ನಮ್ಮಳ್ವಾರ್

ಭಕ್ತಿಪಂಥದ ಹಿರಿಯರು, ಮಗುವಾಗಿದ್ದಾಗಿನಿಂದ ಈ ಲೋಕದ ವ್ಯವಹಾರವನ್ನು ಕಡೆಗಣಿಸಿ ದೇವರಿಗೆ ಅರ್ಪಿಸಿಕೊಂಡವರು. ಇವರ “ಪ್ರಭಂದಗಳು” ಪ್ರಸಿದ್ಧವಾದವು. ಜಾತಿ ವ್ಯತ್ಯಾಸವಿಲ್ಲದೆ ಎಲ್ಲ ದೈವಭಕ್ತರನ್ನು ಗೌರವಿಸಿದರು.

ನಮ್ಮ ದೇಶದಲ್ಲಿ ಅನೇಕರು ಭಗವಂತನನ್ನು ’ಶಿವ’ ಎಂದು ಪೂಜಿಸಿ ಭಕ್ತಿ ತೋರುತ್ತಾರೆ. ಇದು ಶೈವ ಧರ್ಮ. ಮತ್ತೆ ಅನೇಕರು ಆ ಭಗವಂತನನ್ನು ’ವಿಷ್ಣು’ ಎಂದು ಪೂಜಿಸುತ್ತಾರೆ. ಇವರದು ವೈಷ್ಣವ ಧರ್ಮ. ಈ ಎರಡು ಧರ್ಮಗಳೂ ನಮ್ಮ ದೇಶದಲ್ಲಿ ಬಹಳ ಹಿಂದಿನ ಕಾಲದಿಂದಲೂ ಜೊತೆಜೊತೆಯಾಗಿ ಬೆಳದುಕೊಂಡು ಬಂದಿವೆ. ಇವೆರಡು ಧರ್ಮಗಳೂ ಭಗವಂತನಲ್ಲಿ ಭಕ್ತಿ ಇಡಬೇಕೆಂದು ಉಪದೇಶಿಸುತ್ತವೆ. ಅನೇಕ ಜ್ಞಾನಿಗಳು ಮತ್ತು ಸಂತರು ನಮ್ಮ ದೇಶದಲ್ಲಿ ಹುಟ್ಟಿ ಈ ಭಕ್ತಿ ಮಾರ್ಗವನ್ನು ಅನುಸರಿಸಿ ಕೃತಾರ್ಥರಾಗಿದ್ದಾರೆ; ಇತರರಿಗೆ ಮಾರ್ಗದರ್ಶಕರಾಗಿದ್ದಾರೆ.

ದಕ್ಷಿಣ ಭಾರತದ ಮದರಾಸ್ ಪ್ರಾಂತದಲ್ಲಿ ಸುಮಾರು ಸಾವಿರದೈನೂರು ವರ್ಷಗಳ ಹಿಂದೆ ಇಂತಹ ಸಂತರು ಹಲವರಿದ್ದರು. ಆಳವಾದ ಶಿವಭಕ್ತಿಯಿಂದ ಬದುಕಿದ ಸಂತರು ’ನಾಯನಾರರು’ಗಳೆಂದು ವಿಖ್ಯಾತರಾಗಿದ್ದಾರೆ. ತಿರುನೀಲಕಂಠರು, ಮಾಣಿಕ್ಯ ವಾಚಕರು ತಿರುಜ್ಞಾನ ಸಂಬಂಧರು ಮೊದಲಾದ ಮಹಾತ್ಮರು ಶಿವರೂಪಿಯಾದ ಭಗವಂತನಲ್ಲಿ ತಮ್ಮ ನಿರತಿಶಯವಾದ ಪ್ರೇಮವನ್ನು ‌ತೋಡಿಕೊಂಡಿದ್ದಾರೆ. ಹಾಗೆಯೇ ವಿಷ್ಣು ಭಕ್ತಿಯನ್ನು ತೋರಿದ ಸಂತರು ’ಆಳ್ವಾರರು’ಗಳೆಂದು ಪ್ರಸಿದ್ಧರಾಗಿದ್ದಾರೆ. ಪೂದತ್ತಾಳ್ವಾರ್, ಪೊಯ್‌ಹೈಆಳ್ವಾರ್,ಪೇಯಾಳ್ವಾರ್ ಮೊದಲಾದ ಭಕ್ತೋತ್ತಮರು ನಾರಾಯಣರೂಪಿಯಾದ ಭಗವಂತನಲ್ಲಿ ಉತ್ಕಟವಾದ ಪ್ರೀತಿಯನ್ನು ಹೊಮ್ಮಿಸಿದ್ದಾರೆ. ಭಗವಂತನ ಲೀಲೆಯನ್ನು ಅನುಭವಿಸಿ ಅವನಿಗಾಗಿ ಕಾಡಿ ಬೇಡಿದ್ದಾರೆ. ಅವನನ್ನು ಕಾಣದೇ ಇರಲಾರೆವೆಂದು ನೊಂದಿದ್ದಾರೆ. ಅವನು ಕಾಣಿಸಿಕೊಂಡಾಗ ಸಂತೋಷಿಸಿ,ಅವನು ಮರೆಯಾದಾಗ ತೀವ್ರವಾದ ದುಃಖಕ್ಕೊಳಾಗಾಗಿದ್ದಾರೆ. ಅವನನ್ನೇ ಪಡೆಯಬೇಕೆಂಬ ಉತ್ಕಟವಾದ ಅಭಿಲಾಷೆಯನ್ನು ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.

ಆಳ್ವಾರರುಗಳು

ಆಳ್ವಾರರುಗಳು ಪರಮ ಭಕ್ತರು ’ಆಳ್ವಾರ್’ ಎಂಬ ಪದಕ್ಕೆ ’ಮುಳುಗುವವರು’ ಎಂದು ಅರ್ಥ ಯಾವುದರಲ್ಲಿ ಮುಳುಗುವವರು? ಭಗವಂತನ ಪ್ರೀತಿಯಲ್ಲಿ ಮುಳುಗುವವರು. ಭಗವಂತನ  ಮಂಗಳ ಗುಣಗಳ ಚಿಂತನೆಯಲ್ಲಿ ಮುಳುಗುವವರು. ಈ ಪದಕ್ಕೆ ’ಆಳುವವರು’ ಎಂದೂ ಅರ್ಥ ಆಗುತ್ತದೆ. ಯಾರನ್ನು ಆಳುವವರು? ತಮ್ಮ ದಯೆ ಮತ್ತು ಸೌಲಭ್ಯದಿಂದ ನಮ್ಮೆಲ್ಲರ ಮನಸ್ಸನ್ನೂ ಗೆದ್ದುಕೊಂಡು ನಮ್ಮನ್ನು ಆಳುವವರು. ಭಗವಂತನ ಮಹಿಮೆಯನ್ನು ಮನಗಂಡ ಇವರು ನಮಗೆಲ್ಲ ತಿಳಿಯುವಂತೆ ಆತನ ಹಿರಿಮೆಯನ್ನು ಹಾಡಿ ನಮ್ಮ ಹೃದಯವನ್ನು ಸೂರೆಗೊಂಡವರು.

ಆಳ್ವಾರರು ಮುಖ್ಯವಾಗಿ ಹತ್ತು ಮಂದಿ. ಪೂದತ್ತಾಳ್ವಾರ್, ಪೊಯ್ ಹೈಆಳ್ವಾರ್, ಪೇಯಾಳ್ವಾರ್ ತಿರುಮಳಿಶೈ ಆಳ್ವಾರ್, ತೊಂಡರಡೆಪ್ಪೊಡಿಯಾಳ್ವಾರ್, ಕುಲ ಶೇಖರಾಳ್ವಾರ್,ತಿರುಪ್ಪಾಣಾಳ್ವಾರ್ ತಿರುಮಂಗೈಯಾಳ್ವಾರ್,ಪೆರಿಯಾಳ್ವಾರ್ ಮತ್ತು ನಮ್ಮಾಳ್ವಾರ್ ಎಂಬುವರು ಇವರು. ಇವರ ಜೊತೆಗೆ ಆಂಡಾಳ್ ಮತ್ತು ಮಧುರಕವಿ ಯಾಳ್ವಾರ್ರವರೂ ಸೇರುತ್ತಾರೆ. ಆಳ್ವಾರುಗಳು ಒಟ್ಟು ಹನ್ನೆರಡು ಮಂದಿ. ಆಳ್ವಾರರುಗಳಲ್ಲಿ ಜಾತಿ ಕುಲಗಳ ಭೇದವಿಲ್ಲ. ಹೆಣ್ಣು ಗಂಡೆಂಬ ವ್ಯತ್ಯಾಸವಿಲ್ಲ. ಎಲ್ಲರೂ ಪರಮ ಪೂಜ್ಯರೇ ಆಗಿದ್ದಾರೆ. ತಿರುಪ್ಪಾಣಾಳ್ವಾರ್ ಹರಿಜನರು. ನಮ್ಮಾಳ್ವಾರ್ ವೇಳಾಳರು. ಕುಲಶೇಖರರು ಕ್ಷತ್ರಿಯರು. ತಿರುಮಂಗೈ ಆಳ್ವಾರ್ ಶೂದ್ರ ವರ್ಣದವರು. ಆಂಡಾಳ್ ಹೆಂಗಸು. ಪೆರಿಯಾಳ್ವಾರ್ ಬ್ರಾಹ್ಮಣರು. ಆದರೆ ಇವರೆಲ್ಲ ಶ್ರೇಷ್ಠ ಭಗವದ್ಭಕ್ತರು. ಇವರೆಲ್ಲರ ವಿಗ್ರಹಗಳನ್ನು ವೈಷ್ಣವ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿ ಇಂದಿಗೂ ಎಲ್ಲರೂ ಪೂಜಿಸುತ್ತಾರೆ.

ಆಳ್ವಾರರುಗಳಲ್ಲೆಲ್ಲ ಬಹಳ ಮುಖ್ಯವಾದವರು ನಮ್ಮಾಳ್ವಾ‌ರ್ರವರು ’ಮಾರನ್’ ಎಂಬುದು ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರು. ಜನರು ಇವರಲ್ಲಿ ತಮಗಿದ್ದ ಪ್ರೀತಿ, ಗೌರವ ಮತ್ತು ಆದರಗಳನ್ನು ತೋರಿಸಲು ’ನಮ್ಮ ಆಳ್ವಾರರು’ ಎಂದು ಕರೆದರು. ಇವರು ಕಲಿಯುಗದ ಆದಿಯಲ್ಲಿದ್ದರೆಂದು ಭಕ್ತರ ನಂಬಿಕೆ.

ಸಜ್ಜನರಾದ ತಂದೆ ತಾಯಿ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ತಿರುನಹರಿ ಎಂಬ ಊರು ಇವರ ಜನ್ಮಸ್ಥಳ. ಆ ಊರು ತಾಮ್ರಪರ್ಣೀ ನದಿಯ ದಡದಲ್ಲಿದೆ. ಹಿಂದೆ ಆ ಊರು ಬಹಳ ಚೆನ್ನಾಗಿತ್ತು. ಊರಿನ ಸುತ್ತಲೂ ಹಚ್ಚನೆಯ ಮರದ ತೋಪುಗಳು, ತೂಗಿ ತೊನೆಯುವ ಭತ್ತದ ಗದ್ದೆಗಳೂ, ಅರಳಿದ ತಾವರೆಗಳಿಂದ ಶೋಭಿದುವ ಪುಷ್ಕರಣಿಗಳು, ಫಲಭರಿತವಾದ ತೆಂಗು ಮತ್ತು ಅಡಕೆಯ ತೋಟಗಳು, ಸುಗಂಧವನ್ನು ಹರಡುವ ಹೂದೋಟಗಳು ಇವುಗಳಿಂದ ಸಮೃದ್ಧವಾಗಿತ್ತು. ಎದ್ದು ಕಾಣುವ ಭವ್ಯವಾದ ಗೋಪುರಗಳುಳ್ಳ ಅನೇಕ ದೇವ ಮಂದಿರಗಳು ಆ ಕ್ಷೇತ್ರದ ಸುತ್ತಲೂ ಇಂದಿಗೂ ಮೆರೆದಿವೆ. ಆ ಊರಿನಲ್ಲಿ ವೇಳಾಳ ವರ್ಣಕ್ಕೆ ಸೇರಿದ ಕಾರಿಯಾರ್ ಎಂಬ ಮಹಾನುಭಾವರಿದ್ದರು. ಅವರು ಅನುಪಮ ಭಗವದ್ಭಕ್ತರಾಗಿದ್ದರು. ಅವರ ಪ ಉಡೈಯನಂಗೈಯಾರ್ ಎಂಬುವವರು. ಅವರಿಗೂ ದೇವರಲ್ಲಿ ತುಂಬಾ ಭಕ್ತಿ. ಪರಿಶುದ್ಧವಾದ ಸಾತ್ವಿಕ ಜೀವನ ಅವರದು. ಒಮ್ಮೆ ಕಾರಿಯಾರ್ ತಮ್ಮ ಪತ್ನಿಯೊಡನೆ ತಿರುಕ್ಕುರುಂಗುಡಿ ಎಂಬ ಕ್ಷೇತ್ರಕ್ಕೆ ಹೋಗಿ ದೇವರ ಸೇವೆ ಮಾಡಿದರು. ’ನಮಗೆ ಒಳ್ಳೆಯ ಪುತ್ರ ಸಂತಾನವನ್ನು ಅನುಗ್ರಹಿಸು’ ಎಂದು ದೇವರಲ್ಲಿ ಬೇಡಿಕೊಂಡರು. ಅವರ ಪ್ರಾರ್ಥನೆ ದೇವರ ದಯೆಯಿಂದ ಸಫಲವಾಯಿತು.

