ಕೆರೆ ನುಂಗಿ,ಹೊಲ ನುಂಗಿ, ಹಳ್ಳಿ ನುಂಗಿ, ನದಿ ನುಂಗಿ, ಕಾಡು ನುಂಗಿ ಬೆಳೆಯುತ್ತ ಬಂದ ಬೆಂಗಳೂರು ಹಳ್ಳಿ ಹುಡುಗರನ್ನು  ಹೇಗೆಲ್ಲ  ನುಂಗಿ ಕೂತಿದೆ !. ಈಗೀಗ ಅತಿವ್ಠಷ್ಟಿ, ಅನಾವ್ಠಷ್ಟಿಗಳ ಹೊಡೆತದಲ್ಲಿ  ಹೊಲದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯುತ್ತಿಲ್ಲ  ಎಂದು ರೈತರು ಕೊರಗುವದು ಕೇಳಿರಬಹುದು. ವಿಚಿತ್ರವೆಂದರೆ ಈಗ ೩-೪ ದಶಕಗಳ ಹಿಂದೆ ಹಳ್ಳಿ ಹಳ್ಳಿಗಳಲ್ಲಿ  ಶ್ರೀಸಾಮಾನ್ಯರ  ಮಧ್ಯೆ ಬೆಂಗಳೂರಿನ ಕನಸಿನ ಬೀಜ ಬಿತ್ತಿದ್ದು   ಅದು  ಇವತ್ತಿಗೂ ಯಾವ ಸಮಸ್ಯೆಯಿಲ್ಲದೆ  ಹಬ್ಬಿ ಬೆಳೆಯುತ್ತಿದೆ !.

ತೆಂಗಿನ ನುಸಿಪೀಡೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಟೊಮೆಟೋ ಬೆಳೆಯಲ್ಲಿ ಸುಖವಿಲ್ಲ, ಕೃಷಿ ನಮಗೆ ಕಾಸು ಕೊಡೋಲ್ಲವೆಂದು ನಮ್ಮೂರಿನ ಮಕ್ಕಳು ಬೆಂಗಳೂರಿಗೆ ಓಡಿದ್ದಾರೆ  ಎಂದು ನಾಗತಿಹಳ್ಳಿ  ಹಿರಿಯರು ಮಾತಾಡುತ್ತಿದ್ದರು. ನೆಲಮಂಗಲ-ಕುಣಿಗಲ್ ಮಾರ್ಗದಲ್ಲಿ ಬರೋಬ್ಬರಿ ೧೧೦ ಕಿಲೋ ಮೀಟರ್ ದೂರದ ಈ ಹಳ್ಳಿ ಹುಡುಗರು ಬೆಂಗಳೂರಿಗೆ ಸೆಳೆಯಲ್ಪಟ್ಟು ಬದುಕು ಹುಡುಕಿದ್ದರಲ್ಲಿ ವಿಶೇಷ  ಕಾಣುತ್ತಿಲ್ಲ. ದೈತ್ಯ ನಗರದಲ್ಲಿ  ಏನಾದರೊಂದು ನೌಕರಿ ಹುಡುಕಿ  ಕೃಷಿಗಿಂತ ಹೆಚ್ಚು ನೆಮ್ಮದಿ ಕಾಣುವ ಹದಿಹರೆಯದ ಪಯಣಗಳಿವು. ಕೃಷಿಯೇತರವಾಗಿ ಬದುಕುವ ವಿದ್ಯೆಯನ್ನು ನಮ್ಮ ಊರ ಶಾಲೆಗಳಲ್ಲಿ  ನಾವೇ ಸ್ವತಃ  ನೀಡಿದ್ದೇವೆ, ಅಕ್ಷರ ಕಲಿಯುತ್ತಲೆ  ಬೇಸಾಯದಲ್ಲಿ  ಅನಕ್ಷರತೆ ಬೆಳೆದು  ಬಳಿಕ ಮಣ್ಣು ಮರೆಯುವದು  ಸಹಜ ಕ್ರಿಯೆ. ನಾಲ್ಕು ವರ್ಷದ ಹಿಂದೆ ಹಳ್ಳಿ ಮಕ್ಕಳನ್ನು ಹಳ್ಳಿಯಲ್ಲೇ  ಉಳಿಸುವ “ಪುರ” ಯೋಜನೆ ಪ್ರಸ್ತಾಪವಾಗಿದ್ದು  ನೆನಪಿರಬಹುದು. ಹಳ್ಳಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ   ಸಣ್ಣಪುಟ್ಟ ಕೈಗಾರಿಕೆ ಮುಖೇನ ಉದ್ಯೋಗ  ಸೃಷ್ಟಿಸುವದು ಸರಕಾರಿ ಯೋಜನೆಯ ಮುಖ್ಯ ಗುರಿ.  ಆಯ್ದ ಗ್ರಾಮಗಳನ್ನು  ಇದಕ್ಕಾಗಿ ಆಯ್ಕೆ  ಮಾಡಲಾಗಿತ್ತು. ಈವರೆಗೂ ಯೋಜನೆಯ ಮಾತು ಕೇಳಿದ್ದೇವೆಯೇ ವಿನಾ ಪರಿಣಾಮ  ಅರಿಯಲು ಸಾಧ್ಯವಾಗಿಲ್ಲ.

