ನಾನು ಮೊದಲು ಆದರ್ಶ ಸನ್ಯಾಸಿಯಾಗಬೇಕೆಂದಿದ್ದೆ. ಸನ್ಯಾಸವೇ ಆದರ್ಶಗಳಲ್ಲಿ ಅತ್ಯುತ್ತಮವಾದುದು ಎಂದು ಭಾವಿಸಿದ್ದೆ. ಆದರೆ ವಯಸ್ಸು ಸ್ವಲ್ಪ ಹೆಚ್ಚಾಗುತ್ತ ಬರಲು ಸನ್ಯಾಸ ಅಸ್ವಾಭಾವಿಕವಲ್ಲವೆ ಎಂದು ಯೋಚಿಸತೊಡಗಿದೆ. ಆಮೇಲೆ ಸನ್ಯಾಸ ಬೋಧಿಸುವ ತೀವ್ರತಪಸ್ಸೆಯೂ ಉಗ್ರತಿತಿಕ್ಷೆಯೂ ಸಂಪೂರ್ಣವಾಗಿ ಸ್ವಭಾವವಿರುದ್ಧ ಎಂದು ನಿರ್ಣಯಿಸಿ, ಸನ್ಯಾಸ ಆದರ್ಶಗಳಲ್ಲಿ ಅತ್ಯುತ್ತಮವಾದುದೂ ಅಲ್ಲ, ಉತ್ತಮವಾದುದೂ ಅಲ್ಲ, ಕಡೆಗೆ ಆದರ್ಶವೇ ಅಲ್ಲ ಎಂದು ಸಿದ್ಧಾಂತಮಾಡಿ ಅದರ ವಜ್ರಪಂಜರದಿಂದ ಹೊರಗೆ ಬಂದೆ. ನನ್ನ ಸ್ನೇಹಿತರು ನನ್ನ ಮಾತುಗಳನ್ನು ಕೇಳಿ ವಿಸ್ಮಿತರಾದರು. ಏಕೆಂದರೆ, ಮೊದಲು ಸನ್ಯಾಸದ ಶ್ರೇಷ್ಠತೆಯ ವಿಚಾರವಾಗಿ ಎಷ್ಟು ಉದ್ವೇಗದಿಂದ, ಎಷ್ಟು ಸಾಮರ್ಥ್ಯದಿಂದ, ಎಷ್ಟು ಶ್ರದ್ಧೆಯಿಂದ ಅವರೊಡನೆ ವಾದಿಸಿ ಬೋಧಿಸುತ್ತಿದ್ದೆನೋ ಈಗ ಅಷ್ಟೆ ಉದ್ವೇಗ ಸಾಮರ್ಥ್ಯ ಶ್ರದ್ಧೆಗಳಿಂದ, ಅಲ್ಲದೆ, ಇನ್ನೂ ಪ್ರಬಲವಾದ ವಾಗ್ಜರಿಯಿಂದ ಸನ್ಯಾಸಕ್ಕೆ ವಿರೋಧವಾಗಿ ಮಾತಾಡತೊಡಗಿದೆ. ಅದನ್ನು ಆಲಿಸಿ, ವಿವಾಹಪ್ರಿಯರಾಗಿದ್ದ ನನ್ನ ಮಿತ್ರರು ಇವನೇನೊ ಒಂದು ಮಾರ್ಗಕ್ಕೆ ಬರುವಹಾಗಿದೆ ಎಂದುಕೊಂಡರು.

ಆದರೆ ಅವರಿಗೆ ಆಶಾಭಂಗವಾಯಿತು. ಏಕೆಂದರೆ ನಾನು ಅವಿವಾಹಿತನಾಗಿಯೇ ಪ್ರಪಂಚದಲ್ಲಿದ್ದುಕೊಂಡು ಲೋಕೋಪಕಾರ ಮಾಡಿ ಆದರ್ಶ ವ್ಯಕ್ತಿ ಎನ್ನಿಸಿಕೊಳ್ಳಬೇಕೆಂದು ನಿಶ್ಚಯಿಸಿದೆ. ಸಮಯ ಸಿಕ್ಕಿದಾಗಲ್ಲೆಲ್ಲ ಲೋಕೋಪಕಾರಕ್ಕೂ ವಿವಾಹಕ್ಕೂ ಪರಸ್ಪರ ವಿರೋಧವಿರುವುದೆಂದು ನನ್ನ ಗೆಳೆಯರೊಡನೆ ಪ್ರಚಂಡವಾದ ವಾದ ಹೂಡಿದೆ. ಪತ್ನೀಪುತ್ರರೇ ಮೊದಲಾದ ಸಂಸಾರದ ಬಂಧನಗಳಿದ್ದರೆ ನಿಃಸ್ವಾರ್ಥತೆಯಿಂದಲೂ ಅನನ್ಯ ಮನಸ್ಸಿನಿಂದಲೂ ಲೋಕಸಂಗ್ರಹಕಾರ್ಯ ಮಾಡಲು ಅಸಾಧ್ಯ ಎಂದು ಸೋಪ ಪತ್ತಿಕವಾಗಿ ವಾದಿಸಿದೆ. ಮನಸ್ಸಿನಲ್ಲಿಯೇ ಮುಂದೆ ಜಗತ್ತಿನ ಧರ್ಮಚರಿತ್ರೆಯಲ್ಲಿ ನನ್ನ ಹೆಸರು ಪ್ರತಿ ಪುಟದಲ್ಲಿಯೂ ಸ್ವರ್ಣಾಕ್ಷರಗಳಲ್ಲಿ ಲಿಖಿತವಾಗುವುದೆಂದು ಹಿಗ್ಗಿದೆ.

ಆಗ ನಾನಿನ್ನೂ ವಿದ್ಯಾರ್ಥಿದಶೆಯಲ್ಲಿದ್ದೆ. ಮನೆಯವರು ನನ್ನ ಆದರ್ಶವನ್ನು ಸ್ವಲ್ಪವೂ ಮನ್ನಿಸಲಿಲ್ಲ. ಒಂದು ಹೆಣ್ಣನ್ನು ಗೊತ್ತುಮಾಡಿದ್ದೇವೆ, ಬೇಸಿಗೆ ರಜಾ ಸಿಕ್ಕಿದಕೂಡಲೆ ಬಾ, ಎಂದು ಮೊದಲಾಗಿ ನಮ್ಮ ತಂದೆ ಕಾಗದ ಬರೆದರು. ನಾನು ಮಿತ್ರರಿಗೆಲ್ಲ ಆ ಪತ್ರವನ್ನು ತೋರಿಸಿ ಅದನ್ನು ತಿರಸ್ಕಾರಪೂರ್ಣವಾಗಿ ಹರಿದು ಬಿಸಾಡಿಬಿಟ್ಟೆ. ಹೆಣ್ಣನ್ನು ಗೊತ್ತು ಮಾಡುವುದೆಂದರೇನು? ಮದುವೆಯಾಗುವವರು ಯಾರೊ, ಗೊತ್ತು ಮಾಡುವವರು ಯಾರೊ? ಇದೇನು ಪಶುವಿಕ್ರಯ ಕೆಟ್ಟುಹೋಯ್ತೆ! ಪೂರ್ವ ಪ್ರೇಮವಿಲ್ಲದ ಮದುವೆ ಮದುವೆಯೆ? ಹೀಗೆಲ್ಲ ಹುಚ್ಚುಹುಚ್ಚಾಗಿ ಗೆಳೆಯರೊಡನೆ ಬಾಯಿಮಾಡಿದೆ. ಜೊತೆಗೆ ನನ್ನ ಲೋಕೋಪಕಾರದ ವಿವರಣೆಯನ್ನೆಲ್ಲ ಸವಿಸ್ತಾರವಾಗಿ ಬರೆದು, ನಾನು ಅವಿವಾಹಿತನಾದ ಆದರ್ಶ ವ್ಯಕ್ತಿಯಾಗಬೇಕೆಂಬ ಮಹಾಧ್ಯೇಯವನ್ನು ಒತ್ತಿ ಒತ್ತಿ ತಿಳಿಸಿ ನಮ್ಮ ತಂದೆಗೆ ಒಂದು ಕಾಗದ ಬರೆದೆ. ಅವರು ಆಟಕ್ಕಾಗಿ ಮಕ್ಕಳು ಬೀದಿಯಲ್ಲಿ ಕಟ್ಟುವ ಮಳಲಿನ ಮನೆಯನ್ನು ಮುಂಗಾರುಮಳೆ ಎಷ್ಟರಮಟ್ಟಿಗೆ ಸಡ್ಡೆ ಮಡುವುದೊ ಅಷ್ಟರಮಟ್ಟಿಗೆ ನನ್ನ ಮಹಾಧ್ಯೇಯವನ್ನು ಸಡ್ಡೆ ಮಾಡಿ ನನಗೆ ಮತ್ತೊಂದು ಕಾಗದ ಬರೆದರು. ಅದರಲ್ಲಿ ನನ್ನ ಅಭಿಮಾನ ಭಂಗಕಾರಿಯಾದ ಒಂದು ವಿಷಯವಿತ್ತು. ಅವರು ಹೇಳಿದಂತೆ ನಾನು ಕೇಳದಿದ್ದರೆ ತಿಂಗಳ ಹಣವನ್ನೆ ಕಳುಹಿಸುವುದಿಲ್ಲ ಎಂದು ಬರೆದಿದ್ದರು. ನಾನು ಪ್ರಲಯಕ್ರುದ್ಧನಾದೆ. ನಿಮ್ಮ ಹಣವಿಲ್ಲದಿದ್ದರೆ ಅಷ್ಟೇ ಹೋಯಿತು; ನನಗೆ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡುವ ಶಕ್ತಿಯಿದೆ. ಇಂಗ್ಲೆಂಡಿಗೆ ಹೋಗುತ್ತೇನೆ, ಫ್ರಾನ್ಸಿಗೆ ಹೋಗುತ್ತೇನೆ, ಅಮೆರಿಕಾಕ್ಕೆ ಹೋಗುತ್ತೇನೆ. ಅಲ್ಲಿ ನನ್ನ ಉಪನ್ಯಾಸಗಳಿಂದಲೆ ಬೇಕಾದಷ್ಟು ಸಂಪಾದನೆ ಮಾಡಿ ದೇಶಕ್ಕೆ ಕೀರ್ತಿ ತರುತ್ತೇನೆ, ಎಂದು ಮೊದಲಾಗಿ ಕಾಗದ ಬರೆದೆ. ನನ್ನ ಪತ್ರಕ್ಕೆ ಪ್ರತ್ಯುತ್ತರವಾಗಿ ಅವರು, ನಿನ್ನ ಹುಡುಗಾಟ ಸಾಕು, ಐಲು ಮಾಡಬೇಡ ಎಂದು ದುಡ್ಡು ಕಳುಹಿಸಿದರು. ನನಗೆ ಮತ್ತೂ ಅವಮಾನವಾದಂತಾಗಿ ಮನಿಯಾರ್ಡರು ತೆಗೆದುಕೊಂಡು ಸುಮ್ಮನಾದೆ. ಆಗ ನಾನು ಓದುತ್ತಿದ್ದುದು ಐದನೇ ಫಾರಂನಲ್ಲಿ!

