ಟುವ್ವಿ! ಟುವ್ವಿ ! ಟುವ್ವಿ ! ಟುವ್ವಿ!

ಎಂದು ಹಕ್ಕಿ ಕೂಗಿತು.
ಅದರ ಹಾಡು ಬಂದು ಎನ್ನ
ಎದೆಯ ಗೂಡ ತಾಗಿತು!

ಟುವ್ವಿ ! ಟುವ್ವಿ ! ಟುವ್ವಿ ! ಟುವ್ವಿ !
ಎಂದು ಎನ್ನ ಎದೆಯೊಳೊಂದು
ಹಕಿ ಕೂಗತೊಡಗಿತು!
ಆಗ ಎನ್ನ ಎದೆಯೊಳೊಂದು
ಹಕ್ಕಿ ಇರುವುದೆಂಬುದನ್ನು
ನಾನು ಗೊತ್ತು ಹಿಡಿದೆನು!

ಟುವ್ವಿ! ಟುವ್ವಿ ! ಟುವ್ವಿ ! ಟುವ್ವಿ !
ಎಂದು ಹಕ್ಕಿ ಹಾಡಿತು
ಎದೆಯ ಹಕ್ಕಿ ಟುವ್ವಿ! ಟುವ್ವಿ!
ಎನ್ನುತದನು ಕೂಡಿತು.

ಪೊದೆಯ ಮೇಲೆ ಇದ್ದ ಹಕ್ಕಿ
ಮೋಹಿಸೆದೆಯ ಹಕ್ಕಿಯ
ಟುವ್ವಿ ! ಟುವ್ವಿ ! ಟುವ್ವಿ ! ಟುವ್ವಿ !
ಎಂದು ಮತ್ತೆ ಹಾಡಿತು.

ಎದೆಯ ಹಕ್ಕಿ ಟುವ್ವಿ ಎಂದು
ಮತ್ತೆ ಅದನು ಕೂಡಿತು.
ಒಂದು ಬೇಡಿತೊಂದು ಕಾಡಿ  –
ತೊಂದು ಸುಮ್ಮನಾಡಿತು!

ಎದೆಯ ದನಿಯ ಪೊದೆಯ ಉಲಿಯ
ಆಲಿಸುತ್ತ ನಲಿದೆನು!
ಎದೆಯ ಹಕ್ಕಿಗಾಗಿ ಪೊದೆಯ
ಹಕ್ಕಿಯನ್ನು ಒಲಿದೆನು!