ನನ್ನ ನೆನಪಿನಾಳದಲ್ಲಿ
ಸದಾ ಹರಿವ ನದಿಗಳು
ಕೊಚ್ಚಿ ಹೋದ ದಡಗಳು
ಮುರಿದು ಬಿದ್ದ ಮನೆಗಳು
ಸ್ತಬ್ದವಾದ ದನಿಗಳು.

ನನ್ನ ನೆನಪಿನಾಳದಲ್ಲಿ
ಮೊರೆವ ಕಡಲ ಅಲೆಗಳು
ಒಡೆದು ಹೋದ ಹಡಗುಗಳು
ನಿರ್ಮಾನುಷ ತೀರಗಳಲಿ
ಹೊಳೆವ ಹಳೆಯ ಮೂಳೆಗಳು.

ನನ್ನ ನೆನಪಿನಾಳದಲ್ಲಿ
ಹುಲಿಗುಡುಗಿನ ಕಾಡುಗಳು
ಬೆನ್ನಟ್ಟುವ ನಾಯಿಗಳು
ರಕ್ತ-ಸಿಕ್ತವಾಗಿ ಬಿದ್ದ
ಅಸಹಾಯಕ ನೋವುಗಳು.

ನನ್ನ ನೆನಪಿನಾಳದಲ್ಲಿ
ಎಲೆಯುದುರಿದ ಕೊಂಬೆಗಳು
ಮುಂಜಾನೆಯ ಮಬ್ಬಿನಲ್ಲಿ
ಬಟ್ಟಗಣ್ಣು ಬಿಟ್ಟು ಕೂತು
ಕಾಯುತಿರುವ ಗಿಳಿಗಳು.