ನಮ್ಮವರೆ ಇವರೆಲ್ಲ, ನಮ್ಮವರೆ ಇವರೆಲ್ಲರೂ…
ನೂರಾರು ರೀತಿಯಲಿ ಅಡ್ಡಹಾದಿಯ ಕಡಿದು
ಗುಡ್ಡವ ದಾಟಿ, ಚಿನ್ನಕ್ಕೆ ಕನ್ನ ಕೊರೆಯುವ ಜನರು.
ಬೆವರಿಲ್ಲದೆಯೆ ಬಳಿಗೆ ಬಂದುದ ತುಡುಕಿ, ಅಡಕಿ,
ಬ್ಯಾಂಕಿನಲಿ ಬೆಳೆವ ಬಡ್ಡಿಗೆ ತುಡಿವ ತಾಪಸಿಗಳು.
ಬೆಳಗಾದೊಡನೆ ನೀರಿಗೆ ಹಾಲನು ಬೆರೆಸಿ, ಅನ್ನಕ್ಕೆ
ಕಲ್ಲನು ಇಡುಕಿ, ಹಳಸಿದ್ದನ್ನೆ ಬಿಸಿಮಾಡಿ ಬಡಿಸಿ
ನಾಲಗೆಯಲ್ಲೆ ಮೂಲೋಕವನೆ ಜಾಲಿಸಿ ನಿಂತ
ಮಹಾನುಭಾವರು ಇವರು; ನಮ್ಮವರೆ ಇವರೆಲ್ಲ
ನಮ್ಮವರೆ ಇವರೆಲ್ಲರೂ…

ರಾಮ, ಕೃಷ್ಣ, ಬುದ್ಧ, ಬಸವ- ಇವರು ಹೇಗೋ ಹಾಗೆ
ಈ ಇವರು ನಮ್ಮವರೆ, ನಮ್ಮವರೆ ಇವರೆಲ್ಲರೂ.
ಇವರಿರದಿದ್ದರೆಲ್ಲಿತ್ತು ಭಗವದವತಾರಕ್ಕೆ ದಾರಿ,
ರಹದಾರಿ? ವೇದೋಪನಿಷತ್ತುಗಳ ನಾಡು, ಧರ್ಮದ
ಬೀಡು; ಇಡೀ ಜಗತ್ತಿನಲಿ ಇಲ್ಲ ಇಂಥ ಪುಣ್ಯದ ನಾಡು,
ಯಾವ ದೇಶದಲಿ ಎತ್ತಿದ್ದಾನೆ ಹೇಳಯ್ಯ ಭಗವಂತ
ಇಷ್ಟೊಂದು ಅವತಾರಗಳ? ಸಂತಸಿದ್ಧರಿಗಲ್ಲ-
– ಅವರು ಎಂದಿದ್ದರೂ ಅವನವರೆ, ಅವರಿಗೇತಕ್ಕೆ ದೈವಕೃಪೆ-
ಈ ಇವರಿಗಾಗಿ, ಈ ನಮ್ಮವರ ಉದ್ಧಾರಕ್ಕೆ ಪಂಚಯುಗ
ಯೋಜನೆ ಹಾಕಿ ಅವತರಿಸುತ್ತಲೇ ಇದ್ದಾನೆ ಆ ಪರಮಾತ್ಮ
ಪ್ರತಿ ಯುಗದಲ್ಲು. ಪಾಪ, ಕನಿಕರಿಸು ಆತನನು;
ಅವನು ನಿಜವಾಗಿಯೂ ಭಕ್ತರೆಂದಂತೆ ಇರಲೇಬೇಕು
ಕೃಪಾಳು. ಆ ಅವನ ಪಾಡನು ಕುರಿತು ಕಂಬನಿ ಸುರಿಸು,
ಅವನಿಗೊಂದಿಷ್ಟಾದರೂ ರಜಾ ದೊರೆಯಲೆಂದು ಆಶೀರ್ವದಿಸು.