ಹರಪುರ ಗ್ರಾಮದ ರಾಯಚರಣನಿಗೆ ಸುಖಪಡಬೇಕೆಂಬ ಆಸೆ ಯಥೇಚ್ಛವಾಗಿದ್ದರೂ ಅದಕ್ಕೆ ತಕ್ಕ ಉಪಪತ್ತಿಯ ಅನುಕೂಲವಿರಲಿಲ್ಲ. ಹುಟ್ಟು ಸೋಮಾರಿಯಾಗಿದ್ದ ಆತನಿಗೆ ಕೆಲಸದಲ್ಲಿ ಸಂಪೂರ್ಣ ಅನಾಸಕ್ತಿಯೋಗವಿದ್ದುದರಿಂದ ಅವನಿಗೂ ಸಂಪತ್ತಿಗೂ ಎಣ್ಣೆಸೀಗೆಯ ನಂಟಸ್ತಿಕೆಯಿತ್ತು. ತಂದೆತಾಯಿಗಳು ಚಿಕ್ಕಂದಿನಲ್ಲಿಯೆ ವೈಕುಂಠವಾಸಿಗಳೊ ಕೈಲಾಸಿಗಳೊ ಕೈಲಾಸವಾಸಿಗಳೊ ಆಗಿದ್ದುದರಿಂದ ಆ ಎರಡು ದಿವ್ಯ ಸ್ಥಾನಗಳ ಸುಖವೂ ಅವನಿಗೆ ಇಲ್ಲಿ, ಈ ಪಾರ್ಥಿವ ಪ್ರಪಂಚದಲ್ಲಿ, ವಜಾ ಆಗಿಹೋಗಿತ್ತು. ದೂರದ ಬಂಧುಗಳ ಮನೆಗಳಲ್ಲಿ (ಹತ್ತಿರದ ನಂಟರು ಸೇರಿಸುತ್ತಿರಲಿಲ್ಲ) ಅವರಿವರ ಕನಿಕರದ ಕೂಳುಂಡು ದೊಡ್ಡವನಾದನು. ದೊಡ್ಡವನಾದ ಮೇಲೆಯೂ ಬಿಟ್ಟುಕೂಳು ತಿನ್ನುವ ವಿಚಾರದಲ್ಲಿ ಅವನ ಅಭಿಪ್ರಾಯ ಭಿನ್ನವಾಗಿರಲಿಲ್ಲ. ಆದರೆ ಕೂಳಿಕ್ಕುತ್ತಿದ್ದವರ ಅಭಿಪ್ರಾಯ ಭಿನ್ನವಾಯಿತು.

ಹುಡುಗನಾಗಿದ್ದಾಗ, ಏನೊ ಪಾಪ, ತಂದೆತಾಯಿಗಳಿಲ್ಲ, ಎಂದು ಅನ್ನ ಹಾಕಿದ್ದಕ್ಕೆ ದೊಡ್ಡವನಾದ ಮೇಲೆಯೂ ಸ್ವತಃ ದುಡಿದು ತಿನ್ನದೆ ಇನ್ನೊಬ್ಬರ ಕೈ ಹಾರೈಸಿದರೆ ಯಾರಿಗೆ ತಾನೆ ಸಹಿಸಲಾಗುತ್ತದೆ. ರಾಯಚರಣಿಗೆ ಒಂದೊಂದು ಮನೆಯಿಂದಲೂ ಅರ್ಧಚಂದ್ರ ಪ್ರಯೋಗವಾಯಿತು. ಅವನಿಗೆ ರೇಗಿತು: ಬಹುಕಾಲದಿಂದ ನಡೆದುಕೊಂಡು ಬಂದಿದ್ದ ಮಾಮೂಲು ಹಕ್ಕನ್ನು ತಿರಸ್ಕರಿಸುತ್ತಿದ್ದಾರಲ್ಲಾ ಎಂದು.

ಬಿಟ್ಟಿಕೂಳು ಸಿಕ್ಕುವುದು ಬಹು ಪ್ರಯಾಸಕರವಾಗಿ ಒಂದು ದಿನ ಉಪವಾಸವನ್ನು ಅನುಭವಿಸಿದ ಮೇಲೆಯೆ ರಾಯಚರಣನಿಗೆ ತಾನೂ ನಾಲ್ಕು ಕಾಸು ಸಂಪಾದನೆ ಮಾಡಿ ಇತರರಿಗೆ ಸಮನಾಗಿ ಸುಖಪಡುತ್ತ ಅವರನ್ನು ಮೂದಲಿಸಬೇಕೆಂಬ ಮನಸ್ಸು ಹುಟ್ಟಿದ್ದು. ಆದರೆ ಅದೂ ಸಾರ್ಥಕವಾಗಲಿಲ್ಲ. ಸೋಮಾರಿತನ ರಕ್ತಗತವಾಗಿದ್ದ ಆತನಿಗೆ ಕೆಲಸ ಮಾಡುವುದೆಂದರೆ ಇತರರ ಮೂಗಿನ ಸಿಂಬಳ ತೆಗೆಯುವುದಕ್ಕಿಂತಲೂ ಹೆಚ್ಚು ಜುಗುಪ್ಸೆಯಾಗುತ್ತಿತ್ತು. ಸೋಮಾರಿತನವೆ ವೃತ್ತಿಯಾಗುವಂತಹ ಒಂದು ಜೀವನಮಾರ್ಗವಿದ್ದಿದ್ದರೆ ನಾನು ಕೋಟ್ಯಾಧೀಶ್ವರನಾಗುತ್ತಿದ್ದೆನಲ್ಲಾ ಎಂದು ರಾಯಚರಣನಿಗೆ ಆಗಾಗ ಮನಸ್ಸು ಪುಲಕಿತವಾಗುತ್ತಿತ್ತು.

ಈ ನಡುವೆ ಅವನಿಗೆ ಮತ್ತೊಂದು ಶನಿಯೂ ಬೆನ್ನು ಹತ್ತಿತ್ತು. ವಸಂತ ಋತುವಿನಲ್ಲಿ ಒಂದು ಹೊತ್ತರೆ ರಾಯಚರಣನು ಹಳ್ಳಿಯ ತೋಟದಲ್ಲಿ ತಂಬಾಕು ಸೇದುತ್ತಾ, ಹೊಗೆ ಬಿಡುತ್ತಾ, ಹೊಗೆಯ ಸೋಮಾರಿತನವನ್ನು ತನ್ನ ಸೋಮಾರಿತನದಿಂದ ಅಣಕಿಸುತ್ತಾ ಅರೆಗಣ್ಣಾಗಿ ಕುಳಿತಿದ್ದಾಗ-ಏನಾಗಿಹೋಯಿತು!

