ಸಂಖ್ಯಾವಾಚಕ, ಪರಿಮಾಣ ವಾಚಕಗಳು

ನಮ್ಮ ಆಟಗಳಲ್ಲಿ ಆಟದ ಕ್ರಿಯೆಯಲ್ಲಿ ಅನೇಕ ಪರಿಮಾಣವಾಚ ಸಂಖ್ಯಾ ವಾಚಕಗಳನ್ನು ಬಳಸುವ ಸಂದರ್ಭಗಳು ಬರುತ್ತವೆ. ಸಾಮಾನ್ಯ ವ್ಯಾವಹಾರದ ಭಾಷಾ ಬಳಕೆಯಲ್ಲಿ ಇಲ್ಲದ ಪರಿಮಾಣ, ಸಂಖ್ಯೆಸೂಚಕ ರೂಪಗಳು ಆಟದ ವಲಯದಲ್ಲಿ ಬಳಕೆಯಲ್ಲಿವೆ.

ಉದಾಹರಣೆಗೆ ವಡ್ಡಿ ನಾಲ್ಕು ಸಂಖ್ಯೆಯ ಪರಿಮಾಣವನ್ನು ಸೂಚಿಸುವ ಪದ ಸಾಮಾನ್ಯವಾಗಿ ಹುಣಸೇ ಬೀಜ, ಗೋಲಿ, ಗಜ್ಜುಗದ ಒಂದು ಗುಂಪಿನ ಪರಿಮಾಣವನ್ನು ಸೂಚಿಸುತ್ತದೆ. ಇದು ಮೈಸೂರು ಪರಿಸರದ ಹುಣಸೆ ಬೀಜ ಬಳಸಿ ಆಡುವ ಆಟದಲ್ಲಿ ನಾಲ್ಕು ಪರಿಮಾಣದ ಹುಣಸೆ ಬೀಜಗಳಿಗೆ ಬಳಸಿದರೆ ಬಿಜಾಪುರ ಪರಿಸರದಲ್ಲಿ ನಾಲ್ಕು ಗೋಲಿಗಳಿಗೆ ಬಳಕೆಯಾಗುತ್ತದೆ. ಹಾಗೆಯೇ ಉತ್ತರ ಕನ್ನಡದ ಒಂದು ಆಟದಲ್ಲಿ ‘ಹಂಡಿ’ ಎನ್ನುವ ಪರಿಮಾಣವಾಚಕ ಪದವಿದೆ. ಈ ಶಬ್ಧ ಸಾಮಾನ್ಯ ವ್ಯಾವಹಾರಿಕ ಬಳಕೆಯಲ್ಲಿ ಯಾವುದೇ ಒಳನುಡಿಗಳಲ್ಲೂ ಕಂಡುಬರುತ್ತಿಲ್ಲ. ಹಾಗೆಯೇ ಸಾಮಾನ್ಯವಾಗಿ ತೇಯ್ದ ಹುಣಸೆ ಬೀಜಗಳನ್ನು ಬಳಸಿ ಆಡುವ ಆಟ ‘ಚೌಕಾಬಾರಾ’ ಇದನ್ನು ಚವ್ವ, ಪಚ್ಚಿ, ಗಟ್ಟದ ಮನೆ ಮುಂತಾದ ಹೆಸುರುಗಳಿಂದ ಕರ್ನಾಟಕದ ಎಲ್ಲಾ ಕಡೆಯೂ ಆಡುತ್ತಾರೆ. ಇಲ್ಲಿನ ವೈಶಿಷ್ಟ್ಯವೆಂದರೆ ಒಂದರಿಂದ ನಾಲ್ಕು ಮತ್ತು ಎಂಟು, ಐದು ಸಂಖ್ಯಾವಾಚಕಗಳು  ಬಳಕೆಯಾಗುತ್ತವೆ. ಆಟದ ಹೆಸರು ‘ಚೌಕಾಬಾರಾ’  ಅಂದರೆ ನಾಲ್ಕು ಮತ್ತು ಎಂಟು, ಆಟದ ಹೆಸರಿನಲ್ಲಿರುವ ಸಂಖ್ಯಾವಾಚಕಗಳು ಕನ್ನಡ ಮೂಲವಲ್ಲ ಮರಾಠಿ, ಉರ್ದು, ಪರ್ಶಿಯೋ ಅರಾಬಿಕ್ ಯಾವುದೇ ಮೂಲದಿಂದ ಈ ಆಟ ಕನ್ನಡ ಪರಿಸರಕ್ಕೆ ಬಂದಿದೆ ಎಂಬುದನ್ನು ಇದರಲ್ಲಿ  ಬಳಕೆಯಾಗುವ  ಸಂಖ್ಯಾವಾಚಕಗಳು  ಸುಳಿವು ಕೊಡುತ್ತವೆ. ಈ ಆಟದ ಎಲ್ಲಾ ಹಂತಗಳಲ್ಲಿಯೂ ಏಕರೂಪದಲ್ಲಿ ಕನ್ನಡೇತರ ಶಬ್ಧಗಳು ಬಳಕೆಯಾಗುವುದಿಲ್ಲ ದೊರೆತಿರುವ ಮಾಹಿತಿಯ ಪ್ರಕಾರ ಆಟದ ನಕ್ಷೆಗೆ ಸ್ಥಳೀಯ ಒಳನುಡಿ ರೂಪಗಳೇ ಇವೆ. ಮನೆ, ಗಟ್ಟ ಇತ್ಯಾದಿ ಹಾಗೆಯೇ ಆಟದಲ್ಲಿ ನಡೆಸಲು ಬಳಸುವ ವಸ್ತುಗಳಿಗೆ ‘ಕಾಯಿ’ ಮತ್ತು ‘ಹಣ್ಣು’ ಎಂಬ ಅಚ್ಚಗನ್ನಡ ರೂಪಗಳೂ ಆಟದ ಪ್ರಕ್ರಿಯೆಯಲ್ಲಿ ಎದುರಾಳಿಯ ಕಾಯಿಯನ್ನು ಹೊರಹಾಕುವುದನ್ನು ಕಾಯಿಕೊಲ್ಲು, ಕಾಯಿಕಡಿ. ಕಾಯಿಹೊಡಿ ಎಂಬ ಅಚ್ಚ ಕನ್ನಡದ ಕ್ರಿಯಾ ರಚನೆಗಳೇ ಇವೆ. ಆದರೆ ಪ್ರಾದೇಶಿಕವಾಗಿ ಭಿನ್ನವಾದ ವಿಶೇಷವೆಂದರೆ ಬಹುಪಾಲು ಕರ್ನಾಟಕದ ಎಲ್ಲಾ ಕಡೆ (ಕರಾವಳಿ ಮಾಹಿತಿ ಬಿಟ್ಟು)ಯೂ ಆಟದ ಹೆಸರು ಅಥವಾ ಆಟದ ವಿಧಾನದಲ್ಲಿ ಬಳಕೆಯಾಗುವ ಕೆಲವು ಸಂಖ್ಯಾವಾಚಕಗಳು ಅನ್ಯದೇಸೀ ಮೂಲದ್ದಾಗಿವೆ. ಇದು ಭಾಷಿಕವಾಗಿ ಸಾಂಸ್ಕೃತಿಕವಾಗಿ ಅನೇಕ ಹೊಸ ಅರಿವುಗಳಿಗೆ ದಾರಿಯಾಗಬಲ್ಲದು.

ಉದಾಹರಣೆಗೆ ಮೈಸೂರು ಪರಿಸರದಲ್ಲಿ ‘ಚೌಕಾಬಾರಾ’  ಆಟ ‘ಗಟ್ಟದ ಮನೆ’ ಆಟ ಎರಡೂ ಹೆಸರು ಇದ್ದರೂ ಗಟ್ಟದ ಮನೆ ಮತ್ತು ತೇಯ್ದ ಹುಣಸೇ ಬೀಜಗಳನ್ನು ಬಳಸಿ ಆಡುವ ಆಟದಲ್ಲಿ ಚೌಕ ನಾಲ್ಕು ಸಂಖ್ಯೆಯನ್ನು ಸೂಚಿಸುತ್ತದೆ. ಹಾಗೆಯೇ ಪಂಜ – ಐದು, ಒಂಟಿ – ಒಂದು , ಜೋಡಿ – ಎರಡು ಸಂಖ್ಯೆಗಳನ್ನು ಸೂಚಿಸುತ್ತವೆ. ಎಂಟು, ಮೂರು ಸಂಖ್ಯೆಗಳಿಗೆ ಕನ್ನಡ ಪದಗಳೇ ಇವೆ. ಆದರೆ ಬಿಜಾಪುರ, ಬೀದರ್  ಪರಿಸರದಲ್ಲಿ ಎಕ್ – ಒಂದು, ದೋನಿ – ಎರಡು, ತೀನಿ – ಮೂರು, ಚಕ್ಕ -ನಾಲ್ಕು ಬಾರಾ – ಎಂಟು, ಸಂಖ್ಯೆಯನ್ನು ಸೂಚಿಸುತ್ತದೆ. ಒಂದರಿಂದ ಮೂರರವರೆಗಿನ ಸಂಖ್ಯೆಗಳಿಗೆ ವ್ಯಾವಹಾರಿಕವಾಗಿ ಪರಿಸರದ ಪ್ರಭಾವವಿರುವ ಉರ್ದು, ಮರಾಠಿ ಪ್ರಭಾವವೆಂದು ಭಾವಿಸಿದರೂ ಚಕ್ಕ ಮತ್ತು ಬಾರಾ ಪದಗಳ ಸೂಚಿಸುವ ಸಂಖ್ಯೆಗಳು ವ್ಯಾವಹಾರಿಕ  ಬಳಕೆಯಲ್ಲಿ ಆರು ಮತ್ತು ಹನ್ನೆರಡನ್ನು ಸೂಚಿಸುವ ಸಂಖ್ಯೆಗಳಾಗಿವೆ. ಹಾಗೆಯೇ ಇದೇ ಆಟದಲ್ಲಿ ಒಂದು ಸಂಖ್ಯೆಯ ಸೂಚನೆಗೆ ಚಿತ್ರದುರ್ಗ, ತುಮಕೂರಿನ ಕೆಲವು ಭಾಗಗಳಲ್ಲಿ ಕುಲ್ಡಿ, ಕುಲ್ಡಿ ಎಂದಿದ್ದರೆ ಮೈಸೂರು ಪರಿಸರದಲ್ಲಿ ವಂಟಿ ಕೆಲವು ಕಡೆ ವಚ್ಚಿ ರೂಪ ಬಳಕೆಯಲ್ಲಿದೆ. ಹಾಗೆಯೇ ಬೇರೆ ಬೇರೆ ಆಟದ ಅಳತೆ ಪರಿಮಾಣ, ಮಾಪಕ ಶಬ್ಧಗಳು ಬೇರೆ ಬೇರೆಯಾಗಿ ವಿಶಿಷ್ಟವಾಗಿವೆ. ದಾಪು, ಮೊಳ, ಗೇಣು, ಚೋಟ, ಎಬ್ಬ, ಕಿರ್ಟೋಟ ಅಂದರೆ ದೈಹಿಕ ಆಂಗಾಂಗಳ ಅಳತೆ ಪರಿಮಾಣದ ಮೂಲಕ ಕೆಲವು ಆಟಗಳಲ್ಲಿ ಸೂಚಿತವಾದರೆ, ಕೆಲವು ಆಟಗಳಲ್ಲಿ ಆಟಕ್ಕೆ ಬಳಸಿದ ಪರಿಕರದ ಅಳತೆ ಮಾಪನಗಳು ಮಾನದಂಡವಾಗುತ್ತದೆ. ಉದಾಹರಣೆಗೆ ಗಿಲ್ಲಿದಾಂಡು ಆಟದಲ್ಲಿ ಗಿಲ್ಲಿಯ ಅಥವಾ ದಾಂಡಿನ ನೂರು ಮಾಪನಕ್ಕೆ ಒಂದು ‘ಬ್ಯಾಂಕ್’ ಇದು ಮೈಸೂರು, ಮಂಡ್ಯ, ಬೆಂಗಳೂರು, ಹಾಸನ ಪರಿಸರದಲ್ಲಿ ಇದ್ದರೆ, ಮಾನ್ವಿ ಪರಿಸರದಲ್ಲಿ ‘ಹತ್ತರ’ ಅಳತೆಗೆ ‘ಜುಕ್ಕ’ ಎನ್ನುವ ಪದವಿದೆ. ಅನೇಕ ಆಟಗಳಲ್ಲಿ ಆಟದ ವಿಧಾನದಲ್ಲಿ ಆಟದ ನಡುವೆ ಆಟಗಾರರು ಆಟದ ಕೆಲವು ಹಂತಗಳಲ್ಲಿ ಸಂಖ್ಯಾವಾಚಿಗಳನ್ನು ಉಚ್ಚರಿಸಬೇಕಾಗುತ್ತದೆ. ಆದರೆ ಹಾಗೆ ಉಚ್ಚರಿಸುವ ಸಂಖ್ಯಾವಾಚಕಗಳ ಜೊತೆ ಮತ್ತೊಂದು ಪದ ಅಥವಾ ಪದ ಸಮೂಹವನ್ನು ಸೇರಿಸಿ ವಿಶಿಷ್ಟ ರಚನೆಯನ್ನಾಗಿ ಮಾಡುತ್ತಾರೆ ಉದಾಹರಣೆಗೆ ಕನಕಪುರ ಪರಿಸರದ ಆಣೆಕಲ್ಲಾಟದ ಒಂದು ವಿಧದಲ್ಲಿ ಹೀಗೆ ಹೇಳುತ್ತಾರೆ.