ಎಂಥ ವಿಚಿತ್ರ ಮಗು!

ಅವರ ಭಕ್ತಿಯ ಫಲವೋ ಎಂಬಂತೆ ಅವರಿಗೆ ಒಂದು ಗಂಡು ಮಗು ಹುಟ್ಟಿತು. ಆ ಮಗು ಹುಟ್ಟುವಾಗಲೇ ದಿವ್ಯಜ್ಞಾನದಿಂದ ಕೂಡಿತ್ತೆಂದು ಹೇಳುತ್ತಾರೆ. ಭಕ್ತರು ಈ ಮಗು ಹುಟ್ಟಿದಾಗ ಅಳಲಿಲ್ಲ. ಕಣ್ಣು ತೆರೆಯಲಿಲ್ಲ ತಾಯಿಯ ಹಾಲು ಕುಡಿಯಲಿಲ್ಲ. ’ಶಠಂಬ ವಾಯು ಮಗುವನ್ನು ಆಕ್ರಮಿಸಲು ಬಂದಾಗ ಮಗು ಅದನ್ನು ಹುಂಕಾರ ಮಾತ್ರದಿಂದ ಗೆದ್ದಿತು ಎಂದು ನಂಬುತ್ತಾರೆ. ನಮ್ಮಾಳ್ವಾರರಿಗೆ ’ಶಠಜಿತ್’ ಎಂದು ಹೆಸರು ಬಂದದ್ದು ’ಶಠ’ ಎಂಬ ವಾಯುವನ್ನು ಗೆದ್ದುದರಿಂದ ಎಂದೂ ಹೇಳುತ್ತಾರೆ.

ಮಗು ದಿವ್ಯ ತೇಜಸ್ಸಿನಿಂದ ಬೆಳಗುತ್ತಿತ್ತಂತೆ. ನೆರೆಹೊರೆಯವರೆಲ್ಲರೂ ಬಂದು ಮಗುವನ್ನು ನೋಡಿಕೊಂದು ಹೋಗುತ್ತಿದ್ದರು. ’ಈ ಶಿಶು ಲೋಕದ ಶಿಶುವಿನಂತೆ ಅಲ್ಲ. ಇದರ ರೀತಿ ವಿಲಕ್ಷಣವಾಗಿದೆ. ಇದು ಒಂದು ಅತಿಶಯವೇ ಸರಿ! ಈ ಶಿಶು ಅವತಾರ ಪುರುಷನೇ ಆಗಿರಬೇಕು’ ಎಂದು ಅವರು ಭಾವಿಸಿದರು.

ಈ ಅತಿಶಯವನ್ನು ಕಂಡ ತಂದೆ ತಾಯಿಗಳು ಬೆರಗಾದರು. ಆದರೂ ಸ್ವಲ್ಪವೂ ಖಿನ್ನರಾಗದೆ ದೇವರ ಮೇಲೆ ಭಾರಹಾಕಿ ಮಗುವನ್ನು ನೋಡಿಕೊಳ್ಳುತ್ತಿದ್ದರು.

ನಮ್ಮಳ್ವಾರರ ಶೈಶವ, ಬಾಲ್ಯಗಳು ವಿಚಿತ್ರವಾಗಿ ಕಳೆದವು ಎಂದು ಭಕ್ತರು ಹೇಳುತ್ತಾರೆ.

ಮಗುವಿಗೆ ಹನ್ನೆರಡು ದಿನಗಳಾದವು. ಆದರೆ ಅದರ ವ್ಯವಹಾರದಲ್ಲಿ ಯಾವ ಬದಲಾವಣೆಯೂ ಕಂಡು ಬರಲಿಲ್ಲ. ತಮ್ಮ ಮನೆಯ ಪದ್ಧತಿಯಂತೆ ಕಾರಿಯಾರ್ ಮತ್ತು ಉಡೈಯನಂಗೈಯಾರ್ ಅವರು ತಮ್ಮ ಪುತ್ರನನ್ನು ಆ ತಿರುನಗರಿಯಲ್ಲಿದ್ದ ’ಆದಿಪ್ಪಿರಾನ್’ ಸ್ವಾಮಿಯ ಗುಡಿಗೆ ತೆಗೆದುಕೊಂಡು ಹೋದಾಗ ಮಗು ಎರಡು ಕಣ್ಗಳನ್ನು ತರೆದು ದೇವರ ಸಂದರ್ಶನವನ್ನು ಮಾಡಿತು. ಏನಾಶ್ಚರ್ಯ! ಮತ್ತೆ ಕಣ್ಗಳನ್ನು ಮುಚ್ಚಿಕೊಂಡು ಬಿಟ್ಟಿತು! ದೇವರನ್ನು ಬಿಟ್ಟು ಮತ್ತೇನನ್ನೂ ತಾನು ತನ್ನ ಕಣ್ಣಿನಿಂದ ನೋಡುವುದಿಲ್ಲ ವೆಂಬುದನ್ನು ಅದು ಸೂಚಿಸುವಂತಿತ್ತು. ತಾಯಿತಂದೆಯರು ಮಗುವಿಗೆ ’ಮಾರನ್’ ಎಂದು ನಾಮಕರಣ ಮಾಡಿದರು. ’ಲೋಕ ರೀತಿಗೆ ವಿರುದ್ಧವಾಗಿರುವವನು’ ಎಂಬ ಅರ್ಥವನ್ನು ಆ ಹೆಸರು ಸೂಚಿಸುತ್ತದೆ.

ದೇವಾಲಯದ ಬಳಿ

ಮುಂದೆ ಏನು ಮಾಡುವುದೆಂದು ಗೊತ್ತಾಗಲಿಲ್ಲ ಆ ತಾಯಿ ತಂದೆಗಳಿಗೆ. ಭಗವಂತನ ಕೃಪೆಗೆ ಪಾತ್ರನಾದ ಈ ಶಿಶುವನ್ನು ದೇವಮಂದಿರದ ಬಳಿಯೇ ಬೆಳೆಸೋಣ ಎಂಬ ಬುದ್ಧಿ ಅವರಿಗುಂಟಾಯಿತು. ಆ ದೇವಾಲಯದ ಸಮೀಪದಲ್ಲಿದ್ದ ಒಂದು ಹುಣಸೆ ಮರದ ಕೆಳಗೆ ಚಿನ್ನದ ತೊಟ್ಟಿಲನ್ನು ಕಟ್ಟಿ ಮಗುವನ್ನು ಅದರಲ್ಲಿ ಮಲಗಿಸಿದರು.

ಹೀಗೆಯೇ ತಿಂಗಳುಗಳುರುಳಿದವು. ಮಗು ಹಾಗೆಯೇ ಕಣ್ಮುಚ್ಚಿರುತ್ತಿತ್ತು. ಆಹಾರವನ್ನಾಗಲೀ, ನೀರನ್ನಾಗಲೀ ಅದು ಸೇವಿಸಲಿಲ್ಲ. ಆದರೂ ಶುಕ್ಲ ಪಕ್ಷದ ಚಂದ್ರನಂತೆ ದಿನೇದಿನೇ ಮಗು ಬೆಳೆಯುತ್ತಿತ್ತು. ತಂದೆ ತಾಯಿಗಳು ಅದನ್ನು ಅಲ್ಲಿಯೇ ಬಿಟ್ಟು ತಮ್ಮ ಮನೆಗೆ ತೆರಳಿದರು. ಮಗು ಬೆಳೆಯಿತು. ಅಂಬಗಾಲಿಟ್ಟಿತು. ತಾನು ಒಂದು ಹುಣಸೆ ಮರದ ಪೊಟರೆಯಲ್ಲಿ ಕುಳಿತುಬಿಟ್ಟಿತು. ಸದಾ ಕಣ್ಮುಚ್ಚಿ ಧ್ಯಾನಾಸಕ್ತವಾಗಿರುತ್ತಿತ್ತು. ಮಗು ಬೆಳೆದು ಬಾಲಕನಾಯಿತು.

ಹೀಗೆ ಮಾರನ್ ಗೆ ಹದಿನಾರು ವರ್ಷಗಳು ತುಂಬಿದವು. ಮಾರನ್ ತೇಜಸ್ಸಿನಿಂದ ಬೆಳಬೆಳಗುತ್ತಾ ಪದ್ಮಾಸನದಲ್ಲಿ ಕುಳಿತು ಭಗವಂತನ ಧ್ಯಾನದಲ್ಲಿ ಮೈಮರೆತು ಮುಚ್ಚಿದ ಕಣ್ಣುಳ್ಳವರಾಗಿ ಜ್ಞಾನಮುದ್ರಾನ್ವಿತರಾಗಿರುತ್ತಿದ್ದರು. ಹೀಗಿದ್ದ ಈ ಮಹಾನುಭಾವರನ್ನು ಕಣ್ದೆರೆಯುವಂತೆ ಮಾಡಿ ಅವರನ್ನು ಮಾತನಾಡಿಸಿ ಅವರಿಂದ ಉಪದೇಶವನ್ನು ಪಡೆಯುವ ಭಾಗ್ಯ ಮಧುರ ಕವಿಗಳು ಎಂಬ ಭಕ್ತೋತ್ತಮರಿಗೆ ಲಭಿಸಿತು ಎಂದು ಹೇಳುತ್ತಾರೆ.

ಯಾವುದೀ ಪ್ರಭೆ?

ಮಧುರ ಕವಿಗಳು ತಿರುಕ್ಕೋಳೂರು ಎಂಬ ಊರಿನವರು. ಈ ಊರು ಕುರುಹೂರಿಗೆ ಸಮೀಪದಲ್ಲಿದೆ. ಮಧುರಕವಿಗಳು ಎಂಬ ಹೆಸರು ಇವರಿಗೆ ಅನ್ವರ್ಥವಾಗಿತ್ತು ಕಿವಿಗೆ ಇಂಪಾಗಿರುವಂತೆ ಹಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇವರು ಸಾಮವೇದವನ್ನು ಅಧ್ಯಯನ ಮಾಡಿದರು. ವಿಷ್ಣುಭಕ್ತಿಯನ್ನೂ ಯೋಗನಿಷ್ಠೆಯನ್ನೂ ಹೊಂದಿದ್ದರು.

ಮಹಾ ವಿರಕ್ತರಾದ ಇವರು ತೀರ್ಥಯಾತ್ರೆಗೆ ಹೊರಟರು. ಒಂದೊಂದು ಕ್ಷೇತ್ರಕ್ಕೂ ಹೋಗಿ ದೇವರ ಸಂದರ್ಶನ ಮಾಡುತ್ತಿದ್ದರು. ಶಾಸ್ತ್ರಗಳನ್ನು ಓದಿ ಬಹುದೊಡ್ಡ ವಿದ್ವಾಂಸರಾಗಿದ್ದರೂ ಅವರಿಗೆ ಇನ್ನೂ ಮನಸ್ಸಿಗೆ ಶಾಂತಿ, ಸಮಾಧಾನಗಳು ದೊರೆತಿರಲಿಲ್ಲ. ಸದ್ಗುರುವನ್ನು ಹುಡುಕುತ್ತಿದ್ದರು. ಒಮ್ಮೆ ಉತ್ತರದೇಶದಲ್ಲಿರುವ ಅಯೋಧ್ಯೆಗೆ ಬಂದರು. ಒಂದು ದಿನ ರಾತ್ರಿ ಮಧುರ ಕವಿಗಳಿಗೆ ತಮ್ಮ ಊರಿನ ದೇವರಿಗೆ ಕೈ ಮುಗಿಯಬೇಕೆಂದು ಮನಸ್ಸಾಯಿತು. ಅದಕ್ಕಾಗಿ ಬಿಡಾರದಿಂದ ಹೊರಗೆ ಬಂದು ದಕ್ಷಿಣ ದಿಕ್ಕಿನ ಕಡೆ ತಿರುಗಿಕೊಂಡು ಆ ದಿಕ್ಕನ್ನೆ ನೋಡುತ್ತಾ. ಕೈಮುಗಿದು ನಿಂತರು. ಆಗ ಒಂದು ಆಶ್ಚರ್ಯವನ್ನೇ ಅವರು ಕಂಡರು. ಆ ದಕ್ಷಿಣದಿಕ್ಕಿನಲ್ಲಿ ಭೂಮ್ಯಾಕಾಶಗಳನ್ನು ಹೊಂದಿ ಕೊಂಡಂತೆ ಅಪ್ರತಿಮವಾದ ಒಂದು ದಿವ್ಯ ತೇಜಸ್ಸು ಗೋಚರಿಸಿತು. ಅದೇನೆಂದು ಅವರಿಗೆ ಗೊತ್ತಾಗಲಿಲ್ಲ. ’ಇದೇನು ಕಾಡುಗಿಚ್ಚೋ?’ ಎಂದು ಚಿಂತಿಸಿದರು. ಮಾರನೆಯ ದಿನ ರಾತ್ರಿ ನೋಡಿದರೆ ಮತ್ತೆ ಆ ಜ್ಯೋತಿ ಹಾಗೆಯೇ ಕಾಣುತ್ತಿದೆ! ಹೀಗೆ ಐದಾರು ದಿನಗಳೂ ಅದು ಗೋಚರಿಸಿದಾಗ ಅದನ್ನು ತಿಳಿಯಬೇಕೆಂದು ಆಸೆಯಾಯಿತು.

