“ಸುಬ್ಬಾ! ಸುಬ್ಬಾ! ಏ ಸುಬ್ಬಾ!”

ಮಳೆಗಾಲ. ಕಾರಿರುಳು. ಕತ್ತಲು ಹೆಪ್ಪುಗಟ್ಟಿಕೊಂಡಿತ್ತು. ಜಗತ್ತೆಲ್ಲ ಮಸಿಯಲ್ಲಿ ಅಳಿಸಿಹೋದಂತಿತ್ತು. ತಡೆಯಿಲ್ಲದೆ ಜಡಿಮಳೆ ಜೋ ಎಂದು ಬೀಳುತ್ತಿತ್ತು. ಬಿರುಸಾದ ಗಾಳಿ ಒಂದೊಂದು ಸಾರಿ ಭರದಿಂದ ಬೀಸುವುದು; ಒಮ್ಮೆ ಮುಗ್ಗಿರಿಸಿ ನಿಲ್ಲುವುದು.

ಮಲೆನಾಡಿನ ಕಾಡುತುಂಬಿದ ಮಲೆಗಳು ಆ ಕಾರ್ಗತ್ತಲೆಯಲ್ಲಿ ರೂಪು ರೇಖೆ ಕೂಡ ಕಾಣದಂತೆ ನಿಃಶೇಷವಾಗಿ ಮಾಯವಾಗಿದ್ದವು. ಬಿರುಗಾಳಿ ಬೀಸಿದಾಗ ಅರಣ್ಯವೆಲ್ಲ ಹೋ ಎಂದು ಗರ್ಜಿಸಿದಂತಾಗುವುದು. ಗಾಳಿ ಮೃದುವಾದಾಗ ಕಾಡಿನ ಮರಗಳ ಮೇಲೆಯೂ ಮನೆಯ ಮುಂದಿನ ಅಡಕೆ ಬಾಳೆಯ ತೋಟದ ಮೇಲೆಯೂ ಮನೆಗೆ ಹೊಂದಿಸಿದ ಹಂಚುಗಳ ಮೇಲೆಯೂ ತೋರಹನಿಗಳು ಬಿದ್ದು ಬಿದ್ದು ಚಟ್‌ಪಟ್, ಟಣ್ ಟಿಣ್, ಪಟ್ ಚಟ್‌, ಬರ್ರ್ ಸರ್ರ್ ಎಂದು ನಾನಾ ವಿಧವಾಗಿ ವಿಷಣ್ಣವಾಗಿ ರವ ಮಾಡುವುವು. ಆ ಮಳೆಗಾಳಿಗಳ ಚಿಟಿಮಿಟಿಯ ನಡುವೆ ಸಾವಿರಾರು ಕಪ್ಪೆಗಳು ಹತ್ತು ದಿಕ್ಕುಗಳಿಂದಲೂ ವಟಗುಟ್ಟುತ್ತ ತಲೆ ಚಿಟ್ಟುಹಿಡಿಸುತ್ತಿದ್ದುವು. ಅವುಗಳ ಜೊತೆಗೆ ಕೆಲವು ನಿಶಾಚರ ವನ್ಯಕ್ರಿಮಿಗಳು ಮರದ ಪೊಟರೆಗಳಲ್ಲಿ ಕುಳಿತು ಕರ್ಕಶವಾಗಿ ಕೀರುತ್ತಿದ್ದುವು. ಮನೆಯ ಬಳಿ ಇದ್ದ ತೆಂಗಿನ ಮರಗಳಲ್ಲಿ ಗರಿಗಳು ಗಾಳಿಗೆ ಚಿರಮರ್ಮರ ನಾದಗೈದು ಸದ್ದಿಗೆ ಸದ್ದನ್ನು ಪೇರಿಸುತ್ತಿದ್ದುವು. ಆಕಾಶದಲ್ಲಿ ಮುಗಿಲು ಕವಿದು ಕುರುಡುಗತ್ತಲೆ ತುಂಬಿತ್ತು. ಒಂದೊಂದು ಸಾರಿ ಇರುಳಿನ ಗುಟ್ಟನ್ನು ತಿಸಿಯಲೋಸುಗ ಹಗಲು ಇಣುಕಿತೋ ಎಂಬಂತೆ ಬಳ್ಳಿಮಿಂಚು ಮುಗಿಲುಗಳ ಸಂದಿಯಲ್ಲಿ ನಾಗರಹಾವಿನ ನಾಲಗೆಯಂತೆ ಚುರುಚುರುಗುಟ್ಟಿ ಹೊಳೆದು ಕಣ್ಮರೆಯಾಗುತ್ತಿತ್ತು. ಜಗತ್ತು ನಾದಮಯ, ತಿಮಿರಮಯ, ವರ್ಷ ಮಯವಾಗಿತ್ತು. ಮನೆಯ ಸುತ್ತಲೂ ನೀರ್ಗಾಲುವೆಗಳೂ ತೊರೆಗಳೂ ಕೆರಳಿದ ಸಿಂಹಗಳಂತೆ ಭೋರ್ಗರೆದು ಹರಿಯುತ್ತಿದ್ದುವು. ಗುಡುಗು ದಿಗಂತದಿಂದ ದಿಗಂತದವರೆಗೆ ಉರುಳುತ್ತಿತ್ತು. ಆ ಮಳೆ, ಆ ಗಾಳಿ, ಆ ನಿರಂತರ ನಾದ, ಆ ಕಾರ್ಗಾಲದ ಚಳಿ ಇವುಗಳಲ್ಲಿ ಮನೆಯೊಳಗೆ ಬೆಚ್ಚಗೆ ಮಲಗಿಕೊಳ್ಳುವ ಯಾರಿಗೆ ತಾನೆ ನಿದ್ದೆ ಬರುವುದಿಲ್ಲ? ಮನೆಯಲ್ಲಿ ಎಲ್ಲರೂ ಗಾಢನಿದ್ರೆಯಲ್ಲಿದ್ದರು. ಹೀಗಿರಲು ಒಂದು ಸಾರಿ ಗಾಳಿ ಭಯಂಕರವಾಗಿ ಬೀಸಿತು; ಮಳೆ ಭಯಂಕರವಾಗಿ ಬಿತ್ತು; ಮಿಂಚು ಭಯಂಕರವಾಗಿ ಮಿಂಚಿತು; ಕೂಡಲೆ ಭಯಂಕರ ಭಯಾನಕವಾಗಿ ಸಿಡಿಲೆರಗಿತು. ಬ್ರಹ್ಮಾಂಡವೇ ಸಿಡಿಲೆರಗಿತು. ಗೌಡರಿಗೆ ಧಿಗಿಲ್ಲೆಂದು ಎಚ್ಚರವಾಯಿತು.