ಬೇಸಗೆಯಲ್ಲಿ ಊರಿಗೆ ಹೋದೆ. ನಮ್ಮ ತಂದೆ ವಿವಾಹದ ಮಾತನ್ನೆತ್ತಿದರು. ನಾನು ವಿವಾಹವಾಗುವುದೇ ಇಲ್ಲ ಎಂದು ಪ್ರತಿಭಟಿಸಿದೆ. ನಮ್ಮ ತಾಯಿ ಬಹಳ ಅಂಗಲಾಚಿ ಬೇಡಿಕೊಂಡರು. “ಅಪ್ಪಾ, ನನಗೆ ವಯಸ್ಸಾಯಿತು. ನಾನಿನ್ನು ಮನೆಗೆಲಸವೆಲ್ಲವನ್ನೂ ನೋಡಿಕೊಳ್ಳಲಾರೆ” ಎಂದರು. ನಾನು “ಮನೆಗೆಲಸಕ್ಕೆ ಸೊಸೆಯೇ ಆಗಬೇಕೇನೊ? ಕೂಲಿ ಕೊಟ್ಟರೆ ಯಾರೂ ಬೇಕಾದರೂ ಮಾಡುತ್ತಾರೆ” ಎಂದು ನನ್ನ ಮಹಾಧ್ಯೇಯದ ವಿಚಾರವಾಗಿ ನನಗೆ ತಿಳಿದ ದೊಡ್ಡ ದೊಡ್ಡ ಪದಗಳನ್ನೇ ಆದಷ್ಟು ಮಟ್ಟಿಗೆ ಆಯ್ದು ಉಪಯೋಗಿಸಿ ಉಪನ್ಯಾಸ ಮಾಡಿದೆ. ನಮ್ಮ ತಾಯಿ ನನ್ನ ವಾಗ್‌ಝರಿಯನ್ನು ನೋಡಿ ನಾನೆಳಸಿದಂತೆ ವಿಸ್ಮಯಪಡುವುದಕ್ಕೆ ಬದಲಾಗಿ ವಿಷಾದಪಟ್ಟುಕೊಂಡು ಸುಮ್ಮನಾದರು.

ನಮ್ಮ ತಂದೆ ನನ್ನೊಡನೆ ವಾದಿಸಲೇ ಇಲ್ಲ. ಸುಮ್ಮನಿದ್ದು ಒಂದು ದಿನ ನನ್ನನ್ನು ನಮ್ಮ ಮಾವನ ಮನೆಗೆ ಕರೆದುಕೊಂಡುಹೋದರು. ಅಲ್ಲಿ ರೋಹಿಣಿಯನ್ನು ಕಂಡೆ. ನನ್ನ ನೂರು ಕೋಟಿ ವಾದಗಳಿಗೆ ಮನ್ಮಥನೊಡ್ಡಿದ ಮೌನವೂ ಕೋಮಲವೂ ಸುಂದರವೂ ಸುಮನೋಹರವೂ ಆದ ಏಕಮಾತ್ರ ಪ್ರತಿವಾದದಂತೆ ಇದ್ದಳವಳು.

ಅವಳನ್ನು ನೋಡಿದಂದು ಅಜೀವಬ್ರಹ್ಮಚರ್ಯ ಪ್ರಕೃತಿಗೆ ಸಮ್ಮತವಲ್ಲ ಎಂಬ ಭಾವ ಮೆಲ್ಲಗೆ ಮನದಲ್ಲಿ ವರ್ಷಾಗಮನದ ಪ್ರಥಮ ಸಂಧ್ಯಾ ಗಗನದಲ್ಲಿ ಅವಿರ್ಭವಿಸುವ ಇಂದ್ರಧನುಸ್ಸಿನಂತೆ ಮೂಡಿತು. ಹಾಗೆಯೆ ಸಂಪೂರ್ಣ ಬ್ರಹ್ಮಚರ್ಯವೂ ಅಸ್ವಭಾವಿಕವೆಂದು ನಿರ್ಧರಿಸಿದೆ. ಪದ್ಮಪತ್ರ ಜಲದಲ್ಲಿರುವಂತೆ ಸಂಸಾರದಲ್ಲಿ ನಿರ್ಲಿಪ್ತನಾಗಿದ್ದುಕೊಂಡು ಲೋಕೋಪಕಾರ ಮಾಡಿ ಆಧುನಿಕ ಜನಕಮಹರ್ಷಿ ಎಂಬ ಕೀರ್ತಿಗೆ ಭಾಜನನಾಗುವೆನೆಂದು ತಿಳಿದೆ.

ನಾನು ರೋಹಿಣಿಯನ್ನು ಮದುವೆಯಾದಂದು ಜೋಯಿಸರು ನನಗಿಟ್ಟ ಹೆಸರು ಸಾರ್ಥಕವಾಯಿತು ಎಂದುಕೊಂಡೆ. ಚಂದ್ರ ರೋಹಿಣಿಯರಂತೆ ಆದರ್ಶ ಪತಿಪತ್ನಿಯರಾಗಿ ಅನಂತಕಾಲವೂ ಅನವರತ ಅಖಂಡ ಪ್ರೇಮೈಕ್ಯರಾಗಿರುತ್ತೇವೆ ಎಂದು ಧರ್ಮಶಪಥ ಮಾಡಿದೆ. ನನ್ನ ಮತ್ತು ರೋಹಿಣಿಯ ಹೆಸರು ಸೀತಾ ರಾಮರು, ಸಾವಿತ್ರಿ ಸತ್ಯವಂತರು, ನಳ ದಮಯಂತಿಯರು ಮೊದಲಾದವರ ನಾಮಮಾಲೆಯಲ್ಲಿ ಅಗ್ರಸ್ಥಾನವನ್ನು ಪಡೆಯದಿರದು ಎಂದು ನಿಶ್ಚಯಮಾಡಿಕೊಂಡೆ. ಸಂನ್ಯಾಸಾದರ್ಶವೂ ಬ್ರಹ್ಮಚರ್ಯಾ ದರ್ಶವೂ ಸಂಸಾರದರ್ಶದ ಮುಂದೆ ನೀರಸ ತುಚ್ಛವಾಗಿ ಕಂಡುಬಂದುವು.

