ಆಟಗಳಿಗೆ ವ್ಯಕ್ತಿ ನೆಲೆಯಿಂದ ಹಿಡಿದು ಸಾಮುದಾಯಿಕ, ಸಾಮಾಜಿಕ ನೆಲೆಯವರೆಗಿನ ಹರವಿದೆ. ವ್ಯಕ್ತಿಯ ಸಾಮಾಜೀಕರಣ ಪ್ರಕ್ರಿಯೆಯ ಪ್ರಮುಖಾಂಶಗಳಲ್ಲಿ ಆಟಗಳು ಬಹು ಮುಖ್ಯವಾದವು. ಆಯಾ ಪ್ರದೇಶ ಪರಿಸರವನ್ನು ಅವಲಂಬಿಸಿ ಪ್ರತಿಯೊಂದು ಜನಸಮುದಾಯಗಳಲ್ಲಿಯೂ ಆಟಗಳು ರೂಢಿಯಲ್ಲಿವೆ. ಮೋಜಿನಿಂದ ಹಿಡಿದು ಜೂಜಿನವರೆಗೆ ಆಟಗಳು ವೈವಿಧ್ಯಮಯವಾಗಿವೆ. ಆಟಗಳ ಉದ್ದೇಶ ರಂಜನೆಯಷ್ಟೇ ಆಗಿರದೇ, ಆಚರಣೆ, ನಿಯಮ, ನಂಬಿಕೆಗಳ ವಿವಿದೋದ್ದೇಶಗಳ ಈಡೇರಿಕೆಯೂ ಆಟಗಳಲ್ಲಿ ಸೇರಿದೆ.

ಮಕ್ಕಳಿಂದ ಹಿಡಿದು ವಯಸ್ಕರವರೆಗೆ ವಯಸ್ಸಿನ, ಲಿಂಗದ ತಾರತಮ್ಯವಿಲ್ಲದೆ ವಿವಿಧ ಬಗೆಯ ಆಟಗಳು ಮಾನವ ಸಮಾಜದಲ್ಲಿ ರೂಢಿಯಲ್ಲಿವೆ. ಮನುಷ್ಯರೆಲ್ಲರೂ ಸಾಮಾನ್ಯವಾಗಿ ತಮ್ಮ ಜೀವಮಾನದ ಯಾವ ಹಂತದಲ್ಲಿಯಾದರೂ, ಕನಿಷ್ಟ ಬಾಲ್ಯದಲ್ಲಿಯಾದರೂ ಆಟಗಳನ್ನು ಆಡಿಯೇ ಇರುತ್ತಾರೆ. ನಾಗರೀಕ ಆಟಗಳನ್ನು ಆಟದ ವಿಧಾನ, ನಿಯಮಗಳನ್ನು ಔಪಚಾರಿಕ ಕಲಿಕೆಯ ಮುಖಾಂತರ ಕಲಿಯಬಹುದಾದರೂ ಗ್ರಾಮೀಣ ಆಟಗಳನ್ನು (ಕೆಲವು ವಿಶಿಷ್ಟ ಆಟಗಳನ್ನು ಹೊರತು ಪಡಿಸಿ) ಯಾರೂ ಔಪಚಾರಿಕವಾಗಿ ಕಲಿಸುವುದಿಲ್ಲ. ಮೊದಲೇ ಹೇಳಿದಂತೆ ವ್ಯಕ್ತಿಗಳ ಸಾಮಾಜೀಕರಣ ಪ್ರಕ್ರಿಯೆಯ ಭಾಗವಾಗಿ ಸಹಜವಾಗಿಯೇ ಮನುಷ್ಯರಿಗೆ ಆಟ ಆಡುವುದು ರೂಢಿಯಾಗುತ್ತದೆ. ರೂಢಿಯಿಂದಲೇ ಆಟದ ವಿಧಾನ, ಆಟದ ನಿಯಮಗಳು ಆಟದಲ್ಲಿ ಬಳಕೆಯಾಗುವ ಭಾಷೆ ಎಲ್ಲವೂ ಅಭ್ಯಾಸವಾಗುತ್ತದೆ.

ಸಾಮಾನ್ಯವಾಗಿ ಮಕ್ಕಳನ್ನು ಆಟವಾಡಿಸುತ್ತಲೇ ಭಾಷೆ, ಸಾಮಾಜಿಕ, ಸಾಂಕೃತಿಕ ನಡವಳಿಕೆಗಳನ್ನು ಕಲಿಸಲಾಗುತ್ತಿದೆ. ಆದರೆ ಮಾತು, ನಡಿಗೆಗಳನ್ನು ಕಲಿಯದಿರುವ ವಯಸ್ಸಿನ ಮಕ್ಕಳ ಆಟಗಳಿಗೆ ನಿಯಮವಾಗಲೀ ನಿರ್ದಿಷ್ಟ ರೀತಿಯಾಗಲೀ ಇರುವುದಿಲ್ಲ. ಇವು ಕೇವಲ ಮಕ್ಕಳನ್ನು ಸಂತೋಷಪಡಿಸಲು ಅಳದಂತೆ ಹೊತ್ತು ಕಳೆಯಲು, ಊಟ ಮಾಡಿಸಲು, ನಿದ್ರೆಮಾಡಿಸಲು ಪೋಷಕರು ಇತರರು ಪ್ರಯೋಗಿಸುವ ವಿಧಾನಗಳಾಗಿವೆ. ಇವು ಸಾಮಾನ್ಯವಾಗಿ ವ್ಯಕ್ತಿಗತ ನೆಲೆಯಲ್ಲಿ ಸಂದರ್ಭಾನುಸಾರ ಮಗುವಿನ ಅಪೇಕ್ಷೆಯನ್ನನುಸರಿಸಿ ಪ್ರಯೋಗಗೊಳ್ಳುತ್ತಿರುತ್ತವೆ. ವಿವಿಧ ಸದ್ದುಗಳು, ಪ್ರಾಸ ಬದ್ಧ ಹಾಡುಗಳು, ಅನುಕರಣೆಗಳು, ಬಣ್ಣ ಬಣ್ಣದ, ಆಟದ ವಸ್ತುಗಳನ್ನು ತೋರಿಸಿವುದು ಮುಂತಾದ ವಿಧಾನಗಳನ್ನು ಅನುಸರಿಸುತ್ತಾರೆ. ಮಕ್ಕಳಿಗೆ ಮಾತು ಮತ್ತು ಇತರ ಮಕ್ಕಳ ಗೆಳೆತನಗಳು ಅಂದರೆ ಜೋಡಿ, ಗುಂಪುಗಳಲ್ಲಿ ಬೆರೆಯಲು ಕಲೆತಾಗ ಸಾಮಾನ್ಯವಾಗಿ ಕೌಟುಂಬಿಕ, ಸಾಮಾಜಿಕ ನಡೆವಳಿಕೆಗಳನ್ನು ತಾವು ನೋಡಿದ, ಅನಿಭವಿಸಿದ ನೆನಪುಗಳಿಂದ ಅನುಕರಿಸುತ್ತಾ ಆಡುತ್ತಿರುತ್ತಾರೆ ಈ ಹಂತ ಮುಗಿದ ನಂತರ ‘ನಿರ್ದಿಷ್ಟವಾದ’ ನಿಯಮಗಳನ್ನು, ವಿಧಾನಗಳನ್ನು, ನಿರ್ದಿಷ್ಟ ವಸ್ತುಗಳನ್ನು ಪರಿಕರಗಳನ್ನು ಬಳಸಿ ಆಡುವ ಆಟಗಳನ್ನು ಗುಂಪುಗಳಲ್ಲಿ ಬೆರೆಯುತ್ತಾ ನೋಡುತ್ತಾ ಆಡುತ್ತಾ ಕಲಿಯುತ್ತಾರೆ.