“ಸುಬ್ಬಾ! ಸುಬ್ಬಾ! ಏ ಸುಬ್ಬಾ!” ಎಂದು ಕೂಗಿ ಕರೆದರು.

ಸುಬ್ಬನಿಗೆ ಎಚ್ಚರವಾಗಲಿಲ್ಲ. ಅವನು ಕೆಳಜಗುಲಿಯ ಒಂದು ಮೂಲೆಯಲ್ಲಿ ಯಾರೋ ದಾನ ಮಾಡಿದ್ದ ಎರಡು ಮೂರು ಚಿಂದಿ ಕಂಬಳಿಗಳನ್ನು ಬಲವಾಗಿ ಸುತ್ತಿಕೊಂಡು ಹೆದೆಯೇರಿಸಿದ ಬಿಲ್ಲಿನಂತೆ ಬಾಗಿ ಬಿದ್ದಿದ್ದನು. ಬಹಳ ಚಿಕ್ಕವನಾದ ಅವನು ಆ ದಿನವೆಲ್ಲಾ ಗದ್ದೆಯಲ್ಲಿ ದೊಡ್ಡವರೊಡನೆ ಕೆಲಸಮಾಡಿ ದಣಿದಿದ್ದನು. ಅನಾಥರಿಗೆ ಪರಮಜನನಿಯಾದ ನಿದ್ರಾದೇವಿಯ ಮಡಿಲಲ್ಲಿ ಆ ಪರದೇಶಿ ಬಾಲಕನು ಮರವಟ್ಟು ಬಿದ್ದಿದ್ದನು.

ಗೌಡರಿಗೆ ರೇಗಿತು. ಎರಡು ಮೂರು ಸಲ ಕೂಗಿದರು. ಆ ಮಳೆಯ ಗಲಭೆಯಲ್ಲಿ ಅವರ ಧ್ವನಿ ಅವರಿಗೇ ಕೇಳಿಸುವಂತಿರಲಿಲ್ಲ. ಆದರೂ ರೇಗಿದರು. ಹಾಸಿಗೆಯಿಂದೆದ್ದು ಒಂದು ಬೆತ್ತ ತೆಗೆದುಕೊಂಡು ಮೇಲುಜಗಲಿಯಿಂದ ಕೆಳಗಿಳಿದರು.

