ಇದ್ದಕ್ಕಿದಂತೆ ಯಾವುದೋ ಅಸ್ಪಷ್ಟವಾದ ಸದ್ದಿನಿಂದ ನನಗೆ ಎಚ್ಚರವಾಯಿತು. ಅರೆತೆರದ ಕಣ್ಣುಗಳಿಗೆ ಗೋಚರವಾದದ್ದು ಮಬ್ಬುಗತ್ತಲು. ಆ ಕತ್ತಲೆಗೆ ಕಂಡಿಹೊಡೆದಂತಿದ್ದ ಒಂದೆರಡು ಕಿಟಕಿಗಳ ಚೌಕಟ್ಟುಗಳ ಆಕಾರಗಳು, ಅದರಾಚೆಗೆ ಎತ್ತರವಾಗಿ ಕೊಂಬೆಗಳನ್ನು ಚಾಚಿಕೊಂಡ ಮರ, ಮರದ ಕೊಂಬೆ ರೆಂಬೆಗಳಲ್ಲಿ ಗಾಳಿಗೆ ಮರ್ಮರಿಸುವ ಎಲೆಗಳ ನಿಬಿಡತೆ. ಆ ಮರದ ಕೆಳಗೆ  ಯಾರದೋ ಹೆಜ್ಜೆಯ ಸದ್ದು. ಅದು ಬರೀ ಹೆಜ್ಜೆಗಳ ಸದ್ದಲ್ಲ, ಹಾಗಾಗಿದ್ದರೆ ಅವು ಟಕ್ ಟಕ್ ಎಂದು ಒಂದು ಅನುಕ್ರಮದಲ್ಲಿ ಸದ್ದು ಮಾಡುತ್ತಿರಲಿಲ್ಲ. ನನ್ನನ್ನು ಎಚ್ಚರಿಸಿದ್ದು ಇದೇ ಟಕ್ ಟಕ್ ಟಕ್ ಎಂದು ಛಂದೋಬದ್ಧವಾಗಿ ಹೊರಟ ಸದ್ದು. ಅದು ಮರದ ಕೆಳಗಿಂದಲೇ ಹಾದು ಪಕ್ಕದ ದೇವಸ್ಥಾನದ ಕಡೆಯಿಂದ, ಹಳೆಯ ಮಠದ ಕಡೆ ನಿಧ ನಿಧಾನವಾಗಿ ಕ್ಷೀಣಿಸುತ್ತ ಹೋಗುತ್ತಿತ್ತು. ಅದು ನಾನು ಚಿಕ್ಕಂದಿನಲ್ಲಿ ರಾತ್ರಿಯ ಕಥನದ ಸಂದರ್ಭದಲ್ಲಿ ಸಮ್ಮೂರ ಮರಿಯಪ್ಪನ ಬಾಯಿಂದ ಕೇಳಿದ ‘ಜಡೆಮುನಿಯ’ ಹೆಜ್ಜೆಯ ಸದ್ದೇ ಇರಬಹುದು ಎನ್ನಿಸಿ ಎದ್ದು ಕುಳಿತೆ. ಅದೇ ವೇಳೆಗೆ ಕಿಟಕಿಗಳಿಗೆ ಸಮಾನಾಂತರವಾಗಿ ಚಾಚಿಕೊಂಡ ಮರದ ಕೊಂಬೆಗಳ ನಡುವೆ ಕೀಚ್ ಕೀಚ್ ಎನ್ನುತ ಪಟ ಪಟನೆ ರೆಕ್ಕೆ ಬಡಿಯುವ ಹಕ್ಕಿಗಳ ಸದ್ದು ಪ್ರಾರಂಭವಾಗಿ ನನ್ನ ಮೈ ಬೆವರಿತು. ನನ್ನ ಅಕ್ಕಪಕ್ಕದಲ್ಲಿ, ನಲ್ವತ್ತಡಿ ಉದ್ದ, ಹದಿನೈದಡಿ ಅಗಲದ ಮಹಡಿಯ ಮೇಲಣ ಕೊಠಡಿಯ ಉದ್ದಕ್ಕೂ ಮಲಗಿದ ನನ್ನ ಸಹಪಾಠಿಗಳಲ್ಲಿ ಯಾರನ್ನಾದರೂ ಎಬ್ಬಿಸೋಣವೇ ಅನ್ನಿಸಿತು. ಒಂದು ವೇಳೆ ಎಬ್ಬಿಸಿ, ಇದೇನು ಸದ್ದು ಎಂದು ಕೇಳೋಣವೇ. ಹಾಗೆ ಮಾಡಿದ್ದಾದರೆ ಇವನೆಂಥ ಪುಕ್ಕಲು ಆಸಾಮಿ ಎಂದು ಹಾಸ್ಯ ಮಾಡಬಹುದೋ ಏನೋ ಎಂದು ಉಸಿರು ಬಿಗಿಹಿಡಿದು ಸುಮ್ಮನೆ ಕೂತೆ.  ಮರದ ಕೊಂಬೆಗಳ ನಡುವೆ ಹಕ್ಕಿಗಳ ರೆಕ್ಕೆಯ ಪಟ ಪಟ ಸದ್ದು ಇದ್ದಕ್ಕಿದಂತೆ ಸ್ತಬ್ಧವಾಯಿತು. ಮತ್ತೆ ಗಾಳಿಗೆ ಜೋಲಿ ಹೊಡೆಯುವ ಮರದ ಕೊಂಬೆಗಳ ಜೀಕುದನಿ. ನಾನು ಸ್ವಲ್ಪ ಹೊತ್ತಿನ ಕೆಳಗೆ ಕೇಳಿದ ಟಕ್ ಟಕ್ ಶಬ್ದ ಕ್ರಮೇಣ ದೂರ ದೂರಕ್ಕೆ ಹೋಯಿತು. ನಿದ್ದೆ ಬಾರದ ನಾನು ಮತ್ತೇನು ಪ್ರಾರಂಭವಾದೀತೋ ಎಂಬ ಕುತೂಹಲದಿಂದ ಆಲಿಸಿದೆ. ಅನತಿ ದೂರದಲ್ಲಿ, ಗುಡ್ಡದಮೇಲೆ ಗುಡಿಗೆ ಹೋಗುವ ಮೆಟ್ಟಲ ದಾರಿಯ ಎರಡೂ ಬದಿಗೆ ಬೆಳೆದ ಮರಗಳಲ್ಲಿ ಎಂಥೆಂಥವೊ ಹಕ್ಕಿಗಳು, ಬಗೆ ಬಗೆಯ ದನಿಗೈಯತೊಡಗಿದವು. ಆಚೆ ಬದಿಯ ಗದ್ದುಗೆಯ ಬಾಗಿಲನ್ನು ತೆರೆದು ಅದರೊಳಗನ್ನು ಗುಡಿಸುವ ಸದ್ದು ಕೇಳಿ, ಇನ್ನು ಮನುಷ್ಯನ ವ್ಯಾಪಾರ ಶುರುವಾಯಿತೆಂಬ ಸಮಾಧಾನ ಮನಸ್ಸನ್ನು ತುಂಬಿತು. ದೂರದಲ್ಲಿ ಕ್ಯಾತ್ಸಂದ್ರದ ಹತ್ತಿರ ಹಾಸಿಕೊಂಡ ರೈಲು ಕಂಬಿಗಳ ಮೇಲೆ ಗೂಡ್ಸ್ ಗಾಡಿಯೊಂದು ಶಬ್ದ ಮಾಡಿಕೊಂಡು, ದೂರ ದೂರಕ್ಕೆ ಹೋದ ಶಬ್ದ ಸ್ವಲ್ಪ ಹೊತ್ತು ಅನುರಣಿತವಾಯಿತು. ಇದೋ ಇಲ್ಲೇ ಆ ಪಕ್ಕದ ದೇವಸ್ಥಾನದಲ್ಲಿ ಯಾರೋ ಘಂಟೆ ಬಾರಿಸುತ್ತಿದ್ದಾರೆ. ಘಂಟೆಯ ಸದ್ದು ಅಲೆಅಲೆಯಾಗಿ ಆವರಣವನ್ನೆಲ್ಲ ತುಂಬಿಕೊಳ್ಳುತ್ತಿದೆ. ತದನಂತರ ಮೌನದಲ್ಲಿ ಇದ್ದಕ್ಕಿದ್ದ ಹಾಗೆ ಹತ್ತಿರದ ಸಂಸ್ಕೃತ ಪಾಠಶಾಲೆಯಿಂದ ವೇದಘೋಷದ ಒಕ್ಕೊರಲಿನ ಸುಸ್ವರ ತರಂಗ ತರಂಗವಾಗಿ ವ್ಯಾಪಿಸುತ್ತ, ಪ್ರಪ್ರಾಚೀನ ಋಷ್ಯಾಶ್ರಮದ ನೆನಪುಗಳನ್ನು ಮನಸ್ಸಿನಲ್ಲಿ ರೇಖಿಸುತ್ತ ಒಂದು ಬಗೆಯ ಪಾವಿತ್ರ ದ ಭಾವನೆ ಪರಿಸರವನ್ನೆಲ್ಲ ಪಾವನಗೊಳಿಸುತ್ತಿದೆ. ಮೂಡಣ ಬಾನು ಈ ಎಲ್ಲ ಘಟನಾ ಪರಂಪರೆಗಳ ಜತೆಗೆ, ತನ್ನ ತಾಮಸವನ್ನು ಕಳೆದುಕೊಳ್ಳುತ್ತಾ ಕ್ರಮೇಣ ಕಾಂತಿಯುಕ್ತವಾಗತೊಡಗಿದೆ. ಈ ಬೆಳಗು ತೆರೆಯುತ್ತಿರುವ ಅರುಣೋದಯದ ಹೊಂಬೆಳಕಿನಲ್ಲಿ, ಎದುರಿಗೆ ಕೂತ ಸಿದ್ಧಗಂಗೆಯ ಗುಡ್ಡ ತನ್ನ ಅಮೂರ್ತತೆಯನ್ನುಳಿದು, ಮೂರ್ತವಾದ ಆಕಾರಕ್ಕೆ ಹಿಂದಿರುಗುತ್ತಿದೆ. ಆ ಗುಡ್ಡ, ಗುಡ್ಡದ ಮೇಲಿನ ಬಂಡೆಗಳು, ದೇವಸ್ಥಾನಕ್ಕೆ ಹತ್ತಿ ಹೋಗುವ ಮೆಟ್ಟಿಲ ಸಾಲುಗಳು, ಅವುಗಳ ಇಕ್ಕೆಲ್ಲದಲ್ಲೂ ಬೆಳೆದು ನಿಂತ ಮರಗಳು ಎಲ್ಲವೂ ಸ್ಪಷ್ಟವಾಗುತ್ತ, ಕಣ್ಣು  ಇನ್ನೂ ಮೇಲಕ್ಕೆ ಹೋದರೆ, ಸಿದ್ಧಗಂಗೆಯ ದೇವಸ್ಥಾನ ಮತ್ತು ಅದರ ಗೋಪುರದ ಮೇಲೆ ಹಾರಾಡುತ್ತ ಎಲ್ಲರನ್ನೂ ಕೈಬೀಸಿ ಕರೆಯುವ ಕಾವಿಯ ಬಣ್ಣದ ಬಾವುಟ ಕಣ್ಣನ್ನು ಸೆಳೆಯುತ್ತದೆ. ಇಡೀ ಸಿದ್ಧಗಂಗಾಕ್ಷೇತ್ರ ಮತ್ತು ಅದರ ಬದುಕು ದೈನಂದಿನ ಚಟುವಟಿಕೆಗಳಿಗೆ ಸಿದ್ಧವಾಗುತ್ತಿದೆ.

ಸುಮಾರು ಅರ್ಧಶತಮಾನಕ್ಕೂ ಹಿಂದಿನ ಒಂದು ಮುಂಬೆಳಗಿನ ಈ ಚಿತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ. ನಾನು ಸಿದ್ಧಗಂಗಾ ಕ್ಷೇತ್ರದಲ್ಲಿ ವಿದ್ಯಾರ್ಥಿಯಾಗಿ ಇದ್ದ ಮೂರು ವರ್ಷಗಳ ಕಾಲಮಾನದಲ್ಲಿ ಇಂಥ ಎಷ್ಟೋ ಬೆಳಗುಗಳು ನನ್ನ ಮನಸ್ಸನ್ನು ತುಂಬಿಕೊಂಡಿವೆ. ಋಷ್ಯಾಶ್ರಮ ಸದೃಶವಾದ ಈ ವಾತಾವರಣ ನನ್ನ ಎಳೆಯಂದಿನ ಬದುಕಿನ ಮೇಲೆ ಮೂಡಿಸಿದ ಪರಿಣಾಮ ಅವಿಸ್ಮರಣೀಯವಾದ್ದು. ಅದೊಂದು ಬೆಳಗಿನ ಜಾವ, ಈ ಕ್ಷೇತ್ರದ ವಿದ್ಯಾರ್ಥಿ ನಿಲಯದ ಮೇಲ್ಮಹಡಿಯ ಉದ್ದನೆಯ ಕೊಠಡಿಯಲ್ಲಿ ಮಲಗಿದ್ದ ನನ್ನನ್ನು ಎಚ್ಚರಿಸಿದ ಆ ಟಕ್ ಟಕ್ ಎಂಬ ಛಂದೋಗತಿಯ ಹೆಜ್ಜೆ ಸದ್ದು, ಆನಂತರ ನನಗೆ ಅಭ್ಯಾಸವಾಯಿತು.  ಆ ಸದ್ದು ಬೇರಾವುದೂ ಅಲ್ಲ. ಬೆಳಗಿನ ಝೂವ ನಾಲ್ಕು ಘಂಟೆಗೇ ಎದ್ದು, ತಮ್ಮ ಸ್ನಾನಧ್ಯಾನಾದಿಗಳಿಗೆ ಹಳೆಯ ಮಠದ ಕಡೆಗೆ ಹೋಗುವ ಸಿದ್ಧಗಂಗಾ ಮಠಾಧ್ಯಕ್ಷರಾದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ಹಾವುಗೆಯ ಸದ್ದು.