* * *

ನಮ್ಮೂರಿನಿಂದ ಬೆಂಗಳೂರಿಗೆ ಹೊರಟುಬಂದೆ. ನನ್ನ ಮಿತ್ರರು ನನ್ನನ್ನು ಅಭಿನಂದಿಸಿದರು; ಶ್ಲಾಘಿಸಿದರು. ನಿನಗೆ ಸುಬುದ್ಧಿ ಬಂತು ಎಂದರು. ನಾನು ಅವರೊಡನೆ, ಈಶ್ವರನೇ ಸಂಸಾರ ಕಟ್ಟಿಕೊಂಡಿರುವಾಗ ಮಾನವನು ಅದನ್ನು ಹಳಿದರೆ ಮಹಾ ಪಾಪವೆಂದೂ, ಸ್ತ್ರೀಯು ಪುರುಷನಿಗೆ ಶಕ್ತಿ ರೂಪಿಣಿ ಎಂದೂ, ಆದ್ದರಿಂದಲೇ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಸರಸ್ವತಿ ಲಕ್ಷ್ಮಿ ಪಾರ್ವತಿಯರು ಇರುವರೆಂದೂ, ಮನುಷ್ಯನು ಸಂಸಾರಿಯಾದರೆ ತಾವರೆಯೆಲೆ ನೀರಿನಲ್ಲಿರುವಂತೆ ಇರಬೇಕೆಂದೂ, ಕರ್ಮತ್ಯಾಗ ಯಾವನಿಂದಲೂ ಅಸಾಧ್ಯವೆಂದೂ, ಸಂಪೂರ್ಣ ಕಾಮಜಯ ಮಿಥ್ಯೆಯೆಂದೂ, ಸನ್ಯಾಸಿ ಬ್ರಹ್ಮಚಾರಿಗಳೆಲ್ಲ ಶುದ್ಧ ಕಪಟಿಗಳೆಂದೂ ಅಸ್ವಭಾವಿಕ ಜೀವಿಗಳೆಂದೂ ವಿಧವಿಧವಾಗಿ ಭಾಷಣ ಮಾಡಿ ನನ್ನ ಆದರ್ಶ ಸ್ಥಾನವನ್ನು ಕಾಪಾಡಿಕೊಂಡೆ.

ಅಲ್ಲದೆ ರೋಹಿಣಿಗೆ ವಿಧವಿಧವಾಗಿ ಪ್ರೇಮಪತ್ರಗಳನ್ನು ಬರೆಯತೊಡಗಿದೆ. ಅವುಗಳಲ್ಲಿ, ನಾವಿಬ್ಬರೂ ಶಾಶ್ವತಪ್ರೇಮ ನಿಗಳನಿಬದ್ಧರಾದ ಅನಂತ ಯಾತ್ರಿಕರೆಂದೂ; ದೇವ ದೇವತೆಗಳ ಸಮಕ್ಷಮದಲ್ಲಿ, ಸಾಕ್ಷ್ಯದಲ್ಲಿ ವಿವಾಹವಾದೆವೆಂದೂ; ಪತ್ನಿಯು ಸಹಧರ್ಮಿಣಿಯೆಂದೂ; ಪತಿಯೇ ಪತ್ನಿಗೆ ದೇವರೆಂದೂ; ಪತಿವ್ರತಾಧರ್ಮವು ಸ್ತ್ರೀಯರಿಗೆ ಸರ್ವಶ್ರೇಷ್ಠವಾದ ಆದರ್ಶವೆಂದೂ ನಾನಾ ರೀತಿಯಾಗಿ ಬರೆದು ಆಕೆಯ ಕರ್ತವ್ಯದ ವಿಚಾರವಾಗಿ ಎಚ್ಚರಕೊಟ್ಟು, ನನ್ನ ಪ್ರಾಮುಖ್ಯತೆಯನ್ನು ಆಕೆ ಮರೆಯದಂತೆ ಯತ್ನಿಸುತ್ತಿದ್ದೆ. ಪ್ರತಿಯೊಂದು ಕಾಗದದಲ್ಲಿಯೂ ರುಜು ಹಾಕುವಾಗ ಆಕೆಗೆ ನನ್ನ ಮಹತ್ವ ಸ್ವಲ್ಪ ಮಂದಟ್ಟಾಗಲೆಂದು ನನ್ನ ಹೆಸರಿನ ಮುಂದೆ ಇಂಗ್ಲಿಷಿನಲ್ಲಿ ‘ಎಸ್.ಎಸ್.ಎಲ್.ಸಿ.’ ಎಂದು ಬರೆಯುತ್ತಿದ್ದೆ.

ಬೇಸಗೆಯಲ್ಲಿ ಊರಿಗೆ ಹೋಗಿ ನೋಡುತ್ತೇನೆ. ರೋಹಿಣಿಗೆ ನಾನು ಬರೆದ ಪತ್ರವೊಂದೂ ಅರ್ಥವಾಗಿರಲಿಲ್ಲ! ನಾನು ಹೆಮ್ಮೆಯಿಂದ ಹಿಗ್ಗಿದೆ! ಆಕೆಗೆ ನನ್ನ ಪ್ರಖ್ಯಾತಿಯ ವಿಚಾರವಾಗಿ ತಿಳಿಯಹೇಳಿದೆ-ನಾನೇ ನನ್ನ ಸ್ಕೂಲಿನಲ್ಲಿ ಮೊದಲನೆಯವನು; ಉಪಾಧ್ಯಾಯರುಗಳಿಂದಲೂ ವಿವರಿಸಲಾಗದ ಗ್ರಂಥಭಾಗಗಳನ್ನು ಹುಡುಗರು ನನ್ನಿಂದ ಪಾಠ ಹೇಳಿಸಿಕೊಳ್ಳುತ್ತಾರೆ; ನಾನು ಎಂದರೆ ಎಲ್ಲರಿಗೂ ಗೌರವ; ಉಪನ್ಯಾಸಕರುಗಳೂ ಕೂಡ ನನಗೆ ಹೆದರುತ್ತಾರೆ; ನಾನು ಪರೀಕ್ಷೆಗೆ ಕುಳಿತುಕೊಳ್ಳದಿದ್ದರೂ ಪಾಸಾಗುತ್ತಿತ್ತು; ಆದರೆ ಪದ್ಧತಿಗೋಸ್ಕರ ಕೂತಿದ್ದೆ; ನಾನು ಸರ್ವೋಚ್ಛ ಪ್ರಥಮವರ್ಗದಲ್ಲಿ ತೇರ್ಗಡೆ ಹೊಂದುವಂತೆ ಬರೆದಿದ್ದೇನೆ… ರೋಹಿಣಿ ಬೆರಗಾಗಿಹೋದಳು. ತನ್ನ ಪತಿ ನಿಜವಾಗಿಯೂ ದೇವರೇ ಇರಬೇಕು ಎಂದು ತಿಳಿದಳು.

