ಬೆಳ್ಳನೆ ಲಾಲಿಕುಲಾಲಿ ಮಿಠಾಯಿಯ

ಬಾನೊಳು ಹರಡಿಹರೇನಮ್ಮಾ?
ತೆಳ್ಳನೆ ಹಿಂಜಿದ ಬೂರುಗದರಳೆಯ
ಬಿಸಿಲಿಗೆ ಕೆದರಿಹರೇನಮ್ಮಾ?

ತಿಳಿಬೆಳುದಿಂಗಳ ಸವಿನೊರೆ ಹಾಲೊಳು
ತೇಲ್ವ ಚಿರೋಟಿಗಳೇನಮ್ಮಾ?
ನೀಲಿಯ ನೀರೊಳು ಬಾನಮ್ಮನಿಟ್ಟಿಹ
ಬೆಣ್ಣೆಯ ಮುದ್ದೆಗಳೇನಮ್ಮಾ?

ಕಡಲಿನ ಕಾಶಿಯ ಸೇರಲು ಹೋಗುವ
ಗಗನದ ಯಾತ್ರಿಕರೇನಮ್ಮಾ?
ಸೃಷ್ಟಿ ರಹಸ್ಯವನರಿಯಲು ತಿರುಗುವ
ವಿಶ್ವದ ಕಬ್ಬಿಗರೇನಮ್ಮಾ?

ಮೇಲಿನ ಲೋಕದ ದಿವಿಜರ ಮಕ್ಕಳು
ನೀಲಿಯ ಕೊಳದಲಿ ತೇಲಲು ಬಿಟ್ಟಿಹ
ಸೋಪಿನ ಬೆಳ್ನೋರೆಯೇನಮ್ಮಾ?
ಕಾಗದದಾಟದ ನೌಕಾಸೇನೆಯ
ಬಿನದಕೆ ತೇಲಿಹರೇನಮ್ಮಾ?

ನಮ್ಮಯ ಬೆಳ್ಸವಿಗನಸುಗಳೆಲ್ಲಾ
ದಾರಿಯೊಳೀ ಪರಿ ವೇಷದ ಧರಿಸುತ
ಸಗ್ಗಕೆ ಹೋಗುವನವೇನಮ್ಮಾ?
ನಾನೊಂದು ಮುಗಿಲಾಗಿ ನೀನೊಂದು ಮುಗಿಲಾಗಿ
ನೀಲದೊಳಲೆಯುವ ಬಾರಮ್ಮಾ!

ಮೇಗಡೆ ಸಗ್ಗವು, ಕೆಳಗಡೆ ಭೂಮಿಯು,
ಇಬ್ಬರ ನಂಟರು ನಾವಮ್ಮಾ!
ದಿವಿಜರ ಒಲ್ಮೆಗೆ ಮನುಜರ ಒಲ್ಮೆಗೆ
ಮೇರೆಗಳಪ್ಪೆವು ನಾವಮ್ಮಾ!

ನಮ್ಮವರೆನ್ನುವರಾ ಲೋಕದವರು,
ನಮ್ಮವರೆನ್ನುವರೀ ಲೋಕದವರು;
ಸುಮ್ಮನೆ ತೇಲುವ ಬಾರಮ್ಮಾ!
ಬೆಳ್ಮುಗಿಲಾದರೆ ಲೋಕಾದ ನಾಕದ
ನಚ್ಚಿನ ಬಂಟರು ನಾವಮ್ಮಾ!
ಬೆಳ್ಮುಗಿಲಾಗುವ ಬಾರಮ್ಮಾ!