹಾಳಾಗಿಬಿಡುವುದೋ ಎಂದು ಭಯವಾಯಿತು. ದಡದಲ್ಲಿ ನಮ್ಮವರು ವಿಧವಿಧವಾದ ಸ್ವರ ಮತ್ತು ಕರತಾಳಗಳಿಂದ ನಮ್ಮನ್ನು ಹುರಿದುಂಬಿಸುತ್ತಿದ್ದರು. ಬರುತ್ತ ಬರುತ್ತ ಕಿಟ್ಟು ಒದ್ದಾಡಿಕೊಳ್ಳುವುದು ಕಡಿಮೆಯಾಯಿತು. ಅದನ್ನು ಸುಖಾನುಭವದ ಚಿಹ್ನೆ ಎಂದು ಊಹಿಸಿ ನಮ್ಮ ಪ್ರಯೋಗಪರೀಕ್ಷೆ ಜಯಪ್ರದವಾಯಿತೆಂದು ಹಿಗ್ಗಿದೆವು. ಅಷ್ಟರಲ್ಲಿ ನಮ್ಮ ಡೇವಿಡ್ ಮೇಷ್ಟರು ಹಠಾತ್ತಾಗಿ ಅಲ್ಲಿಗೆ ಬಂದು, ಆಗುವುದರಲ್ಲಿದ್ದ ಅನಾಹುತವನ್ನು ತಪ್ಪಿಸಿದರು. ಅಲ್ಲದೆ ಕೆರೆಯ ಹಸುರಂಚಿನಲ್ಲಿಯೆ ನಮಗೆ ಚೆನ್ನಾಗಿ ಬಿಸಿಬಿಸಿ ಪೂಜೆಯೂ ಆಯಿತು. ಹೀಗೆ ನನ್ನ ಬಾಲ್ಯಜೀವನ ರಂಗದಲ್ಲಿ ಡೇವಿಡ್ ಮೇಷ್ಟರೊಬ್ಬರು ಬಹು ಮುಖ್ಯ ಪಾತ್ರಧಾರಿಗಳಾಗಿದ್ದರು.

ಬೆಳ್ದಿಂಗಳಲ್ಲಿ ಬೆಳ್ಳಗೆ ನನ್ನೆದುರು ಕುಳಿತ ಕೃಶವಾದ ಮೂರ್ತಿಯನ್ನು ನೋಡಿ ನನಗೆ ಹಿಂದಿನ ನೆನಪುಗಳೆಲ್ಲ ಹೊಸದಾಗಿ ಚಿಗುರಿದಂತಾಯಿತು. ಊರು ಬಿಟ್ಟು ನಾವು ಬಹು ದೂರದಲ್ಲಿರುವಾಗ ನಮ್ಮೂರಿನವರು ಯಾರಾದರಾಗಲಿ ಒಬ್ಬರು ಅಲ್ಲಿಗೆ ಬಂದರೆ ನಮಗೆಷ್ಟು ಸಂತೋಷವೋ ಹಾಗೆಯೇ ಬಾಲ್ಯವನ್ನು ಬಿಟ್ಟು, ಬಹುದೂರ ಕಾಲವಾಹಿನಿಯಲ್ಲಿ ತೇಲಿಹೋದ ಮೇಲೆ ಬಾಲ್ಯ ಜೀವನದ ಸ್ಮತಿಯನ್ನು ತಂದುಕೊಡುವ ಪ್ರತಿಯೊಂದು ವಸ್ತುವೂ ನಮಗೆ ಪ್ರಿಯವಾಗುತ್ತದೆ.

ನಾನು ಕುಳಿತುಕೊಳ್ಳಿ ಎಂದಾಗ ಕೂತುಕೊಂಡ ಡೇವಿಡ್ ಮೇಷ್ಟು ಮಾತಾಡಲೂ ಇಲ್ಲ, ಅಲುಗಾಡಲೂ ಇಲ್ಲ. ಏನೋ ವ್ಯಸನಭಾರದಿಂದ ತಲೆಬಾಗಿ ಕುಳಿತಂತೆ ತೋರಿತು. ಬಹಳ ಕಾಲದ ಮೇಲೆ ಭೇಟಿಯಾದ ಹಿರಿಯರೊಡನೆ ಮಾತಾಡದೆ ಸುಮ್ಮನೆ ಕುಳಿತಿರುವುದು ಮರ್ಯಾದೆಯಲ್ಲವೆಂದು ತಿಳಿದು ನಾನೇ ಮೊದಲುಮಾಡಿದೆ.