ಪಕ್ಕದಲ್ಲಿ ಚೆಂದುಟಿಬಣ್ಣದ ಕೆಂದಳಿರಿನಿಂದ ಸುಂದರವಾಗಿದ್ದ ಮಾಮರದಲ್ಲಿ ಕೋಗಿಲೆ ಕೂಗಿತು! ರಾಯಚರಣನು ಒಂದು ಕಿರುಬಂಡೆಯ ಮೇಲೆ ಕೂತಿದ್ದನು. ಆ ಜಡ ಶಿಲಾಖಂಡವೂ ಚೈತನ್ಯದ ಪಿಂಡದಂತಾಗಿ ರಾಯಚರಣನ ಮೈಯಲ್ಲಿ ಮಿಂಚು ಸಂಚಾರವಾಯಿತು. ಸಿಡಿಮದ್ದಿಗೆ ಕಿಡಿಬಿದ್ದಂತೆ ಅವನು ಜಡವನ್ನಾಚೆಗೆ ತಳ್ಳಿ ಕಣ್ಣರಳಿ ನೆಟ್ಟಗೆ ನಿಮಿರಿ ಕುಳಿತನು. ಮತ್ತೆ, ಚೂತವೃಕ್ಷದ ಕಿಸಲಯ ರಾಶಿಯಲ್ಲಿ ಆ ದೇವದೂತನ ಕಲಕಂಠವು ಮೆದುಳಿಗೆ ಕಳ್ಳು ಹೊಯ್ಯುವಂತೆ ಹೃದಯವನ್ನು ಮಥಿಸಿ ಕೇಳಿಸಿತು. ರಾಯಚರಣನು ನೋಡುತ್ತಾನೆ: ವಸಂತಮಾಸದ ಮನೋಹರತೆ ಸಮಸ್ತ ಲೋಕದ ನೆತ್ತಿಗೂ ಪಿತ್ತದಂತೇರಿಬಿಟ್ಟಿದೆ! ತಳಿರೇನು, ಚಿಗುರೇನು, ನನೆಯೇನು, ಕೊನೆಯೇನು; ಎಲರೇನು, ಮಲರೇನು! ಹರಪುರ ಗ್ರಾಮವೆ ಅಮರಾವತಿಯಾಗಿದೆ! ಆ ತೋಟವೆ ನಂದನವಾಗಿದೆ! ಸ್ವರ್ಗವಾಗುವುದಕ್ಕೆ ಅಪ್ಸರೆಯೊಬ್ಬಳೆ ಬಾಕಿ:

ರಾಯಚರಣನು ಬಾಯ್ದೆರೆದು ಕಣ್ಣರಳಿ ಕಯ್ಗಳೆರಡನ್ನೂ ಆಶ್ಚರ್ಯ ಮುದ್ರೆಯಿಂದ ಮೇಲೆತ್ತಿ ಮೈಯನ್ನು ನಸುಬಾಗಿ ಭಾವಸಮಾಧಿಸ್ಥನಾದಂತೆ ಕಡೆದು ಕಂಡರಿಸಿದ ಗೊಂಬೆಯಾಗಿ ನೋಡುತ್ತಿದ್ದನು. ಅದೊ ದೂರದಲ್ಲಿ ಅಪ್ಸರೆಯೂ ಬರುತ್ತಿದ್ದಾಳೆ: ಎಂತಹ ಸ್ಫುರದ್ರೂಪ! ಚಂದ್ರಮುಖಿ! ಕಮಲನಯನೆ! ಫಣಿವೇಣಿ! ಲತಾಂಗಿ! ಕುಂಭ…! ಸು….ಣಿ! ನಿ….ನಿ! ನೋಡುತ್ತಿದ್ದ ಹಾಗೆ ರಾಯಚರಣನ ಹೃದಯದಲ್ಲಿ ಮನ್ಮಥಸಂಚಾರವಾಯಿತು! ಇನ್ನೇನು? ಹರಪುರ ಗ್ರಾಮವೆ ಸ್ವರ್ಗವಾಗುತ್ತದೆ. ಆ ತೋಟವೆ ನಂದನವಾಗುತ್ತದೆ. ರಾಯಚರಣನೆ ಇಂದ್ರನಾಗುತ್ತಾನೆ. ರಂಭೆಯೊ ಊರ್ವಶಿಯೊ ಮೇನಕೆಯೊ ತಿಲೋತ್ತಮೆಯೊ ಅಥವಾ ಅವರೆಲ್ಲರನ್ನೂ ಬೆಸೆದು ಮಾಡಿದ ಶೃಂಗಾರ ಸುಂದರಿಯೊ ಅದೇ ದೂರದಲ್ಲಿ ಬರುತ್ತಿದ್ದಾಳೆ!

ಶೃಂಗಾರಸುಂದರಿ ಹತ್ತಿರ ಬಂದಳು. ಆದರೆ, ಅಯ್ಯೋ, ಆ ಗ್ರಾಮದ ಬೆಸ್ತರವನ ಅಜ್ಜಿ; ಮೀನು ಬುಟ್ಟಿ ಹೊತ್ತುಕೊಂಡು ಹೋಗುತ್ತಿದ್ದಾಳೆ! ಹಲ್ಲಿಲ್ಲ! ನರೆಕೂದಲು, ಕುಳಿಗೆನ್ನೆ; ದುರ್ಗಂಧ ಸೀರೆ;… ಮತ್ತೆ ಬಳ್ಳಿಯಂತೆ ತೆಳ್ಳಗಿದ್ದರೂ ಲತಾಂಗಿಯಲ್ಲ. ಆ ಹೊಸ ಆವಿಸ್ಕಾರದ ಆಘಾತ ಎಷ್ಟರಮಟ್ಟಿಗಿತ್ತು ಎಂದರೆ ರಾಯಚರಣ ನೆತ್ತಿಗೇರಿದ್ದ ತಂಬಾಕಿನ ಅಮಲೂ ಇಳಿದು ಹೋಯಿತು.

ಅಜ್ಜಿಯೇನೊ ಸುರಕ್ಷಿತವಾಗಿ ಹೊರಟುಹೋದಳು. ಆದರೆ ರಾಯಚರಣನ ಎದೆಯಲ್ಲಿ ಮೂಡಿದ ಮನ್ಮಥನು ಚಿರಸ್ಥಾಯಿಯಾಗಿಬಿಟ್ಟನು.

ದರಿದ್ರನಿಗೆ ಪ್ರಣಯಭಾವವೂ ಬರುಬರುತ್ತಾ ಹೆಚ್ಚಾಯಿತು. ಚೆಲುವೆಯೊಬ್ಬಳನ್ನು ಒಲುವೆಯಿಂದ ಗೆಲಿದು ಮದುವೆಯಾಗಬೇಕೆಂದು ಮನಸ್ಸು ಮಾಡಿದನು. ಆದರೆ, ಗ್ರಹಚಾರ! ರತಿ ದಾರಿದ್ರ್ಯಪ್ರಿಯಳಲ್ಲ. ಜೊತೆಗೆ ರಾಯಚರಣನು ಕನ್ನಡಿಯ ಮುಂದೆ ಸ್ಫುರದ್ರೂಪಿಯಾಗಿದ್ದರೂ ಹೆರರ ಕಣ್ಣಿಗೆ ಹಾಗೆ ಕಾಣುತ್ತಿರಲಿಲ್ಲ.

ಮೈಕಾಂತಿ ಕೆಂಡವಾಗಿದ್ದರೂ ನೀರಿನ ಸಂಪರ್ಕವಾದಂತಿತ್ತು. ಮೂಗು ಸಂಪಗೆಯಾಗಿದ್ದರೂ ಹುಳು ಹಿಡಿದು ಸಿಂಡಾಗಿತ್ತು. ಕಣ್ಣುಗಳು ಮುರುಕು ದೇಗುಲದ ಗೋಡೆಯ ಬಿರುಕುಗಳಂತಿದ್ದುವು. ಮೈಗಂಪು ಬಾಯ್ಗಂಪು ಕೈಗಂಪುಗಳಿಗೆ ಒಂದಿನಿತೂ ಕೊರತೆಯಿರಲಿಲ್ಲ.