ಇಂಥ ತಪೋವನ ಸದೃಶವಾದ ‘ಸಿದ್ಧಗಂಗೆ’ಯ ಈ ಪರಿಸರದಲ್ಲಿ ಅರ್ಧ ಶತಮಾನಕ್ಕೂ ಹಿಂದೆ ಮೂರು ವರ್ಷಗಳ ಕಾಲ ನಾನೊಬ್ಬ ವಿದ್ಯಾರ್ಥಿಯಾಗಿ ಕಳೆದ ಕಾಲವನ್ನು ನೆನೆದುಕೊಂಡರೆ ಧನ್ಯತೆ ಕೃತಜ್ಞತೆಯ ಭಾವನೆಗಳಲ್ಲದೆ ಮತ್ತೇನೂ ಕಾಣವು. ಬಡತನ ಮತ್ತು ಅನಕ್ಷರತೆಗಳೆ ಪ್ರಧಾನವಾದ ಕತ್ತಲ ಕಾಲದಲ್ಲಿ ದಾರಿ ತೋರದೆ ತೊಳಲುತ್ತಿದ್ದ ಅಸಂಖ್ಯಾತ ಅವಕಾಶಹೀನರಲ್ಲಿ ಒಬ್ಬನಾಗಿದ್ದ ನಾನೂ, ನನ್ನಂಥ ಎಷ್ಟೋ ಜನ, ಈ ಹೊತ್ತು ತಲೆಯೆತ್ತಿಕೊಂಡು ದಿಟ್ಟತನದಿಂದ ಬದುಕಲು ಸಾಧ್ಯವಾಗಿರುವುದು, ಅಂದು ನನಗೆ ಈ ಶ್ರೀಕ್ಷೇತ್ರ ಒದಗಿಸಿದ ಅಶನ-ವಸತಿಗಳ ಆಶ್ರಯದಿಂದಲೇ. ಅಂದು ಇಂದಿನ ಹಾಗೆ, ಒಂದೊಂದು ಜಾತಿ-ಮತಗಳಿಗೊಬ್ಬೊಬ್ಬ ‘ಜಗದ್ಗುರು’ಗಳಿರಲಿಲ್ಲ. ಇಂದಿನ ಹಾಗೆ ಬಹುಸಂಖ್ಯೆಯ ಶಿಕ್ಷಣದ ವ್ಯಾಪಾರ ಸಂಸ್ಥೆಗಳೂ ಇರಲಿಲ್ಲ; ಬಹುತೇಕ ಸಾಮರಸ್ಯದಿಂದ ಬದುಕುತ್ತಿದ್ದ ಸಾಮಾಜಿಕ ಸಂದರ್ಭಗಳಿಂದಾಗಿ, ‘ಜಾತ್ಯತೀತತೆ’ಯ ಘೋಷಣೆಗಳಾಗಲೀ, ಭಾವೈಕ್ಯದ ಮಂತ್ರಪಠನಗಳಾಗಲೀ ಇರಲಿಲ್ಲ. ಸನಾತನ ಧರ್ಮವನ್ನು ಸಂರಕ್ಷಿಸಿಕೊಂಡು ಬರುವುದರಲ್ಲೇ ಬಹುಮಟ್ಟಿಗೆ ತೃಪ್ತರಾದ ಮೇಲ್ ವರ್ಗದ ಮಠಗಳನ್ನು ಹೊರತುಪಡಿಸಿದರೆ, ನಿಜವಾಗಿಯೂ ಸಾಮಾಜಿಕ ಕಾಳಜಿಗಳಿಂದ ತುಡಿಯುತ್ತ ಬಹುಜನ ಹಿತವನ್ನು ಗುರಿಯಾಗಿರಿಸಿಕೊಂಡ ಕೆಲವು ಮಠಗಳಿದ್ದದ್ದು-ಶರಣ ಧರ್ಮದವರಲ್ಲೇ. ಅವುಗಳಲ್ಲೆಲ್ಲಾ ಸಿದ್ಧಗಂಗೆಯ ಮಠ ಮಾರ್ಗದರ್ಶಕ ಸ್ಥಾನದಲ್ಲಿತ್ತು ಎಂದರೆ ಉತ್ಪ್ರೇಕ್ಷೆಯೇನಲ್ಲ.

