ನನ್ನ ಪತಿ ವಿಷಮಶೀತಜ್ವರದಿಂದ ಹದಿನೈದು ದಿನಗಳು ಹಗಲೂ ಇರುಳೂ ನರಳಿದರು. ನಾನು ಮೊದಮೊದಲು ಪತಿಯೆದುರು ನಾಚಿಕೆಯಿಂದಿರುವುದು ನವವಧುವಿಗೆ ಭೂಷಣವೆಂದು ದೂರವಾಗಿಯೆ ಇದ್ದುಕೊಂಡು ಅವರಿಗೆ ಬೇಕಾದ ಅನ್ನಪಾನಾದಿ ಪಥ್ಯಗಳನ್ನು ಒದಗಿಸುತ್ತಿದ್ದೆ. ಕಡೆಗೆ ರೋಗ ಪ್ರಬಲವಾಗಲು ಉದ್ವೇಗ ನಾಚಿಗೆಯನ್ನು ತೊಡೆದುಬಿಟ್ಟಿತು. ಪತಿಯ ಬಳಿ ಕುಳಿತು ಶುಶ್ರೂಷೆ ಮಾಡಬೇಕೆಂದು ಎದೆ ತುಡಿಯತೊಡಗಿತು. ನಾನೇ ಅವರ ಪಕ್ಕದಲ್ಲಿದ್ದುಕೊಂಡು ಶುಶ್ರೂಷೆ ಮಾಡಿದರೆ ಅವರ ಕಾಯಿಲೆ ಬೇಗ ಗುಣವಾಗುವುದೆಂದು ಎದೆಯಾರೆ ಭಾವಿಸಿ ನಂಬಿದೆ. ಒಂದೆರಡು ದಿನ ಒಬ್ಬಳೇ ಒಂದು ಮೂಲೆಯಲ್ಲಿ ಕುಳಿತುಕೊಂಡು ಅತ್ತು ಅತ್ತು ಈಶ್ವರನನ್ನು ಪ್ರಾರ್ಥಿಸಿದೆ. ಸ್ವಲ್ಪವೂ ವಂಚನೆಯಿಲ್ಲದೆ ದೃಢಭಕ್ತಿಯಿಂದ ಪ್ರಾರ್ಥಿಸಿದೆ. ಆದರೆ ಕಾಯಲೆ ಇನ್ನೂ ಉಗ್ರಸ್ಥಿತಿಗೇರಿತು.

ನಮ್ಮ ಭಾವನವರು ತಮ್ಮನ ಬಳಿಯೇ ಮೂರು ಹೊತ್ತೂ ಕುಳಿತು ಶುಶ್ರೂಷೆ ಮಾಡುತ್ತಿದ್ದರು. ನನ್ನಪತಿಯನ್ನು ನೋಡಲು ಬಂದ ಬಾಂಧವರಿಗೆ ಸಮಾಧಾನ ಹೇಳುತ್ತಿದ್ದರು. ಆದರೆ ಇತರರಾರೂ ಬಳಿಯಿಲ್ಲದಿದ್ದಾಗ ಅವರು ನನ್ನ ಪತಿಯ ತಲೆಯೆಡೆ ಮೌನವಾಗಿ ಕುಳಿತು ದೀರ್ಘವಾಗಿ ಚಿಂತಿಸುತ್ತಿದ್ದುದನ್ನು ನಾನು ಮರೆಯಲ್ಲಿ ನಿಂತು ನೋಡುತ್ತಿದ್ದೆ. ಆಗ ನನಗೆ ಬಹಳ ಭಯವಾಗುತ್ತಿತ್ತು.

ಒಂದು ದಿನ ಮಧ್ಯಾಹ್ನ; ನೆಂಟರೆಲ್ಲರೂ ಊಟಮಾಡಲು ಹೋಗಿದ್ದರು. ಆದರೆ ಭಾವನವರು ಮಾತ್ರ ರೋಗಿಯ ಬಳಿ ಕುಳಿತು ‘ಡಿಗ್ರಿ’ ಇಟ್ಟು ನೋಡುತ್ತಿದ್ದರು. ನೋಡಿ ಸ್ವಲ್ಪ ಸುಯ್ದರು. ನಾನು ದೂರ ಒಂದು ಮಂಡಿಗೆಯ ಮರೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದೆ. ಭಾವನವರು ಏನು ಯೋಚಿಸಿದರೋ, ನನ್ನನ್ನು ಹೆಸರು ಕೂಗಿ ಕರೆದರು.

ಅವರು ಎಂದೂ ನನ್ನೊಡನೆ ಮಾತಾಡಿರಲಿಲ್ಲ. ನನ್ನ ಹೆಸರನ್ನೂ ಕೂಗಿ ಕರೆದವರಲ್ಲ. ಆ ದಿನ ಕರೆದರು. ನಾನು ಕಣ್ಣೀರು ಒರಸಿಕೊಳ್ಳುತ್ತ ಅವರ ಬಳಿಗೆ ಹೋದೆ. ಅವರು “ಸ್ವಲ್ಪ ಇಲ್ಲೇ ಕುಳಿತುಕೊಂಡಿರಮ್ಮ, ನಾನೀಗ ಬರುತ್ತೇನೆ” ಎಂದು ಸ್ನಾನದ ಮನೆಗೆ ಹೋದರು. ಪತಿಯ ಬಳಿ ನಾನೊಬ್ಬಳೆ ಕುಳಿತಿದ್ದೆ. ಅಂಗಳದಲ್ಲಿ ಬಿಸಿಲು ರೌರವವಾಗಿತ್ತು.

ನಾನೇನೊ ಅವರ ಬಳಿ ಕುಳಿತೆ. ಆದರೆ ಅವರಿಗೆ ಹಿಂದಿನ ದಿನದಿಂದ ಮಾತೇ ನಿಂತುಹೋಗಿತ್ತು. ನಾನು ಕುಳಿತು ಅಳುತ್ತಿದ್ದೆ. ಆಗ ಅವರು ಮುಚ್ಚಿದ ಕಣ್ಣು ತೆರೆದು ನನ್ನ ಕಡೆ ದೀರ್ಘ ಕಾಲ ನೋಡಿದರು. ನನಗೆ ದುಃಖ ಇಮ್ಮಡಿಯಾಯಿತು. ಬಿಕ್ಕಿಬಿಕ್ಕಿ ಅಳುತ್ತ ಅವರನ್ನೇ ನೋಡುತ್ತಿದ್ದೆ. ಅವರ ಕಣ್ಣಿನಿಂದಲೂ ಎರಡು ಹನಿ ತುಳುಕಿ ಬಿದ್ದುವು. ಆಮೇಲೆ ನನ್ನನ್ನು ಸಂತವಿಸಲೆಂಬಂತೆ ಬಲಗೈಯನ್ನು ಎತ್ತಲಾರದೆ ಎತ್ತಿ ನನ್ನ ತೊಡೆಯ ಮೇಲಿಟ್ಟು, ಮತ್ತೆ ಹಿಂದಿನಂತೆ ಎವೆಯಿಕ್ಕದೆ ದೃಷ್ಟಿಸಿದರು. ಆ ದೃಷ್ಟಿ ದಿಗಂತಗಾಮಿಯಾಗಿತ್ತು. ಅದರಲ್ಲಿ ಅನಂತ ಪ್ರಶ್ನೆಯ ಪ್ರತಿಬಿಂಬವಿತ್ತು.

ಅಂತೂ ಅಂದಿನಿಂದ ಅವರ ಬಳಿಯಿದ್ದುಕೊಂಡೇ ಶುಶ್ರೂಷೆ ಮಾಡತೊಡಗಿದೆ. ಅದಕ್ಕಾಗಿ ಮನಸ್ಸಿನಲ್ಲಿಯೇ ನಮ್ಮ ಭಾವನವರನ್ನೂ ವಂದಿಸಿದೆ.

ಹದಿಮೂರನೆಯ ದಿನ ರಾತ್ರಿ ಕಾಯಿಲೆ ಜೋರಾಯಿತು. ಬಂದ ನೆಂಟರೆಲ್ಲ ಅಳತೊಡಗಿದರು. ಹುಡುಗಿಯಾದ ನಾನು ಎದೆಎದೆ ಬಡಿದುಕೊಂಡು ಅಳತೊಡಗಿದೆ. ಆದರೆ ನಮ್ಮ ಭಾವನವರು ನೀರವರಾಗಿ ಕುಳಿತಿದ್ದರು. ರೋಗಿಯ ಶುಶ್ರೂಷೆಯನ್ನು ಮಾತ್ರ ಎಂದಿನಂತೆ ಅನುದ್ವಿಗ್ನಮನಸ್ಕರಾಗಿ ಮಾಡುತ್ತಲೇ ಇದ್ದರು.