ಮಧುರಕವಿಗಳು ತಮ್ಮ ತೀರ್ಥಯಾತ್ರೆಯನ್ನು ಅಲ್ಲಿಗೇ ನಿಲ್ಲಿಸಿ ಆ ಜ್ಯೋತಿಯನ್ನೇ ಅನುಸರಿಸುತ್ತಾ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಪ್ರಯಾಣ ಬೆಳೆಸಿದರು. ಪ್ರತಿ ದಿನವೂ ರಾತ್ರಿ ಆ ಜ್ಯೋತಿಯನ್ನೇ ನೋಡುತ್ತಾ ಅದರ ದಿಕ್ಕಿನಲ್ಲಿಯೇ ನಡೆದು ಬಂದರು. ಹೀಗೆ ಅವರು ತಿರುನರಹರಿ ಊರನ್ನು ತಲುಪಿದರು. ಮಾರನೆಯ ದಿನ ಅಲ್ಲಿಂದ ಮುಂದೆ ಹೋದರು. ಅಂದು ರಾತ್ರಿ ದಕ್ಷಿಣದಿಕ್ಕಿನಲ್ಲಿ ನೋಡಿದಾಗ ಆ ಜ್ಯೋತಿ ಕಾಣಲೇ ಇಲ್ಲ! ಹಿಂತಿರುಗಿ ನೋಡಿದರೆ ಗೋಚರಿಸುತ್ತಿದೆ! ಆಗ ಅವರು ಆ ಜ್ಯೋತಿ ತಿರುನಹರಿ ಊರಿನದೆ ಎಂದು ಊಹಿಸಿದರು. ಮತ್ತೆ ತಿರುನರಹರಿ ಊರಿಗೆ ಬಂದರು.

’ಈ ಊರಿನಲ್ಲಿ ಏನಾದರೂ ವಿಶೇಷವಿದೆಯೇ?’ ಎಂದು ಆ ಊರಿನವರನ್ನು ಕೇಳಿದರು. ’ವಿಶೇಷವೇ? ಏನೂ ಇಲ್ಲವಲ್ಲಾ’ ಎಂದೇ ಎಲ್ಲರೂ ಹೇಳಿದರು ಮಾರನ್ ಅನ್ನಹಾರಗಳಿಲ್ಲದೆ ಹುಣಸೆಯ ಮರದಡಿಯಲ್ಲಿ ಧ್ಯಾನದಲ್ಲಿ ಕುಳಿತಿದ್ದುದು ಅವರಿಗೆ ಅಂಥ ವಿಶೇಷ ಏನೂ ಆಗಿರಲಿಲ್ಲ. ಅದನ್ನು ಅವರು ಮರೆತೂ ಬಿಟ್ಟಿದ್ದರು.

ಮಧುರಕವಿ ಸಿಕ್ಕಿದವರನ್ನೆಲ್ಲಾ ಹೀಗೆಯೇ ಕೇಳುತ್ತಾ ಬಂದರು. ಆಗ ಒಬ್ಬ ವೃದ್ಧರು ಹೇಳಿದರು, ’ಒಂದು ವಿಶೇಷ ಈ ಊರಿನಲ್ಲಿದೆ. ಈಗ ಹದಿನಾರು ವರ್ಷದ ಹಿಂದೆ ಹುಟ್ಟಿದ ಮಗುವೊಂದು ದೇವಮಂದಿರದ ಹುಣಸೆಮರದ ಅಡಿಯಲ್ಲಿ ಅನ್ನಾಹಾರಗಳಿಲ್ಲದೆ ಕಣ್ಮುಚ್ಚಿ ಕುಳಿತಿದೆ. ಅದು ಮಾತನ್ನೇ ಆಡಿಲ್ಲ. ಆದರೆ ತೆಜಸ್ಸಿನಿಂದ ಬೆಳಗುತ್ತಿದೆ’

ಮಧುರಕವಿಗಳು ’ನನಗೆ ದಯವಿಟ್ಟು ಅವರನ್ನು ತೋರಿಸಿ’ ಎಂದು ಕೇಳಿಕೊಂಡರು. ಆ ವೃದ್ಧರು ಮಧುರ ಕವಿಗಳನ್ನು ಮಾರನ್ ಬಳಿ ಕರೆದುಕೊಂಡು ಹೋದರು.

ಇವರೇ ಗುರು

ಅಪೂರ್ವವಾದ ತೇಜಸ್ಸಿನಿಂದ ಕೂಡಿ ಮಾರನ್ ಧ್ಯಾನದಲ್ಲಿರುವುದನ್ನು ಮಧುರಕವಿ ಕಂಡು ಬೆರಗಾದರು. ತಮಗೆ ಕಂಡು ಬಂದ ಜ್ಯೋತಿ ಈ ಮಹಾಪುರುಷನದೇ ಇರಬೇಕು ಎಂದು ಊಹಿಸಿದರವರು. ಆಗ ಅವರಿಗೆ ಏನು ತೋರಿತೋ ಒಂದು ಕಲ್ಲನ್ನು ಮಾರನ್ ಮುಂದೆ ’ದೊಪ್’ ಎಂದು ಹಾಕಿದರು. ಆ ಶಬ್ದ ಕೇಳಿ ಮಾರನ್ ತಮ್ಮ ಕಣ್ಣುಗಳನ್ನು ತೆರೆದರು. ಅವರ ಕಟಾಕ್ಷಕ್ಕೆ ಮಧುರಕವಿ ಪಾತ್ರರಾದರು.

ಮಾರನ್ ಗೆ ಚೈತನ್ಯವಿದೆ ಎಂಬುದನ್ನು ಮಧುರಕವಿ ತಿಳಿದರು. ಅವರಿಗೆ ಮಾತು ಬರುವುದೋ ಇಲ್ಲವೋ ಎಂಬುದನ್ನು ತಿಳಿಯಲು ಮಧುರಕವಿ ಒಂದು ಪ್ರಶ್ನೆಯನ್ನು ಕೇಳಿದರು. ’ಸತ್ತುದರ ಹೊಟ್ಟೆಯಲ್ಲಿ ಚಿಕ್ಕದು ಹುಟ್ಟಿದರೆ ಏನನ್ನು ತಿನ್ನುತ್ತಾ ಎಲ್ಲಿ ಇರುತ್ತದೆ? ಅಚೇತನವಾದ ಶರೀರದಲ್ಲಿ ಅಣುಪರಿಮಾಣನಾದ ಆತ್ಮನು ಇರಬೇಕಾದರೆ ಆ ಆತ್ಮನು ಏನನ್ನು ಅನುಭವಿಸಿಕೊಂಡು ಎಲ್ಲಿ ಇರುವುದು?’ ಎಂದು ಈ ಪ್ರಶ್ನೆಯ ಅರ್ಥ. ಇದಕ್ಕೆ ಮಾರನ್ ತಕ್ಷಣ ಉತ್ತರಕೊಟ್ಟರು. ’ಅದನ್ನೇ ತಿಂದು ಕೊಂಡು ಅಲ್ಲೇ ಇರುತ್ತೆ.’ ಎಂದರೆ ಆ ಶರೀರದಿಂದ ಉಂಟಾದ ಸುಖದುಃಖಗಳನ್ನು ಅನುಭವಿಸಿಕೊಂಡು ಆತ್ಮನು ಅದನ್ನೇ ಆಶ್ರಯಿಸಿರುತ್ತಾನೆ’.

’ಜೀವಿಗೆ ಜ್ಞಾನ ವಿಕಾಸವಾದಾಗ ಏನನ್ನು ಅನುಭವಿಸುವುದು ಅದು?’ ಎಂದು ಮಧುರಕವಿ ಕೇಳಿದರು. ಮಾರನ್ ’ಭಗವಂತನನ್ನೇ ಅನುಭವಿಸುತ್ತಿದ್ದು ಆ ಭಗವಂತನನ್ನೇ ಸೇರುತ್ತದೆ’ ಎಂದು ಉತ್ತರಿಸಿದರು. ಈ ಉತ್ತರದಿಂದ ಮಧುರಕವಿಗಳಿಗೆ ಬಹಳ ಆನಂದವಾಯಿತು. ಮಾರನ್ ದೈವಾಂಶಪುರುಷರೆಂದೂ ಜನ್ಮತಃ ಯೋಗಿಗಳೆಂದೂ ಅವರು ಅರಿತರು. ಮಾರನ್ ಅವರಿಗಿಂತ ವಯಸ್ಸಿನಲ್ಲಿ ಮಧುರಕವಿಗಳು ದೊಡ್ಡವರು. ಹಿರಿಯ ವಿದ್ವಾಂಸರು. ಆದರೂ ಕೂಡಲೇ ಅವರು ಮಾರನ್ ಅವರ ಪಾದಗಳಿಗೆರಗಿದರು. ಮತ್ತು ಬೇಡಿದರು, ’ನಾನು ತಮ್ಮನ್ನೇ ಆಶ್ರಯಿಸಿದ್ದೇನೆ. ನನಗೆ ತತ್ವೋಪದೇಶ ಮಾಡಿ ಉದ್ಧಾರ ಮಾಡಬೇಕು’ ಎಂದು. ಅದುವರೆಗೆ ಏಕಾಂತದಲ್ಲಿದ್ದ ಮಾರನ್ ಅಂದು ಮಧುರಕವಿಗಳನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದರು.

ಪ್ರಬಂಧಗಳು

ಆ ಗುರು ಶಿಷ್ಯರ ಸಮಾಗಮ ಮಂಗಳಕರವಾಯಿತು. ಆಗ ಭಗವಂತನೂ ಸಹ ಆಳ್ವಾರ್ರವರ ದಿವ್ಯದೃಷ್ಟಿಗೆ ಗೋಚರವಾದನು. ಅದರಿಂದ ಅತ್ಯಂತ ಸಂತೋಷಗೊಂಡ ನಮ್ಮಳ್ವಾರವರು ಆನಂದ ಬಾಷ್ಪಗಳನ್ನು ಸುರಿಸುತ್ತಾ ಭಗವಂತನನ್ನು ಸ್ತುತಿಸಿದರು ಎಂದು ಹೇಳುತ್ತಾರೆ. ರೋಮಾಂಚನಗೊಂಡ ಆಳ್ವಾರ್ರವರು ಭಗವಂತನನ್ನು ಸಾಕ್ಷಾತ್ಕರಿಸಿ ಆ ಆನಂದವು ಉಕ್ಕಿಹರಿಯಲು ಭಗವಂತನ ಮಹಿಮೆಯನ್ನು ಕೊಂಡಾಡಿದರು. ವೇದಗಳಲ್ಲಿ ಉಪದೇಶಿಸಿರುವ ತತ್ವಗಳನ್ನೆಲ್ಲಾ ಸಾಕ್ಷಾತ್ಕರಿಸಿಕೊಂಡ ನಮ್ಮಾಳ್ವಾರ್ರವರು ಅವುಗಳನ್ನೆಲ್ಲಾ ತಮಿಳು ಭಾಷೆಯಲ್ಲಿ ಪದ್ಯಗಳ ಮೂಲಕ ಮಧುರಕವಿಗಳಿಗೆ ಉಪದೇಶಿಸಿದರು. ಮಾರನ್ ಅಂದಿನಿಂದ ’ನಮ್ಮಾಳ್ವಾರ್’ ಆದರು.

ನಮ್ಮಾಳ್ವಾರ್ರವರು ರಚಿಸಿರುವ ಕೃತಿಗಳು ತಮಿಳು ಭಾಷೆಯಲ್ಲಿವೆ. ಈ ಕೃತಿಗಳಿಗೆ ತಮಿಳಿನಲ್ಲಿ ’ಪ್ರಬಂಧ’ ಎಂದು ಹೆಸರು. ’ತಿರುವಿರುತ್ತಂ’, ’ತಿರುವಾಶಿರಿಯಂ’, ’ಪೆರೆಯತಿರುವಂದಾದಿ’ ಮತ್ತು ’ತಿರುವಾಯ್ಮೂಳಿ’ ಎಂಬುವು ಆ ನಾಲ್ಕು ಪ್ರಬಂಧಗಳ ಹೆಸರುಗಳು, ಇವುಗಳನ್ನು ನಮ್ಮಾಳ್ವಾರ್ ಹಾಡಿದಂತೆ ಮಧುರಕವಿಗಳು ತಾಳೆಯ ಗರಿಯ ಮೇಲೆ ಬರೆದುಕೊಂಡರಂತೆ. ಇವುಗಳ ಒಟ್ಟು ಪದ್ಯಸಂಖ್ಯೆ ೧೧೯೬ ಆಗುತ್ತದೆ. ಈ ಪ್ರಬಂಧಗಳನ್ನು ಭಕ್ತರು ’ತಮಿಳು ವೇದ” ಎಂದೇ ಗೌರವಿಸುತ್ತಾರೆ.

