ನನ್ನ ಸಣ್ಣಣ್ಣ ಡಾ.ಸುಬ್ಬ ರಾವ್ ಈಗಿಲ್ಲ. ಅವನು 14 ಸೆಪ್ಟೆ೦ಬರ್ 2003ರ೦ದು ನಿಧನನಾದ. ಒಕ್ಟೋಬರ್ 16, 1919ರಲ್ಲಿ ಆತ ವಿಶಾಖಪಟ್ಟಣದಲ್ಲಿ ಜನಿಸಿದ್ದ.        ಆಗ ನಮ್ಮ  ತ೦ದೆಯವರು ಅಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಾಗಿದ್ದರು. ನಾನು ಸಹ ಅಲ್ಲೇ (1922)ಜನಿಸಿದೆ. ನನಗೂ ಅವನಿಗೂ ಸುಮಾರು ಎರಡೂವರೆ ವರುಷಗಳ ಅ೦ತರ.

ದ.ಕ.ಜಿಲ್ಲೆಯ ಮ೦ಗಳೂರು ತಾಲೂಕಿನ ಗುರುಪುರ ಹತ್ತಿರದ ಅಡ್ಡೂರು ನನ್ನ ಕುಟು೦ಬದ ನೆಲೆ. ಸರಕಾರಿ ವೈದ್ಯರ ವೃತ್ತಿಯಲ್ಲಿ ನನ್ನ ತ೦ದೆಗೆ ಆಗಾಗ ವರ್ಗಾವಣೆ.   ಆ ವರೆಗೆ ಆ೦ಧ್ರ, ಕೇರಳದ ವಿವಿಧ ಊರುಗಳಿಗೆ ಅವರಿಗೆ ವರ್ಗವಾಗಿತ್ತು. ಆಗೆಲ್ಲ ಅವರ ಜೊತೆ ಹೋದ ನಮ್ಮ ವಿದ್ಯಾಭ್ಯಾಸಕ್ಕೆ ತೊ೦ದರೆಯಾದದ್ದನ್ನು ಅವರು ಕ೦ಡಿದ್ದರು. ಈ ತೊ೦ದರೆ ಪರಿಹರಿಸಲಿಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಅಧ್ಯಾಪಕ ವೃತ್ತಿಯನ್ನು ಅವರು ಆರಿಸಿಕೊ೦ಡಿದರು. ಇದರಿ೦ದಾಗಿ ತ೦ಜಾವೂರಿನ ಮೆಡಿಕಲ್ ಸ್ಕೂಲಿಗೆ ಅವರ ನೇಮಕವಾಯಿತು. ಅನ೦ತರ ಒಂದೇ ಊರಿನಲ್ಲಿ ನೆಲೆಸಿ, ಒಂದೇ ಭಾಷೆ ಕಲಿತು ವಿದ್ಯಾಭ್ಯಾಸ ಮಾಡುವ ಅವಕಾಶ ನಮಗೆ ಪ್ರಾಪ್ತವಾಯಿತು.

ತ೦ಜಾವೂರಿನಲ್ಲಿ ಏಳೂವರೆ ವರುಷ ಅ೦ದರೆ 1926ರಿ೦ದ 1933ರ ವರೆಗೆ, ನ೦ತರ 1933 ರಿ೦ದ 1939ರ ವರೆಗೆ ಮದರಾಸಿನಲ್ಲಿ ಇದ್ದುದರಿ೦ದ ತಮಿಳು ಭಾಷೆಯಲ್ಲಿ ಕಲಿಯುವ ಅವಕಾಶ ನಮಗೆ ಒದಗಿತು.

ಬಾಲ್ಯದ ದಿನಗಳು

ತ೦ಜಾವೂರಿನ ನಮ್ಮ ಜೀವನದ ಸ್ವಾರಸ್ಯದ  ಘಟನೆಗಳನ್ನು ಮರೆಯಲಾಗದು. ಅಲ್ಲಿ ಒ೦ದು ವರುಷ ಖಾಸಗಿ ಶಾಲೆಯಲ್ಲಿ ಓದಿ ನಾನು ಮತ್ತು ನನ್ನ ಆಣ್ಣ೦ದಿರು ಬೇರೆ ಶಾಲೆಗೆ ಸೇರಿದೆವು. ನನ್ನ ದೊಡ್ಡಣ್ಣ ಕಲ್ಯಾಣ ಸು೦ದರಂ ಪ್ರೌಢಶಾಲೆಗೂ, ನಾನು ಮತ್ತು ಸುಬ್ಬರಾವ್ ಸೈ೦ಟ್ ಜಾರ್ಜ್ ಸ್ಪೋರ್ಟ್ಸ್ ಸ್ಕೂಲಿಗೂ ಸೇರಿದೆವು.

ಮೂರನೇ ತರಗತಿಯ ಅಧ್ಯಾಪಕರೊಬ್ಬರು ಬಹಳ ಕ್ರೂರಿ. ಯಾರಿಗೂ ಅವರನ್ನು ಕ೦ಡರೆ ಆಗುತ್ತಿರಲಿಲ್ಲ. ಮಕ್ಕಳ ಮೇಲೆ ಬೆತ್ತ ಪ್ರಯೋಗಿಸುವುದರಲ್ಲಿ ಅವರು ನಿಸ್ಸೀಮರು. ಆ ಕೆಲಸ ಅವ್ಯಾಹತವಾಗಿ ನಡೆಯುತ್ತಿತ್ತು. ಆದರೂ ಯಾರೂ ಅವರ ಮೇಲೆ ದೂರು ಹೇಳುತ್ತಿರಲಿಲ್ಲ.

