ಧರ್ಮ, ಮತದ ವಿಷಯವನ್ನು ಪ್ರಸ್ತಾಪಿಸಿದರೆ ನೀತಿಸಂಹಿತೆಯನ್ನು ಉಲ್ಲಂಘಿಸಿದಂತೆ ಎಂದು ಯಾರಾದರೂ ದೂರು ನೀಡಬಹುದಾದ ಈ ಸಂದರ್ಭದಲ್ಲಿಯೂ ಇದರ ಕುರಿತು ಮಾತನಾಡುವ ಧೈರ್ಯ ಮಾಡಿರುವುದನ್ನು ನೋಡಿ ನಾನೂ ಚುನಾವಣೆಗೆ ನಿಂತಿರಬೇಕು ಎಂದು ಭಾವಿಸೀರಿ!  ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಹಾಗೂ ನ್ಯೂ ಸೈಂಟಿಸ್ಟ್ ಪತ್ರಿಕೆಗಳಲ್ಲಿ ಧರ್ಮ ಮತ್ತು ದೇವರ ಬಗ್ಗೆ ಎರಡು ಲೇಖನಗಳು ಪ್ರಕಟವಾಗಿದ್ದು ನನ್ನ ಈ ಸಾಹಸಕ್ಕೆ ಪ್ರೇರಣೆ ಎನ್ನಬಹುದು. ಧರ್ಮ ಮತ್ತು ದೇವರ ಪ್ರಜ್ಞೆ ನಮ್ಮ ಮನಸ್ಸಿನ ಒಂದು ಭಾವ ಎನ್ನುವುದನ್ನು ಒತ್ತಿ ಹೇಳುತ್ತಲೇ ಈ ಎರಡೂ ಲೇಖನಗಳು ದೇವರು ಎನ್ನುವುದು ಮಾನವ ಪ್ರಾಣಿಗಷ್ಟೆ ಇರುವ ಒಂದು ವಿಶಿಷ್ಟ ಪ್ರಜ್ಞೆ ಎನ್ನುವ ವಾದವನ್ನು ಮುಂದಿಟ್ಟಿವೆ. ಅರ್ಥಾತ್ ಇದು ನಮ್ಮಲ್ಲಿರುವ ಒಂದು ಜೈವಿಕ ಸಾಮರ್ಥ್ಯ!

ಧರ್ಮ ಹಾಗೂ ವಭೀರುತನಗಳಿಗೆ ನೇರ ಸಂಬಂಧವಿದೆ. ಧಾರ್ಮಿಕನಾದ ವ್ಯಕ್ತಿಯಲ್ಲಿ ವಭಯ (ವಭಕ್ತಿ ಅಂತಲೂ ಹೇಳಿ) ಇದ್ದೇ ಇರುತ್ತದೆ. ನಾಯಿ, ನರಿಗಳಿಗೆ ಇಂತಹ ಭಯವಿಲ್ಲ. ಅವುಗಳಿಗೆ ಇರುವ ಭಯವೇನಿದ್ದರೂ ತಮ್ಮನ್ನು ಕೊಲ್ಲುವ ಇತರೇ ಜೀವಿಗಳದ್ದು. ಹೀಗಿರುವಾಗ ಕಣ್ಣಿಗೆ ಕಾಣದ, ಅತೀಂದ್ರಿಯ ಶಕ್ತಿಯ ಪರಿಕಲ್ಪನೆ ಹಾಗೂ ಅದರ ಬಗೆಗಿನ ಭಯ ಮನುಷ್ಯನಲ್ಲಿ ಉಂಟಾದದ್ದು ಏಕೆ? ಇದು ಎಲ್ಲರಲ್ಲಿಯೂ ಇದೆಯೇ? ಅಥವಾ ನಮ್ಮ ಹಿರಿಯರಿಂದ ಕಲಿತ ಭಯವೇ? ಇದು ಮನಶ್ಶಾಸ್ತ್ರಜ್ಞರುಗಳು ಕೇಳುವ ಪ್ರಶ್ನೆ. ಪ್ರಪಂಚದಲ್ಲಿರುವ 600 ಕೋಟಿ ಜನರಲ್ಲಿ ಶೇಕಡ 85ರಷ್ಟು ಮಂದಿ ದೇವರಲ್ಲಿ ನಂಬಿಕೆ ಇಟ್ಟಿದ್ದಾರೆ ಎನ್ನುತ್ತದೆ ನ್ಯೂಸೈಂಟಿಸ್ಟ್.