ಭಗವಂತನ ಕರುಣೆ

ನಮ್ಮಾಳ್ವಾರ್ರವರಿಗೆ ಭಗವಂತನಲ್ಲಿ ಅಪಾರವಾದ ಪ್ರೀತಿ. ಲೋಕದ ಜನರನ್ನು ರಕ್ಷಿಸುವುದಕ್ಕಾಗಿ ಪರಮಾತ್ಮನು ಅನೇಕ ಅವತಾರಗಳನ್ನು ಮಾಡಿದನಷ್ಟೆ? ಇವುಗಳನ್ನೆಲ್ಲಾ ನೆನೆದುಕೊಂಡು ಆಳ್ವಾರ್ರವರು ತಮ್ಮನ್ನೇ ತಾವು ಮರೆಯುತ್ತಾರೆ. ’ಎಲ್ಲರಿಗೂ ಪ್ರಭುವಾದ ಆ ದೇವದೇವ ಬಹಳ ದಯೆಯಿಂದ ಕೂಡಿದವನಾಗಿ, ಎಲ್ಲರೂ ತನ್ನನ್ನು ಕಂಡು ಆಶ್ರಯಿಸಲಿ ಎಂದು ಎಷ್ಟು ವಿಧವಾಗಿ ಅವತರಿಸಿದಲ್ಲಾ! ಒಮ್ಮೆ ಮೀನಾಗಿ ಬಂದು ಕಳೆದು ಹೋಗಿದ್ದ ವೇದಗಳನ್ನು ಹುಡುಕಿ ತಂದುಕೊಟ್ಟ. ಮತ್ತೊಮ್ಮೆ ಅಮೃತಕ್ಕಾಗಿ ಕ್ಷೀರ ಸಮುದ್ರವನ್ನು ಕಡೆಯುತ್ತಿದ್ದಾಗ ಆಮೆಯ ರೂಪದಲ್ಲಿ ಬಂದು ಆ ಮಂದರ ಪರ್ವತವನ್ನು ತನ್ನ ಬೆನ್ನ ಮೇಲೆ ಹೊತ್ತುನಿಂತ. ಭೂಮಿಯ ನೀರಿನಲ್ಲಿ ಮುಳುಗಿ ಹೋಗುತ್ತಿದ್ದಾಗ ಸುಂದರ ವರಾಹನಾಗಿ ಅವತರಿಸಿ ಅದನ್ನು ತನ್ನ ಕೋರೆಹಲ್ಲಿನ ಮೇಲೆ ಇಟ್ಟುಕೊಂಡು ಕಾಪಾಡಿದ. ತ್ರಿವಿಕ್ರಮನಾಗಿ ಮೂರು ಲೋಕಗಳನ್ನು ತನ್ನ ಪಾದಗಳಿಂದ ಅಳೆದ. ದೇವಶತ್ರುವಾದ ಹಿರಣ್ಯಕಶಿಪುವನ್ನು ವಧಿಸಿದ ನರಸಿಂಹನಾಗಿ. ಸುತ್ತಲೂ ಅಗಾಧವಾದ ಸಮುದ್ರವನ್ನು ಹೊಂದಿದ್ದ ಆ ಲಂಕೆಗೆ ಅಧಿಪತಿಯಾದ ರಾವಣನ ಭುಜಗಳನ್ನೂ, ಶಿರಸ್ಸುಗಳನ್ನೂ ರಾಮನಾಗಿ ಅವತರಿಸಿ ಛೇದಿಸಿದ. ಕೃಷ್ಣನಾಗಿ ಅವತರಿಸಿ ಗೊಲ್ಲಗೊಲ್ಲತಿಯರೊಡನೆ ಚೆಲ್ಲಾಟವಾಡಿದ. ಇಂಥ ಪರಮ ಕರುಣಾಳುವಾದ ದೇವನನ್ನು ಸೇವಿಸಿ ಉದ್ಧಾರ ಹೊಂದಿ’ ಎಂದು ಆಮ್ಮಾಳ್ವಾರ್ರವರು ಲೋಕಕ್ಕೆ ಹಿತವನ್ನು ತಿಳಿಸಿ ಕೊಟ್ಟಿದ್ದಾರೆ.

ಕೃಷ್ಣಾವತಾರ

ನಮ್ಮಾಳ್ವಾರ್ರವರಿಗೆ ಎಲ್ಲ ಅವತಾರಗಳಿಗಿಂತಲೂ ಕೃಷ್ಣವತಾರವೆಂದರೆ ಪ್ರಾಣ. ’ಸೃಷ್ಟಿಕಾಲದಲ್ಲಿ ಲೋಕಗಳನ್ನೆಲ್ಲಾ ಸೃಷ್ಟಿಮಾಡಿ, ಅದರಲ್ಲಿ ತಾನೂ ಪ್ರವೇಶಿಸಿ ಎಲ್ಲರನ್ನೂ ರಕ್ಷಿಸುವ ಆ ಸರ್ವಲೋಕಪ್ರಭು ಹುಲು ಮನುಷ್ಯರ ಶರೀರವನ್ನು ಹೊಂದಿ ಅವತಾರ ಮಾಡಿದನಲ್ಲಾ! ಇದು

ಎಂಥ ಸೌಶೀಲ್ಯ ಅವನದು! ಎಂದು ಅವರು ಬೆರಗಾಗಿದ್ದಾರೆ.

ಶ್ರೀ ಕೃಷ್ಣನ ಬಾಲಲೀಲೆಗಳನ್ನು ಕ್ಷಣಕ್ಷಣಕ್ಕೂ ಆಮ್ಮಳ್ವಾರ್ರವರು ನೆನೆಯುತ್ತಾರೆ. ಶ್ರೀ ಕೃಷ್ಣ ತನ್ನ ಸೌಲಭ್ಯದ ಕಾರಣ ಗೊಲ್ಲಹಟ್ಟಿಯಲ್ಲಿ ಗೋಪಗೋಪಿಯರ ಜತೆ ಬೆಳೆದ. ಗೊಲ್ಲರು, ಗೊಲ್ಲತಿಯರು, ಗೋವುಗಳು ಇವರೆಲ್ಲರ ಪ್ರೀತಿಯನ್ನು ಕಸಿದುಕೊಂಡು. ಗೋಪಕುಲದ ಚಿಗುರಿನಂತೆ ಮೆರೆದ. ಏನು ಅರಿಯದ ಹಸುಳೆಯಂತೆ ಚೆಲ್ಲಾಟವಾಡಿ ಅವರೆಲ್ಲರಿಂದ ಏಟುಗಳನ್ನು ತಿಂದ. ಗೋವರ್ಧನವನ್ನೆತ್ತಿ ಗೋಕುಲವನ್ನೂ ಪಶುಗಳನ್ನೂ ಗೋಪಗೋಪಿಯರನ್ನೂ ಕಲ್ಲುಮಳೆಯಿಂದ ಕಾಪಾಡಿದ! ಗೋಕುಲದ ಬಾಲಕ ಬಾಲಕರೊಂದಿಗೆ ಆಟವಾಡಿ ಕೈಹಿಡಿದು ನೃತ್ಯ ಮಾಡಿದೆ. ಮುಂದೆ ಭಾರತ ಸಂಗ್ರಾಮದಲ್ಲಿ ಅರ್ಜುನನ ತೇರನ್ನು ನಡೆಸುವ ಪಾರ್ಥಸಾರಥಿಯಾದ. ತನ್ನನ್ನು ಆಶ್ರಯಿಸಿದ ಆ ಪಂಚ ಪಾಂಡವರನ್ನು ಬಾಳಿಸಿದ. ತನ್ನ ವಿರೋಧಿಗಳನ್ನು ಅಳಿಸಿದ. ತನ್ನ ಆಶ್ರಿತರನ್ನು ರಕ್ಷಿಸಲು ಹಗಲನ್ನು ರಾತ್ರಿಯನ್ನಾಗಿಸಿದ. ಆಯುಧವಾಗದ ಕೇವಲ ಕುದುರೆ ಚಾಟಿಯನ್ನೇ ಕೈಲಿ ಹಿಡಿದುಕೊಂಡು ಹದಿನೆಂಟು ಅಕ್ಷೋಹಿಣೀ ಸೇನೆಯನ್ನೂ ಆ ಕುರುಭೂಮಿಯಲ್ಲಿ ನಾಶಪಡಿಸಿದ! ಆಶ್ಚರ್ಯಭೂತನಾದ ಇವನ ಲೀಲೆ ಎಷ್ಟು ಆಶ್ಚರ್ಯಕರವಾದುದು!’ ಎಂದು ಆಳ್ವಾರ್ರವರು ಅನುಭವಿಸಿದ್ದಾರೆ.

ಭಕ್ತರಿಗೆ ಅತಿ ಸುಲಭ

ಕೃಷ್ಣನು ಭಕ್ತರಿಗೆ ಎಷ್ಟು ಸುಲಭವಾಗಿ ಪ್ರತ್ಯಕ್ಷನಾಗುವನು, ಅವರಿಗೆ ಹೇಗೆ ತನ್ನನ್ನು ಒಪ್ಪಿಸಿ ಕೊಳ್ಳುವನು ಎಂದು ನಮ್ಮಾಳ್ವಾರ್ರರು ಮತ್ತೆ ಮತ್ತೆ ವರ್ಣಿಸಿದ್ದಾರೆ. ಲಕ್ಷ್ಮೀಪತಿಯಾದ ಇವನು ಗೊಲ್ಲರ ಹಟ್ಟಿಯಲ್ಲಿ ತಾಯಿ ತೆಗೆದಿಟ್ಟ ಬೆಣ್ಣೆಯನ್ನು ಎಲ್ಲರೂ ಕಾಣುವಂತೆ ಕದ್ದು ಸಿಕ್ಕಿಬಿದ್ದ. ತಾಯಿ ಗದರಿಸಿದಾಗ ಅಳುವುದಕ್ಕೂ ಆಗದಷ್ಟು ಭಯಪಟ್ಟ ಹಾಗೆ ನಟಿಸಿದ. ಹನಿಗಣ್ಣಾಗಿ ಹೆದರಿದಂತೆ ಕಾಣಿಸುತ್ತಿದ್ದ ಅವನನ್ನು; ಚಂಚಲ ಚೇಷ್ಟಿತನೇ, ಕೈಲಾದರೆ ಬಿಡಿಸಿಕೊಂಡು ಹೋಗು, ನೋಡೋಣ’ ಎಂದು ಅವನ ತಾಯಿ ಹೇಳಿ ಒರಳಿಗೆ ಕಟ್ಟಿಹಾಕಿದಳು. ಅವಳ ಹತ್ತಿರ ಹಾಗೆ ಕಟ್ಟಿಹಾಕಿಸಿಕೊಂಡು ಆ ಒರಳಿನಂತೆಯೇ ನಿಶ್ಚೇಷ್ಟಿತನಾಗಿದ್ದ ಅವನು. ಲೋಕದ ಜನರೆಲ್ಲರ ಸಂಸಾರ ಬಂಧನಕ್ಕೂ ಮೋಕ್ಷಕ್ಕೂ ಕಾರಣನಾದ ಅವನು ಹಾಗೆ ಬಂಧನಕ್ಕೊಳಗಾದುದು ಆಳ್ವಾರ್ರವರ ಮನಸ್ಸಿನಲ್ಲಿ ನಿಂತುಹೋಯಿತು. ’ಇದಕ್ಕಿಂತ ಸೌಲಭ್ಯವನ್ನು ಕಾಣಲಾಗುವುದೇ!’ ಎಂದು ಆಳ್ವಾರ್ರವರು ಹೇಳುತ್ತಾರೆ.

ಆಳ್ವಾರ್ರವರ ಮನಸ್ಸನ್ನು ಪರವಶಗೊಳಿಸಿರುವ ಮತ್ತೊಂದು ಸನ್ನಿವೇಶವೆಂದರೆ ಕೃಷ್ಣನ ಪಾಂಡವರ ದೂತನಾಗಿ ಕೌರವರಲ್ಲಿಗೆ ಹೋದುದು. ಎಷ್ಟು ಉನ್ನತವಾದವನು ಆ ಸ್ವಾಮಿ! ಅವನು ಪಾಂಡವರ ಅಪ್ಪಣೆಯನ್ನು ಹೊತ್ತು ಅವರಿಗೆ ವಿಧೇಯನಾಗಿ, ಅವರ ದೂತನಾಗಿ ಅವರ ಸಂದೇಶವನ್ನು ತೆಗೆದುಕೊಂಡು ಹೋದನಲ್ಲಾ! ಇದೂ ಅವನ ಪರಮ ಸೌಲಭ್ಯವನ್ನು ತೋರಿಸುತ್ತದೆ. ’ಅವನು ಪಾಂಡವದೂತ’ ಎಂದು ಇಂದಿಗೂ ಜನ ಹೇಳಿ ಆಡಿಕೊಳ್ಳುವಂತೆ ಆ ಮಹಾನುಭಾವ ನಡೆದುಕೊಂಡನಲ್ಲಾ! ಇದೆಂಥ ಆಶ್ಚರ್ಯ!’ ಎಂದು ಆಳ್ವಾರ್ರವರು ಬೆರೆಗಾಗಿದ್ದಾರೆ. ’ಕೃಷ್ಣಾವತಾರದ ವೃತ್ತಾಂತವನ್ನು ಸ್ಮರಿಸಿ ಸ್ಮರಿಸಿ ನನ್ನ ಅ‌ಜ್ಞಾನವನ್ನು ನಾನು ನೀಗಿಕೊಂಡೆ’ ಎಂದು ಅವರು ಹೇಳಿಕೊಂಡಿದ್ದಾರೆ. ’ಏನನ್ನು ಕೂಗಿ ಕರೆದುಕೊಳ್ಳಪ್ಪಾ ಕೃಷ್ಣ’ ಎಂದು ಮೊರೆಯಿಡುತ್ತಾರೆ ಅವರು. ವೇಣುಗಾನದಲ್ಲಿ ಅಮೃತವನ್ನೇ ವರ್ಷಿಸಿದ ಆ ಕೃಷ್ಣನನ್ನು ನೆನೆದು, ’ಕೃಷ್ಣನನ್ನು ಬಿಟ್ಟು ಬೇರೆ ದೈವವಿಲ್ಲ, ತಿಳಿಯಿರಿ’ ಎಂದು ಸಾರಿ ಹೇಳುತ್ತಾರೆ. ನಮ್ಮಾಳ್ವಾರ್ರವರಿಗೆ ಕೃಷ್ಣನಲ್ಲಿರುವ ಈ ಪ್ರೇಮವನ್ನು ಕಂಡವರು, ’ಕೃಷ್ಣ ಪ್ರೇಮವೇ ಮೂರ್ತಿವೆತ್ತಂತಿರುವವರು ನಮ್ಮಾಳ್ವಾರ್ರವರು’ ಎಂದು ವರ್ಣಿಸುತ್ತಾರೆ.