ನಗರ ವಲಸೆಗೆ ಉದ್ಯೋಗ ಹುಡುಕಾಟ ಮಾತ್ರ ಕಾರಣವೇ ? ಇದನ್ನು  ಸರಳಕ್ಕೆ ನಂಬುವಂತಿಲ್ಲ. ಇಂದಿನ ಯುವಕರಿಗೆ  ಒಂದು ಬದಲಾವಣೆ ಬೇಕಾಗಿದೆ, ಬಿಸಿಲಲ್ಲಿ ನೇಗಿಲು ಹಿಡಿದು ಬೆವರಿಳಿಸುವದು ಸಾಕಾಗಿದೆ. ಒಂದಿಲ್ಲೊಂದು ಅಭಿವೃದ್ಧಿಗೆ ಹಣ ಪ್ರಮುಖವಾಗಿರುವಾಗ ಹೆಚ್ಚು ಹೆಚ್ಚು ಗಳಿಕೆ ಸುಖದ ಸನಿಹಕ್ಕೆ ಒಯ್ಯುತ್ತದೆಂಬ ಅರಿವು ಬೆಳೆದಿದೆ. ೧೮-೩೫ರೊಳಗೆ ಬದುಕು ಅನುಭವಿಸುವ ಆಸೆ  ಹೆಚ್ಚಿದೆ. ಮನೋರಂಜನೆ, ಓಡಾಟ, ಹೊಸ ವಾತಾವರಣ, ಕಟ್ಟುಪಾಡು ಮೀರುವ  ಸ್ವಾತಂತ್ರ್ಯಗಳಲ್ಲಿ  ಏನೋ  ಖುಷಿಯಿುದೆ. ಊರು ಬಿಟ್ಟು  ನಗರ ಸೇರುವ ಹದಿಹರೆಯಕ್ಕೆ  “ಸೀರಿಯಸ್ ನೌಕರಿ”  ಕಾರಣದ ಜತೆಗೆ  ಇಂತಹ ಇತರೇ ಸಂಗತಿಗಳ ಪ್ರಭಾವವೂ  ತೆರೆಮರೆಯಲ್ಲಿ  ಸೇರಿದೆ. ಬೆವರಿಳಿಸಿ ಹಂಚಿ ಉಣ್ಣುವ ಬದಲು ತನ್ನ ಅನ್ನವನ್ನು ಕೃಷಿಯೇತರವಾಗಿ  ದುಡಿಯುವ ಆಸೆ. ಹೀಗಾಗಿ ನಗರ ವಲಸೆ ಸಮಸ್ಯೆ ಬಿಡಿಸುವದು  ಅಷ್ಟು ಸುಲಭವಲ್ಲ.