ಸಂಕಟ ಬಂದಾಗ ವೆಂಕಟರಮಣ ಎನ್ನುವ ಗಾದೆ ಸುಳ್ಳಲ್ಲವಂತೆ. ಎರಡನೆಯ ವಿಶ್ವಯುದ್ಧವಾದ ಮೇಲೆ ಉಂಟಾದ ತೀವ್ರ ಆರ್ಥಿಕ ಸಂಕಟದ ಸಮಯದಲ್ಲಿ ಚರ್ಚಿಗೆ ಹೋಗುವವರ ಸಂಖ್ಯೆ ಅತಿಯಾಗಿ ಹೆಚ್ಚಿತ್ತು ಎಂದು ಒಂದು ಸರ್ವೆ ತಿಳಿಸಿದೆ. ಹೀಗೆ ಸಂಕಟ ಅಥವಾ ಅನಿಶ್ಚಿತತೆ ಎದುರಾದಾಗಲೆಲ್ಲ ಧಾರ್ಮಿಕ ಭಾವ ಹೆಚ್ಚಾಗುತ್ತದೆ. ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿನ ಜನರ ಆಕ ಹಾಗೂ ರಾಜಕೀಯ ಪರಿಸ್ಥಿತಿಗಳ ಜೊತೆಗೆ ಅವರಲ್ಲಿರುವ ಧಾರ್ಮಿಕ ಅಥವಾ ವಭೀರುತ್ವವನ್ನು ತಾಳೆ ಹಾಕಿದಾಗ, ಅತಿ ಸಂಕಟದಲ್ಲಿರುವ ಪ್ಯಾಲೆಸ್ತೀನ್, ಅಫ್ಾನಿಸ್ತಾನ, ಈಜಿಪ್ಟ್, ಆಫ್ರಿಕಾದ ಕೆಲವು ರಾಷ್ಟ್ರಗಳ ಜನತೆಯಲ್ಲಿ ದೇವರ ಬಗ್ಗೆ ವಿಶ್ವಾಸ ಹೆಚ್ಚಿರುವುದು ಕಂಡು ಬಂತು ಎನ್ನುತ್ತದೆ ನ್ಯೂಸೈಂಟಿಸ್ಟ್. ಚುನಾವಣೆ ಬಂದ ಕೂಡಲೆ ದೇವಸ್ಥಾನಗಳಿಗೆ ಭೇಟಿ ಕೊಡುವ ರಾಜಕಾರಣಿಗಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣ ಗೊತ್ತಾಯಿತಲ್ಲ!? ಸಂಕಟದ ಸಮಯದಲ್ಲಿಯೂ ಸ್ವಾಸ್ಥ್ಯ ಕಾದುಕೊಳ್ಳುವ ಸಾಮಥ್ರ್ಯವನ್ನು ವಭಯ ಮನುಷ್ಯನಿಗೆ ತಂದು ಕೊಟ್ಟಿದೆಯಾದ್ದರಿಂದ ಅದು ಮಾನವ ಸಮಾಜದಲ್ಲಿ ಉಳಿದುಕೊಂಡಿದೆ ಎನ್ನುವುದು ತರ್ಕ. ಹಾಗಿದ್ದರೆ ಅದು ಜೈವಿಕ ಅಂಗದ ಭಾಗವಾಗಿರಬೇಕಲ್ಲ? ಎಲ್ಲಿದೆ ಈ ವಭೀರುತನ?