ಗೌಡರು ಮನೆಯ ಯಜಮಾನರು, ಶ್ರೀಮಂತರು. ಆ ಗ್ರಾಮಕ್ಕೆಲ್ಲಾ ಒಡೆಯರು. ಕಠೋರ ಸ್ವಭಾವದವರು. ಅವರಿಗೆ ವಯಸ್ಸು ಅರವತ್ತರ ಮೇಲಾಗಿತ್ತು. ಮೂರು ಮದುವೆಗಳಾಗಿದ್ದುವು. ನಾಲ್ಕೈದು ಮನೆತನಗಳಿಗೆ ಹೆಚ್ಚು ಬಡ್ಡಿಯ ಮೇಲೆ ಸಾಲ ಕೊಟ್ಟು ಅವುಗಳನ್ನು ಹಾಳು ಮಾಡಿದ್ದರು. ಅವರನ್ನು ಕಂಡರೆ ಎಲ್ಲರಿಗೂ ಹುಲಿಯನ್ನು ಕಂಡಂತೆ ಭೀತಿ. ಗೌಡರು ಆ ಭೀತಿಯನ್ನು ತಮಗೆ ತೋರಿಸುವ ಗೌರವವೆಂದು ತಿಳಿದುಕೊಂಡಿದ್ದರು. ದಿನವೂ ಬ್ರಾಂದಿ ಕುಡಿಯದೆ ಅವರಿಗೆ ನಿದ್ದೆ ಬರುತ್ತಿರಲಿಲ್ಲ. ಆದರೆ ನಿಯಮ ನಿಷ್ಠೆಗಳಿಗೇನೂ ಕಡಿಮೆಯಿರಲಿಲ್ಲ. ಮೈ ತುಂಬಾ ಬೇಕಾದಷ್ಟು ನಾಮದ ಪಟ್ಟೆ ಹಾಕಿಕೊಳ್ಳುವರು. ನಿತ್ಯವೂ ಶಿವಪೂಜೆ ಮಾಡುವರು. ಅವರು ತಮ್ಮ ಕೋಣೆಯೊಳಗೆ ಕುಳಿತು ಬ್ರಾಂದಿ ಕುಡಿಯುವಾಗ, ಅದನ್ನು ಶೀಸೆಯಿಂದ ಗ್ಲಾಸಿಗೆ ಹಾಕುತ್ತಾ, ಹೊರಗಿನವರು ತಾನು ದೇವರ ಧ್ಯಾನದಲ್ಲಿರುವೆನೆಂದು ತಿಳಿದುಕೊಳ್ಳಲಿ ಎಂದೂ, ಅವರಿಗೆ ಶೀಸೆಯ ಮುಚ್ಚಳ ತೆಗೆಯುವ ಸದ್ದೂ ಬ್ರಾಂದಿ ಹೊಯ್ಯುವ ಸದ್ದೂ ಕೇಳಿಸಬಾರದೆಂದೂ, “ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ” ಎಂದು ಗಟ್ಟಿಯಾಗಿ ರಾಗದಿಂದ ಹೇಳುವರು. ಮಳೆಗಾಲದಲ್ಲಂತೂ ಬಹಳ ಹೆಚ್ಚಾಗಿ “ಹರಿನಾರಾಯಣ” ಮಾಡುತ್ತಿದ್ದರು.