ಬೆಂಗಳೂರಿನಿಂದ ೫೦೦ ಕಿಲೋ ಮೀಟರ್ ದೂರದ ಮಲೆನಾಡಿನ ಹಳ್ಳಿಗಳಲ್ಲಿ ಕನಸು ಮೂಡಿಸಿದ ಕಾಲ ನೆನಪಿಸಿಕೊಳ್ಳಬೇಕು.  ಇಲ್ಲಿ ೩೦-೩೫ ವರ್ಷದ ಹಿಂದೆ  ಈ ಬೆಂಗಳೂರು  ಎಂದರೆ  ಥೇಟ್ ವಿದೇಶಕ್ಕೆ ಸರಿಸಮಾನ!  ಯಾರಾದರೂ ಅಚಾನಕ್ ಬೆಂಗಳೂರಿಗೆ ಹೋಗಿ ಬಂದರೆ ಸುತ್ತಲಿನ ಹಳ್ಳಿಗರಿಗೆ  ಅದನ್ನು   ವರ್ಷಕಾಲ ವಿವರಿಸುತ್ತಿದ್ದರು. ಕೆಲವರಂತೂ ಬಸ್ ಟಿಕೇಟುಗಳನ್ನು ಜೋಪಾನವಾಗಿಟ್ಟು  ಪ್ರಯಾಣ ದರಪಟ್ಟಿ ವಿವರಿಸಿದ್ದೂ ಇದೆ !  ಡಿಗ್ರಿ  ಓದಿ ನೌಕರಿ ಸೇರಿದವರಿಗಿಂತ ಆ ಕಾಲಕ್ಕೆ ಸುಲಭಕ್ಕೆ  ಸಿಕ್ಕ ಹೊಟೆಲ್ ಚಾಕರಿ ಸೇರಿದವರು ಜಾಸ್ತಿ. ಕಾಮತ್ ಹೊಟೆಲ್‌ಗಳು ಇವರ ಮೊದಲ ಮೆಟ್ಟಿಲು.  ವರ್ಷಕ್ಕೊಮ್ಮೆ  ಇವರು ಹಳ್ಳಿಗೆ  ಮರಳುವಾಗ  ಎಲೆಕ್ಟ್ರಾನಿಕ್ಸ್ ವಾಚು, ಟೇಪರೇಕಾರ್ಡರ್ ಹಿಡಿದು  ಬರುತ್ತಿದ್ದರು . ಮತ್ತೆ ಕೆಲವರ ಬೇಡಿಕೆ ಮೇರೆಗೆ  ಬರ್ಮಾ ಬಜಾರಿನಿಂದ ಕರೆಂಟ್ ಬ್ಯಾಟರಿ ತರುತ್ತಿದ್ದರು. ಹೊಸತರಲ್ಲಿ ಬೆಂಗಳೂರಿಂದ ಮನೆಗೆ ಬರುವವರು  ಮನೆಯವರಿಗೆ  ಬಟ್ಟೆ  ತರುವದು ವಾಡಿಕೆ. ಹೊಟೆಲ್ ಸಪ್ಲೈರ್ ಆಗಿದ್ದವರೂ  ಉಂಗುರ-ಚೈನು  ಹಾಕಿ ಬರುತ್ತಿದ್ದರು. ಇವರ  ವೇಷ ನೋಡಿ  ಗಳಿಕೆ ಭರ್ಜರಿಯಾಗಿದೆಯೆಂದು ಹಳ್ಳಿಯವರ ಲೆಕ್ಕಾಚಾರ. ಹೊಟೆಲ್‌ನಲ್ಲಿ ತಿಂಡಿ ಸಪ್ಲೈ ಮಾಡುವಾಗ ಗಿರಾಕಿಗಳು ಕೊಡುವ ಟಿಪ್ಸ್ ಹಣವೇ ದಿನಕ್ಕೆ  ೨೫-೩೦ ರೂಪಾಯಿು ಆಗುತ್ತದೆಂದೂ  ಮನೆಮಂದಿ ಮಗನ ಗಳಿಕೆ ಕೊಂಡಾಡುತ್ತಿದ್ದರು. ಕ್ಯಾಷ್ ಕೌಂಟರಿನಲ್ಲಿ ಕುಳಿತಾಗ ಹೋಟೆಲ್ ಸಾಹುಕಾರನ ಕಣ್ತಪ್ಪಿಸಿ ದಿನಕ್ಕೆ  ಒಂದಿಷ್ಟು ಹಣ ಜೇಬಿಗಿಳಿಸುವ ಸಂಗತಿಯನ್ನು ರಾಜಾರೋಷವಾಗಿ ಮಗನ ಈ ಸಾಧನೆಯನ್ನು  ಹೆಮ್ಮೆಯಿಂದ  