“ನೀವೀಗ ಇಲ್ಲಿಯೆ ಇರುವುದೇನು?”

“ಹೌದು; ಈಗ ಇಲ್ಲಿಯೆ ಇದ್ದೇನೆ” ಎಂದರು. ಅವರು ಉತ್ಸಾಹಪೂರ್ವಕವಾಗಿ ಮಾತಾಡುವುದನ್ನು ಮರೆತು ಬಹುಕಾಲವಾದಂತೆ ತೋರಿತು.

“ನಿಮಗೆ ಇಲ್ಲಿಗೆ ವರ್ಗವಾದದ್ದು ಯಾವಾಗ?”

“ಏನೋ ಸ್ವಾಮಿ! ನನ್ನ ಗೋಳು ಜಗದೀಶ್ವರನಿಗೂ ಬೇಡವಾಗಿದೆ!”

“ನಿಮ್ಮ ಕುಟುಂಬ ಸುಖವಾಗಿದ್ದಾರೆಯೆ?”

“ಸುಖವಾಗಿದ್ದರು!” ಎಂದು ನೀಳವಾಗಿ ಸುಯ್ದರು.

ನಾನು ಸ್ವಲ್ಪ ಅಪ್ರತಿಭನಾದೆ. ಏನು ಮಾಡಬೇಕೆಂದು ತೋರಲಿಲ್ಲ. ಏನು ಆಡಿದರೂ ಅದೆಲ್ಲವೂ ಅವರ ನೋವನ್ನು ಮರಳಿ ಕೆಣಕಿದಂತೆ ತೋರುತ್ತಿತ್ತು.

“ತಮಗೆ ಮಕ್ಕಳಿದ್ದಾರೆಯೆ?” ಎಂದೆ.

“ಒಬ್ಬನು ಇದ್ದ” ಎಂದು ಮಾತ್ರ ನೀಳವಾಗಿ ಸುಯ್ದರು. ಸುಯ್ದವರು ಹೇಳತೊಡಗಿದರು. ಕಟ್ಟೆಕಟ್ಟಿ ನಿಲ್ಲಿಸಿದ್ದ ದುಃಖವೆಲ್ಲ ಒಂದೇಸಾರಿ ಕಟ್ಟೆಯೊಡೆದು ಧುಮುಕಿದಂತಾಯಿತು. “ಅಯ್ಯೋ, ನಾನೇನು ಪಾಪಮಾಡಿಹುಟ್ಟಿದ್ದೆನೋ ನಾನರಿಯೆ. ನನ್ನ ಮೊದಲನೆ ಹೆಂಡತಿ ನನಗೆ ಸಾಕ್ಷಾತ್ ಲಕ್ಷ್ಮಿಯಂತಿದ್ದರು. ಇಬ್ಬರೂ ಸೇರಿ ಸುಖವಾಗಿ ಆರು ವರ್ಷ ಸಂಸಾರ ಮಾಡಿದೆವು. ಬರುತ್ತಿದ್ದುದು ಹದಿನೈದು ರೂಪಾಯಿ ಸಂಬಳವಾದರೂ ನೆಮ್ಮದಿಯಿಂದಿದ್ದೆವು. ಆಕೆ ಒಂದು ಗಂಡು ಕೂಸನ್ನು ಹೆತ್ತು ಕಣ್ಣು ಮುಚ್ಚಿಕೊಂಡರು.”

ಡೇವಿಡ್ ಮೇಷ್ಟರು ಆಗತಾನೆ ಹೆಂಡತಿ ಸತ್ತವರಂತೆ ಅಳತೊಡಗಿದರು. ನನಗೂ ಕಣ್ಣಿನಲ್ಲಿ ನೀರು ಬಂತು. ಮತ್ತೆ ಹೇಳಿದರು:

“ಅಷ್ಟಕ್ಕೇ ಕೊನೆಗಾಣಲಿಲ್ಲ ಸ್ವಾಮಿ, ನನ್ನ ಅನಿಷ್ಟ. ಸ್ವಲ್ಪಕಾಲ ಪತ್ನೀ ವಿಯೋಗ ದುಃಖದಲ್ಲಿಯೇ ನವೆದೆ. ಕಷ್ಟಪಟ್ಟು ಮಗುವನ್ನು ನಾಲ್ಕೈದು ತಿಂಗಳು ಸಾಕಿದೆ. ನಾನು ಸ್ಕೂಲಿಗೆ ಹೋಗುವಾಗ ನಮ್ಮ ಬಂಧುಗಳೊಬ್ಬರ ಮನೆಯಲ್ಲಿ ಮಗುವನ್ನು ಬಿಟ್ಟುಹೋಗುತ್ತಿದ್ದೆ. ಕೊನೆಗೆ ಎಷ್ಟು ದಿನ ಹೀಗೆ ಕಷ್ಟಪಡುವುದೆಂದು ಪುನಃ ಮದುವೆಯಾಗಲು ಆಲೋಚಿಸಿದೆ.