ಗ್ರಾಮೀಣ ಆಟಗಳು

ಗ್ರಾಮ ಮತ್ತು ನಗರವೆಂಬ ಪರಿಲಕಲ್ಪನೆಗಳು ಈ ಹೊತ್ತಿನಲ್ಲಿ ಹಲವಾರು ವಿಚಾರಗಳಲ್ಲಿ ಭಿನ್ನತೆಯನ್ನೇನೂ ಉಳಿಸಿಕೊಂಡಿಲ್ಲ. ಶಿಕ್ಷಣ, ಔದ್ಯೋಗಿಕ ಆಕರ್ಷಣೆ, ಸಾಮಾನ್ಯ ವ್ಯಾವಹಾರಿಕ ಸಂಪರರ್ಕಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರಗಳನ್ನು ಕಡಿಮೆ ಮಾಡಿವೆ. ಪ್ರಸ್ತುತ ಗ್ರಾಮ ಸಮಾಜ. ಸಮುದಾಯಗಳೂ , ಅರ್ಥಿಕ, ಸಾಮಾಜಿಕ ವಿಚಾರಗಳನ್ನು ಬಿಟ್ಟು ಬಹಳಷ್ಟು ನಗರ ಸಂಸ್ಕೃತಿಯ ವಿಧಾನಗಳನ್ನೇ ಅನುಸರಿಸುತ್ತಾರೆ. ಗ್ರಾಮ ಸಮಾಜದ ಪಾರಂಪರಿಕ, ಜೀವನ ಶೈಲಿ, ಕೃಷಿ, ಕುಲಕಸಬು, ಗೃಹ ಕೈಗಾರಿಕೆಗಳೂ ‘ನಾಗರಿಕ’ ಸ್ವರ್ಶಕ್ಕೆ ಮೋಡಿಗೆ ಒಳಗಾಗಿವೆ. ಅಂದರೆ ಈ ಮಾತಿನ ಉದ್ದೇಶವಿಷ್ಟೇ ನಗರ ಮತ್ತು ಗ್ರಾಮಗಳನ್ನು ಗಾತ್ರ ಮತ್ತು ಸವಲತ್ತುಗಳ ವಿಚಾರದಲ್ಲಿ ಭಿನ್ನವಾಗಿಸಬಹುದಾದರೂ ಹಲವಾರು ವಿಚಾರಗಳಲ್ಲಿ ಏಕರೂಪಿಯಾಗಿವೆ. ಹಾಗಾಗೀ ಗ್ರಾಮೀಣ ಆಟಗಳನ್ನು ಈಗ ಬಹುಪಾಲು ಆಡುತ್ತಿಲ್ಲ. ಅಂದರೆ ಮಕ್ಕಳು ಆಟವಾಡುದಿಲ್ಲವೆಂದಲ್ಲ ಆದರೆ ಸಾಂಸ್ಥೀಕರಣಗೊಂಡ  ‘ನಾಗರಿಕ’ ವೆಂಬ ಹಣೆ ಪಟ್ಟಿಯುಳ್ಳ ಆಟಗಳು ಮಾಧ್ಯಮದ ಮೂಲಕ ಎಲ್ಲಾ ಕಡೆ ತಲುಪಿವೆ. ಮತ್ತು ಪ್ರಸ್ತುತ ಸಂದರ್ಭದಲ್ಲಿ ಈ ಆಟಗಳಿಗಿರುವ ವ್ಯಾಪಾರೀ ಮೌಲ್ಯ, ಪ್ರತಿಷ್ಠೆಯ ಆಕರ್ಷಣೆಗಳು, ವೃತ್ತಿಪರತೆಯ ಅಂಶಗಳು ಬಾಲ್ಯದಿಂದಲೇ ಇವುಗಳೆಡೆಗೆ ಮಕ್ಕಳನ್ನು ಸೆಳೆಯುತ್ತಿವೆ. ಕಳೆದ ನಾಲ್ಕೈದು ದಶಕಗಳ ಹಿಂದೆ ಇದ್ದ ಎಷ್ಟೋ ಆಟಗಳು ಈಗ ವಯಸ್ಕರ ನೆನಪಿನಲ್ಲಿ ಮಾತ್ರ ಹುದುಗಿವೆ. ಆಟಗಳ ಬಗೆಗಿನ ಮಾಹಿತಿ ಸಂಗ್ರಹವನ್ನು ಹಿರಿಯರಿಂದ ಸಂಗ್ರಹಿಸಿ ಅವುಗಳ ಅಸ್ತಿತ್ವವನ್ನು ಪರೀಶಿಸಲು ಆಯಾ ಪ್ರದೇಶಗಳಲ್ಲಿ ಪರಿಶೀಲಿಸಿದಾಗ ಬಹುಪಾಲು ಆಟಗಳು ಆಡುವುದರಿಲಿ ಬಹಳಷ್ಟು ಮಕ್ಕಳಿಗೆ ಕೇಳಿಯೂ ತಿಳಿದಿಲ್ಲ. ಪ್ರಸ್ತುತ ಜನಪ್ರಿಯವಾಗಿರುವ ನಾಗರೀಕ ಆಟಗಳಾದರೂ ಒಂದು ಕಾಲಕ್ಕೆ ಗ್ರಾಮೀಣವೋ, ಯಾವುದೋ ಪ್ರದೇಶದ ಸ್ಥಳೀಯ ಆಟವೋ ಆಗಿದ್ದಂತಹವೇ. ಪ್ರಸ್ತುತ ಅವುಗಳಿಗೆ ದೊರೆತಿರುವ ಜಾಗತಿಕ ಮನ್ನಣೆಯ ಕಾರಣ ವಿಶ್ವವ್ಯಾಪಿಯಾಗಿವೆ.

ಪ್ರಸ್ತುತ ‘ಗ್ರಾಮೀಣ’ ಆಟಗಳೆಂದರೆ ಔಪಚಾರಿಕ ಕಲಿಕೆಯ ಮೂಲಕ, ಮಾಧ್ಯಮಗಳ ಮೂಲಕ ಬಂದಿರುವ ‘ನಾಗರಿಕ’ ಮಾದರಿ ಆಟಗಳನ್ನು ಹೊರತು ಪಡಿಸಿ ಹಿಂದೆ ಬಳಕೆಯಲ್ಲಿದ್ದ ಈಗಲೂ ಬಳಕೆಯಲ್ಲಿರಬಹುದಾದ ಸ್ಥಳೀಯವಾದ. ಪ್ರದೇಶ ನಿಷ್ಠವಾದ ಆಟಗಳು ಮಾತ್ರ ಎಂದು ಭಾವಿಸಲಾಗಿದೆ. ಎಷ್ಟೋ ವೇಳೆ ಬಹಳಷ್ಟು ಆಟಗಳಲ್ಲಿ ಇಂಗ್ಲಿಶ್, ಪರ್ಶಿಯನ್ ಪದಗಳು, ವಿಧಾನಗಳು, ಪರಿಕರಗಳು ಬಳಕೆಯಾಗುವ ಆಟಗಳಿದ್ದರೂ ಇವುಗಳಿಗೆ ಮಾರುಕಟ್ಟೆ ಮೌಲ್ಯ ವಾಣಿಜ್ಯಿಕ ವ್ಯಾವಹಾರಿಕ ಆಯಾಮಗಳಿಲ್ಲದಿರುವುದರಿಂದ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಮಕ್ಕಳೂ ಯಾವುದೇ ತಾರತಮ್ಯವಿಲ್ಲದೇ ಆಡುವ ಆಟಗಳಾದುದರಿಂದ ಈ ಆಟಗಳನ್ನು ಗ್ರಾಮೀಣ ಸ್ಥಳೀಯ ಆಟಗಳೆಂದೇ ಭಾವಿಸಲಾಗಿದೆ.

ಪ್ರಸ್ತುತ ಗ್ರಾಮೀಣ ಆಟಗಳು ಯಾವುವು? ಎನ್ನುವುದನ್ನು ಗುರುತಿಸಿಕೊಳ್ಳಲು ಸ್ಥಳೀಯವಾಗಿ ದೊರೆಯುವ ವಸ್ತುಗಳು ಹಾಗೂ ಸ್ಥಳೀಯವಾಗಿ ಪಾರಂಪರಿಕವಾಗಿ ರೂಢಿಸಿಕೊಂಡಿರುವ ಸಾಮಾನ್ಯ ನಿಯಮಗಳನ್ನು ಅನುಸರಿಸಿ, ಮನರಂಜನೆ, ಸ್ಪರ್ಧೆ, ಆಚರಣೆ, ಧಾರ್ಮಿಕ , ಉದ್ದೇಶಗಳಿಗೆ ಆಡುವ ಆಟಗಳನ್ನು ಗ್ರಾಮೀಣ ಆಟಗಳು ಎಂದು ಭಾವಿಸಿಕೊಳ್ಳಲಾಗಿದೆ.

ಮೇಲೆ ವಿವರಿಸಿದ ರೀತಿಯ ಗ್ರಾಮೀಣ ಆಟಗಳು ಪ್ರಧಾನವಾಗಿ ಮಕ್ಕಳ ದೈನಂದಿನ ಮತ್ತು ಹಲವಾರು ಸಂದರ್ಭಗಳಲ್ಲಿ ಋತುಮಾನಕ್ಕೆ ಅನುಸಾರವಾಗಿ  ಆಯಾಸಂದರ್ಭಗಳಿಗೆ ತಕ್ಕಂತೆ ಆಡುವ ಆಟಗಳು ಪ್ರಧಾನವಾಗಿವೆ. ಹಾಗೆಯೇ ವಯಸ್ಕರ ಆಟಗಳು ಮೋಜಿಗಿಂತ ಹೆಚ್ಚಾಗಿ ಸ್ಪರ್ಧೆ, ಸೋಲು ಗೆಲವುಗಳ ಪಂದ್ಯಾಟಗಳ ಸ್ವರೂಪದಲ್ಲಿರುತ್ತವೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಆಡುವ ಕೆಲವು ಆಟಗಳನ್ನು ಗಮನಿಸಲಾಗಿದೆ.