ಆದರೆ ನನಗೆ ಫೇಲಾಯಿತು. ನನ್ನ ವಿದ್ಯಾಭ್ಯಾಸ ನಿಂತಿತು. ಮನೆಯಲ್ಲಿ ರೋಹಿಣಿಯೊಡನೆ ಆದರ್ಶ ಸಂಸಾರಿಯಾಗಿ ನಿಂತೆ. ಬುದ್ಧಿ ಸ್ವಲ್ಪ ಸ್ಥಿಮಿತಕ್ಕೆ ಬಂತು. ನಗರದ ನನ್ನ ಮಿತ್ರರು, ನನ್ನಂಥವರು ವಿದ್ಯಾಭ್ಯಾಸ ನಿಲ್ಲಿಸಬಾರದೆಂದೂ, ಮುಂದೆ ನನ್ನಿಂದ ದೇಶಕ್ಕೆ ಮಹೋಪಕಾರವಾಗಬೇಕೆಂದೂ, ಒಂದು ಸಾರಿ ತೇರ್ಗಡೆ ಹೊಂದದಿದ್ದುಕ್ಕಾಗಿ ಅಧೈರ್ಯವಾಗಬಾರದೆಂದೂ, ನನಗಿದ್ದ ಮಹಾದಾಕಾಂಕ್ಷೆ ಮಹಾಧ್ಯೇಯಗಳನ್ನು ಸೂಚಿಸಿ ಕಾಗದ ಬರೆದರು. ನಾನು ಅದಕ್ಕೆ ಪ್ರತ್ಯುತ್ತರವಾಗಿ ನನಗಿದ್ದ ಶಬ್ಧಭಂಡಾರವನ್ನೆಲ್ಲಾ ಸೂರೆ ಮಾಡಿ “ನಾನು ಫೇಲಾದುದಕ್ಕಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಲಿಲ್ಲ. ಅಧೈರ್ಯವೆಂಬುದು ನಾನಿದ್ದೆಡೆ ಕಾಲಿಡಲರಿಯದು. ಆದರೆ ದೇಶೋದ್ಧಾರದ ದೃಷ್ಟಿಯಿಂದ ಗ್ರಾಮನಿವಾಸಿಯಾಗಿದ್ದೇನೆ. ವಿದ್ಯೆ ಎಂಬುದು ಪರೀಕ್ಷೆಗಳನ್ನು ಪ್ಯಾಸು ಮಾಡಿದ ಮಾತ್ರದಿಂದ ಲಭಿಸುವುದಿಲ್ಲ. ನಾನು ಮನೆಯಲ್ಲಿಯೆ ಗ್ರಂಥ ಭಂಡಾರವೊಂದನ್ನು ಇಡಲು ಹವಣಿಸುತ್ತಿದ್ದೇನೆ. ಸ್ವಸಾಮರ್ಥ್ಯದಿಂದಲೆ ಆದರ್ಶ ಜ್ಞಾನಿಯಾಗುತ್ತೇನೆ. ಸಾಕ್ರೆಟೀಸನು ಎಂ.ಎ. ಪ್ಯಾಸು ಮಾಡಿದ್ದನೇ? ವೇದವ್ಯಾಸರು ವಿಶ್ವವಿದ್ಯಾನಿಲಯದಲ್ಲಿ ಓದಿದ್ದರೇ? ವಾಲ್ಮೀಕಿಗೆ ಸ್ಕಾಲರ್ ಷಿಪ್ ಬರುತ್ತಿತ್ತೇ? ಎಲ್ಲರೂ ಪಟ್ಟಣಗಳಲ್ಲಿ ಸೇರಿಬಿಟ್ಟರೆ ಹಳ್ಳಿಯನ್ನು ಉದ್ಧಾರ ಮಾಡುವವರಾರು? ನಮ್ಮ ದೇಶ ಹಳ್ಳಿಗಳ ದೇಶ. ಎಲ್ಲರೂ ಗ್ರಾಮಗಳಿಗೆ ಮರಳಿದರೇ ದೇಶೋದ್ಧಾರವಾಗುವುದು. ನಾನೀಗ ಗ್ರಾಮೋದ್ಧಾರ ಕಾರ್ಯದಲ್ಲಿ ತೊಡಗಿ ಇತರರಿಗೆ ಆದರ್ಶವಾಗುತ್ತಿದ್ದೇನೆ. ದೇಶಭಕ್ತರೆಲ್ಲರೂ ಗ್ರಾಮ ನಿವಾಸಿಗಳಾಗಬೇಕು. ನಾನಿಲ್ಲಿ ಹಳ್ಳಿಯವರಿಗೆ ಆರೋಗ್ಯ ವ್ಯವಸಾಯ ಮೊದಲಾದವುಗಳ ವಿಚಾರದಲ್ಲಿ ಉಪನ್ಯಾಸ ಮಾಡುತ್ತೇನೆ. “ಗ್ರಾಮ ಪುನರುಜ್ಜೀವ ಸಂಜೀವಿನೀ” ಎಂಬ ಒಂದು ದೊಡ್ಡ ಗ್ರಂಥವನ್ನು ಬರೆಯಲು ಸಾಮಗ್ರಿಗಳನ್ನು ಒಟ್ಟುಗೂಡಿಸುತ್ತಿದ್ದೇನೆ. ಅಲ್ಲದೆ ಅಧ್ಯಯನಕ್ಕೂ ಹಳ್ಳಿಯೇ ವಾಸಿ. ನಗರದಲ್ಲಿ ನೂರಾರು ಪ್ರಲೋಭನೆಗಳಿವೆ. ಅಲ್ಲದೆ ಗಡಿಬಿಡಿ, ಅಶಾಂತಿ. ಈ ಎಲ್ಲ ಕಾರಣಗಳಿಂದ ನನ್ನ ಉಚ್ಚಾದರ್ಶ ಸಾಧನೆ ಗ್ರಾಮದಲ್ಲಿಯೇ ಸುಲಭಸಾಧ್ಯವಾಗುವುದು. ನೀವೂ ನನ್ನಂತೆಯೇ ಮಾಡಿದರೆ ಲೋಕಕ್ಕೆ ಆದರ್ಶರಾಗುತ್ತೀರಿ” ಎಂದು ಬರೆದೆ. ನನ್ನ ಸ್ನೇಹಿತರು ದಿಗ್ಬ್ರಾಂತರಾದರು. ನನ್ನ ತ್ಯಾಗವನ್ನು ಮುಕ್ತಕಂಠದಿಂದ ಹೊಗಳಿ, ನನ್ನನ್ನು ಆದರ್ಶಜೀವಿ ಎಂದು ಸ್ತೋತ್ರ ಮಾಡಿ ಅನೇಕರು ಅನೇಕ ಕಾಗದಗಳನ್ನು ಬರೆದರು. ಕೆಲವರು ನನ್ನನ್ನು ಬುದ್ಧನಿಗೆ ಹೋಲಿಸಿ ಬರೆದಿದ್ದರು. ನಾನು ಪ್ರತಿಭಟಿಸಿ ಕಾಗದ ಬರೆದೆ, ಬುದ್ಧನು ಪ್ರಪಂಚದ ರಣರಂಗದಲ್ಲಿ ನುಗ್ಗಿ ಸೋತು ಓಡಿಹೋಗಿ ಸಂನ್ಯಾಸಿಯಾದುದರಿಂದ ಅತನು ಆದರ್ಶ ಪುರುಷನಲ್ಲ ಎಂದು. ಈ ಹೊಗಳಿಕೆಗಳ ನಡುವೆ, ಒಬ್ಬನು ಮಾತ್ರ, ಇದೆಲ್ಲ ಬರಿ ಬೂಟಾಟಿಕೆ ಎಂದು ಬರೆದಿದ್ದ. ನನ್ನ ಮೇಲಿನ ಹೊಟ್ಟೆಕಿಚ್ಚಿನಿಂದಲೇ ಹಾಗೆ ಬರೆದಿರಬೇಕೆಂದು ಆ ಕಾಗದವನ್ನು ಮಾತ್ರ ರೋಹಿಣಿಗೆ ಓದದೆ ಹರಿದು ಹಾಕಿದೆ.