ಗುಜ್ಜಾಲೆ ಗುಮ್ಮ ಒಂದಾಗಿ
ಒಮ್ಮೆ ಕಲ್ಲು ಎರಡಾಗಿ
ಮೂರು ಮುತ್ತಿನ ಚೆಂಡಾಗಿ
ನಾಲ್ಕು ಬಾಳೆ ದಿಂಡಾಗೆ
ಐದನೇ ಪಂಚನೇ ಕಲ್ಲಾಗಿ

ಹಾಗೆಯೇ ಮಂಡ್ಯ ಪರಿಸರದ ಆಣೆಕಲ್ಲಾಟದಲ್ಲಿ

ಒಂದು ಸೀಬ್ ಸಿಬಿ
ಎರಡು ಗರಡಾಳ
ಮೂರು ಮುತ್ತಪ್ಪ
ನಾಲ್ಕು ನಾಗೇಂದ್ರ
ಐದು ಪಂಚಾಂಗ
ಆರು ದಾಳಿಂಬಿ
ಏಳು ಕೊಟಿಂಬಿ
ಎಂಟರಾಯ ಗಂಟೆ
ಗೊಮ್ಮಣ್ಣ ಗೋಲಿ
ತುಬ್ನತ್ ನಿನ್ ತಾಲಿ

ಹಾಗೆಯೇ ಉತ್ತರ ಕನ್ನಡದ ಶೇಡಿ ಮೀಡಿ ಎಂಬ ಹರಳಾಟದಲ್ಲಿ

ಶೇಡಿ ಮೀಡಿ ಒಂದು
ಒಂದು ಕಲ್ಲ ಕಂಬ
ಕಸ್ಕಿನೆರಡು ತುಂಡು
ಮೂರು ಮುತ್ನ ಚೆಂಡು
ನಾಲ್ಕು ಮಲ್ಗೆ ದಿಂಡು
ಐದು ಸೃಷ್ಟಿ ಬಟ್ಟು
ಆರೊಂದಂಬಾಳಾರು.

ಹಾಗೆಯೇ ಮೈಸೂರು ಪರಿಸರದ ಒಂದು ಮಕ್ಕಳಾಟದಲ್ಲಿ

ಒಂದು ಒಂದು ಬೇಳೆ
ಬೇಳೆಗೊಂದು ಬೇಳೆ
ಎರಡು ಗರಡಿ ಸಾಲು
ಮೂರು ಮುತ್ತಿನ ಚೆಂಡು
ನಾಕು ನೆಲ್ಲಿ ಹಾಕು
ಐದು ಅಜ್ಜಿ ತಲೆದಿಂಬು
ಆರು ಬಾರೋ ಬಸವಣ್ಣ
ಏಳು ಕಡಿಯೋ ಚೇಳು
ಎಂಟು ನಾಗರ ಗಂಟು
ಒಂಭತ್ತು ಸಿರಿ ಸಂಪತ್ತು
ಹತ್ತು ತಿಂಗಳು ತುಂಬಿತ್ತು

ಈ ಬಗೆಯ ಪ್ರಾಸ ರಚನೆಗಳು ಸಂಖ್ಯಾವಾಚಕಗಳೊಂದಿಗೆ ಸೇರಿ ಬರುವುದು ಬಹುಪಾಲು ಎಲ್ಲಾ ಕಡೆಯೂ ಇದೆ. ವಿಶೇಷತೆ ಎಂದರೆ ಈ ರಚನೆಗಳು ಸಂಖ್ಯೆಗಳೊಂದಿಗೆ ಕೂಡಿ ಬಂದಿದ್ದು ಆಟದ ನೆಲೆಯಲ್ಲಿ ಇವುಗಳ ಬಳಕೆಯ ಉದ್ದೇಶ ಸೀಮಿತವಾದರೂ ಇದನ್ನು ಬಳಸುತ್ತಿರುವ, ಆಡುತ್ತಿರುವ ಸಮುದಾಯದ ಪರಿಸರದ ಪರಂಪರೆಯ, ಬದುಕಿನ , ಲೋಕದೃಷ್ಟಿಯ ವಿವರಗಳನ್ನು , ಮೇಲು ನೋಟಕ್ಕೆ ಅರಿವಿಗೆ ನಿಲಿಕದ ಆಳದ ಸಂಕೀರ್ಣ ವಿವರಗಳನ್ನು ಘನೀಕರಿಸಿಕೊಂಡಂತಿದೆ.

ಮೊದಲೇ ಹೇಳಿದ ಸಂಖ್ಯಾ ವಾಚಕ, ಪರಿಮಾಣ ವಾಚಕ ರೂಪಗಳು ಒಂದು ಪ್ರದೇಶದ ಎಲ್ಲಾ ಆಟಗಳಿಗೂ ನಿರ್ದಿಷ್ಟವಲ್ಲ. ಬೇರೆ ಬೇರೆ ಆಟಗಳಿಗೆ ಬೇರೆ ಬೇರೆ ಭಾಷಿಕ ರೂಪಗಳು ಇವೆ. ಉದಾಹರಣೆಗೆ ಚೌಕಾಬಾರಾ ಆಟದಲ್ಲಿ ಉರ್ದು, ಮರಾಠಿ ರೂಪಗಳು ಏಕ್, ದೋನಿ, ತೀನಿ ಇದ್ದರೆ ಅದೇ ಬೆರೊಂದು ಆಟದಲ್ಲಿ ಅವು ಅಚ್ಚಗನ್ನಡದ ಒಂದು, ಎರಡು, ಮೂರು ರೂಪಗಳಿವೆ. ಅಂದರೆ ಆಟದೊಳಗಿನ ನಿರ್ದಿಷ್ಟ ಭಾಷಾ ಬಳಕೆಯ ರೂಪಗಳು ಆಟದ ಒಟ್ಟಾರೆ ಚೌಕಟ್ಟಿನಲ್ಲಿ ನಿರ್ದಿಷ್ಟ ಆಟಗಳಿಗೆ ನಿಷ್ಠವಾಗಿವೆ.

ವಿಶಿಷ್ಟ ಕ್ರಿಯಾರಚನೆಗಳು

ಭಾಷೆಯಲ್ಲಿ ಕ್ರಿಯಾಪದಗಳು ಬದಲಾವಣೆಗೆ ಒಳಪಡುವುದು ಕಡಿಮೆ ಅಂದರೆ ನಾಮಪದಗಳಿಗೆ ಸಂಬಂಧಿಸಿ ಭಾಷೆಯಲ್ಲಿ ತೀವ್ರವಾದ, ವ್ಯಾಪಕವಾದ ಪಲ್ಲಟಗಳು ಬದಲಾವಣೆಗಳು ನಡೆಯುತ್ತಿರುತ್ತವೆ. ಸಾಂದರ್ಭಿಕವಾದ ವಿವಿಧ ಕಾರಣಗಳಿಂದ ದೇಶ್ಯ ಪದಗಳ ಬದಲಿಗೆ ಅನ್ಯದೇಶ್ಯ ಪದಗಳು ಬಳಕೆಯಾಗುತ್ತವೆ. ಹೊಸವಸ್ತುಗಳಿಗೆ ಹೊಸ ರಚನೆಗಳನ್ನು ನಿರ್ಮಿಸಿಕೊಳ್ಳುವುದು ಭಾಷೆಯಲ್ಲಿ ಸಹಜ ಪ್ರಕ್ರಿಯೆ. ಆದರೆ ಕ್ರಿಯಾರಚನೆಗಳ ವಿಷಯದಲ್ಲಿ ಇಂತಹ ಬದಲಾವಣೆಗಳು  ನಡೆಯದ್ದಿದ್ದರೂ ಹಿಂದಿನಿಂದ ಬಳಕೆಯಲ್ಲಿದ್ದ ಎಲ್ಲಾ ಕ್ರಿಯಾ ಪದಗಳೂ ಪ್ರಸ್ತುತ ಬಳಕೆಯ ಕನ್ನಡದಲ್ಲಿ ಇಲ್ಲ. ಉದಾಹರಣೆಗೆ  ಬಟ್ಟೆ ತೊಳೆಯುವ ಪ್ರಕ್ರಿಯೆಯಲ್ಲಿ ವಿವಿಧ ಕ್ರಿಯಾರಚನೆಗಳು ಕನ್ನಡದಲ್ಲಿ ಬಳಕೆಯಾಗುತ್ತಿದ್ದವು.