“ನಾನು ಯಾರ ಮನೆಯಲ್ಲಿ ಕೂಸನ್ನು ಬಿಟ್ಟುಹೋಗುತ್ತಿದ್ದೆನೋ ಅವರ ಮನೆಯಲ್ಲಿ ವಿವಾಹಕ್ಕೆ ಸಿದ್ಧಳಾದ ಒಬ್ಬ ಯುವತಿ ಇದ್ದಳು. ಆಕೆಯೇ ನನ್ನ ಮಗುವನ್ನು  ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ತಾಯಿಯಂತೆಯೆ ಇರುವಳು ಏಕೆ ತಾಯಿಯೇ ಆಗಿಬಿಡಬಾರದೆಂದು ನಾನು ಅವಳನ್ನು ಮದುವೆಯಾದೆ. ಆಕೆಗೆ ಅದೇ ಊರಿನಲ್ಲಿಯೆ ಗರ್ಲ್‌ಸ್ಕೂಲಿನಲ್ಲಿ ಉಪಾಧ್ಯಾಯಿನಿಯ ಕೆಲಸವಿತ್ತು.

“ಮದುವೆಯಾದ ಕೆಲವು ದಿನಗಳಲ್ಲಿಯೆ ಆಕೆಯ ನಡೆತೆ ವ್ಯತ್ಯಾಸವಾಗತೊಡಗಿತು. ಮಗುವನ್ನು ಆದರದಿಂದ ಸಾಕುತ್ತಿದ್ದವಳು ಈಗ ಔದಾಸೀನ್ಯದಿಂದ ನೋಡುವಂತೆ ತೋರಿತು. ಮೊದಲು ನನ್ನೊಡನೆ ಆಡುತ್ತಿದ್ದ ಮೃದುವಾದ ಮಾತುಗಳು ಬರಬರುತ್ತ ಕಠಿಣವಾದುವು. ನನ್ನ ಸಂಸಾರವೆಂದರೆ ಆಕೆಗ ತಿರಸ್ಕಾರ ಹುಟ್ಟಿತು. ನನಗೂ ಆಕೆಯಲ್ಲಿ ಸ್ವಲ್ಪ ಅವಿಶ್ವಾವುಂಟಾಯಿತು. ಮನೆಯಲ್ಲಿ ದುಂದುವೆಚ್ಚಕ್ಕಾರಂಭವಾಯಿತು. ಸಾಲವಾಯಿತು. ಮಗುವೂ ಕೊರಗಿ ಕೊರಗಿ ಬೆಳೆಯುತ್ತಿತ್ತು. ಅದನ್ನೆಲ್ಲಾ ನೋಡಿ ನನಗೆ ಜಿಗುಪ್ಸೆ ಹುಟ್ಟಿತು…. ಕಡೆಗೆ ಆಕೆಗೂ ಆಕೆಯ ಶಾಲೆಯ ಉಪಾಧ್ಯಾಯರೊಬ್ಬರಿಗೂ ಇರುವ “ದುಷ್ಟ ಸಂಬಂಧವೂ ನನಗೆ ಗೊತ್ತಾಯಿತು… ಆದರೂ ನಾನು ಔದಾರ್ಯದಿಂದ, ಸಾಗರಸದೃಶವಾದ ಔದಾರ್ಯದಿಂದ ಜೀವನಯಾಪನೆ ಮಾಡುತ್ತಿದ್ದೆ…. ಸ್ವಾಮಿ, ದುಡ್ಡು ಕೊಟ್ಟು ಔದಾರ್ಯ ತೋರಿಸಬಹುದು; ಭೂಮಿಯ ಕೊಟ್ಟು ಔದಾರ್ಯ ತೋರಿಸಬಹುದು; ತನ್ನನ್ನೇ ಕೊಂದವನನ್ನೂ ‘ಕ್ಷಮಿಸು ದೇವ’ ಎಂದು ಕ್ರಿಸ್ತ ಸ್ವಾಮಿಯಂತೆ ಔದಾರ್ಯ ತೋರಿಸಬಹುದು… ಆದರೆ ನಾನು ತೋರಿಸಿದ ಔದಾರ್ಯ ಇದೆಲ್ಲವನ್ನೂ ಮೀರಿದುದೆಂದು ನನ್ನ ಭಾವನೆ!