* * *

ಮುಗುದೆಯಾದ ನನ್ನ ಮುದ್ದು ರೋಹಿಣಿ ಒಂದು ಗಂಡು ಮಗುವನ್ನು ಹೆತ್ತು ಅಸ್ವಸ್ಥಳಾದಳು. ಕೆಲವು ದಿನಗಳಲ್ಲಿ ರೋಗ ಭೀಷಣವಾಯಿತು. ಎಷ್ಟೆಷ್ಟು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ರೋಗ ವಿಷಮಾವಸ್ಥೆಗೆ ತಿರುಗಿತು. ನನ್ನ ಸುವರ್ಣಸ್ವಪ್ನ ಮುದ್ರಿತವಾದ ಸ್ವರ್ಗ ಸಿಡಿದೊಡೆಯುವ ಕಾಲ ಬಂದಿತು. ನನ್ನ ಜೀವನಜ್ಯೋತಿ ಅಸನ್ನನಿರ್ವಾಣವಾಯಿತು. ನನ್ನಲ್ಲಿದ್ದ ಲಘುಪ್ರಕೃತಿ ಇದ್ದಕ್ಕಿದ್ದಂತೆ ಮಾಯವಾಗಿ ಹೋಯಿತು. ರೋಹಿಣಿಯ ಬಳಿ ಹಗಲೂ ಇರುಳೂ ಕುಳಿತು ಭಗವಂತನನ್ನು ಬೇಡಿದೆ. ನಾನು ಹಿಂದೆ ಮತ್ತಾವಕಾರ್ಯವನ್ನೂ ಅಷ್ಟು ಮನಃಪೂರ್ವಕವಾಗಿ ಮಾಡಿರಲಿಲ್ಲ. “ಹೇ ಜಗದೀಶ್ವರ, ನನ್ನಲ್ಲಿರುವ ಕುಂದುಕೊರತೆಗಳೇನಿದ್ದರೂ ಕ್ಷಮಿಸು. ನನ್ನ ರೋಹಿಣಿಯನ್ನು ಬದುಕಿಸಿಕೊಡು. ಉಳಿದ ನನ್ನ ನಡತೆಗಳೆಲ್ಲವೂ ಕಪಟನಟನೆಯಾಗಿದ್ದಿರಬಹುದು; ಆದರೆ ನನ್ನ ರೋಹಿಣಿಯ ಮೇಲೆ ನನಗಿರುವ ಪ್ರೇಮ ಅಕುಟಿಲವಾದುದೆಂದು ನಿನ್ನ ಮೇಲೆ ಆಣೆಯಿಟ್ಟು ಹೇಳಬಲ್ಲೆ. ನಾನು ಪಾಪಿ, ಮಹಾಪರಾಧಿ. ಆದರೆ ನೀನು ಪತಿತ ಪಾವನ, ಕರುಣಾಸಾಗರ, ದುರ್ದುಮ್ಯವಾದ ನಿನ್ನ ಭಯಂಕರ ಶಕ್ತಿಚಕ್ರ ನನ್ನಂತಹ ಕ್ರಿಮಿಯ ಮೇಲೆ ಹಾದುಹೋಗದಿರಲಿ. ನಿನಗೆ ಅನಂತಾನಂತ ವಂದನೆಗಳು; ಸಹಸ್ರ ಸಹಸ್ರ ನಮಸ್ಕಾರಗಳು!” ಆದರೆ ವಿಧಿ ನಿಷ್ಕರುಣ ಕ್ರೌರ್ಯದಿಂದ ನನ್ನ ಪ್ರಾರ್ಥನೆಯನ್ನು ನನ್ನ ಮುಖಕ್ಕೆ ಎಸೆದು ತನ್ನ ಕಾರ್ಯವನ್ನು ಮಾಡಿಯೇ ಮಾಡಿತು. ನನ್ನ ರೋಹಿಣಿ ಮೃತ್ಯುಲೋಕದ ಅನಂತ ಘನಾಂಧಕಾರಲ್ಲಿ ವಿಲೀನವಾಗಿ ಕಣ್ಮರೆಯಾಗಿ ಹೋದಳು. ನಾನು ಜೀವನದ ಕಗ್ಗತ್ತಲೆಯಲ್ಲಿ ಬಟ್ಟೆಗೆಟ್ಟೆ.

ರೋಹಿಣಿಯ ಮರಣ ನನ್ನ ಹಣ್ಣು ಮಾಡಿತು. ನನ್ನಲ್ಲಿ ಮೊದಲಿದ್ದ ಗರ್ವ ಮಾಯವಾಯಿತು. ಅತಿ ದೀನನಾದೆ. ನನ್ನ ಸ್ವಭಾವವೂ ಸ್ವಲ್ಪ ಗಂಭೀರವಾಯ್ತು. ಒಬ್ಬನೇ ಕುಳಿತುಕೊಂಡು-ನನ್ನ ರೋಹಿಣಿ ಯಾರು? ನಾನು ಯಾರು? ನಾವೆಲ್ಲಿಂದ ಬಂದೆವು? ಎಲ್ಲಿಗೆ ಹೋಗುತ್ತೇವೆ? ಏತಕ್ಕಾಗಿ ಬಂದೆವು? ಜೀವನಲೀಲೆಯ ಅರ್ಥವೇನು? ಎಂಬ ನೂರಾರು ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಅನೇಕ ಗ್ರಂಥಗಳನ್ನು ಓದಿದೆ. ಆದರೆ ಅಂಧಕಾರ ಇನ್ನಿಷ್ಟು ಗಭೀರತರವಾದಂತಾಯಿತು. ರೋಹಿಣಿಯ ಜೊತೆಗೆ ಜೀವನದ ಸಮಸ್ತ ಕಾಂತಿಯೂ ಮಾಯವಾದಂತೆ ತೋರಿತು. ಸೂರ್ಯೋದಯ ಚಂದ್ರೋದಯಗಳು ನನ್ನನ್ನು ಅಣಕಿಸುವಂತೆ ತೋರಿತು. ನಕ್ಷತ್ರಗಳೂ ನನ್ನನ್ನೇ ಹಾಸ್ಯಮಾಡುವಂತೆ ತೋರಿತು. ತೊರೆಗಳ ಮೊರೆಯಲ್ಲಿ “ರೋಹಿಣೀ ರೋಹಿಣೀ” ಎಂಬ ನಾದವೆ ಕೇಳಿಸತೊಡಗಿತು. ಕೋಗಿಲೆ ಗಿಳಿ ಕಾಜಾಣ ಕಾಮಳ್ಳಿಗಳ ಇಂಚರದ ಅಂತರಾಳದಲ್ಲಿ ರೋಹಿಣಿಯನ್ನು ತಮ್ಮ ಮಡಿಲಿನಲ್ಲಿ ಮರೆಮಾಡಿಟ್ಟುಕೊಂಡಿರುವಂತೆ ತೋರಿತು. ನನ್ನೊಬ್ಬನ ಹೊರತು ವಿಶ್ವದಲ್ಲಿ ಉಳಿದೆಲ್ಲ ವಸ್ತುಗಳೂ ರೋಹಿಣಿಯನ್ನು ವಶಪಡಿಸಿಕೊಂಡಿರುವಂತೆ ಭಾಸವಾಯಿತು.

* * *

ಹೃದಯ ಲೇಶಮಾತ್ರವೂ ಇಲ್ಲದ ನನ್ನ ಬಂಧುವೊಬ್ಬನು ನನ್ನ ರೋಹಿಣಿ ಇನ್ನೂ ಸಾಯುವುದರಲ್ಲಿದ್ದಾಗಲೆ ತನ್ನ ಮಗಳನ್ನು ನನಗೆ ಕೊಡುವುದಾಗಿ ನಮ್ಮ ತಂದೆಯವರೊಡನೆ ಪ್ರಸ್ತಾಪಿಸಿದ್ದು ನನಗೆ ಗೊತ್ತಾಯಿತು. ನಮ್ಮ ಮನೆಯವರೂ “ಹೋದವಳು ಹೋಗಿಯಾಯಿತು. ಹಣೆಯಲ್ಲಿ ಬರೆದುದನ್ನ ಅಳಿಸುವುದಕ್ಕಾಗುತ್ತದೆಯೆ? ಇನ್ನೆಷ್ಟು ದಿನ ಹಾಗೆಯೆ ಇರುತ್ತೀಯೆ? ನೀನಿನ್ನೂ ತರುಣ. ಇನ್ನೊಂದು ಮದುವೆ ಮಾಡಿಕೋ, ಒಳ್ಳೆಯದೊಂದು ಹೆಣ್ಣೂ ಗೊತ್ತಾಗಿದೆ. ಒಳ್ಳೆಯ ಮನೆತನ; ಐಶ್ವರ್ಯವಂತರು. ಅಲ್ಲದೆ ನಿನ್ನ ಚಿಕ್ಕ ಕೂಸನ್ನು ನೋಡಿಕೊಳ್ಳುವುದಕ್ಕೂ ಸಹಾಯವಾಗುವುದು” ಎಂದು ಉಪದೇಶಿಸಿದರು. ನನಗೆ ಹಸಿ ಗಾಯದ ಮೇಲೆ ಹುಳಿ ಹಿಂಡಿದಂತಾಯ್ತು. ಆದರ್ಶ ಸನ್ಯಾಸಿಯಾಗಲಾರದೆ ಹೋದೆ; ಆದರ್ಶ ಬ್ರಹ್ಮಚಾರಿಯಾಗದೆ ಹೋದೆ; ಆದರ್ಶ ಪತಿಯೂ ಆಗಲಾರನೆ? ಎಂದುಕೊಂಡು ಮುಂದೆ ಎಂದೆಂದೂ ವಿವಾಹವಾಗುವುದಿಲ್ಲ, ಉಳಿದೆಲ್ಲ ಸ್ತ್ರೀಯರೂ ತಾಯಂದಿರಿಗೂ ಸೋದರಿಯರಿಗೂ ಸದೃಶ ಎಂದು ಮದುವೆಯ ಮಾತನ್ನು ಕತ್ತರಿಸಿ ಬಿಟ್ಟೆ.