ಆಟಗಳ ಉದ್ದೇಶ ಯಾವುದೇ ಆದರೂ ಈ ಅಧ್ಯಯನದಲ್ಲಿ ಆಟಗಳಲ್ಲಿ ಬಳಕೆಯಾಗುವ ಭಾಷಾರೂಪಗಳನ್ನೂ ಸಂಗ್ರಹಿಸಲು ಉದ್ದೇಶವನ್ನು ಸೀಮಿತಗೊಳಿಸಲಾಗಿದೆ. ಇಲ್ಲಿ ಸಂಗ್ರಹಿಸಿರುವ ಬಹುಪಾಲು ಆಟಗಳು ಪ್ರದೇಶ ನಿಷ್ಠವಾಗಿದ್ದು ಅವುಗಳ ಭಾಷಿಕ ಸಾಮಗ್ರಿ ಸಮಾಜೋ ಸಾಂಸ್ಕೃತಿಕ ಆಕರಗಳಾಗಿರುವುದು ಮುಖ್ಯವಾಗಿದೆ. ಆಟಗಳಲ್ಲಿ ಬಳಕೆಯಾಗುವ ಭಾಷಾರೂಪಗಳು ಸಾಮಾನ್ಯವಾಗಿ ಒಂದು ಪದದ ಘಟಕದಿಂದ ಒಂದು ಪದಪುಂಜ ವಾಕ್ಯದ ವ್ಯಾಪ್ತಿಯಲ್ಲಿಯೂ ಬಳಕೆಯಾಗುತ್ತವೆ. ಆದರೆ ಅವುಗಳ ಅರ್ಥ ಏಕ ಘಟಕದ್ದಾಗಿರುತ್ತದೆ. ಅರ್ಥ ವಿನ್ಯಾಸಗಳು ಭಾಷೆಯ ಸಾಮಾನ್ಯ ವ್ಯಾವಹಾರಿಕ ಬಳಕೆಗಿಂತ ಭಿನ್ನವೂ ವಿಶಿಷ್ಟವೂ ಆಗಿರುತ್ತವೆ. ಉದಾ : ದಕ್ಷಿಣ ಕರ್ನಾಟಕದ ಚೌಕಾ ಬಾರಾ ಆಟದಲ್ಲಿ ‘ಕಾಯಿ’ ಒಂದು ವಸ್ತು ‘ಹಣ್ಣು’ ಅದರ ನಡೆಯ ಸಮಾಪ್ತಿ ಅಲ್ಲಿ ಹಣ್ಣಾಗುವ ಸಾಧ್ಯತೆಯಿರುವ ದೃಷ್ಟಿಯಿಂದ ನಡೆಸುವ ವಸ್ತುಗಳಿಗೆ  ‘ಕಾಯಿ’  ಎಂಬ ಹೆಸರಿದೆ ‘ಕಾಯಿ’  ಆಟದ ಪ್ರಕ್ರಿಯೆಯಲ್ಲಿ ಜೀವಂತವಾಗಿಯೇ ಇರುತ್ತದೆ. ಕ್ರಿಯಾತ್ಮಕವಾಗಿರುತ್ತದೆ. ಅದರ ನಡೆಯ ಅಂತ್ಯ ಹಣ್ಣಾಗುವುದು ಹಣ್ಣಾದ ನಂತರ ಅದರ ಕ್ರಿಯಾತ್ಮಕತೆ ಮತ್ತು ಮೌಲ್ಯ ಮುಗಿಯುತ್ತದೆ. ಸಾಮಾನ್ಯ ವ್ಯಾವಹಾರದ ಬಳಕೆಯಲ್ಲಿ ಹಣ್ಣಿಗೆ ಮೌಲ್ಯವಿದೆ ಮತ್ತು  ಕ್ರಿಯಾತ್ಮಕತೆಯೂ ಇದೆ. ಆದರೆ ಆಟದಲ್ಲಿ ಹಣ್ಣು ಮೌಲ್ಯ ಮತ್ತು ಕ್ರಿಯಾತ್ಮಕತೆಯನ್ನು ಕಳೆದುಕೊಂಡರೂ ಕಾಯಿಂದ ಹಣ್ಣಾಗುವವರೆಗಿನ ಪ್ರಕ್ರಿಯೆ ಮತ್ತು ಅದರೆದುರಿನ ಸವಾಲುಗಳು ಅದನ್ನು ಮೀರಿ ಪಡೆಯುವ ಹಣ್ಣು ಎಂಬ ತಾರ್ಕಿತ ಅಂತ್ಯದ ವರೆಗಿನ ಪ್ರಕ್ರಿಯೆಗಳಿಗೆ ವ್ಯಾವಹಾರಿಕ ಭಾಷಾ ಬಳಕೆಯಲ್ಲಿ ಮೌಲ್ಯವಿದೆ. ಆಟದಲ್ಲಿ ಬಳಕೆಯಾಗುವ ಭಾಷಾ ರೂಪಗಳ ಅರ್ಥಗಳು ಆಡುವ ವ್ಯಕ್ತಿಗಳ ಭಾಷಾ ಬಳಕೆಯ ನೆಲೆಗಳನ್ನು ಮೀರಿದರೂ ಭಾಷಿಕರ ಪರಿಸರ ಲೋಕದೃಷ್ಟಿಗಳನ್ನು ಘನೀಕರಿಸಿಕೊಂಡ ಘಟಕವಾಗಿ ಕಾಣಿಸುತ್ತವೆ.

ಆಟಗಳ ಬಗೆಗಳು

ಆಟಗಳು ವೈವಿಧ್ಯಮಯವಾಗಿವೆ ಆಡುವ ಸ್ಥಳ, ಆಡುವ ವಿಧಾನ, ಆಡುವ ವ್ಯಕ್ತಿಗಳು, ಆಡುವವರ ವಯಸ್ಸು, ಆಡುವವರ ಲಿಂಗ, ಆಟದ ಉದ್ದೇಶಗಳನ್ನು ಅನುಸರಿಸಿ ಆಟಗಳನ್ನು ವಿವಿಧ ಬಗೆಯಲ್ಲಿ ವರ್ಗೀಕರಿಸಬಹುದು. ಇದರಲ್ಲಿ ಒಳಾಂಗಣ ಆಟಗಳು ಮತ್ತು ಹೊರಾಂಗಣ ಆಟಗಳೆಂದು ಎರಡು ಪ್ರಧಾನ ಬಗೆಯಲ್ಲಿ ವರ್ಗೀಕರಿಸಬಹುದು.

ಒಳಾಂಗಣ ಆಟಗಳೆಂದರೆ ಸಾಮಾನ್ಯವಾಗಿ ದೇಹ ಬಲದ ಆಧಾರವಿಲ್ಲದೆ ಕೇವಲ ಬುದ್ಧಿಬಲ, ವ್ಯಕ್ತಿಗತ ಚಾತುರ್ಯದ ಆಧಾರದಲ್ಲಿ ಆಡುವ ಆಟಗಳಾಗಿವೆ. ಸಾಮಾನ್ಯವಾಗಿ ಮನೆಯ ಒಳಗೆ ಜಗಲಿಗಳ ಮೇಲೆ ಮಾತ್ರ ಆಡುವ ಆಟಗಳಾಗಿದ್ದು ಇವುಗಳಲ್ಲಿ ಬಳಸುವ ಸಲಕರಣೆ, ವಸ್ತುಗಳು ಸರಳವಾಗಿರುತ್ತವೆ. ಆಡುವವರ ಸಂಖ್ಯೆ ಇಬ್ಬರಿಂದ ನಾಲ್ಕು, ಆರು ಜನಗಳು ಆಡಬಹುದಾದರು ಹೆಚ್ಚು ಜನ ಪಾಲ್ಗೊಳ್ಳಬೇಕಾದಲ್ಲಿ ಸರದಿಯಲ್ಲಿ ಒಬ್ಬರ ನಂತರ ಒಬ್ಬರು ಆಡುವ ಆಟಗಳಾಗಿವೆ. ಕುಳಿತೇ ಸಾಧನ ಸಲಕರಣೆಗಳನ್ನು ಬಳಸಿ ಕೆಲವು ಆಟಗಳಲ್ಲಿ ಸ್ತ್ರೀ ಪುರುಷ ಬೇಧವಿಲ್ಲದೆ ಮತ್ತು ಹಿರಿಯ ಕಿರಿಯ ವಯಸ್ಸಿನ ಬೇಧವಿಲ್ಲದೆ ಆಡುತ್ತಾರೆ. ಆಟದ ವಿಧಾನದಲ್ಲಿ ಸ್ಪರ್ಧೆಯಿದ್ದರೆ ತಂಡಗಳಾಗಿ ವಿಂಗಡಣೆಯಾಗಬಹುದು. ಅಥವಾ ಪ್ರತಿ ವ್ಯಕ್ತಿಯೂ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾ ಆಡುತ್ತಿರಬಹುದು. ಒಳಾಂಗಣ ಆಟದ ವೈಶಿಷ್ಟ್ಯವೆಂದರೆ ಒಂದು ತಂಡದಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮಗಳಿರುವುದಿಲ್ಲ. ಒಬೊಬ್ಬ ವ್ಯಕ್ತಿಯೇ ಒಂದು ತಂಡವನ್ನು ಪ್ರತಿನಿಧಿಸಬಹುದು. ಕೆಲವು ಮಕ್ಕಳ ಒಳಾಂಗಣ ಆಟಗಳಲ್ಲಿ ಮಾತ್ರ ದೇಹ ಬಲದ ಅಗತ್ಯವಿರುತ್ತದೆ. ವಿಶೇಷವಾಗಿ ಕಂಬದಾಟದಂತಹ ಆಟಗಳನ್ನು ಆಡುವಾಗ ಹಿಡಿಯಲು ಬರುವವರಿಂದ ಮೂಲೆಯಿಂದ ಮೂಲೆಗೆ ತಪ್ಪಿಸಿಕೊಂಡು ಓಡಾಡುತ್ತಿರಬೇಕಾಗುತ್ತದೆ. ಸ್ತ್ರೀಯರು ಮಾತ್ರವೇ ಆಡುವ ಒಳಾಂಗಣ ಆಟಗಳಲ್ಲಿ ಮನರಂಜನೆ ಮತ್ತು ಕಾಲಕ್ಷೇಪ ಮುಖ್ಯವಾಗಿರುತ್ತದೆ. ಪುರುಷರು ಆಡುವಂತಹ ಆಟಗಳಲ್ಲಿ ಜೂಜು ಮಾಧರಿಯವು ಮುಖ್ಯವಾಗಿವೆ. ಒಳಾಂಗಣ ಆಟಗಳು ನೋಡುವವರಿಗಿಂತ ಆಡುವವರ ರಂಜನೆ ಮುಖ್ಯವಾಗಿಸಿಕೊಂಡಿರುತ್ತವೆ.

ಹೊರಾಂಗಣ ಆಟಗಳು ಸಾಮಾನ್ಯವಾಗಿ ಪುರುಷರು ಮತ್ತು ಬಾಲಕರ ಆಟಗಳಾಗಿರುತ್ತವೆ. ಕೆಲ ಸೀಮಿತ ಆಟಗಳನ್ನು ಹೆಣ್ಣುಮಕ್ಕಳೂ ಆಡುವರು. ಹೊರಾಂಗಣ ಆಟಗಳು ಬಹುಪಾಲು ಗುಂಪು ಅಥವಾ ತಂಡಗಳ ಆಟಗಳಾಗಿದ್ದು ಸ್ಪರ್ಧೆಯೂ ಇರುತ್ತದೆ. ದೇಹ ಬಲ, ದೈಹಿಕ ಚಲನವಲನದ ಕ್ರಿಯಾತ್ಮಕತೆ ಹೊರಾಂಗಣ ಆಟಗಳ ಲಕ್ಷಣಗಳಾಗಿವೆ.