ಬಹು ಹಿಂದಿನ ಕಾಲದಿಂದಲೇ ಅನೇಕ ಸಾಧು ಸಂತರ ತಪೋವನವಾಗಿದ್ದ ಸಿದ್ಧಗಂಗೆಯ ಈ ಪರಿಸರಕ್ಕೆ ಅನೇಕ ಪೌರಾಣಿಕವಾದ ಹಾಗೂ ಚಾರಿತ್ರಿಕವಾದ ನೆನಪುಗಳಿವೆ. ಹದಿನೈದನೆಯ ಶತಮಾನದ ಎಡೆಯೂರಿನಲ್ಲಿ, ಹಿಂದಿನ ಬಸವಾದಿ ಶರಣರ ಬದುಕನ್ನೂ ಬರಹಗಳನ್ನೂ ನೆನಪಿಗೆ ತರುವಂಥ ಉತ್ರಾ ಂತಿಯೊಂದಕ್ಕೆ ಕಾರಣರಾದ ಮತ್ತು ನೂರಾ ಒಂದು ವಿರಕ್ತರ ಸಮುದಾಯದ ಕೇಂದ್ರ ವ್ಯಕ್ತಿಗಳಾಗಿ, ಶರಣ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿಕೊಂಡ ತೋಂಟದ ಸಿದ್ಧಲಿಂಗಯತಿಗಳು ಈ ಪ್ರದೇಶದಲ್ಲಿ ಸಂಚರಿಸಿ ಕೆಲವು ಕಾಲ ಇದನ್ನು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರೆಂದು ಹೇಳಲಾಗಿದೆ. ಆದರೆ ಈ ‘ತಪೋಭೂಮಿ’ಯಲ್ಲಿ ನಿಜವಾದ ಒಂದು ಪರಿವರ್ತನೆಯಾದದ್ದು ಹತ್ತೊಂಬತ್ತನೆ ಶತಮಾನದ ಶ್ರೀ ಅಟವೀಸ್ವಾಮಿಗಳ ಹಾಗೂ ಅವರ ಉತ್ತರಾಧಿಕಾರಿಗಳಾದ ಶ್ರೀ ಉದ್ಧಾನಸ್ವಾಮಿಗಳ ಕಾಲದಲ್ಲಿಯೇ. ಹೆಸರೇ ಸೂಚಿಸುವಂತೆ, ಕೇವಲ ಅರಣ್ಯವಾಸಿಗಳಾದ ಶ್ರೀ ಅಟವೀಸ್ವಾಮಿಗಳು ಈ ಕ್ಷೇತ್ರಕ್ಕೆ ಬಂದು ಹೋಗುವ ಭಕ್ತಾದಿಗಳಿಗೆ ‘ಅನ್ನದಾಸೋಹ’ದ ವ್ಯವಸ್ಥೆಯನ್ನು ಪ್ರಾರಂಭ ಮಾಡಿದರು. ಅಂದು ಯಾವ ಒಂದು ಸುಮುಹೂರ್ತದಲ್ಲಿ ಅವರು ಹೊತ್ತಿಸಿದರೋ ಆ ಅಡುಗೆ ಒಲೆಯ ಬೆಂಕಿ ಈ ಹೊತ್ತಿಗೂ ಆರಿಲ್ಲ. ನಾನು ಕಂಡಂತೆ ಹಗಲೂ ಇರುಳೂ ಇಂದಿಗೂ ಅಡುಗೆ ಮನೆಯ ಒಲೆಯಲ್ಲಿ ದೊಡ್ಡ ದೊಡ್ಡ ಕೊರಡುಗಳು ಉರಿಯುತ್ತಲೆ ಇರುತ್ತವೆ. ಭಾರೀ ಗಾತ್ರದ ಕಡಾಯಿಗಳಲ್ಲಿ ಅನ್ನ ಬೇಯುತ್ತಲೇ ಇರುತ್ತದೆ. ಮುದ್ದೆಯ ಎಸರು ಕುದಿಯುತ್ತಲೇ ಇರುತ್ತದೆ; ದೊಡ್ಡ ಹಾಸುಗಲ್ಲಿನ ಮೇಲೆ ರಾಶಿ ರಾಶಿ ಪೇರಿಸಿದ ರಾಗಿ ಮುದ್ದೆಯ ಕಿರುಪರ್ವತಗಳು ರಾರಾಜಿಸುತ್ತಲೇ ಇರುತ್ತವೆ. ಪಂಕ್ತಿಯ ನಂತರ ಪಂಕ್ತಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳೂ, ದಿನವೂ ಬಂದು ಹೋಗುವ ಬಹುಸಂಖ್ಯೆಯ ಭಕ್ತಾದಿಗಳೂ ಕೂತು ಊಟ ಮಾಡುತ್ತಾರೆ. ವಿವಿಧ ಕಾರ್ಯಾಂತರಗಳಿಂದ ಬಂದು ಸ್ವಾಮಿಗಳ ದರ್ಶನ ಪಡೆದವರಿಗೆ ಇಂದಿನ ಸ್ವಾಮಿಗಳು ಹೇಳುವ ಮೊದಲಮಾತೆಂದರೆ ‘ಊಟ ಮಾಡಿಕೊಂಡು ಹೋಗಿ’ ಅನ್ನುವುದು. ನಾನು ನಲವತ್ತರ ದಶಕದ ಈ ಮಠದಲ್ಲಿದ್ದಾಗ ದಿನವೂ ರಾತ್ರಿ ಹತ್ತುಗಂಟೆಯ ನಂತರ ಕೇಳಿ ಬರುತ್ತಿದ್ದ ಒಂದು ಘೋಷಣೆ ಅಂದರೆ ‘ಊಟ ಮಾಡೋರು ಯಾರಾದರೂ ಇದ್ದರೆ ಬರ್ರಪ್ಪಾ’ ಅನ್ನುವುದು.

ನಾನು ಅನೇಕ ವೇಳೆ ಆಶ್ಚರ್ಯಪಟ್ಟಿದೇನೆ. ಇದೇನಿದು?ಹಗಲು ರಾತ್ರಿಯೂ ಬಂದು ಹೋಗುವ ಇಷ್ಟೊಂದು ಜನಕ್ಕೆ ಹೀಗೆ ಊಟದ ವ್ಯವಸ್ಥೆ ಮಾಡಲು ಈ ಮಠವೊಂದು ಪುರಾಣ ಕಾಲದ ಅಕ್ಷಯ ಪಾತ್ರೆಯೇ ಎಂದು. ಆದರೆ ಈ ಮಠದ ಅಕ್ಷಯ ಪಾತ್ರೆ ಸಾರ್ವಜನಿಕರೇ ಅನ್ನುವುದು ಸೋಜಿಗದ ಸಂಗತಿಯೇನಲ್ಲ. ಈ ದಾಸೋಹವನ್ನು ಪ್ರಾರಂಭಿಸಿದ ಮೊದಲಲ್ಲಿ, ಶ್ರೀ ಅಟವೀಸ್ವಾಮಿಗಳೂ, ಶ್ರೀ ಉದ್ಧಾನಸ್ವಾಮಿಗಳೂ ಜೋಳಿಗೆ ಹಿಡಿದು ಸುತ್ತ ಮುತ್ತಣ ಹಳ್ಳಿಗಳಿಂದ ಭಿಕ್ಷಾರೂಪದ ದವಸ ಧಾನ್ಯಗಳನ್ನು ಸಂಗ್ರಹಿಸಿ ತರುತ್ತಿದ್ದರಂತೆ. ಈಗಿನ ಶ್ರೀ ಶಿವಕುಮಾರಸ್ವಾಮಿಗಳೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದಾಗ ಮೊದಲು ಮಾಡಿದ ಕೆಲಸವೇ ಇದು. ಸರ್ವಜ್ಞಕವಿ ಹೇಳಿದಂತೆ ‘ತಿರಿವರಿಂ ಸಿರಿವಂತರಾರು?’. ಇದರ ಪರಿಣಾಮವಾಗಿ, ಇಲ್ಲಿ ಜನ ತಾವಾಗಿಯೆ ತಮ್ಮ ಕಾಣಿಕೆ ಎಂದೋ, ಕೊಡುಗೆ ಎಂದೋ ಉಗ್ರಾಣಕ್ಕೆ ತಾವು ತಂದದ್ದನ್ನು ಅರ್ಪಿಸುವುದನ್ನು ನಾನೇ ನೋಡಿದ್ದೇನೆ. ಹೀಗೆ ಜನರ ನಂಬಿಕೆಯನ್ನು ಶ್ರದ್ಧೆಯನ್ನು, ಈ ಮಠದ ಸಾಮಾಜಿಕ ಜವಾಬ್ದಾರಿಯೊಳಗೆ ತಮ್ಮ ಪಾತ್ರವೂ ಕೂಡಿಕೊಂಡಿದೆ ಎಂಬ ವಿಶ್ವಾಸವನ್ನು, ಉಳಿಸಿರುವುದು ಹಾಗೂ ಬೆಳೆಯಿಸಿರುವುದು, ಈ ಮಠದ ಕೇಂದ್ರ ಮೂರ್ತಿಯಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ವ್ಯಕ್ತಿತ್ವವೇ ಅನ್ನುವುದು ಬಹುಮುಖ್ಯವಾದ ಸಂಗತಿಯಾಗಿದೆ.