ಎರಡನೆಯ ಮದುವೆ ಮಾಡಿಕೊಳ್ಳುವುದು ಮಹಾ ಪಾಪ ಎಂದು ತೋರಿತು. ವಿವಾಹ ಸಮಯದಲ್ಲಿ ಸರ್ವ ದೇವತೆಗಳನ್ನೂ ಸರ್ವ ಋಷಿಗಳನ್ನೂ ಸರ್ವ ವೇದಶಾಸ್ತ್ರಗಳನ್ನೂ ಸರ್ವ ಮಹಾಪುರುಷರನ್ನೂ ಸರ್ವ ತೀರ್ಥಗಳನ್ನೂ ಸಾಕ್ಷಿಗೆ ಕರೆದು “ನಾನು ನನ್ನ ಪತ್ನಿಯನ್ನು ಅನಂತ ಕಾಲದವರೆಗೆ ಕೈಬಿಡದೆ ಪ್ರೀತಿಸುತ್ತೇನೆ” ಎಂದು ಹೇಳುವುದೇನು? ಹೆಂಡತಿ ಸತ್ತ ಕೆಲ ದಿನಗಳಲ್ಲಿಯೆ ಅದೆಲ್ಲವನ್ನೂ ಮರೆತು ಮತ್ತೊಬ್ಬಳನ್ನು ಮದುವೆಯಾಗುವುದೆಂದರೇನು? ನನ್ನ ಮನಸ್ಸಿಗೆ ಎರಡನೆಯ ಸಾರಿ ವಿವಾಹವಾಗುವುದು ವ್ಯಭಿಚಾರಕ್ಕಿಂತಲೂ ಭಯಂಕರವಾಗಿ ತೋರಿತು. ದ್ವಿತೀಯ ವಿವಾಹ ಎಷ್ಟು ಶಾಸ್ತ್ರಸಮ್ಮತವಾದರೂ ಪ್ರಥಮ ದ್ರೋಹ ಎಂದು ಕಂಡುಬಂದಿತು. ಸ್ತ್ರೀಯು ಗಂಡ ಸತ್ತರೆ ತಾನು ದೇವತೆಗಳಿಗಿತ್ತ ಭಾಷೆಯನ್ನು ಪಾಲಿಸುತ್ತಾಳೆ. ಆದರೆ ಪುರುಷನು ಆಕೆಗೆ ದ್ರೋಹವೆಸಗುತ್ತಾನೆ. ಪ್ರೇಮ ನಿಶ್ಚಲವೂ ಶಾಶ್ವತವೂ ಆಗಿರಬೇಕು. ಸತಿ ಮಡಿದೊಡನೆ ಮತ್ತೊಬ್ಬಳನ್ನು ಬಯಸುವ ಪ್ರೇಮ ನಿಃಸಂದೇಹವಾಗಿ ವೇಷಾಂತರ ಹೊಂದಿದ ಕಾಮ. ನಾನು ಆದರ್ಶ ಪತಿಯಾಗಿರುತ್ತೇನೆ. ಸ್ವರ್ಗದಲ್ಲಿ ಪುನಃ ನನ್ನ ರೋಹಿಣಿಯನ್ನು ಶುದ್ಧನಾಗಿಯೇ ಆಲಂಗಿಸುತ್ತೇನೆ. ನಾನು ನನ್ನ ಜೀವನವನ್ನೆಲ್ಲ ಲೋಕೋಪಕಾರಕ್ಕಾಗಿ ತೇದು ಬಿಡುತ್ತೇನೆ. ಕಾಮಿಯಲ್ಲ, ನಿಷ್ಕಾಮ ಪ್ರೇಮಿ ಎಂಬುದನ್ನು ಜಗತ್ತಿಗೆ ತೋರಿಸುತ್ತೇನೆ. ಹೀಗೆಂದು ನಿರ್ಧರಿಸಿ ನನಗಿದ್ದ ವಿರಾಮದಲ್ಲಿ ಬಹು ಭಾಗವನ್ನು ಪವಿತ್ರ ಗ್ರಂಥಪಠನೆಗೂ ಈಶ್ವರ ಧ್ಯಾನಕ್ಕೂ ಉಪಯೋಗಿಸುತ್ತ ಆದರ್ಶ ಸಾಧನೆಗೆ ಪ್ರಾರಂಭಮಾಡಿದೆ.

ಎಷ್ಟೋ ಜನರು ನಾನಾ ವಿಧವಾಗಿ ಪುನಃ ವಿವಾಹವಾಗುವಂತೆ ಉಪದೇಶ ಮಾಡಿದರು; ಉಪನ್ಯಾಸ ಮಾಡಿದರು. ಎಂತಹ ಯೋಗಿಗೂ ಬ್ರಹ್ಮಚರ್ಯ ದುಸ್ಸಾಧ್ಯ ಎಂದು ಬೋಧಿಸಿದರು. ನಾನು ಅದು ಸಾಧ್ಯವೆಂಬುದನ್ನು ತೋರಿಸಬಲ್ಲೆ ಎಂದು ಉತ್ತರವಿತ್ತೆ. ಪುನಃ ಮದುವೆಯಾದ ದೊಡ್ಡ ಮನುಷ್ಯರನ್ನು ನನ್ನ ಮುಂದೆ ಉದಾಹರಣೆಯಾಗಿ ಒಡ್ಡಿದರು. ನಾನು ಅವರನ್ನೆಲ್ಲ ಕ್ಷುದ್ರಜೀವಿಗಳು ಎಂದು ಹಳಿದುಬಿಟ್ಟೆ. ನನ್ನ ಕಣ್ಣಿಗೆ ಇತರ ಮಾನವರೆಲ್ಲರೂ ರಸಾತಲದಲ್ಲಿ ಹರಿದಾಡುವಂತೆ ತೋರಿದರು. ಸ್ವರ್ಗಪ್ರಾಂತದ ಸುನೀಲ ನಿರ್ಮಲ ಮೇಘಮಂಡಲದಲ್ಲಿ ನಾನೊಬ್ಬನೆ ಹಾರುತ್ತಿರುವನೆಂದು ತಿಳಿದು ಕೃತಜ್ಞತೆಯಿಂದ ಕಣ್ಣೀರು ತುಂಬಿ ಭಗವಂತನನ್ನು ವಂದಿಸಿದೆ. ಜೋಯಿಸರು ನನಗಿಟ್ಟ ಹೆಸರು ಸಾರ್ಥಕವಾಯಿತೆಂದು ಪುನಃ ಹಿಗ್ಗಿದೆ.

* * *

ಹೊಳೆದಳಿದ ಮಿಂಚು ಹಣತೆಯ ಸೊಡರನ್ನು ಹೊತ್ತಿಸಿದುದೊ ಎಂಬಂತೆ ರೋಹಿಣಿ ಒಂದು ಗಂಡು ಶಿಶುವನ್ನು ನನಗೆ ದಯಪಾಲಿಸಿದ್ದಳು. ಆ ಕೂಸಿಗೆ ನಾನು ರೋಹಿಣೀಕುಮಾರ ಎಂದೇ ಹೆಸರಿಟ್ಟೆನು. ಆ ಶಿಶು ಸೀತೆಯ ಲಾಲನೆ ಪಾಲನೆಯಿಂದ ಬೆಳೆಯುತ್ತಿತ್ತು.