ಸುಬ್ಬ ಎಂಟು ಹತ್ತು ವರ್ಷದ ಹುಡುಗ. ಅವನ ತಂದೆ ರಂಗನು ಗೌಡರ ಒಕ್ಕಲಾಗಿದ್ದನು. ಸುಬ್ಬನ ತಾಯಿ ಮಗನನ್ನು ಹೆತ್ತ ಎರಡು ವರ್ಷಗಳಲ್ಲಿಯೆ ತೀರಿಹೋಗಿದ್ದಳು. ರಂಗನು ಮತ್ತೊಂದು ಮದುವೆ ಮಾಡಿಕೊಳ್ಳಬೇಕೆಂದು ಬಹಳ ಪ್ರಯತ್ನಪಟ್ಟನು. ಹೆಣ್ಣೂ ಕೂಡ ಗೊತ್ತಾಯಿತು. ಆದರೆ ಅದಕ್ಕೆ ಮುನ್ನೂರು ರೂಪಾಯಿ ತೆರ ಕೊಡಬೇಕೆಂದು ಹೆಣ್ಣಿನವರು ಕೇಳಿದರು. ಬಡ ರಂಗನು ಒಡೆಯರಾದ ಗೌಡರ ಹತ್ತಿರ ಸಾಲ ಕೇಳಿದನು. ಗೌಡರು ಆಗಾಗಲೇ ರಂಗನ ಮೇಲೆ ಇದ್ದ ಮುನ್ನೂರು ರೂಪಾಯಿಗಳ ಸಾಲವನ್ನು ತೋರಿಸಿ ಇನ್ನು ಒಂದು ಕಾಸನ್ನೂ ಕೊಡುವುದಕ್ಕಾಗುವುದಿಲ್ಲ ಎಂದರು. ಹೀಗಾಗಿ ರಂಗನ ಮದುವೆ ನಿಂತಿತು. ಕೆಲ ದಿನಗಳಲ್ಲಿಯೆ ರಂಗನಿಗೆ ರೇಷ್ಮೆ ಖಾಯಿಲೆ ಬಂದು ತೀರಿಹೋದನು. ಗೌಡರು ತಮ್ಮ ಸಾಲಕ್ಕಾಗಿ ಅವನ ಮಗ ಸುಬ್ಬನನ್ನು ಮನೆಯಲ್ಲಿ ಜೀತದಾಳನ್ನಾಗಿ ಮಾಡಿ ಇಟ್ಟುಕೊಂಡು ಅಗಸರು ಕತ್ತೆಗಳ ಮೇಲೆ ಹೊರೆ ಹೊರುವಂತೆ ಆ ಬಾಲಕನ ಮೇಲೆ ಕೆಲಸಗಳನ್ನು ಹೇರತೊಡಗಿದರು. ಸುಬ್ಬನ ಕೈಲಿ ಆಗಲಿ ಆಗದೆ ಹೋಗಲಿ ಕೆಲಸ ಮಾಡಲೇಬೇಕಿತ್ತು. ಗೌಡರೂ ಹುಡುಗನಿಗೆ ಬುದ್ಧಿ ಬರಲಿ ಎಂದು ಆಗಾಗ ಹೊಡೆಯುತ್ತಿದ್ದರು. ಸುಬ್ಬನು ದಿನದಿನವೂ ಕೃಶನಾಗುತ್ತಿದ್ದನು. ಅವನೆಲ್ಲಿಯಾದರೂ ಜ್ವರ ಬಂದು ಮಲಗಿಕೊಂಡರೆ ಗೌಡರು ಎರಡು ಗುದ್ದು ಹೇರಿ ಕೆಲಸಕ್ಕೆ ದಬ್ಬುತ್ತಿದ್ದರು. ಆ ಹುಡುಗನು ಜ್ವರದ ಚಳಿಯಲ್ಲಿ ನಡುಗುತ್ತಾ ಕೆಲಸಕ್ಕೆ ಹೋಗುವನು. ಕೆಲವು ಸಾರಿ ದೊಡ್ಡವರಾದ ಇತರ ಆಳುಗಳು ಸುಬ್ಬನ ಮೇಲಣ ಕನಿಕರದಿಂದ ಅವನನ್ನು ಮಲಗಿಕೊಳ್ಳುವಂತೆ ಹೇಳಿ ತಾವೇ ಅವನ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಗೌಡರು ಬರುವ ಸೂಚನೆ ತಿಳಿದ ಕೂಡಲೆ ಸುಬ್ಬನನ್ನು ಎಚ್ಚರಿಸುವರು. ಅವನು ಜ್ವರದ ಭರದಲ್ಲಿ ತತ್ತರಿಸುತ್ತ ಎದ್ದು ಕೆಲಸಕ್ಕೆ ಕೈಹಾಕುತ್ತಿದ್ದನು. ಹೀಗೆ ಅನಾಥನು ದಿನದಿನವೂ ಸುಡುಗಾಡಿಗೆ ಸಮೀಪವಾಗುತ್ತಿದ್ದನು.

