ಸಿಕ್ಕಿಕೊಂಡಿದ್ದೇನೆ ನಾನೂ
ಕೊಳಕು ಮಂಡಲದ ನಡುವೆ
ಕೊಂಕು ನಗೆ, ನರಿ ಮಾತು, ಕಪಿ ಮುಷ್ಟಿ,
ವೃಕೋದರಗಳ ಮಧ್ಯೆ.

ಬರೀ ಮುಖವಾಡಗಳ ತೊಟ್ಟು ನಟಿಸುವೀ
ಪರಿವಾರದಿಂದ, ಹೊರಬಿದ್ದು ಹೋಗುವ ಕಾಲ
ಎಂದು ಹೇಗೆ ಬಂದೀತೆಂದು ಕಾಯುತ್ತಾ
ದಿನದಿಂದ ದಿನಕ್ಕೆ ಸಣ್ಣಗೆ ಸಾಯುತ್ತಾ
ಬಿದ್ದಿದ್ದೇನೆ.

ಮೊದಮೊದಲು ನಯವಾದ ಜೇಡನ ಜಾಲ
ಅನಂತರ ರೇಸಿಮೆಯ ನೂಲಿನ ಕುಣಿಕೆ ;
ಬರಬರುತ್ತಾ ಬೆಸ್ತ ಬಲೆ, ಗಾಳ ಬೀಸುವ ಗತ್ತು
ನನ್ನ ಸುತ್ತೂ.

ಹತ್ತಿರಕ್ಕೆ ಬರುತ್ತಾರೆ.
ಹೆಗಲಿಗೆ ಹೆಗಲು ತಾಕಿಸಿ
ಹಲೋ ಎಂದು ಹಲ್ಕಿರಿದು
ನೀನೆ ಭೂಪತಿ ಎಂದು ಉಬ್ಬಿಸಿ
ಸುತ್ತ ಮೆತ್ತಗೆ ಸೌದೆಯೊಟ್ಟುತ್ತಾರೆ.

ಯಾವಾಗ ಕಡ್ಡಿ ಗೀಚುತ್ತಾರೊ ಏನೋ,
ಮೊದಲೇ ಹೇಗಾದರೂ ಮಾಡಿ
ಸುರಂಗ ಮಾರ್ಗವನ್ನು ಪತ್ತೇ ಹಚ್ಚಿ
ಪಾರಾಗಬೇಕು.

ಬರುತ್ತಾರೆ.
ಪಾದಚಾರಿಯಾಗಿರುವ ನನ್ನನ್ನು
ಕರೆದು ಕಾರೊಳಗೆ ಕೂರಿಸುತ್ತಾರೆ :
ಝಗ ಝಗ ದೀಪಗಳ ದಾರಿಯಲ್ಲಿ ಡ್ರೈವ್ ಮಾಡಿ
ಕಡೆಗೆಲ್ಲೊ ಕತ್ತಲೆಯ ಗಲ್ಲಿಯಲ್ಲಿ
ಗೊತ್ತಾಗದಂತೆ ನನ್ನ ಜೇಬನ್ನು ಜಫ್ತಿಮಾಡಿ
“ಇಳಿಯಿರಿ ಆಮೇಲೆ ನೋಡೋಣವಂತೆ”
ಅನ್ನುತ್ತಾರೆ.

ನಟ್ಟ ನಡುರಾತ್ರಿ ಅಪರಿಚಿತ ಸಂದಿಗೊಂದಿಯ ನಡುವೆ
ಒಬ್ಬನೇ ತೊಳಲಿ ಬಳಲುತ್ತೇನೆ.