ಉದಾ : ಒಗಿ, ಸೆಣೆ, ಜಾಲಿಸು, ಕುಕ್ಕು, ಹಿಂಡು, ಉನಿಸು ಇತ್ಯಾದಿ …….

ಆಧಿನಿಕ ಕನ್ನಡ ಬಳಕೆಯ ಸಂದರ್ಭದಲ್ಲಿ ಬಟ್ಟೆ ‘ತೊಳೆ’ ಮತ್ತು ಬಟ್ಟೆ ‘ವಾಶ್ ‘ ಮಾಡು ಎಂಬ ಎರಡು ರಚನೆಗಳು ಮಾತ್ರ ಬಳಕೆಯಲ್ಲಿವೆ. ಅಂದರೆ ಇಲ್ಲಿ ಬಟ್ಟೆ ತೊಳೆಯುವ ಪ್ರಕ್ರಿಯೆಯಲ್ಲಿ ಜರುಗುತಿದ್ದ ವಿವಿಧ ಕ್ರಿಯೆಗಳಿಗೆ ಬೇರೆ ಬೇರೆ ಶಬ್ದಗಳು ಬಳಕೆಯಾಗುತ್ತಿದ್ದರೂ ಆಧುನಿಕದ ಕನ್ನಡದಲ್ಲಿ ಈ ಎಲ್ಲಾ ರಚನೆಗಳೂ ಬಳಕೆಯಾಗುವುದಿಲ್ಲ. ಇದಕ್ಕೆ ಕಾರಣಗಳು ಬೇರೆ ಬೇರೆ ಇರಬಹುದು. ಹಾಗೆಯೇ ಕೃಷಿ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಬಳಕೆಯಾಗುತ್ತಿದ್ದ ಊರು, ಯಡಿ, ತೊಡಿ, ವನಿ, ಮುಂತಾದ ರಚನೆಗಳೂ ಆಧುನಿಕರ ಕನ್ನಡದಲ್ಲಿ ಬಳಕೆಯಿಲ್ಲಿ ಇಲ್ಲ. ಈ ಎಲ್ಲಾ ರಚನೆಗಳೂ ನಿರ್ದಿಷ್ಟ ಕ್ರಿಯೆಗಳ ಸೂಚಕಗಳಾಗಿದ್ದವು. ಆ ಕ್ರಿಯೆಗಳು ಈಗಲೂ ನಡೆಯುತ್ತಿದ್ದರೂ ಅವುಗಳಿಗೆ ಸಂಬಂಧಿಸಿದ ಕ್ರಿಯಾರಚನೆಗಳ ಸ್ಥಾನವನ್ನು ಆಧುನಿಕ ಕನ್ನಡದಲ್ಲಿ ಕನ್ನಡದ್ದೇ ಆದ ಒಂದೇ ಕ್ರಿಯಾಪದಿಂದ ನಿರ್ವಹಿಸಲಾಗುತ್ತಿದೆ. ಕಾಯಿಊರು, ಕಾಯಿಯಡಿ, ಕಾಯಿಕೀಳು ಎಂಬ ರಚನೆಗಳು ಬೇರೆ ಬೇರೆ ಸ್ವರೂಪದ ಕ್ರಿಯಾ ಸೂಚಕಗಳು. ಅವರೆ ಕಾಯಿಯಂತಹ ಹತ್ತಾರು ಕಾಯಿಗಳನ್ನು ಗಿಡದಿಂದ ಒಟ್ಟಿಗೆ ಹಿಡಿದು ಗಿಡದಿಂದ ಬೇರ್ಪಡಿಸುವುದಕ್ಕೆ ‘ಊರು’ ಎಂಬ ರಚನೆಯೂ ಕಾಯಿಯಿಂದ ಸಿಪ್ಪೆ ಸುಲಿದು ಕಾಳುಗಳನ್ನು ಬೇರ್ಪಡಿಸುವ ಕ್ರಿಯೆಗೆ ಸಂಬಂಧಿಸಿ ‘ಯಡಿ’ ಎಂಬ ಪದಗಳನ್ನು ಬಳಸಲಾಗತ್ತಿತ್ತು. ಆದರೆ ಆಧುನಿಕರ ಕನ್ನಡದಲ್ಲಿ ಊರು, ಯಡಿ ಪದಗಳಿಗೆ ಬದಲಾಗಿ ‘ಬಿಡಿಸು’ ಎಂಬ ಒಂದೇ ಸಾಮಾನ್ಯ ಕ್ರಿಯಾಪದದಿಂದ ನಿರ್ವಹಿಸಲಾಗುತ್ತಿದೆ.

ಇಂತಹ ಕ್ರಿಯಾ ರಚನೆಗಳು ವ್ಯಾವಹಾರಿಕ ಸಾಮಾನ್ಯ ಬಳಕೆಯ ನೆಲೆಯಿಂದ ತಪ್ಪಿಹೋಗಿದ್ದರೂ ಪಾರಂಪರಿಕ ‘ಆಚರಣೆ’ ‘ಆಟ’ ಗಳಂತಹ ಸಾಮಾಜಿಕ ಸಾಂಸ್ಕೃತಿಕ ನಡೆವಳಿಕೆಗಳ ಭಾಷಿಕ ಘಟಕಗಳಲ್ಲಿ ಸಂಚಯಿತವಾಗಿರುವ ಸಾಧ್ಯತೆಗಳು ಹೆಚ್ಚಿವೆ. ಉದಾ: ಗೋಲಿ ಆಟದಲ್ಲಿ ಬಳಕೆಯಾಗುತ್ತಿರುವ, ತೀಯು, ತೀಕು, ತೀಲು, ದೇಕು ಕ್ರಿಯಾ ರಚನೆಗಳು ಸಾಮಾನ್ಯ ವ್ಯಾವಹಾರಿಕ ಬಳಕೆಯಲ್ಲಿ ಇಲ್ಲ. ಹಾಗೆಯೇ ಆಣೆಕಲ್ಲಾಟದಲ್ಲಿ ಬಳಕೆಯಾಗುವ ‘ಸೊನೆ’, ‘ಸೊಣೆಪೆ’ ಎಂಬ ಕ್ರಿಯಾರಚನೆಗಳು ವ್ಯಾವಹಾರಿಕ ಬಳಕೆಯಲ್ಲಿ ಎಲ್ಲಿಯೂ ಕಂಡುಬರುತ್ತಿಲ್ಲ. ಹಾಗೆಯೇ ಆಟದ ನೆಲೆಯಲ್ಲಿ ಬಳಕೆಯಾಗುತ್ತಿರುವ ಕ್ರಿಯಾ ರಚನೆಗಳಲ್ಲಿ ಹಲವು ವೈಶಿಷ್ಟ್ಯಗಳೂ ಪ್ರಾದೇಶಿಕವಾಗಿ ಕಂಡುಬರುತ್ತವೆ. ಉದಾಹರಣೆಗೆ ಚೌಕಾಬಾರ ಆಟದಲ್ಲಿ ಆಟದ ಪ್ರಕ್ರಿಯೆಯಲ್ಲಿ ಎದುರಾಳಿಯ ಕಾಯಿಗಳನ್ನು ಅಂಕಣದಿಮದ ಹೊರಹಾಕುವ ಪ್ರಕ್ರಿಯೆಗೆ ಕರ್ನಾಟಕದ ದಕ್ಷಿಣದಲ್ಲಿ ‘ಕಾಯಿ ಹೊಡಿ’ ಎನ್ನುವ ರಚನೆ ಇದ್ದರೆ ಉತ್ತರದಲ್ಲಿ ಕಾಯಿಕಡಿ ಎನ್ನುವ ರಚನೆ ಇದೆ. ಕೆಲವು ಕಡೆ ಕಾಯಿತಿನ್ನು, ಕಾಯಿಕೊಲ್ಲು ಎನ್ನುವ ರಚನೆಗಳಿವೆ. ಆಟ್ಗುಳಿಮಣೆ, ಚೆನ್ನೆಮಣೆ ಆಟದಲ್ಲಿಯೂ ವಿಶಿಷ್ಟವಾದ ಕ್ರಿಯೆಗಳಿಗೆ ಈಯು, ಮನೆಕಟ್ಟು, ಎಮ್ಮೆ ಈಯು, ಕರುಈಯು, ಪೀತ್ಗೆ ಆಯ್ತು ಇಂತಹ ವಿಶಿಷ್ಟ ರಚನೆಗಳಿವೆ ಈ ರಚನೆಗಳ ಹಿಂದಿನ ಕಾರಣ ಮತ್ತು ಸಾಧ್ಯತೆಗಳನ್ನು ಹೆಚ್ಚಿನ ಮಾಹಿತಿಯೊಂದಿಗೆ ಪರಿಶೀಲಿಸುವ ಅಗತ್ಯವಿದೆ.