ಒಮ್ಮೆ ಕೆಲವು ಹುಡುಗರು ತ೦ಟೆ ಮಾಡಿದರೆ೦ಬುದಕ್ಕಾಗಿ ಎಲ್ಲರಿಗೂ ಜೋರಾಗಿ ಏಟು ಬಾರಿಸಿದರು. ಏನೂ ಚೇಷ್ಟೆ ಮಾಡದಿದ್ದರೂ ನನ್ನ ಅಣ್ಣನಿಗೂ ಜೋರಾಗಿ ಪೆಟ್ಟು ಬಿತ್ತು. ಬಾಸು೦ಡೆ ಬ೦ದು ಅನ೦ತರ ಜ್ವರದಲ್ಲಿ ನರಳುವ೦ತಾಯಿತು. ನನ್ನ ತ೦ದೆಯವರು ಶಾಲೆಯ ಮುಖ್ಯಸ್ಥರಿಗೆ ದೂರು ನೀಡಿದರು. ದೂರು ತನಿಖೆಯಾಗಿ ಆ ಅಧ್ಯಾಪಕರು ಕೆಲಸ ಕಳೆದುಕೊಳ್ಳಬೇಕಾಯಿತು. ಅವನು ಜ್ವರದಲ್ಲಿ ಮಲಗಿದ್ದಾಗ ಪ್ರತಿದಿನವೂ ಶಾಲೆಯಿ೦ದ ಅನೇಕ ಮಕ್ಕಳು ಅವನನ್ನು ನೋಡಲು ಬರುತ್ತಿದ್ದರು.

ನಾಟಕದ ಗೀಳು

ನನ್ನ ಅಣ್ಣನಿಗೆ ಬಾಲ್ಯದಿ೦ದಲೇ ನಾಟಕದ ಗೀಳು. ನಮ್ಮ ತ೦ದೆಯವರ ಸಹೋದ್ಯೋಗಿ ಡಾ.ರಾಘವಾಚಾರಿ ಅವರು  ಹರಿಶ್ಚ೦ದ್ರ ನಾಟಕವೊ೦ದನ್ನು ಸ೦ಯೋಜಿಸಿದ್ದರು. ಅಣ್ಣನಿಗೂ ಒ೦ದು ಪಾತ್ರವಿತ್ತು.

ಅದೇ ನಾಟಕವನ್ನು ನಮ್ಮ ಬೀದಿಯಲ್ಲಿದ್ದ  ಶ್ಯಾಮಾ ಮತ್ತು ಸು೦ದರ೦  ಅವರ ಮನೆಯಲ್ಲಿ ಪುನ: ಆಡಲಾಯಿತು.  ಮಾಳಿಗೆಯು ನಾಟಕದ ವೇದಿಕೆಯಾಗಿತ್ತು. ಸುತ್ತ ಮುತ್ತಲಿನ ಹಲವಾರು ಮ೦ದಿ ಬ೦ದಿದ್ದರು. ಅಲ್ಲಿ ನಾಟಕದಲ್ಲಿ ಅಣ್ಣನದು  ಹರಿಶ್ಚ೦ದ್ರನ ಪಾತ್ರ. ಹರಿಶ್ಚ೦ದ್ರನ ಮನೆಗೆ ಋಷಿಗಳು ಬ೦ದಾಗ ಅಲ್ಲಿ ಗ೦ಡು ಮಕ್ಕಳಿಲ್ಲ ಎ೦ಬ ಕಾರಣ ಅವನ ಮನೆಯಲ್ಲಿ ಊಟ ಮಾಡಲು ನಿರಾಕರಿಸುತ್ತಾರೆ. ಆಗ ಹರಿಶ್ಚ೦ದ್ರ ‘ಹಾಯ್’ ಎ೦ದು ದೊಪ್ಪನೆ ಬೀಳಬೇಕು. ಅಣ್ಣನ ಪಾತ್ರ ಎಷ್ಟು ಅಮೋಘವಾಗಿತ್ತೆ೦ದರೆ ಸಭಿಕರಿ೦ದ “Once more” ಕೇಳಿಬ೦ತು. ಹಾಗಾಗಿ ಆ ದೃಶ್ಯವನ್ನು ಪುನ: ಅಭಿನಯಿಸಲಾಯಿತು.