ಕಣ್ಣಿಗೆ ಕಟ್ಟುವ ವರ್ಣನೆ

ನಮ್ಮಾಳ್ವಾರ್ರವರು ತಿರುಪತಿ, ಕುಂಭಕೋಣ, ತಿರುಕ್ಕುರುಂಗುಡಿ, ತಿರುಮಾಲಿರಂಶೋಲೈ ಮುಂತಾದ ಅನೇಕ ದಿವ್ಯಕ್ಷೇತ್ರಗಳಲ್ಲಿ ನೆಲೆಸಿರುವ ದೇವರುಗಳನ್ನು ಅರ್ಚನಾ ಮೂರ್ತಿಗಳನ್ನು ತಮ್ಮ ಪ್ರಬಂಧದಲ್ಲಿ ಸ್ತುತಿಸಿದ್ದಾರೆ. ತಿರುಪತಿಯ ಶ್ರೀನಿವಾಸಸ್ವಾಮಿಯನ್ನು ಒಂದು ಪದ್ಯದಲ್ಲಿ ಹೀಗೆ ಸ್ತುತಿಸಿದ್ದಾರೆ. ’ದೇವತೆಗಳೊಡೆಯನೇ, ನಿರ್ದಯರಾದ ಅಸುರರನ್ನು ಧೂಳೀಪಟ ಮಾಡುವ ಚಕ್ರಾಯುಧವನ್ನು ಕೈಲಿ ಹಿಡಿದವನೇ, ಎಂದೂ ಬತ್ತದ ಸರೋವರಗಳಲ್ಲಿ ಕೆಂದಾವರೆಗಳು ಅರಳಿರುವ ವೆಂಕಟಾಚಲದಲ್ಲಿ ನೆಲೆಸಿರುವವನೇ, ನಿನ್ನಲ್ಲಿ ಪ್ರೇಮವನ್ನುಳ್ಳ ನಾನು ನಿನ್ನನ್ನು ಸೇರುವ ಬಗೆಯನ್ನು ತಿಳಿಸಿ ಸಲಹು. ಬೇರೆ ಬೇರೆ ಕ್ಷೇತ್ರಗಳ ಸುಂದರ ಸನ್ನಿವೇಶಗಳನ್ನು ಆಳ್ವಾರ್ರವರು ವರ್ಣಿಸಿದ್ದಾರೆ. ದಟ್ಟವಾದ ತೋಪುಗಳು, ಮೊರೆಯುವ ದುಂಬಿಗಳು, ಉನ್ನತವಾದ ನೀಲಪರ್ವತಗಳು, ತಿಳಿಯಾದ ನೀರನ್ನುಳ್ಳ ಗಿರಿನದಿಗಳು, ತಾವರೆ ಕೊಳಗಳು, ಅಲ್ಲಿ ಚಿಮ್ಮುವ ಮರಿ ಮೀನುಗಳು, ಆ ಕ್ಷೇತ್ರದಲ್ಲಿರುವ ಮಾಳಿಗೆಯ ಮನೆಗಳು, ನಿರಂತರವಾಗಿ ಕೇಳಿಬರುವ ವೇದಘೋಷ, ಭಕ್ತಿಯಿಂದ ಭಜಿಸುವ ಭಕ್ತರ ಗುಂಪುಗಳು-ಇವುಗಳೆಲ್ಲಾ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.

ಎಲ್ಲವೂ ದೇವರೇ

ನಮ್ಮಾಳ್ವಾರ್ರವರಿಗೆ ತಿನ್ನುವ ಅನ್ನ, ಕುಡಿಯುವ ನೀರು ಎಲ್ಲವೂ ದೇವರೇ ಆಗಿದ್ದಿತು. ಅವರು ಚಿಂತಿಸುತ್ತಾ ಇದ್ದುದೂ ದೇವರನ್ನೇ; ಕೇಳುತ್ತಿದ್ದುದು, ಹೇಳುತ್ತಿದ್ದುದು ಮತ್ತು ಕಾಣುತ್ತಿದ್ದುದು ದೇವರನ್ನೇ. ನಾವು ಏನನ್ನು ಪಡೆಯಬೇಕು ಏನನ್ನು ತಿಳಿಯಬೇಕು, ಹೇಗೆ ಅದನ್ನು ಪಡೆಯಬೇಕು ಎಂಬುದನ್ನು ಎಲ್ಲರಿಗೂ ತಿಳಿಯುವಂತೆ ಅವರು ತಿಳಿಸಿಕೊಟ್ಟರು. ’ಭಗವಂತನು ನಮ್ಮೆಲ್ಲರ ತಂದೆ. ಸ್ವಾಮಿ, ಈ ಜಗತ್ತಿಗೆ ಅವನೇ ಕರ್ತ. ನಾವು ಅವನಿಗೆ ಸೇರಿದವರು. ನಾವು ಪಡೆಯಬೇಕಾದುದು ಅವನನ್ನೇ. ಅದಕ್ಕಾಗಿ ಅವನನ್ನೇ ನಾವು ಆಶ್ರಯಿಸಬೇಕು’ ಎಂದು ನೇರವಾಗಿ ಹೇಳಿದವರಿವರು.

ಮನುಷ್ಯರನ್ನು ಕುರಿತು ಹಾಡುವುದಿಲ್ಲ.

ಆಳ್ವಾರ್ರವರು ಭಗವಂತನನ್ನು ಸ್ತುತಿಸಿದರೇ ವಿನಾ ಮನುಷ್ಯರನ್ನು ಹಾಡಿಹೊಗಳಲಿಲ್ಲ. ’ನಾನು ಹೀಗೆ ಹೇಳಿದೆನೆಂದು ನಿಮಗೆ ಅಸಮಧಾನವಾದೀತು. ಆದರೂ ಹೇಳುತ್ತೇನೆ ಕೇಳಿ. ’ತೆನಾತೆನಾ’ ಎಂದು ಜೇನುಗಳು ಮೊರೆಯುವ ತಿರುಮಲೆಗೆ ಸ್ವಾಮಿಯಾದವನೂ, ಎನ್ನಪ್ಪನೂ, ಎನ್ನದೇವರೂ ಆದ ವೆಂಕಟಾಚಲಪತಿ ಇರುವಾಗ ಆ ನನ್ನ ದೇವರನ್ನು ಬಿಟ್ಟು ಬಿಟ್ಟು ಬೇರೆ ಯಾವ ಅಲ್ಪ ಮನುಷ್ಯನನ್ನೂ ಕುರಿತು ನಾನು ಕವಿತೆಯನ್ನು ರಚಿಸುವುದಿಲ್ಲ, ಹಾಡುವುದಿಲ್ಲ’ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

ಲೋಕದವರಿಗೆ ಅವರು ಉಪದೇಶ ಮಾಡಿದ್ದೂ ಇದನ್ನೇ. ’ಮಹಾಮಹಿಮನಾದ ಭಗವಂತನ ರೂಪ, ಗುಣ ಮತ್ತು ಲೀಲೆಗಳನ್ನು ಸದಾ ಸ್ಮರಿಸಿ. ಈ ಲೋಕದಲ್ಲಿ ಐಶ್ವರ್ಯ ಮತ್ತು ಅಧಿಕಾರಗಳು ಸ್ಥಿರವಲ್ಲ. ಎಲ್ಲರನ್ನೂ ಗೆದ್ದು ಅವರನ್ನು ತನಗೆ ಅಧೀನರನ್ನಾಗಿ ಮಾಡಿಕೊಂಡು, ಅವರ ಮೇಲೆ ಅಧಿಕಾರ ನಡೆಸುತ್ತಾ, ಈ ಲೋಕಕ್ಕೆಲ್ಲಾ ತಾನೇ ಒಡೆಯನೆಂದು ಹೇಳಿಕೊಂಡು ಆಳಿದವರು ಮುಂದಿನ ಕ್ಷಣದಲ್ಲಿ ರಾಜ್ಯವನ್ನೆಲ್ಲಾ ಕಳೆದುಕೊಂಡು ಬಹಳ ಕೃಪಣರಾಗಿ, ಹಸಿವು ಬಾಯಾರಿಕೆಗಳಿಂದ ಪೀಡಿತರಾಗಿ ಎಲ್ಲರೂ ಕಾಣುವಂತೆ ಅನ್ನಕ್ಕಾಗಿ ಭಿಕ್ಷೆ ಬೇಡುತ್ತಾ ತಿರಿಯುತ್ತಾರೆ. ಹೀಗೆ ಐಶ್ವರ್ಯ ಸ್ಥಿರವಲ್ಲ. ಆದುದರಿಂದ ಅದೆಲ್ಲವನ್ನೂ ಬಿಟ್ಟು ಬಿಟ್ಟು ಪರಮಾತ್ಮನ ಪಾದಗಳನ್ನು ಆಶ್ರಯಿಸಿ ಬದುಕಿ’ ಎಂದು ತಿಳಿಸಿದರು.

ಭಕ್ತರದಾಸ

ನಮ್ಮಾಳ್ವಾರ್ರವರಿಗೆ ಭಗವಂತನಲ್ಲಿ ಎಷ್ಟು ಭಕ್ತಿಯೋ ಅದಕ್ಕಿಂತ ಹೆಚ್ಚು ಭಕ್ತಿ ಅವನ ಭಕ್ತರಲ್ಲಿ. ಭಕ್ತರಿಗೆ ತಾನು ದಾಸಾನುದಾಸ ಎಂದು ಅವರು ತಮ್ಮನ್ನು ಹೇಳಿಕೊಳ್ಳುತ್ತಾರೆ. ಭಾಗವತರಿಗೆ ತಾನು ಅಡಿಯಾಳು ಎಂದು ಅವರ ನಿಶ್ಚಯ. ಅವರು ಹೇಳುವುದಿದು, ’ಯಾವ ಪರಮಾತ್ಮನನ್ನು ತಿಳಿಯುವುದಕ್ಕಾಗಲೀ ಧ್ಯಾನಮಾಡುವುದಕ್ಕಾಗಲೀ ಸನಕಸನಂದನಾದಿ ಯೋಗಿಗಳಿಗೂ ಬಹಳ ಕಷ್ಟವೋ ಅಂಥ ಪರಮಾತ್ಮನಿಗೆ ಯಾರು ಭಕ್ತರಾಗಿದ್ದಾರೆಯೋ ಆ ಭಕ್ತರ ಭಕ್ತ ನಾನು’ ’ದಿವ್ಯ ಭೂಷಣಗಳಿಂದ ಶೋಭಿಸುತ್ತಿರುವ ಶ್ರೀಮನ್ನಾರಾಯಣನದಾಸರ ದಾಸರದಾಸ ನಾನು.’ ’ನಾನು ಭಗವದ್ಭಕ್ತ ಎಂಬಂಥ ಅಹಂಕಾರದ ಸುಳಿವೂ ಆಳ್ವಾರವರಲ್ಲಿ ಇರಲಿಲ್ಲ.

ನಮ್ಮಾಳ್ವಾರ್ರವರ ದೃಷ್ಟಿಯಲ್ಲಿ ಭಗವಂತನಲ್ಲಿ ಭಕ್ತಿ ಉಳ್ಳವರೆಲ್ಲ ದೊಡ್ಡವರು. ಭಕ್ತರಲ್ಲಿ ಜಾತಿಕುಲಗಳ ಭೇದವಿಲ್ಲ. ಈ ಜಾತಿಗೆ ಸೇರಿದವರು ಹೆಚ್ಚು. ಈ ಜಾತಿಗೆ ಸೇರಿದವರು ಕಡಿಮೆ ಎಂಬ ಭೇದ ಇಲ್ಲವೇ ಇಲ್ಲ. ಅವರೆಲ್ಲ ಒಂದೇ ಕುಲದವರು. ಅವರೆಲ್ಲ ಭಕ್ತರ ಕುಲಕ್ಕೆ ಸೇರಿದವರು. ನಮ್ಮಾಳ್ವಾರ್ರವರು ಇದನ್ನು ’ಭಗವಂತನನ್ನು ಬಿಟ್ಟು ಮತ್ತೇನನ್ನೂ ಬಯಸದೆ ಅವನನ್ನು ಭಜಿಸುವ ಭಕ್ತರು ಯಾವ ಜಾತಿಗೆ ಸೇರಿದ್ದರೂ ಅವರ ದಾಸರು ನಮಗೆ ಒಡೆಯರು’ ಎಂದು ತಿಳಿಸಿದ್ದಾರೆ. ನಮ್ಮಾಳ್ವಾರ್ರವರಿಗೆ ಭಗವದ್ಭಕ್ತರಲ್ಲಿ ಎಷ್ಟು ಭಕ್ತಿ ಇತ್ತೆಂಬುದನ್ನು ಇದು ತೋರಿಸುತ್ತದೆ.