ಅನ್ಯಭಾಷಾ ರೂಪಗಳ ಸ್ವರೂಪ

ಭಾಷೆಯಲ್ಲಿ ಅನ್ಯಭಾಷಾ ಪದಗಳು ಬಳಕೆಯಾಗುವುದು ಸಹಜ. ಹೀಗೆ ಭಾಷೆಯ ಯಾವ ಆವರಣದಲ್ಲಿ ಅನ್ಯಭಾಷಾ ರೂಪಗಳು ಬಳಕೆಯಾಗುತ್ತವೆ ಮತ್ತು ಹೀಗೆ ಒಂದು ಭಾಷೆಯಿಂದ ಎರವಲು ಪಡೆಯುವ ಉದ್ದೇಶ, ತಂತ್ರ, ಸ್ವೀಕೃತಗೊಂಡ ಭಾಷಾರೂಪಗಳ ಬಳಕೆಯ ವಿಧಾನ, ಸ್ವೀಕೃತಗೊಂಡ ಭಾಷೆಯೊಳಗಡೆ ನಿರ್ವಹಿಸುವ ಕಾರ್ಯವಿಧಾನ, ಸ್ವೀಕೃತಗೊಂಡ ಭಾಷಾರೂಪಗಳಲ್ಲಿ ಆಗುವ ಬದಲಾವಣೆ, ಅರ್ಥಛಾಯೆಗಳ ವಿಸ್ತರಣೆ ಅರ್ಥ ಸಂಕೋಚಗಳ ಸ್ವರೂಪವನ್ನು ಭಾಷಾಧ್ಯಯನಕಾರರು ಈಗಾಗಲೇ ವಿವರಿಸಿದ್ದಾರೆ. ಗ್ರಾಮೀಣ ಆಟಗಳಲ್ಲಿ ಬಳಕೆಯಾಗುವ ಅನ್ಯಭಾಷಾ ರೂಪಗಳ ಸ್ವರೂಪ, ಉದ್ದೇಶ, ಕಾರ್ಯವಿಧಾನಗಳು ಸಾಮಾನ್ಯ ವ್ಯಾವಹಾರದ ಭಾಷಾಬಳಕೆಯ ಸಂದರ್ಭದ ಅನ್ಯಭಾಷಾ ರೂಪಗಳ ಬಳಕೆಯ ಉದ್ದೇಶ ಸ್ವರೂಪ ಮತ್ತು ಕಾರ್ಯವಿಧಾನಕ್ಕಿಂತ ಭಿನ್ನವಾಗಿದೆ.

ಅಚ್ಚ ಕನ್ನಡದ ಪರಿಸರದ ಅಂದರೆ ಯಾವುದೇ ಅನ್ಯಭಾಷಾ ಪರಿಸರದ ಭೌಗೋಳಿಕ, ಸಾಂಸ್ಕೃತಿಕ, ಸಂಪರ್ಕಗಳಿಲ್ಲದ ಸಂದರ್ಭಗಳಲ್ಲಿಯೂ ಆಟಗಳ ಒಳಗೆ ಅನ್ಯಭಾಷಾ ರೂಪಗಳು ಬಳಕೆಯಾಗುತ್ತಿವೆ. ಅಂದರೆ ಪ್ರಸ್ತುತ ಇಂತಹ ಪ್ರದೇಶಗಳಲ್ಲಿ ಸಾಮಾನ್ಯ ವ್ಯಾವಹಾರಿಕ ಬಳಕೆಯಲ್ಲಿ ಅನ್ಯಭಾಷಾರೂಪಗಳಿಲ್ಲವೆಂದಲ್ಲ ಆದರೆ ಅಂತಹ ಬಳಕೆಯ ಕಾರಣಗಳನ್ನು ವಿವರಿಸಬಹುದಾಗಿದೆ. ಆದರೆ ಈ ಅನ್ಯ ಭಾಷಾ ರೂಪಗಳೆ ಅರ್ಥಗಳು ಆಟಗಾರರಿಗೆ ಆಟದ ಕ್ರಿಯೆಯ ಮೂಲಕವೇ ಸಂವಹನಗೊಳ್ಳುತ್ತವೆ. ಅಂದರೆ ಆ ಭಾಷಾರೂಪದ ಮೂಲಭಾಷೆಯ ಅರ್ಥವಾಗಲೀ ಆದೇ ಪದ ಆಟಗಾರನ ಮಾತೃಭಾಷೆಯಲ್ಲಿ ಸ್ವೀಕೃತವಾಗಿ ಬಳಕೆಗೊಳ್ಳುತ್ತಿರುವ ರೂಪವಾಗಲಿ, ಅರ್ಥವಾಗಲೀ ಆಟದ ನೆಲೆಗೆ ಮುಖ್ಯವಲ್ಲ. ಉದಾಹರಣೆಗೆ ಮೈಸೂರು, ಹಾಸನ, ಮಂಡ್ಯ ಪರಿಸರದ ಗಿಲ್ಲಿದಾಂಡು ಆಟದಲ್ಲಿ ‘ರಡೆ’ ‘ಜಂಪ್‌’ ‘ಡಬಲ್‌’ ಎಂಬ ಇಂಗ್ಲಿಷ್‌ ರೂಪಗಳು ಬಳಕೆಯಾಗುತ್ತವೆ. ಇದೇ ಪದಗಳು ಆ ಪರಿಸರದ ವ್ಯಾವಹಾರಿಕ ಕನ್ನಡದಲ್ಲಿಯೂ ಬೇರೆ ಬೇರೆ ರೂಪದಲ್ಲಿ ಬಳಕೆಯಲ್ಲಿವೆ. ಅದಕ್ಕೆ ಸಮಾನಾಂತರ ಕನ್ನಡ ಪದಗಳೂ ಬಳಕೆಯಲ್ಲಿವೆ. ಉದಾ : ರೆಡಿ-ಸಿದ್ಧ, ಜಂಪ್‌ನೆಗೆ, ಡಬಲ್‌ ಎರರಷ್ಟು ಇಲ್ಲಿನ ವೈಶಿಷ್ಟ್ಯವೆಂದರೆ. ಗಿಲ್ಲಿದಾಂಡು ಆಡುವ ಆಟಗಾರರಿಗೆ ಇಂಗ್ಲಿಶನ್ನು ವ್ಯಾವಹಾರಿಕ ಕನ್ನಡದಲ್ಲಿ ಸ್ವೀಕರಣ ಮಾಡಿ ಬಳಸುತ್ತಿರುವ ರೂಪಗಳೂ ಸಮಾನಾರ್ಥಕ ಕನ್ನಡ ಬಾಷಾರೂಪಗಳ ಬಳಕೆಯ ವಿಧಾನ, ಮತ್ತು ಸಂದರ್ಭಗಳ ಪರಿಚಯವೂ ಇರುತ್ತದೆ. ಆದರೆ ವ್ಯಾವಹಾರಿಕ ಬಳಕೆಯ ನೆಲೆಯ ಅರ್ಥಗಳು, ಆಟದ ನೆಲೆಯಲ್ಲಿ ಅದೇ ರೂಪಗಳನ್ನು ಬಳಸಿದರೂ ಆ ಅರ್ಥಗಳಿಗಿಂತ ಭಿನ್ನವಾದ ಕ್ರಿಯಾತ್ಮಕತೆಯನ್ನು ಪಡೆದುಕೊಳ್ಳುತ್ತವೆ. ಆಟದ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಮೂಲ ನೆಲೆಯ ಅರ್ಥ ಛಾಯೆಗಳು ಇರುವಂತೆ ಕಂಡರೂ ಆ ಆರ್ಥಗಳಿಗಿಂತ ಆಟದ ಹಂತದಲ್ಲಿ ಅವುಗಳನ್ನು ನಿಯಮವಾಗಿ ಅಷ್ಟೇ ಉಚ್ಚರಿಸುತ್ತಾರೆ. ಆದ್ದರಿಂದಲೇ ಕೆಲವು ವೇಳೆ ಎದುರಾಳಿ ಆಟಗಾರ ಹೇಳಬೇಕಾದ ಮಾತನ್ನು ಆಡುತ್ತಿರುವ ಆಟಗಾರನೇ ಹೇಳುತ್ತಾನೆ. ಗಿಲ್ಲಿ ಆಟದ ಒಂದು ಹಂತದಲ್ಲಿ ಅಂದರೆ ಗಿಲ್ಲಿ ಹೊಡೆಯುವ ಮೊದಲು ಆಟಗಾರ ‘ರಡೆ’ ಎನ್ನಬೇಕು. ಎದರಾಳಿ ಕ್ಷೇತ್ರ ರಕ್ಷಣೆಗೆ ನಿಂತಿರುವವರು ‘ಎಸ್‌’ ಎಂದು ಅನುಮತಿ ನೀಡಿದ ನಂತರ ಆಟಗಾರ ಗಿಲ್ಲಿಯನ್ನು ಹೊಡೆಯಬೇಕು, ಗಿಲ್ಲಿಯನ್ನು ಹೊಡೆದ ನಂತರ ಕ್ಷೇತ್ರ ರಕ್ಷಕರು ‘ಗಿಲ್ಲಿ’ ಯನ್ನು ತಡೆದು ಗಿಲ್ಲಿಯನ್ನು ಎಲ್ಲಿಂದ ಹೊಡೆದಿದ್ದನೋ ಅಲ್ಲಿಗೆ ಎಸೆಯುತ್ತಾರೆ. ಎಸೆದಾಗ ಆಟಗಾರ ಔಟಾಗದೇ ಗಿಲ್ಲಿ ಬಿದ್ದ ಜಾಗದಿಂದ ಮೂರನೇ ಬಾರಿ ಗಿಲ್ಲಿ ಹೊಡೆಯುವ ಮುಂಚೆ ‘ಜಂಪ್‌’ ಎಂದು ಉಚ್ಚರಿಸುತ್ತಾನೆ. ಆಟದ ವಿಧಾನವನ್ನು ಗಮನಿಸಿದರೆ ಎದುರಾಳಿ ‘ಎಸ್‌’  ಅಥವಾ ‘ನಾಟ್‌’ ಎನ್ನಬೇಕು. ಅಂದರೆ ‘ಜಂಪ್‌’ ಎಂದರೆ ಎದರಾಳಿ ಗಿಲ್ಲಿ ಬಿದ್ದಿರುವ ಸ್ಥಳದಿಂದ ಸ್ಕೈಟ್‌ಗೆ ಹಾರಿದರೆ ಆಟಗಾರನನ್ನು ಹೊರಹಾಕಬಹುದು ಅದಕ್ಕಾಗಿ ಆಟಗಾರ ಎದುರಾಳಿಗೆ ಜಂಪ್‌ ಎನ್ನುವ ಪ್ರಶ್ನೆಯ ಮೂಲಕ ಹಾರಲು ಸಾಧ್ಯವೆ ಎಂದು ಕೇಳಬೇಕು ಅದಕ್ಕಾಗಿಯೇ ಈ ‘ಜಂಪ್‌’ ಎನ್ನುವ ಪ್ರಶ್ನಾರ್ಥಕ ಮಾತಿದೆ. ಆದರೆ ಈ ಜಂಪ್‌ ಪದ ಉಚ್ಚರಿಸುವ ಮುಂಚೆಯೇ ಎದುರಾಳಿ ಆಟಗಾರ ಮೊದಲು ಗಿಲ್ಲಿ ಹೊಡೆದು ಕ್ಷೇತ್ರರಕ್ಷಣೆ ಮಾಡಿ, ಸ್ಕೈಟ್‌ ಬಳಿ ಎಸೆದು ಎರಡನೇ ಏಟು ಹೊಡೆದಾಗಲೆ ತಕ್ಷಣವೇ ಹಾರುತ್ತೀನಿ ಎನ್ನುತ್ತಾನೆ. ಹಾಗೆ ಸಾಧ್ಯವಾದರೇ ಹಾರಿ ಗುರಿ ಮುಟ್ಟಿದರೆ ಆಟಗಾರನನ್ನು ಔಟ್‌ ಮಾಡುತ್ತಾನೆ. ಒಂದು ವೇಳೆ ಹಾರದಿದ್ದರೆ ಆಟಗಾರ ಮೂರನೇ ಏಟನ್ನು ಹೊಡೆಯುತ್ತಾನೆ. ಹೊಡೆಯುವ ಮುಂಚೆ ಜಂಪ್‌ ಎನ್ನುತ್ತಾನದರೂ ಎದುರಾಳಿ ಏನು ಹೇಳುವುದಿಲ್ಲ ಈ ಪ್ರಕ್ರಿಯೆ ಈಗಾಗಲೇ ಮುಗಿಸಲಾಗಿರುತ್ತದೆ. ಮುಂದಿನ ಏಟಿಗೆ ಆಟಗಾರನೇ ‘ನಾಟ್‌’ ಎಂದು ಉಚ್ಚರಿಸಿ ಗಿಲ್ಲಿಯನ್ನು ಹೊಡೆಯುತ್ತಾನೆ. ಅಂದರೆ ಈ ವಿವರಗಳಿಂದ ಆಟದೊಳಗೆ ಬಳಸುತ್ತಿರುವ ಭಾಷಾರೂಪಗಳಿಗೆ ಸಾಮಾನ್ಯವಲಯದ ಬಳಕೆಯ ಅರ್ಥ ಮತ್ತು ಸಂವಹನದ ಕ್ರಿಯಾತ್ಮಕತೆ ಭಿನ್ನವಾಗಿರುತ್ತದೆ ಎನ್ನಿಸುತ್ತದೆ.