ಗೌಡರು ಕರೆದಾಗ ಸುಬ್ಬ ನಿದ್ದೆ ಮಾಡುತ್ತಿದ್ದುದೇನೊ ಹೌದು. ಆದರೆ ಅನಾರೋಗ್ಯವಿರುವವರಿಗೆ ಕನಸಿಲ್ಲದ ನಿದ್ದೆ ಬರುವುದು ದುರ್ಲಭ. ಸುಬ್ಬ ಏನೇನೋ ಕನಸು ಕಾಣುತ್ತಿದ್ದನು. ಜಾಗ್ರದವಸ್ಥೆಯಲ್ಲಿ ತನಗಿಲ್ಲದ ಸುಖಗಳನ್ನು ಕಂಡುಂಡು ಸವಿಯುತ್ತಿದ್ದನು. ನನಸಿನಲ್ಲಿ ಲಭಿಸದ ಮತ್ತು ಕೈಗೂಡದ ಬಯಕೆಗಳು ಕನಸಿನಲ್ಲಿ ಕೈಗೂಡುವುದು ಸ್ವಭಾವ. ಸುಬ್ಬನು ಕನಸಿನಲ್ಲಿ ತಂದೆ ತಾಯಿಯರೊಡನೆ ಒಂದು ಸುಂದರವಾದ ಸೌಧದಲ್ಲಿ ನಲಿಯುತ್ತಿದ್ದನು. ಅಲ್ಲಿ ಬೇಕಾದಷ್ಟು ಉಡುಗೆ ತೊಡುಗೆಗಳನ್ನು ಧರಿಸಿದ್ದನು. ಅಲ್ಲಿ ಅವನು ಕೆಲಸ ಮಾಡಬೇಕಾಗಿಯೆ ಇರಲಿಲ್ಲ. ಕೈಗೆ ಕಾಲಿಗೆ ಆಳುಗಳಿದ್ದರು. ಜೊತೆಗೆ ಆಡಲು ಹುಡುಗರಿದ್ದರು. ವಿಧವಿಧವಾದ ಭಕ್ಷ್ಯಭೋಜ್ಯಗಳು ಅವನು ತಿಂದು ತಿಂದು ಮಿಗುವಷ್ಟಿದ್ದುವು. ಗೌಡರು ಬೆತ್ತದಿಂದ ರಪ್ಪ ರಪ್ಪನೆ ಹೊಡೆದಾಗ ಅವನು ಚೀರಿ ಹಾರಿಬಿದ್ದನು. ಕಣ್ದೆರೆದು ನೋಡಿದರೆ ಲಾಟೀನಿನ ಬೆಳಕಿನಲ್ಲಿ ಗೌಡರ ರುದ್ರಮೂರ್ತಿ! ಸುಬ್ಬ “ಅಯ್ಯೋ! ದಮ್ಮಯ್ಯ!” ಎಂದು ಸುತ್ತಿದ್ದ ಕಂಬಳಿಯನ್ನು ಬೇಗಬೇಗನೆ ಬಿಚ್ಚಿಕೊಂಡು ಎದ್ದನು.

ಗೌಡರು “ಏನೋ ಕಳ್ಳಮಗನೇ, ಕರೆದರೆ ಸುಳ್ಳುನಿದ್ದೆ ಮಾಡಿಕೊಂಡು ಮಲಗಿದ್ದೀಯಾ?” ಎಂದು ಮತ್ತೊಂದು ಏಟು ಹೊಡೆದರು. ಸುಬ್ಬ ಒರಲುತ್ತಾ ಕಣ್ಣೀರು ಸುರಿಸುತ್ತಾ ನಿಂತನು. ಅವನಿಗೆ ನೋವಲ್ಲದೆ ಬೇರೆ ಯಾವುದೂ ಸರಿಯಾಗಿ ಅರ್ಥವಾಗಲೆ ಇಲ್ಲ.

ಗೌಡರು ಕಠೋರಧ್ವನಿಯಿಂದ “ಹೋಗೋ! ನಡಿಯೋ! ಗದ್ದೇಲಿ ಹಾಕಿದ್ದ ಕೂಣಿ ನೋಡಿಕೊಂಡು ಬಾರೊ” ಎಂದು ಮತ್ತೆ ಬೆತ್ತ ಎತ್ತಿದರು.

ಸುಬ್ಬ “ಹೋಗ್ತೀನಯ್ಯಾ” ಎಂದು ದೀರ್ಘವಾಗಿ ಕೂಗಿದನು.