… ನನಗೆ ಆ ಊರಿನಿಂದ ಇಲ್ಲಿಗೆ ವರ್ಗವಾಯಿತು. ಬೇಡ ಎಂದು ಅರ್ಜಿ ಹಾಕಿ ಬೇಡಿಕೊಂಡೆ…. ಕಡೆಗೆ ಆಕೆಯನ್ನೂ ಇಲ್ಲಿಗೆ ವರ್ಗಮಾಡಿಕೊಡಿ ಎಂದು ಬರೆದುಕೊಂಡೆ… ಅಯ್ಯೋ ಆ ಮಗುವು ಆಕೆಯನ್ನೇ ತಾಯಿಯೆಂದು ತಿಳಿದುಬಿಟ್ಟಿತು! ನಾನು ಇಲ್ಲಿಗೆ ಬಂದು ಆರುತಿಂಗಳು ಎಷ್ಟು ನೊಂದೆನೋ. ಈ ಕಲ್ಲಿಗೇ ಗೊತ್ತು! ಇಲ್ಲಿಯೇ ಕುಳಿತು ಅಳುತ್ತಿದ್ದೆ!… ಒಂದು ದಿನ ಕಾಗದ ಬಂತು, ಮಗು ತೀರಿಹೋಯಿತೆಂದು! ನನಗೂ ಈ ಶೋಕಮಯ ಭೂಮಿಗೂ ಇದ್ದ ಒಂದೇ ಒಂದು ಮುದ್ದಾದ ಪುಟ್ಟ ಬಂಧನ ಹರಿದುಹೋಯಿತು… ನಾನು ರಜ ತೆಗೆದುಕೊಂಡು ಅಲ್ಲಿಗೆ ಹೋದೆ. ನನ್ನ ಹೆಂಡತಿ ಮಗುವನ್ನು ಹೂಳಿಸಿಬಿಟ್ಟಿದ್ದಳು. ಆ ಸ್ಮಶಾನಕ್ಕೆ ಹೋಗಿ ನನ್ನ ಕಂದನ ಗೋರಿಯ ಬಳಿ ಒಬ್ಬನೇ ಕುಳಿತುಕೊಂಡು ಅತ್ತೆ. ಮಗು ಅನಾದರದಿಂದಲೇ ತೀರಿ ಹೋಯಿತೆಂದು ಗೊತ್ತಾಯಿತು… ಪುನಃ ಇಲ್ಲಿಗೆ ಹೊರಟು ಬಂದೆ…. ನನಗೆ ಈ ಜಗತ್ತೇ ಒಲ್ಲದಾಯಿತು. ಮಗುವನ್ನು ನೆನೆನೆನೆದು ಅಳುವುದೇ ಕೆಲಸವಾಯಿತು…. ಬೈಬಲ್ಲನ್ನು ತೆಗೆದು ಓದಿದೆ. ಯಾವುದೂ ಮನಸ್ಸಿಗೆ ಶಾಂತಿಯನ್ನು ತರಲಿಲ್ಲ. ಸತ್ತವರು ಒಂದು ಕಡೆ ಸೇರಿ ಕಡೆಯ ದಿನವನ್ನು ಕಾಯುವರು ಎಂದು ಅದರಲ್ಲಿದೆ ಎಂದು ಅರ್ಥಮಾಡಿ, ಸತ್ತರೆ ನನ್ನ ಮೊದಲನೆ ಹೆಂಡತಿ ಮತ್ತು ಮಗುವನ್ನು ಸೇರಬಹುದೆಂದು ನಿರ್ಣಯಿಸಿದೆ. ಆದರೆ ಹೇಗೆ ಸಾಯುವುದು? ಆತ್ಮಹತ್ಯೆ ಪಾಪ ಎಂದು ಗೊತ್ತಿತ್ತು. ಭಗವಂತನು ನನ್ನ ಆತ್ಮಹತ್ಯೆಯನ್ನು ಪಾಪವೆಂದು ಗಣಿಸುವುದಿಲ್ಲ ಎಂದು ಹಾರೈಸಿ ಪ್ರಾರ್ಥಿಸಿದೆ. ಅಂತೂ ಹೇಗಾದರೂ ಮಾಡಿ ಈ ಲೋಕ ಬಿಡಬೇಕೆಂದು ನಿರ್ಣಯಿಸಿದೆ. ಲೋಕ ನನ್ನನ್ನು ಹೇಡಿಯೆಂದು ಕರೆಯಬಹುದು. ಹಾಗೆಯೇ ಕ್ಷಯರೋಗವೂ ತನ್ನಿಂದ ತಪ್ಪಿಸಿಕೊಳ್ಳಲೆಳಸುವ ರೋಗಿಯನ್ನು ಹೇಡಿ ಎಂದು ಕರೆಯಬಹುದಲ್ಲವೆ?