ಕರ್ನಾಟಕದ ಬಹುಪಾಲು ಭಾಗಗಳಲ್ಲಿ ಆಡುವ ‘ಗೋಲಿ’ ‘ಚೌಕಾಬಾರ’ ಆಟಗಳಲ್ಲಿ ಉರ್ದು, ಮರಾಠಿ, ಭಾಷಾರೂಪಗಳು ಬಳಕೆಯಾಗುತ್ತವೆ. ಈ ಮೊದಲೇ ಹೇಳಿದಂತೆ ‘ಚೌಕಾಬಾರ’ ಆಟದ ಎಣಿಕೆಗೆ ಸಂಬಂಧಿಸಿದ ಪದಗಳಿಗೆ ಮಾತ್ರ ವಿಶೇಷವಾಗಿ ಈ ಪದಗಳನ್ನು ಬಳಸುತ್ತಿದ್ದು ಆಟದ ಪ್ರಕ್ರಿಯೆ ಆಟದ ಅಂಕಣ, ನಕ್ಷೆ, ಅಂಕಣದ ಭಾಗಗಳು, ಆಟದ ವಸ್ತುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಒಳನುಡಿ ರೂಪಗಳೇ ಬಳಕೆಯಾಗುತ್ತವೆ. ಉದಾ : ಆಟದ ನಕ್ಷೆಗೆ ಉತ್ತರ, ಮಧ್ಯಕರ್ನಾಟಕದಲ್ಲಿ ಚೌಕಮನೆ, ಚೌಕಮಣಿ, ಎಂಬ ಹೆಸರುಗಳು ಇದ್ದರೆ ದಕ್ಷಿಣ, ಕರ್ನಾಟಕದ ಕಡೆ ಗಟ್ಟದ ಮನೆ, ಗಟ್ಟಾ ಎಂಬ ಹೆಸರುಗಳಿವೆ. ಆಟದ ವಸ್ತುಗಳಿಗೆ ಸಂಬಂಧಿಸಿಯೂ ಹುಣಿಸೆಪಿಕ್ಕ, ಹುಣಿಸೆ ಬ್ಯಾಳೆ, ಕಾಯಿ, ಹಣ್ಣು ಎಂಬ ಕನ್ನಡದ ಪದಗಳೇ ಬಳಕೆಯಾಗುತ್ತವೆ. ಹಾಗೆಯೆ ಕೆಲವು ಬಗೆಯ ಗೋಲಿ ಆಟಗಳಲ್ಲಿ ಮುಖ್ಯವಾಗಿ ಜೂಜು ಮಾದರಿಯ ಮೇರಿ ಆಟ, ಪೇಂದ ಅಥವಾ ಪೆಂದಿ ಎಂಬ ಆಟಗಳಲ್ಲಿ ಉರ್ದು, ಮರಾಠಿ ಮತ್ತು ಇಂಗ್ಲಿಶ್‌ ಪದರೂಪಗಳು ಸಾಕಷ್ಟು ಬಳಕೆಯಾಗುತ್ತವೆ. ಗೋಲಿ ಆಟದ ಗುಣಿಗೆ ಬದ್ಧ ಎಂಬ ರೂಪ ಸಾಮಾನ್ಯವಾಗಿ ಎಲ್ಲಾ ಕಡೆಯೂ ಇದೆ ಹಾಗೆಯೇ ‘ಗೋಲಿ’ ಎನ್ನುವ ಪದವೇ ಉರ್ದು ಅಥವಾ ಹಿಂದಿ ಮೂಲದ ಪದವಾಗಿದೆ. ವಿಶೇಷವಾಗಿ ಗಾಜಿನ ಗುಂಡುಗಳಿಗೆ ಮಾತ್ರ ಗೋಲಿ ಎನ್ನಲಾಗುತ್ತವೆ, ಬೀದರ್, ಬಿಜಾಪುರ ಪರಿಸರದಲ್ಲಿ ‘ಗೋಟಿ’ ಎನ್ನುವ ರೂಪವು ಬಳಕೆಯಲ್ಲಿದೆ. ಈ ಆಟದ ವಿಶೇಷವೆಂದರೆ ಒಂದೇ ಆಟದಲ್ಲಿ ಇಂಗ್ಲಿಶ್‌ ಹಿಂದಿ, ಉರ್ದು, ಕನ್ನಡ ಭಾಷಾರೂಪಗಳೂ ಬಳಕೆಯಾಗುತ್ತವೆ. ಮೈಸೂರು ಪರಿಸರದ ಮೀರಿ ಎಂಬ ಗೋಲಿ ಆಟದಲ್ಲಿ ಆಟದ ಅಂಕಣದ ಒಳಗಿನ ಎರಡು ಗುಳಿಗಳಿಗೆ ‘ಬದ್ದ್‌’ ಎಂಬ ರೂಪವೂ, ಗೋಲಿ ಹೊಡೆಯುವ ಒಂದು ವಿಧಾನ ಅಂದರೆ ಕೈ ಕೆಳಗೆ ಮಾಡಿ ಗೋಲಿಯನ್ನು ಹೊಡೆಯುವ ವಿಧಾನಕ್ಕೆ ‘ಡೀಲಿ’ ಗೋಲಿಗಳನ್ನು ಆಡಲು ಬಿಟ್ಟಾಗ ಎರಡು ಗೋಲಿಗಳನ್ನು ಕೂಡಿದ್ದರೆ ಬಚ್ಚಾ, ಎರಡು ಗೋಲಿಗಳು ಅಂಟಿಂದಂತೆ ಇದ್ದು ಮಧ್ಯ ಅತ್ಯಂತ ಸಣ್ಣ ತೆರವಿದ್ದರೆ ಖುಲ್ಲಾ ಎಂಬ ಉರ್ದು ಭಾಷಿಕ ರೂಪಗಳು ಬಳಕೆಯಾಗುತ್ತವೆ. ಮೇರಿ ಅಥವಾ ಮೀರಿ ಎಂಬ ಆಟದ ಹೆಸರು ಯಾವ ಭಾಷಾರೂಪ ಎಂಬುದು ಸ್ಷಷ್ಟವಾಗುತ್ತಿಲ್ಲ ಆದರೆ ಅದೇ ಆಟದಲ್ಲಿ ಗೋಲಿ ಹೊಡೆಯುವ ಒಂದು ವಿಧಾನಕ್ಕೆ ‘ರಿಂಗ್‌’ ಎಂದೂ ಇನ್ನೊಂದು ವಿಧಾನಕ್ಕೆ ಬೈಟಪ್‌, ಬಟಾಪ್‌ (Bytop) ಎಂಬ ರೂಪಗಳೂ ಬಳಕೆಯಾಗುತ್ತವೆ. ಹಾಗೆಯೇ ಗೋಲಿ ಅಂಕಣದ ಪಟ್ಟೆ ಮೇಲೆ ಕುಳಿತರೆ ಪಟ್ಟೆ ಎಂದು ಗೋಲಿ ಬಿದ್ದಿರುವ ಸ್ಥಾನವನ್ನಾದರಿಸಿ ಹಿಂತಿಮಂತಿ, ಅಥವಾ ಮ್ಯಾಗ ಕೆಳಗ ಎಂಬ ಅಷ್ಟು ಕನ್ನಡ ರೂಪಗಳೂ ಬಳಕೆಯಲ್ಲಿವೆ. ಮೈಸೂರು ಪರಿಸರದ ಪೇಂದ ಎಂಬ ಗೋಲಿ ಆಟದಲ್ಲಿ ಆಟದ ಅಂಕಣ, ಗೋಲಿ ಹೊಡೆಯುವ ವಿಧಾನಗಳಿಗೆ ಉರ್ದು ಭಾಷಿಕ ರೂಪಗಳು ಬಳಕೆಯಾಗುತ್ತವೆ. ಇದೇ ಮಾದರಿಯ ಗೋಲಿ ಆಟ ಉತ್ತರಕರ್ನಾಟಕ, ಮಧ್ಯಕರ್ನಾಟಕದ ಆಟಗಳಲ್ಲಿ ಇಂಗ್ಲಿಶ್‌ ಭಾಷಾರೂಪಗಳು ಬಳಕೆಯಾಗುತ್ತವೆ. ಉದಾಹರಣೆಗೆ ಡಿಸ್‌, ಬಾಂಬೆಡಿಸ್‌ ಆಟ, ರೀಂಚ್‌ಆಟ, ಬ್ರಿಂಗ್‌ಆಟ ಹೆಸರಿನ ಗೋಲಿ ಆಟಗಳಿವೆ.