ನಮ್ಮ ಹಳ್ಳಿ ಬೆಟ್ಟಕಾಡುಗಳ ನಡುವೆ ಇರುವ ಒಂದೇ ಮನೆ. ಆಸ್ಪತ್ರೆಯಿರುವುದು ನಾಲ್ಕೈದು ಮೈಲಿಗಳಾಚೆ. ಡಾಕ್ಟರನ್ನು ಕರೆತರಲು ಒಬ್ಬಾಳು ಹೋದನು. ರಾತ್ರಿ ಮೂರು ಗಂಟೆ ಹೊತ್ತಿಗೆ ಡಾಕ್ಟರು ಬಂದರು. ಅವರು ಬರಲು ನಮಗೆಲ್ಲ ಧೈರ್ಯವಾಯಿತು. ನೆಂಟರೆಲ್ಲ ಅಳುವುದನ್ನು ನಿಲ್ಲಿಸಿದರು. ನಾನೂ ‘ಮೆಲ್ಲನೆ’ ರೋದಿಸತೊಡಗಿದೆ. ಡಾಕ್ಟರು ರೋಗಿಯನ್ನು ಪರೀಕ್ಷೆ ಮಾಡಿ ನಮ್ಮ ಭಾವನವರೊಡನೆ ಇಂಗ್ಲಿಷಿನಲ್ಲಿ ಮೃದುಸ್ವರದಿಂದ ಏನನ್ನೊ ಹೇಳಿದರು. ನನಗಿದ್ದ ಭೀತಿ ಮತ್ತೂ ಹೆಚ್ಚಿತು. ಕಡೆಗೆ ಸೂಜಿ ಮದ್ದು ಕೊಟ್ಟು, ಭಾವನವರೊಡನೆ ಇಂಗ್ಲಿಷಿನಲ್ಲಿಯೆ ಮಾತಾಡಿ ಡಾಕ್ಟರು ಹೊರಟುಹೋದರು.

ಮರುದಿನ ರೋಗ ಇನ್ನೂ ವಿಷಮವಾಯಿತು. ಆ ದಿನವೆಲ್ಲಾ ನನಗೆ ಸೂಜಿಯ ಮೊನೆಯಮೇಲೆ ನಿಂತಂತಿತ್ತು. ಕಡೆಗೆ ಬೈಗಾಯಿತು. ಕತ್ತಲಾಯಿತು. ಕತ್ತಲೆಯೊಡನೆ ಭಯವೂ ರುದ್ರಾಕಾರವನ್ನು ತಾಳಿತು. ರಾತ್ರಿ ಪುನಃ ಡಾಕ್ಟರು ಬಂದರು. ಪತಿಯ ಬಳಿಯಲ್ಲಿಯೆ ಇದ್ದು ಬಹಳ ಮುತುವರ್ಜಿಯಿಂದ ಔಷಧಿ ಪ್ರಯೋಗ ಮಾಡುತ್ತಿದ್ದರು. ಅರ್ಧರಾತ್ರಿ ಕಳೆಯಿತು. ಕೆಲವರು ಮಲಗಿದರು. ಮತ್ತೆ ಕೆಲವರು ಹತಾಶರಾದಂತೆ ಕುಳಿತಿದ್ದರು. ನಾನು ಪತಿಯ ಪಾದದೆಡೆ ಕುಳಿತು “ಭಗವಂತ ನನ್ನ ತಾಳಿ ಕಾಪಾಡು” ಎಂದು ಅನನ್ಯಮನಸ್ಕಳಾಗಿ ಬೇಡುತ್ತಿದ್ದ. ಸೀಮೆ ಎಣ್ಣೆಯ ಲ್ಯಾಂಪಿನ ಕೆಂಬೆಳಕು ವಿಷಣ್ಣವಾಗಿ ಉರಿಯುತ್ತಿತ್ತು. ಭಾವನವರು ಮಂಡಿಗೆಗೆ ಒರಗಿಕೊಂಡು ಸುಮ್ಮನೆ ಕುಳಿತಿದ್ದರು.

ಸುಮಾರು ನಾಲ್ಕು ಗಂಟೆಯ ಹೊತ್ತಿನಲ್ಲಿ ಡಾಕ್ಟರು ನಿಟ್ಟುಸಿರು ಬಿಟ್ಟು ಮೇಲೆದ್ದು ನಿಂತರು. ನಮ್ಮ ಭಾವ ನನ್ನನ್ನು ಕರೆದು ‘ಬಾಯಿಗೆ ನೀರು ಬಿಡುವಂತೆ’ ಹೇಳಿದರು. ‘ನಾನು ಅಯ್ಯೋ ಎಂದು ಒರಲುತ್ತಾ ‘ಬಾಯಿಗೆ ನೀರು ಬಿಟ್ಟೆ’: ಭಾವನರೂ ‘ಬಾಯಿಗೆ ನೀರು ಬಿಟ್ಟರು.’ ನನ್ನ ಜೀವನ ಪ್ರದೀಪ ನಂದಿಹೋಯಿತು. ನಾನು ಪತಿಯ ಶವದ ಮೇಲೆ ಬಿದ್ದು ಬಿದ್ದು ಬಾಯಿಗೆ ಬಂದಂತೆ ಪ್ರಲಾಪಿಸುತ್ತಾ ಪಾದಗಳನ್ನು ಮುಟ್ಟಿ ಮುಟ್ಟಿ ನಮಸ್ಕರಿಸುತ್ತಾ, “ಅಯ್ಯೋ, ನನ್ನನ್ನು ಬಿಟ್ಟು ಹೋದಿರಾ!” ಎಂದು ಬಾಯಿ ಹುಯ್ದುಕೊಂಡೆ. ಬಂಧುಗಳೆಲ್ಲರೂ ಗೊಳೋ ಎಂದು ಅಳತೊಡಗಿದರು. ಭಾವನವರು ಮಾತ್ರ ಎಂದಿನಂತೆ ಮೌನವಾಗಿದ್ದರು. ಅವರ ಮುಖದಲ್ಲಿ ಒಂದು ವಿಧವಾದ ವಜ್ರ ಶಾಂತಿ ಮಂಡಿಸಿತ್ತು. ಸೀಮೆಎಣ್ಣೆಯ ದೀಪ ಮಾತ್ರ ತನ್ನ ಪ್ರೇತಜ್ಯೋತಿಯನ್ನು ಎಂದಿನಂತೆ ಬೀರುತ್ತಲೇ ಇತ್ತು.

ಮರುದಿನದಲ್ಲಿ ಶ್ಮಶಾನದಲ್ಲಿ ನನ್ನ ಕೈಬಳೆ ಒಡೆದರು. ನನ್ನ ಮೈಮೇಲಿದ್ದ ಆಭರಣಗಳನ್ನೆಲ್ಲ ತೆಗೆದರು. ಮಂಗಲಸೂತ್ರ ಬಿಚ್ಚಿದರು. ನನ್ನ ಕಣ್ಣೆದುರಿನಲ್ಲಿಯೆ ಅಗ್ನಿದೇವನು ನನ್ನ ಪ್ರಿಯ ಪತಿಯ ದೇಹವನ್ನು ತನ್ನ ಭೀಮ ಜ್ವಾಲಾಜಿಹ್ವೆಗಳಿಂದ ನುಂಗಿಕೊಂಡನು.

ನಾನು ಮಾವನ ಮನೆಗೆ ಬಂದ ಒಂದು ವರ್ಷದಲ್ಲಿಯೇ ನನ್ನ ಸಕಲ ಸೌಭಾಗ್ಯವೂ ಬರಿದಾಯಿತು. ನನಗಾಗ ಹದಿನೈದು ತುಂಬಿತ್ತು….

ನಾನು ಒಂದು ಕತ್ತಲೆ ಕೋಣೆಯಲ್ಲಿ ಕುಳಿತು ಅಳತೊಡಗಿದೆ. ಜನರು ಬಂದು ಎಷ್ಟೆಷ್ಟೋ ಸಮಾಧಾನ ಹೇಳುತ್ತಿದ್ದರು. ಬಂಧುಗಳು ಬಂದು ಅಳುತ್ತಾ ‘ಅಳಬೇಡ’ ಎಂದು ನನಗೆ ಬೋಧಿಸುತ್ತಿದ್ದರು. ಮತ್ತೆ ಕೆಲವರು ತಮಗೆ ತಿಳಿದ ತತ್ತ್ವಗಳನ್ನು ಉಪದೇಶಿಸಿ, ನನ್ನ ದುಃಖವನ್ನು ಶಮನ ಮಾಡುವುದಕ್ಕೆ ಬದಲಾಗಿ ಉದ್ರೇಕಗೊಳಿಸಿ ಹೋಗುತ್ತಿದ್ದರು. ಹೀಗೆ ಕೆಲ ದಿನಗಳು ಕಳೆದವು. ಆದರೆ ನಮ್ಮ ಭಾವನವರು ಮಾತ್ರ ನನ್ನನ್ನು ಬಂದು ನೋಡಲೂ ಇಲ್ಲ; ಮಾತಾಡಿಸಲೂ ಇಲ್ಲ; ಅವರು ಎಂದಿನಂತೆ ಶಾಂತರಾಗಿದ್ದರು. ಅಲ್ಲದೆ ಸಂಜೆಯಾಗುತ್ತಲೂ ಅವರು ಜಗಲಿಯಮೇಲೆ ಕುಳಿತು ಭಗವದ್ಗೀತೆಯನ್ನು ಓದುತ್ತಿದ್ದುದು ನನಗೆ ಕೇಳಿಸುತ್ತಿತ್ತು. ಅವರ ವಾಣಿಯನ್ನು ಕೇಳುತ್ತಲೆ ನನಗೆ ಸ್ವಲ್ಪ ಸಮಾಧಾನವಾಗುತ್ತಿತ್ತು. ಆದರೆ ಪತಿಯನ್ನು ಮುಂದೆ ಎದೆಂದಿಗೂ ನೋಡದಂತಾಯಿತಲ್ಲಾ ಎಂಬುದನ್ನು ನೆನೆದರೆ ಶೋಕ ಪ್ರಲಯವಾಗುತ್ತಿತ್ತು. ಅಂತೂ ಅಳುವುದೊಂದೇ ನನ್ನ ಉದ್ಯೋಗವಾಯಿತು.