ಮೊದಲ ಅಗತ್ಯ ಅನ್ನ; ನಿಜ; ಆದರೆ ಹೊಟ್ಟೆಯ ಹಸಿವಿನ ಜತೆಗೆ ಮನಸ್ಸಿನ ಹಸಿವೂ ಇದೆಯಲ್ಲ ಅದಕ್ಕೆ ಆಹಾರ ಎಂದರೆ ಶಿಕ್ಷಣವೇ. ಈ ಕಾರ್ಯವೂ ಪ್ರಾರಂಭವಾದದ್ದು ಶ್ರೀ ಅಟವೀಸ್ವಾಮಿಗಳ ಶಿಷ್ಯರಾದ ಶ್ರೀ ಉದ್ಧಾನ ಸ್ವಾಮಿಗಳಿಂದಲೇ. ಶ್ರೀ ಅಟವೀಸ್ವಾಮಿಗಳು ಹೊಟ್ಟೆಗೆ ಅನ್ನದ ವ್ಯವಸ್ಥೆಯ ಪರಂಪರೆಯನ್ನು ಪ್ರಾರಂಭಿಸಿದರೆ, ಶ್ರೀ ಉದ್ಧಾನಸ್ವಾಮಿಗಳು ಶಿಕ್ಷಣದ ವ್ಯವಸ್ಥೆಯ ಪರಂಪರೆಯನ್ನು  ಅದಕ್ಕೆ ಜೋಡಿಸಿದರು. ಸ್ವಾರಸ್ಯದ ಸಂಗತಿ ಎಂದರೆ ಶ್ರೀ ಉದ್ಧಾನ ಸ್ವಾಮಿಗಳು, ಪ್ರಾರಂಭ ಮಾಡಿದ್ದು ಸಂಸ್ಕೃತ ಪಾಠಶಾಲೆಯನ್ನು. ೧೯೧೭ರಲ್ಲಿ ಅಧಿಕೃತವಾಗಿ ಪ್ರಾರಂಭವಾದ ಈ ಪಾಠಶಾಲೆಯಲ್ಲಿ ಬ್ರಾಹ್ಮಣ, ಲಿಂಗಾಯತ, ಗೌಡ, ಹರಿಜನ ಹೀಗೆ ವಿವಿಧ ಕೋಮುಗಳಿಗೆ ಸೇರಿದ ಐವತ್ಮೂರು ವಿದ್ಯಾರ್ಥಿಗಳಿದ್ದರಂತೆ. ಇದೊಂದು ಹತ್ತೊಂಬತ್ತನೆಯ ಶತಮಾನದಲ್ಲಿ ಸಂಭವಿಸಿದ ಮಹತ್ವದ ಘಟನೆಯೆಂದೇ ತಿಳಿಯಬೇಕು. ಯಾಕೆಂದರೆ ಇಂಡಿಯಾದಂಥ ದೇಶದಲ್ಲಿ ಪಾರಂಪರಿಕವಾದ ಸಂಸ್ಕೃತ ಭಾಷೆಯ ಶಿಕ್ಷಣವೆನ್ನುವುದು, ಶತಮಾನಗಳ ಕಾಲ ಕೇವಲ ಮೇಲುವರ್ಗದವರ ಗುತ್ತಿಗೆಯಾಗಿ, ಸಂಸ್ಕೃತ ಎನ್ನುವುದು, ಶೂದ್ರವರ್ಗದವರು ನಾಲಗೆಯಲ್ಲಿ ಉಚ್ಚರಿಸುವುದಿರಲಿ ಕಿವಿಯಲ್ಲಿ ಕೇಳಬಾರದ ‘ದೇವಭಾಷೆ’ಯಾಗಿ, ಬಹುಸಂಖ್ಯಾತ ಶೂದ್ರ ವರ್ಗದವರು ಇದರ ಕಲಿಕೆಯ ಸವಲತ್ತುಗಳಿಂದ ವಂಚಿತರಾಗಿ ಇದ್ದ ಒಂದು ಹಿನ್ನೆಲೆಯಲ್ಲಿ, ಆ ಭಾಷೆ ಹಾಗೂ ಅದು ಒಳಕೊಳ್ಳುವ ತಿಳಿವಿಗೆ, ಈ ನಿರ್ಲಕ್ಷಿತ ಸಮುದಾಯವನ್ನೂ ಹಕ್ಕುದಾರರನ್ನಾಗಿ ಮಾಡುವ ದಿಟ್ಟತನದ ಪ್ರಯತ್ನವೊಂದು, ಈ ಐತಿಹಾಸಿಕ ಘಟನೆಯಲ್ಲಿ ಅಡಗಿದೆ ಎಂದು ನಾನು ತಿಳಿದಿದ್ದೇನೆ.