ಹೀಗಿದ್ದರೂ ಆಶಾವಾದಿಯಾಗಿದ್ದ ರಾಯಚರಣನು ನಿರುತ್ಸಾಹಿಯಾಗದೆ ಆ ಹಳ್ಳಿಯ ಸಾಹುಕಾರನಾಗಿದ್ದ ಕೇನರಾಮಗೋಸ್ವಾಮಿಯ ಬಳಿ ಹೋಗಿ ಮದುವೆಯ ಖರ್ಚಿಗೆ ಹಣವನ್ನು ಸಾಲ ಕೇಳಿದನು. ನಾಲ್ಕನೆಯ ಸಾರಿ ಕಿರು ಹುಡುಗಿಯನ್ನು ಮದುವೆಯಾಗಿದ್ದ ಆ ಮುದಿ ಗೋಸ್ವಾಮಿ ರಾಯಚರಣನಿಗೆ ಪ್ರಪಂಚದ ನಶ್ವರತೆಯನ್ನೂ ಕಾಮಿನೀ ಕಾಂಚನ ತ್ಯಾಗವನ್ನೂ ಕುರಿತು ಒಂದು ಗಂಟೆ ಉಪದೇಶ ಮಾಡಿ ಊಟದ ಹೊತ್ತಾಗಿದ್ದರೂ ನಮಸ್ಕಾರ ಹೇಳಿ ಕಳುಹಿಸಿದ್ದನು.

ಹೊನ್ನು ಹೆಣ್ಣುಗಳ ಸಂಪಾದನೆಯಲ್ಲಿ ಸಂಪೂರ್ಣವಾಗಿ ಸೋತು ಹೋದ ಮೇಲೆ ರಾಯಚರಣನಿಗೆ ಕೇನರಾಮಗೋಸ್ವಾಮಿಯ ಕಾಮಿನೀ ಕಾಂಚನ ತ್ಯಾಗದ ಉಪದೇಶ ಚೆನ್ನಾಗಿ ಮನಸ್ಸಿಗೆ ಹತ್ತಿ ಅವನಲ್ಲಿ ಪೂಜ್ಯ ಬುದ್ಧಿಯುಂಟಾಯಿತು. ಅದರಲ್ಲಿಯೂ ಗೋಸ್ವಾಮಿಯ ಕೆಲವು ಮಾತುಗಳಂತೂ ಮಹದರ್ಥ ಗರ್ಭಿತವಾಗಿ ತೋರಿದುವು:

“ಐಹಿಕ ಸುಖಗಳನ್ನು ಹುಡುಕಿಕೊಂಡು ಹೋಗುವುದು ಮರುಭೂಮಿಯಲ್ಲಿ ಮರುಮರೀಚಿಕೆಯ ನೀರನ್ನು ಹುಡುಕುವಂತೆ ಅವಿವೇಕವಾದುದು. ಅದರಲ್ಲಿಯೂ, ಸುಖ ಸಂಪತ್ತುಗಳು ನಾವು ಹಿಡಿಯಹೋದಷ್ಟೂ ಸಿಕ್ಕದೆ ದೂರ ಹೋಗುತ್ತವೆ. ದೃಷ್ಟಾಂತವಾಗಿ-ನಮ್ಮ ನೆರಳನ್ನು ನಾವೇ ಹಿಡಿಯಲಿಕ್ಕೆ ಅಟ್ಟಿಕೊಂಡು ಹೋದರೆ ಅದು ಎಂದಾದರೂ ಕೈವಶವಾಗುತ್ತದೆಯೆ? ನಾವು ಅಟ್ಟಿಸಿಕೊಂಡು ಹೋದಷ್ಟೂ ಅದು ಮುಂದೆ ಮುಂದೆ ತಪ್ಪಿಸಿಕೊಂಡೆ ಹೋಗುತ್ತದೆ. ಎಂದಿಗೆ ನಾವು ಅದನ್ನು ಅಟ್ಟುವುದನ್ನು ಬಿಟ್ಟು ಹಿಂತಿರುಗಿ ಪರಙ್ಮಖರಾಗುತ್ತೇವೆಯೊ ಆಗ ಆ ನೆರಳು ನಮ್ಮ ಹಿಂದೆ ನಾಯಿಯಂತೆ ಓಡಿಬರುತ್ತದೆ. ಆದ್ದರಿಂದ ನಿಜವಾದ ಸುಖಪ್ರಾಪ್ತಿಯಾಗಬೇಕಾದರೆ ಇಂದ್ರಿಯ ಸುಖಗಳಿಂದ ವಿಮುಖರಾಗುವುದು, ಎಂದರೆ ಹಿಂತಿರುಗುವುದು, ಅಂದರೆ ವೈರಾಗ್ಯ-ಬಹಳ ಅವಶ್ಯಕ. ವೈರಾಗ್ಯದ ಮಹಿಮೆ ಅದನ್ನು ಪ್ರಯೋಗಿಸಿದವರಿಗೇ ಗೊತ್ತು” ಎಂದು ಮೊದಲಾಗಿ ಗೋಸ್ವಾಮಿ ಹೇಳಿದ್ದನು.

ಬಹುಶಃ ಗೋಸ್ವಾಮಿ ನಿರ್ವಂಚನೆಯಿಂದ ಹೃತ್ಪೂರ್ವಕವಾಗಿ ಉಪದೇಶ ಮಾಡಿದ್ದರೂ ಮಾಡಿರಬಹುದು. ಹಣ್ಣು ಹಣ್ಣು ಮುದುಕನಾಗಿ ಅವನ ಭಾಗಕ್ಕೆ ಕಿರುಹರೆಯದ ನಾಲ್ಕನೆಯ ಹೆಂಡತಿ ಮರುಮರೀಚಿಕೆಯೆ ಆಗಿದ್ದಿರಬೇಕು. ಅಂತೂ ಅದು ಹೇಗೇ ಇರಲಿ. ರಾಯಚರಣನಿಗೇನೊ ವೈರಾಗ್ಯದಲ್ಲಿ ಅತ್ಯಂತ ವ್ಯಾಮೋಹ ಹುಟ್ಟಿತು. ಅದರಲ್ಲಿಯೂ “ಅಟ್ಟಿದರೆ ಓಡುತ್ತದೆ; ಬಿಟ್ಟರೆ ಹಿಂಬಾಲಿಸುತ್ತದೆ” ಎಂಬ ಲಕ್ಷ್ಮಿಯ ಲಕ್ಷಣಗಳನ್ನು ಕುರಿತ ಮಾತುಗಳು ಬಹುಮಟ್ಟಿಗೆ ಮನಸ್ಸಿಗೆ ಬಂದು ರಾಯಚರಣನು ಬೈರಾಗಿಯಾದನು.

ಅವನಾದುದು ವೈಷ್ಣವ ವೈರಾಗಿ, ಧರ್ಮಸಾಧನೆಗಳಲ್ಲಿ ವೈಷ್ಣವ ವೈರಾಗ್ಯಕ್ಕಿಂತಲೂ ಸೊಗಸಾದುದು ಮತ್ತೊಂದಿಲ್ಲ. ಅದರಲ್ಲಿ ದೇಹದಂಡೆನೆಯಿಲ್ಲ; ಅನಾವಶ್ಯಕವಾದ ಆತ್ಮದಂಡನೆಯೂ ಇಲ್ಲ! ಬೃಂದಾವನದ ಶ್ರೀಕೃಷ್ಣನು ಇಷ್ಟ ದೇವತೆಯಾದುದರಿಂದ ರಾಸಲೀಲೆಗೂ ಬೇಕಾದಷ್ಟು ಅವಕಾಶವಿರುತ್ತದೆ. ಆ ಸಾಧಕರಿಗೆ ಬೇಕಾದುದು ಪ್ರಪತ್ತಿ. ಎಂದರೆ ಸಂಪೂರ್ಣವಾಗಿ ದೇವರಿಗೆ ಶರಣಾಗುವುದು. ಪ್ರಪತ್ತಿಯೊಂದಿದ್ದರೆ ಏನೇನು ಮಾಡಿದರೂ ಎಲ್ಲಕ್ಕೂ ಕ್ಷಮೆ. ನಾವು ಭಗವಂತನಿಗೆ ಕರುಣಾಸಾಗರ ಎಂದು ಬಿರುದು ದಯಪಾಲಿಸುವುದೇನು ಪುಕ್ಕಟೆಯಲ್ಲ!