ನಮ್ಮ ಭಾವನವರಿಗೆ ಆಗ ಇಪ್ಪತ್ತೇಳು ವಯಸ್ಸಾಗಿತ್ತು. ನನ್ನ ಪತಿಗಿಂತ ಅವರು ಮೂರು ವರ್ಷ ಹಿರಿಯವರಾಗಿದ್ದರು. ಅವರಿಗೆ ಮದುವೆಯಾಗಿರಲಿಲ್ಲ. ಅವರ ವಿಚಾರವಾಗಿ ನಾನಿನ್ನೂ ತವರು ಮನೆಯಲ್ಲಿದ್ದಾಗಲೇ ಏನೇನನ್ನೊ ಕೇಳಿದ್ದೆ. ಕೆಲವರು ಅವರ ತಲೆ ಕೆಟ್ಟುಹೋಗಿದೆ ಎನ್ನುವರು. ಕೆಲವರು ಅವರಿಗೆ ಒಂದು ತರಹ ಹುಚ್ಚು ಎಂದು ಕರುಣೆಯಿಂದ ಹೇಳುವರು. ಮತ್ತೆ ಕೆಲವರು ಅವರು ತರ್ಕಶಾಸ್ತ್ರವನ್ನು ಮಿತಿಮೀರಿ ಓದಿದ್ದರಿಂದ ಮೆದುಳು ಮಂದವಾಗಿದೆ ಎನ್ನುವರು. ಇನ್ನು ಕೆಲವರು ಶೂದ್ರರಾದರೂ ಉಪನಿಷತ್ತು, ವೇದ, ಭಗವದ್ಗೀತೆ ಇವುಗಳನ್ನು ಅಧ್ಯಯನ ಮಾಡಿದುದರಿಂದ ಪಾಪ ತಗುಲಿ ಹಾಗಾಗಿದೆ ಎಂದು ಉಪನ್ಯಾಸ ಮಾಡುವರು. ಎಲ್ಲಿಯೋ ಸ್ವಲ್ಪ ಜನರು ಮಾತ್ರ ಅವರು ಬಹಳ ದೊಡ್ಡವರು ದೈವಾಂಶದವರು ಎಂದು ಪ್ರಶಂಸೆ ಮಾಡುತ್ತಿದ್ದರು. ತರಳೆಯಾದ ನನಗೆ ಏನೂ ತಿಳಿಯುತ್ತಿರಲಿಲ್ಲ. ಆಗ ನಾನು ಓದುತ್ತಿದ್ದುದು ನಾಲ್ಕನೆಯ ತರಗತಿಯಲ್ಲಿ ಅಂತೂ ಅವರಲ್ಲಿ ಕುತೂಹಲವೇನೊ ಇರುತ್ತಿತ್ತು.

ಅವರು ಆಗಾಗ ನಮ್ಮಣ್ಣನವರೊಡನೆ ನಮ್ಮ ಮನೆಗೂ ಬರುತ್ತಿದ್ದರು. ಅವರನ್ನು ನೋಡಿದರೆ ನಮಗಿಂತಲೂ ಹೆಚ್ಚೇನು ಹೆಚ್ಚಾಗಿದ್ದಂತೆ ತೋರುತ್ತಿರಲಿಲ್ಲ. ಅಲ್ಲದೆ ನಾನು ನೋಡಿದ ಇತರರಾರಲ್ಲಿಯೂ ಅವರಲ್ಲಿದ್ದ ತೇಜಸ್ಸು ಇರಲಿಲ್ಲ. ಅವರ ಮಾತುಕತೆ ಅಂದರೆ ಅವರನ್ನು ಹುಚ್ಚರೆಂದು ಭಾವಿಸಿದ್ದವರಿಗೂ ಕೂಡ ಕೇಳಲು ಬಹಳ ಇಷ್ಟ. ಮಕ್ಕಳೊಡನೆ ಅವರು ಹಸುಮಕ್ಕಳಂತೆ ಆಡುವರು. ದೊಡ್ಡವರೊಡನೆ ಎಷ್ಟು ಗಹನವಾದ ತತ್ತ್ವಗಳನ್ನಾದರೂ ಸುಲಭವಾಗಿ ಮಾತಾಡುವರು. ಬಡವರೊಡನೆ ಅವರ ಕಷ್ಟಸುಖಗಳನ್ನು ಸಾವಧಾನವಾಗಿ ಕೇಳುವರು. ಆದ್ದರಿಂದಲೇ ಅವರಲ್ಲಿ ನನಗೆ ಮೊದಲಿಂದಲೂ ಉತ್ಸಾಹ.

ಅವರೂ ನನ್ನ ಪತಿಯೂ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಾಗಿದ್ದರು. ನನ್ನ ಪತಿಗೆ ಅಣ್ಣನೆಂದರೆ ಪ್ರಾಣ. ಊರಿನವರೆಲ್ಲ ಅಣ್ಣ ತಮ್ಮಂದಿರೆಂದರೆ ಹಾಗಿರಬೇಕು ಎಂದು ವಿದ್ಯಾಭ್ಯಾಸವನ್ನು ಪೂರೈಸಿಕೊಂಡು ಇಬ್ಬರೂ ಮನೆಗೆ ಹಿಂತಿರುಗಿ ಬಂದರು. ಮದುವೆಯ ವಿಚಾರ ಬಂದಾಗ ಭಾವನವರು ತಾವು ಮದುವೆಯಾಗುವುದೆ ಇಲ್ಲ ಎಂದರು. ಅವರ ಹುಚ್ಚಿನ ವಿಚಾರವಾಗಿ ಜನರಿಗಿದ್ದ ಅಲ್ಪಸ್ವಲ್ಪ ಸಂದೇಹವೂ ಸಂಪೂರ್ಣವಾಗಿ ನಿವಾರಣೆಯಾಯಿತು. ಅಣ್ಣನು ಮದುವೆಯಾಗುವುದೇ ಇಲ್ಲ ಎಂದಮೇಲೆ ತಮ್ಮನಿಗೆ ವಿವಾಹ ನಿಶ್ಚಯವಾಯಿತು.

ನನ್ನ ವಿವಾಹವಾದ ಎರಡು ತಿಂಗಳಲ್ಲಿಯೆ ಮಾವ ತೀರಿಹೋದರು. ಆಗಲೂ ಕೂಡ ನಮ್ಮ ಭಾವನವರು ಒಂದು ಸಾರಿಯಾದರೂ ಅತ್ತುದನ್ನಾಗಲಿ, ಕಣ್ಣೀರು ಮಿಡಿದುದನ್ನಾಗಲಿ ನಾನು ಕಾಣಲಿಲ್ಲ. ನನ್ನ ಪತಿಯಾದರೋ ಬಹಳ ಕಾಲ ರೋದಿಸಿದರು. ತಂದೆ ತೀರಿಕೊಂಡರೂ ಅಳದವನು ಕಲ್ಲೆದೆಯವನು ಎಂದು ಜನರು ನಮ್ಮ ಭಾವನವರನ್ನು ಹಳಿದರು. ನನಗೂ ಒಂದೊಂದು ಸಾರಿ ಹಾಗೇ ಅನ್ನಿಸುತ್ತಿತ್ತು. ಆದರೆ ಅವರನ್ನು ನೋಡಿದರಾಗಲಿ, ಅವರ ಮಾತುಗಳನ್ನು ಕೇಳಿದರಾಗಲಿ, ಜನರೊಡನೆ ಅವರು ನಡೆಸುತ್ತಿದ್ದ ವ್ಯವಹಾರದಲ್ಲಿಯಾಗಲಿ ಅವರು ಬಹಳ ಮೆಲ್ಲೆದೆಯವರೆಂದು ತೋರದೆ ಇರುತ್ತಿರಲಿಲ್ಲ. ಹಾಗೆ ನೋಡಿದರೆ ನನ್ನ ಪತಿಯೇ ಅವರಿಗಿಂತಲೂ ಎಷ್ಟೋ ಕಠಿಣ ಸ್ವಭಾವದವರೆಂದು ಹೇಳಬಹುದಾಗಿತ್ತು. ನಮ್ಮ ಭಾವನವರಿಗೆ ನನ್ನ ಪತಿಯಲ್ಲಿ ಬಹಳ ಪ್ರೀತಿ; ಬಹಳ ಸಲುಗೆ; ಬಹಳ ಆದರ. ಸಾಧಾರಣವಾಗಿ ಅಣ್ಣತಮ್ಮಂದಿರಲ್ಲಿ ಆ ವಿಧವಾದ ಸ್ನೇಹವೇ ಅಪರೂಪ ಎಂದರೂ ತಪ್ಪಾಗದು. ನನ್ನ ಪತಿಗೆ ಅವರಲ್ಲಿ ಬಹಳ ಪೂಜ್ಯ ಬುದ್ದಿ. ಅವರಿಬ್ಬರೂ ಮನೆಯ ಮಹಡಿಯ ಮೇಲೆ ಕುಳಿತು ಕಾವ್ಯ, ತತ್ತ್ವ, ರಾಜಕೀಯ ಇತ್ಯಾದಿ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದಾಗ ಮರೆಯಲ್ಲಿ ನಿಂತು ಆಲಿಸುವುದೆಂದರೆ ನನಗೊಂದು ಹಬ್ಬವಾಗಿತ್ತು. ಹಾಸ್ಯದಲ್ಲಿಯೂ ನಮ್ಮ ಭಾವನವರು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಅವರಿದ್ದರೆ ಮನೆಯೆಲ್ಲ ಜೀವದಿಂದ ತುಂಬಿತುಳುಕುವುದು.