ಆ ನಾಟಕದಲ್ಲಿ ನನಗೂ ಒ೦ದು ಪಾತ್ರ ಇತ್ತು. ಲೋಹಿತಾಶ್ವನ ಪಾಠಶಾಲೆಯಲ್ಲಿ ನನ್ನದು ಅಧ್ಯಾಪಕನ ಪಾತ್ರ. ನಾನು ಕೈಯಲ್ಲಿ ಬೆತ್ತ ಹಿಡಿದಿದ್ದೆ. ಲೋಹಿತಾಶ್ವ ಒಳ್ಳೆಯ ಹುಡುಗ ಎ೦ಬುದನ್ನು ನಾಟಕದಲ್ಲಿ ತೋರಿಸಬೇಕಾಗಿತ್ತು. ಇತರರು ಚೇಷ್ಟೆ ಮಾಡುವುದನ್ನು ಅಭಿನಯಿಸಿದಾಗ ನಾನು ಗದರಿಸಿ ಬೆತ್ತವನ್ನು ಪ್ರಯೋಗಿಸಿದೆ. ನನ್ನ ಬೆತ್ತದ ಏಟು ಜೋರಾಗಿ ಬಿತ್ತು.  ಏಟು ತಿ೦ದ ಮಕ್ಕಳು ನನ್ನ ಕೈಯಿ೦ದ ಬೆತ್ತ ಎಳೆದು ನನ್ನ ಮೇಲೆ ಮುಗಿಬಿದ್ದರು. ಲೋಹಿತಾಶ್ವ ಅದೇ ಬೆತ್ತದಲ್ಲಿ ನನಗೆ ಬಾರಿಸಿದ! ನನಗೆ ಅಳು ಬ೦ದು ಕೂಡಲೇ ವೇದಿಕೆಯಿ೦ದ ಕಾಲ್ಕಿತ್ತೆ.

ಇದೇ ನಾಟಕವನ್ನು ತನ್ನ ಮನೆಯಲ್ಲೂ ಆಡಿಸಬೇಕೆ೦ದು ಇನ್ನೊಬ್ಬ ಹುಡುಗ ಲಕ್ಷ್ಮಿನಾರಾಯಣನ್ ಆಹ್ವಾನಿಸಿದ. ನಾವು ಅವನಲ್ಲಿಗೆ ಹೋದೆವು. ಸಭಿಕರು ತು೦ಬಿದ್ದರು. ನಾಟಕ ಶುರುವಾಯಿತು. ಆಗ ಕೆಲಸಕ್ಕೆ ಹೋಗಿದ್ದ ಆ ಮನೆಯ ಯಜಮಾನ ಮರಳಿ ಬ೦ದರೆ೦ದು ಯಾರೋ ಬೊಬ್ಬೆ ಹಾಕಿದ್ರು. ನಮ್ಮ ಉಡುಪು ಸರ೦ಜಾಮುಗಳನ್ನೆಲ್ಲಾ ಬಿಟ್ಟು ಓಟಕಿತ್ತೆವು. ನಾಟಕ ಅರ್ಧದಲ್ಲೇ ನಿ೦ತಿತು.

ನಮ್ಮಲ್ಲಿ ಒ೦ದು ಹೆಚ್.ಎ೦.ವಿ. ಗ್ರಾಮಾಫೋನ್ ಇತ್ತು. ಹಲವು ಹಾಡಿನ ಪ್ಲೇಟ್‌ಗಳಿದ್ದುವು. ಪರವೂರಿನಿ೦ದ  ನಮ್ಮಲ್ಲಿಗೆ ಅತಿಥಿಯಾಗಿ ಬ೦ದವರಿಗೆ ಪ್ಲೇಟ್‌ಗಳನ್ನು ಹಾಕಿ ಹಾಡು ಕೇಳಿಸುತ್ತಿದ್ದೆವು. ಹಾಡಿನ ಸ೦ಗ್ರಹದಲ್ಲಿ ಒ೦ದು ಹೆ೦ಡ ಕುಡುಕರ ಹಾಡು ಇತ್ತು. ಅದನ್ನು ಹಾಕಿ ಅಣ್ಣ ಹೆ೦ಡಕುಡುಕರ ಹಾಗೆ ನರ್ತಿಸಿ ತೋರಿಸುತ್ತಿದ್ದ. ಆಗ ಎಲ್ಲರೂ ನಗುತ್ತಿದ್ದರು.

ಮದ್ರಾಸಿನ ದಿನಗಳು

1933 ರಲ್ಲಿ ತ೦ಜಾವೂರಿನ ವೈದ್ಯಕೀಯ ಶಾಲೆ ಮುಚ್ಚಲ್ಪಟ್ಟಿತು. ನನ್ನ ತ೦ದೆಯವರನ್ನು ಮದರಾಸಿಗೆ ವರ್ಗ ಮಾಡಿದರು. ಹಾಗಾಗಿ ಬಾಲ್ಯದ ದಿನಗಳನ್ನು ಕಳೆದ ತ೦ಜಾವೂರನ್ನು ಬಿಡಬೇಕಾಯಿತು. ಮದರಾಸಿನಲ್ಲಿ ಮು೦ದಿನ ಆರೂವರೆ ವರುಷಗಳನ್ನು ಕಳೆದೆವು.

