ಹಕ್ಕಿ, ಹಕ್ಕಿ, ಹಾರುವ ಹಕ್ಕಿ,

ಬಾರೆಲೆ ಹಕ್ಕಿ, ಬಣ್ಣದ ಚುಕ್ಕಿ!
ಗೆಳೆಯರು ಆಡುವರಾರೂ ಇಲ್ಲ;
ಕಳೆಯುವುದೆಂತೀ ಕಾಲವನೆಲ್ಲ?

ಬಾ, ಬಾ, ನನಗೂ ಹಾಡಲು ಕಲಿಸು;
ಬಾ, ಬಾ, ನನಗೂ ಹಾರಲು ಕಲಿಸು.
ಹೂವಿನ ರಸವನು ಕೊಡುವೆನು ನಿನಗೆ,
ಸುಗ್ಗಿಯ ಕಾಳನು ಸುರಿವೆನು ನಿನಗೆ.

ಬಾ, ಬಾ, ಆಡುವ ಹಗಲೆಲ್ಲ!
ಬಾ, ಬಾ, ಹಾಡುವ ದಿನವೆಲ್ಲ!

ಪಡುವಣ ದೆಸೆಯೊಳು ಬೈಗಿನ ಹೊತ್ತು
ಮುಳುಗುವ ಸಮಯದಿ, ತಾಯಿಯ ಮುತ್ತು
ನನ್ನನು ಮನೆಯೆಡೆಗೆಳೆಯುವುದು!

ಕಾಡಿನ ಬಳಿಯಲಿ, ನಿನ್ನನು ಹೆತ್ತು
ಪೊರೆದಾ ತಾಯಿಯ ಗುಟುಕಿನ ತುತ್ತು
ನಿನ್ನನು ಗೂಡಿಗೆ ಸೆಳೆಯುವುದು!

ಅಲ್ಲಿಯವರೆಗೂ ಆಡುವ, ಬಾ!
ಅಲ್ಲಿಯವರೆಗೂ ಹಾಡುವ, ಬಾ!

ಹಣ್ಣನು ತಿನ್ನುತ ಬನದೊಳು ತಿರುಗುತ,
ಹೂವಿನ ತಳಿರಿನ ಸೊಬಗನು ನೋಡುತ,
ತಿಳಿಗೊಳದಲಿ ತಣ್ಣೀರನು ಕುಡಿಯುತ,
ನಲಿಯುವ ಹಸುರೊಳು ಬೀಳುತ, ಏಲುತ,

ಅಲ್ಲಿಯವರೆಗೂ ಆಡುವ, ಬಾ!
ಅಲ್ಲಿಯವರೆಗೂ ಹಾಡುವ, ಬಾ!
ಹಕ್ಕಿ, ಹಕ್ಕಿ, ಹಾರುವ ಹಕ್ಕಿ,
ಬಾರೆಲೆ ಹಕ್ಕಿ, ಬಣ್ಣದ ಚುಕ್ಕಿ!