’ಸ್ವಲ್ಪವೂ ವಿಚ್ಛೇದವಿಲ್ಲದಂತೆ ಯಾವಾಗಲೂ ಎಲ್ಲೆಲ್ಲಿಯೂ ಭಗವಂತನನ್ನೇ ಭಜಿಸಿ ಧನ್ಯರಾಗಬೇಕು. ದೇವರು ನಮಗೆ ಶರೀರ, ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳನ್ನೆಲ್ಲಾ ಕೊಟ್ಟಿದ್ದಾನೆ. ಇವುಗಳಿಂದ ನಾವು ಒಳ್ಳೆಯದನ್ನು ಸಾಧಿಸಿಕೊಳ್ಳಲಿ ಎಂಬುದು ಅವನ ಆಶಯ. ಈ ದೇಹ, ಇಂದ್ರಿಯ ಮೊದಲಾದವು ಸೆಳೆದುಕೊಂಡಂತೆಯೇ ನಾವೂ ಹೋದರೆ ನಮಗೆ ಸುಖ ದೊರೆಯದು. ’ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸು’ ಎಂದು ಆ ಭಗವಂತನನ್ನು ನಾವು ಬೇಡಬೇಕು. ತನಗಾಗಿ, ತನ್ನ ಸೇವೆ ಮಾಡುವುದಕ್ಕಾಗಿ ನಮ್ಮನ್ನು ಸ್ವೀಕರಿಸಬೇಕೆಂದು ಅವನನ್ನು ಬೇಡಬೇಕು. ಅವನಿಗೂ ನಮಗೂ ಇರುವ ಸಂಬಂಧವನ್ನು ತಪ್ಪಿಸುವುದಕ್ಕಾಗದು. ಅವನಿಲ್ಲದೆ ನಾನಿಲ್ಲ. ಆದುದರಿಂದ ನಾವು, ನಮ್ಮದು ಎಂಬುದನ್ನು ಬಿಟ್ಟು ಅವನಲ್ಲಿ ನಮ್ಮನ್ನು ಒಪ್ಪಿಸಿಕೊಳ್ಳಬೇಕು’ ಇದು ನಮ್ಮಾಳ್ವಾರ್ರರ ಉಪದೇಶದ ತಿರುಳು.

ಭಕ್ತಿಮಾರ್ಗ

ಭಕ್ತಿಮಾರ್ಗ ಅನೇಕ ಬಗೆಯಾಗಿದೆ. ಅವನು (ದೇವರು) ಸ್ವಾಮಿ. ನಾವು ದಾಸರು ಎಂದು ಭಾವಿಸಿಕೊಂಡು ಸೇವಿಸುವುದು ದಾಸ್ಯಭಾವ. ಆಂಜನೇಯ ಇದಕ್ಕೆ ಉದಾಹರಣೆ, ಅವನು ಮಗು, ನಾವು ತಾಯಿ ಎಂದು ಭಾವಿಸಿಕೊಂಡು ಪ್ರೀತಿ ತೋರುವುದು ವಾತ್ಸಲ್ಯ ಭಾವ. ಯಶೋದೆ ಇದಕ್ಕೆ ಉದಾಹರಣೆ. ಅವನನ್ನು ನಮ್ಮ ಸ್ನೇಹಿತನೆಂದು ಭಾವಿಸಿ ಪ್ರೀತಿಸುವುದು ಸಖ್ಯ ಭಾವ. ಇದಕ್ಕೆ ಸುಗ್ರೀವ ಉದಾಹರಣೆ. ಅವನು ಪತಿ. ನಾವು ಸತಿ ಎಂದು ಭಾವಿಸಿಕೊಂಡು ಅವನಲ್ಲಿ ಪ್ರೀತಿ ತೋರಿಸುವುದು ಮಧುರಭಾವ. ಇದಕ್ಕೆ ರಾಧೆ ಉದಾಹರಣೆ. ನಮ್ಮಾಳ್ವಾರ್ರವರು ಭಗವಂತನಲ್ಲಿ ದಾಸ್ಯ ಭಾವದ ಎಲ್ಲ ರೂಪಗಳನ್ನೂ ತೋರಿದ್ದಾರೆ. ಹಾಗೆಯೇ ಮಧುರಭಾವವನ್ನೂ ಅನುಸಂಧಾನ ಮಾಡಿದ್ದಾರೆ. ತಮ್ಮನ್ನು ವಧು ಎಂದು ಭಾವಿಸಿಕೊಂಡು ಭಗವಂತನಲ್ಲಿ ತನ್ನ ಪ್ರೇಮವನ್ನು ಹೇಳಿಕೊಂಡಿದ್ದಾರೆ. ಭಗವಂತ ಇನ್ನೂ ತನ್ನ ಬಳಿ ಬರಲಿಲ್ಲವಲ್ಲಾ ಎಂದು ನೊಂದವರಾಗಿ, ಎಂದು ಅವರು ಬಂದಾರೋ ಎಂದು ಹಂಬಲಿಸಿದ್ದಾರೆ. ಭಗವಂತನ ಅಗಲಿಕೆಯನ್ನು ಸಹಿಸಲಾರದೆ ಅವರು ಹೇಳುವ ಮಾತುಗಳು ಕೇಳುವವರ ಮನಸ್ಸನ್ನು ಕರಗಿಸುತ್ತವೆ. ಆಸೆ, ನಿರೀಕ್ಷೆ, ಸಮಾಧಾನ ಇವೆಲ್ಲಾ ಇಲ್ಲಿ ಬರುತ್ತವೆ. ಅವನು ಬರದಿರುವಾಗ ನಿರಾಶೆಯೂ ದುಃಖವೂ ತುಂಬಿ ಬರುತ್ತದೆ. ತನ್ನ ದುಃಸ್ಥಿತಿಯನ್ನು ಅವನಿಗೆ ತಿಳಿಸಿ ಅವನು ಬರುವಂತೆ ಮಾಡಬೇಕೆಂದು ಕಂಡ ಕಂಡವರನ್ನೆಲ್ಲಾ ಕಾಡಿ ಬೇಡುತ್ತಾರೆ.

ನಮ್ಮಾಳ್ವಾರ್ರವರ ಭಗವತ್ಪ್ರೇಮ ಹೀಗೆ ಅವರ ಮಾತಿನಲ್ಲಿ ಹೊಳೆಯಾಗಿ ಹರಿದಿದೆ. ಅವರಿಗೆ ಭಗವಂತನ ಸಾಕ್ಷಾತ್ಕಾರವಾದುದನ್ನು ಕೊನೆಯಲ್ಲಿ ಅವರೇ ಹೇಳಿಕೊಂಡಿದ್ದಾರೆ.  ಭಗವಂತನನ್ನು ಕಾಣಲು ತನಗೆ ಹೇಗೆ ಅರ್ಹತೆ ಇದೆ ಎಂದು ಒಂದು ಸಲ ಖಿನ್ನರಾಗುತ್ತಾರೆ. ಮತ್ತೊಮ್ಮೆ ಭಗವಂತನ ದಿವ್ಯಗುಣಗಳನ್ನು ನೆನೆದು ಅವನು ಕೈ ಬಿಡನೆಂಬ ಧೈರ್ಯ ಹೊಂದಿದ್ದಾರೆ. ಭಗವಂತನಿಗಾಗಿ ಇವರು ಮಾಡಿದ ದೀರ್ಘವಾದ ಚಿಂತನೆಯೇ ಈ ಪ್ರಬಂಧದ ರೂಪವಾಗಿದೆ. ಇವರ ಪ್ರೀತಿಗೆ ಒಲಿದ ಭಗವಂತನು ಬಂದು ಇವರ ಹೃದಯದ ತುಂಬ ತುಂಬಿ ಕೊಂಡುಬಿಟ್ಟನಂತೆ. ಮೊದಮೊದಲು ಇವರು ಭಗವಂತ ನನ್ನು ಹುಡುಕಿಕೊಂದು ಹೋದರು. ಕೊನೆಗೆ ಭಗವಂತನೇ ಇವರನ್ನು ಬೆಂಬತ್ತಿದನಂತೆ. ಭಗವಂತನೊಡನೆ ತಾವು ಸೇರಿದುದನ್ನು ನಮ್ಮಾಳ್ವಾರ್ರವರು ಸುಂದರವಾಗಿ ತಮ್ಮ ಪ್ರಬಂಧದ ಕೊನೆಯಲ್ಲಿ ವರ್ಣಿಸಿದ್ದಾರೆ.

ಶ್ರೇಷ್ಠ ಶಿಷ್ಯರು

ನಮ್ಮಾಳ್ವಾರ್ರವರು ಹೀಗೆ ಭಗವಂತನನ್ನು ಕುರಿತು ತತ್ತ್ವವನ್ನು ಮಧುರ ಕವಿಗಳಿಗೆ ಉಪದೇಶ ಮಾಡಿದರು. ಮಧುರ ಕವಿಗಳು ಈ ಉಪದೇಶ ಪಡೆದು ಧನ್ಯರಾದರು. ಇಂಥ ಮಹಾನುಭಾವರನ್ನು ಆಶ್ರಯಿಸುವ ಭಾಗ್ಯ ತನ್ನದಾಯಿತಲ್ಲಾ ಎಂದು ಆನಂದಪಟ್ಟರು. ಮಧುರ ಕವಿಗಳಿಗೆ ನಮ್ಮಾಳ್ವಾರ್ರವರಲ್ಲಿ ಅಸದೃಶವಾದ ಭಕ್ತಿ. ಯಾವಾಗಲೂ ಅವರು ಆಳ್ವಾರವರನ್ನೇ ಸ್ತುತಿಸುತ್ತಿದ್ದರು. ಆಳ್ವಾರ್ರಾರು ಹಾಡಿದ ಪ್ರಬಂಧಗಳನ್ನು ಮಧುರ ಕವಿಗಳು ರಾಗಬದ್ಧವಾಗಿ ತಾಳ ಲಯಗಳಿಗನುಸಾರವಾಗಿ ಹಾಡುತ್ತಾ ಪ್ರಚಾರ ಮಾಡಿದರು. ನಮ್ಮಾಳ್ವಾರ್ರವರ ಹಿರಿಮೆ ಆ ಊರಿನವರಿಗೆಲ್ಲ ಮಧುರ ಕವಿಗಳು ಬಂದ ಮೇಲೆ ಗೊತ್ತಾಯಿತು. ಮಧುರ ಕವಿಗಳು ನಮ್ಮಾಳ್ವಾರ್ರವರು ಬದುಕಿದ್ದಾಗಲೇ ಅವರ ಪ್ರತಿಮೆಯನ್ನು ಮಾಡಿಸಿ ಪ್ರತಿಷ್ಠೆ ಮಾಡಿಸಿದರು. ಆ ವಿಗ್ರಹವನ್ನು ಭಕ್ತಿಯಿಂದ ಪೂಜಿಸಿದರು. ಮಧುರ ಕವಿಗಳ ಆಚಾರ್ಯಭಕ್ತಿ ಅದ್ಭುತವಾದುದು. ನಮ್ಮಾಳ್ವಾರ್ರವರನ್ನು ಕುರಿತು ತಾವು ಒಂದು ಸ್ತುತಿಯನ್ನು ಅವರು ತಮಿಳಿನಲ್ಲಿ ರಚಿಸಿದರು. ಅದರಲ್ಲಿ ಹನ್ನೊಂದೇ ಪದ್ಯಗಳಿವೆ. ’ಯಶೋದೆಯ ಕೈಲಿ ಹಗ್ಗದಿಂದ ಕಟ್ಟುಹಾಕಿಕೊಂಡ ಆ ಮಾಯನ ಹೆಸರನ್ನು ಹೇಳುವುದಕ್ಕಿಂತ ’ಕುರುಹೂರು ನಂಬಿ’ ಎಂದು ನಮ್ಮಾಳ್ವಾರ್ರವರ ಹೆಸರು ಹೇಳಲು ನನ್ನ ಬಾಯಲ್ಲಿ ಅಮೃತವೇ ಊರುವುದು. ನಮ್ಮಾಳ್ವಾರ್ರವರ ಹೊನ್ನಡಿಯನ್ನು ಆಶ್ರಯಿಸಿದೆ ನಾನು ಬೇರೊಂದು ದೈವವನ್ನರಿಯೆನು. ನಮ್ಮಾಳ್ವಾರ್ರಾರ ಗೀತೆಗಳನ್ನು ಇಂಪಾಗಿ ಹಾಡುತ್ತಾ ನಾನು ತಿರಿಯುವೆನು’ ಎಂದು ಮಧುರ ಕವಿ ಕೊಂಡಾಡಿದ್ದಾರೆ, ನಮ್ಮಾಳ್ವಾರ್ರವರನ್ನು ಸ್ತುತಿಸುವುದರ ಮೂಲಕ ಸಿದ್ಧಿಯನ್ನು ಪಡೆದರಿವರು.

ನಮ್ಮಾಳ್ವಾರ್ರವರು ಮೂವತ್ತೈದು ವರ್ಷ ಕಾಲ ಬದುಕಿದ್ದರು. ಎಂದಿನಂತೆ ದೇವಮಂದಿರದ ಬಳಿಯಲ್ಲಿಯೇ ಅವರು ಧ್ಯಾನಾಸಕ್ತರಾಗಿದ್ದರು. ಮಧುರ ಕವಿಗಳು ಇನ್ನೂ ಮುಂದೆ ಐವತ್ತೈದು ವರ್ಷಕಾಲ ಬದುಕಿದ್ದರು. ನಮ್ಮಾಳ್ವಾರ್ರವರ ಉಪದೇಶವನ್ನು ವಿಂಗಡಿಸಿ ಪ್ರಚಾರಮಾಡಿ ಮಧುರವಾದ ಕವಿತೆಗಳನ್ನು ಹಾಡುತ್ತಾ ಆಚಾರ್ಯ ಭಿಮಾನವನ್ನು ಇವರು ಬೆಳಗಿದರು.

ನಮ್ಮಾಳ್ವಾರ್ರವರು ರಚಿಸಿದ ಪ್ರಬಂಧಗಳು ಉತ್ತಮ ಕಾವ್ಯಗಳೂ ಆಗಿವೆ.

ನಾಥಮುನಿಗಳು

ಮಧುರ ಕವಿಗಳ ಕಾಲಾನಂತರ ಈ ಪ್ರಬಂಧಗಳನ್ನು ಸಂಪಾದಿಸಿ ಸಂರಕ್ಷಿಸಿದ ಮಹಾನುಭಾವರು ನಾಥಮುನಿಗಳು, ಇವರು ಕ್ರಿ.ಶ. ಎಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದವರು. ಇವರು ಹುಟ್ಟಿದ ಊರು ತಮಿಳುನಾಡಿನ ವೀರನಾರಾಯಣಪುರ. ಶ್ರೀ ವೈಷ್ಣವ ಧರ್ಮವನ್ನು ಪ್ರವರ್ತನಗೊಳಿಸಿದ ಆಚಾರ್ಯರಲ್ಲಿ ಇವರೂ ಒಬ್ಬರು. ಇವರಿಗೆ ನಮ್ಮಾಳ್ವಾರ್ರವರ ಕೃತಿಗಳು ದೊರೆತ ರೀತಿಯನ್ನು ಕುರಿತು ಭಕ್ತರು ಒಂದು ಸ್ವಾರಸ್ಯವಾದ ಕಥೆಯನ್ನು ಹೇಳುತ್ತಾರೆ.

ಭಕ್ತೋತ್ತಮರಾದ ಇವರು ತೀರ್ಥಯಾತ್ರೆ ಮಾಡುತ್ತಾ ಒಂದೊಂದು ಕ್ಷೇತ್ರಕ್ಕೂ ಹೋಗಿ ದೇವರ ದರ್ಶನ ಮಾಡುತ್ತಾ ಬರುತ್ತಾ ಇದ್ದರು. ಇವರ ಕಾಲಕ್ಕೆ ನಮ್ಮಾಳ್ವಾರ್ರವರ ಪ್ರಬಂಧಗಳೆಂದರೆ ಏನೆಂಬುದೇ ಯಾರಿಗೂ ಗೊತ್ತಿರಲಿಲ್ಲ. ಆ ಸಾಹಿತ್ಯ ಕಣ್ಮರೆಯಾಗಿಯೇ ಹೋಗಿತ್ತು. ನಾಥಮುನಿಗಳೂ ಆಳ್ವಾರ್ರವರ ವಿಷಯ ಕೇಳಿರಲಿಲ್ಲ. ಹೀಗಿರಲು ಒಮ್ಮೆ ನಾಥಮುನಿಗಳು ಕುಂಭಕೋಣವೆಂಬ ಕ್ಷೇತ್ರಕ್ಕೆ ಬಂದರು. ಅಲ್ಲಿ ಅನಂತ ಶಯಾಸ್ವಾಮಿಯ ಸುಂದರ ರೂಪವನ್ನು ಸಂದರ್ಶಿಸಿ ತನ್ಮಯರಾದರು. ಆ ಕ್ಷೇತ್ರದಲ್ಲಿ ದೇವರಸೇವೆ ಮಾಡುತ್ತಿದ್ದಾಗ ಅಲ್ಲಿನ ಭಾಗವತರು ಆ ದೇವರನ್ನು ಸ್ತುತಿಸಿ ನಮ್ಮಾಳ್ವಾರ್ರವರ ರಚಿಸಿದ್ದ ಹತ್ತು ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅದನ್ನು ಕೇಳುತ್ತಿದ್ದಂತೆಯೇ ನಾಥಮುನಿಗಳು ಅದರ ಮಾಧುರ್ಯಕ್ಕೂ ಸೊಗಸಿಗೂ ಪರವಶವಾದರು. ಆಗ ಆ ಭಾಗವತರನ್ನು ಕುರಿತು, ’ಈ ಪ್ರಬಂಧ ಯಾವುದು? ಯಾರು ರಚಿಸಿದ್ದು? ಇಂಥ ಪ್ರಬಂಧಗಳು ಬೇರೆ ಇನ್ನೂ ಇವೆಯೇ?’ ಎಂದು ಕೇಳಿದರು. ಭಾಗವತರು ಹೇಳಿದರು, ’ಹಿರಿಯರೇ, ಈ ಪ್ರಬಂಧ ನಮ್ಮಾಳ್ವಾರ್ರವರದಂತೆ. ಇದಿಷ್ಟೇ ನಮಗೆ ಗೊತ್ತು. ಇದನ್ನು ನಾವು ದೇವರ ಸನ್ನಿದಿಯಲ್ಲಿ ದಿನದಿನವೂ ಹಾಡುತ್ತೇವೆ. ಇಂಥ ಪ್ರಬಂಧಗಳು ಇನ್ನೂ ಇವೆಯೋ ಇಲ್ಲವೊ ನಮಗೆ ತಿಳಿಯದು’ ಈ ವಿಷಯ ಎಲ್ಲಿ ಗೊತ್ತಾಗಬಹುದು? ನಮ್ಮಾಳ್ವಾರ್ರವರು ಯಾರು? ಎಲ್ಲಿಯವರು? ಎಂದು ನಾಥಮುನಿಗಳು ಕೇಳಿದಾಗ ಭಾಗವತರು ’ಆಳ್ವಾರ್ರವರು ತಿರುಕ್ಕುರುಹೂರ್ ನವರು. ಅಲ್ಲಿ ಕೇಳಿದರೆ ತಿಳಿಯಬಹುದೇನೋ’ ಎಂದರು. ನಾಥಮುನಿಗಳ ಮೇಲೆ ಆ ಪ್ರಬಂಧಗಳ ಪ್ರಭಾವ ಎಷ್ಟಾಗಿತ್ತೆಂದರೆ ಅವುಗಳನ್ನು ಪಡೆದುಕೊಳ್ಳದೆ ಇರುವುದು ಅವರಿಗೆ ಸಾಧ್ಯವೇ ಇರಲಿಲ್ಲ.

ಆದುದರಿಂದ ಅಲ್ಲಿಂದ ಹಾಗೆಯೇ ನಾಥಮುನಿಗಳು ಪ್ರಬಂಧಗಳ ಅನ್ವೇಷಣೆಗಾಗಿ ಹೊರಟರು. ದಾರಿಯಲ್ಲಿ ಸಿಕ್ಕಿದ ಪ್ರತಿ ಊರಿನಲ್ಲಿಯೂ ಪ್ರಬಂಧಗಳನ್ನು ಕುರಿತು ವಿಚಾರಿಸುತ್ತಾ ಹೋದರು. ಯಾರನ್ನು ಕೇಳಿದರೂ ’ನಮಗೆ ಗೊತ್ತಿಲ್ಲ’ ಎಂದೇ ಹೇಳುತ್ತಾ ಬಂದರು. ಕೊನೆಗೆ ತಿರುನಗರಿ ಊರಿಗೂ ಬಂದರು. ಅಲ್ಲಿಯೂ ಒಬ್ಬೊಬ್ಬರನ್ನಾಗಿ ಆಳ್ವಾರ್ರವರ ವಿಚಾರವನ್ನು ಕೇಳಿದರು. ಆದರೆ ಆಳ್ವಾರ್ರವರ ಹುಟ್ಟೂರಿನಲ್ಲಿಯೂ ಎಲ್ಲರೂ ಅವರ ವಿಚಾರವನ್ನೂ ಅವರ ಪ್ರಬಂಧಗಳ ವಿಚಾರವನ್ನೂ ಮರೆತು ಬಿಟ್ಟಿದ್ದರು. ಮಧ್ಯೆ ಅಷ್ಟುಕಾಲ ಸಂದು ಹೋಗಿತ್ತು ಎನ್ನುತ್ತಾರೆ. ನಾಥಮುನಿಗಳು ಹೀಗೆಯೇ ಎಲ್ಲರನ್ನೂ ಕೇಳುತ್ತಾ ಬರುತ್ತಿದ್ದಾಗ ಯಾರೋ ಒಬ್ಬರು ಹೇಳಿದರು ’ಎಲ್ಲಿ ಪರಾಂಕುಶದಾಸರೆಂಬುವರಿದ್ದಾರೆ. ಅವರಿಗೆ ಗೊತ್ತಿರಬಹುದು. ಅವರನ್ನು ಕೇಳಿ’ ಅಲ್ಲಿಂದ ಮುಂದೆ ನಾಥಮುನಿಗಳು ಪರಾಂಕುಶದಾಸರ ಅನ್ವೇಷಣೆಗೆ ತೊಡಗಿದರು. ಕೊನೆಗೆ ಆ ಊರಿನ ಸಮೀಪದ ಕ್ಷೇತ್ರವೊಂದರಲ್ಲಿದ್ದ ಪರಾಂಕುಶ ದಾಸರನ್ನು ಕಂಡರು. ಮಧುರಕವಿಗಳ ಶಿಷ್ಯರ ಪರಂಪರೆಯಲ್ಲಿ ಬಂದವರು ಪರಾಂಕುಶದಾಸರು. ನಾಥಮುನಿಗಳು ಪರಾಂಕುಶ ದಾಸರಿಗೆ ನಮಸ್ಕಾರ ಮಾಡಿ ಕೇಳಿದರು, ’ನಮ್ಮಾಳ್ವಾರ್ರವರ ಪ್ರಬಂಧಗಳು ಎಷ್ಟು? ಅವುಗಳನ್ನು ಬಲ್ಲವರಾರು? ಅವುಗಳನ್ನು ಹೇಗೆ ಪಡೆದುಕೊಳ್ಳಬಹುದು? ’ ಎಂದು ’ಆದು ಮಧುರಕವಿಗಳ ಶಿಷ್ಯ ಪರಂಪರೆಯನ್ನು. ನಮ್ಮ ಗುರುಗಳು ನಮ್ಮಾಳ್ವಾರ್ರವರನ್ನು ಸ್ತುತಿಸಿದ್ದಾರೆ ಹನ್ನೊಂದು ಪದ್ಯಗಳಲ್ಲಿ. ನಾನು ಅದನ್ನೇ ಅನುಸಂದಾನ ಮಾಡುತ್ತಿದ್ದೇನೆ. ನಮ್ಮಾಳ್ವಾರ್ರವರ ಪ್ರಬಂಧಗಳೆಲ್ಲ ಲುಪ್ತವಾಗಿ ಹೋಗಿವೆ’ ಎಂದರವರು. ನಾಥಮುನಿಗಳಿಗೆ ಬಹಳ ದುಃಖವಾಯಿತು. ಅಮೂಲ್ಯವಾದ ಆ ಪ್ರಬಂಧಗಳನ್ನು ಹೇಗೆ ಪಡೆದುಕೊಳ್ಳುವುದು ಎಂದು ಬಹಳ ಯೋಚನೆಯಾಯಿತು. ’ಪರಾಂಕುಶದಾಸರೇ, ನಮ್ಮಾಳ್ವಾರ್ರವರ ಆ ಪ್ರಬಂಧಗಳನ್ನು ಪಡೆದುಕೊಳ್ಳಲು ಮಾರ್ಗವೇನಾದರೂ ಇದೆಯೇ? ಎಂದು ಕೇಳಿದರು ನಾಥಮುನಿ. ’ಇದೆ. ಮಾರ್ಗವೊಂದಿದೆ. ಆದರೆ ಅದು ಶಕ್ಯವಲ್ಲ’ ಎಂದರು ಪರಾಂಕುಶದಾಸರು. ’ಅದೇನು ಹೇಳಿ’ ಎಂದರು ಕಾತುರರಾಗಿ ನಾಥಮುನಿಗಳು ಆಗ ಪರಾಂಕುಶದಾಸರು, ನಮ್ಮ ಗುರುಗಳು ರಚಿಸಿರುವ ಈ ಹನ್ನೊಂದು ಪದ್ಯಗಳ ಸ್ತುತಿಯನ್ನು ಒಂದೇ ಸಮನಾಗಿ ಮಧ್ಯೆ ನಿಲ್ಲಿಸದೆ ಹನ್ನೆರಡು ಸಾವಿರ ಸಲ ಜಪಿಸಿದರೆ ನಮ್ಮಾಳ್ವಾರ್ರವರ ಅನುಗ್ರಹವಾಗುವುದೆಂದು ನಾನು ಕೇಳಬಲ್ಲೆ. ಆ ಸಾಮರ್ಥ್ಯ ನನಗಿಲ್ಲ. ಆದುದರಿಂದ ಉಪಾಯವಿಲ್ಲ’ ಎಂದರು ನಾಥಮುನಿಗಳು ಹೇಳಿದರು. ’ಹಿರಿಯರೇ, ಆ ಸ್ತುತಿಯನ್ನು ನನಗೆ ಉಪದೇಶಿಸಿ. ನಿಮ್ಮ ಅನುಗ್ರಹದಿಂದ ನಾನು ಹನ್ನೆರಡು ಸಾವಿರ ಸಲ ಜಪಿಸುತ್ತೇನೆ. ಏನಾದರೂ ನಮ್ಮಾಳ್ವಾರ್ರವರ ಅನುಗ್ರಹವನ್ನು ಪಡೆದೇ ತೀರಬೇಕು. ಇದು ನನ್ನ ನಿಶ್ಚಯ’.

