ಇಲ್ಲ, ನನ್ನ ಪ್ರೀತಿಯೊಳಿಲ್ಲ ಮಹತ್ವಾಕಾಂಕ್ಷೆ,
ಬೇಡ ಕುಂಭದ್ರೋಣ ಮುಸಲ ಧಾರೆ.
ಶ್ರಾವಣದ ಸದ್ದು ಗದ್ದಲವಿರದ ಸೋನೆ ತುಂತುರಿಗೆ
ಗರಿಗೆದರಿ ನಲಿಯುವುದು ಹಸಿರುಗದ್ದೆ !

ಇಲ್ಲ, ಬಳುವಳಿಯ ರಥ ಬರುವ ಬಣ್ಣದ ಕನಸು.
ಬೇಡ ಆಮಂತ್ರಣದ ವಾದ್ಯಘೋಷ.
ನೀನು ನನ್ನವನೆಂದು ತಂಗಾಳಿ ತಡವಿದರೆ
ಹೂ ಸುರಿದು ನಿಲ್ಲುವುದು ಪಾರಿಜಾತ !

ಬೇಕಾಗಿಲ್ಲ ಇದಕೆ ಆಗಾಗ ಪನ್ನೀರಿನಭಿಷೇಕ,
ಇಲ್ಲದಿದ್ದರೆ ಸಾಕು ಕೊಡಲಿಮಾತು.
ಬಿಸಿಲ ಧಗೆಯಲಿ ಬೆಂದ ನವುರುಬಳ್ಳಿಗೆ ಬೇಕು
ಬೇರೂರಿ ಕೈಚಾಚಿದಾಲಂಬನ.

ಇಲ್ಲ, ನನ್ನ ಪ್ರೀತಿಗೆ ಯಾವ ಮಹಿಮೆಗಳ ಬಣ್ಣವೂ,
ಇಲ್ಲ ಜರತಾರಿಗಳ ಉಡುಗೆ ತೊಡುಗೆ.
ಆಹುದೊ ಅಲ್ಲವೊ ಅಥವಾ ಇಹುದೊ ಇಲ್ಲವೊ ಎಂಬ
ದೀನ ಸಾಮಾನ್ಯತೆಗೆ ನಿಮಗೆ ಶಂಕೆ !