ನಮ್ಮ ಭಾವನವರಿಗೆ ವೈರಾಗ್ಯ, ದೇವರಲ್ಲಿ ಬಹಳ ಭಕ್ತಿ ಎಂದು ಕೇಳಿದ್ದೆ. ಅವರನ್ನು ನೋಡಿದರೆ ಇತರ ಸಾಧಾರಣ ನವಯುವಕರಂತೆ ತೋರುತ್ತಿದ್ದರು. ಅವರು ಒಂದು ದಿನವಾದರೂ ದೇವರ ಪೂಜೆ ಮಾಡಿದುದನ್ನು ನಾನು ನೋಡಲಿಲ್ಲ. ಮಡಿಗಿಡಿ ಒಂದನ್ನೂ ಆಚರಿಸುತ್ತಿರಲಿಲ್ಲ. ಕಡೆಗೆ ಜಾತಿಪದ್ಧತಿಯಂತೆ ನಾಮವನ್ನೂ ಕೂಡ ಹಾಕಿಕೊಳ್ಳುತ್ತಿರಲಿಲ್ಲ. ಅಲ್ಲದೆ ಕ್ರಾಪು ಬೇರೆ ಬಿಟ್ಟಿದ್ದರು. ದಿನವೂ ಅದನ್ನು ಬಹಳ ಚೆನ್ನಾಗಿ ಬಾಚಿಕೊಳ್ಳುವರು. ಮುಂಗುರುಳು ಸುರುಳಿಸುರಳಿಯಾಗಿ ಕೆನ್ನೆ ಹಣೆಗಳ ಮೇಲೆ ನಲಿದಾಡುವುದನ್ನು ನಾನು ಎಷ್ಟೋ ಸಾರಿ ನೋಡಿ ಆನಂದ ಪಡುತ್ತಿದ್ದೆ. ಉಡುಗೆಯಲ್ಲಿಯೂ ವೈರಾಗ್ಯದ ಚಿಹ್ನೆ ಸ್ವಲ್ಪವೂ ತೋರುತ್ತಿರಲಿಲ್ಲ. ಅವರು ಬೆಲೆಯುಳ್ಳ ಬಟ್ಟೆಗಳನ್ನೇನೂ ಧರಿಸುತ್ತಿರಲಿಲ್ಲ. ನಿಜ. ಆದರೆ ಅವರುಡುಗೆಯ ಸರಳತೆ ಶರತ್ಕಾಲದ ಬೆಳ್ಮುಗಿಲಿನ ನಡುವೆ ಬೆಳಗುವ ತಾರಾನಾಥನ ಸರಳತೆಯಂತೆ ಮಧುರಮನೋಜ್ಞವಾಗಿರುತ್ತಿತ್ತು. ಸಾಲದ್ದಕ್ಕೆ ಬೇರೆ ಕೆಲವು ಸಾರಿ ನಾಸ್ತಿಕರಂತೆ ಮಾತಾಡುವರು. ಬ್ರಹ್ಮ, ವಿಷ್ಣು, ಮಹೇಶ್ವರ ಇವರನ್ನೆಲ್ಲ ಹಾಸ್ಯ ಮಾಡುವರು. ಸ್ವರ್ಗ ನರಕಗಳನ್ನು ಹೀಯಾಳಿಸಿ ಅವುಗಳಿಲ್ಲವೆಂದು ಹೇಳುವರು. ಅಂತೂ ನಮ್ಮ ಭಾವನವರು ನಮಗೆಲ್ಲ ಒಂದು ದೊಡ್ಡ ಸಮಸ್ಯೆಯಾಗಿದ್ದರು. ನನ್ನ ಪತಿಯೊಬ್ಬರಿಗೆ ಮಾತ್ರ ಅವರು ಅರ್ಥವಾಗುತ್ತಿದ್ದರೆಂದು ತೋರುತ್ತದೆ.

ಮನೆಗೆ ಸ್ವಲ್ಪ ದೂರದಲ್ಲಿ ಒಂದು ಎತ್ತರವಾದ ಸ್ಥಳವಿದೆ. ಸುತ್ತಲೂ ಕಾಡುಗಳಿವೆ. ನಡುವೆ ದೊಡ್ಡ ಬಂಡೆ. ಕೂತುಕೊಳ್ಳಲು ಬಹಳ ಸುಖಕರವಾಗಿದೆ. ಅಲ್ಲಿಗೆ ನನ್ನ ಪತಿಯೂ ಭಾವನವರೂ ಎಷ್ಟೋ ಸಾರಿ ಹೋಗುತ್ತಿದ್ದರು. ಇನ್ನೆಷ್ಟೋ ಸಾರಿ ಭಾವನವರೊಬ್ಬರೇ ಅಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರೆಂದು ಕಂಡವರು ಹೇಳುತ್ತಿದ್ದರು. ಅಂತೂ ಅವರ ಕಣ್ಣಿನ ಕಾಂತಿ, ಅವರ ಮುಖದ ತೇಜಸ್ಸು ಇವುಗಳೇನೋ ನನಗೆ ಅನ್ಯಾದೃಶ್ಯವಾಗಿದ್ದುವು. ಒಂದು ಇಂಪಾದ ಕೀರ್ತನೆಯಂತೆ ನನಗವರು ಮನೋಹರವಾಗಿದ್ದರು; ಪವಿತ್ರವಾಗಿದ್ದರು. ನನ್ನ ಪತಿಯಲ್ಲಿ ನನಗೆಷ್ಟು ಪ್ರೇಮವಿತ್ತೋ ನಮ್ಮ ಭಾವನವರಲ್ಲಿ ನನಗಷ್ಟೇ ಭಕ್ತಿಯಿತ್ತು.

* * *

ಪತಿಯನ್ನು ಕಳೆದುಕೊಂಡ ನಾನು ಮೂಲೆ ಹಿಡಿದು ಅಳತೊಡಗಿದೆ. ಯಾರು ಏನು ಹೇಳಿದರೂ ನನ್ನ ದುಃಖ ಶಮನವಾಗಲಿಲ್ಲ. ಒಂದು ದಿನ ನಮ್ಮ ಅತ್ತೆಯವರು ಭಾವನವರ ಬಳಿ ಹೋಗಿ “ನೀನಾದರೂ ಹೋಗಿ ಒಂದು ಮಾತು ಹೇಳಬಾರದೆ? ಆ ಗೋಳನ್ನು ನಾನು ನೋಡಲಾರೆ” ಎಂದರಂತೆ.

ತಾಯಿಯ ಅಪ್ಪಣೆಯಂತೆ ಭಾವನವರು ನಾನಿದ್ದ ಕೋಣೆಗೆ ಬಂದರು. ಆಗ ಅಲ್ಲಿ ನಾನೊಬ್ಬಳೆ ಇದ್ದೆ. ಅವರು ಒಳಗೆ ಬಂದಾಗ ಏನೊ ಒಂದು ಪ್ರಶಾಂತಜ್ಯೋತಿ ಪ್ರವೇಶಿಸಿದಂತಾಯ್ತು. ನಾನು ಅಳುವುದನ್ನು ಸ್ವಲ್ಪ ಕಡಿಮೆಮಾಡಿ ಎದ್ದುನಿಂತೆ. ಅವರೂ ನಿಂತುಕೊಂಡೆ ಮಾತಾಡಿದರು. ವಾಣಿ ಗಂಭೀರವಾಗಿತ್ತು.

“ಅಮ್ಮಾ, ನಿನ್ನ ಪತಿ ನನಗೆ ತಮ್ಮನಲ್ಲವೆ? ನನಗೆ ದುಃಖವಿಲ್ಲವೆ? ನಮ್ಮ ಕಣ್ಣಿಗೆ ಮರೆಯಾದ ಮಾತ್ರಕ್ಕೆ ಅವನು ಇಲ್ಲವೆಂದುಕೊಂಡೆಯಾ? ನಾವು ಆತನ ದೇಹವನ್ನು ಮಾತ್ರ ಪ್ರೀತಿಸುತ್ತಿದ್ದೆವೇ? ಹಾಗದರೆ, ದೇಹದ ಪ್ರೀತಿ ದೇಹದೊಡನೆ ಏಕೆ ಹೋಗಲಿಲ್ಲ? ಅವನಿನ್ನೂ ಇದ್ದಾನೆ, ನಾನು ಬಲ್ಲೆ; ನೀನೂ ತಿಳಿಯಬಲ್ಲೆ. ಶೋಕವಿರುವುದು ಪ್ರದರ್ಶನಕ್ಕಾಗಿಯೆ? ನೀನೇ ಹೇಳಮ್ಮ. ಇಂದಲ್ಲ ನಾಳೆ ನಾವೆಲ್ಲರೂ ಅವನು ಹೋದಲ್ಲಿಗೇ ಹೋಗಬೇಕಷ್ಟೆ? ಸುಮ್ಮನೆ ಅತ್ತರೇನು ಫಲ? ಆತನಿಗೆ ಸಂತೋಷವಾಗುವಂತೆ ಬಾಳಿದರೆ ಆತನು ನಿನಗೆ ದೊರಕದೆ ಹೋದಾನೆ?” ಎಂದು ಮೊದಲಾಗಿ ಮಾತಾಡಿದರು. ಆ ವಾಣಿ ನನ್ನ ಭಾಗಕ್ಕೆ ಸ್ವರ್ಗದಿಂದಿಳಿದು ಬಂದಂತಿತ್ತು. ನಾನು ಸುಮ್ಮನೆ ನಿಂತುಕೊಂಡೆ. ಭಾವನವರು ಹಾಗೆಯೆ ಹಿಂದಿರುಗಿ ಹೊರಟುಹೋದರು.