ಗುಂಡು, ಕಲ್ಲು, ಕೋಲು, ಹಗ್ಗದತಹ ಸಹಜವಾಗಿ ಇತರೆ ಕೆಲಸ ಕಾರ್ಯಗಳಲ್ಲಿ ಬಳಕೆಯಾಗುವ ವಸ್ತುಗಳಿಂದ ಹಿಡಿದು ಆಟಕ್ಕಾಗಿಯೇ ಸಿದ್ದಪಡಿಸಿದ ಸಲಕರಣೆಗಳಾದ ಚೆಂಡು, ಗೋಲಿ, ಹಿಳ್ಳೆ, ಬುಗುರಿ ಮುಂತಾದ ವಸ್ತುಗಳನ್ನು ಬಳಸಿ ಆಡಲಾಗುತ್ತದೆ. ಇಬ್ಬರು ವ್ಯಕ್ತಿಗಳಿಂದ ಹಿಡಿದು ಹತ್ತಿಪ್ಪತ್ತು ಮಂದಿಯ ತಂಡಗಳಾಗಿ ಆಡುವ ಆಟಗಳೂ ಇವೆ. ಹೊರಾಂಗಣ ಆಟಗಳಲ್ಲಿ ಪ್ರದರ್ಶನಾತ್ಮಕ ಆಟಗಳು ಅಂದರೆ ಆಡುವವರ ಜತೆಗೆ ನೋಡುವವರ ರಂಜನೆಯೂ ಮುಖ್ಯವಾಗಿದ್ದು ಕೆಲವು ಆಟಗಳಲ್ಲಿ ಆಡುವವರಷ್ಟೇ ತೀವ್ರವಾಗಿ ನೋಡುವವರೂ ಆಟದ ಅನುಭವವನ್ನು ಪಡೆಯುತ್ತಾರೆ. ಕೆಲವು ಆಟಗಳಿಗೆ ಫಲಿತಾಂಶ ನಿರ್ಣಯಿಸಲು ಪ್ರತ್ಯೇಕ ನಿರ್ಣಾಯಕರರೂ ಸೋಲು ಗೆಲವು ನಿರ್ಧರಿಸಲು ವಿಶಿಷ್ಟ ಮಾನದಂಡಗಳೂ ಇರುತ್ತವೆ.

ಸ್ತ್ರೀಯರ ಆಟಗಳು

ಸ್ತ್ರೀಯರ ಆಟಗಳು ಸಾಮಾನ್ಯವಾಗಿ ಸರಳವಾದ ಆಟಗಳಾಗಿರುತ್ತವೆ. ಹೆಚ್ಚಾಗಿ ಒಳಾಂಗಣ ಆಟಗಳೂ ಆಗಿರುತ್ತವೆ. ಇವುಗಳಲ್ಲಿ ಜೂಜು ಅಥವಾ ಪಣ ಕಟ್ಟುವಿಕೆ ಕಂಡುಬರುವುದಿಲ್ಲ. ಆಡುವವರ ಕಾಲಕ್ಷೇಪ ಮತ್ತು ಮನರಂಜನೆಯ ಉದ್ದೇಶಗಳು ಪ್ರಧಾನವಾಗಿರುತ್ತವೆ. ಕೆಲವು ಆಟಗಳನ್ನು ಸ್ತ್ರೀ ಪುರುಷರು ಕೂಡಿಯೇ ಆಡಬಹುದು. ಇಂತಹ ಆಟಗಳನ್ನು ಕೇವಲ ಪುರುಷರೇ ಆಡುತ್ತಿದ್ದರೆ ಅಲ್ಲಿ ಪಣ ಮತ್ತು ಜೂಜು  (ಹಣವನ್ನು ಗೆಲ್ಲುವ ) ನಡೆಯಬಹುದು. ಸ್ತ್ರೀಯರೇ ಆಡುವ ಆಟಗಳಲ್ಲಿ ಸ್ಪರ್ಧಾತ್ಮಕತೆ, ಸೋಲು ಗೆಲುವಿನ ಲೆಕ್ಕಾಚಾರ ಕಡಿಮೆ. ತಮ್ಮ ಬಿಡುವಿಲ್ಲದ ಕೆಲಸಗಳ ಶ್ರಮವನ್ನು ಸಹನೀಯಗೊಳಿಸಲು, ಕೆಲಸ ಸರಾಗವಾಗಿ ಸಾಗಲು ಆಡುವ ಆಟಗಳು. ಇವು ಸಾಮಾನ್ಯವಾಗಿ ಮಾತಿನ ಆಟಗಳು ಹಾಡಿನ ಆಟಗಳಾಗಿರುತ್ತವೆ. ಒಡಪುಗಳು, ಒಗಟು ಬಿಡಿಸುವುದು, ಹಾಡಿನ ಸಾಮರ್ಥ್ಯ ಮುಂತಾದವು ಈ ಮಾದರಿಯವಾದರೆ, ಉಡಾಮಣೆ, ಚನ್ನೆಮಣೆ, ಚೌಕಾಬಾರ, ಪಚ್ಚಿಯಂತಹ ಆಟಗಳಲ್ಲಿ ಸೋಲು ಗೆಲುವಿನ ನಿರ್ಣಯಗಳಿವೆ. ಸ್ತ್ರೀಯರ ಹೊರಾಂಗಣ ಆಟಗಳು ಹೊರಾಂಗಣವೆಂದರೆ ಇದಕ್ಕಾಗಿ ಬೃಹತ್ ಮೈದಾನವಾಗಲಿ ಅಂಕಣಗಳಾಗಲಿ ಇರದೆ ಮನೆಯ ಮುಂದಿನ ಚಿಕ್ಕ ಅಂಗಳ ಮನೆಯ ಸುತ್ತಮುತ್ತಲಿನ ಜಾಗಗಳಷ್ಟೇ ಆಟದ ಕ್ಷೇತ್ರಗಳಾಗಿರುತ್ತವೆ. ಇದರಲ್ಲಿ ಹಗ್ಗಜಿಗಿದಾಟ ಇದು ಸಾಂಸ್ಥೀಕರಣ ಗೊಂಡಿರುವ ಆಟವೇ ಆದರೂ ಗ್ರಾಮೀಣದಲ್ಲಿಯೂ ಇದೆ. ಇದರಲ್ಲಿ ಜೀಗಿಯುವ ಸಾಮರ್ಥ್ಯವಷ್ಟೇ ಪರೀಕ್ಷೆಗೊಳಪಡುತ್ತದೆ. ಕುಂಟೋಬಿಲ್ಲೆಯಂತಹ ಆಟಗಳಲ್ಲಿ ತಂಡಗಳ ಮಾದರಿ ಇದ್ದು ಪರಸ್ಪರ ಸ್ಪರ್ಧೆ ಇತುತ್ತದೆ. ಇದಕ್ಕಾಗಿ ನಿಯಮಗಳು, ಸೋತವರಿಗೆ ಶಿಕ್ಷೆಗಳೂ, ಅಂಕಗಳೂ ಇರುತ್ತವೆ.

ಪುರುಷರ ಆಟಗಳು

ಪುರುಷರ ಹೊರಾಂಗಣ ಆಟಗಳು ಮುಖ್ಯವಾಗಿ ಪ್ರದರ್ಶನ ಮಾದರಿಯವಾದರೆ, ಒಳಾಂಗಣ ಆಟಗಳಲ್ಲಿ ಪಣ ಮತ್ತು ಜೂಜಿನ ಪಂದ್ಯಗಳು ಪ್ರಧಾನವಾಗಿರುತ್ತವೆ. ಹೊರಾಂಗಣ ಆಟಗಳಲ್ಲಿ ದೇಹ ಬಲ, ಚಾತುರ್ಯ, ಗುರಿ, ಪ್ರಧಾನವಾಗಿ ಪ್ರತಿಷ್ಠೆ, ಸೋಲು, ಗೆಲುವುಗಳು ಬಹುಮುಖ್ಯವಾಗಿರುತ್ತವೆ. ಮನರಂಜನೆ ಅಥವಾ ಕಾಲಕ್ಷೇಪ ಇಂತಹ ಪ್ರದರ್ಶನ ಪಂದ್ಯಗಳಲ್ಲಿ ಆಡುವವರಿಗಿಂತ ನೋಡುವ ಪ್ರೇಕ್ಷಕರಿಗೆ ಮುಖ್ಯವಾಗಿರುತ್ತದೆ. ಸ್ಪರ್ಧಾತ್ಮಕ ಆಟಗಳಲ್ಲಿ ಇಬ್ಬರು ವ್ಯಕ್ತಿಗಳು, ಗುಂಪಿನಲ್ಲಿ ಒಬ್ಬೊಬ್ಬ ವ್ಯಕ್ತಿಯ ಸಾಮರ್ಥ್ಯ, ಎರಡು ತಂಡಗಳ ಪ್ರತಿಸ್ಪರ್ಧೆಯ ಸಾಮರ್ಥ್ಯಗಳ ಪರೀಕ್ಷೆ ನಡೆಯುತ್ತದೆ. ಆಡುವವರು ಇಂತಹ ಪ್ರದರ್ಶನ ಪಂದ್ಯಗಳಲ್ಲಿ ಹಣ ತೊಡಗಿಸುವುದಕ್ಕಿಂತ ಹೆಚ್ಚಾಗಿ ಪ್ರತಿ ವ್ಯಕ್ತಿ ಅಥವಾ ತಂಡಗಳ ಪರವಾಗಿ ಹಣ ಹೂಡಿ, ಪೇಕ್ಷಕರು ಇಂತಹ ಆಟಗಳಲ್ಲಿ ಪರೋಕ್ಷವಾಗಿ ಭಾಗವಹಿಸುತ್ತಾರೆ.