ಹತ್ತೊಂಬತ್ತನೆಯ ಶತಮಾನದ ವಸಾಹತು ಶಾಹಿಯ ಈ ಸಂದರ್ಭದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಶಿಕ್ಷಣ ತಾನಾಗಿಯೆ ಲಭ್ಯವಾಗಬಹುದಾಗಿದ್ದ ಪರಿಸ್ಥಿತಿಯಲ್ಲಿ,

ಶ್ರೀ ಉದ್ಧಾನಸ್ವಾಮಿಗಳು ಸಂಸ್ಕೃತ ಪಾಠಶಾಲೆಯೊಂದನ್ನು ಶೂದ್ರ  ಸಮುದಾಯದವರಿಗಾಗಿ ಪ್ರಾರಂಭಿಸಿದ್ದರ ಚಾರಿತ್ರಿಕ ಮಹತ್ವವನ್ನು, ಪ್ರತ್ಯೇಕವಾಗಿಯೇ ನಾವು ಪರಿಭಾವಿಸಬೇಕು. ಈಗ ಅಧ್ಯಕ್ಷರಾಗಿರುವ ಶ್ರೀ ಶಿವಕುಮಾರಸ್ವಾಮಿಗಳು, ಬಹುಸಂಖ್ಯೆಯ ವಿದ್ಯಾರ್ಥಿಗಳಿಗೆ ಅಶನ-ವಸತಿಗಳನ್ನು ಕಲ್ಪಿಸಿರುವುದಲ್ಲದೆ, ಆಧುನಿಕ ಯುಗದ ಶೈಕ್ಷಣಿಕ ಅಗತ್ಯಗಳಿಗೆ ತಕ್ಕಂತೆ ಬಹುಬಗೆಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಹೊಸ ಎಚ್ಚರಕ್ಕೆ ಕಾರಣರಾಗಿದ್ದಾರೆ. ಈ ಹೊತ್ತಿಗೆ ಅವರು ಕರ್ನಾಟಕದಾದ್ಯಂತ ನಡೆಸುತ್ತಿರುವ ಶಾಲೆ ಕಾಲೇಜುಗಳ ಸಂಖ್ಯೆ ನೂರೈವತ್ತಕ್ಕೂ ಮಿಗಿಲಾಗಿದೆ ಅನ್ನುವುದು ಅವರ ಶೈಕ್ಷಣಿಕ ಸಾಧನೆಯ ಸಂಕೇತವಾಗಿದೆ.

ಅರ್ಧಶತಮಾನಕ್ಕೂ ಹಿಂದಿನ, ನಲವತ್ತರ ದಶಕದಲ್ಲಿ ನಾನು ಈ ಮಠದಲ್ಲಿದ್ದಾಗ, ಶಾಲೆ-ಕಾಲೇಜುಗಳಲ್ಲಿ ಓದುತ್ತ ಇಲ್ಲಿ ಆಶ್ರಯ ಪಡೆದವರ ಸಂಖ್ಯೆ ಸುಮಾರು ನಾಲ್ಕು ನೂರರಷ್ಟಿತ್ತು. ಬಹುಶಃ ಯಾವುದೇ ಒಂದು ಸಂಸ್ಥೆ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತವಾದ ಅಶನ-ವಸತಿಗಳ ಅವಕಾಶವನ್ನು ಕಲ್ಪಿಸಿಕೊಟ್ಟ ನಿದರ್ಶನ, ಆ ಕಾಲಕ್ಕಂತೂ ಇರಲಿಲ್ಲ. ಹಾಗೆ ಆಶ್ರಯ ಪಡೆದವರು ಕೇವಲ ವೀರಶೈವರೇನಲ್ಲ. ಸಮಾಜದ ಶೂದ್ರ ಸಮುದಾಯದ ಬೇರೆ ಬೇರೆ ಕೋಮುಗಳವರೂ ಇದ್ದರು. ಅವರ ಜತೆಗೆ ಕೆಲವರು ಹರಿಜನರೂ ಇದ್ದರು. ಅಷ್ಟಲ್ಲದೆ ಮಡಿವಂತ ವರ್ಗದ ಬ್ರಾಹ್ಮಣ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶವಿತ್ತು. ಆದರೆ ಅವರೂ ಸಹ ಬ್ರಾಹ್ಮಣೇತರರ ಪಂಕ್ತಿಯಲ್ಲಿ ಕೂತು ಊಟ ಮಾಡಬೇಕೆಂಬ ಯಾವ ನಿರ್ಬಂಧವೂ ಇರಲಿಲ್ಲ. ಅವರು ಮಠದ ಉಗ್ರಾಣದಿಂದ ಅಡುಗೆಗೆ ಬೇಕಾದ ಪದಾರ್ಥಗಳನ್ನು ಪಡೆದುಕೊಂಡು, ಆ ಕಾಲಕ್ಕೆ ‘ಛತ್ರ’ ಎಂದು ಕರೆಯಲಾದ ಕಟ್ಟಡವೊಂದರ ಕೊಠಡಿಗಳಲ್ಲಿ ತಾವೇ ಅಡುಗೆಮಾಡಿಕೊಂಡು, ತಮ್ಮ ಅಧ್ಯಯನವನ್ನು ಮುಂದುವರಿಸುವ ಅವಕಾಶ ಕಲ್ಪಿಸಲಾಗಿತ್ತು.

ನಾವೆಲ್ಲ ಮುಖ್ಯವಾಗಿ ಲಿಂಗಾಯತರು ಒಳಗಿನ ಭೋಜನ ಶಾಲೆಯಲ್ಲೂ, ಇನ್ನುಳಿದವರು ಹೊರಗಿನ ಭೋಜನ ಶಾಲೆಯಲ್ಲೂ ಏಕ ಕಾಲಕ್ಕೆ ಸಾಲಾಗಿ ಕೂತು, ಬಡಿಸಲಾಗುತ್ತಿದ್ದ ಒಂದೇ ಅಡುಗೆಯನ್ನು ಊಟ ಮಾಡುತ್ತಿದ್ದೆವು. ಸಾಂಪ್ರದಾಯಿಕವಾದ ಈ ‘ವ್ಯತ್ಯಾಸ’ ಅಂದು ಅಂಥ ದೊಡ್ಡ ಪ್ರಮಾದವೆಂದೇನೂ ತೋರುತ್ತಿರಲಿಲ್ಲ. ಮತ್ತು ಈ ಬಗೆಯ ‘ವ್ಯತ್ಯಾಸ’ಗಳನ್ನು ಎತ್ತಿ ಹಿಡಿದು ‘ರಾಜಕೀಯ’ ಮಾಡುವ ಹವ್ಯಾಸವಾಗಲೀ ಉದ್ದೇಶವಾಗಲಿ ಯಾರಿಗೂ ಇದ್ದಂತೆ ತೋರಲಿಲ್ಲ. ಜತೆಗೆ ನಮ್ಮೆಲ್ಲರ ವಸತಿಗಳಲ್ಲಿ ಯಾವ ತಾರತಮ್ಯವೂ ಇರಲಿಲ್ಲ. ನಾವೆಲ್ಲ ಬಡವರೆಂಬ, ನಾವು ಮನುಷ್ಯರೆಂಬ, ಆ ಕಾರಣಕ್ಕೆ ನಾವೆಲ್ಲ ಒಂದೆಂಬ ಭಾವನೆಯೆ ಪ್ರಮುಖವಾಗಿತ್ತು. ದಿನವೂ ಸಂಜೆ ಏಳು ಗಂಟೆಗೆ ಸಾಮೂಹಿಕವಾಗಿ ಕೂತು ಪ್ರಾರ್ಥನೆ ಮಾಡುವ ಸಂದರ್ಭ ಕೂಡಾ ನಮ್ಮಲ್ಲಿ ಒಂದು ಆಧ್ಯಾತ್ಮಿಕವಾದ ಏಕತಾ ಭಾವನೆಯ ಸಂಕೇತವಾಗಿತ್ತು.