ಗಿಲ್ಲಿದಾಂಡು ಆಟದಲ್ಲಿ ಬಳಕೆಯಾಗುವ ಇಂಗ್ಲಿಶ್‌ ಭಾಷಾರೂಪಗಳನ್ನು ಮೊದಲೇ ಉಲ್ಲೇಖಿಸಿದೆ. ಈ ಆಟದಲ್ಲಿಯೂ ನಿಯಮದ ವಿಧಾನದ ಹೆಸರುಗಳು, ಕ್ರಿಯಾಪದಗಳಿಗೆ ಇಂಗ್ಲಿಶ್‌ ರೂಪಗಳು ಬಳಕೆಯಾದರೂ ವಸ್ತು, ಜಾಗದ ಹೆಸರುಗಳು ಉರ್ದು, ಮರಾಠಿ, ರೂಪಗಳಾಗಿವೆ. ಗಿಲ್ಲಿದಂಡ, ಗಿಲ್ಲಿ ಇಡುವ ಉದ್ದನೆ ಕುಳಿಗೆ ‘ಬದ್ದ್‌’ ‘ಪುಚ್ಚಿ’, ಮುಂತಾದ ರೂಪಗಳು ಬಳಕೆಯಾಗುತ್ತವೆ. ಹಾಗೆಯೇ ಬುಗುರಿ ಆಟದಲ್ಲಿ ಮೈಸೂರು ಪರಿಸರದ ಎಲ್ಲಾ ಆಟಗಳಲ್ಲಿಯೂ ಇಂಗ್ಲಿಶ್‌ನ ಅಪೀಟು (Upit) ಎಂಬ ರೂಪ, ಹಾಗೆಯೇ ಚಾಮರಾಜನಗರ ಮತ್ತು ಸುತ್ತಣ ಪರಿಸರಗಳಲ್ಲಿ ‘ಪಾಟ್‌’ ‘ಪೀಟು’  ಎಂಬ ವಿಕಲ್ಪರೂಪಗಳು ಬಳಕೆಯಲ್ಲಿವೆ ಉಳಿದಂತೆ ಆಟದ ಪ್ರಮುಖ ಸಾಧನವಾದ ‘ಬುಗುರಿ’ಗೆ ಕರ್ನಾಟಕದಲ್ಲೆಲ್ಲಿಯೂ ಬೇರೆ ಭಾಷಾರೂಪಗಳಿಲ್ಲ ಆದರೆ ‘ಬುಗುರಿ’ ಪದದ ಭಿನ್ನರೂಪವಾದ ‘ಬಗರಿ’ ಎಂಬ ರೂಪ ಉತ್ತರ ಕರ್ನಾಟಕದಾದ್ಯಂತ ಬಳಕೆಯಿದೆ. ಬುಗುರಿ ಸುತ್ತುವ ದಾರಕ್ಕೆ ಚಾಟಿ, ಹುರಿ, ದಾರ, ಜಾಳಿಗೆ ಎಂಬ ಭಿನ್ನರೂಪಗಳು ಪ್ರಾದೇಶಿಕವಾಗಿವೆ. ಬುಗುರಿ ಆಟದಲ್ಲಿ ಒಂದು ಬುಗುರಿಯ ಮೊಳೆಯಿಂದ ಮತ್ತೊಂದು ಬುಗುರಿಗೆ ಬೀಳುವ ಏಟು ಅಥವಾ ಆಟಗಾರನೊಬ್ಬ ಆಟದ ನಿಯಮದ ಪ್ರಕಾರ ಸೋತ ವ್ಯಕ್ತಿಯ ಬುಗುರಿಗೆ ತನ್ನ ಬುಗುರಿ ಮೊಳೆಯಿಂದ ಗುದ್ದಿ ಗುರುತು ಮಾಡುವುದಕ್ಕೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ‘ಗುನ್ನ’ ಮತ್ತು ಉತ್ತರ ಭಾಗದಲ್ಲಿ ‘ಗಿಚ್ಚ’ ಎಂಬ ಹೆಸರುಗಳು ಬಳಕೆಯಲ್ಲಿವೆ. ಚಾಮರಾಜನಗರ ಪರಿಸರದಲ್ಲಿ ದಕ್ಷಿಣ ಕನ್ನಡ ‘ಗುಣ್ಣ’ ಎಂಬ ರೂಪ ಬಳಕೆಯಲ್ಲಿವೆ. ಮೈಸೂರು ಪರಿಸರದ ‘ತನ್ನಾರಿ’ ಎಂಬ ಬುಗುರಿ ಆಟದಲ್ಲಿ ‘ಆರ್ ಪಾರ್’ ಎಂಬ ಉರ್ದು ಮರಾಠಿ ರೂಪಬಳಕೆಯಾಗುತ್ತದೆ. ಕರ್ನಾಟಕದ ಬಹುಪಾಲು ಭಾಗಗಳಲ್ಲಿ ಆಡುವ ಕುಂಟಾಬಿಲ್ಲೆ ಆಟಗಳಲ್ಲಿ ಇಂಗ್ಲಿಶ್‌ನ ವಿಕಲ್ಪ ರೂಪಗಳು ಬಳಕೆಯಾಗುತ್ತವೆ. ಮೈಸೂರು ಪರಿಸರದ ಕುಂಟಾಟದ ಒಂದು ಬಗೆಯಲ್ಲಿ ಆಟಕ್ಕೆ ಬಳಸುವ ಬಿಲ್ಲೆಗೆ (ಹೆಂಚಿನ ಮಡಕೆಚೂರು) ಚಿಚಾಪ್‌ ಎಂಬ ರೂಪ ಬಳಕೆಯಾಗುತ್ತದೆ ಹೀಗೆ ಮಂಡ್ಯ, ಮೈಸೂರು, ಬೆಂಗಳೂರು, ಶಿವಮೊಗ್ಗ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ. ‘ಅಮಟೆ’ ‘ಯಸಟೆ’ ಎಂಬ ರೂಪಗಳು ಬಳಕೆಯಾಗುತ್ತವೆ. ಮತ್ತು ಉತ್ತರ ಕರ್ನಾಟಕದ ಗೋಲಿ, ಮತ್ತಿತರ ಆಟಗಳಲ್ಲಿ ಒಂದು ನಿರ್ದಿಷ್ಟ ಸ್ಥಳಕ್ಕೆ ಅಂದರೆ ಗೋಲಿ ಬಿಡಲು ಎಲ್ಲರೂ ಸಾಲಾಗಿ ನಿಲ್ಲುವ ಸ್ಥಳ,  ಅಥವಾ ಇನ್ನಾವುದೋ ಆಟದಲ್ಲಿ ಆಟ ಪ್ರಾರಂಭಿಸಲು ನಿಗದಿಯಾದ ಸ್ಥಳ ‘ಪಾಜ’ ಎನ್ನುವ ರೂಪ ಬಳಕೆಯಲ್ಲಿದೆ.

