ಸದಾ ಹೊಯ್ಯುವ ಮಳೆ, ಸುಯ್ಯುವ ಗಾಳಿ ನನ್ನ ನಿನ್ನ ನಡುವೆ
ಉರಿಯುವ ಬೇಸಿಗೆ, ಕೆಂಡದ ಹಾಸುಗೆ ನನ್ನ ನಿನ್ನ ನಡುವೆ
ಉದುರುವ ಎಲೆ, ಉರಿಯುವ ಚಿತೆ ನನ್ನ ನಿನ್ನ ನಡುವೆ
ಹದ್ದಿನ ರೆಕ್ಕೆಯ ನೆರಳೂ, ಬೇಟೆ ನಾಯಿಗಳ ಬೊಗಳೂ ನನ್ನ ನಿನ್ನ ನಡುವೆ.

ಸಾವಿರ ಮನೆ ದೀಪಗಳುರಿದಿವೆ ಝಗ ಝಗ ನನ್ನ ನಿನ್ನ ನಡುವೆ
ತಲೆಯಿಕ್ಕಲು ನೆಲೆಯಿಲ್ಲವೆ ನಮಗೀ ತುಂಬಿದೂರಿನೊಳಗೆ.
ಲಕ್ಷಾಂತರ ಜನ ಬದುಕುವ-ಸಾಯುವ ಈ ಭೂಮಂಡಲದೊಳಗೆ
ನಾನೂ ನೀನೂ ಯಾವ ಲೆಕ್ಕವೆ? ಆದರು ಈ ನಾಲ್ಕು ಜನದ ಭಯವೆ?

ನನ್ನ ಸುತ್ತ ಆ ನಾಲ್ಕು ಜನ, ನಿನ್ನ ಸುತ್ತ ಈ ನಾಲ್ಕು ಜನ
ಹೊತ್ತು ಸಾಗಿಸಲು ಹೊಂಚುತ್ತಾರೆ, ಹುಡುಕುತ್ತಾರೆ ದಿನಾ ದಿನಾ.
ಕೊಂಚ ಸಿಕ್ಕಿತೋ ಏನಾದರು, ಸರಿ, ಕುತಂತ್ರದ ಚಿತೆಯನ್ನೊಟ್ಟಿ
ಸುಟ್ಟು ಬಿಡುತ್ತಾರೆ ಜೀವಸಹಿತ ಈ ಬಾಳಿಗೆ ಬೆಂಕಿಯ ಹಚ್ಚಿ.

ಎದ್ದರೆ ಕಾಲಿಗೆ ಬೀಳುತ್ತದೆ, ಬಿದ್ದರೆ ಕಚಪಿಚ ತುಳಿಯುತ್ತದೆ ಈ ಲೋಕ,
ಹೇಗೋ ಏನೋ ಮೇಲೆದ್ದವನದೆ ಗದ್ದುಗೆ, ಅವನದೆ ಎಲ್ಲ ಪ್ರತಾಪ.
ಸುಮ್ಮನಿದ್ದವನ ಹಾಗೇ ತಳ್ಳಿ ಕೊರಳಿಗೆ ಬಕರಾ ಬ್ರ್ಯಾಂಡು.
ಆಮೇಲೇನಿದೆ ? ಗೆದ್ದವನಿಗೆ ಬಾಜಾ ಬಜಂತ್ರಿ ಬ್ಯಾಂಡು !

ಇವರದೆ ಮೆರವಣಿಗೆ, ಇವರದೆ ಆರ್ಭಟ ನನ್ನ ನಿನ್ನ ನಡುವೆ.
ಕಾಲಿಗೆ ಬಿದ್ದಲ್ಲದೆ ಕರುಣಿಸಲೊಲ್ಲದ ಈ ಕೃಪಾನಂದರ ತಂತ್ರಕ್ಕೆ
ಬೇಸರವಾಗಿದೆ ; ಹೋಗುವ ನಡೆ ತಲೆಬಾಗದೆ ನಿಲ್ಲುವ ದೂರಕ್ಕೆ
ತಣ್ಣಗೆ ಉರಿದೂ ಕಿಡಿಗಣ್ಣಿಲ್ಲದ ದೀಪಾವಳಿಗಳ ತೀರಕ್ಕೆ.