ವಿವರಿಸಿದ ಹಲವು  ವ್ಯಕ್ತಿಗಳನ್ನು ಕಂಡಿದ್ದೇನೆ !. ಒಟ್ಟಿನಲ್ಲಿ ಬೆಂಗಳೂರಿನ ಹೊಟೆಲ್ ಸೇರಿದರೆ ಸಖತ್ತಾಗಿ ಹಣಗಳಿಸಬಹುದೆಂಬುದು  ಮಾತಿನ ಮರ್ಮ. ಮಸಾಲೆ ದೋಸೆ, ಮೈಸೂರ್ ಬ್ಯಾಂಕ್, ಮೆಜೆಸ್ಟಿಕ್, ಅಲಂಕಾರ್ ಪ್ಲಾಜಾದಲ್ಲಿ  ನಮ್ಮನ್ನು ಹೊತ್ತೊಯ್ಯುವ ಮೆಟ್ಟಿಲು, ವಿಧಾನ ಸೌಧಗಳ ವಿವರಣೆ ಕೇಳಿದರಂತೂ ಒಂದು ಸಾರಿ ಬೆಂಗಳೂರಿಗೆ ಹೋಗಬೇಕೆಂಬ ಕನಸು ಯಾರಲ್ಲಾದರೂ ಮೂಡುತ್ತಿತ್ತು. ಒಬ್ಬರ ಹಿಂದೆ ಒಬ್ಬರಂತೆ ಹಳ್ಳಿ ಮಕ್ಕಳ ಬೆಂಗಳೂರು ವಲಸೆ  ಬೆಳೆಯಿತು. ಕಾಲೇಜು ಓದಿ ಏನ್ ಮಾಡ್ತೀರಿ ಎಂದರೆ  ಬೆಂಗಳೂರಲ್ಲಿ ನೌಕರಿ ಮಾಡ್ತೀನಿ ಎಂಬ ಉತ್ತರ  ಊರಿಗೆಲ್ಲ ಬಾಯಿಪಾಠವಾಯಿತು.

ಕೆರೆ ನುಂಗಿ,ಹೊಲ ನುಂಗಿ, ಹಳ್ಳಿ ನುಂಗಿ, ನದಿ ನುಂಗಿ, ಕಾಡು ನುಂಗಿ ಬೆಳೆಯುತ್ತ ಬಂದ ಬೆಂಗಳೂರು ಹಳ್ಳಿ ಹುಡುಗರನ್ನು  ಹೇಗೆಲ್ಲ  ನುಂಗಿ ಕೂತಿದೆ !. ಹಳ್ಳಿಯಲ್ಲಿ ಸಾಧ್ಯವಿಲ್ಲದ್ದೆಲ್ಲ ಅಲ್ಲಿ ಸಾಧ್ಯವಿದೆಯೆಂದು ಸ್ಥೈರ್ಯ ಮೂಡಿಸಿ ಯುವಕರನ್ನು ಸೆಳೆದ ಶಕ್ತಿಗೆ ಶರಣೆನ್ನಬೇಕು. ಬರೋಬ್ಬರಿ ಒಂದು ಕೋಟಿ ಜನಸಂಖ್ಯೆ  ಮಡಿಲಲ್ಲಿ ಬಾಚಿಕೊಂಡು ಅಕ್ಕಪಕ್ಕದ ಹಳ್ಳಿ, ಪೇಟೆಗಳ ಜನಸಂಖ್ಯೆ  ಬೆಳೆಸುತ್ತ ಹೊರಟ ವೈಖರಿ  ಗಮನಿಸಬೇಕು. ಕಾಲೇಜು, ಕಾರ್ಖಾನೆ, ಐ.ಟಿ ಹೀಗೆ ವಿವಿಧ ಕ್ಷೇತ್ರಗಳ  ಅವಕಾಶಗಳು  ಇಲ್ಲಿ ತೆರೆದುಕೊಂಡಿದ್ದು  ನಿಜ. ಇಲ್ಲಿ ಕಲಿತವರಿಗೆ ಕೆಲಸ ದೊರೆಯುವದರ ಜತೆಗೆ ಕೂಲಿ ಮಾಡಿ ಬದುಕುವವರಿಗೂ ಹಳ್ಳಿ ಬೇಸಾಯಕ್ಕಿಂತ ಭಿನ್ನ  ಅವಕಾಶ ತೋರಿಸಿದೆ. ದುಡಿಯುವದಕ್ಕೆ  ಒಂದು ಅವಕಾಶ ಸಿಕ್ಕರೆ ಬದುಕುವದಕ್ಕೆ ನೆರಳು ಸಿಗುತ್ತದೆಂಬ ವಿಶ್ವಾಸದಲ್ಲಿ  ಕಣ್ಣುಚ್ಚಿ ನಗರ ಮೆರವಣಿಗೆ ನಡೆದಿದೆ.