ಮಕ್ಕಳ ಮನಸ್ಸು ಇದಕ್ಕೆ ಉತ್ತರ ನೀಡಬಲ್ಲುದು. ಕಮಕ್ಕಳು ದೇವರ ಸಮಾನಕಿ ಎನ್ನುವ ಉಕ್ತಿಯೊಂದಿದೆ. ಮನಶ್ಶಾಸ್ತ್ರಜ್ಞರ ಪ್ರಕಾರ ಮಕ್ಕಳ ಮನಸ್ಸು ಶುಭ್ರ. ಅದರಲ್ಲಿರುವ ಭಾವಗಳು ಸಹಜ ಮಾನವ ಭಾವಗಳು. ಕಲಿಕೆಯಿಂದ ಬದಲಾದವುಗಳಲ್ಲ. ಹೀಗಾಗಿ ಮಕ್ಕಳ ಮನಸ್ಸು ಮಾನವನಲ್ಲಿ ಇದ್ದಿರಬಹುದಾದ ಮೂಲ ಮನಸ್ಸಿನ ಪ್ರತೀಕ ಎನ್ನುವ ನಂಬಿಕೆ ಮನಶ್ಶಾಸ್ತ್ರಜ್ಞರದ್ದು. ಪ್ರಪಂಚದ ಎಲ್ಲ ಮಕ್ಕಳೂ ಮುಗ್ಧವಾಗಿ ದೇವರನ್ನು ನಂಬುತ್ತಾರಂತೆ. ಹಾಗಿದ್ದ ಮೇಲೆ ವಭೀರುತ್ವ ಮಾನವನ ಸಹಜ ಸ್ವಭಾವವೇ? ಇದು ಸಹಜ ಸ್ವಭಾವ ಎಂದ ಮೇಲೆ ಅದು ಜೈವಿಕ ಗುಣವೂ ಆಗಿರಬೇಕಾದ್ದು ನ್ಯಾಯವಷ್ಟೆ? ಜೈವಿಕ ಗುಣ ಎಂದ ಮೇಲೆ ಅದು ಯಾವುದಾದರೂ ಅಂಗದ ಸ್ವಭಾವವೂ ಆಗಿರಬೇಕಲ್ಲ? ಅಂದರೆ ಮಾನವನ ಮಿದುಳಿನ ರಚನೆಯಿಂದಾಗಿಯೇ ದೇವರ ಸೃಷ್ಟಿ ಆಗಿರಬಹುದೇ ಎನ್ನುವುದು ಜೀವವಿಜ್ಞಾನಿಗಳ ಪ್ರಶ್ನೆ. ಏಕೆಂದರೆ, ಆಗಷ್ಟೆ ಹುಟ್ಟಿದ ಮಕ್ಕಳೂ ಜೀವಿಗಳು ಮತ್ತು ಅಜೀವಿಗಳನ್ನು ಪ್ರತ್ಯೇಕಿಸಿ ಗುರುತಿಸುತ್ತಾರಂತೆ. ಅಂದರೆ ಜೀವವಿಲ್ಲದ ವಸ್ತುವೊಂದು ಜೀವಿಯ ಹಾಗೆ ನಡೆದುಕೊಂಡಾಗ ಅವರಿಗೆ ಆಶ್ಚರ್ಯ ಆಗುತ್ತದೆ. ಚಲಿಸುವ ವಸ್ತುಗಳನ್ನು ಅವರು ಅತಿ ಆಶ್ಚರ್ಯದಿಂದ ನೋಡುವುದು ಇದೇ ಕಾರಣದಿಂದಾಗಿ ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು. ಅಂದರೆ ಹೀಗೆ ಜೀವಿಗಳನ್ನೂ ಅಜೀವಿಗಳನ್ನೂ ಪ್ರತ್ಯೇಕಿಸುವ ಸಾಮಥ್ರ್ಯ ಸಹಜವಾಗಿಯೇ ನಮ್ಮ ಮಿದುಳಿಗೆ ಲಭಿಸಿರಬೇಕು. ಅಂದರೆ ಭೌತಿಕ ವಸ್ತುಗಳನ್ನೂ ಅವುಗಳ ಮಾನಸಿಕ ಚಟುವಟಿಕೆಗಳನ್ನೂ ನಮ್ಮ ಮಿದುಳು ಪ್ರತ್ಯೇಕಿಸಿ ಗಮನಿಸುತ್ತದೆ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ಭೌತಿಕವಾಗಿ ಕಾಣದಿದ್ದರೂ, ಮಾನಸಿಕ ಎನ್ನಬಹುದಾದ ವಿದ್ಯಮಾನಗಳನ್ನು ಮಿದುಳು ಕಲ್ಪಿಸಿಕೊಳ್ಳಬಲ್ಲುದು. ಇದುವೇ ದೇವರ ಸೃಷ್ಟಿಗೆ ಕಾರಣವಿರಬೇಕು ಎನ್ನುವ ತರ್ಕವಿದೆ.

ಅಮೆರಿಕೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರಾಲಾಜಿಕಲ್ ಡಿಸಾರ್ಡಸ್ ಅಂಡ್ ಸ್ಟ್ರೋಕ್ ಸಂಸ್ಥೆಯ ನರತಜ್ಞ ಜೋರ್ಡನ್ ಗ್ರಾಫ್ಮನ್ ಮತ್ತು ಸಂಗಡಿಗರು, ನಮ್ಮ ಮಿದುಳಿನೊಳಗೆ ವಭೀರುತ್ವ ಎಲ್ಲಿರಬಹುದು ಎನ್ನುವುದನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ. ಇವರು ದೇವರನ್ನು ನಂಬುವ ಹಾಗೂ ಅಷ್ಟಾಗಿ ನಂಬದ ವ್ಯಕ್ತಿಗಳ ಮೇಲೆ ಮೂರು ಪ್ರಯೋಗಗಳನ್ನು ನಡೆಸಿದರು. ಮೊದಲನೆಯ ಪ್ರಯೋಗದಲ್ಲಿ ಅವರಿಗೆ ದೇವರ ಪರಿಕಲ್ಪನೆಯನ್ನು ಮೂಡಿಸುವಂತಹ ವಾಕ್ಯಗಳನ್ನು ಓದಲು ತಿಳಿಸಲಾಯಿತು. ಅದರಲ್ಲಿ ಯಾವುದು ಸರಿ ಅಥವಾ ತಪ್ಪು ಎನ್ನುವುದನ್ನು ಅವರು ಸೂಚಿಸಬೇಕಿತ್ತು.  ಎರಡನೆಯ ಪ್ರಯೋಗದಲ್ಲಿ ಪ್ರಾಪಂಚಿಕ ವಿದ್ಯಮಾನಗಳಿಗೆ ದೇವರು ಅಥವಾ ಇನ್ಯಾವುದೋ ಶಕ್ತಿ ಕಾರಣ ಎನ್ನುವುದನ್ನು ಸೂಚಿಸುವ ವಾಕ್ಯಗಳಿದ್ದುವು. ಮೂರನೆಯ ಪ್ರಯೋಗದಲ್ಲಿ ಧಾರ್ಮಿಕ ನಂಬಿಕೆಗಳನ್ನು ಕುರಿತ ವಾಕ್ಯಗಳಿದ್ದುವು.  ಓದುವಾಗ ಹಾಗೂ ಆ ಬಗ್ಗೆ ಅಭಿಪ್ರಾಯ ತಿಳಿಸುವಾಗ ಆ ವ್ಯಕ್ತಿಗಳ ಮಿದುಳಿನ ಚಿತ್ರಗಳನ್ನು ತೆಗೆಯಲಾಯಿತು.  ಧಾರ್ಮಿಕತೆಯ ನೆಲೆ ಇರುವುದು ಈ ಮೂರು ಭಾವಗಳಲ್ಲಿ ಎನ್ನುವುದು ಮನಶ್ಶಾಸ್ತ್ರಜ್ಞರ ವಿಶ್ವಾಸ.