ಮೈಲಾಪುರದಲ್ಲಿ ನಮ್ಮ ವಸತಿ. ಪಿ.ಎಸ್.ಹೈಸ್ಕೂಲ್ ಎ೦ಬ ಪ್ರಸಿದ್ಧ ಶಾಲೆಗೆ ಸೇರಿದೆವು. ಅಣ್ಣ ಐದನೇ ಫಾರ್ಮ್ (ಹತ್ತನೇ ತರಗತಿ) ಮತ್ತು ನಾನು ಮೂರನೇ ಫಾರ್ಮ್ (ಎ೦ಟನೇ ತರಗತಿ). ನಾನು ಹತ್ತರೊಟ್ಟಿಗೆ ಹನ್ನೊ೦ದು ಎ೦ಬ ಬಾಲಕನಾಗಿದ್ದರೂ ಸಣ್ಣಣ್ಣ ಅವನ ಒಳ್ಳೆಯ ಗುಣಗಳಿ೦ದಾಗಿ ತರಗತಿಯ ಮಕ್ಕಳಲ್ಲಿ ಪ್ರಮುಖನಾಗಿ ಕಾಣಿಸಿಕೊಳ್ಳುತ್ತಿದ್ದ.

ಒಮ್ಮೆ ನಾನು ಮಕ್ಕಳ ಗು೦ಪಿನೊ೦ದಿಗೆ ನಡೆಯುತ್ತ  ಕೆಲವರನ್ನು ಹಿ೦ದಕ್ಕೆ ಹಾಕಿ ಮು೦ದೆ ನಡೆಯಲು ಪ್ರಯತ್ನಿಸಿದಾಗ ಒಬ್ಬ ಹುಡುಗ ‘ಡಬ್ಬಾ’ ಎ೦ದು ಹೇಳುವುದು ಕೇಳಿಸಿತು. ಡಬ್ಬಾ ಎ೦ದರೆ ಕೆಟ್ಟ ಶಬ್ದ. ಅದರ ಅರ್ಥ ನನಗೆ ಆಗ ಗೊತ್ತಿರಲಿಲ್ಲ. ಕೆಟ್ಟ ಶಬ್ದ ಎ೦ದಷ್ಟೇ ಗೊತ್ತು. ಅವನು ನನ್ನನ್ನೇ ಉದ್ದೇಶಿಸಿ ಹಾಗೆ ಹೇಳಿದ್ದೆ೦ದು ಭಾವಿಸಿ ನಾನು ಕೋಪಗೊ೦ಡೆ. ಸಣ್ಣಣ್ಣ ನನ್ನ ಹಿ೦ದಿನಿ೦ದ ಬರುತ್ತಿದ್ದ. ಅವನೊ೦ದಿಗೆ ದೂರು ಹೇಳಿದೆ. ಸಣ್ಣಣ್ಣ  ನೇರವಾಗಿ ಆ ಹುಡುಗನ ಹತ್ತಿರ ಹೋಗಿ ‘ನೀನು ಏನು ಹೇಳಿದ್ದು ಇವನಿಗೆ’ ಎ೦ದು ವಿಚಾರಿಸಿದ. ಅವನಿಗೆ ಹೇಗೆ ಉತ್ತರಿಸುವುದೆ೦ದು ಗೊತ್ತಾಗಲಿಲ್ಲ. ತಾನು ಏನು ಹೇಳಿದ್ದೆ೦ದು ಅವನಿಗೂ ನೆನಪಿಲ್ಲ. ಆದರೆ ‘ಹಾಗೆ ಹೇಳಿದರೆ ನೀನೇನು ಮಾಡುವೆ?’ ಎ೦ದು ಆತ  ಎದುರಾಡಿದ. ಅಲ್ಲೇ ಮಾರ್ಗದ ಮಧ್ಯೆ ಅವರಿಬ್ಬರಿಗೂ ಹೊಕೊಯಾಯಿತು. ಆಗ ಬೇರೆಯವರು ಬ೦ದು ಬಿಡಿಸಿದರು. ಕೆಲವು ದಿನಗಳ ಬಳಿಕ ಅವರಿಬ್ಬರೂ ಸ್ನೇಹಿತರಾದರು. ಇಬ್ಬರಲ್ಲೂ ದ್ವೇಷ ಉಳಿಯಲಿಲ್ಲ.

ಹೈಸ್ಕೂಲ್ ಮುಗಿಸಿ ನನ್ನ ಅಣ್ಣ ಸುಬ್ಬರಾವ್ ಪಚ್ಚಪ್ಪಾಸ್ ಕಾಲೇಜಿಗೆ ಸೇರಿ ಅಲ್ಲಿ ಎರಡು ವರುಷ ಕಲಿತ. ಮು೦ದೆ ಕೀಲ್ಪಾರ್ಕ್ ವೈದ್ಯಕೀಯ ಸ್ಕೂಲಿಗೆ ಸೇರಿದ. ದೊಡ್ಡಣ್ಣ ತಿಮ್ಮಪ್ಪಯ್ಯ ಗಳಿಸಿದಷ್ಟು ಉತ್ತಮ ಅಂಕ ಇವನು ಗಳಿಸಲಿಲ್ಲ. ಆದ್ದರಿ೦ದ ಇವನಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಹಾಗಾಗಿ ಎಲ್.ಐ.ಎಂ. ಕಲಿಯಲು ಮು೦ದಾದ.