ಹಿಂದೆ ರಾಯಚರಣನಾಗಿದ್ದ ಶ್ರೀಮತ್ ಭಗವಾನ್ ದಾಸ ಬಾಬಾಜಿಗೆ ಕೆಲದಿನಗಳಲ್ಲಿಯೆ ಗೋಸ್ವಾಮಿಯ ಮಾತಿನ ಅರ್ಥ ಅನುಭವವೇದ್ಯವಾಗತೊಡಗಿತು. ಅಟ್ಟಿದಷ್ಟೂ ಓಡುತ್ತಿದ್ದ ಲಕ್ಷ್ಮಿ ಬಿಟ್ಟೊಡನೆ ಹತ್ತಿರ ಹತ್ತಿರ ಬರತೊಡಗಿದಳು. ಅಷ್ಟು ಸ್ವಲ್ಪ ಕಾಲದ ಸಾಧನೆಯಿಂದ ಅಂತಹ ಸಿದ್ಧಿಲಭಿಸುತ್ತದೆ ಎಂದು ರಾಯಚರಣನು ಕನಸಿನಲ್ಲಿಯೂ ಭಾವಿಸಿರಲಿಲ್ಲ. ವೈರಾಗ್ಯದ ಮಹಿಮೆಯನ್ನು ಕಂಡು ಅವನಿಗೆ ಹಿಡಿಸಲಾರದಷ್ಟು ಆನಂದವಾಯಿತು. ಎಲ್ಲವನ್ನೂ ಬಿಟ್ಟು ತನ್ನನ್ನು ಆಶ್ರಯಿಸಿದವರಿಗೆ ಎಲ್ಲವನ್ನೂ ತನ್ನನ್ನೂ ಕೊಡುತ್ತೇನೆ ಎಂದು ಸಾರಿದ ಆ ಕೃಷ್ಣಪರಮಾತ್ಮನ ದಿವ್ಯವಾಣಿ ಎಂದಾದರೂ ಹುಸಿಯಾಗುತ್ತದೆಯೆ?

ರಾಯಚರಣನಿಗೆ ವೈರಾಗ್ಯ ಹಿಡಿಯಿತು ಎಂದು ಕೇಳಿದೊಡನೆ ಆ ಹಳ್ಳಿಯಲ್ಲಿ ಆನಂದದ ಆಶ್ಚರ್ಯದ ಗೌರವದ ಕೋಲಾಹಲವೆದ್ದಿತು. ತಮಗೆ ಇಷ್ಟವಿಲ್ಲದಿದ್ದರೂ ಅವನಿಗೆ ಕೂಳು ಹಾಕಲೇಬೇಕಾಗಿದ್ದವರಿಗೆ ಸದ್ಯಕ್ಕೆ ಪೀಡೆ ತೊಲಗಿತಲ್ಲಾ ಎಂದು ಸಂತೋಷವಾಗಿ ಭಗವಾನ್ ದಾಸ ಬಾಬಾಜಿಯನ್ನು ಹೊಗಳಿದರು. ವೈರಾಗಿಗಳಾಗಬೇಕು ಎಂಬ ತೀವ್ರವಾದ ಆಕಾಂಕ್ಷೆಯಲ್ಲಿಯೆ ಜೀವನವನ್ನೆಲ್ಲಾ ಕಳೆದು ತುದಿಮೆಟ್ಟಲಿಗೆ ಬಂದಿದ್ದವರು ಈ ತರುಣನ ವೈರಾಗ್ಯಕ್ಕೆ ಮೂಗುಬೆರಳಾಗಿ ಆಶ್ಚರ್ಯಪಟ್ಟರು. ಕೆಲವು ವಿಧವೆಯರು ‘ಆ ಪುಣ್ಯ ಎಲ್ಲರಿಗೂ ಬರುತ್ತದೆಯೆ? ಎಲ್ಲವೂ ಪೂರ್ವಜನ್ಮದ ಸಂಸ್ಕಾರದ ಮಹಿಮೆ! ದೇವರ ಕೃಪೆ! ಹುಡುಗನಿಗೆ ಮಮುಕ್ಷತ್ವ ಬರುವುದೆಂದರೇನು ಸಾಮಾನ್ಯವಾಯಿತೆ? ಹಿಂದಿನ ಕಾಲದಲ್ಲಿ ಧ್ರುವ, ಪುಣ್ಯಾತ್ಮ, ಒಬ್ಬ ಹಾಗೆ ಮಾಡಿದ್ದನಂತೆ. ಇಂದಿನ ಕಾಲದಲ್ಲಿ ಅಂಥಾ ಪುಣ್ಯಾತ್ಮ ನಮ್ಮ ಹಳ್ಳಿಯಲ್ಲಿಯೆ ಹುಟ್ಟುತ್ತಾನೆ ಎಂದು ಯಾರು ಕಂಡಿದ್ದರು!” ಎಂದು ಕಣ್ಣೊರೆಸಿ ಮೂಗುಜ್ಜಿಕೊಂಡು ಗೌರವ ಪ್ರದರ್ಶನ ಮಾಡಿದರು.

ಹಿಂದೆ ರಾಯಚರಣನನ್ನು ತಿರಸ್ಕರಿಸುತ್ತಿದ್ದವರೆಲ್ಲರೂ, ಶ್ರೀಮತ್ ಭಗವಾನ್ ದಾಸ ಬಾಬಾಜಿ ಮೊಳಕಾಲಿನಿಂದ ತುಸು ಕೆಳಗಿನವರೆಗೆ ಮಾತ್ರ ಬಿಳಿ ಪಂಚೆ ಸುತ್ತಿಕೊಂಡು, ಬಿಳಿಯ ನಿಲುವಂಗಿ ಹಾಕಿಕೊಂಡು ತುಲಸೀಮಣಿ ಮಾಲೆಯಿಂದಲೂ ವಿವಿಧ ಮುದ್ರೆಗಳಿಂದಲೂ ಶೋಭಿತನಾಗಿ, ಹರಿನಾಮದ ನಾಮಾವಳಿಯಿಂದ ಚಿರತೆಯ ಚರ್ಮದಂತೆ ಕಾಣುತ್ತಿದ್ದ ವಸ್ತ್ರವನ್ನು ಹೊದೆದು, ಮರದ ಮೆಟ್ಟುಗಳನ್ನು ಮೆಟ್ಟಿ, ಸುಪುಷ್ಟವಾಗಿ ಬೆಳೆದಿದ್ದ ಜುಟ್ಟನ್ನು ಕೆದರಿಬಿಟ್ಟು, ಶಂಖವೂದುತ್ತಾ ಜಾಗಟೆ ಬಾರಿಸುತ್ತಾ ಹರಿನಾಮ ಘೋಷಿಸುತ್ತಾ ಬೀದಿಯಲ್ಲಿ ಭಿಕ್ಷಾಟನೆಗೆ ಬಂದನೆಂದರೆ ಕುಳಿತವರೆದ್ದು ಧನಧಾನ್ಯಗಳನ್ನು ಭಕ್ತಿ ಗೌರವಗಳಿಂದ ನಿವೇದಿಸುತ್ತಿದ್ದರು.

ಸ್ವಲ್ಪ ಕಾಲದಲ್ಲಿಯೇ ಕಾಮಿನೀ ಕಾಂಚನ ತ್ಯಾಗ ಮಾಡಿದ ಬಾಬಾಜಿಗೆ ಎರಡನೆಯದರ ಸಿದ್ಧಿಯೇನೊ ಕೈಗೂಡಿತು. ಆದರೆ ಮನಸ್ಸು ಮೊದಲನೆಯದರ ಸಿದ್ಧಿಗೂ ಹಾತೊರೆಯತೊಡಗಿತು. ಅದಕ್ಕಾಗಿ ಬಾಬಾಜಿಯ ಸವಾರಿ ಯಾತ್ರೆ ಹೊರಟಿತು. ಊರಿನಲ್ಲಿ ಅನುಕೂಲವಿರಲಿಲ್ಲವಾಗಿ ಅಥವಾ ಅನುಕೂಲ ಮಾಡಿಕೊಳ್ಳಲು ಗೊತ್ತಿರಲಿಲ್ಲವಾಗಿ.