ಒಳಾಂಗಣ ಆಟಗಳಲ್ಲಿ ಪಗಡೆಯಂತಹ ಆಟಗಳಿದ್ದರೂ ಇವುಗಳನ್ನು ಆಡುವವರು ಕಡಿಮೆ ಕಾರಣ ಇದಕ್ಕಾಗಿ ಬೇಕಾದ ಸಾಧನ ಸಲಕರಣೆಗಳು ವೆಚ್ಚದಾಯಕವಾಗಿರುತ್ತದೆ. ಇದಕ್ಕೆ ಬದಲಾಗಿ ಹುಣಸೇ ಬೀಜ, ಕಲ್ಲು, ಇದ್ದಲಿನಂತಹ ಸಾಮಾನ್ಯ ವಸ್ತುಗಳನ್ನು ಬಳಸಿ ಆಡುವ ಆಟಗಳೇ ಗ್ರಾಮೀಣ ಜನಸಾಮಾನ್ಯರಲ್ಲಿ ಜನಪ್ರಿಯವಾಗಿವೆ. ಹುಣಸೇ ಬೀಜ ಬಳಸಿ , ಚೌಕಾಬಾರಾ, ಪಂಜ, ಕಲ್ಲುಗಳನ್ನು ಬಳಸಿ ಹುಲಿ ಆಡಿನ ಆಟ, ಆನೆ ಆಟ ಮುಂತಾದ ಆಟಗಳನ್ನು ಆಡುತ್ತಾರೆ. ಈ ಆಟಗಳಲ್ಲಿ ಹಣದ ತೊಡಗಿಸುವಿಕೆಯೂ ಇರುತ್ತದೆ. ಹಾಗೆಯೇ ಸ್ಪರ್ಧಿಗಳ ಪರವಾಗಿ ಹಣಕಟ್ಟಿ ಪರೋಕ್ಷವಾಗಿ ಆಟದಲ್ಲಿ ಭಾಗವಹಿಸುವ ಪ್ರೇಕ್ಷಕರೂ ಇರುತ್ತಾರೆ. ಓಡುವುದು, ಜಿಗಿಯುವುದು, ಕುಸ್ತಿಕಾಳಗದಂತಹ ಸಲಕರಣೆ ರಹಿತ ಸ್ಪರ್ಥಾಟಳೂ ದೊಣ್ಣೆವರಸೆ, ಗುಂಡು ಎಸೆಯುವುದು, ಗುರಿಯಿಟ್ಟು ಕಾಯಿ ಹೊಡೆಯುವುದು ಮುಂತಾದ ಹೊರಾಂಗಣ ಆಟಗಳೂ ಇವೆ. ಪ್ರಾಣಿಗಳನ್ನು ಪಳಗಿಸುವುದು, ಬಂಡಿ ಓಡಿಸುವುದು, ಭಾರ ಎತ್ತುಂತಹ ವ್ಯಕ್ತಿಯ ಚಾತುರ್ಯ, ವ್ಯಕ್ತಿಯ ದೇಹ ಸಾಮರ್ಥ್ಯದ ಸ್ಪರ್ಧೆಗಳೂ ಇವೆ.

ಮಕ್ಕಳ ಆಟಗಳು

ವ್ಯಕ್ತಿಗಳು ವಯಸ್ಕರಾಗುವ ಪೂರ್ವದಲ್ಲಿ ಅಂದರೆ ಸರಿ ಸುಮಾರು ಹದಿನೈದು ಹದಿನಾರನೇ ವಯಸ್ಸಿನವರೆಗಿನ ಮಕ್ಕಳು ಆಡುವ ಆಟಗಳನ್ನು ಸ್ಥೂಲವಾಗಿ ಮಕ್ಕಳ ಆಟಗಳು ಎನ್ನಬಹುದು. ಇದರಲ್ಲಿ ಮಕ್ಕಳೇ ಆಡುವ ಆಟಗಳೂ ಹಿರಿಯರ ಮಾರ್ಗದರ್ಶನ ಅಥವಾ ಪರೋಕ್ಷ ತೊಡಗುವಿಕೆಯ ಆಟಗಳೂ ಇವೆ. ಉದಾಹರಣೆಗೆ ಕಣ್ಣಾ ಮುಚ್ಚಾಲೆಯಂತಹ ಆಟಗಳಲ್ಲಿ ಕೆಲವು ಹಿಡಿಯುವ ಆಟಗಳಲ್ಲಿ ಹಿರಿಯರು ಮುಖ್ಯರಾಗಿ, ನಿರ್ಣಾಯಕರಾಗಿ ಆಟಗಳನ್ನು ಆಡಿಸುತ್ತಿರುತ್ತಾರೆ. ಮಕ್ಕಳ ಆಟಗಳಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳು ಕೂಡಿ ಆಡುವ ಆಟಗಳೂ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಪ್ರತ್ಯೇಕವಾಗಿಯೇ ಆಡುವ ಆಟಗಳೂ ಇವೆ.

ಮಕ್ಕಳು ಸಾಮಾನ್ಯವಾಗಿ ಹುಟ್ಟುತ್ತಲೇ ತಾಯಿಂದ, ಅಜ್ಜಿಯಿಂದ ಎತ್ತಿಕೊಳ್ಳುವ ಯಾರಿಂದಲೇ ಆದರೂ ತನ್ನ ಸಾಮಾಜಿಕ ಜೀವನವನ್ನು ಆಟದಿಂದಲೇ ಪ್ರಾರಂಭಿಸುತ್ತಾರೆ. ಮೊದಲ ಹಂತದಲ್ಲಿ ಮುಗುವನ್ನು ಬೇರೆಯವರು ಆಡಿಸಬೇಕು. ಅಂದರೆ ಮಗುವನ್ನು ಸಂತೋಷಪಡಿಸಲು ಆಕರ್ಶಕವಾದ ಬಣ್ಣದ ಆಟಿಕೆಗಳು ವಿವಿಧ ರೀತಿಯ ಶಬ್ಧ ಮಾಡುವ ಆಟದ ಸಾಮಾನುಗಳನ್ನು ಬಳಸಿ ಆಟ ಆಡಿಸುತ್ತಾರೆ. ಹಾಗೆಯೇ ಮಾತು ಕಲಿಯುವ ಮುಂಚೆ ಕಲಿಯುವ ಹಂತದಲ್ಲಿ ಇನ್ನೊಬ್ಬರನ್ನು ಅವಲಂಬಿಸಿರುವ ಸಮಯದಲ್ಲಿ ಮಾತಿನ, ಹಾಡಿನ ರೂಪದ ಶಿಶುಪ್ರಾಸಗಳನ್ನು ಪ್ರಾಣಿ ಪಕ್ಷಿಗಳ ಧ್ವನಿಯನ್ನು ಕೇಳಿಸುತ್ತಾ ಆಡಿಸುತ್ತಾರೆ. ಮಗುವಿಗೆ ಪರಾವಲಂಬನೆ ಕಡಿಮೆಯಾಗಿ ಕೂರುವುದು, ನಡೆಯುವುದು ಆರಂಭಿಸಿದಾಗ ಆಟದ ಸಾಮಾನು ಗಳೊಂದಿಗೆ ತನ್ನಷ್ಟಕ್ಕೆ ತಾನು ಆಟ ಆಡಿಕೊಳ್ಳುತ್ತದೆ. ಈ ಬಗೆಯ ಆಟಗಳು ಕೇವಲ ಮಗುವಿನ ಸಂತಸಕ್ಕೆ ಮಾತ್ರವಾಗಿದ್ದು ಇದಕ್ಕೆ ಸಾರ್ವತ್ರಿಕ ಲಕ್ಷಣ ನಿಯಮಗಳಿಲ್ಲ ಇದು ಆಡಿಸುವವರ ಆ ಸಂದರ್ಭದ ತಿಳುವಳಿಕೆಯ ಸಾಮರ್ಥ್ಯವನ್ನು ಮಾತ್ರ ಅವಲಂಬಿಸಿರುತ್ತದೆ.

ಆಟಗಳ ಭಾಷೆಯ ಸ್ವರೂಪ

ಯಾವುದೇ ಭಾಷೆಯ ಪದಕೋಶದ ಗಾತ್ರವನ್ನು ನಿರ್ದಿಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲವೇನೋ? ಯಾಕೆಂದರೆ ಒಂದು ಭಾಷಿಕ ಸಮುದಾಯ ಎನ್ನುವುದು ಹಲವಾರು ಸಾಮಾಜಿಕ, ಸಂಸ್ಕೃತಿಕ ಬಿಡಿ ಘಟಕಗಳ ಮೊತ್ತವಾಗಿರುತ್ತದೆ. ಹಾಗೆ ನಿರ್ದಿಷ್ಟವಾಗಿ ಒಂದು ಭಾಷೆಯ ಪದಕೋಶದ ವ್ಯಾಪ್ತಿ, ಗಾತ್ರ ಇಷ್ಟೇ ಎಂದು ಹೇಳಬೇಕಾದರೆ ಆ ಭಾಷಿಕ ಸಮುದಾಯ ನಿಜಕ್ಕೂ ಕಲ್ಪಿತ ಸಮುದಾಯ ಮಾತ್ರವಾಗಿರಬೇಕು. ಆ ಕಲ್ಪಿತ ಭಾಷಿಕ ಸಮುದಾಯದ ಎಲ್ಲಾ ವ್ಯಕ್ತಿಗಳೂ ಏಕ ರೂಪದ ಸಾಮಾಜಿಕ ಸಾಂಸ್ಕೃತಿಕ, ಆರ್ಥಿಕ ಚಹರೆಗಳನ್ನು ಹೊಂದಿರಬೇಕು. ಆ ಭಾಷಿಕ ಸಮುದಾಯದ ಎಲ್ಲಾ ವ್ಯಕ್ತಿಗಳ ಆಹಾರ ಕ್ರಮ, ಉಡುಪಿನ ವಿಧಾನದಿಂದ ಹಿಡಿದು, ಮನರಂಜನೆ, ಆಟ, ಊಟ ವಿಧಾನಗಳೂ ಆಚರಣೆ, ನಂಬಿಕೆ ಎಲ್ಲವೂ ಸಾಮಾನ್ಯವಾಗಿದ್ದರೆ ಮಾತ್ರ ಒಂದು ಭಾಷೆಯ ಪದಕೋಶದ ಸ್ವರೂಪವನ್ನು ಗಾತ್ರವನ್ನು ನಿರ್ದಿಷ್ಟವಾಗಿ ಹೇಳಬಹುದೇನೋ? ಯಾಕೆಂದರೆ ಇಂತಹ ಕಲ್ಪಿತ ಸಮುದಾಯದಲ್ಲಿ ಮಾತ್ರ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆಯೂ ಎಲ್ಲಾ ವ್ಯಕ್ತಿಗಳಲ್ಲಿ ಏಕರೂಪದ ಮಾಹಿತಿಯಿರುತ್ತದೆ. ಇಂತಹ ಕಲ್ಪಿತ ಸಮುದಾಯದಲ್ಲಿ ಒಂದು ಪದಕ್ಕೆ ನಿರ್ದಿಷ್ಟ ಅರ್ಥಗಳಿರಲು ಸಾಧ್ಯ. ಮತ್ತು ಒಂದು ಪದಕ್ಕೆ ಒಂದೇ ಅರ್ಥ. ಒಂದು ಅರ್ಥಕ್ಕೆ ಒಂದೇ ಪದ ಇರಲು ಸಾಧ್ಯ. ಇಂತಹ ಕಲ್ಪಿತ ಸಮುದಾಯಗಳಲ್ಲಿ ಸಂದಿಗ್ಧತೆಗಳಿರುವುದಿಲ್ಲ ಎಲ್ಲಾ ಜನರಿಗೂ ಒಂದೇ ಬಗೆಯ ಜೀವನ ಶೈಲಿ ಮಾತಿನ ಶೈಲಿ ಇರುತ್ತದೆ. ಆದರೆ ಪ್ರಸ್ತುತ ಜಗತ್ತಿನಲ್ಲಿ ಇಂತಹ ಯಾವುದೇ ಭಾಷಿಕ ಸಮುದಾಯಗಳಿಲ್ಲ. ಮೊದಲೇ ಹೇಳಿದಂತೆ ಎಲ್ಲಾ ಭಾಷಿಕ ಸಮುದಾಯಗಳೂ ಸಾಮಾನ್ಯವಾಗಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಬಿಡಿಘಟಗಳ ಕೂಟವಾಗಿರುತ್ತದೆ.