ಆ ಸಮಯದಲ್ಲಿ ಆತ  ತಾಯಿಗೆ ಮನೆ ಕೆಲಸದಲ್ಲಿ ಸಹಕರಿಸುತ್ತಿದ್ದ. ತರಕಾರಿ ತರುವುದು, ಜೀನಸು ತರುವುದು, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು.. ಇತ್ಯಾದಿ. ನಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬೇರೆ ಜನರಿದ್ದರು. ಹಾಗಾಗಿ ಮನೆಯಲ್ಲಿ ಹೆಚ್ಚು ಕೆಲಸವಿರುತ್ತಿರಲಿಲ್ಲ. ಆದರೆ ನಾನು ಯಾವ ಕೆಲಸಕ್ಕೂ ಸಿಕ್ಕುತ್ತಿರಲಿಲ್ಲ. ‘ಉಪಕಾರಗೇಡಿ’ ಎ೦ಬ ಬಿರುದು ಗಳಿಸಿದ್ದೆ!

ನಾವು ವರ್ಷ೦ಪ್ರತಿ ಊರಿಗೆ ಬೇಸಿಗೆ ರಜೆಯಲ್ಲಿ ಹೋಗಿ ಬರುತ್ತಿದ್ದೆವು. ಬರುವಾಗ ಸೆ೦ಟ್ರಲ್ ಸ್ಟೇಷನ್‌ನಲ್ಲಿ ಬೆಳಿಗ್ಗೆ ರೈಲಿನಿ೦ದಿಳಿದು ಕಾರಿನಲ್ಲಿ ಮನೆಗೆ ಬ೦ದು ಉಪಾಹಾರ ಮಾಡುತ್ತಿದ್ದೆವು. ಆದರೆ ಸಣ್ಣಣ್ಣನಿಗೆ ಮಾತ್ರ ಸಾಮಾನನ್ನೆಲ್ಲ ಎತ್ತಿನ ಗಾಡಿಯಲ್ಲಿ ತು೦ಬಿ ಗಾಡಿಯಲ್ಲೇ ಕುಳಿತು ಮೈಲಾಪುರಕ್ಕೆ ಬರುವ ಕೆಲಸ. ಹಾಗಾಗಿ ಅವನು ಮನೆಗೆ ಬ೦ದು ಉಪಾಹಾರ ಮಾಡುವಾಗ ಸುಮಾರು ಮಧ್ಯಾಹ್ನ ಗ೦ಟೆ ಹನ್ನೆರಡಾಗುತ್ತಿತ್ತು.

ಹೀಗಿರುವಾಗ ಒಮ್ಮೆ ತಾಯಿ ನನಗೆ ‘ದೇವಸ್ಥಾನಕ್ಕೆ ಹಣ್ಣುಕಾಯಿ ಮಾಡಲು ನೀನು ಹೋಗಬಾರದೇ?  ಅವನು ಎಷ್ಟು ಸಲ ಹೋಗುತ್ತಾನೆ’ ಎ೦ದರು. ನಾನು ಇದನ್ನು ಸಣ್ಣಣ್ಣನಿಗೆ ಹೇಳಿದಾಗ, ‘ಭಕ್ತಿಯಿ೦ದ ಯಾರು ಅಲ್ಲಿಗೆ ಹೋಗುತ್ತಾರೆ? ನಾನು ಅಲ್ಲಿಗೆ ಬರುವವರನ್ನು ನೋಡಲು ಹೋಗುವುದು’ ಎ೦ದ.

ತ೦ದೆಯವರು ತಾನು ಶಾಲೆಗೆ ಹೋಗಲು ಬಳಸುತ್ತಿದ್ದ ಸೈಕಲ್ಲನ್ನು ಸಣ್ಣಣ್ಣನಿಗೆ ಕೊಟ್ಟಿದ್ದರು. ಪ್ರತೀದಿನ ಸ೦ಜೆ ನಾನು ಫುಟ್‌ಬಾಲ್ ಮತ್ತು ಅವನು ಕ್ರಿಕೆಟ್ ಆಡುತ್ತಿದ್ದೆವು.

ಮದರಾಸಿನಲ್ಲಿ ನನಗೂ ಅವನಿಗೂ ಓದಲು ಒ೦ದೇ ಕೋಣೆ. ಕೆಲವು ಸಲ ಜಗಳವಾಗಿ ನಮ್ಮೊಳಗೆ ಜಟಾಪಟಿ ಆಗುತ್ತಿತ್ತು. ನನಗೆ ಕೆಲವೊಮ್ಮೆ ಹಿ೦ದಿನಿ೦ದ ತಿವಿಯುವುದು, ಗುದ್ದುವುದು…. ಇ೦ತಹ ತ೦ಟೆಗಳನ್ನು ನನ್ನ ತ೦ಗಿಯರು ಮಾಡುತ್ತಿದ್ದರು. ನನ್ನ ಸಹಾಯಕ್ಕೆ ಯಾರೂ ಬರುತ್ತಿರಲಿಲ್ಲ. ಎಲ್ಲರೂ ಅವನ ಸಹಾಯಕರೇ. ಇದು ಸಾಲದೆ೦ಬ೦ತೆ ಸ೦ಜೆ ತ೦ದೆಯವರು ಬ೦ದಾಗ ಅವರಿಗೆ ದೂರು ಹೇಳಿ ನನಗೆ ಬೆಲ್ಟಿನಿ೦ದ ಏಟು ಸಿಗುವ೦ತೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ತ೦ದೆಯವರ ಕೈಯಿ೦ದ ಬೆಲ್ಟಿನಿ೦ದ ಏಟು ತಿ೦ದವನು ನಾನೊಬ್ಬನೇ.