ದಾರಿಯಲ್ಲಿ ಅನೇಕ ಪವಿತ್ರ ಕ್ಷೇತ್ರಗಳಲ್ಲಿ ಭಗವಾನ್ ದಾಸ ಬಾಬಾಜಿ ವೈರಾಗ್ಯದ ಮಹಿಮೆಯನ್ನು ಯಥೇಚ್ಛವಾಗಿ ನೋಡುತ್ತಾ ಅವಕಾಶ ಸಿಕ್ಕಿದಾಗಲೆಲ್ಲ ಯಥಾಸಾಮರ್ಥ್ಯವಾಗಿ ಕಿಂಚಿದನುಭವ ಮಾಡಿಕೊಳ್ಳುತ್ತಾ ಮುಂಬರಿದನು! ಕೇನರಾಮಗೋಸ್ವಾಮಿಯ ಮಾತು ಹೆಜ್ಜೆ ಹೆಜ್ಜೆಗೂ ಅನುಭವವಾಗುತಿತ್ತು.

ಯಾತ್ರೆ ಮಾಡುತ್ತಾ ಬಾಬಾಜಿ ಒಂದು ವೈಷ್ಣವ ಗ್ರಾಮಕ್ಕೆ ಬಂದಾಗ ಅಲ್ಲಿಯ ವೈಷ್ಣವ ದೇವಸ್ಥಾನದಲ್ಲಿ ಮೇಳ ನಡೆಯುತ್ತದೆ ಎಂದು ತಿಳಿಯ ಬಂದಿತು. ಮೇಳ ಎಂದರೆ ವೈಷ್ಣವ ಬೈರಾಗಿಗಳಲ್ಲಿ ಬೇರೆ ಬೇರೆ ಅರ್ಥವಿದೆ. ಅದರಲ್ಲಿ ಬೈರಾಗಿಗಳಂತೆ ಬೈರಾಗಿಣಿಯೂ ಇರುತ್ತಾರೆ. ನಾನು ನನ್ನದು ಎಂಬ ಮಮತೆಯನ್ನೂ ಮೇಲು ಕೀಳು ಹಿರಿದು ಕಿರಿದು ಕೊಳಕು ಚೊಕ್ಕಟ ಮೊದಲಾದ ದ್ವಂದ್ವಭಾವಳನ್ನೂ ತ್ಯಾಗ ಮಾಡಿದ ಬೈರಾಗಿ ಮತ್ತು ಬೈರಾಗಿಣಿಯರಿಗೆ ಸಾಮಾನ್ಯ ಸಾಂಸಾರಿಗಳಂತೆ ವಿವಾಹಬಂಧನವು ನಿಷಿದ್ಧ. ಆದ್ದರಿಂದ ಅವರು ಹೀಗೆ ಮಾಡುತ್ತಾರೆ:

ಮಧುರಭಾವ ಸಾಧನೆ ಮಾಡಬೇಕೆನ್ನುವ ವೈಷ್ಣವಿಯರು ರಾತ್ರಿಯ ಕಾಲದಲ್ಲಿ ದೇವಸ್ಥಾನಕ್ಕೆ ಬಂದು, ಮುಸುಗು ಹಾಕಿಕೊಂಡು, ಹಿಲಾಲಿನ ಬೆಳಕಿನ ಮಬ್ಬಿನಲ್ಲಿ, ಸಾಲಾಗಿ, ಬೆರಳೊಂದನ್ನು ಮಾತ್ರ ಬುರುಕಿಯ ಹೊರಗೆ ತೋರಿಸುತ್ತಾ ಕೂತುಕೊಳ್ಳುತ್ತಾರೆ. ಮಧುರಭಾವಸಾಧನೆ ಮಾಡಲಿಚ್ಛಿಸುವ ಬೈರಾಗಿಗಳೂ ಅಲ್ಲಿಗೆ ಹೋಗಿ ಕಣ್ಣು ಕಟ್ಟಿಕೊಂಡು ಸಾಲಾಗಿ ನಿಲ್ಲುತ್ತಾರೆ. ಮುಖಂಡನು ಒಬ್ಬೊಬ್ಬ ವೈಷ್ಣವ ಬೈರಾಗಿಯನ್ನೇ ಮುಟ್ಟಿ ಸೂಚನೆ ಕೊಡಲು, ಅವನು ತಡವುತ್ತಾ ಮುಂಬರಿದು ಸಾಲಾಗಿ ಕುಳಿತಿರುವ ವೈಷ್ಣವಿಯರಲ್ಲಿ ಯಾರ (ಬುರುಕಿಯ ಹೊರಗಿರುವ) ಕೈಬೆರಳನ್ನು ಮೊದಲು ಮುಟ್ಟಿಹಿಡಿಯುತ್ತಾನೆಯೊ ಅವಳೊಡನೆ, ವಯಸ್ಸಿನ ತಾರತಮ್ಯಗಳನ್ನಾಗಲಿ ಶರೀರದ ರೋಗಾರೋಗ್ಯಗಳನ್ನಾಗಲಿ ರೂಪ ಕುರೂಪ ಲಕ್ಷಣ ವಿಲಕ್ಷಣಗಳನ್ನಾಗಲಿ ಲಕ್ಷಿಸದೆ ಒಂದು ವರ್ಷಕಾಲ ಮಧುರಭಾವಸಾಧನೆ ಮಾಡಲೇಬೇಕು. ತರುವಾಯ, ಅವನ ಪಾಡು ಅವನಿಗೆ; ಅವಳ ಪಾಡು ಅವಳಿಗೆ, ಇಬ್ಬರೂ ಮತ್ತೆ ಬೇರೆಬೇರೆಯ ವೈಷ್ಣವ ಸ್ವಯಂವರಗಳಿಗೆ ಹೋಗುತ್ತಾರೆ.

ಆ ಸಾಧಕರಿಗೆ ಸಂತಾನ ನಿರೋಧದ ವಿಜ್ಞಾನವಿದ್ಯೆ ಚೆನ್ನಾಗಿ ಗೊತ್ತಿರುವುದರಿಂದ, ಮುಕ್ತಾತ್ಮಗಳನ್ನು ಜನ್ಮವೆತ್ತುವಂತೆ ಮಾಡಿ, ಹುಟ್ಟು ಸಾವುಗಳ ಬಲೆಯಲ್ಲಿ ಅವುಗಳನ್ನು ಸಿಕ್ಕಿಸಿ, ಕೋಟಲೆಗೊಳಿಸುವ ಪಾಪವನ್ನು ಅವರು ಎಂದಿಗೂ ಕಟ್ಟಿಕೊಳ್ಳುವುದಿಲ್ಲ.