ಒಟ್ಟಾರೆ ಆಟಗಳಲ್ಲಿ ಬಳಕೆಯಾಗುವ ಅನ್ಯಭಾಷಾ ರೂಪಗಳನ್ನು ಗಮನಿಸಿದಾಗ ಆಟದ ಹೆಸರು ಆಟದ ವಸ್ತುಗಳು, ಆಟದ ನಿಯಮಗಳಲ್ಲಿ ಬಳಕೆಯಾಗುವುದು ಕಂಡುಬರುತ್ತದೆ. ಆದರೆ ನಿರ್ದಿಷ್ಟವಾಗಿ ಯಾವ ಆಟವೂ ಪೂರ್ಣವಾಗಿ ಯಾವುದೇ ಒಂದು ನಿದಿಷ್ಟ ಕನ್ನಡೇತರ ಭಾಷೆಯನ್ನು ಆಟದ ಎಲ್ಲಾ ಹಂತಗಳಲ್ಲಿ ಸಮಗ್ರವಾಗಿ ಬಳಸುತ್ತಿಲ್ಲ. ಕೆಲವು ಆಟಗಳಲ್ಲಿ ವಸ್ತುಗಳಿಗೆ ಸೀಮಿತವಾಗಿದ್ದರೆ ಕೆಲವು ಆಟಗಳಲ್ಲಿ ನಿಯಮಗಳಿಗೆ ನಿರ್ದಿಷ್ಟವಾಗಿದೆ. ಕೆಲವು ಆಟಗಳಲ್ಲಿ ಇಂಗ್ಲಿಶ್‌, ಉರ್ದು, ಕನ್ನಡ ಮೂರು ಭಾಷಾರೂಪಗಳೂ ಬಳಕೆಯಾಗುತ್ತವೆ. ಹೀಗೆ ಅನ್ಯಭಾಷಾರೂಪಗಳು ಬಳಕೆಯಾಗಲು ಇರಬಹುದಾದ ಕಾರಣಗಳು ಪೂರ್ಣವಾಗಿ ಭಾಷಿಕವಾದವು ಎನಿಸುವುದಿಲ್ಲ. ಇವು ಭಾಷಿಕ ಆಕೃತಿಗಳೇ ಆಗಿದ್ದರೂ ಇವುಗಳ ಕ್ರಿಯಾತ್ಮಕತೆ ಈಗಾಗಲೇ ವಿವರಿಸಲ್ಪಟ್ಟಿರುವ ಭಾಷಾ ವ್ಯಾವಹಾರಗಳ ಸ್ವರೂಪಕ್ಕಿಂತ ಆಂಶಿಕವಾಗಿ ಭಿನ್ನವಾಗಿರುವುದು ಕಾಣಿಸುತ್ತದೆ. ಯಾಕೆಂದರೆ ವ್ಯಾವಹಾರಿಕ ಬಳಕೆಯ ಸಂದರ್ಭದ ಉದ್ದೇಶ, ಅರ್ಥಗಳು ಆಟದ ನೆಲೆಯಲ್ಲಿ ಮುಖ್ಯವಾಗುವುದಿಲ್ಲ ಉದಾಹರಣೆಗೆ ಸಂಖ್ಯಾ ವಾಚಕಗಳ ವಿವರಣೆಯಲ್ಲಿ ಗಮನಿಸಿರುವಂತೆ ಚೌಕಾಬಾರ ಆಟದ ‘ಬಾರಾ’ ಮೂಲ ಭಾಷೆಯಲ್ಲಿ ‘ಹನ್ನೆರಡು’ ಇದ್ದರೂ ಆಟದ ನೆಲೆಯಲ್ಲಿ ಅದು ಸಂಖ್ಯಾವಾಚಕವಾದರೂ ನಿರ್ದಿಷ್ಟ ಸಂಖ್ಯೆಯನ್ನು ಸೂಚಿಸುತ್ತಿಲ್ಲ ಅಂದರೆ ಆಡಲು ಬಳಸುವ ಹುಣಿಸೇಬೀಜ ನಾಲ್ಕೇ ಇದ್ದರೂ ಕಪ್ಪು, ಮುಖ ಮೇಲ್ಮುಖವಾಗಿ ಬೀಳುವುದು ಅಷ್ಟೇ ಅಲ್ಲ ಅದು ಆಟದ ಹೆಸರನ್ನು ಸೂಚಿಸುವಾಗ ‘ಚೌಕಾಬಾರ’ ಜೋಡಿ ಪದವಾಗಿದ್ದರೂ ಆಟದ ಹೆಸರಿನ ಭಾಗವಾಗಿ ಮಾತ್ರ ಇದೆ. ಈ ರೂಪಗಳು ಆಟದ ನೆಲೆಗೆ ಒಟ್ಟು ಆಟದ ಭಾಗವಾಗಿ ಅಥವಾ, ವಸ್ತುಗಳ ರೂಪದಲ್ಲಿ ಬಂದಿರಬಹುದಾದ ಸಾಧ್ಯತೆಯಿದೆ. ಅಂದರೆ ಕನ್ನಡ ಪ್ರದೇಶಗಳಲ್ಲಿ ಆಡಳಿತ ನಡೆಸಿರುವ ಇಂಗ್ಲಿಶ್‌ ಉರ್ದು, ಮರಾಠಿ ಪ್ರಭುತ್ವಗಳ ಸಂದರ್ಭದಲ್ಲಿ ಭಾಷಿಕೇತರವಾದ ನೆಲೆಗಳಿಂದ ಬಂದಿರುವ ಸಾಧ್ಯತೆಯಿದೆ. ಆಟಗಳು ಸ್ಥಳೀಯವಾಗಿದ್ದು ನಿಯಮಗಳು ವಸ್ತುಗಳು ಅನ್ಯದೇಶೀಯವಾಗಿರುಬಹುದು ಅಥವಾ ಆಟಗಳೇ ಪೂರ್ಣವಾಗಿ ವಸ್ತು ನಿಯಮಗಳ ಸಹಿತ ಅಂದರೆ ಅವುಗಳಲ್ಲಿ ಪ್ರತಿನಿಧಿಸುವ ನುಡಿಘಟಕಗಳ ಸಮೇತ ಬಂದಿರಬಹುದು. ಹೀಗೆ ಆಟದ ಭಾಗವಾಗಿ ಬಂದಿರಬಹುದಾದ ಸಾಧ್ಯತೆಗಳು ಹೆಚ್ಚಿರುವ ಸಂದರ್ಭಗಳಲ್ಲಿ ಈ ಅನ್ಯದೇಸೀ ಭಾಷಾರೂಪಗಳಿಗೆ ಭಾಷಿಕ ಕ್ರಿಯಾತ್ಮಕತೆ ಮುಖ್ಯವಾಗುವುದಿಲ್ಲ. ಈಗಾಗಲೇ ಹೇಳಿದ ಬುಗುರಿ ಆಟದ ಅಪ್ಪಿಟ್ ಕ್ರಿಯಾರೂಪ ತಿರುಗುತ್ತಿರುವ ಬುಗುರಿಯನ್ನು ಮೇಲೆತ್ತಿ ಹಿಡಿಯುವುದನ್ನೇ ಸೂಚಿಸುತ್ತಿದ್ದರೂ ಆಟದ ಕ್ರಿಯೆಯಲ್ಲಿ ಇದೊಂದು ಹೆಸರಿಸುವ ಪದ ಘಟಕವಾಗಿ ಕೆಲಸ ಮಾಡುತ್ತಿದೆ. ಆಟದ ಸಂದರ್ಭದಲ್ಲಿ ಕನ್ನಡದೊಡನೆ ಇದು ಅಪೀಟ್ ಹಿಡ್ಕೊ ಅಪೀಟ್ ಎತ್ತು ಎನ್ನುವ ಕ್ರಿಯಾರೂಪಗಳೊಂದಿಗೆ ಬರುತ್ತದೆ ಹಾಗೂ ಆಟದ ನಿಯಮದಲ್ಲಿ ಆಟಗಾರ ಹೀಗೆ ತಿರುಗುತ್ತಿರುವ ಬುಗರಿಯನ್ನು ದಾರದಿಂದ ಎತ್ತಿ ಹಿಡಿಯಬೇಕೆ. ಹಾಗೆ ಹಿಡಿದದ್ದನ್ನು ಅವನು ಅಪೀಟ್, ಪಾಟು, ಪೀಟು, ಎಂಬ ರೂಪಗಳನ್ನು ಉಚ್ಚರಿಸಿ ಘೋಷಿಸಬೇಕು. ಹಾಗೆಯೇ ಮಂಡ್ಯ ಮೈಸೂರು ಪರಿಸರದ ತಂಡಗಳ ಆಟಗಳಲ್ಲಿ ತಂಡಗಳಾಗಿ ಆಟಗಾರರನ್ನು ವಿಭಜಿಸಿಕೊಳ್ಳಲು ವಿಶಿಷ್ಟವಾದ ಕ್ರಮವೊಂದಿದೆ. ಇಬ್ಬರು ನಾಯಕರು ನೇರವಾಗಿ ತಮ್ಮ ತಂಡವನ್ನು ಆಯ್ದುಕೊಳ್ಳದೆ ಇಬ್ಬಿಬ್ಬರು ಆಟಗಾರರು ಪ್ರತ್ಯೇಕವಾಗಿ ದೂರಹೋಗಿ ಅವರಿಗೆ ಪರ್ಯಾಯ ಹೆಸರುಗಳನ್ನು ಕಟ್ಟಿಕೊಂಡು ಬರುತ್ತಾರೆ. ಬಂದವರು. ಗಡಿಗಡಿ ಆಚ್ಗೆ ಎಂದರೆ ನಾಯಕರು ಆಚ್ಗೊಂದು ಪಿಚ್ಚೇ ಎನ್ನುತ್ತಾರೆ. ನಂತರ ಆಟಗಾರರು ಕಟ್ಟಿಕೊಂಡಿರುವ ಪರ್ಯಾಯ ಹೆಸರುಗಳನ್ನು ಹೇಳುತ್ತಾರೆ. ನಾಯಕರು ತಮಗೆ ಇಷ್ಟವಾದ ಹೆಸರನ್ನೂ ಹೇಳುತ್ತಾರೆ. ಆ ಹೆಸರಿನವರು ಹೆಸರು ಹೇಳಿದವರ ತಂಡಕ್ಕೆ ಸೇರುತ್ತಾರೆ. ಆದರೆ ಇಲ್ಲಿ ಕುತೂಹಲವೆನಿಸುವುದು ಮೇಲಿನ ಭಾಷಾರೂಪಗಳು ಯಾವುದೇ ಆರ್ಥವನ್ನು ಹೊಂದಿಲ್ಲದಂತೆ ಕಂಡರೂ ತುಮಾರೆ ಪೀಚ್ಗೆ ಎನ್ನುವ ರೂಪ ಉರ್ದು ಭಾಷಿಕ ರೂಪ ಬಳಕೆಯಾಗಿರುವುದು. ಆಟದ ನೆಲೆಯಲ್ಲಿ ಬೇರೆ ಬೇರೆ ವಿಧಾನದಲ್ಲಿ ವಿಶಿಷ್ಟವಾಗಿ ಇಂತಹ ಅನ್ಯಭಾಷಾರೂಪಗಳು ಬಳಕೆಯಾಗುತ್ತಿವೆ. ಮೇಲಿನ ವಿವರಗಳ ಹಿನ್ನೆಲೆಯಲ್ಲಿ ಒಂದು ಭಾಷೆಯ ನಿರ್ದಿಷ್ಟ ವಲಯದೊಳಗೆ ಅನ್ಯಭಾಷಾ ರೂಪಗಳು ಹೇಗೆ ಮತ್ತು ಏಕೆ ಪ್ರವೇಶ ಪಡೆಯುತ್ತವೆ, ಅವುಗಳ ಬಳಕೆಯ ಸ್ವರೂಪವೇನು ಎನ್ನುವ ವಿಷಯವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ವ್ಯಾವಹಾರಿಕ ವಲಯದಲ್ಲಿ ಅನ್ಯಭಾಷಾ ರೂಪಗಳ ಬಳಕೆಯ ಕಾರಣ, ಸ್ವರೂಪಗಳನ್ನು ಈಗಾಗಲೇ ವಿವರಿಸಿಕೊಳ್ಳಲಾಗಿದೆ. ಆಟದ ನೆಲೆಯ ಬಳಕೆ ಸಾಮಾನ್ಯ  ವ್ಯಾವಹಾರಿಕ ವಲಯದ ಬಳಕೆಗಿಂತ ಭಿನ್ನವಾಗಿದ್ದು ಅವು ಆಟದ ನೆಲೆಗೆ ಪ್ರವಹಿಸಿರುವ ವಿಧಾನವೂ ಭಿನ್ನವಾಗಿದೆ. ಹೆಚ್ಚಿನ ಮಾಹಿತಿ ಮತ್ತು ಆಟಗಳ ಚಾರಿತ್ರಿಕೆ, ಸಾಂಸ್ಕೃತಿಕ ವಿವರಗಳ ನೆಲೆಯಿಂದ ಈ ಸಂದರ್ಭಗಳನ್ನು ವಿವರಿಸಲು ಪ್ರಯತ್ನಿಸಬಹುದು.