“ಮುಂಗಾರು ಪ್ರಾರಂಭವಾಗಿತ್ತು. ಆಗ ಈ ಹೊಳೆಯಲ್ಲಿ ನೀರು ಇದಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು…. ನಾನು ಒಂದು ಕಾಗದ ಬರೆದಿಟ್ಟು ಇಲ್ಲಿಗೆ ಬಂದೆ. ಕಾಗದದಲ್ಲಿ ನನ್ನ ಎರಡನೆ ಹೆಂಡತಿಯನ್ನು ಸ್ವಲ್ಪವೂ ನಿಂದಿಸಲಿಲ್ಲ. ಆಕೆ ಒಳ್ಳೆಯವಳೆಂದೇ ಬರೆದೆ. ಏಕೆಂದರೆ ನಾನು ಅವಳನ್ನು ನಿಂದಿಸಿ ಬರೆದರೆ ಲೋಕ ನನಗಾದಂತೆ ಅವಳಿಗೂ ವಿಷಮಯವಾಗಿಬಿಡುವುದೆಂದು ಎದೆಗರಿಗಿದೆ. ಕಾಗದದಲ್ಲಿ ಮಗು ಸತ್ತುದನ್ನೂ ನನ್ನನ್ನೂ ವರ್ಗಾಯಿಸಿದುದನ್ನು ಆತ್ಮಹತ್ಯಕ್ಕೆ ಕಾರಣಗಳಾಗಿ ಒಡ್ಡಿದೆ…

“ಇಲ್ಲಿಗೆ ಬಂದೆ, ಕತ್ತಲು ಕವಿದಿತ್ತು, ಸೋನೆ ಮಳೆ ಸುರಿಯುತ್ತಿತ್ತು. ಇದೇ ಬಂಡೆಯ ಮೇಲೆ ನಿಂತು ಯೋಚಿಸಿದೆ. ಸಾವಿಗಿಂತಲೂ ಸಾಯುವ ನೋವು ಭಯಂಕರವಾಗಿ ತೋರಿತು. ಆತ್ಮಹತ್ಯೆ ಮನುಷ್ಯನಿಗೆ ಯೋಗ್ಯವಲ್ಲ ಎಂದುಕೊಂಡೆ. ಮತ್ತೆ ನನ್ನ ಸ್ಥಿತಿಗತಿಗಳು ನೆನಪಿಗೆ ಬಂದುವು. ಆ ನೋವಿನ ಮುಂದೆ ಸಾಯುವ ನೋವು ಕಿರಿದಾಯಿತು. ಅಲ್ಲದೆ ಸತ್ತ ಮೇಲೆ ಹೆಂಡತಿ ಮಕ್ಕಳೊಡನೆ ಬಾಳುವೆನ ಎಂಬ ಆಹ್ಲಾದವೆ ಹೊಳೆಯ ಪ್ರವಾಹವಾಗಿ ಹರಿಯುವಂತೆ, ಕರೆಯುವಂತೆ ಭಾಸವಾಯಿತು…. ಹಾರಿಬಿಟ್ಟೆ!… ಪ್ರವಾಹವು ಕೊಚ್ಚಿ ಬಂಡೆಯಿಂದ ಬಂಡೆಗೆ ನನ್ನನ್ನು ಅಪ್ಪಳಿಸಿತು…. ಅಯ್ಯೋ ಹಾರಿದ್ದು ತಪ್ಪಾಯ್ತು ಎಂದುಕೊಂಡೆ. ನನ್ನ ಶಕ್ತಿಯನ್ನೆಲ್ಲ ವೆಚ್ಚ ಮಾಡಿ ಯಾವುದಾದರೂ ಒಂದು ಬಂಡೆಯನ್ನೆರಲು ಬಹಳ ಪ್ರಯತ್ನಪಟ್ಟೆ. ಆದರೆ ಅಧಿಕಾರಯುಕ್ತವಾದ ನಿಷ್ಕರುಣ ಪ್ರವಾಹ ನನ್ನನ್ನು ಬಡಿದು ಬಡಿದು ಮುಳುಗಿಸಿಯೇ ಬಿಟ್ಟಿತು…!