* * *

ಕಾಲದ ಹೊನಲು ಎಡೆಬಿಡದೆ ಮುಂಬರಿಯಿತು. ಅದರ ವಾಹಿನಿಯಲ್ಲಿ ಎಷ್ಟೆಷ್ಟೋ ಜೀವನ ಘಟನೆಗಳು ತೇಲಿಹೋದುವು. ಬರಬರುತ್ತ ಪತಿಯ ಮರಣವೂ ದೂರದ ಕನಸಾಯಿತು. ನಾನು ಭಾವನವರಲ್ಲಿ ಗುರುಭಾವವನ್ನಿಟ್ಟು ಶಾಂತಿಲಾಭ ಪಡೆಯತೊಡಗಿದೆ. ನನಗೆ ಓದಲು ಸುಲಭವಾದ ಪುಸ್ತಕಗಳನ್ನು ಕೊಟ್ಟು ನನ್ನ ಮನಸ್ಸು ಹಗಲುಕನಸುಗಳಲ್ಲಿ ತೊಳಲದಂತೆ ಮಾಡಿದರು. ನನ್ನಲ್ಲಿ ಬಹಳ ವಿಶ್ವಾಸ ತೋರಿ ಆಗಾಗ ನನ್ನೊಡನೆ ಒಂದೆರಡು ಮಾತುಕತೆ ಆಡುತ್ತಿದ್ದರು. ನಾನೂ ಅವರೊಡನೆ ಸಲುಗೆಯಿಂದ ವರ್ತಿಸತೊಡಗಿದೆ. ಅವರು ಹಾಡುತ್ತಿದ್ದರೆ ಕುಳಿತು ಕೇಳುತ್ತಿದ್ದೆ. ಅವರು ಕಾವ್ಯಗಳನ್ನು ಓದುತ್ತಿದ್ದರೆ “ಸಾವಿತ್ರಿ, ಸೀತೆ ಮೊದಲಾದವರ ವಿಚಾರವಾಗಿ ಓದಿ” ಎಂದು ಕೇಳುತ್ತಿದ್ದೆ. ಅನೇಕ ಸಾರಿ ದೇವರ, ಆತ್ಮ, ಜನ್ಮಾಂತರ, ಕರ್ಮ, ನೀತಿ, ಧರ್ಮ ಇಂತಹ ಗಹನ ವಿಷಯಗಳನ್ನು ನನ್ನ ಗ್ರಾಮ್ಯ ಬುದ್ಧಿಗೆ ಅಂಟುವಂತೆ ಸಾವಧಾನದಿಂದ ತಿಳಿಸುತ್ತಿದ್ದರು. ನಾನು ಏನನ್ನಾದರೂ ಓದುತ್ತಾ ಅರ್ಥವಾಗದಿದ್ದರೆ ಅವರನ್ನು ಕೇಳಿ ಸಂಶಯ ಪರಿಹಾರ ಮಾಡಿಕೊಳ್ಳುತ್ತಿದ್ದೆ. ಅವರೊಡನೆಯಲ್ಲದೆ ಇನ್ನಾರೊಡನೆಯಾದರೂ ನಾನು ಹಾಗೆ ವರ್ತಿಸಿದ್ದರೆ ಅಪವಾದಕ್ಕೀಡಾಗದೆ ಇರುತ್ತಿರಲಿಲ್ಲ. ಆದರೆ ಆ ಸೂರ್ಯನಲ್ಲಿ ಕಳಂಕವನ್ನಾರೋಪಿಸಲು ಯಾರಿಗೆ ತಾನೆ ಧೈರ್ಯ?

ಹೀಗಿರುತ್ತಿರಲು ಒಂದು ದಿನ ಒಂದು ಸಂಗತಿ ನಡೆಯಿತು. ನನಗಾಗ ವಯಸ್ಸು ಹತ್ತೊಂಬತ್ತಾಗಿತ್ತು. ಭಾವನವರು ದಿನವೂ ಸಂಜೆಯ ಹೊತ್ತು ಎಲ್ಲಿಗೋ ಹೋಗಿ ಬಹಳ ಹೊತ್ತಾದ ಮೇಲೆ ಮನೆಗೆ ಬರುತ್ತಿದ್ದರು. ನನಗೆ ಅದನ್ನು ತಿಳಿಯಬೇಕೆಂದು ಕುತೂಹಲ ಹುಟ್ಟಿತು. ಅವರು ಹೊರಗೆ ಹೊರಡಲು ನಾನೂ ಅವರಿಗೆ ತಿಳಿಯದಂತೆ ಅವರನ್ನು ಹಿಂಬಾಲಿಸಿದೆ. ನಾನು ಮಾಡಿದ್ದು ತಪ್ಪು ಎಂದು ನನಗೀಗ ತಿಳಿಯುತ್ತದೆ. ಆದರೆ ಆಗ ಅದೊಂದು ಸಾಹಸಕಾರ್ಯವೆಂದು ಮಾತ್ರ ಹಾಗೆ ಮಾಡಿದೆ. ಭಾವನವರು ಬಾಯಲ್ಲಿ ಏನೇನೋ ಕವನಗಳನ್ನು ಹಾಡಿಕೊಳ್ಳುತ್ತಾ ಎಂದಿನಂತೆ ಕಲ್ಲುಗುಡ್ಡಕ್ಕೆ ಹೋಗಿ ಕುಳಿತುಕೊಂಡರು. ನಾನು ದೂರ ಮರದ ಮರೆಯಲ್ಲಿ ನಿಂತು ನೋಡುತ್ತಿದ್ದೆ. ಆಗತಾನೆ ಸೂರ್ಯನು ಕಡೆದ ಕೆಂಗೆಂಡದಂತೆ ಹೊಂಬೆಳಕನ್ನು ಚೆಲ್ಲುತ್ತ ಪರ್ವತಗಳ ಹಿಂದೆ ಮರೆಯಾಗುತ್ತಿದ್ದನು. ಅರಣ್ಯದ ಹಸುರು ಹೊಂಬಿಸಿಲಲ್ಲಿ ನಳನಳಿಸಿತ್ತು. ಹಕ್ಕಿಗಳು ಹಾಡುತ್ತ ಕೂಗುತ್ತ ಗೂಡು ಸೇರುತ್ತಿದ್ದವು. ನನ್ನ ಜೀವನದ ವಸಂತಮಾಸವೆ ಹೊರಗೆ ಪ್ರತಿಫಲಿಸಿದಂತಿತ್ತು. ನನ್ನ ಮೈಯಲ್ಲಿ ಮಿಂಚಿನ ಹೊಳೆ ಹರಿದಂತಾಯಿತು.

ಅವರು ಕುಳಿತು ಸುತ್ತಲೂ ನೋಡುತ್ತ ಮನೋಹರವಾಗಿ ಹಾಡಿದರು. ಆ ಸವಿದನಿ ನನ್ನದೆಯಲ್ಲಿ ಒಳಸಂಚುಗಳನ್ನು ನೆಯ್ಯತೊಡಗಿತು. ಆ ಹೊಂಬಿಸಿಲಲ್ಲಿ ಅವರ ಸುಂದರಮೂರ್ತಿ ಸುಂದರತರವಾಗಿ ಕಂಗೊಳಿಸಿತು. ಮುಖದ ಜ್ಯೋತಿ ಇಮ್ಮಡಿಯಾದಂತಿತ್ತು. ನೀಳವಾದ ಮುಂಗುರುಳಿನ ಕೇಶರಾಶಿ ಸಂಜೆಯ ಗಾಳಿಯಲ್ಲಿ ಎದೆಯನ್ನು ಕೆಣಕುವಂತೆ ನರ್ತಿಸುತ್ತಿತ್ತು. ಆ ದಿನ, ಆ ಮಂಗಲ ಸಂಧ್ಯೆಯ ಪಿಂಗಲ ಶೋಭೆಯಲ್ಲಿ, ಮರಗಳ ಮರೆಯಲ್ಲಿ ಕದ್ದುನಿಂತು ನೋಡುತ್ತಿದ್ದ ನನಗೆ ಅವರು ಆಗತಾನೆ ಅಗ್ನಿಸ್ನಾನ ಮಾಡಿಕೊಂಡು ಹೊರಗೆ ಬಂದ ದೇವಮೂರ್ತಿಯಂತೆ ರಾರಾಜಿಸಿದರು. ನನ್ನ ಮನಸ್ಸು ಅವರ ಸೌಂದರ್ಯಕ್ಕೆ ಸೋತು ಮುಗ್ಧವಾಯಿತು. ಅವರಲ್ಲಿ ಅದುವರೆಗೆ ನನಗಿದ್ದ ಭಕ್ತಿ ಛದ್ಮವೇಷದ ಪ್ರೇಮವೆಂದು ಭಾಸವಾಯಿತು. ನಾನು ಹೆದರಿ ನಡುಗಿದೆ. ಹಾಗೆಯೆ ಹಿಂದಿರುಗಿ ಏನೋ ಭಯಂಕರವಾದುದನ್ನು ಕಂಡು ಅದರಿಂದ ತಪ್ಪಿಸಿಕೊಂಡು ಓಡಿಬರುವಳಂತೆ ಮನೆಗೆ ಬಂದೆ. ಮನೆಗೆ ಬಂದು ನನ್ನ ಪತಿಯೂ ಭಾವನವರೂ ಇಬ್ಬರೂ ಇದ್ದ ಚಿತ್ರಪಟದೆದುರು ನಿಂತು ಕೈಮುಗಿದೆ. ಆ ದುರಾಸೆಯ ಪಿಶಾಚಿ ಸದ್ಯಕ್ಕೆ ತೊಲಗಿಹೋಯಿತು. ಇನ್ನು ಮೇಲೆ ಕದ್ದುನಿಂತು ಅವರನ್ನೆಂದಿಗೂ ನೋಡುವುದಿಲ್ಲ ಎಂದು ಆಣೆಯಿಟ್ಟುಕೊಂಡೆ.