ತ೦ದೆಯವರ ನಿಧನಾನ೦ತರ

ಮದರಾಸಿನಲ್ಲಿದ್ದಾಗ ತ೦ದೆಯವರು (1939 ನವ೦ಬರ್ 6ರ೦ದು) ತೀರಿಕೊ೦ಡರು. ತಾಯಿ ನಮಗೆ ಬಿಡಾರ ಮಾಡಿಕೊಟ್ಟು ಊರಿಗೆ ಮರಳಿದರು. ತ೦ದೆಯ ಕೆಲವು ಆಪ್ತರು ಹೋಗುವುದು ಬೇಡ, ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತದೆ ಎ೦ದರೂ ಕೇಳದೆ ಅಮ್ಮ ಅಡ್ಡೂರಿಗೆ ಹೊರಟುಹೋದಳು. ಆಗ ದೊಡ್ಡಣ್ಣ ಎ೦ಬಿಬಿ‌ಎಸ್ ಕೊನೆಯ ವರುಷದಲ್ಲಿ ಕಲಿಯುತ್ತಿದ್ದ. ಇನ್ನು ಒ೦ದು ವರುಷ ಓದಿ ಹೌಸ್ ಸರ್ಜನ್ ಮುಗಿಸಿದರೆ ಆತನ ವಿದ್ಯಾಭ್ಯಾಸ ಮುಗಿಯಲಿತ್ತು. ನಾನು ಎಫ್.ಎ.ಯಲ್ಲಿ ಓದುತ್ತಿದ್ದೆ. ಸಣ್ಣಣ್ಣ ಎಲ್.ಐ.ಎಂ.ಓದುತ್ತಿದ್ದ. ನಾನು ಮತ್ತು ದೊಡ್ಡಣ್ಣ ಒ೦ದು ರೂಂ ಮಾಡಿ ವಿದ್ಯಾಭ್ಯಾಸ ಮು೦ದುವರಿಸಿದೆವು. ಸಣ್ಣಣ್ಣ ಅವನ ಕಾಲೇಜಿನ ಹತ್ತಿರ ಸಹಪಾಠಿಗಳೊ೦ದಿಗೆ ಇರುತ್ತಿದ್ದ.

ನಮಗೆ ಖರ್ಚಿಗೆ ತಿ೦ಗಳಿಗೆ ಇಪ್ಪತ್ತೈದು ರೂಪಾಯಿ ಸಿಗುತ್ತಿತ್ತು. ಆದರೆ ಸಣ್ಣಣ್ಣ ತಿ೦ಗಳು ಮುಗಿಯುವ ಮೊದಲೇ ಆ ಹಣ ಖರ್ಚು ಮಾಡಿ ಕಷ್ಟ ಪಡುತ್ತಿದ್ದ. ಆಗ ದೊಡ್ಡಣ್ಣ ಅವನಿಗೆ ಸಹಾಯ ಮಾಡುತ್ತಿದ್ದ.

1940ರ ಮಾರ್ಚ್‌ನಲ್ಲಿ ನಾನು ಮ೦ಗಳೂರಿಗೆ ಬ೦ದೆ. ತಮ್ಮ ಊರಿಗೆ ಬ೦ದು ಮ೦ಗಳೂರಿನಲ್ಲಿ ಕಲಿಯಲು ಶುರು ಮಾಡಿದ. ದೊಡ್ಡಣ್ಣನ ವಿದ್ಯಾಭ್ಯಾಸ ಮುಗಿದಿತ್ತು. ಇನ್ನು ಕ್ಲಿನಿಕ್ ತೆರೆಯಲು ತಾನು ತ೦ದೆಯವರ ಉಳಿತಾಯದ ಹಣವನ್ನು ಖರ್ಚು ಮಾಡಿದರೆ ಸೋದರ ಸೋದರಿಯರ ವಿದ್ಯಾಭ್ಯಾಸಕ್ಕೆ ತೊ೦ದರೆಯಾಗಬಹುದೆ೦ದು ಗ್ರಹಿಸಿ ಆತ ಸೈನ್ಯಕ್ಕೆ ಸೇರಿದ.

ತ೦ದೆಯವರ ನಿವೃತ್ತಿ ವೇತನ ಮತ್ತು ಇತರ ಅಲ್ಪಸ್ವಲ್ಪ ಉಳಿತಾಯದ ಹಣವನ್ನು ಅಮ್ಮ ಬ್ಯಾ೦ಕಿಗೆ ಹಾಕುತ್ತಿರಲಿಲ್ಲ. ಅವರು ಅದರಿ೦ದ ಕೃಷಿ ಭೂಮಿ ಖರೀದಿಸಿ  ಗೇಣಿ ವಸೂಲಿ ಮಾಡಿ ಬದುಕಬೇಕೆ೦ದು ನಿಶ್ಚಯಿಸಿದ್ದರು. ಇದಕ್ಕೆ ಸಣ್ಣಣ್ಣನ ಬೆ೦ಬಲವಿತ್ತು. ಇದರಿ೦ದಾಗಿ ನಮ್ಮ ಒಟ್ಟು ಉತ್ಪತ್ತಿ ಸುಮಾರು 450 ಮುಡಿ ಅಕ್ಕಿ ಗೇಣಿ ಬರುವಷ್ಟಾಯಿತು. ಹಿ೦ದೆ ಅದು 150 ಇತ್ತು. ಈ ಹಣದಿ೦ದ ನನ್ನ ತಾಯಿ ಮನೆ ಖರ್ಚನ್ನು, ಮಕ್ಕಳ ವಿದ್ಯಾಭ್ಯಾಸವನ್ನು ನಡೆಸಲು ಸಾಧ್ಯವಾಯಿತು.

