ತಿಂಗಳ್‌ ಮಾವ ಬರುತ್ತಿದಾನೆ,

ನೊಡಂಮ್ಮಾ;
ಜೊನ್ನ ಜೇನನ್‌ ತರುತ್ತಿದಾನೆ,
ಕೇಳಂಮ್ಮಾ!

ಭೂಮಿ ಬಾನು ಸೇರುವಲ್ಲಿ,
ಓ ಆ ದೂರದಲ್ಲಿ,
ಚಿನ್ನದುರಿಯ ಚೆಂಡಿನಂತೆ
ಕೆಂಡಗೆಂಪು ಗುಂಡಿನಂತೆ
ಮೇಲೆ ಮೇಲೆ ಏರಿ ಏರಿ
ಮುಗಿಲ ಕಾಡಿಗುರಿಯ ತೋರಿ,
ಧರೆಯನೆಲ್ಲ ಬೆರಗು ಮಾಡಿ
ಚೆಲುವು ಸೊದೆಯನೆರೆದು ನೀಡಿ
ನನ್ನ ನಿನ್ನನೊಂದುಗೂಡಿ,
ನೋಡಿ ನಲಿದು, ನಲಿದು ನೋಡಿ,
ತಿಂಗಳ್‌ ಮಾವ ಬರುತಿದಾನೆ,
ನೋಡಂಮ್ಮಾ;
ಜೊನ್ನ ಜೇನನ್‌ ತರುತಿದಾನೆ,
ಕೇಳಂಮ್ಮಾ!