ಸಂಜೆಯ ರಂಜಿಪ ಸೂರ್ಯನ ತರುವೆನು

ಕೈಬಿಡು ಹೋಗುವೆ ನಾನಮ್ಮ !
ಚಿನ್ನದ ಚೆಂಡನು ಕೈವಶ ಮಾಡುವೆ
ಅಂಜದೆ ಅನುಮತಿಯೀಯಮ್ಮ !

ಉದಯಾಕಾಶದೊಳಾತನು ಶೋಭಿಸೆ
ಬೇಡಿದೆ ನಾ ನಿನ್ನನುಮತಿಯ;
ಚಳಿಯಿದೆ, ಮಂಜಿದೆ, ಕಲ್ಲಿದೆ, ಮುಳ್ಳಿದೆ,
ಘೋರಾರಣ್ಯಗಳಿವೆಯೆಂದೆ !

ಹಗಲೊಳಗಾತನು ಬೆದರುತಲೇರಿದ
ಬರುವೆನು ನಾನೆಂಬಾ ಭಯಕೆ !
ಗಿರಿಗಳನಿಳಿದಿಳಿದಡಗಲು ಪೋಪನು !
ಮುಖ ಕೆಂಪಾಗಿದೆ ನೋಡಮ್ಮ !

ಬುತ್ತಿಯ ಕೊಡು, ಮೇಣೊಂದೇಣಿಯ ಕೊಡು.
ಬಂಧಿಸಲೀಯೌ ಪಾಶಗಳ !
ಸೇವಕರೇತಕೆ, ಓರ್ವನೆ ಹೋಗುವೆ;
ತೃಣಕಾರ್ಯವ ನಾ ಸಾಧಿಸೆನೆ ?

ಹೊಲಗಳ ದಾಟುವೆ, ನದಿಗಳನೀಜುವೆ,
ಗಿರಿಗಳನೇರುತ ಹೋಗುವೆನು !
ದಾರಿಯ ಬಂಧಿಪ ಮೃಗಗಳ ಸದೆಯುತ
ಅಸ್ತಮ ಗಿರಿಯನು ಸೇರುವೆನು !

ಏಣಿಯ ಮೇಲೇರುತ ನಾ ಸೂರ್ಯನ
ಕರಗಳ ಬಂಧಿಸುತೆಳೆತರುವೆ !
ನಮ್ಮನೆಯಲ್ಲಿಯೆ ಆಮೇಲಿರುವನು,
ಎನ್ನೊಡನಾಡುತ ನಲಿಯುವನು.

ನಿನ್ನನು ‘ಅಮ್ಮಾ’ ಎನ್ನುತ ಕರೆವನು;
ನನ್ನನು ‘ಅಣ್ಣಾ’ ಎನ್ನುವನು !
ನಾವೀರ್ವರು ಒಂದೇ ಹಾಸಿಗೆಯೊಳು
ಮಲಗುತ ಏಳುವೆವೇನಮ್ಮಾ ?  –

ತಾಯಿಯು ಮಗನಾ ಮುದ್ದಿನ ನುಡಿಗಳ
ಆಲಿಸಿ ಚುಂಬಿಸಿ ಉಸುರಿದಳು  –
‘ಕಂದಾ, ಎನ್ನಯ ಸೂರ್ಯನು ನೀನಿರೆ
ಜಗದಾ ಸೂರ್ಯನು ಎನಗೇಕೆ?’