ನಮ್ಮ ಭಗವಾನ್ ದಾಸ ಬಾಬಾಜಿಯೂ ರಾತ್ರಿ ಮೇಳಕ್ಕೆ ಹೋದನು. ಕಣ್ಣು ಕಟ್ಟಿಕೊಳ್ಳುವ ಮೊದಲೇ ವೈಷ್ಣವಿಯರ ಸಾಲನ್ನು ಸಮೀಕ್ಷಿಸಿದನು. ಆದರೆ, ಹಾಳಾಯಿತು! ಎಲ್ಲರೂ ಬುರುಕಿ ಹಾಕಿಕೊಂಡಿದ್ದಾರೆ! ಆದರೂ ಬುರುಕಿಗಳನ್ನೇ ನೋಡಿ ಅಂದಾಜು ಮಾಡಿದನು. ಬಹಿರಂಗ ಸೌಂದರ್ಯವು ಅಂತರಂಗ ಸೌಂದರ್ಯಕ್ಕೆ ಸಾಕ್ಷಿಯಲ್ಲವೆ? (ಮಧುರಭಾವಸಾಧನೆಯಲ್ಲಿ) ಸೌಂದರ್ಯಮೋಹದ ಕಾಮಕರ್ಮವಿರಬಾರದೆಂಬುದು ಅವನಿಗೆ ಆಗ ಮರೆತು ಹೋಗಿತ್ತು!) ಒಬ್ಬಳ ಬುರುಕಿ ಮನಸ್ಸಿಗೆ ಒಪ್ಪಿತು: ಲಕ್ಷಣವಾಗಿತ್ತು. ಬಾಬಾಜಿ ಅವಳಿಗೆ ನೇರವಾಗಿ ನಿಂತು ಕಣ್ಣುಕಟ್ಟಿಕೊಂಡನು.

ಮುಖಂಡನು ತನ್ನ ಪಕ್ಕದಲ್ಲಿದ್ದ ಮುದಿ ಬೈರಾಗಿಯೊಬ್ಬನನ್ನು ಮುಟ್ಟಿ ವೈಷ್ಣವಿಯರ ಬಳಿಗೆ ಬಿಡಲು ನಮ್ಮ ಬಾಬಾಜಿಗೆ ಎದೆ ಪರದಾಡತೊಡಗಿತು. ಅವನೆಲ್ಲಿ ತಾನು ಕಣ್ಣಿಟ್ಟಿದ್ದ ಬುರುಕಿಯನ್ನು ಮುಟ್ಟಿಬಿಡುತ್ತಾನೆಯೊ ಎಂದು. ತಡೆಯಲಾರದೆ ತನ್ನ ಕಣ್ಣಿನ ಬುಟ್ಟಿಯನ್ನು ಯಾರೂ ಕಾಣದಂತೆ ತುಸು ಓರೆ ಮಾಡಿ ನೋಡತೊಡಗಿದನು. ಆ ಮುದಿ ಬಾಬಾಜಿ ದೊಣ್ಣೆಯೂರಿಕೊಂಡು ತೂರಾಡುತ್ತಾ ಹೋಗಿ ಮುಟ್ಟಿದನು. ಭಗವಾನ್ ದಾಸನಿಗೆ ಜೀವ ಬಂದಂತಾಯಿತು. ಆ ಮುದಿ ಬೈರಾಗಿ ತಾನು ವರಿಸಿದ್ದ ಬುರುಕಿಯ ತಂಟೆಗೆ ಹೋಗಿರಲಿಲ್ಲ!

ನಮ್ಮ ಬಾಬಾಜಿಯ ಸರದಿಯೂ ಬಂತು. ಓರೆಯಾಗಿದ್ದ ಬಟ್ಟೆಯಿಂದ ಒಕ್ಕಣ್ಣು ಕಾಣುತ್ತಿದ್ದರೂ ಹುಟ್ಟು ಕುರುಡನಂತೆ ಅತ್ತಿತ್ತ ತೂರಾಡಿ ನಡೆಯುತ್ತಾ ಹೋಗಿ ತಾನು ಒಲಿದಿದ್ದ ಬುರುಕಿಯ ಕಂಡಿಯಲ್ಲಿ ಹೊರಟುಕೊಂಡಿದ್ದ ಬೆರಳನ್ನು ಪ್ರೀತಿ ಸೋರುವಂತೆ ಹಿಡಿದನು. ವೈಷ್ಣವಿ ಬುರುಕಿ ಹಾಕಿಕೊಂಡೇ ಅವನನ್ನು ಹಿಂಬಾಲಿಸಿದಳು.

ಮಧುರಭಾವ ಸಾಧನೆಯ ಸ್ಥಾನದಲ್ಲಿ ಬುರುಕಿಯನ್ನು ತೆಗೆದು ನೋಡಿದಾಗ ಬಾಬಾಜಿಯ ಹೊಂಗಸನು ಹುಡಿಹುಡಿಯಾಗಿ ಹಡಿಗೆತ್ತಿತ್ತು. ಹರಪುರದ ಬೆಸ್ತರವನ ಅಜ್ಜಿ ಅಪ್ಸರೆಯಾಗಿ ಕಂಡಳು-ಅವನ ಸ್ವಯಂವರದ ವೈಷ್ಣವಿಯ ಮುಂದೆ! ಆದರೇನು ಮಾಡುವುದು? ಬೈರಾಗಿಗಳ ಧರ್ಮದ ಪ್ರಕಾರ ಒಂದು ವರ್ಷ ಅವಳೊಡನೆ ಸಾಧನೆ ಮಾಡಲೇಬೇಕಷ್ಟೆ!

ತರುಣ ಬಾಬಾಜಿಗೆ ಆ ಮುದಿ ಹದ್ದಿನೊಡನೆ ಮುಧರಭಾವ ಸಾಧನೆ ಮಾಡಲು ಸ್ವಲ್ಪವೂ ಮನಸ್ಸೊಪ್ಪಲಿಲ್ಲ. ಆದರೆ ಆ ಮುದುಕಿಯ ಅಭಿಪ್ರಾಯ ಭಿನ್ನವಾಗಿತ್ತು. ಇನ್ನೇನು ತುಸು ಕಾಲದಲ್ಲಿಯೇ ಸಾಯುವುದು ನಿಶ್ಚಯವಾದ್ದರಿಂದ ಆದಷ್ಟು ಧರ್ಮಸಾಧನೆ ಮಾಡಿ ಪರಾಂಧಮದಲ್ಲಿ ವಿಷ್ಣುಪಾದಾರವಿಂದವನ್ನು ಸೇರಬೇಕೆಂದು ಆಕೆಯ ಮಹೋಗ್ರವಾದ ಹಂಬಲವಾಗಿತ್ತು. ಸರಿ, ಸಾಧನೆಗೆ ಬದಲು ಕಾದಾಟ ಮೊದಲಾಯಿತು. ಒಂದು ವರ್ಷದ ಮಾತಿರಲಿ, ಒಂದು ತಿಂಗಳೂ ಅವಳೊಡನೆ ಇರಲಾರದ ಬಾಬಾಜಿ ಹೇಳದೆ ಕೇಳದೆ ಹರಪುರ ಗ್ರಾಮಕ್ಕೆ ಕದ್ದೋಡಿಬಂದನು. ಆದರೆ ತುಂಬಾ ಅನುಭವಶಾಲಿಯಾಗಿ ಬಂದಿದ್ದನು.