ಮದರಾಸಿನಲ್ಲಿ ಸಣ್ಣಣ್ಣ ಕಾಲೇಜು ದಿನಗಳಲ್ಲಿ ದು೦ದುವೆಚ್ಚ ಮಾಡದೆ ಅವನಿಗೆ ಕೊಟ್ಟ ಹಣದಲ್ಲಿ  ಮಿತವ್ಯಯದಲ್ಲಿ ಬಹಳ ಜಾಗ್ರತೆಯಿ೦ದ ಜೀವನ ನಡೆಸುತ್ತಿದ್ದ. ಅವನಿಗೆ ರಾಜಕೀಯದ ಗ೦ಧಗಾಳಿ ಇರಲಿಲ್ಲ. ಆಗ ಎರಡನೇ ಮಹಾಯುದ್ಧ ಶುರುವಾಗಿತ್ತು, ಚಳುವಳಿ ಜೋರಾಗಿತ್ತು. ಅವನು ಮಾತ್ರ ನಿಶ್ಚಿ೦ತನಾಗಿದ್ದ.

ರಾಜಕೀಯದ ಅಲೆಗಳಲ್ಲಿ

ಇತ್ತ ಮ೦ಗಳೂರಿನಲ್ಲಿ ಬೀಸುತ್ತಿದ್ದ ರಾಜಕೀಯದ ಅಲೆಯಿ೦ದಾಗಿ ನಾನು ಇರುತ್ತಿದ್ದ ಹಾಸ್ಟೆಲ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಯಿತು.  ನಾನು ಅದನ್ನು ಸೇರಿಕೊ೦ಡೆ. ಕಮ್ಯೂನಿಸ್ಟ್ ಸಿದ್ಧಾ೦ತಗಳು ಮತ್ತು ಅದರಿ೦ದ ಪ್ರೇರಿತವಾದ ಕಾರ್ಯಗಳಲ್ಲಿ ನಾನು ಕಟ್ಟುಬಿದ್ದೆ.

ಒಮ್ಮೆ ಸಣ್ಣಣ್ಣ ಮ೦ಗಳೂರಿಗೆ ಬ೦ದಿದ್ದಾಗ ನನ್ನ ಹಾಸ್ಟೆಲ್ ರೂಂನಲ್ಲಿ ತ೦ಗಿದ್ದ. ರಾತ್ರಿಯಿಡೀ ನನ್ನ ರಾಜಕೀಯ ಜೀವನದ ಬಗ್ಗೆ ಚರ್ಚಿಸಿದ್ದ. ಬೆಳಿಗ್ಗೆ ಆವನೊ೦ದಿಗೆ ರೈಲ್ವೇ ನಿಲ್ದಾಣಕ್ಕೆ ನಾನೂ ಹೊರಟೆ. ಹೋಗುತ್ತಿದ್ದಾಗ ಕಮ್ಯೂನಿಸ್ಟ್ ಪತ್ರಿಕೆಯೊ೦ದನ್ನು ಕೊ೦ಡುಕೊಳ್ಳಲು ವಿನ೦ತಿಸಿದೆ. ರಾಜಕೀಯದ ಅರಿವಿಲ್ಲದ ಅವನು ನಿರಾಕರಿಸಿದ. ಇದರಿ೦ದಾಗಿ ನನಗೆ ಬೇಸರವಾಗಿತ್ತು.

ರೈಲ್ವೇ ನಿಲ್ದಾಣ ಸಮೀಪಿಸುತ್ತಿದ್ದ೦ತೆ ಆತನ ಚಪ್ಪಲಿಯ ಬಾರ್ ಕಡಿಯಿತು. ಚಪ್ಪಲಿ ಹಾಕಿಕೊ೦ಡು ಹೋಗುವ ಸ್ಥಿತಿಯಲ್ಲಿರಲಿಲ್ಲ. ಕೈಯಲ್ಲಿ ಹಿಡಿದುಕೊ೦ಡೇ ಹೋಗಬೇಕಾಗಿತ್ತು.ಆಗ ಅವನಿಗೆ ನನ್ನ ಪತ್ರಿಕೆ ನೆನಪಾಗಿ ‘ಒ೦ದು ಪೇಪರ್ ಕೊಡು’ ಎ೦ದು ಕೇಳಿದ. ನಾನು ‘ಕೊಡುವುದಿಲ್ಲವೆ೦ದು ಹೇಳಿದೆ. ‘ಹಣ ಕೊಡುತ್ತೇನೆ, ಕೊಡು’ ಎ೦ದು ಒತ್ತಾಯಿಸಿದ. ನೀನು ಎಷ್ಟೇ ಹಣ ಕೊಟ್ಟರೂ ನಿನಗೆ ಕೊಡುವುದಿಲ್ಲ ಎ೦ದು ನಾನು ಪಟ್ಟು ಹಿಡಿದೆ. ಇದರಿ೦ದಾಗಿ ನನ್ನ ಪಕ್ಷ ನಿಷ್ಠೆಯ ಕುರಿತು ಆತನಿಗೆ ತಿಳಿದಿರಬೇಕು. ಮತ್ತೆ ಆತ ಒತ್ತಾಯಿಸಲಿಲ್ಲ. ಅದಾದ ಬಳಿಕ ತಾಯಿಯ ಬಳಿ ಹೇಳಿ ನನ್ನನ್ನು ತಿದ್ದಲು ಅವನು ಪ್ರಯತ್ನಿಸುತ್ತಿದ್ದ.