ಆಟದ ಭಾಷೆಯಲ್ಲಿ ಸಮಾಜೋಸಾಂಸ್ಕೃತಿಕ ಆಂಶಗಳು

ಆಟ ಆಡುವವರು ಮೇಲ್ನೋಟಕ್ಕೆ ಸಣ್ಣ ಮಕ್ಕಳಾಗಿರಬಹುದು ಅಥವಾ ವಯಸ್ಕರಾಗಿದ್ದರೂ ಅವರು ಆಡುವ ಆಟಗಳಿಗೆ ಯಾವುದೇ ಬಗೆಯ ಸಮಾಜೋಸಾಂಸ್ಕೃತಿಕ ಮಹತ್ವವಿಲ್ಲದ ಹಾಗೆ ಕಾಲಹರಣಕ್ಕಾಗಿ, ಮನರಂಜನೆಗಾಗಿ ಆಡುತ್ತಿರಬಹುದಾದರೂ ಆ ಆಟಗಳ ವಿವಿಧ ಆಯಾಮಗಳನ್ನು ಪರಿಶೀಲಿಸಿದರೆ ಅವುಗಳಲ್ಲಿ ಅನೇಕ  ಸಮಾಜೋಸಾಂಸ್ಕೃತಿಕ  ಆಂಶಗಳು ಅಡಕವಾಗಿರುವುದು ಕಂಡುಬರುತ್ತದೆ. ಅದರಲ್ಲೂ ಕೆಲವು ಗ್ರಾಮೀಣ ಆಟಗಳು ಮಕ್ಕಳ ಆಟಗಳೇ ಆದರೂ ಆಟದ ನಿಯಮಗಳಲ್ಲಿ, ಆಟದ ಹೆಸರುಗಳಲ್ಲಿ, ಆಟಗಾರರು ಆಟದೊಳಗಡೆ ನಿರ್ವಹಿಸುವ ಪಾತ್ರಗಳಲ್ಲಿ ಸಮಾಜ ಸಂರಚನೆಯ, ಸಾಮಾಜಿಕ ವ್ಯವಸ್ಥೆಯ ಪ್ರತಿಫಲಗಳು ಆಡಕವಾಗಿರುತ್ತವೆ. ಇವು ಆಯಾ ಪ್ರದೇಶದ ಪರಿಸರದ ಸಮಾಜ ರಚನೆ, ವ್ಯವಸ್ಥೆಗಳನ್ನೇ ಅವಲಂಭಿಸಿರುತ್ತವೆ. ಉದಾಹರಣೆಗೆ ಉಪ್ಪು ತರುವ ಆಟವನ್ನು ಗಮನಿಸಿದರೆ ಈ ಆಟವನ್ನು ಕೊಳ್ಳೇಗಾಲ ಸುತ್ತಲಿನ ಕೆಲವು ಬುಡಕಟ್ಟುಗಳ ಮಕ್ಕಳು ಆಡುತ್ತಾರೆ. ಈ ಆಟದ ನಿಯಮದಲ್ಲಿ ಅನೇಕ ಮನೆಗಳನ್ನು ದಾಟಿ ಹೋಗಿ ಆಟಗಾರ ಉಪ್ಪು ತರಬೇಕಾಗುತ್ತದೆ. ಉಪ್ಪು ಜೀವನಾವಶ್ಯಕ ವಸ್ತುಗಳಲ್ಲಿ ಪ್ರಾಥಮಿಕವಾದ ಮಹತ್ವದ ವಸ್ತು. ಯಾವುದೋ ಒಂದು ಕಾಲದಲ್ಲಿ ಆ ಬುಡಕಟ್ಟುಗಳ ಜನರಿಗೆ ಉಪ್ಪನ್ನು ಪಡೆಯುವುದು ದುಸ್ತರವಾಗಿದ್ದಿರಬೇಕು. ಏಕೆಂದರೆ ಉಪ್ಪು, ಈಗಿನಂತೆ ವಿಸ್ತೃತವಾದ ಮಾರುಕಟ್ಟೆಯ ಸರಕಾಗದೆ ಅದು ಸ್ಥಳೀಯವಾಗಿ ಒಳನಾಡು ಕೇಂದ್ರಗಳಲ್ಲಿಯೇ ತಯಾರಾಗುತ್ತಿದ್ದ ವಸ್ತುವಾಗಿರಹಬುದು. ಅದನ್ನು ಪಡೆಯುವಾಗ ಪ್ರತಿಯಾಗಿ  ಬುಡಕಟ್ಟು ಜನರು ಸಲ್ಲಿಸಬೇಕಾಗಿದ್ದ ವಸ್ತುಗಳು, ಮಾಡಬೇಕಾಗಿದ್ದ ಇತರೆ ಕೆಲಸಗಳು, ಎದುರಾಗಬಹುದಾಗಿದ್ದ ಆಡೆತಡೆಗಳು ಈ ಆಟದ ನಿಯಮಗಳಲ್ಲಿ ಸೇರಿವೆ. ಉಪ್ಪನ್ನು ಪಡೆಯಲು  ಬುಡಕಟ್ಟು ಜನರು ಹೋರಾಟವನ್ನೇ ಮಾಡಬೇಕಾಗಿದ್ದಿರಬಹುದು. ಈ ಎಲ್ಲಾ ಆಡೆತಡೆಗಳನ್ನು ಮೀರಿ ಉಪ್ಪು ಪಡೆದವರು ಆಟದಲ್ಲಿ ಜಯಶಾಲಿಯಾಗುತ್ತಾರೆ.

ಬೆಳಗಾಂ ಪ್ರದೇಶದಲ್ಲಿ ಮಿಂಡನಾಟ ಎಂಬ ಒಂದು ಆಟವಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾಜ ಮಾನ್ಯವಾದ ವಿವಾಹ ಪದ್ಧತಿಗಳಿಂದ ಕುಟುಂಬಸ್ಥಳಾದ ಮಹಿಳೆಯೊಬ್ಬಳಿಗೆ ಒಬ್ಬ ಗಂಡನಿರುವಾಗ ಸಮಾಜ ಮಾನ್ಯವಲ್ಲದ ಮಾರ್ಗದಲ್ಲಿ ಆ ಮಹಿಳೆ ಪರಪುಷನೊಂದಿಗೆ ಸಂಬಂಧ ಹೊಂದಿದ್ದರೆ ಆ ಪುರುಷನನ್ನು ಮಿಂಡ ಎಂದು ಕರೆಯುತ್ತಾರೆ. ಇದು ಕಲ್ಲುಗಳನ್ನು ಜೋಡಿಸುವ ಆಟ. ಈ ಆಟದ ನಿಯಮದಲ್ಲಿ ಒಬ್ಬ ಮಿಂಡನಾಗುತ್ತಾನೆ. ಅವನು ಸಿಕ್ಕು ಬಿದ್ದಾಗ ಇತರ ಆಟಗಾರರೆಲ್ಲ ಸೇರಿ ಆಟದ ನಿಯಮದಂತೆ ತೋರಿಕೆಗೆ ಅವನನ್ನು ಥಳಿಸಿ ಶಿಕ್ಷಿಸುತ್ತಾರೆ. ಇದು ಒಂದು ಸಮಾಜದ ಪರಿಸರದಲ್ಲಿ ಅಮಾನ್ಯ ಸಂಬಂಧಗಳಿಗೆ ಸಾಮಾಜಿಕರ ಪ್ರಕ್ರಿಯೆಯನ್ನು ತೋರಿಸುತ್ತದೆ. ಇದೇ ಪ್ರದೇಶದ ಆಟಗಳಲ್ಲಿ ಹೊಲಗೇರಿ ಎನ್ನುವ ಒಂದು ಪದ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಹೊಲಗೇರಿಗಳು ಊರಿನ ಕಡೆಯ ಭಾಗದಲ್ಲಿರುತ್ತವೆ. ಹೊಲಗೇರಿಯ ಬಗೆಗಿನ, ಅಲ್ಲಿ ವಾಸಿಸುವ ಜನರ ಬಗೆಗಿನ ಸಾಮಾಜಿಕ ದೃಷ್ಟಿಕೋನಗಳು ಮಕ್ಕಳಾಟಗಳಲ್ಲಿಯೂ ಪ್ರತಿಫಲಿತವಾಗಿರುತ್ತವೆ. ಉದಾಹರಣೆಗೆ ಕಲ್ಲುಗಳನ್ನು ಎಸೆಯುವ ಒಂದು  ಮಕ್ಕಳ ಆಟದಲ್ಲಿ ಮೇಲು ಕೀಳುಗಳನ್ನು ನಿರ್ಧರಿಸಲಾಗುತ್ತದೆ. ಆಟಗಾರರೆಲ್ಲ ಕಲ್ಲುಗಳನ್ನು ನಿರ್ದಿಷ್ಟವಾದ ಹೊಲಗೇರಿ ಎಂದು ಕರೆಯುವ ಗೆರೆಯನ್ನು ದಾಟಿಸಿ ಎಸೆಯಬೇಕು. ಗೆರೆಯನ್ನು ದಾಟಿಸಿ ಎಸೆದವರೆಲ್ಲ ಮೇಲು. ಗೆರೆಯನ್ನು ದಾಟಿಸದೆ ಗೆರೆಯಿಂದ ಈಚೆ ಕಲ್ಲೆಸೆದವರು ಕೀಳು ಗೆರೆ ದಾಟಿದವರು ಮೊದಲು ಆಡಬೇಕಾಗುತ್ತದೆ.  ಎಲ್ಲಾ ಅವಕಾಶಗಳು ಅವರಿಗೆ ಮೊದಲು ಸಿಗುತ್ತವೆ. ಗೆರೆ ದಾಟಿದವರು ಕಡೆಯಲ್ಲಿ ಆಡಬೇಕಾಗುತ್ತದೆ. ಕರಾವಳಿ ಕರ್ನಾಟಕದ ಕಕ್ಕೆಗಿಳಿ ಆಟ, ಕೆಲವು ಮುಟ್ಟುವ ಆಟಗಳಲ್ಲಿಯೂ ಅಸ್ಪೃಶತೆಯ, ಸಾಮಾಜಿಕ ಸ್ತರ ವಿಭಜನೆಯ ಲಕ್ಷಣಗಳು ಕಂಡುಬರುವುದಾಗಿ ವಿದ್ವಾಂಸರು ಗುರುತಿಸಿದ್ದಾರೆ. ಮೇಲ್ಕಂಡ ಆಟಗಳ ನಿಯಮಗಳು ಮತ್ತು ವಿಧಾನಗಳಿಂದ ತಿಳಿದುಬರುವುದೇನೆಂದರೆ ಈಚೆಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಅಭಿವೃದ್ಧಿಯ ಪರಿಣಾಮವಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಶ್ರೇಣಿಗಳು, ಮೇಲು ಕೀಳುಗಳ ಪರಿಕಲ್ಪನೆಗಳು ಶಿಥಿಲವಾಗಿದ್ದರೂ ಆಟದ ನೆಲೆಯಲ್ಲಿ ಆ ಸಾಮಾಜಿಕ ಪರಂಪರೆಯ ವ್ಯವಸ್ಥೆಯ ವಿಚಾರಗಳು ಪ್ರಕಟಗೊಳ್ಳುತ್ತಿವೆ ಎನಿಸುತ್ತದೆ.