ಅವತ್ತು  ಹೊಟೆಲ್ ಸೇರಿ ಊರಿಗೆ ಬಂದಾಗೆಲ್ಲ  ಹಳ್ಳಿಗರನ್ನು ಸುತ್ತ ಕೂಡ್ರಿಸಿಕೊಂಡು  ಬೆಂಗಳೂರಿನ ಚೆಂದದ ಕತೆ ಹೇಳಿದವರೆಲ್ಲ  ಈಗ ಏನೇನಾದರೆಂದು  ಸುಮ್ಮನೆ  ಗಮನಿಸುತ್ತಿದ್ದೇನೆ. ಅವರ ಕತೆಗಳಲ್ಲಿ  ಗಳಿಕೆಯಿತ್ತು, ಧಿಡೀರನೆ ಒಮ್ಮೊಮ್ಮೆ ಕುಸಿತವಿತ್ತು. ನೆಲೆ ನಿಂತವರು, ನೆಲೆ ಕಳಕೊಂಡವರ ಪಟ್ಟಿ ಮಾಡಿದರೆ  ಬದುಕು ಮಸಾಲೆ ದೋಸೆಯಂತೆ ಈಗ ರುಚಿ ಕಳಕೊಂಡಿದೆ. ಮಾತೆತ್ತಿದರೆ  ಸಂಚಾರ ದಟ್ಟಣೆ, ಜೀವನ ದುಬಾರಿಯೆಂದು  ಮಡಿಲಲ್ಲಿ ಕೂತವರು ಮಾತಾಡುತ್ತಾರೆ. ದಿನವಿಡೀ ಬದುಕು ಬ್ಯುಸಿಯಾಗಿದೆ. ಒತ್ತಡದಲ್ಲಿ ಓಡುವದು ದೇಹಕ್ಕೆ ರೂಢಿಯಾಗಿದೆ. ಕೈಯಲ್ಲಿ ಕಾಸಿಲ್ಲದೇ  ಹೇಗೋ ನಗರ ಸೇರಿ  ಗಳಿಸಿ ಬಂದವರು  ಮಾದರಿಯಾದಂತೆ ನಗರ ಸೆಳೆತ ಬೆಳೆಯುತ್ತ ಊರು ಖಾಲಿ ಖಾಲಿಯೆನಿಸುತ್ತಿದೆ. ಹಿಂದೆ ನಮ್ಮಲ್ಲಿ  ನಿಮ್ಮ ಹಳ್ಳಿಯವರು ಯಾರಾದರೂ ಬೆಂಗಳೂರಲ್ಲಿ ಇದ್ದಾರಾ ? ಎಂದು  ಸ್ನೇಹಿತರು ಮಾತಾಡುವಾಗ ಕುತೂಹಲದಲ್ಲಿ ಕೇಳುತ್ತಿದ್ದರು. ಈಗ ಜಮೀನು ಬೇಸಾಯ ನೋಡೋಕೆ ಯಾರಾದರೂ ಯುವಕರು ಮನೆಯಲ್ಲಿ   ಇದ್ದಾರಾ ? ಎಂದು ಮನೆಮನೆಯಲ್ಲಿ ಪ್ರಶ್ನಿಸುವಂತಾಗಿದೆ. ಉತ್ತರ ಕನ್ನಡದ  ಕುಮಟಾ ಸನಿಹದ ಹಳ್ಳಿಯೊಂದರ ೪೦ ಮನೆಗಳ ಪೈಕಿ ೩೦ ವರ್ಷದ ಒಬ್ಬ ಯುವಕ ಮಾತ್ರ ಊರಲ್ಲಿ ಇದ್ದಾನೆ. ಇನ್ನುಳಿದವರೆಲ್ಲ ೫೦-೯೦ ವಯಸ್ಸಿನವರು ! ಊರಿನ ಮನೆಗಳ ಕರೆಂಟ್ ಬಿಲ್, ಪೋನ್ ಬಿಲ್, ಪಂಪ್ ಸೆಟ್ ದುರಸ್ತಿ  ಸೇರಿದಂತೆ  ಎಲ್ಲರ ಮನೆಯ ತುರ್ತು ಕೆಲಸಗಳೇ ಆತನನ್ನು ಬ್ಯುಸಿಯಾಗಿಸಿವೆ. ಯಾವೊಂದು ಮನೆಯಲ್ಲಿ ಯುವಕರಿಲ್ಲದ ಕಾರಣ  ಸಂಕಷ್ಟ ಸಹಾಯವಾಣಿಯಂತೆ  ಆತ ಬದುಕಿದ್ದಾನೆ !

ಈಗೀಗ ಅತಿವೃಷ್ಟಿ, ಅನಾವೃಷ್ಟಿಗಳ ಹೊಡೆತದಲ್ಲಿ  ಹೊಲದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯುತ್ತಿಲ್ಲ  ಎಂದು ರೈತರು ಕೊರಗುವದು ಕೇಳಿರಬಹುದು. ವಿಚಿತ್ರವೆಂದರೆ ಈಗ ೩-೪ ದಶಕಗಳ ಹಿಂದೆ ಹಳ್ಳಿ ಹಳ್ಳಿಗಳಲ್ಲಿ  ಶ್ರೀಸಾಮಾನ್ಯರ  ಮಧ್ಯೆ ಬೆಂಗಳೂರಿನ ಕನಸಿನ ಬೀಜ ಬಿತ್ತಿದ್ದು  ಅದು  ಇವತ್ತಿಗೂ ಯಾವ ಸಮಸ್ಯೆಯಿಲ್ಲದೆ ಹಬ್ಬಿ ಬೆಳೆಯುತ್ತಿದೆ!. ಬೆಂಗಳೂರಿನ ಸನಿಹದ ನಾಗತಿಹಳ್ಳಿಯಷ್ಟೇ  ಅಲ್ಲ ನಮ್ಮ ಎಲ್ಲ ಹಳ್ಳಿ ರಸ್ತೆಗಳೂ ಕಟ್ಟಕಡೆಗೆ ಬೆಂಗಳೂರು ಅಥವಾ ಬೆಂಗಳೂರಿನಂತಹ ಮತ್ತೊಂದು ಊರಿಗೆ ಸುರಕ್ಷಿತವಾಗಿ ತಲುಪಿಸುತ್ತಿವೆ. ಅವರನ್ನೆಲ್ಲ ವಾಪಸು ಕರೆಸಿಕೊಳ್ಳುವ ಶಕ್ತಿ ಹಳ್ಳಿಯ ಮಣ್ಣಿಗೆ  ಕಷ್ಟಸಾಧ್ಯ. ಇಲ್ಲಿರುವವರನ್ನು  ಓಡಿ ಹೋಗದ ಹಾಗೇ  ತಡೆಯುವದು ಹೇಗೆ?  “ಕೃಷಿ ರಕ್ಷಣಾ  ಕಾಯ್ದೆ ” ಬರಬಹುದೆ ! ಹಿರಿಯರು ತಮಾಷೆ ಮಾಡುತ್ತಾರೆ.