ಕೆಲವು ದಿನಗಳಾದುವು. ಎಂದಿನಂತೆ ನಮ್ಮ ಜೀವನ ಸಾಗಿತು. ಆದರೆ ನನ್ನ ಮನಸ್ಸಿನಲ್ಲಿ ಮೊದಲು ಪ್ರಾರಂಭವಾದ ಕಳವಳ ಈಗ ಹೋರಾಟವಾದಂತೆ ತೋರಿತು. ಎಂದಿನಂತೆ ಅವರನ್ನು ಬಹಳ ಹೊತ್ತು ಕಣ್ಣೆತ್ತಿ ನೋಡಲಾರದೆಹೋದೆ. ಮಿಂಚಿನಂತೆ ಹೊಳೆಯುತ್ತಿದ್ದ ಅವರ ಕಣ್ಣುಗಳು ನನ್ನ ಕಣ್ಣುಗಳನ್ನು ಸಂಧಿಸಿದಾಗ ನನಗೇನೋ ಭಯವಾದಂತಾಗಿ ದೃಷ್ಟಿಯನ್ನು ಬೇರೆಯ ಕಡೆಗೆ ತಿರುಗಿಸಿಬಿಡುತ್ತಿದ್ದೆ. ಅವರು ಮಾತ್ರ ಎಂದಿನಂತೆ ಹಿಮಾಲಯ ಸದೃಶವಾದ ಗಾಂಭೀರ್ಯದಿಂದ ವರ್ತಿಸುತ್ತಿದ್ದರು. ಅದನ್ನು ನೋಡಿ ನನಗಿನ್ನೂ ಭಯವಾಗುತ್ತಿತ್ತು.

ಇನ್ನೊಂದು ದಿನ ಅವರು ಸಂಜೆಯ ಹೊತ್ತಿನಲ್ಲಿ ಕಲ್ಲುಗುಡ್ಡಕ್ಕೆ ಹೋಗಿದ್ದರು. ನಾನು ಮನೆಯಲ್ಲಿ ಕುಳಿತು ಏನೆನ್ನೊ ಓದುತ್ತಿದ್ದೆ. ಇದ್ದಕ್ಕಿದ್ದಹಾಗೆ ಹಿಂದೆ ನಡೆದ ಸಂಗತಿಯೆಲ್ಲ ಮತ್ತೆ ಜ್ಞಾಪಕಕ್ಕೆ ಬಂದಿತು. ಅವರ ಸುಂದರ ಮೂರ್ತಿ ನನ್ನ ಕಣ್ಣೆದುರು ನಲಿಯಿತು. ನಾನು ಭೀತಳಾದೆ. ಮತ್ತೆ ನನ್ನನ್ನು ನಾನೆ ಬೈದುಕೊಂಡು ಭೀತಿಯ ಪ್ರೇತವನ್ನು ಇಂದು ಕೊಂದೇಬಿಡುತ್ತೇನೆ ಎಂದು ನಿಶ್ಚಯಿಸಿ ಕೈಲಿದ್ದ ಪುಸ್ತಕವನ್ನು ತೆಗೆದುಕೊಂಡು ನೇರವಾಗಿ ಗುಡ್ಡಕ್ಕೆ ಹೊರಟೆ. ಈ ಸಾರಿ ನಾನು ಹೋದುದು ಗುಟ್ಟಾಗಲ್ಲ. ಭಾವನವರು ನಾನು ಬರುವುದನ್ನು ದೂರದಿಂದಲೇ ನೋಡಿ, ಹಾಡುತ್ತಿದ್ದ ಹಾಡನ್ನು ನಿಲ್ಲಿಸಿ ನನ್ನ ಕಡೆಗೆ ನೋಡತೊಡಗಿದರು. ನಾನೂ ಧೈರ್ಯವಾಗಿ ಸ್ವಲ್ಪ ಮುಗುಳ್ನಗುತ್ತಾ ಅವರನ್ನೆ ಎವೆಯಿಕ್ಕದೆ ನೋಡುತ್ತ ಹತ್ತಿರ ಹೋದೆ. ದುರಾಶೆ ಸಂಪೂರ್ಣವಾಗಿ ನಾಶವಾಯಿತೆಂದು ಹಿಗ್ಗಿದೆ. ಆ ದುರಾಶಾಪ್ರೇತ ಬೇರೊಂದು ವೇಷಹಾಕಿಕೊಂಡು ಹೃದಯದಲ್ಲಿ ಬಲವಾಗಿ ಬೇರೂರಿತೆಂದು ನಾನಾಗ ತಿಳಿಯಲಿಲ್ಲ. ಆ ಸಂಧ್ಯಾಕಾಲದ ಸ್ವರ್ಣಶೋಭೆಯಲ್ಲಿ ಅವರ ಅಲೌಕಿಕ ಸೌಂದರ್ಯವನ್ನು ಕಣ್ಣುತುಂಬ ನೋಡುವುದರಲ್ಲಿ ನನಗೊಂದು ರುಚಿ ಹುಟ್ಟಿತು. ಅವರ ಸೌಂದರ್ಯದೆದುರು ಸಂಜೆಯ ಸೊಬಗು ಕಾಂತಿಹೀನವಾಗಿ ತೋರಿತು.

ಅವರು ಮೊದಲು ಯಾವ ಮಾತನ್ನೂ ಆಡಲಿಲ್ಲ. ಆದರೆ ಕಣ್ಣಿನಲ್ಲಿ “ಏಕೆ ಬಂದೆ?” ಎಂಬ ಪ್ರಶ್ನೆ ಹೊಳೆಯುತ್ತಿತ್ತು. ನಾನೇ ಮೊದಲು ಮಾತಾಡಿದೆ. ನನ್ನ ಕೈಲಿದ್ದ ಪುಸ್ತಕವನ್ನು ಅವರ ಕೈಗೆ ಕೊಟ್ಟೆ. ಕೊಡುವಾಗ ಹಿಂದಿನಂತೆ ಅಳುಕಿ ಕೊಡಲಿಲ್ಲ. ದುರಾಶಪ್ರೇತವನ್ನು ಸಂಪೂರ್ಣವಾಗಿ ಕೊಂದೆನೆಂಬ ಗರ್ವದಿಂದ ಸ್ವಲ್ಪ ರಭಸದಿಂದಲೆ ಕೈ ನೀಡಿದೆ. ಅವರ ಕೈಗೆ ನನ್ನ ಕೈ ಸೋಂಕಿತು. ನನಗೇನೋ ಒಂದು ಆನಂದವಾಯಿತು. ಅದನ್ನು ನಾನೇ ಒಪ್ಪಿಕೊಳ್ಳದೆ, ಧೈರ್ಯವಾಗಿ ನಿಂತು “ಪುಸ್ತಕದಲ್ಲಿ ಒಂದು ಭಾಗ ಸರಿಯಾಗಿ ತಿಳಿಯಲಿಲ್ಲ; ಅದರಿಂದ ಬಂದೆ” ಎಂದು ಹೇಳಿದೆ. ಅವರು ಸ್ವಲ್ಪವೂ ಅಪ್ರತಿಭರಾಗದೆ ಶಾಂತಿಯಿಂದ ಎಲ್ಲವನ್ನೂ ವಿವರಿಸಿ ಹೇಳಿದರು. ನಾನು ಅವರೆದುರು ಒಂದೆಡೆ ಕುಳಿತು ಕೇಳುವವಳಂತಿದ್ದೆ. ಆದರೆ ಅಷ್ಟು ಹೊತ್ತೂ ಅವರನ್ನೇ ಅಭೀಷ್ಟಕ ನಯನಗಳಿಂದ ನೋಡುತ್ತಿದ್ದೆ. ಕೊನೆಗೆ ಎಲ್ಲವನ್ನೂ ಸವಿಸ್ತಾರವಾಗಿ ತಿಳಿದುಕೊಂಡವಳಂತೆ ನಟಿಸಿ, ಏನೋ ಮಹಾ ದಿಗ್ವಿಜಯ ಮಾಡಿದವಳಂತೆ ಹೆಮ್ಮೆಯ ಹೆಜ್ಜೆಗಳನ್ನಿಡುತ್ತಾ ಮನೆಗೆ ಬಂದೆ.

