ದೂರವೇ ನಿಂತು, ಕೊಂಕುನಗೆ ನಕ್ಕು
ಉರಿವ ಸಿಗರೇಟುಗಳ ಹಿಂದೆ ಮರೆಯಾಗಿ ಹೋಗುತ್ತಾರೆ
ಯಾರ‍್ಯಾರ ಜೇಬಿಗೊ ಕತ್ತರಿ ಹಾಕಿ
ತಮ್ಮ ಲೆಕ್ಕಕ್ಕೆ ಜಮಾ ಮಾಡಿ
ಸದ್ದಿರದೆ ಸಂದಿಗೊಂದಿಗಳಲ್ಲಿ ಸುತ್ತುತ್ತಾರೆ.
ಹತ್ತು ಜನ ಸೇರಿರುವ ಚೌಕದ ಮಧ್ಯೆ
ತಮ್ಮ ಪುಡಾರಿಗಳ ಮುಂದೆ ಹರಟೆ ಕೊಚ್ಚುತ್ತಾರೆ.

ಪೀಚುಗಳ ಕೈಯಲ್ಲಿ ಪೀಪಿ ಊದಿಸಿ
ಚಪ್ಪಾಳೆ ತಟ್ಟುತ್ತಾರೆ.
ಅಟ್ಟದ ಮೇಲೆ ಗುಟ್ಟಾಗಿ ಸಭೆಸೇರಿ
ಅಂತರ್‌ರಾಷ್ಟ್ರೀಯ ಸಮಾಚಾರಗಳನ್ನು
ತಟ್ಟೆಯಲ್ಲಿಟ್ಟು ತಿನ್ನುತ್ತಾ,
ಆಗಾಗ ವೇದೋಪನಿಷತ್ತುಗಳ ಒಂದೊಂದು ಸಾಲನ್ನು
ನಂಚಿಕೊಳ್ಳುತ್ತಾರೆ.
ಅವನಿವನ ಜಬ್ಬಿ ಬೀಡಾಮಾಡಿ ಜಗಿದು
ಉಗಿಯುತ್ತಾರೆ.

ತಮ್ಮ ಸ್ವಿಚ್ಚಿಂದಲೇ ಎಲ್ಲಾ ಬಲ್ಬುಗಳೂ ಹತ್ತುತ್ತವೆಂದು
ಕಗ್ಗತ್ತಲಲ್ಲೇ ತಡಕಾಡುತ್ತ
ನಟ್ಟ ನಡುರಾತ್ರಿ ಮೆಟ್ಟಿಲು ಹತ್ತಿ
ಮನೆಯ ಬಾಗಿಲು ಬಡಿದು
ನಿದ್ದೆ ಕೆಡಿಸುತ್ತಾರೆ.