ಈಗ ಈ ಮಠದ ವಿದ್ಯಾರ್ಥಿಗಳ ಸಂಖ್ಯೆ ನಮ್ಮ ಕಾಲದ್ದಕ್ಕಿಂತ ಇಪ್ಪತ್ತು ಪಟ್ಟು ಮಿಗಿಲಾಗಿದೆ. ಆದರೆ ಮಠದ ಜೀವನ ಕ್ರಮ ಕೆಲವು ವಿಚಾರಗಳಲ್ಲಿ ಅಂದಿನಂತೆಯೆ ಇಂದೂ ಮುಂದುವರಿದಿದೆ. ಅಂದಿನಂತೆ ಇಂದೂ ಸಂಜೆ ನಡೆಯುವ ಪ್ರಾರ್ಥನಾ ಸಭೆ ಅಷ್ಟೇ ಗಂಭೀರವಾಗಿದೆ. ಸಹಸ್ರಾರು ವಿದ್ಯಾರ್ಥಿಗಳು ದಿನಾ ಸಂಜೆ, ಪೂಜ್ಯಸ್ವಾಮಿಗಳ ನಿಯಂತ್ರಣ ಕೇಂದ್ರದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುವ ದೃಶ್ಯ ಒಂದು ಅಪೂರ್ವವಾದ  ಅನುಭವವಾಗಿದೆ. ತಮಗೆ ಎಷ್ಟೇ ಬಿಡುವಿಲ್ಲದ ಕೆಲಸ ಕಾರ್ಯಗಳಿರಲಿ, ಶ್ರೀ ಶಿವಕುಮಾರಸ್ವಾಮಿಗಳು-ಸಹಸ್ರಾರು ಸಂಖ್ಯೆಯ ತಮ್ಮ ತರುಣ ಶಿಷ್ಯ ಸಮುದಾಯದೊಂದಿಗೆ ಪ್ರಾರ್ಥನೆಗೆ ಕುಳಿತುಕೊಳ್ಳುವ ಈ ಸಂದರ್ಭವನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ನೋಡಿದರೆ ಬೆಳಗಿನ ಝಾವ ನಾಲ್ಕು ಗಂಟೆಗೆ ಮೊದಲೇ ಹಳೆಯಮಠಕ್ಕೆ ಹೋಗಿ ಸ್ನಾನಾದಿಗಳನ್ನು ಮುಗಿಸಿ ಹಲವು ಘಂಟೆಗಳ ಕಾಲ ಶಿವಪೂಜಾ ಯೋಗದಲ್ಲಿ ಮಗ್ನರಾಗುತ್ತಾರೆ. ಹೀಗೆ ಮತ್ತೆ ಇರುಳಿನ ಪೂಜೆ ಕೂಡಾ. ಜತೆಗೆ ಅಧ್ಯಯನ ಹಾಗೂ ಚಿಂತನೆ. ಅವರು ಯಾವುದೇ ಒಂದು ವಿಷಯವನ್ನು ಕುರಿತು ಉಪನ್ಯಾಸಕ್ಕೆ ನಿಂತರೆಂದರೆ, ಅದರ ಹಿಂದೆ ಅವರಿಗಿರುವ ವಿವಿಧ ತತ್ವಜ್ಞಾನ ಕ್ಷೇತ್ರಗಳ ತಿಳುವಳಿಕೆಯೂ ಹಾಗೂ ಅವರು ತಮ್ಮ ಸಮಕಾಲೀನತೆಯಲ್ಲಿ ಅವುಗಳಿಗೆ ತೋರುವ ಪ್ರತಿಕ್ರಿಯೆಯೂ ಮತ್ತು ಅವುಗಳನ್ನು ಕುರಿತು ಅವರು ಮಾಡುವ ವ್ಯಾಖ್ಯಾನವೂ ಕೇಳಿದವರನ್ನು ಬೆರಗುಗೊಳಿಸುತ್ತದೆ. ನಾನೇ ನನ್ನ ಎಳೆಯ ದಿನಗಳಲ್ಲಿ ಕಂಡಂತೆ ಸಂಸ್ಕೃತ ಪಾಠಶಾಲೆಯ ಚಿಕ್ಕಮಕ್ಕಳಿಗೂ ಅವರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ದಿನವೂ ಬರುವ ಭಕ್ತಾದಿಗಳ ಯೋಗಕ್ಷೇಮವನ್ನು ವಿಚಾರಿಸುವುದೂ, ತೀರ ಸಾಮಾನ್ಯವಾದ ಗ್ರಾಮೀಣ ಜನರ ನಂಬಿಕೆಗಳನ್ನು ಆಘಾತಗೊಳಿಸದೆ ಅವರಿಗೆ ಯಂತ್ರತಂತ್ರಾದಿಗಳನ್ನು ಬರೆದುಕೊಟ್ಟು, ಅವರನ್ನು ಸಮಾಧಾನಗೊಳಿಸುವುದೂ, ದಿನವೂ ನಡೆಯುತ್ತಿದ್ದ ಮಠದ ವಿಸ್ತರಣಕಾರ್ಯಗಳನ್ನು ಪರಿಶೀಲಿಸುತ್ತ ಕೆಲಸಗಾರರಿಗೆ ಸೂಚನೆಗಳನ್ನು ಕೊಡುತ್ತ, ಸಮಯಬಿದ್ದರೆ ತಾವೇ ಕೂಲಿಗಾರರ ಜತೆ ಹೆಗಲು ಕೊಟ್ಟು ಕೆಲಸ ಮಾಡುವುದೂ, ಇದ್ದಕ್ಕಿದ್ದ ಹಾಗೆ ಅಡುಗೆಮನೆ ಪ್ರವೇಶಿಸಿ ತಾವೇ ಮುದ್ದೆಯನ್ನು ತಿರುಹುವುದೂ (ಭಾರೀ ಗಾತ್ರದ ಪಾತ್ರೆಗಳಲ್ಲಿ ಬೇಯುತ್ತಿದ್ದ ಮುದ್ದೆಯನ್ನು ತಿರುಹುವುದು ಸುಲಭದ ಕೆಲಸವೇನಲ್ಲ. ಅದಕ್ಕೆ ಬಾಹುಬಲವೂ ಬೇಕು!) ಊಟದ ಪಂಕ್ತಿಯ ನಡುವೆ ನಿಂತು ಮಕ್ಕಳೂ ಹಾಗೂ ಭಕ್ತಾದಿಗಳು ಊಟ ಮಾಡುವುದನ್ನು ಪ್ರೀತಿಯಿಂದ ವೀಕ್ಷಿಸುವುದೂ, ಇಂಥ ಬಹುಸಂಖ್ಯೆಯ ಕಾರ್ಯಚಟುವಟಿಕೆಗಳನ್ನು ನಾನು ನೋಡುತ್ತ ಅಲ್ಲಿ ಪುಟಿಯುವ ಜೀವಕಾರುಣ್ಯಕ್ಕೆ ಬೆರಗಾಗಿದ್ದೇನೆ.

