ನಾಳೆ, ನನ್ನ ನಿನ್ನ ವಿಚಾರ
ಬೋಳು ಬುರುಡೆಯ
ದಪ್ಪ ಗಾಜುಗಳ ಕನ್ನಡಕದ
ಸಂಶೋಧಕನಿಗೆ ವಸ್ತುವಾದಾಗ,
ಕಾಣದ ಮರದ ಬೇರಿಂದ ತುದಿ ಎಲೆ ತನಕ
ಭೂತಗನ್ನಡಿ ಹಿಡಿದು ಹೊರಟಾಗ
ಹೇಗಿರುತ್ತೆ ಅಂತ
ನಮಗೇನು ಗೊತ್ತು?

ಹುಡುಕುತ್ತಾನೆ ಪಾಪ,
ನನ್ನ ನಿನ್ನ ಸಂಗತಿಯನ್ನು
ಲೈಬ್ರರಿಯ ಪುಸ್ತಕದ ಪಿರಮಿಡ್ಡಿನಲ್ಲಿ,
ನುಸಿ ಹಿಡಿದ ಹಾಳೆಗಳಲ್ಲಿ
ಮುದಿ ತಲೆಯ ಮೆದುಳ ಮಡಿಕೆಗಳಲ್ಲಿ
ಗೆದ್ದಲಡರಿದ ಹುತ್ತಗಳಲ್ಲಿ,
ನಾನೂ ನೀನೂ ಉಟ್ಟು ತೊಟ್ಟು
ಬಿಸಾಡಿದ ಚಿಂದಿಗಳಲ್ಲಿ
ಇನ್ನೂ ಏನೇನೋ ವಿಧಾನಗಳಲ್ಲಿ ಹುಡುಕಿ ತಡಕಿ
ದೊಡ್ಡ ಥೀಸಿಸ್ ಬರೆದು
ಡಾಕ್ಟರೇಟ್ ಪಡೆಯಲಿ ಬಿಡು
ನಾಳಿನ ಸಂಶೋಧಕ.

ನಾವು ಬದುಕಿದ್ದಾಗ
ನಮ್ಮ ದಿನದಿನದ ರೊಟ್ಟಿ
ಕಾದ ಹೆಂಚಿನ ಮೇಲೆ ಸೀದುಹೋಗಿತ್ತೆಂದು,
ನನ್ನ ನಿನ್ನ ವಿಚಾರ ನೂರಾರು ಚರಂಡಿಬಾಯಿಗಳಲ್ಲಿ
ಕೊಚ್ಚೆಯಾಗಿತ್ತೆಂದು,
ನಮ್ಮ ಹಾಸುಗೆಯ ಕೆಳಗೆ ಹಾವು ಹೆಡೆಯೆತ್ತಿದ್ದ
ಮುಳ್ಳುಪೊದೆ ಇತ್ತೆಂದು
ನಾಳಿನ ಆ ಸಂಶೋಧಕನಿಗೆ
ಹೇಗೆ ಗೊತ್ತಾದೀತು?
ಆದರೂ,
ನಾಳೆ ನನ್ನ ನಿನ್ನ ಮೇಲಿರುವ ಮಣ್ಣನ್ನು ಅಗೆವ ಆ
ಸಂಶೋಧಕನ ಗುದ್ದಲಿಗೆ
ಈಗ ದೊರೆಯದ ಯಾವುದೋ ಚಿನ್ನದ ರೇಖೆ
ಸಿಕ್ಕೀತು !