ನಮೋ ಗೌರಿ ನಾರಾಯಣಿ ಶ್ರೀ ದುರ್ಗಾಮಾಯಿ
ನಿನ್ನಯ ಕೃಪೆ ಇಲ್ಲದಿರಲು ನಾನು ಕಾಣೆ ತಾಯಿ.
ನೀನೆ ಹಗಲು, ನೀನೆ ಇರುಳು, ನೀನೆ ಸಂಜೆ, ರಾತ್ರಿ.
ಕೋದಂಡಪಾಣಿಯಾದ ಶ್ರೀ ರಾಮರೂಪಿಣೀ
ಕೊಳಲ ಹಿಡಿದು ಗಾನಗೈವ ಗೋsಪಾಲ ರೂಪಿಣೀ
ಶಿವನ ಮೆಟ್ಟಿ ಮೇಲೆ ನಿಂತ ರುದ್ರಭದ್ರ ಕಾಳಿ ನೀ,
ದಶಾವತಾರಿ ನೀನೆ, ದಶಮಹಾವಿದ್ಯೆ ನೀನೆ,
ಪರಮಶಕ್ತಿ ರೂಪಿಣೀ
ಭವಸಾಗರ ತಾರಿಣೀ.

ಬಿಲ್ವದಲದಿ ಪೂಜೆಗೈದ ಯಶೋದಾ ತಾಯಿಗೆ,
ಬಾಲಗೋsಪಾಲನನ್ನು ಕೊಟ್ಟ ಮಹಾ ತಾಯಿ.
ಕಾಡಿನಲೋ ಬೀಡಿನಲೋ, ಎಲ್ಲಾದರೂ ಇರಲಿ ನಾ.
ಎಂಥ ಸಾವು ಬಂದರೂ
ನಿನ್ನ ನೆನಪು ಉಳಿಯಲೆನಗೆ
ನನ್ನ ಅಂತ್ಯಕಾಲದಿ.

ನೀನೆ ನನ್ನ ನೂಂಕಿಬಿಟ್ಟರೆಲ್ಲಿ ನನಗೆ ತಾವಿದೆ
ನಿನ್ನ ಅಡಿಯಲಲ್ಲದೆ !
‘ಹೋಗು ನಡೆ’- ಎಂದು ನೀನು ಗದರಿಕೊಂಡು ತಳ್ಳಿದರೂ
ಕಾಲಂದಿಗೆಯಾಗಿ ನಿನ್ನ ಕಾಲಿಗಂಟಿಕೊಳ್ಳುವೆ !
ಶಿವನ ಜೊತೆಗೆ ಕುಳಿತು ನೀನು ಸರಸವಾಡುವಾಗ, ನಾನು
ಜೈ ಶಿವಾ – ಎನ್ನುವೆ !

ಗರುಡನಾಗಿ ನೀನು ಮೇಲೆ ನೀಲ ಬಾನೊಳಾಡುವಾಗ
ಕಿರಿಯ ಮೀನವಾಗಿ ನಾನು ತೆರೆಯ ತುದಿಯೊಳಾಡುವೆ !
ಆಗ ನೀನು ಮೇಲೆ ಎರಗಿ ನಿನ್ನ ನಖದಿ ಹಿಡಿಯುವೆ;
ಉಸಿರು ಕಟ್ಟಿಕೊಂಡು ನಾನು ಒದ್ದಾಡುತಲಿದ್ದರೂ
ನನ್ನ ನೂಕಬೇಡ ತಾಯಿ, ಓ ಕಾಲ ಕಾಮಿನೀ
ನಿನ್ನ ಪಾದಪದ್ಮನೌಕೆ ಭವಸಾಗರ ತಾರಿಣಿ.
ನೀನೆ ಸ್ವರ್ಗ, ನೀನೆ ಮರ್ತ್ಯ, ನೀನೆಯೆ ಪಾತಾಳ
ದ್ವಾದಶ ಗೋಪಾಲ ಮತ್ತೆ ಹರಿಹರ ಬ್ರಹ್ಮಾದಿಗಳಿಗೆ
ನಿನ್ನ ಬಸಿರೆ ಮೂಲ.
ಓ ಅನಂತೆ, ಅನ್ನಪೂರ್ಣೆ, ನಮೋ ಸರ್ವಮಂಗಳೇ
ಶೂಲಹಸ್ತ ಶೂಲಪಾಣಿ
ತಾನೆ ರಕ್ಷೆ ನಿಲುವನಲ್ತೆ
ನಿನ್ನ ನೆನೆವ ಭಕ್ತಗೆ.