ಪಕ್ಷದ ಮೇಲಿನ ನಿರ್ಬ೦ಧ ತೆಗೆಯಲಾಯಿತು. ಕಮ್ಯೂನಿಸ್ಟ್ ಪಕ್ಷದ ಕೆಲಸ ಚುರುಕಿನಿ೦ದ ಆರ೦ಭವಾಯಿತು. ಪಕ್ಷಕ್ಕೆ ಬೇಕಾದ ಆರ್ಥಿಕ ಮೂಲಕ್ಕಾಗಿ ಪಕ್ಷದ ನಿಧಿಯೊ೦ದನ್ನು ರೂಪಿಸಲಾಯಿತು. ಹಲವು ಅಭಿಮಾನಿಗಳು, ಪ್ರ್ರೋತ್ಸಾಹಕರು, ಪಕ್ಷ ಕಾರ್ಯಕರ್ತರು ಸಾಧ್ಯವಾದಷ್ಟು ನೆರವಾದರು. ರಾಜೇಶ್ವರರಾಯರು ಅವರ ಪೂರ್ಣ ಆಸ್ತಿ ಮಾರಿ, ಅವರ ಹೆ೦ಡತಿಗೆ ಜೀವನಕ್ಕಾಗಿ ಆರು ಎಮ್ಮೆ ತೆಗೆದುಕೊಟ್ಟು,  ಉಳಿದೆಲ್ಲಾ ಸ೦ಪತ್ತನ್ನು ಪಕ್ಷಕ್ಕೆ ಧಾರೆಯೆರೆದರು.

ಈ ವಿಚಾರ ನನಗೆ ಸ್ಫೂರ್ತಿ ನೀಡಿತು. ನನ್ನಲ್ಲಿ ಹಣ ಎಲ್ಲಿ೦ದ? ನಮ್ಮ ಕುಟು೦ಬದ ಆಸ್ತಿ ಇದೆ. ಹಾಗಾಗಿ ಅಮ್ಮನ ಹತ್ತಿರ ನನ್ನ ಪಾಲಿನ ಬಾಬ್ತು ಕೇವಲ ಮೂರು ಸಾವಿರ ಕೇಳಿದೆ. ನನ್ನೆಲ್ಲಾ ಹಕ್ಕನ್ನು ನಿಮಗೆ ಬರೆದುಕೊಡುತ್ತೇನೆ ಎ೦ದಿದ್ದೆ. ಅಮ್ಮ ‘ಆಗುವುದಿಲ್ಲ’ ಎ೦ದರು. ಕೊಡದಿದ್ದರೆ ನನ್ನ ಜೀವಕ್ಕೆ ಅಪಾಯ ಬರಬಹುದೆ೦ದು ಹೆದರಿಸಿದೆ. ಅ೦ತಹ ಸ೦ಘಕ್ಕೆ (ಪಕ್ಷಕ್ಕೆ) ಯಾಕೆ ಸೇರಿದೆ ಎ೦ದು ಅಮ್ಮನೂ ಪಿರಿಪಿರಿ   ಮಾಡಿದಳು. ಆಗ ಸಣ್ಣಣ್ಣ ತು೦ಬೆ ಕೃಷ್ಣರಾಯರಲ್ಲಿ ಸಲಹೆ ಕೇಳಿದಾಗ, ‘ಅವನು ಮಾಡುವುದು ಮಾಡಲಿ, ಕೊಡಬೇಡ ’ ಎ೦ದರ೦ತೆ. ಸಣ್ಣ ಅಣ್ಣನೂ ಗಟ್ಟಿ ನಿ೦ತ. ಅದರಿ೦ದಾಗಿ ನಾನು ನಿರೀಕ್ಷಿಸಿದ ಹಣ ಸಿಗಲಿಲ್ಲ. ನನ್ನ ಆಸ್ತಿ ಅ೦ದು ಕಳೆದುಕೊ೦ಡಿದ್ದರೆ, ಪಕ್ಷ ಬಿಟ್ಟ ನ೦ತರದ ಈಗಿನ ಜೀವನಕ್ಕೆ ಕಷ್ಟವಾಗುತ್ತಿತ್ತು.