ನಾಥಮುನಿಗಳು ಆ ಸ್ತುತಿಯ ಉಪದೇಶ ಪಡೆದು ಸ್ವಯಂ ಯೋಗಿಗಳಾಗಿದ್ದ ಅವರು ಯೋಗಶಕ್ತಿಯ ಪ್ರಭಾವದಿಂದ ಆ ಸ್ತುತಿಯನ್ನು ಹನ್ನೆರಡು ಸಾವಿರ ಬಾರಿ ನಮ್ಮಾಳ್ವಾರ್ರವರ ಪದಕಮಲಗಳಲ್ಲಿ ನೆಟ್ಟು ಮನಸ್ಸುಳ್ಳವರಾಗಿ ಜಪಿಸಿದಂತೆ. ಅದರಿಂದ ಅವರಿಗೆ ನಮ್ಮಾಳ್ವಾರ್ರವರ ಅನುಗ್ರಹ ಉಂಟಾಯಿತು. ನಾಥಮುನಿಗಳು ಯೋಗದೆಶೆಯಲ್ಲಿ ನಮ್ಮಾಳ್ವಾರ್ರವರನ್ನು ಸಾಕ್ಷಾತ್ಕರಿಸಿಕೊಂಡರು. ’ನಿಮಗೆ ಬೇಕಾದುದೇನು?’ ಎಂದು ನಮ್ಮಾಳ್ವಾರ್ರವರು ಕೇಳಲು ನಾಥಮುನಿಗಳು, ಕೃಪೆಯಿಟ್ಟು ನನಗೆ ತತ್ವೋಪದೇಶ ಮಾಡಿ. ತಾವು ಹಾಡಿದ ಪ್ರಬಂಧಗಳನ್ನು ನನಗೆ ಅನುಗ್ರಹಿಸಿ. ತಮ್ಮಲ್ಲಿ ಭಕ್ತಿ ನನಗೆ ಸ್ಥಿರವಾಗಿರಲಿ.’ ಎಂದು ಬೇಡಿದರು. ನಮ್ಮಾಳ್ವಾರ್ರವರು ನಾಥಮುನಿಗಳಿಗೆ ತಾವು ಹಾಡಿದ ಪ್ರಬಂಧಗಳನ್ನೂ ಉಪದೇಶಿಸಿದರು. ನಾಲ್ಕು ಸಾವಿರ ಪದ್ಯ ಸಂಖ್ಯೆಯನ್ನುಳ್ಳ ದ್ರಾವಿಡವೇದವನ್ನು ನಾಥಮುನಿಗಳು ತಮ್ಮ ದೃಢ ನಿರ್ಧಾರಕ್ಕನುಸಾರವಾಗಿ ನಮ್ಮಾಳ್ವಾರ್ರವರಿಂದಲೇ ಪಡೆದುಕೊಂಡರು. ನಮ್ಮಾಳ್ವಾರ್ರವರು ಆಚಾರ್ಯರಾದ ನಾಥಮುನಿಗಳಿಗೂ ಆಚಾರ್ಯರಾಗಿ ವೈಷ್ಣವ ಧರ್ಮ ದವರಿಗೆಲ್ಲ ಪ್ರಥಮಾಚಾರ್ಯರಾದರು.

ನಾಥಮುನಿಗಳು ಹೀಗೆ ಈ ತಮಿಳು ಸ್ತೋತ್ರಗಳನ್ನು ಬಹಳ ಕಷ್ಟಪಟ್ಟು ಸಂಪಾದಿಸಿ ಸಂರಕ್ಷಿಸಿದರು. ವೈಷ್ಣವ ದೇವಾಲಯಗಳಲ್ಲಿ ಈ ತಮಿಳು ಪ್ರಬಂಧಗಳನ್ನು ದೇವರ ಮುಂದೆ ಹಾಡುವ ಪದ್ಧತಿಯನ್ನು ನಾಥಮುನಿಗಳು ಆಚರಣೆಗೆ ತಂದರು. ನಮ್ಮಾಳ್ವಾರ್ರವರು ಹಾಡಿದ ಪ್ರಬಂಧಗಳನ್ನು ಇಂದಿಗೂ ಭಕ್ತರು ಪಾರಾಯಣ ಮಾಡುತ್ತಾರೆ; ದೇವರ ಮುಂದೆ ಹಾಡುತ್ತಾರೆ. ಆ ಪ್ರಬಂಧಗಳ ಅರ್ಥಗಳನ್ನು ಅಭ್ಯಾಸ ಮಾಡುತ್ತಾರೆ.

ನಮ್ಮಾಳ್ವಾರ್ರವರು ಪರಮಭಕ್ತರು. ಅವರು ಭಗವಂತನಲ್ಲೆಯೇ ತನ್ಮಯರಾಗಿದ್ದರು. ಅವರು ಮಾತುಗಳು ಜೇನಿನ ಹೊಳೆಯಂತೆ ಮಧುರ. ಅವರ ಹೃದಯದಿಂದ ಬಂದ ಮಾತುಗಳು; ಅವು. ಭಗವತ್ಪ್ರೇಮದ ಪ್ರವಾಹ ಅದು.

ಇತರರಿಗೆ ಮಾರ್ಗದರ್ಶನ

ಇಂತಹ ಹಿರಿಯರು ಆಡಿದ ಮಾತು ದೊಡ್ಡದು, ಎಂದೂ ಭಕ್ತರ ಮನಸ್ಸಿಗೆ ಸಮಾಧಾನವನ್ನೂ ಸಂತೋಷವನ್ನೂ ಕೊಡಬಲ್ಲದು. ಅದಲ್ಲದೆ ಅವರ ಜೀವನ ರೀತಿಯೂ ಮಾರ್ಗದರ್ಶನ ಮಾಡಬಲ್ಲದು. ನಮಗೆಲ್ಲ ಒಂದೊಂದು ವಯಸ್ಸಿನಲ್ಲಿ ಒಂದೊಂದು ಆಸೆ ಪ್ರಬಲವಾಗಿರುತ್ತದೆ. ಬಾಲ್ಯದಲ್ಲಿ ಒಳ್ಳೆಯ ಬಟ್ಟೆ, ತಿಂಡಿ ಬೇಕು. ಇತರ ಹುಡುಗರು ನಮ್ಮನ್ನು ಮೆಚ್ಚಬೇಕು ಎಂದು ಆಸೆ. ತಾರುಣ್ಯದಲ್ಲಿ ಹಣ ಬೇಕು, ಒಳ್ಳೆಯ ಸ್ಥಾನ ಬೇಕು, ಸುಖ ಬೇಕು ಎಂಬ ಆಸೆ. ಇನ್ನಷ್ಟು ವಯಸ್ಸಾಗುತ್ತ ದೊಡ್ಡ ಅಧಿಕಾರ ಬೇಕು, ತುಂಬ ಹಣ ಬೇಕು, ಎಲ್ಲರೂ ನಮ್ಮನ್ನು ಹೊಗಳಬೇಕು ಎಂಬ ಆಸೆ. ಮುಪ್ಪಿನಲ್ಲಿ ನೆಮ್ಮದಿ ಬೇಕು, ಗೌರವಬೇಕು ಎಂಬ ಅಸೆ. ಹೀಗೆ ಜೀವನದುದ್ದಕ್ಕೂ ಯಾವುದಾದರೊಂದು ಆಸೆ ಕಾಡುತ್ತಲೇ ಇರುತ್ತದೆ. ಇಂತಹ ಆಸೆಯ ತೃಪ್ತಿಗಾಗಿ ನಾವು ಇತರರಿಗೆ ತೊಂದರೆ ಕೊಡಲು ಸಿದ್ಧವಿರುತ್ತೇವೆ, ಅನ್ಯಾಯ ಮಾಡಲು ಸಿದ್ಧವಿರುತ್ತೇವೆ. ಮನುಷ್ಯ ಕೋಟಿಯಲ್ಲಿ ಬಹುಮಂದಿ ಈ ಬಗೆಯವರೇ. ಈ ಬಗೆಯ ಆಸೆಯನ್ನು ಮೆಟ್ಟಿ ದೊಡ್ಡದಾದ ಒಂದು ಶಕ್ತಿಗೆ ಅಥವಾ ಆದರ್ಶಕ್ಕೆ ಅಥವಾ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡು ಬದುಕಿದವರು, ಮನುಷ್ಯ ಎಷ್ಟು ಎತ್ತರಕ್ಕೆ ಏರಬಲ್ಲ ಎಂಬುದನ್ನು ತೋರಿಸಿಕೊಡುತ್ತಾರೆ. ಲಕ್ಷಾಂತರ ಮಂದಿ ಆಸೆಗೆ ಕಟ್ಟುಬಿದ್ದು ಸ್ವಾರ್ಥಿಗಳಾಗಿ ನಡೆದುಕೊಂಡರೂ ಎಲ್ಲರೂ ಹೀಗೆಯೇ ಇರಬೇಕಾಗಿಲ್ಲ, ಸ್ವಾರ್ಥದ ಲೇಪ ಇಲ್ಲದ ದೊಡ್ಡ ಜೀವನ ನಡೆಸಲು ಸಾಧ್ಯ ಎಂದು ತೋರಿಸಿಕೊಡುತ್ತಾರೆ. ನಮ್ಮಾಳ್ವಾರ್ರರು ಈ ಜಗತ್ತನ್ನು ಬಿಟ್ಟಾಗ ಅವರಿಗೆ ಮೂವತ್ತೈದು ವರ್ಷ ಮಾತ್ರ. ತೀರ ಎಳೆಯ ವಯಸ್ಸಿನಿಂದ ಅವರು ಯಾವ ಆಸೆಯನ್ನೂ ಇಟ್ಟುಕೊಳ್ಳಲಿಲ್ಲ. ದೇವರಿಗೆ ತಮ್ಮನ್ನು ಒಪ್ಪಿಸಿಕೊಂಡರು. ದೇವರಿಗಾಗಿ ಹಂಬಲಿಸಿದರು. ಪ್ರತಿ ಧಾರ್ಮಿಕ ಪಂಥದವರೂ ತಮ್ಮ ಹಿರಿಯರ ವಿಷಯದ ಅನೇಕ ಸಂಗತಿಗಳನ್ನು ನಂಬುತ್ತಾರೆ. ಇತರರಿಗೆ ಇವು ಪವಾಡ ಎಂದು ಕಂಡರೂ, ಆ ಹಿರಿಯರ ಕಾಲದಲ್ಲೆ ವಿದ್ವಾಂಸರೂ ಶುಭ್ರಜೀವನದವರೂ ಆದವರೆ ಅವರನ್ನು ಕುರಿತು ಇಂತಹ ಹಲವು ಸಂಗತಿಗಳನ್ನು ನಂಬಿದರು, ಹೇಳಿದರು ಎನ್ನುವುದು ಆ ವ್ಯಕ್ತಿಗಳ ವೈಶಿಷ್ಟ್ಯವನ್ನು ತೋರಿಸುತ್ತದೆ. ನಮ್ಮಾಳ್ವಾರ್ರರು ಮನುಷ್ಯರನ್ನು ಅವರು ಎಷ್ಟು ದೊಡ್ಡವರಾಗಲಿ, ರಾಜಾಧಿರಾಜರಾಗಲಿ ಹೊಗಳಲಿಲ್ಲ. ಅವರು ಆಸೆಗಳನ್ನು ಗೆದ್ದರು ಎಂಬುದು ಮುಖ್ಯವಾದ ಸಂಗತಿ; ಅವರು ನಿರ್ಮಲವಾದ ಜೀವನವನ್ನು ನಡೆಸಿದರು ಎಂಬುದು ಮುಖ್ಯವಾದ ಸಂಗತಿ. ನಮ್ಮಾಳ್ವಾರ್ರರು ಇಂತಹ ಹಿರಿಯರು.

ನಮ್ಮಾಳ್ವಾರ್ರರು ಕಲಿಯುಗದ ಪ್ರಾರಂಭದಲ್ಲಿದ್ದವರು ಎಂದು ಭಕ್ತರ ನಂಬಿಕೆ. ಚರಿತ್ರಕಾರರು ಅವರು ಕ್ರಿಸ್ತಶಕ ಆರರಿಂದ ಎಂಟನೆಯ ಶತಮಾನದಲ್ಲಿದ್ದರು ಎಂದು ಹೇಳುತ್ತಾರೆ. ಆ ಕಾಲದಲ್ಲಿಯೇ ಅವರು ಜಾತಿಗೆ ಪ್ರಾಮುಖ್ಯವನ್ನು ಕೊಡಲಿಲ್ಲ ಎಂಬುದು ಗಮನಾರ್ಹವಾದ ಸಂಗತಿ. ಎಲ್ಲ ವಸ್ತುಗಳಲ್ಲಿ. ಎಲ್ಲ ವ್ಯಕ್ತಿಗಳಲ್ಲಿ ದೇವರನ್ನು ಕಂಡ ಅವರಿಗೆ ಈ ಜಾತಿ ಮೇಲು, ಈ ಜಾತಿ ಕೀಳು ಎಂಬ ಭಾವನೆ ಬರಲು ಸಾಧ್ಯವಿರಲಿಲ್ಲ. ನಿಜವಾಗಿ ದೇವರಿಗೆ ತಮ್ಮನ್ನು ಅರ್ಪಿಸಿಕೊಂಡವರ ಲಕ್ಷಣ ಇದು.

ನಮ್ಮಾಳ್ವಾರ್ರರು ಮಾಡಿದ ಮತ್ತೊಂದು ದೊಡ್ಡ ಕೆಲಸ ಎಂದರೆ ಜನಸಾಮಾನ್ಯರ ಭಾಷೆಯಾದ ತಮಿಳಿನಲ್ಲಿ ಕೃತಿಗಳನ್ನು ರಚನೆ ಮಾಡಿದ್ದು. ಜನಸಾಮಾನ್ಯರ ಭಾಷೆ ಕೀಳು ಎಂಬ ಭಾವನೆ ಇಲ್ಲದೆ ಎಲ್ಲರಿಗೆ ತಮ್ಮ ಚಿಂತನೆ ಮುಟ್ಟುವಂತೆ ತಮಿಳಿನಲ್ಲಿ ಕೃತಿಗಳನ್ನು ರಚಿಸಿ ಇತರ ವಿದ್ವಾಂಸರಿಗೆ ಮಾದರಿಯಾದರು.