ಸೀತೆ ರೋಹಿಣಿಯ ತಂಗಿ. ನಮ್ಮ ಅತ್ತೆಯವರು ಮೊಮ್ಮಗನನ್ನು ನೋಡಿಕೊಳ್ಳಲು ಆಕೆಯನ್ನು ನಮ್ಮ ಮನೆಯಲ್ಲಿಯೆ ಬಿಟ್ಟಿದ್ದರು. ಆಕೆಯೂ ಅಕ್ಕನ ಶಿಶುವನ್ನು ತನ್ನ ಪುಟ್ಟ ಹೃದಯದಲ್ಲಿ ತುಂಬಿ ತುಳುಕುತ್ತಿದ್ದ ಸಮಸ್ತ ಪ್ರೇಮದಿಂದಲೂ ಸಲಹುತ್ತಿದ್ದಳು. ಸೀತೆಯನ್ನು ಕಂಡಾಗಲೆಲ್ಲ ಕೃತಜ್ಞತೆಯಿಂದ ನನಗೆ ಕಣ್ಣೀರು ಬರುತ್ತಿತ್ತು. ಆಕೆ ನನ್ನೆದುರು ಬಂದು ಸ್ವಲ್ಪ ನಾಚಿಕೆಯಿಂದ “ಬಾವ, ಮುದ್ದಗೊಂದು ಗೊಂಬೆ ಬೇಕು. ಬಾವ, ಮುದ್ದಗೊಂದು ಕುಲಾವಿ ಬೇಕು” ಎಂದು ಶಿಶುವಿಗೆ ಬೇಕಾಗಿದ್ದ ಪದಾರ್ಥಗಳ ಪಟ್ಟಿಯನ್ನು ಹೇಳುತ್ತಾ ನಿಂತಿರಲು ನನ್ನ ಕಣ್ಣಿಗೆ ರೋಹಿಣಿಯೆ ನಿಂತಂತೆ ತೋರುತ್ತಿತ್ತು. ಸೀತೆಗೂ ರೋಹಿಣಿಗೂ ಅಷ್ಟೊಂದು ರೂಪಸಾದ್ಯಶ್ಯವಿತ್ತು.

ರೋಹಿಣಿಯ ಹಠಾತ್ತಾದ ಮರಣದಿಂದ ನನ್ನಲ್ಲಿ ಉದ್ರೇಕವಾಗಿದ್ದ ಆದರ್ಶಪ್ರಿಯತೆ ಬರಬರುತ್ತ ಮಾಸತೊಡಗಿತು. ದಿನ ಕಳೆದಹಾಗೆಲ್ಲ ಸೀತೆ ಮೆಲ್ಲಗೆ ರೋಹಿಣಿಯಾಗುತ್ತಿದ್ದಳು. ಆಕೆಯನ್ನು ಕಂಡಾಗ ನನ್ನ ಹೃದಯ ತಲ್ಲಣಿಸಿದರೆ ಅದು ಕೃತಜ್ಞತೆಯಿಂದ ಹಾಗಾಗುವುದೆಂದು ತಿಳಿಯುತ್ತಿದ್ದೆ. ಕಡೆ ಕಡೆಗೆ ನನ್ನ ಅಂತರ್ಭಾವ ಪ್ರಸ್ಫುಟವಾಗತೊಡಗಿತು. ನನ್ನಲ್ಲಿ ಹೋರಾಟ ಪ್ರಾರಂಭವಾಯಿತು.-ಪರಲೋಕ ಇರುವುದೋ ಇಲ್ಲವೊ? ಯಾರಿಗೆ ಗೊತ್ತು? ಸತ್ತಮೇಲೆ ಆತ್ಮ ಶೂನ್ಯವಾಗಬಾರದೇಕೆ? ಹಾಗಾದರೆ ನನ್ನ ಕಠಿಣ ವ್ರತ ನಿಷ್ಪ್ರಯೋಜಕವಾದುದಲ್ಲವೆ? ನನ್ನ ಆದರ್ಶ ಬರಿಯ ಭ್ರಮೆಯೋ ಏನೊ? ಇದೇ ಉಚ್ಚಾದರ್ಶವಾದ ಪಕ್ಷದಲ್ಲಿ ಲೋಕದಲ್ಲಿ ಕೋಟ್ಯನುಕೋಟಿ ಜನಗಳು ಬೇರೆಯ ಮಾರ್ಗದಲ್ಲೇಕೆ ಹೋಗುವರು? ಬಹುಶಃ ಅವರ ಸ್ವಭಾವಜನ್ಯ ಜ್ಞಾನ ನನ್ನ ವಿಚಾರ ಜನ್ಯ ಜ್ಞಾನಕ್ಕಿಂತಲೂ ಹೆಚ್ಚು ವಿವೇಕವಾಗಿರಬಾರದೇಕೆ? ನನ್ನದು ಸರಿಯಾದ ಮಾರ್ಗವಾದ ಪಕ್ಷದಲ್ಲಿ ಮನಸ್ಸಿನ ಈ ತುಮಲಯುದ್ಧವೇಕೆ? ನೀರಿನಲ್ಲಿರಬೇಕಾದ ಮೀನು ಭೂಮಿಯ ಪ್ರಾಣಿಗಳನ್ನು ನೋಡಿ ನೆಲದ ಮೇಲೆ ಓಡಾಡುವುದೇ ನೀರಿನಲ್ಲಿ ಈಜುವುದಕ್ಕಿಂತ ಉತ್ತಮವಾದರ್ಶವೆಂದು ತಿಳಿದು ಮೇಲೆ ನೆಗೆದರೆ ಆತ್ಮಹತ್ಯೆ ಮಾಡಿಕೊಂಡಂತೆ ಆಗುವುದಿಲ್ಲವೆ? ಅಸ್ವಾಭಾವಿಕವಾದುದೆಲ್ಲವೂ ಅಧರ್ಮವಲ್ಲವೆ? ನನ್ನ ಈಗಿನ ಸ್ಥಿತಿ ಅಸ್ವಾಭಾವಿಕವಾದುದಾಗಿರಬಾರದೇಕೆ? ಹೊಟ್ಟೆ ಹಸಿದುಕೊಂಡು ಭಗವಂತನನ್ನು ಧ್ಯಾನಿಸಿದರೆ ಅನ್ನವೇ ಭಗವಂತನಾಗಿಬಿಡುವ ಸಂಭವವಿಲ್ಲವೆ? ಹಾಗೆಯೆ ಉಗ್ರವಾದ ಇಂದ್ರಿಯ ದಮನದಿಂದ ಕಾಮನೇ ರಾಮನಾಗುವುದೂ ಸಾಧ್ಯವಲ್ಲವೆ?-ಹೀಗೆಂದು ವಿಚಾರ ಮಾಡುತ್ತ ಮಾಡುತ್ತ ದ್ವಿತೀಯ ವಿವಾಹ ಸ್ವಾಭಾವಿಕವೆಂದು ತೋರತೊಡಗಿತು. ಅಲ್ಲದೆ ಸೀತೆ ದಿನದಿನವೂ ಸುಂದರಿಯಾಗಲಾರಂಭಿಸಿದಳು. ರೋಹಿಣಿಯಂತೆಯೇ ತೋರಿದಳು. ಅವಳು ನನ್ನನ್ನೆ ಮೋಹಿಸಿದಂತೆಯೂ ತೋರಿತು. ಅಂತಹ ಚೆಲುವೆಯಾದ ಮೃದುಸ್ವಭಾವದ ಹುಡುಗಿ ಯಾವನಾದರೂ ಒಬ್ಬ ಕಠಿಣ ಅನಾಗರಿಕ ವ್ಯಕ್ತಿಗೆ ಲಭಿಸಿದರೆ ನಾನು ರೋಹಿಣಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೆ? ಸೀತೆಯ ಉಪಹಾರಕ್ಕೆ ಅಪಕಾರ ಮಾಡಿದಂತಾಗುವುದಿಲ್ಲವೆ? ರೋಹಿಣಿ ಜೀವದಿಂದಿದ್ದರೂ ಸೀತೆಯನ್ನು ಮದುವೆ ಮಾಡಿಕೊಳ್ಳಿ ಎಂದು ಅವಳೇ ಹೇಳುತ್ತಿರಲಿಲ್ಲವೆ? ಅಕ್ಕತಂಗಿಯರಿಗೆ ದೇಹ ಬೇರಾದರೂ ಆತ್ಮ ಒಂದಲ್ಲವೇ? ಎರಡನೆ ಮದುವೆ ಮಾಡಿಕೊಂಡರೆ ತಾನೆ ಏನು? ಆದರ್ಶಜೀವಿಯಾಗಿರಲಾಗುವುದಿಲ್ಲವೆ? ಹೀಗೆ ನನ್ನಲ್ಲಿ ಹೋರಾಟವಾಗಿ ನಾನು ಮುಳುಗಿದೆನು. ಸೀತೆಗೆ ಸೋತೆನು. ಆದರೆ ಸೀತೆಗಾಗಿಯೇ ಸೋತೆನೆಂದೂ, ಅಂತಹ ಸೋಲು ಮಹಾತ್ಯಾಗವಾದುದರಿಂದ ಆದರ್ಶ ಜೀವನಕ್ಕೆ ಕಳೆ ಕಟ್ಟಿತೆಂದೂ ಸಂತೋಷಿಸಿದೆ.