ಒಂದು ಭಾಷಿಕ ಸಮುದಾಯದ ಎಲ್ಲಾ ಜನರಿಗೂ ಆ ಭಾಷೆಯ ಎಲ್ಲಾ ಪದಗಳೂ ತಿಳಿದಿರುವುದಿಲ್ಲ. ಹಾಗೂ ತಿಳಿದಿರುವ ಪದಗಳನ್ನು ಬಳಸುವ ಸಂದರ್ಭಗಳೂ ಬರದಿರಬಹುದು, ಆದರೆ ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ಭಾಷಿಕರಲ್ಲಿ ಸಕ್ರಿಯ ಪದಕೋಶ ಮತ್ತು ಒಂದು ಬಗೆಯಲ್ಲಿ ಅಸಕ್ರಿಯ ಪದಕೋಶಗಳು ನೆಲೆಯಾಗಿರುತ್ತವೆ. ಅಂದರೆ ತಾವು ಮಾತನಾಡುವಾಗ ಬಳಸುವ ಪದಕೋಶ ಒಂದಿರುತ್ತದೆ. ಅದನ್ನು ಸಕ್ರಿಯ ಪದಕೋಶವೆಂದು ಕರೆದರೆ ತಾವು ಮಾತಿನಲ್ಲಿ ಬಳಸುವ ಅದರೆ ಇತರರು ಬಳಸುವ ಅದೇ ಭಾಷೆಯ ಪದಗಳು ಅರ್ಥವಾಗುತ್ತವೆ. ಮತ್ತು ಹಾಗೇ ಇತರರಿಂದ ಬಳಕೆಯಾದ ಪದಗಳಿಗೆ ಪ್ರತಿಕ್ರಿಯೆಯಾಗಿ ತಾವು ಬಳಸುವ ಪದಗಳಿಂದ ಪ್ರತಿಕ್ರಿಯಿಸುತ್ತಾರೆ. ಹೀಗೆ ಕೇವಲ ಅರ್ಥವಾಗುವ ಪದಕೋಶವನ್ನು ಅಸಕ್ರಿಯ ಪದಕೋಶವೆನ್ನುತ್ತಾರೆ. ಉದಾಹರಣೆಗೆ ಒಂದು ಭಾಷಿಕ ಸಮುದಾಯದ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಪ್ರಾದೇಶಿಕ ಅಥವಾ ಸಾಮಾಜಿಕ ಪ್ರಬೇಧಗಳನ್ನು ಆಡುತ್ತಿದ್ದರೂ ಪರಸ್ಪರ ಸಂವಹನ ಸರಾಗವಾಗಿಯೇ ನಡೆಯುತ್ತಿರುತ್ತದೆ. ಈ ಎರಡೂ ಬಗೆಯ ಅಂದರೆ ಸಕ್ರಿಯ ಮತ್ತು ಅಸಕ್ರಿಯ ಪದಕೋಶದಲ್ಲಿ ಅರ್ಥ ಅಂದರೆ ಪರಸ್ಪರ ಬಳಸುವ ಪದಗಳ ಅರ್ಥ ಇಬ್ಬರಿಗೂ ತಿಳಿದಿರುತ್ತದೆ. ಉದಾ ಉಪಭಾಷಿಕ ವ್ಯಕ್ತಿಯೊಬ್ಬ  ತಾಯಿಗೆ ಅವ್ವ ಎನ್ನಬಹುದು. ಇನ್ನೊಬ್ಬ ಅಮ್ಮ ಎನ್ನಬಹುದು ಆದರೆ ಪರಸ್ಪರರಿಗೆ ಅವರು ಯಾರನ್ನು ಉದ್ದೇಶಿಸಿ ಪ್ರಸ್ತುತ ಪದವನ್ನು ಬಳಸುತ್ತಿದ್ದಾರೆ ಎಂದು ಪರಸ್ಪರರಿಗೆ ಅರ್ಥ ವಾಗುತಿರುತ್ತದೆ.

ಈ ಮೇಲೆ ಹೇಳಿದ ಬಗೆಯದಲ್ಲದ ಇನ್ನೊಂದು ಬಗೆಯ ಸ್ಥಗಿತ ಪದಕೋಶವು ಭಾಷಿಕರಲ್ಲಿ ನೆಲೆಯಾಗುತ್ತದೆ. ಇಲ್ಲಿ ಆ ಪದಕೋಶ ನಿರ್ದಿಷ್ಟವಾದ ಸಂದರ್ಭ, ವಲಯದಲ್ಲಿ ಮಾತ್ರ ಬಳಕೆಯಾಗುತ್ತದೆ. ಈ ಪದಕೋಶದಲ್ಲಿನ ಪದಗಳಿಗೆ ಅರ್ಥ ಇರಲೇಬೇಕು ಎಂದೇನಿಲ್ಲ. ಅಂದರೆ ಆ ಪದ ಬಳಕೆಯ ಸಂದರ್ಭ ಮತ್ತು ಆವರಣದ ಸೀಮಿತ ನೆಲೆಯಲ್ಲಿ ಒಂದು ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ವ್ಯಕ್ತಿಗಳ ಸಮುದಾಯಕ್ಕೆ ಮಾತ್ರ ಆ ಪದ ಬಳಕೆಯ ಉದ್ದೇಶ ಸ್ಪಷ್ಟವಾಗಿರುತ್ತದೆ. ಆ ನೆಲೆಯನ್ನು ಸಂದರ್ಭವನ್ನು ಹೊರತು ಪಡಿಸಿ ಭಾಷೆಯ ಸಾಮಾನ್ಯ ವ್ಯಾವಹಾರಗಳಲ್ಲಿ ಆ ನಿರ್ದಿಷ್ಟ ಪದಗಳು ಯಾವುದೇ ಕ್ರಿಯಾತ್ಮಕತೆಯನ್ನು ಹೊಂದಿರುವುದಿಲ್ಲ. ಉದಾ : ಕೆಲವು ಆಚರಣೆಗಳಿಗೆ ಸಂಬಂಧಿಸಿದ ಪದಗಳನ್ನು ಗಮನಿಸಬಹುದು. ಮಾಂತ್ರಿಕರು, ಮಾಟಗಾರರು ಬಳಸುವ ಪದಗಳು ಮತ್ತು ಆ ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಗಳು ಬಳಸುವ ಪದಗಳು ಸಾಮಾನ್ಯ ವ್ಯಾವಹಾರಿಕ ವಲಯದಲ್ಲಿ ಅರ್ಥರಹಿತವಾಗಿರುತ್ತವೆ. ಅಂದರೆ ಸಾಮಾನ್ಯ ವ್ಯಾವಹಾರಿಕ ವಲಯದ ಅರ್ಥಕ್ಕೂ ನಿರ್ದಿಷ್ಟ ಅವರಣ ಅಥವಾ ನಿಯಂತ್ರಿತ ವಲಯದ ಅರ್ಥಕ್ಕೂ ಯಾವುದೇ ಬಗೆಯ ಸಂಬಂಧವಿರುವುದಿಲ್ಲ.

ಭಾಷೆ ಬಳಕೆಯಾಗುವ ವ್ಯಾವಹಾರಿಕವಾದ, ದೈನಂದಿನ ಬಳಕೆಯಲ್ಲಿನ ಪದಕೋಶದಲ್ಲಿ ಪದಗಳು, ಪದಗಳ ಅರ್ಥಗಳೂ ಚಲನಶೀಲವಾಗಿರುತ್ತವೆ. ಸಮಾಜ ಸಮುದಾಯದ ಚಲನೆಯೊಡನೆ ಪದಕೋಶಕ್ಕೆ ಹೊಸಪದಗಳು ಸೇರುವುದು, ಹಳೆಯ ಪದಗಳು ಹೊಸ ಅರ್ಥದೊಡನೆ ಪ್ರಯುಕ್ತವಾಗುವುದು, ಪದಗಳ ಅರ್ಥ ಚ್ಛಾಯೆಗಳ ವಿಸ್ತರಣೆಯಾಗುವುದು, ಪದಗಳ ಅರ್ಥ ಚ್ಛಾಯೆಗಳಲ್ಲಿ ಸಂಕುಚಿತವಾಗುವ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಇದನ್ನು ಒಂದುಜೀವಂತ ಭಾಷೆಯ ಲಕ್ಷಣಗಳೆಂದು ವಿದ್ವಾಂಸರು ಗುರುತಿಸುತ್ತಾರೆ. ಭಾಷೆಯೊಳಗೆ ಇದೊಂದು ನಿತ್ಯ  ಸಹಜ ಪ್ರಕ್ರಿಯೆ.