ಮನೆಗೇನೋ ಬಂದೆ. ಆದರೆ ಮನಸ್ಸೆಲ್ಲ ಗುಡ್ಡದಲ್ಲಿಯೇ ಇತು. ಕಣ್ಣು ಅವರನ್ನೇ ಕಾಣುತ್ತಿತ್ತು. ಆ ಮುಂಗುರುಳು, ಆ ಕೆನ್ನೆ, ಆ ನಸುಕೊಂಕಿದ ನೀಳವಾದ ಮೂಗು, ಆ ಕೆಂದುಟಿ, ಆ ಚೆಲುವಿನ ಮೊಗದ ಮೇಲೆ ನಲಿಯುತ್ತಿದ್ದ ಮುಗುಳ್ನಗೆ, ಆ ವಿಶಾಲವಾದ ನೀಲಾಕಾಶ ಸದೃಶವಾದ ಗಂಭೀರವಾದ ನೇತ್ರದ್ವಯ, ಆ ಕೋಮಲಕರಪಲ್ಲವ ಇವುಗಳಿಂದ ಮನಸ್ಸು ಪಾರಾಗಲಾರದೆ ಹೋಯಿತು. ಆ ಸ್ಪರ್ಶವನ್ನು ನೆನೆದು ರೋಮಾಂಚನವಾಯಿತು. ಮನಸ್ಸು ಅದನ್ನು ಮತ್ತೊಮ್ಮೆ ಬಯಸಿತು. ಆದರೆ ಈ ಸಾರಿ ಚಿತ್ರಪಟದೆದುರು ನಿಂತು ಕೈಮುಗಿಯಲಿಲ್ಲ. ಏಕೆಂದರೆ ನಾನು ಯಾವ ಕೆಲವನ್ನೂ ಕದ್ದು ಮಾಡಿರಲಿಲ್ಲ. ಬಹಿರಂಗವಾಗಿ ಮಾಡಿದ್ದರಲ್ಲಿ ದೋಷವಿಲ್ಲ ಎಂದು ನನಗೆ ನಾನೆ ಹೇಳಿಕೊಂಡೆ. ತರುವಾಯ ಹಾರ್ಮೋನಿಯಂ ತೆಗೆದುಕೊಂಡು ಬಾರಿಸತೊಡಗಿದೆ. ಹಿಂದೆ ಕೀರ್ತನೆಗಳನ್ನು ಹಾಡುತ್ತ ಭಕ್ತಿವರ್ಧಕ ರಾಗವನ್ನು ಬಾರಿಸುತ್ತಿದ್ದೆ. ಇಂದು ರಾಗ ತನಗೆ ತಾನೆ ರಾಗಪೂರ್ಣವಾಗತೊಡಗಿತು.

ಕೆಲವು ದಿನಗಳಲ್ಲಿ ಅವರಿಗೂ ನನಗೂ ಇದ್ದ ಸಂಬಂಧವೆ ಬೇರೆಯಾದಂತೆ ನನಗೆ ತೋರಿತು. ನನ್ನ ದೃಷ್ಟಿಯೆ ಬದಲಾಯಿಸಿತು. ಅವರ ದೃಷ್ಟಿಯೂ ಬದಲಾಯಿಸಿದಂತೆ ತೋರತೊಡಗಿತು. ಅವರು ನನ್ನೊಡನೆ ಮಾತಾಡಿದರೆ ಗುಟ್ಟಾಗಿ ನುಡಿಯುವಂತೆ ಅನುಭವವಾಗತೊಡಗಿತು. ಅವರು ನನ್ನನ್ನ ನೋಡಿದರೆ ನನಗೆ ಅರ್ಥಗರ್ಭಿತವಾಗಿ ತೋರಿತು. ಅವರೂ ನನ್ನಂತೆಯೇ ಅಲ್ಲವೇ? ಅವರಿಗೆ ನನ್ನ ಮೇಲಿದ್ದ ವಿಶ್ವಾಸವೂ ಛದ್ಮವೇಷದ ಪ್ರೇಮ ಎಂದು ಭಾವಿಸಿದೆ. ಆದರೆ ಹಿಮಾಲಯದ ಮಂಜು ಎಷ್ಟು ಕರಗಿದರೂ ಅದೆಂದೂ ಹಿಮಾಲಯವೇ ಎಂಬುದು ನನ್ನ ಕ್ಷುದ್ರ ಬುದ್ಧಿಗೆ ತಿಳಿಯಲಿಲ್ಲ. ಅಲ್ಲದೆ ಮಂಜು ಕರಗಿದರೆ ತಾನೆ ಏನು? ಅದು ಪವಿತ್ರವಾದ ಗಂಗಾ ನದಿಯಾಗದೆ, ಎಂದಿಗಾದರೂ ಕೊಳಕು ಕಾಲುವೆಯಾಗುವುದೇ? ಗಂಗೆ ಕೊಳಕು ಕಾಲುವೆಯನ್ನು ತೊಳೆದು ಪುನೀತವನ್ನಾಗಿ ಮಾಡದೆ ತಾನೇ ಎಂದಿಗಾದರೂ ಕೊಳಕಾಗುವುದೇ?

ಒಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿ ಗಾಢನಿದ್ದೆಯಲ್ಲಿದ್ದರು. ನಾನು ಮಾತ್ರ ನನ್ನ ಕೊಠಡಿಯಲ್ಲಿ ಕುಳಿತು ಬಾಗಿಲು ಹಾಕಿಕೊಂಡು ಓದುತ್ತಿದ್ದೆ. ಓದುತ್ತಿದ್ದೇನೆಂದು ತಿಳಿದುಕೊಂಡಿದ್ದೆ. ಆದರೆ ಮನಸ್ಸು ವಿಷ್ಲವಾವಸ್ಥೆಯಲ್ಲಿತ್ತು. ನದಿಯನ್ನು ತಡೆಯುವುದಕ್ಕೆಂದು ಹಾಕಿದ ಕಟ್ಟೆ ಒಡೆಯುವುದರಲ್ಲಿತ್ತು. ನಾನು ತಡೆಯಲಾರದವಳಾದೆ. ಮೆಲ್ಲಗೆ ಕೊಠಡಿಯ ಬಾಗಿಲನ್ನು ತೆರೆದು ಹೊರಗೆ ಬಂದೆ. ಬೆಳ್ದಿಂಗಳ ಕ್ಷೀರಸಾಗರದಲ್ಲಿ ಜಗತ್ತು ದಟ್ಟವಾದ ಬನಗಳಿಂದಲೂ ಸಾವಿರಾರು ತಾರೆಗಳಿಂದಲೂ ಆಕಾಶದಲ್ಲಿ ಅಲ್ಲಲ್ಲಿ ತೇಲುತ್ತಿದ್ದ ಕಿರಿದಾದ ಬಿಳಿಮುಗಿಲು ರಾಶಿಗಳಿಂದಲೂ ಶೋಭಿಸುತ್ತ ಪ್ರೇಯಸಿಯನ್ನು ನಿರೀಕ್ಷಿಸುವ ಪ್ರಣಯಿಯಂತೆ ರಾರಾಜಿಸಿತ್ತು. ನನ್ನೆದೆಯ ಸರೋವರ ಅಲ್ಲೋಲಕಲ್ಲೋವಾಯಿತು. ಮಹಡಿಯ ಕಡೆಗೆ ನೋಡಿದೆ. ಭಾವನವರ ಕೊಠಡಿಯಲ್ಲಿ ಇನ್ನೂ ದೀಪ ಉರಿಯುತ್ತಿತ್ತು. ನನಗೆ ಪರಮಾಶ್ಚರ್ಯವಾಯಿತು-ಅವರೇಕೆ ಇಷ್ಟು ಹೊತ್ತಿನಲ್ಲಿ ಎಚ್ಚರವಾಗಿದ್ದಾರೆ? ಅವರೂ ನನ್ನಂತೆಯೇ ಇರಬಾರದೇಕೆ? ನನಗಾಗಿ ಕಾಯುತ್ತಿರುವರೆಂದೇ ನಿರ್ಣಯಿಸಿದೆ. ಅವರ ಕೊಠಡಿಯಲ್ಲಿ ದೀಪವಾರಿದ್ದ ಪಕ್ಷದಲ್ಲಿ ಮರಳಿ ಹೋಗಿ ಮಲಗಿಕೊಳ್ಳುತ್ತಿದ್ದೆ.

ಮರಳಿ ನನ್ನ ಕೋಣೆಗೆ ಬಂದೆ. ಮೈಬೆವರುತ್ತಿತ್ತು. ದೇಹ ಸ್ವಲ್ಪ ನಡುಗುತ್ತಿತ್ತು. ಮನಸ್ಸು ಹುಚ್ಚು ಹುಚ್ಚಾಗಿತ್ತು. ವಿವೇಕ ಅವಿವೇಕ, ಮಾನ ಅಪಮಾನ, ಪಾಪ ಪುಣ್ಯ, ಯಾವುದರ ಗೊಡವೆಯೂ ಅದಕ್ಕೆ ಬೇಕಾಗಿರಲಿಲ್ಲ. ಕಡುಬೇಸಗೆಯ ಸುಡುಬಿಸಿಲಲ್ಲಿ ಒಣಗಿದ ಬಿದಿರು ಮಳೆಗೆ ಬೆಂಕಿ ಬಿದ್ದಂತೆ ನನ್ನ ಚಿತ್ತದಲ್ಲಿ ರಾಗೋದ್ರೇಕವು ಭೀಷಣವಾಗಿತ್ತು. ಧರ್ಮಬುದ್ಧಿ ಕುರುಡಾಯಿತು. ಮರ್ದನಮಾಡಿದ್ದೇನೆಂದು ತಿಳಿದಿದ್ದ ದುರಾಶಪ್ರೇತವು ಮಣಿಗಣಭೂಷಿತವಾದ ಸರ್ಪರಾಜನ ಸುಂದರ ಫಣಾಮಂಡಲದಂತೆ ನನ್ನನ್ನು ಮನಮೋಹಿಸಿ ಆಕರ್ಷಿಸಿತು.