ಮಿದುಳಿನ ಚಿತ್ರಗಳ ಅಧ್ಯಯನ ನಡೆಸಿದಾಗ ಆಯಾ ಸಂದರ್ಭದಲ್ಲಿ ಮಿದುಳಿನ ಯಾವ ಭಾಗ ಚಟುವಟಿಕೆಯಿಂದಿರುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ದೇವರ ಪರಿಕಲ್ಪನೆಯ ಕುರಿತ ಪ್ರಶ್ನೆಗಳ ಸಂದರ್ಭದಲ್ಲಿ ಮುಖಾಮುಖಿಯಾದವರ ಭಾವಗಳನ್ನು ಅರ್ಥೈಸಲು ನೆರವಾಗುವ ಮಿದುಳಿನ ಭಾಗಗಳು ಚಟುವಟಿಕೆಯಿಂದಿದ್ದುವು. ದೇವರಿಂದಾಗಿಯೇ ಪ್ರಪಂಚದ ವಿದ್ಯಮಾನಗಳು ನಡೆಯುತ್ತಿವೆ ಎನ್ನುವುದನ್ನು ಹೇಳುವಾಗ ಭಾಷೆ ಹಾಗೂ ಭಾವನೆಗಳನ್ನು ಗುರುತಿಸುವ ಮಿದುಳಿನ ಅಂಗಗಳು ಚುರುಕಾಗಿದ್ದುವು. ಮೂರನೆಯ ಪ್ರಯೋಗದಲ್ಲಿ ಅನುಭವಜ್ಞಾನವನ್ನು ಪ್ರತಿನಿಧಿಸುವ ಮಿದುಳಿನ ಭಾಗಗಳು ಚುರುಕಾದುವು.  ಈ ಮೂರೂ ಅಂಶಗಳೂ ಮಾನವ ಅತ್ಯುನ್ನತ ಮಟ್ಟದ ಸಮಾಜಜೀವಿಯಾಗುವುದಕ್ಕೆ ನೆರವಾಗುವಂತಹವು. ಕಲಿಕೆ, ಕಲ್ಪನೆ ಹಾಗೂ ಮತ್ತೊಬ್ಬ ವ್ಯಕ್ತಿಯ ಭಾವಗಳನ್ನು ಅರ್ಥೈಸಲು ಇವು ನೆರವಾಗಿವೆ. ಹೀಗಾಗಿ ಎಲ್ಲ ಜೀವಿಗಳನ್ನೂ ಮೆಟ್ಟಿ ನಿಲ್ಲಬಲ್ಲ ಸಮಾಜವನ್ನು ಮಾನವ ಕಟ್ಟಿಕೊಂಡಿದ್ದಾನೆ ಎನ್ನುವುದು ಜೀವವಿಜ್ಞಾನಿಗಳ ತರ್ಕ. ಆ ಅಂಗಗಳೇ ದೇವರ ಕಲ್ಪನೆಗೂ ಹಾದಿ ಮಾಡಿಕೊಟ್ಟಿವೆಯೇ ಎನ್ನುವ ಕೌತುಕಮಯ ಪ್ರಶ್ನೆಯನ್ನು ಗ್ರಾಫ್ಮನ್ರ ಪ್ರಯೋಗ ಕೇಳುತ್ತಿದೆ. ದೇವರೆನ್ನುವುದು ನಮ್ಮ ಸಹಜ ವಿಕಾಸದ ಹಾದಿಯಲ್ಲಿ ಆಗಿರುವ ಒಂದು ಉಪೋತ್ಪನ್ನ ಭಾವ ಎನ್ನುತ್ತದೆ ಈ ತರ್ಕ. ಹೌದೇ?