ಆದರೆ ಭಾಷೆಯಲ್ಲಿನ ಪದಕೋಶದ ಸ್ಥಗಿತ ಪದಕೋಶವೆಂಬ ಘಟಕ ಒಂದಿದೆ. ಇಲ್ಲಿ ಸ್ಥಗಿತವೆಂದರೆ ಬಳಕೆಯಾಗದೇ ಇರುವ ಪದಕೋಶವಲ್ಲ, ಈ ಪದಕೋಶವು ಬಳಕೆಯಾಗುತ್ತದೆ. ಆದರೆ ಈ ಪದಕೋಶ ಈ ಘಟಕಕ್ಕೆ ಹೊಸಪದಗಳ ಸೇರ್ಪಡೆಯಾಗುವುದಾಗಲಿ ಅರ್ಥವಿಸ್ತಾರ, ಅರ್ಥಸಂಕೋಚ ಇನ್ನಿತರ ವ್ಯಾವಹಾರಿಕ  ಪದಕೋಶದ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಬದಲಾವಣೆ, ಬೆಳವಣಿಗೆಯಂತಹ   ಪ್ರಕ್ರಿಯೆಗಳು ತೀವ್ರವಾಗಿರುವುದಿಲ್ಲ. ಈ ಸ್ಥಗಿತ ಪದಕೋಶದ ಪದಗಳು ವ್ಯಕ್ತಿ ಅಥವಾ ಸಮುದಾಯಗಳಿಗೆ ಆ ನಿರ್ದಿಷ್ಟ ಬಳಕೆಯ ನೆಲೆ ಮತ್ತು ಆವರಣಗಳನ್ನು ಹೊರತುಪಡಿಸಿ ಬಳಸುವ ಸಂದರ್ಭಗಳು ಬರುವುದಿಲ್ಲ ಆದರೆ ಹೀಗೆ ಸಾಮಾನ್ಯ ವ್ಯಾವಹಾರಿಕ ವಲಯದೊಳಗೆ ಬಳಕೆ ಬಂದರೂ ವ್ಯಾವಹಾರಿಕ ವಲಯದ ಉದ್ದೇಶಿತ ಪದಗಳಿಗೆ ಪರ್ಯಾಯವಾಗಿ ಬಳಕೆಯಾಗಬಹುದು ಬಳಕೆಯಿಂದ ಬಿಟ್ಟುಹೋಗಬಹುದು ಹೊಸ ಅರ್ಥಮಂಡನೆಗಾಗಿ ಬೇರೆ ಪದಗಳನ್ನೇ ಆಕ್ರಮಿಸಬಹುದಾದರೂ ಆ ಪದ ಬಳಕೆಯ ಮೂಲ ನೆಲೆಗಳಲ್ಲಿ ಆವರಣಗಳಲ್ಲಿ ಆ ಪದದ ಆರ್ಥ, ಕ್ರಿಯಾತ್ಮಕತೆ ಬಳಕೆಯ ವಿಧಾನದಲ್ಲಿ ಬದಲಾವಣೆಗಳು ತೀವ್ರವಾಗಿರುವುದಿಲ್ಲ. ಹಾಗೆ ಒಂದು ವೇಳೆ ಬದಲಾವಣೆಗಳು ಸಂಭವಿಸಿದರೂ ಅದಕ್ಕೆ ತಲೆಮಾರುಗಳ ದೀರ್ಘ ಸಮಯ ಬೇಕಾಗುತ್ತದೆ.

ಆಟಗಳಲ್ಲಿ ಬಳಕೆಯಾಗುವ ಪದಕೋಶ ಭಾಷೆಯಲ್ಲಿನ ಈ ಬಗೆಯಸ್ಥಗಿತ  ಪದಕೋಶ ವರ್ಗಕ್ಕೆ ಸೇರುತ್ತದೆ. ಆಟದ ಪದಕೋಶದ ಪದಗಳು ಈಗಾಗಲೇ ಹೇಳಿದಂತೆ ಸಾಮಾನ್ಯ ವ್ಯಾವಹಾರಿಕ ಬಳಕೆಯ ನೆಲೆಗಳಿಗೆ ಬೇರೆ ಬೇರೆ ಉದ್ದೇಶಗಳಿಗಾಗಿ ಬರಬಹುದು. ಆ ವಲಯದಲ್ಲಿ ಚಾಲಿತಿಯಲ್ಲಿದ್ದು ಆ ಪದದ ಜಾಗಕ್ಕೆ ಬೇರೊಂದು ಪದ ಬಂದಾಗ ಬಳಕೆಯಿಂದ ಹೊರಗಾಗಬಹುದು. ವ್ಯಾವಹಾರಿಕ ನೆಲೆಯಲ್ಲಿಯೂ ಈ ಪದಗಳು ನಿರ್ದಿಷ್ಟವಾಗಿ ಬಳಕೆಯ ವಲಯಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಹೋಲಿಕೆ, ಬೈಗಳು ಕೆಲವು ನಿರ್ದಿಷ್ಟ ವಿಷಯಗಳ ಮೇಲಿನ ಅರ್ಥದ ಒತ್ತು ಹೆಚ್ಚಾಗುವಂತೆ ಮಾಡುವ ಉದ್ದೇಶಗಳಿರಬಹುದು. ಉದಾಹರಣೆಗೆ ಕನ್ನಡದಲ್ಲಿ ಬಳಕೆಯಲ್ಲಿರುವ ಅಂದರೆ ವ್ಯಾವಹಾರಿಕವಾಗಿ ಬುಗುರಿ ಆಡಿಸು ಎಂಬ ರೂಪಕ್ಕೆ ಪ್ರಯುಕ್ತವಾಗಿರುವ ಅರ್ಥ, ಯಾರನ್ನಾದರೂ ಗೋಳು ಹೊಯ್ದುಕೊಳ್ಳುವ ಅಥವಾ ಕಾಡುವ ಕ್ರಿಯೆಗೆ ಸಂಬಂಧಿಸಿದೆ. ಈ ಗೋಳು ಹೊಯ್ದುಕೊಳ್ಳುವ ಕಾಡುವ ಅರ್ಥ ಸೂಚಿಸಲು ವ್ಯಾವಹಾರಿಕ ಕನ್ನಡದಲ್ಲಿ ‘ಬುಗುರಿ ಆಡಿಸು’ ರೂಪಕ್ಕೆ ಬದಲಾಗಿ ‘ಸೈಕಲ್ ಹೊಡಿಸು’ ಎಂಬ ರೂಪ ಬಳಕೆಗೆ ಬರಬಹುದು ಇದು ವ್ಯಾವಹಾರಿಕ ಪದಕೋಶದಲ್ಲಿನ ಬಳಕೆಗೆ ಸಂಬಂಧಿಸಿ ಬದಲಾವಣೆಯಾಗುತ್ತದೆ. ಆದರೆ ಆಟದ ನೆಲೆಯ ‘ಬುಗುರಿ ಆಡಿಸು’  ಎನ್ನುವ ರೂಪದ ಅರ್ಥ, ಅರ್ಥಚ್ಛಾಯೆಗಳನ್ನು ಬಿಟ್ಟು ಕೊಟ್ಟಂತಲ್ಲ. ಈ ಮಾತಿನ ಉದ್ದೇಶ ಆಟದ ನೆಲೆಯಿಂದ ಪದಗಳು ಸಾಮಾನ್ಯ ಬಳಕೆಯ ವಲಯಕ್ಕೆ ಬರಬಹುದಾದರೂ ಆ ಪದ ಬಳಕೆಯ ಪ್ರಕ್ರಿಯೆ ಅರ್ಥ, ಬದಲಾವಣೆಗಳು ವ್ಯಾವಹಾರಿಕ ಬಳಕೆಯ ವಲಯಕ್ಕೆ ಸಂಬಂಧ ಪಟ್ಟವೇ ಆಗಿರುತ್ತವೆಯೇ ಹೊರತು ಆಟದ ನೆಲೆಯ ಬಳಕೆಯಲ್ಲಿ ಯಾವುದೇ ಬಗೆಯ ವ್ಯತ್ಯಾಸಗಳಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವುದಾಗಿದೆ. ಒಂದು ಭಾಷೆಯ ಪದಕೋಶದಲ್ಲಿ ಸಕ್ರಿಯ ಪದಕೋಶದಂತೆ ಅಸಕ್ರಿಯ ಪದಕೋಶವೂ ಇರುತ್ತದೆ. ಹಾಗೆಯೇ ಭಾಷೆಯೊಳಗೆ ಸಕ್ರಿಯ ಅಸಕ್ರಿಯವಾಗಿದ್ದರೂ ‘ಸ್ಥಗಿತ’ ಅಥವಾ ಚಲನೆ ಇಲ್ಲದ ಆದರೆ ಬಳಕೆಯಲ್ಲಿರುವ ಪದಕೋಶವೂ ಒಂದಿರುತ್ತದೆ.