ಮಧುರಭಾವಸಾಧನೆಯ ದಿವ್ಯರುಚಿಯನ್ನು ಸವಿನೋಡಿದ್ದ ಆತನಿಗೆ ಸುಮ್ಮನಿರಲಾಗಲಿಲ್ಲ. ಮನೆಯಿಂದ ಮನೆಗೆ ಅಲೆದು ದುಡ್ಡು ಒಟ್ಟು ಮಾಡಿ ಒಂದು ಅಖಾಡ ಕಟ್ಟಿಸಿದನು. ಅಖಾಡ ಎಂದರೆ ವೈಷ್ಣವ ಬೈರಾಗಿಗಳ ಮಾತಿನಲ್ಲಿ ವೈಷ್ಣವ ಮಠ ಎಂದರ್ಥ. ಭಗವಾನ್‌ದಾಸ ಬಾಬಾಜಿಯೇ ಆ ಮಠಕ್ಕೆ ಮಹಂತನಾಗಿ ನಿಂತನು. ಅಲ್ಲದೆ ಊರಿನಲ್ಲಿ ಬಲಿಷ್ಠನೂ ಶ್ರೀಮಂತನೂ ವಿದ್ಯಾವಂತನೂ ಎನ್ನಿಸಿಕೊಂಡಿದ್ದ ಕೇನರಾಮಗೋಸ್ವಾಮಿ ಬಾಬಾಜಿ ಯಾತ್ರೆಗೆ ಹೋಗಿದ್ದಾಗ ಆಕಸ್ಮಾತ್ತಾಗಿ (ನಾಲ್ಕನೆಯ ಕಿರುಹರೆಯದ ಹೆಂಡತಿಯ ದೆಸೆಯಿಂದ ಎಂದು ಆಗದವರು ಹೇಳುತ್ತಿದ್ದರು) ತೀರಿಕೊಂಡಿದ್ದರಿಂದ ಭಗವಾನ್‌ದಾಸನೇ ಆತನ ಬಲಿಷ್ಠಸ್ಥಾನ ಶ್ರೀಮಂತಸ್ಥಾನ ವಿದ್ಯಾವಂತನ ಸ್ಥಾನಗಳ ಜೊತೆಗೆ ಗುರುಸ್ಥಾನವನ್ನೂ ವಹಿಸಿಕೊಂಡನು. ಕೇನರಾಮನ ನಾಲ್ಕು ಸ್ಥಾನಗಳನ್ನು ವಹಿಸಿಕೊಂಡವನಿಗೆ ಐದನೆಯ ಸ್ಥಾನವನ್ನೂ ಏತಕ್ಕೆ ವಹಿಸಿಕೊಳ್ಳಬಾರದು ಎಂಬ ಉಪಕಾರ ಬುದ್ಧಿ ಹುಟ್ಟಿತು. ಕೇನರಾಮನ ತರುಣ ವಿಧವೆಯ ದುಃಖವನ್ನೂ ಕಣ್ಣೀರನ್ನೂ ತೊಡೆಯುವ ಸಲುವಾಗಿ ಆಕೆಗೆ ಹೆಚ್ಚಾಗಿ ದೇವರ ಪ್ರಸಾದವನ್ನೂ ಕೊಟ್ಟು, ದಿನೆ ದಿನೇ ಅಖಾಡಕ್ಕೆ ಬಂದು ವಿಷ್ಣುಪ್ರೀತಿ ಸಂಪಾದನೆ ಮಾಡಬೇಕೆಂದು ಕರುಣೆಯಿಂದ ಬೋಧಿಸಿದನು. ಮುದಿ ಗಂಡನ ಹೆಂಡತಿಯಾಗಿದ್ದು, ಇಂಗಿತಜ್ಞಳಾಗಿದ್ದ ಆಕೆಯೂ ಧರ್ಮಸಂಕೇತವನ್ನು ಅರಿತು ಸಂತೋಷದಿಂದ ಸಮ್ಮತಿಸಿದಳು.

ದಿವಂಗತನಾಗಿದ್ದ ಕೇನರಾಮನ ತರುಣ ವಿಧವೆ ಪತಿವಿಯೋಗದ ದುಃಖ ಶಮನಾರ್ಥವಾಗಿಯೂ ಆತ್ಮಕ್ಷೇಮಕ್ಕಾಗಿಯೂ ಭಗವಾನ್‌ದಾಸ ಬಾಬಾಜಿಯ ಮಠಕ್ಕೆ ಆಗಾಗ್ಗೆ ಹೋಗಿ ಬಾಬಾಜಿ ಪೂಜಿಸುತ್ತಿದ್ದ ರಾಧಾಕೃಷ್ಣ ಮೂರ್ತಿಯ ಮುಂದೆ ಕಣ್ಣೀರು ಸುರಿಸಿ ತನ್ನ ದುರವಸ್ಥೆಯನ್ನು ಹೇಳಿಕೊಳ್ಳುತ್ತಿದ್ದಳು. ಮಠಕ್ಕೆ ಹೋಗಿ ಬಂದ ಹಾಗೆಲ್ಲಾ ಆಕೆಯ ಭಕ್ತಿಯನ್ನು ನೋಡಿ ಬಾಬಾಜಿ ಅವಳಿಗೆ ‘ರಾಧಾದಾಸಿ’ ಎಂದು ನಾಮಕರಣ ಮಾಡಿ ಹರಸಿ ಬಿರುದು ಹೊರಿಸಿದನು.

ರಾಧಾದಾಸಿಯ ಭಕ್ತಿಯ ಕಥೆ ಚಿತ್ರವಿಚಿತ್ರವಾಗಿ ಊರಿನಲ್ಲೆಲ್ಲ ಹಬ್ಬಿತು. ಕೆಲವರು ಆಕೆಗೆ ದೇವರು ನಿತ್ಯವೂ ಕಾಣಿಸಿಕೊಳ್ಳುತ್ತಾನಂತೆ ಎಂದರು. ಕೆಲವರು ಶ್ರೀಕೃಷ್ಣನು ಆಕೆ ಕೊಡುವ ನೈವೇದ್ಯವನ್ನು ಆಕೆಯ ಕೈಯಿಂದಲೇ ತುತ್ತು ತುತ್ತಾಗಿ ಸ್ವೀಕರಿಸುತ್ತಾನಂತೆ ಎಂದರು. ಮತ್ತೆ ಕೆಲವರು ಆಕೆಗೆ ಭ್ರೂಮಧ್ಯೆ ಜೋತಿಃಪುರುಷನು ಭೇಟಿ ಕೊಡುತ್ತಾನೆ ಎಂದರು. ಇನ್ನೂ ಕೆಲವರು ವಿಷ್ಣು ಪ್ರತ್ಯಕ್ಷನಾಗಿ ‘ನಿನ್ನನ್ನು ಕೆಲ ದಿನಗಳಲ್ಲಿಯೇ ಲಕ್ಷ್ಮಿಯನ್ನಾಗಿ ಮಾಡಿಕೊಳ್ಳುತೇನೆ’ ಎಂದು ಆಕೆಗೆ ಭಾಷೆ ಕೊಟ್ಟಿದ್ದಾನಂತೆ ಎಂದು ನಂಬಿ ನುಡಿದರು. ಅಂತೂ ಹಳ್ಳಿಯ ತುಂಬಾ ರಾಧಾದಾಸಿಯ ಭಕ್ತಿಯ ಮಾತು ಹಬ್ಬಿತು.

ಉಳಿದ ವಿಧವೆಯರು ‘ರಾಧಾದಾಸಿಗಿಂತಲೂ ನಾವೇನು ಕಡಿಮೆಯೆ ಭಕ್ತಿಯಲ್ಲಿ? ಅವಳಿಗಿಂತಲೂ ಎಷ್ಟೋ ಮೊದಲೆ ಗಂಡಂದಿರನ್ನು ಕಳೆದುಕೊಳ್ಳಲಿಲ್ಲವೆ ನಾವು?’ ಎಂದು ದೇವರ ಮೇಲೆ ಕ್ರುದ್ಧರಾಗಿ, ಅವಳಿಗಿಂತಲೂ ಹೆಚ್ಚಾಗಿ ಮಠಕ್ಕೆ ಹೋಗತೊಡಗಿದ್ದುದರಿಂದ ವಿಷ್ಣುಪತ್ನಿಯಾದ ಲಕ್ಷ್ಮಿಯ ಸ್ಥಾನಕ್ಕೆ ಉಮೇದುದಾರರು ಹೆಚ್ಚಿದರು.

