ಹಣವನು ಗಳಿಸೆಂದಣ್ಣನಿಗೆಲ್ಲರು ಬುದ್ಧಿಯ ಹೇಳುವರೇಕಮ್ಮಾ!

ಹಣವೆಂದರೆ ನಾವಾಡುವ ಮಣ್ಣಿನ ಪುಡಿಗಿಂತಲು ಚೆಲುವೇನಮ್ಮಾ?
ಧೂಳಿನಷ್ಟು ಅದು ನುಣ್ಣಗಿಹದೇ ಹೇಳಮ್ಮಾ?
ಧೂಳಿನಷ್ಟು ಅದು ಸಣ್ಣಗಿಹುದೇ ಹೇಳಮ್ಮಾ?
ಧೂಳಿಯಂತೆ ಅದು ಗಾಳಿಯಲ್ಲಿ ಹಾರಾಡಬಲ್ಲುದೇ ತಿಳಿಸಮ್ಮಾ?
ಧೂಳಿಯಂತೆ ಅದು ಹುಡುಗರೆಲ್ಲರನು ಒಲಿಯಬಲ್ಲುದೇ ಹೇಳಮ್ಮಾ?

ಬೆಳಗಿನ ನೇಸರಿನೆಳಬಿಸಿಲಿನ ಮುದ್ದನು ಹಣ ಮೀರಿಹುದೇನಮ್ಮಾ?
ಎಳೆಹಸುರಲಿ ದಿನವೂ ನಾವಾಯುವ ಹೂಗಳ ಮೀರಿಹುದೇನಮ್ಮಾ?
ಮಳೆಯ ಬಿಲ್ಲಿನೊಲು ಮನವ ಮೋಹಿಪುದೆ ಹೇಳಮ್ಮಾ?
ಮಳೆಯ ಹನಿಗಳೊಲು ನಮ್ಮ ಕುಣಿಸುವುದೆ ಹೇಳಮ್ಮಾ?
ಹನಿಯೊಳು ಮಿಂದಿಹ ತಳಿರಲಿ ನಲಿಯುವ ಹಿಮಮಣಿಗದು
ಚಲುವೇನಮ್ಮಾ?
ತಳಿತಿಹ ಬನದಲಿ ಉಲಿಯುವ ಕೋಗಿಲೆಯಿಂಚರಕದು
ಇಂಪೇನಮ್ಮಾ?