ದೀಪ ಆರಿಸಿದೆ. ಓದಿ ಇಟ್ಟಿದ್ದ ಪುಸ್ತಕವನ್ನು ಕೈಲಿ ತೆಗೆದುಕೊಂಡೆ. ಅಭೀಷ್ಟ ಸಿದ್ಧಿಸದಿದ್ದರೆ ದುರಭಿಸಂಧಿಯನ್ನಾದರೂ ಮರೆಮಾಡುವುದೆಂದು ಪುಸ್ತಕವನ್ನು ಕೈಲಿ ತೆಗೆದುಕೊಂಡೆ. ಮಹಡಿಯ ಮೆಟ್ಟಲುಗಳನ್ನು ಸದ್ದಾಗದಂತೆ ಹತ್ತಿದೆ. ಸುತ್ತಲೂ ಕಿವಿಗೊಟ್ಟು ಆಲಿಸಿದೆ. ಎಲ್ಲಿಯೂ ಮೌನ. ಎದೆ ಹೊಡೆದುಕೊಳ್ಳುತ್ತಿತ್ತು. ಬೆವರು ಸುರಿಯುತ್ತಿತ್ತು. ಬಿಸುಸುಯ್ಲು ಬಿರುಸಾಯಿತು. ಹೆಜ್ಜೆ ಹೆಜ್ಜೆಗೂ “ಬೇಡ, ಬೇಡ” ಎಂದುಕೊಂಡೆ. ಹಾಗೆಂದುಕೊಳ್ಳುತ್ತಲೇ ಮುಂದುವರಿದೆ. ಕೊಠಡಿಯ ಬಾಗಿಲು ಮುಚ್ಚಿತ್ತು. ಅದರ ಸಂದಿಯಿಂದ ದೀಪದ ಕಿರಣವೊಂದು ಹೊರಗೆ ಬಂದು ಜ್ಯೋತಿಸ್ಸೂತ್ರದಂತೆ ರಂಜಿಸಿತ್ತು. ಅದೂ “ಬೇಡ, ಬೇಡ” ಎಂದು ಹೇಳುವ ಧರ್ಮಬುದ್ಧಿಯಂತೆ ತೋರಿತು. ಆದರೆ ಸುತ್ತಲಿರುವ ಕತ್ತಲೆ ಅಧರ್ಮಬುದ್ಧಿಯಂತೆ “ಹೆದರಬೇಡ, ಮುಂದೆ ನಡೆ!” ಎನ್ನುವಂತೆ ತೋರಿತು. ಬಾಗಿಲನ್ನು ಸೇರಿ ನಿಂತೆ. ತಡ ಮಾಡಿದರೆ ಎಲ್ಲಿ ಧರ್ಮಬುದ್ಧಿಯೇ ಜಯಿಸಿಬಿಡುವುದೋ ಎಂದು ಹೆದರಿ ಬಾಗಿಲನ್ನು ನೂಕಿದೆ. ಬಾಗಿಲು ತೆರೆಯಿತು.

ಭಾವನವರು ಕುರ್ಚಿಯ ಮೇಲೆ ಕುಳಿತು ಮೇಜಿನ ಮೇಲಿದ್ದ ದೀಪದ ಬೆಳಕಿನಲ್ಲಿ ಮನಸ್ಸಿನಲ್ಲಿಯೇ ಓದಿಕೊಳ್ಳುತ್ತಿದ್ದರು. ಓದುವುದರಲ್ಲಿ ಮಗ್ನರಾಗಿದ್ದರು. ಬಾಗಿಲು ತೆರೆದುದನ್ನೂ ಗಮನಿಸಲಿಲ್ಲ. ನಾನು “ಅಯ್ಯೋ! ನಾನೇಕೆ ಬಂದೆ? ಏನು ಕೆಲಸಮಾಡಿದೆ? ಎಂದುಕೊಂಡೆ. ಮತ್ತೆ ಧೈರ್ಯ ತಂದುಕೊಂಡೆ. ಕೈಲಿದ್ದ ಪುಸ್ತಕವನ್ನು ಅವರು ಕಾಣುವಂತೆ ಹಿಡಿದುಕೊಂಡು ಒಳಗೆ ಹೋದೆ. ಅವರು ಓದುವುದನ್ನು ನಿಲ್ಲಿಸಿ, ಮೆಲ್ಲಗೆ, ಬಹು ಮೆಲ್ಲಗೆ ಅತ್ಯಂತ ನಿಧಾನವಾಗಿ ತಲೆಯೆತ್ತಿದರು! ನೋಡಿದೆ! ಇದೇನು? ನಮ್ಮ ಭಾವನವರಲ್ಲ-ನಾಲ್ಕು ವರ್ಷಗಳ ಹಿಂದೆ ಮೃತರಾಗಿಹೋದ ನನ್ನ ಪತಿ! ಅದೇ ಮುಖ; ಅದೇ ಕಣ್ಣು; ಅದೇ ಕ್ರಾಪು! ಸ್ವಲ್ಪ ನಗುತ್ತಿದ್ದಾರೆ! ಇಲ್ಲ! ಹಲ್ಲುಕಡಿಯುತ್ತಿದ್ದಾರೆ! ನಾನು ಮರವಟ್ಟುಹೋದೆ. ನನ್ನ ಪತಿಯಲ್ಲ; ನನ್ನ ದೇವರು. ನನ್ನ ಭಾವನವರು ಎಂದು ತಿಳಿಯಲು ಬಹಳ ಪ್ರಯತ್ನಪಟ್ಟೆ. ಆಗಲಿಲ್ಲ. ಪುನಃ ನೋಡಿದೆ: ನನ್ನ ಪತಿ ಮೆಲ್ಲಗೆ ಕುರ್ಚಿಯಿಂದ ಎದ್ದರು! ಇದ್ದಕ್ಕಿದ್ದಂತೆ ಆಕಾರ ವಿಕಾರವಾಯಿತು-ಅಸ್ಥಿಪಂಜರದಂತಾಯಿತು! ನನಗೆ ಸಿಡಿಲು ಬಡಿದಂತಾಗಿ “ಅಯ್ಯೋ! ಭಾವ! ಭಾವ!” ಎಂದು ಕೂಗಿಕೊಂಡು ಬಿದ್ದು ಮೂರ್ಛೆಹೋದೆ.

ಮುಂದೇನಾಯಿತೋ ನನಗೆ ತಿಳಿಯಲಿಲ್ಲ. ಮರುದಿನ ಬೆಳಿಗ್ಗೆ ನಾನು ಹಾಸಗೆಯ ಮೇಲೆ ಭೀತಿಜ್ವರದಿಂದ ಮಲಗಿದ್ದೆ. ಕಣ್ದೆರೆದಾಗ ನಮ್ಮ ಭಾವನವರು ಎದುರಿಗೇ ಕುರ್ಚಿಯ ಮೇಲೆ ಕುಳಿತುಕೊಂಡು ಅತ್ತೆಯವರೊಡನೆ ಮಾತಾಡುತ್ತಿದ್ದರು. ನಾನು ಕಣ್ದೆರೆದುದನ್ನು ನೋಡಿ “ಅದೇಕಮ್ಮಾ ರಾತ್ರಿ ಹಾಗೆ ಕೂಗಿಕೊಂಡು ಬಿದ್ದೆ?” ಎಂದರು. ಅವರ ಧ್ವನಿ ರಹಸ್ಯಗಳನ್ನೆಲ್ಲ ತಿಳಿಸಿದ್ದರೂ ಸರ್ವ ಪಾಪಗಳನ್ನೂ ಮನ್ನಿಸುವ ಪರಮಾತ್ಮನ ಕರುಣಾ ವಾಣಿಯಂತಿತ್ತು.

“ಒಂದು ಪದ್ಯಕ್ಕೆ ಅರ್ಥವಾಗಲಿಲ್ಲ. ನಿಮ್ಮನ್ನು ಕೇಳೋಣ ಎಂದು ಬಂದೆ!” ಎಂದೆನು. ನನ್ನದು ಅಪರಾಧಿಯ ಧ್ವನಿಯಾಗಿತ್ತು.

“‘ನೀನು ಬಂದುದೇತಕ್ಕೆ’ ಎಂದು ಕೇಳಲಿಲ್ಲ. ‘ಕೂಗಿಕೊಂಡಿದ್ದೇಕೆ?’ ಎಂದು ಕೇಳಿದೆ.”

ನಾನು ಕೊಠಡಿಯಲ್ಲಿ ಕಂಡುದನ್ನೆಲ್ಲ ಮುಚ್ಚುಮರೆಮಾಡದೆ ಹೇಳಿದೆ. ಭಾವನವರು ನಗುತ್ತ “ಅಯ್ಯೋ! ನೀನು ಬಂದೆಯಲ್ಲಾ ಎಂದು ನಾನೇ ಕುರ್ಚಿಯಿಂದ ಎದ್ದವನು. ಹಾಗೆ ಕಿಟ್ಟನೆ ಕಿರಿಚಿಕೊಂಡು ಬೀಳುವುದೇ? ಯಾರಾದರೂ ಏನೆಂದುಕೊಂಡಾರು? ಹೀಗೆಲ್ಲಾ ಹೆದರಿಕೊಳ್ಳುವುದೇ?” ಎಂದು ಇದ್ದಕ್ಕಿದ್ದಂತೆ ಯಾವುದೋ ಚಿಂತೆಯಲ್ಲಿ ಮುಳುಗಿದರು.

ಪ್ರಾತಃಸೂರ್ಯನ ಚಿನ್ನದ ಕಿರಣಗಳು ಕಿಟಕಿಯಿಂದ ಪ್ರವೇಶಿಸಿ ಭಾವನವರ ಮುಖದ ಮೇಲೆ ಮುಗ್ಧವಾಗಿ ನಲಿದಾಡುತ್ತಿದ್ದುವು. ನಾನು ಆ ಪವಿತ್ರ ಮುಖ ಮಂಡಲವನ್ನೆ ನೋಡುತ್ತ “ನನ್ನ ದೇವರೇ, ನಿನಗೆ ಸಹಸ್ರ ನಮಸ್ಕಾರ!” ಎಂದು ಮನಸ್ಸಿನಲ್ಲಿಯೇ ಕೈಮುಗಿದೆ.