* * *

ನಮ್ಮ ಸಣ್ಣ ಹಳ್ಳಿ ಮಹಾ ವಾದ್ಯಘೋಷದಿಂದ ಅನುರಣಿತವಾಯಿತು. ದೂರದ ಊರುಗಳಿಂದ ಸುಭೂಷಿತವಾದ ಬಂಧುವೃಂದ ಮನೆಗೆ ಬಿಜಯ ಮಾಡಿತು. ತಳಿರು ತೋರಣಗಳು ಬಾಗಿಲು ಬಾಗಿಲುಗಳಲ್ಲಿ ಮರೆದುವು. ಕದಿನಿಗಳು ಗುಢೂಂ ಗುಢುಂ ಎಂದು ಶಬ್ದ ಮಾಡಿದುವು. ಸಂಭ್ರಮಿತರಾದ ಅತಿಥಿ ಅಭ್ಯಾಗತರ ಸಹಸ್ರ ಕಂಠ ತುಮಲುಧ್ವನಿ ವಿವಾಹೋತ್ಸವವನ್ನು ಮಹೋತ್ಸವವನ್ನಾಗಿ ಮಾಡಿತು. ನನ್ನ ದಿಬ್ಬಣ ಹೆಣ್ಣಿನ ಮನೆಗೆ ಉತ್ಸಾಹದಿಂದ ದಾಳಿಯಿಟ್ಟಿತು. ಮುಹೂರ್ತ ಸನ್ನಿಕಟವಾಯಿತು. ಧಾರೆಯೆರೆಯಲು ಜೋಯಿಸರು ನಿಂತರು. ನನ್ನ ಪಕ್ಕದಲ್ಲಿ ಸೀತೆಯೂ ನಿಂತಳು. ಸುಲಗ್ನ! ಸಾವಧಾನ! ಅಗ್ನಿಸಾಕ್ಷಿಯಾಗಿ! ವಾಯುಸಾಕ್ಷಿಯಾಗಿ! ಅಷ್ಟದಿಕ್ಪಾಲಕರು ಸಾಕ್ಷಿಯಾಗಿ! ಸೂರ್ಯಚಂದ್ರರು ಸಾಕ್ಷಿಯಾಗಿ! ತಿರುಪತಿ ವೆಂಕಟರಮಣ ಸಾಕ್ಷಿಯಾಗಿ! ಮಹರ್ಷಿಗಳು ಸಾಕ್ಷಿಯಾಗಿ! ಶಚೀದೇವಿ ಇಂದ್ರರು ಸಾಕ್ಷಿಯಾಗಿ! ಸರಸ್ವತಿ ಬ್ರಹ್ಮರು ಸಾಕ್ಷಿಯಾಗಿ! ಪಾರ್ವತೀ ಪರಮೇಶ್ವರರ ಸಾಕ್ಷಿಯಾಗಿ! ಸರ್ವ ತೀರ್ಥಗಳು ಸಾಕ್ಷಿಯಾಗಿ! ಎಂದು ಮೊದಲಾಗಿ ಪ್ರಾರಂಭವಾಯಿತು. ನಾನು ಹಿಂದೆ ರೋಹಿಣಿಯನ್ನು ಮದುವೆಯಾದಾಗಲೂ ಇವರೆಲ್ಲರೂ ಸಾಕ್ಷಿಯಾಗಿದ್ದರು. ದೇವತೆಗಳನ್ನು ಹೀಗೆ ಪದೇ ಪದೇ ಸಾಕ್ಷಿಗೆ ಕರೆಯುವುದೂ ಮಾನವರ ಸ್ವಭಾವಗಳಲ್ಲಿ ಒಂದು; ಅಂತೆಯೇ ಅವರು ಸಾಕ್ಷಿಯಾಗುವುದೂ ಸ್ವಾಭಾವಿಕ ಎಂದುಕೊಂಡೆ. ಆದರೆ ವಾದ್ಯಧ್ವನಿಯನ್ನು ಉತ್ತರಿಸಿ, ಜನರ ಕೋಲಾಹಲವನ್ನು ಸೀಳಿ, ಕದಿನಿಗಳ ಢಂಕಾರವನ್ನು ಮುಳುಗಿಸಿ, ಜೋಯಿಸರ ಮಂತ್ರಘೋಷವನ್ನೂ ಉಚ್ಚಳಿಸಿಕೊಂಡು, ನನ್ನ ಹೃದಯಾಂತರಾಳದಲ್ಲಿ ಅಂತರಾತ್ಮನ ವಾಣಿಯೊಂದು “ನೀನು ಮಿಥ್ಯಾಚಾರಿ! ನೀನು ಪತಿತ! ನೀನು ಮೋಸಗಾರ!” ಎಂದು ಮೊರೆಯಿತು. ಆಲಿಸಿದೆ; ಸ್ಪಷ್ಟವಾಗಿ ಕೇಳಿಸಿತು! ಆ ವಾಣಿ ಬರಬರುತ್ತ ಸಮೀಪವಾದಂತಾಗಿ ಗಟ್ಟಿಯಾಗಿ ಕೇಳಿಸತೊಡಗಿತು. ಅದು ನನ್ನ ರೋಹಿಣಿಯ ವಾಣಿಯಂತೆಯೇ ಇತ್ತು! ಅಧೀರನಾದೆ! ಮೈ ಬೆವರಿತು! ಜನರ ಸಂದಣಿಯಿಂದ ಹಾಗಾಗುವುದೆಂದು ಯೋಚಿಸಲು ಬಹಳ ಪ್ರಯತ್ನಪಟ್ಟೆ. ನಾನೋದಿದ ಮನಃಶಾಸ್ತ್ರದ ಸಹಾಯದಿಂದ ಆ ವಾಣಿಯನ್ನು ವಿವರಿಸಿ ಕೊಲ್ಲಲು ಪ್ರಯತ್ನಪಟ್ಟೆ. ನಾಸ್ತಿಕನಾಗಿ ರೋಹಿಣಿಯನ್ನು ಶೂನ್ಯ ಮಾಡಲು ಸಾಹಸ ಮಾಡಿದೆ. ಆದರೆ ಆಗಲಿಲ್ಲ. ಮೂರ್ಛೆಯಿಂದ ಬಿದ್ದು ಬಿಟ್ಟೆ! ಜನರ ಹಾಹಾಕಾರವೆದ್ದಿತು. ಗಾಳಿ ಬೀಸಿದರು. ತಣ್ಣೀರು ಎರಚಿದರು. ಬಹಳ ಹೊತ್ತಿನಮೇಲೆ ಎಚ್ಚರವಾಯಿತು. ಬಂಧುಗಳೆಲ್ಲರೂ ಜನರ ನೂಕುತಾಕಿನಿಂದ, ಆ ದಿನದ ಅಲ್ಪಾಹಾರದಿಂದ, ಸೆಕೆಯಿಂದ ನನಗೆ ಮೂರ್ಛೆ ಬಂದಿತು ಎಂದರು. ನಾನೂ ಹೌದು ಎಂದೆ.

ನನ್ನನ್ನು ಮಂಟಪದ ಹೊರಗೆ ತಂದರು. ಮೇಲೆ ಬಹು ದೂರದಲ್ಲಿ ಕೋಟಿ ನಕ್ಷತ್ರಗಣ ಸುಶೋಭಿತನಾಗಿದ್ದ ಸುಧಾರಕನ ಶೀತಲ ಸ್ವರ್ಣಮಂಡಲ ಅಪಾರ ಅನಂತ ಮೇಘರಿಕ್ತ ನೀಲಾಕಾಶಕದಲ್ಲಿ ಮುಗುಳುನಗೆ ಬೀರುತ್ತಿತ್ತು. ಆ ಮುಗುಳುನಗೆ ನನಗೆ ಬಹು ದೂರವಾಗಿಬಿಟ್ಟಿದ್ದ ನನ್ನ ಪ್ರಥಮಾದರ್ಶದ ಕನಿಕರದ ಕಿರುನಗೆಯಂತೆ ರಂಜಿಸಿತು. ನನ್ನ ಕಣ್ಣು ಹನಿ ತುಂಬಿತು. ಕಂಬನಿಗಳು ಮಾಲೆಮಾಲೆಯಾಗಿ ಕೆನ್ನೆಯ ಮೇಲೆ ಇಳಿದುವು. ಏಕೆಂದರೆ ಅಂದು ನಿಜವಾಗಿ ಮೃತಳಾದಳು ನನ್ನ ರೋಹಿಣಿ!