ನಾನು ಉದ್ವೇಗದಿಂದ “ಕಡೆಗೆ ಹೇಗೆ ಮೇಲಕ್ಕೆ ಬಂದಿರಿ? ಎಂದೆ. ಯಾರೊ ಕರ್ಕಶವಾಗಿ ಕಿಲಕಿಲ ನಕ್ಕಂತಾಯಿತು. ನೋಡಿದರೆ ಡೇವಿಡ್ ಮೇಷ್ಟರು ಮಾಯವಾಗಿದ್ದರು. ಬೆಳ್ದಿಂಗಳು ಕಾಡುಗಳ ಮೇಲೆ ಮಲಗಿತ್ತು. ಹೊಳೆ ಹರಿಯುತ್ತಿತ್ತು. ನಾನು ಬೇಗಬೇಗನೆ ಎದ್ದು ಮನೆಯ ಕಡೆ ಹೊರಟೆ. ನನ್ನ ಮೈಯೆಲ್ಲ ಬೆವರಿತು. ಸ್ವಲ್ಪ ದೂರ ಹೋಗುವುದರೊಳಗೆ ಯಾರೊ ಇಬ್ಬರು ನನ್ನೆಡೆಗೆ ಬರುತ್ತಿದ್ದರು. ಗಟ್ಟಿಯಾಗಿ ಮಾತಾಡಿಕೊಂಡು ಬರುತ್ತಿದ್ದರು. ಮೊದಲು ಅವರಲ್ಲಿ ನಂಬಿಕೆ ಹುಟ್ಟಲಿಲ್ಲ. ಕಡೆಗೆ ಜವಾನರೆಂದು ಗೊತ್ತಾಗಿ ಬಹಳ ಧೈರ್ಯವಾಯಿತು. ಆದರೂ “ಏತಕ್ಕೆ ಬಂದಿರೋ ನೀವು?” ಎಂದು ಗದರಿದೆ.

“ಅಮ್ಮಾವರು ಕಳಿಸಿದರು. ಗಂಟೆ ಒಂಬತ್ತಾಯ್ತು. ಹೊಗಿ ನೋಡಿಕೊಂಡು ಬನ್ನಿ ಅಂತ” ಎಂದರು.

“ನಿಮ್ಮಲ್ಲಿ ಯಾರಾದರೂ ಗಟ್ಟಿಯಾಗಿ ನಕ್ಕಿರೇನೊ?”

“ಇಲ್ಲ ಸ್ವಾಮಿ”

“ಇನ್ನೇನಾದರೂ ಸದ್ದು ಕೇಳಿಸಿತೇ?”

“ನಾವು ಬಂದದ್ದು ಕಂಡು ಒಂದು ಹಾಲಕ್ಕಿ ಕಿರಿಚಿಕೊಂಡು ಹಾರಿ ಹೋಯಿತು, ಸ್ವಾಮಿ”

ನಾನು ಹಿಂತಿರುಗಿ ನೋಡಿದೆ. ರಾಮತೀರ್ಥ! ಚಂದ್ರ, ಆಕಾಶ, ಮುಗಿಲು, ವನ, ಪರ್ವತಶ್ರೇಣಿ, ನದಿ, ಬಂಡೆ, ಮಳಲುದಿಣ್ಣೆ-ಎಲ್ಲವೂ ಮೊದಲಿನಂತೆಯೆ ನಲಿಯುತ್ತಿದ್ದುವು. ಆದರೆ ಯಾವುದೂ ಸುಂದರವಾಗಿ ಕಾಣಲಿಲ್ಲ. ಅದಕ್ಕೂ ಔದಾರ್ಯ ಬೇಕು! ಕಡಿದು ಓಡುವ ನಾಗರ ಹಾವಿನ ಹೆಡೆಯಲ್ಲಿ ಸೊಬಗನ್ನು ಕಾಣಲು ಔದಾರ್ಯವಿರಬೇಕು! ಎಂದುಕೊಂಡು ಮನೆಗೆ ಹೋದೆ.

ಯಾರೊಡನೆಯೂ ನನ್ನ ಅನುಭವದ ಪ್ರಸ್ತಾಪವೆತ್ತಲಿಲ್ಲ.