ಕೇನರಾಮನ ತರುಣ ವಿಧವೆಗೆ ರಾಧಾದಾಸಿ ಎಂದು ಹೆಸರು ಕೊಟ್ಟ ಮೇಲೆ ಭಗವಾನ್‌ದಾಸನು ತನ್ನ ಹೆಸರನ್ನೂ ಬದಲಾಯಿಸಿಕೊಂಡನು. ಭಗವಾನ್ ಎಂದರೇನು? ಕೃಷ್ಣ ಎಂದರೇನು? ಆದ್ದರಿಂದ ಕೃಷ್ಣದಾಸ ಎಂದು ಹೆಸರಿಟ್ಟುಕೊಂಡನು. ಪರ್ಯಾಯಾರ್ಥದ ದೃಷ್ಟಿಯಿಂದ ಹೆಸರು ಬದಲಾಯಿಸಿಕೊಂಡ ಅವನಿಗೆ ಗಣಿತದ ದೃಷ್ಟಿಯೂ ಹೊಳೆಯಿತು.

ರಾಧೆಗೆ ಕೃಷ್ಣನು ಪ್ರಿಯನಾದರೆ ರಾಧಾದಾಸಿಗೆ ಕೃಷ್ಣದಾಸನು ಪ್ರಿಯನಾಗಬಾರದೇಕೆ?

ಒಂದು ರಾತ್ರಿ ಕೃಷ್ಣದಾಸನು ರಾಧಾದಾಸಿಗೆ ಮಧುರಭಾವ ಸಾಧನೆಯ ಮಹಿಮೆಯನ್ನೂ, ಪುರುಷರೆಲ್ಲ ಕೃಷ್ಣರು ಸ್ತ್ರೀಯರೆಲ್ಲ ರಾಧೆಯರು ಎಂಬ ತತ್ವವನ್ನೂ, ವೈಷ್ಣವರ ಗುಪ್ತಸಾಧನೆಗಳನ್ನೂ ವಿವರಿಸಿದನು. ಕೇಳಿ ರಾಧಾದಾಸಿಗೆ ರೋಮಾಂಚವಾಗಿ “ಅಯ್ಯೋ, ನಾನು ಅಂತಹ ಮಹಾ ಯೋಗ್ಯತೆಗೆ ಅರ್ಹಳೇ? ಪುಣ್ಯವಿಲ್ಲದಿದ್ದರೆ ಅದೆಲ್ಲಿ ಲಭಿಸುತ್ತದೆಯೇ?” ಎಂದು ಮರುಗಿದಳು.

ಕೃಷ್ಣದಾಸ ಬಾಬಾಜಿ “ರಾಧಾದಾಸಿ, ನೀನು ಮರುಗಬೇಡ. ನಿನ್ನಾತ್ಮವನ್ನು ನನಗೊಪ್ಪಿಸಿ ಶರಣಾಗು. ನಾನು ನಿನ್ನನ್ನು ವೈಕುಂಠಕ್ಕೆ ತಕರಾರಿಲ್ಲದೆ ಕರೆದೊಯ್ಯುತ್ತೇನೆ. ಬೇಕಾದ್ದೇನೆಂದರೆ ಪ್ರಪತ್ತಿ, ಭಕ್ತಿ. ಅಂದರೆ ನಾನು ಹೇಳಿದಂತೆ ಕೇಳುವುದು” ಎಂದು ಹೂವುಗಳಿಂದ ಅಲಂಕೃತವಾಗಿ ಉಯ್ಯಾಲೆಯ ಮೇಲಿದ್ದ ರಾಧಾಕೃಷ್ಣರ ಮೂರ್ತಿಯನ್ನು ನಿರ್ದೇಶಿಸಿ ಕೈಮುಗಿದು ಮತ್ತೆ “ನಾನು ಹೇಳಿದಂತೆ ನೀನು ಕೇಳಬೇಕು” ಎಂದನು.

“ನಾನು ಒಲ್ಲೆ ಎಂದೆನೆ? ತಮಗೆ ನನ್ನ ಮೇಲೆ ಇನ್ನೂ ದಯೆ ಬರಲಿಲ್ಲ. ಬಡವಳ ಮೇಲೆ ಕೃಪೆದೋರಬೇಕು” ಎಂದು ರಾಧಾದಾಸಿ ಕಣ್ಣೀರು ಮಿಡಿದಳು.

ಬಾಬಾಜಿ “ಹಾಗಾದರೆ ಏಳು, ಈಗಲೇ ಪ್ರಾರಂಭಿಸೋಣ. ಆಧ್ಯಾತ್ಮ ಸಾಧನೆಯ ವಿಚಾರದಲ್ಲಿ ಎಷ್ಟು ಶೀಘ್ರ ತೊಡಗಿದರೆ ಅಷ್ಟೂ ಕಲ್ಯಾಣವೆ!” ಎಂದು ಹೇಳಿ ಉಯ್ಯಾಲೆಯ ಮೇಲಿದ್ದ ರಾಧಾಕೃಷ್ಣರ ವಿಗ್ರಹವನ್ನು ಎತ್ತಿ ಕೆಳಗಿಟ್ಟನು.

ರಾಧಾದಾಸಿ ಕುತೂಹಲದಿಂದಲೂ ಆಶ್ಚರ್ಯದಿಂದಲೂ ನೋಡುತ್ತಿದ್ದ ಹಾಗೆ ಕೃಷ್ಣದಾಸನು ತಾನೇ ಉಯ್ಯಾಲೆಯ ಮೇಲೆ ಕೂತನು. ಭಾವವಶನಾದನು. ಕೃಷ್ಣದಾಸನಲ್ಲಿ ದಾಸತ್ವವು ಮೆಲ್ಲಮೆಲ್ಲನೆ ಅಳಿಯಿತು; ಕೃಷ್ಣತ್ವವು ಸಂಪೂರ್ಣವಾಗಿ ಮೈದೋರಿತು.

ದೂರ ಕುಳಿತು ನೋಡುತ್ತಿದ್ದ ಅವಳ ಕಡೆ ಶೃಂಗಾರದೃಷ್ಟಿಯಿಂದ ನೋಡುತ್ತಾ ಭಾವಗದ್ಗದ ವಾಣಿಯಿಂದ “ರಾಧಾ, ಬಾ ಇಲ್ಲಿಗೆ, ನಾನು ಬಂದಿದ್ದೇನೆ, ಬೃಂದಾವನದ ಶ್ರೀ ಕೃಷ್ಣಮೂರ್ತಿ, ನಿನ್ನ ಭಕ್ತಿಗೆ ಮೆಚ್ಚಿ!” ಎಂದು ತೋಳು ಚಾಚಿದನು.

ರಾಧಾದಾಸಿಗೂ ದಾಸಿತ್ವವು ಅಳಿಸಿಹೋಗಿತ್ತು. ಭಾವವಶಳಾಗಿದ್ದ ಆಕೆಗೆ ತಾನೂ ರಾಧೆಯಾಗಿದ್ದಂತೆ ಅನುಭವವಾಯಿತು. ವೈಯಾರದಿಂದ ಮೇಲೆದ್ದು ಬಳುಕುತ್ತಾ ಹೋಗಿ …. ಮುಂದೆ ಆಕೆಗೆ ಪ್ರಜ್ಞೆಯಿರಲಿಲ್ಲ. ಯಾವುದೋ ಒಂದು ಮಹದಾನಂದದ ಹೊಳೆಯಲ್ಲಿ ಕೊಚ್ಚಿಹೋಗುತ್ತಿದ್ದಳು.

ರಾಯಚರಣನಿಗೆ ವೈರಾಗ್ಯದ ಮಹಿಮೆಯನ್ನು ಕುರಿತಾಡಿದ ಕೇನರಾಮನ ಮಾತು ನೆನಪಿಗೆ ಬಂತು;

“ಅಟ್ಟಿದರೆ ಓಡುತ್ತದೆ; ಬಿಟ್ಟರೆ ಹಿಂಬಾಲಿಸುತ್ತದೆ.”