ಮಳೆಗಾಲದಲ್ಲಿ ಹತ್ತುಮೀನಿನ (ಮೀನು ಹತ್ತುವ) ಸಮಯದಲ್ಲಿ ರೈತರು ಕೂಣಿ ಹಾಕಿ ಮೀನು ಹಿಡಿಯುತ್ತಾರೆ. ದಿನಕ್ಕೆ ಏಳೆಂಟು ಬುಟ್ಟಿಗಿಂತಲೂ ಹೆಚ್ಚಾಗಿ ಮೀನು ಸಿಕ್ಕುತ್ತವೆ. ಆ ದಿನ ಹಗಲಿನಲ್ಲಿಯೆ ಗೌಡರು ನಾಲ್ಕೈದು ಬುಟ್ಟಿ ಮೀನು ಸಿಕ್ಕಿದ್ದನ್ನು ನೋಡಿದ್ದರು. ರಾತ್ರಿ ಕೂಣಿ ತುಂಬಿ ಮೀನು ಉಕ್ಕಿ ಹೋಗುತ್ತವೆ ಅಥವಾ ನೀರಿನ ಪ್ರವಾಹದಲ್ಲಿ ಕೂಣಿ ಕೊಚ್ಚಿಕೊಂಡು ಹೋಗುತ್ತದೆ ಎಂದು ಅವರಿಗೆ ಭಯ. ಅದಕ್ಕಾಗಿಯೆ ನಡುರಾತ್ರಿಯ ಆ ಪುಟ್ಟ ಬಾಲಕನನ್ನು ಹೊಡೆದು ಎಬ್ಬಿಸಿದ್ದು.

ಸುಬ್ಬನು ದೊಡ್ಡದೊಂದು ಮೀನು ಬುಟ್ಟಿ ಹೊತ್ತುಕೊಂಡು, ಕೈಯಲ್ಲಿ ಲಾಟೀನು ಹಿಡಿದುಕೊಂಡು, ಕಂಬಳಿಕೊಪ್ಪೆ ಹಾಕಿಕೊಂಡು ಹೊರಟನು. ಗೌಡರು ಮರಳಿ ಹೋಗಿ ಬೆಚ್ಚಗೆ ಮಲಗಿ ನಿದ್ದೆ ಮಾಡಿದರು.

ಮಳೆ ಸುರಿಯುತ್ತಲೆ ಇತ್ತು. ಗಾಳಿ ಮಿಂಚು ಗುಡುಗುಗಳೂ ನಿಂತಿರಲಿಲ್ಲ. ಕತ್ತಲೆ ಕ್ರೂರವಾಗಿತ್ತು. ಹಾದಿಯ ತುಂಬಾ ಕೆಸರು. ಸುಬ್ಬನು ಕಾಲಿಟ್ಟಂತೆಲ್ಲಾ ಪಿಚಪಿಚನೆ ಹಾರುತಿತ್ತು. ಲಾಟೀನಿಗೆ ಕೆಸರಾದರೆ ಗೌಡರು ಮತ್ತೆ ಎಲ್ಲಿ ಹೊಡೆಯುತ್ತಾರೆಯೊ ಎಂದು ಹೆದರಿ ಅದನ್ನು ಶಕ್ತಿಮೀರಿ ಎತ್ತಿ ಹಿಡಿದುಕೊಂಡು ನಡೆದನು. ಕೂಣಿ ಇದ್ದ ಸ್ಥಳ ಎಂಟು ಹತ್ತು ಫಲಾಂಗುಗಳಷ್ಟು ದೂರವಾಗಿತ್ತು. ಸುಬ್ಬ ನಡೆದನು. ರುದ್ರಪ್ರಕೃತಿಯ ಹೊರತು ಮತ್ತೊಂದು ಜೀವಜಂತು ಹೊರಗಿರಲಿಲ್ಲ. ಹೋಗುತ್ತಾ ಸುಬ್ಬನು ಒಂದು ಗದ್ದೆ ಅಂಚಿನಿಂದ ಮತ್ತೊಂದು ಗದ್ದೆ ಅಂಚಿಗೆ ಹಾರುತ್ತಿದ್ದಾಗ ಕೆಸರಿನಲ್ಲಿ ಕಾಲು ಜಾರಿ ಬಿದ್ದು ಲಾಟೀನು ಒಡೆದುಹೋಯಿತು. ದೀಪ ನಂದಿತು. ಸುಬ್ಬ ಕಗ್ಗತ್ತಲಲ್ಲಿ ಮುಳುಗಿ ಕರಗಿಯೆ ಹೋದಂತಾಯಿತು. ಗದ್ದೆಯಂಚಿನ ಮೇಲೆ ಕುಳಿತು ಅತ್ತನು, ಲಾಟೀನು ಒಡೆದುದಕ್ಕಾಗಿ. ಅತ್ತು ಅತ್ತು, ಮನೆಗೆ ಮೀನು ತಾರದೆ ಹಿಂದಿರುಗಿದರೆ ಏನು ಗತಿಯಾಗುವುದೊ ಎಂದು ಹೆದರಿ, ಮತ್ತೆ ಆ ಕತ್ತಲಲ್ಲಿಯೆ ಆ ಮಳೆಗಾಳಿಗಳ ಪ್ರಚಂಡಪ್ರಲಯದಲ್ಲಿ ಮುಂಬರಿದನು. ಮಿಂಚಿನ ಬೆಳಕಿನಲ್ಲಿ ಊಹೆಯ ಮೇಲೆಯೆ ನಡೆದು ಕೂಣಿಯಿದ್ದ ತಾವನ್ನು ಕಂಡುಹಿಡಿಯಲೆಂದು ಬೀಳುತ್ತ ಏಳುತ್ತ ಅಳುತ್ತ ಹೋದನು. ಆ ನಿಷ್ಕರುಣ ಪ್ರಕೃತಿಯ ಭಯಂಕರ ಸನ್ನಿವೇಶದಲ್ಲಿ ಬಾಲಕನು ಕಡಲಲ್ಲಿ ಹುಲ್ಲು ಎಸಳಿನಂತೆ ತೇಲಿಹೋದನು.