ಒಂದು ಕಾಲವಿತ್ತು. ವೈರಾಗ್ಯ ಎಂದರೆ, ಸಂನ್ಯಾಸ ಎಂದರೆ, ಸಂಸಾರವನ್ನು ತೊರೆದು, ಸಮಾಜವನ್ನು ತೊರೆದು ಜನಸಂಗ ದೂರವಾದ ಕಾಡುಮೇಡುಗಳಲ್ಲೋ, ಯಾರೂ ಪ್ರವೇಶ ಮಾಡಲಾಗದ ಗಿರಿ-ದರಿಗಳ ಗುಹಾಂತರಗಳಲ್ಲೋ ಧ್ಯಾನ ತಪಸ್ಸುಗಳಲ್ಲಿ ನಿರತರಾಗಿ ಅಧ್ಯಾತ್ಮ ಸಾಧನೆಯಲ್ಲಿ ತೊಡಗುವುದು ಎಂದು. ಆದರೆ ಬುದ್ಧನ ಕಾಲಕ್ಕೆ ಸಂನ್ಯಾಸದ ಈ ಕಲ್ಪನೆ ಬಹುಶಃ ಬದಲಾದಂತೆ ತೋರುತ್ತದೆ. ಸಿದ್ಧಾರ್ಥ ತಾನು ಬುದ್ಧನಾದ ಮೇಲೆ ಅನ್ನಿಸಿತು ಈ ಲೋಕದ ದುಃಖ ದಾರಿದ್ರ ಗಳ ನಿವಾರಣೆಗೆ ವಿನಿಯೋಗವಾಗದಿದ್ದರೆ ತಾನು ಪಡೆದ ‘ಬೋಧಿ’ಗೆ ಏನರ್ಥ-ಎಂದು. ಆದ ಕಾರಣವೇ ಆತ ತನ್ನ ಧರ್ಮವನ್ನು ಒಪ್ಪಿಕೊಂಡು ಬಂದು ‘ಸಂಘ’ಕ್ಕೆ ಸೇರಿದ ಸನ್ಯಾಸಿಗಳಿಗೆ ಹೇಳಿದ, ಧರ್ಮ ಅನ್ನುವುದು ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ತಮ್ಮನ್ನು ತಾವು ಸೇವಾಮನೋಭಾವದಿಂದ ತೊಡಗಿಸಿಕೊಳ್ಳುವ ಕ್ರಿಯೆಯಲ್ಲಿ ಇದೆ ಎಂದು. ಬುದ್ಧನ ಆನಂತರ ಅನೇಕ ಶತಮಾನಗಳ ಮೇಲೆ, ಕರ್ನಾಟಕದ ಕಲ್ಯಾಣ ಕೇಂದ್ರದಲ್ಲಿ ಬಸವಾದಿ ಶರಣರಿಂದ ಪ್ರವರ್ತನಗೊಂಡ ಶರಣಧರ್ಮದ ನಿಲುವು ಕೂಡಾ, ಮೂಲತಃ ತರ-ತಮ ವಿರೋಧಿಯೂ, ಮಾನವ ಕೇಂದ್ರಿತವೂ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿದ್ದೂ ಆಗಿದೆ. ಸಂಸಾರಿಯೆ ಆಗಲಿ ಸನ್ಯಾಸಿಯೆ ಆಗಲಿ, ಈ ಮರ್ತ್ಯದ ಸಾಮಾಜಿಕ ನೆಲೆಯೊಳಗೆ ನಿಂತೇ, ಶಿವಯೋಗವನ್ನು ಸಾಧಿಸುತ್ತ, ಕಾಯಕ ಅಥವಾ ಶಿವಾರ್ಪಿತ ಮನೋಭಾವದ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಸರ್ವಜನ ಹಿತದಲ್ಲಿ ನಿರತವಾಗಬೇಕೆಂಬುದೆ ಇದರ ತಿರುಳು. ಬುದ್ಧನ ಮಾನವ ಕಾರುಣ್ಯವನ್ನೂ, ಬಸವನ ತೀವ್ರ ಸಾಮಾಜಿಕ ಕಾಳಜಿಗಳನ್ನೂ ಒಟ್ಟಿಗೇ ಕಾಣಬಹುದಾದದ್ದು ಸಿದ್ಧಗಂಗೆಯಂಥ ಅಪರೂಪದ ಕ್ಷೇತ್ರಗಳಲ್ಲಿ, ಹಾಗೂ ಈ ಮನೋಧರ್ಮದ ಜೀವಂತ ಪ್ರತಿನಿಧಿಯಂತಿರುವ ಶ್ರೀ ಶಿವಕುಮಾರ ಸ್ವಾಮಿಗಳಂಥವರ ವ್ಯಕ್ತಿತ್ವದಲ್ಲಿ ಮಾತ್ರ.

ಚದುರಿದ ಚಿಂತನೆಗಳು : ೨೦೦೦