ಕ್ಷಣ ಕ್ಷಣಕೂ ನನ್ನಹಮ್ಮನರೆಯುವ
ಲೋಕತಂತ್ರಗಳೆ ನಮೋ ನಮೋ
ನನ್ನಲ್ಪತೆಯನು ತೋರುತ ಮೆರೆಯುವ
ಬೆಳೆವ ತೇಜಗಳೆ ನಮೋ ನಮೋ.

ಬೆಳಕಿನ ಬೆಲೆಯನ್ನೆತ್ತಿ ತೋರಿಸುತ
ಕವಿವ ಕತ್ತಲೆಗೆ ನಮೋ ನಮೋ
ಶೋಕ-ತಾಪ-ಭಯ-ತಲ್ಲಣದಲ್ಲಿಯು
ಗೆಲ್ಲುವ ಸಹನೆಗೆ ನಮೋ ನಮೋ.

ದಾರಿ ತಪ್ಪಿದರು ಕೈಹಿಡಿದೆತ್ತುವ
ಕೃಪಾವಲಂಬಕೆ ನಮೋ ನಮೋ
ಬೇಯಿಸಿದರು ಮಳೆ ಹೊಯ್ಯುತ ಹಸುರನು
ಕೊನರಿಪ ಕರುಣೆಗೆ ನಮೋ ನಮೋ.