ಚಳಿ ಹೆಚ್ಚಾಯಿತು. ಕಂಬಳಿಯನ್ನು ಮತ್ತಷ್ಟು ಬಲವಾಗಿ ಸುತ್ತಿಕೊಂಡನು. ನಡುನಡುವೆ ಏನನ್ನೊ ಕಂಡವನಂತೆ ಬೆಚ್ಚಿ ನಡುಗಿದನು. ಕಡೆಗೆ ಕೂಣಿಯ ಬಳಿ ಸೇರಿದನು.

ಸುಬ್ಬನು ಕೂಣಿಯ ಬಳಿ ಸೇರಿ ಕೈಯಲ್ಲಿದ್ದ ಬುಟ್ಟಿಯನ್ನು ಕೆಳಗಿಟ್ಟು ಬಹು ಪ್ರಯಾಸದಿಂದ ಕೂಣಿಯನ್ನೆತ್ತಿದನು. ಕೂಣಿ ಮೀನಿನಿಂದ ತುಂಬಿ ಹೋಗಿತ್ತು. ಒಳಗೆ ಮೀನು ಚೊಳ್ ಚೊಳ್ ಎಂದು ಸದ್ದು ಮಾಡುತ್ತಿದ್ದುವು. ಕೆಲವು ಕೂಣಿಯ ಒಳಪಕ್ಕಕ್ಕೆ ಹಾರಿ ಬಿಡಿದು ಬೀಳುತ್ತಿದ್ದುವು. ಸುಬ್ಬ ಕೂಣಿಯನ್ನು ಎತ್ತಿ ಅಂಚಿನಮೇಲೆ ಇಟ್ಟನು. ಇಟ್ಟು ಪನ್ನೆ

[1]ಯನ್ನುಈಚೆಗೆ ತೆಗೆದನು.

ಒಡನೆಯೆ ಮೀನು ತಿನ್ನಲೆಂದು ಬಂದು ಅದರೊಳಗಿದ್ದ ಒಂದು ಕೃಷ್ಣಸರ್ಪ ಬುಸ್ಸೆಂದು ಚಿಮ್ಮಿ ಸುಬ್ಬನನ್ನು ಕಚ್ಚಿ ಓಡಿಹೋಯಿತು. ಅಷ್ಟು ಹೊತ್ತಿಗೆ ಗಾಳಿ ಮಳೆ ಸ್ವಲ್ಪ ಶಮನವಾಗಿದ್ದುವು. ಸುಬ್ಬ ಕಿಟ್ಟನೆ ಚೀರಿದನು. ವಿಷವೇರಿ ಕೆಳಗೆ ಬಿದ್ದನು. ನೀರು ಭೋಎಂದು ಹರಿಯುತ್ತಿತ್ತು. ಬೆಳೆದ ಪೈರಿನ ಮೇಲೆ ಆಗತಾನೆ ಕೋಪವಾರಿದ ಗಾಳಿ ಸುಯ್ಯೆಂದು ಬೀಸಿತ್ತು. ಮುಗಿಲು ಮಿಂಚುತಿತ್ತು. ಜಗಚ್ಚಕ್ರವು ಆ ಕ್ಷುದ್ರ ವಿಷಯವನ್ನು ಗಣನೆಗೆ ತಾರದೆ ತಿರುಗುತ್ತಲೆ ಇತ್ತು.

