ನಾನು ಕಲ್ಪಿಸಿಕೊಳ್ಳಲಾಗದ ನೀನು – ಆ ತುದಿಗೆ
ನೀನು ಕಲ್ಪಿಸಿಕೊಳ್ಳಲಾಗದ ನಾನು – ಈ ತುದಿಗೆ
ಈ ತುದಿಯಿಂದ ಆ ತುದಿಯವರೆಗೆ ಮೊರೆಮೊರೆವ
ಕರಿತೆರೆಯ ಹಬ್ಬುಗೆ !

ಆ ನೀನು ಒಂದು ದಿನ ನಾನು ತುಳಿದೀ ನೆಲವ ತುಳಿದು
ನಿನ್ನ ತಂದೆಯ ಹಿಂದೆ ಸಂಜೆ ತಿರುಗಾಟಕ್ಕೆ ನಡೆದು,
ತಟ್ಟನೆಯೆ ನಿಂತು ಕೇಳಬಹುದೋ ಏನೊ ಆ ನಿನ್ನ
ತಾತ ಮುತ್ತಾತಂದಿರಿತಿಹಾಸಗಳ ಹಳೆಯ ಕತೆಯನ್ನ.

ಪಾಪ, ನಿಮ್ಮಪ್ಪನೋ, ನಿನ್ನ ಪ್ರಶ್ನೆಗೆ ಬೆದರಿ ಕಣ್ಣುಬಿಟ್ಟು
‘ಏನೋಪ್ಪ ಗೊತ್ತಿಲ್ಲ; ನನಗೆ ನೆನಪಿರುವುದಿಷ್ಟು :
ಅವರು ಅದೆಲ್ಲಿಂದಲೋ ಬಂದರಂತೆ, ನಾನಾಗ ಹುಡುಗ,
ಹೀಗೆಂದು ಅಜ್ಜ ಹೇಳಿದ ಎಂದೋ, ನಾ ಕೇಳಲಿಲ್ಲ ತಿರುಗಿ.

ಈಗ ಮನೆಯೊಳಗಿಲ್ಲವೇ ಆ ಹಳೆಯ ಸಂದೂಕ
ನಿಮ್ಮ ಅಜ್ಜನದಂತೆ, ಹಾಗೆಯೇ ಆ ಬಂದೂಕ
ಅವರ ಅಪ್ಪನದಂತೆ; ಅವನಾಗಿದ್ದನಂತೆ ಸರದಾರ,
-ಹೀಗೆಂದು ಏನೇನೋ ಹೇಳಿ ನಂಬಿಸಬಹುದು ಪೂರ.

ಸಂಜೆಬಾನಿನ ಕೆಳಗೆ ಹೀಗೆ ಮಾತಾಡುತ್ತ ನಡೆದಿರಲು ನೀವು
ನೆಲ ಮುಗಿಲು ನಸುನಕ್ಕು ಪಿಸುಗುಟ್ಟುವುವು ತಮ್ಮೊಳಗೆ ತಾವು.
ಗಾಳಿ ತೀಡುವುದು ಮೇಲುಗಡೆ ಚದುರುವುದು ಮುಗಿಲ ಸಾಲು
ಹಗಲ ಸರುಕನು ಹೊತ್ತು ಸಾಗಿಯೇ ಸಾಗುವುದು ಸಂಜೆ-ರೈಲು.

ಇರುಳ ಕಣಿವೆಯ ತುದಿಗೆ ನೀನೊಬ್ಬನೇ ನಿಂತು ಮೂಕವಾಗಿ
ಆಳ ಪಾತಾಳದಲಿ ಹರಿವ ಜಲಮರ‍್ಮರಕೆ ಕಿವಿಗೊಟ್ಟು ಬಾಗಿ,
ಬರಿದೆ ನಿಡುಸುಯ್ಯುವೆಯೊ, ನಾನರಿಯೆ ನಿನ್ನ ಪರಿಯ
ಯಾವ ನೆನಪನು ನಿನಗೆ ಬಿಟ್ಟು ಹೋಗಲಿ ಎಂದು ತುಡಿಯುತಿದೆ
ನನ್ನ ಹೃದಯ.