ಬೆಳಗಾದಮೇಲೆ ಗೌಡರು ಸುಬ್ಬ ಬಾರದಿದ್ದನ್ನು ನೋಡಿ ಬಹಳ ರೇಗಿದರು. ರಾತ್ರಿ ಕೂಣಿಗೆ ಹೋಗದೆ ಮನೆಯಲ್ಲಿಯೆ ಎಲ್ಲಿಯೊ ಅಡಗಿರಬೇಕೆಂದು ಕೈಯಲ್ಲಿ ದೊಣ್ಣೆ ಹಿಡಿದು ಹುಡುಕಿದರು. ಎಲ್ಲಿಯೂ ಸಿಕ್ಕಲಿಲ್ಲ. ಮತ್ತೂ ರೇಗಿದರು. ಯಾರ ಮನೆಗೋ ಹೋಗಿ ಮಲಗಿರಬೇಕು ಎಂದು ಸಿಡಿಲಿದರು. ಕಡೆಗೆ ತಾವೇ ಒಬ್ಬ ಆಳನ್ನು ಜೊತೆಗೆ ಕರೆದುಕೊಂಡು ಅವನನ್ನು ಪತ್ತೆಹಚ್ಚಲು ಹೊರಟರು. ದಾರಿಯಲ್ಲಿ ಗದ್ದೆಯಂಚಿನ ಬಳಿ ಒಡೆದ ಲಾಟೀನು ಬಿದ್ದಿತ್ತು. ಅಲ್ಲಿಯೂ ರೇಗಿದರು. “ಅವನು ಸಿಕ್ಕಲಿ, ಎಲುಬು ಮುರಿಯುತ್ತೇನೆ!” ಎಂದು ಗರ್ಜಿಸಿದರು. ಮುಂದೆ ಮುಂದೆ ಹೋದರು. ಕೂಣಿ ಸಮೀಪವಾಯ್ತು! ದೂರದಿಂದಲೇ ಕೂಣಿ ಮುಗುಚಿಕೊಂಡು ಅಂಚಿನ ಮೇಲೆ ಬಿದ್ದಿದ್ದುದನ್ನು ಕಂಡು “ಅಯ್ಯೋ, ಹಾಳು ಬಡ್ಡೀಮಗ; ಮೀನು ಸಿಕ್ಕದಂತೆ ಮಾಡಿದ್ದಾನಲ್ಲಾ!” ಎಂದುಕೊಂಡರು. ಇನ್ನೂ ಹತ್ತಿರ ಹೋದರು. ಸೊಂಟದೆತ್ತರ ಬೆಳೆದ ಗದ್ದೆಯ ಕವಿಯ ನಡುವೆ ಕೆಸರು ಮೆತ್ತಿಕೊಂಡು ಸುಬ್ಬ ಬಿದ್ದಿದ್ದನು. ಗೌಡರಿಗೆ ಸ್ವಲ್ಪ ಗಾಬರಿಯಾಯಿತು. ಕರೆದರು. ಓಕೊಳ್ಳಲಿಲ್ಲ. ಏಳಲಿಲ್ಲ. ಅಲುಗಾಡಲಿಲ್ಲ. ಜೊತೆ ಬಂದಿದ್ದ ಆಳಿನ ಕೈಯಲ್ಲಿ ಎತ್ತಲು ಹೇಳಿದರು. ಅವನು ಹೋಗಿ ಎತ್ತಿದನು. ಹೆಣ ನಿಮಿರಿ ನಿಂತಿತ್ತು!

ಗೌಡರು ಬಹಳ ವ್ಯಸನಪಟ್ಟುಕೊಂಡು, “ಅಂತೂ ಮುನ್ನೂರು ರೂಪಾಯಿ ಮನೆಗೆ ಬಂತು!” ಎಂದು ನಿಡುಸುಯ್ದರು.


[1] ಪನ್ನೆ ಎಂದರೆ ಸೀಮೆಎಣ್ಣೆಯನ್ನು ಸೀಸಗೆ ಸುರಿಯಲು ಉಪಯೋಗಿಸುವ ‘ಬುದ್ಧಿವಂತ’ದಂತಹ ಒಂದು ಬಿದಿರಿನ ಕುಕ್ಕೆ. ಪನ್ನೆಯನ್ನು ಕೂಣಿಯಮೇಲೆ ಇಟ್ಟಿರುತ್ತಾರೆ.