ಆಟಗಳ ಹೆಸರಿನ ರಚನೆಗಳು

ಆಟಗಳನ್ನು ಹೆಸರಿಸುವ ಭಾಷಿಕರಚನೆಗಳು ವಿಶಿಷ್ಟವಾಗಿವೆ. ಆಟದ ಪರಿಕರಗಳನ್ನು ಆಧರಿಸಿದ ಹೆಸರುಗಳು, ಆಟದ ವಿಧಾನವನ್ನು ಅನುಸರಿಸಿದ ಹೆಸರುಗಳು ಮುಖ್ಯವಾಗಿವೆ. ಸಾಧನ ಸಲಕರಣೆಗಳನ್ನು ಬಳಸಿ ಆಡುವ ಆಟಗಳಲ್ಲಿ ಆಟದ ಹೆಸರುಗಳು ಆ ಸಾಧನ ಸಲಕರಣೆಗಳನ್ನು ಆಧರಿಸಿದ್ದರೂ ಕೆಲವು ಆಟಗಳಲ್ಲಿ ಆಟದ ವಿಧಾನವನ್ನು ಅನುಸರಿಸಿದ ಹೆಸರುಗಳೇ ಬಳಕೆಯಲ್ಲಿವೆ. ಉದಾಹರಣೆಗೆ ಗೋಲಿ ಆಟ, ಬುಗರಿ ಆಟಗಳು, ಗೋಲಿ ಆಟದಲ್ಲಿ ಮೀರಿ, ಅಂಡೆ, ಗುಳಿತುಂಬುವ ಆಟ, ಬ್ರಿಂಗ್ ಆಟ, ಕಾರೇ ಬೀರೇ ಇತ್ಯಾದಿ ಒಳ ವಿಧಾನಗಳಿವೆ. ಹಾಗೆಯೇ ಬುಗರಿ ಆಟದಲ್ಲಿಯೂ ಗಿಚ್ಚಿ ಆಟ, ಗುನ್ನದಾಟ, ನೆತ್ತಿಗುಣ್ಣ, ತನ್ನಾರಿ, ಸಪ್ಪೆ ತನ್ನಾರಿ, ಅಪ್ಪೀಟ್ ಆಟ ಇತ್ಯಾದಿಗಳಿವೆ.  ಸಾಧನ ಸಲಕರಣೆಗಳಿಲ್ಲದೆ ಆಡುವ ಆಟಗಳಲ್ಲಿ ಆಟದ ವಿಧಾನ, ಆಟದಲ್ಲಿ ಆಟಗಾರರು ನಿರ್ವಹಿಸುವ ಪಾತ್ರ ಇತ್ಯಾದಿಗಳನ್ನು ಆಧರಿಸಿ ಆಟದ ಹೆಸರುಗಳು ರೂಢಿಯಾಗಿವೆ. ಉದಾಹರಣೆಗೆ ರಾಜ ಮಂತ್ರಿ ಆಟ, ಕಳ್ಳ ಪೋಲಿಸ್ ಆಟ, ಕಣ್ಣಾಮುಚ್ಚಾಲೆ, ಕುಂಟಾಟ, ಮುಚ್ಚಾಟ, ಕಣ್ಣು ಕಟ್ಟ್ ಆಟ ಇತ್ಯಾದಿ. ಆಟದ ಹೆಸರುಗಳ ರಚನೆಯಲ್ಲಿ ಏಕ ಪದ ರಚನೆಗಳಿಗೆ – ಆಟ ಪದವನ್ನು ಸೇರಿಸುವ ಮುಖಾಂತರ ಆಟ ಪ್ರಧಾನವಾಗಿ ಆಟದ ಹೆಸರು ಎಂಥಹ ಆಟ ಎಂಬುದನ್ನು ವಿವರಿಸುವ ಪದವಾಗಿರುತ್ತದೆ. ಉದಾಹರಣೆಗೆ ಮುಟ್ಟುಆಟ – ಮುಟ್ಟಾಟ, ಕುಂಟುಆಟ – ಕುಂಟಾಟ, ಕಲ್ಲುಆಟ – ಕಲ್ಲಾಟ, ಗುಂಡುಆಟ – ಗುಂಡಾಟ, ಬುಗುರಿಆಟ – ಬುಗುರಿಯಾಟ ಇತ್ಯಾದಿ ಇಲ್ಲಿ ಆಟವನ್ನು ವರ್ಣಿಸುತ್ತಿರುವ ಪದ ಆಟದ  ಸಲಕರಣೆಯನ್ನು ಆಧರಿಸಿರಬಹುದು ಅಥವಾ ಆಟದ ವಿಧಾನವನ್ನು ಆಧರಿಸಿರಬಹುದು.

ಎರಡು ಪದಗಳ ರಚನೆಯುಳ್ಳ ಆಟದ ಹೆಸರುಗಳಿಗೆ ಸಾಮಾನ್ಯವಾಗಿ ಆಟ ಪದ ವಿವರಿಸುವ ಪದವಾಗಿ ಸೇರುವುದಿಲ್ಲ. ಉದಾಹರಣೆಗೆ ಚಿಣ್ಣಿಕೋಲು, ಚೆನ್ನೆಮಣೆ, ಚೌಕಾಬಾರಾ, ಕುಟ್ಟಿದೊಣ್ಣೆ ಇತ್ಯಾದಿ ಆದರೆ ಇದು ಕಡ್ಡಾಯ ನಿಯಮವಲ್ಲ.

ಆಟದ ಭಾಷೆಯ ಪ್ರಾದೇಶಿಕತೆ

ಸಾಮಾನ್ಯ ವ್ಯಾವಹಾರಿಕ ಬಳಕೆಯ ಭಾಷೆಗೆ ಪ್ರಾದೇಶಿಕ, ಸಾಮಾಜಿಕ ಆಯಾಮಗಳಿರುವುದು ಈಗಾಗಲೇ ತಿಳಿದ ವಿಷಯ. ಆಟದ ಭಾಷಗೆ ಸಂಬಂಧಿಸಿ ಸ್ಥಳೀಯವಾಗಿ ರೂಪುಗೊಂಡ ಆಟಗಳಿಗೆ ಆಯಾ ಪ್ರದೇಶದ ಸ್ಥಳೀಯ ಭಾಷೆಯ ಅಥವಾ ಪರಿಸರದ ಭಾಷಯೆ ರೂಪಗಳು ಸಹಜವಾಗಿಯೇ ಬಳಕೆಯಾಗುತ್ತವೆ. ಕೆಲವು ಆಟಗಳು ಕರ್ನಾಟಕದ ಎಲ್ಲಾ ಕಡೆಯೂ ಆಡಲ್ಪಡುತ್ತವೆ,. ಆಟದ ಒಳವಿಧಾನಗಳಲ್ಲಿ ವ್ಯತ್ಯಾಸಗಳಿರಬಹುದಾದರೂ ಮೂಲಭೂತವಾಗಿ ಬಳಸುವ ಪರಿಕರಗಳು ಸಾಮಾನ್ಯವಾಗಿತುತ್ತವೆ. ಈ ಪರಿಕರಗಳಿಗೆ ಸಂಬಂಧಿಸಿದ ಹೆಸರುಗಳು ಆಟದ ನಿಯಮಗಳಿಗೆ  ಸಂಬಂಧಿಸಿದ ಹೆಸರುಗಳು / ಭಾಷಿಕ ರೂಪಗಳನ್ನು ಗಮನಿಸಿದರೆ ಎಷ್ಟೋ ವೇಳೆ ಆ ಆಟಗಳು ಯಾವ ಭಾಷಾ ಮೂಲದಿಂದ ಪ್ರವೇಶ ಪಡೆದಿರಬಹುದೆಂದು ಊಹಿಸಬಹುದಾಗಿದೆ. ಒಂದೇ ಬಗೆಯ ಪರಿಕರಗಳಿಗೆ ಸ್ಥಳೀಯ ಪ್ರಾದೇಶಿಕ ಹೆಸರುಗಳೂ ಹಾಗೂ ಅನ್ಯದೇಸೀ ಹೆಸರುಗಳೂ ಬಳಕೆಯಲ್ಲಿದ್ದು ಆಟದ ಒಳಗಿನ ನಿಯಮಗಳಿಗೆ ಸಂಬಂಧಿಸಿದ  ಭಾಷಿಕ ಘಟಕಗಳು ಸ್ಥಳೀಯವೇ ಅಥವಾ ಅನ್ಯದೇಸೀಯವೇ? ಎಂಬ ಆಂಶಗಳನ್ನು ಗಮನಿಸಿ ವಿಶ್ಲೇಷಿಸಿದರೆ ಸಾಮಾಜಿಕ ಸಾಂಸ್ಕಿತಿಕ ಚರಿತ್ರೆಯ ವಿವರಕ್ಕೆ ಹೊಸ ಹೊಳಹುಗಳು ದೊರೆಯಬಹುದು.

ಕರ್ನಾಟಕದ ಬಹುಪಾಲು ಕಡೆ ಚಿಣ್ಣಿಕೋಲು ಆಟ ಬಳಕೆಯಲ್ಲಿದೆ. ಈ ಆಟಕ್ಕೆ ಬಳಕೆಯಾಗುವ ಪರಿಕರ ಸಾಮಾನ್ಯವಾಗಿ ಎರಡು ಕಡೆ ಚೂಪು ಮಾಡಿರುವ ಐದಾರು ಇಂಚಿನ ಒಂದು ಸಣ್ಣ ಮರದ ತುಂಡು, ಅದನ್ನು ಹೊಡೆಯಲು ಮೊಳದುದ್ದ ಇರುವ ಕೋಲು ಈ ಪರಿಕರಗಳನ್ನು ಬಳಸಿ ಕರಾವಳಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಎಲ್ಲಾ ಕಡೆಯೂ ಹುಡುಗರು ಮಾತ್ರ ಆಟವಾಡುತ್ತಾರೆ. ಉತ್ತರ ಕರ್ನಾಟಕ ಬೀದರ್, ಗುಲಬರ್ಗಾ ಪರಿಸರದಲ್ಲಿ ಚಿಣಿಫಣಿ ಮಧ್ಯ ಕರ್ನಾಟಕ ಮತ್ತು  ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿಣ್ಣಿಕೋಲು ಕರಾವಳಿ ಕರ್ನಾಟಕದಲ್ಲಿ ಕುಟ್ಟಿದೊಣ್ಣೆ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ಪರಿಸರಗಳಲ್ಲಿ ಚಿಣ್ಣಿಕೋಲು, ಚಿನ್ನಿದಾಂಡು, ಗಿಲ್ಲಿದಾಂಡು ಎಂಬ ಹೆಸರುಗಳು ಇವೆ. ಮೈಸೂರು, ಮಂಡ್ಯ, ಹಾಸನ, ತುಮಕೂರು ಬೆಂಗಳೂರು,ಪ್ರದೇಶದ ಒಂದು ಬಗೆಯ ಆಟದಲ್ಲಿ ಆಟದ ನಿಯಮಗಳೂ ಆಟದೊಳಗಿನ ಪದಗಳು ಇಂಗ್ಲಿಷ್‌ನಲ್ಲಿ ಇವೆ. ರಡೆ, ಯೆಸ್, ಜಂಪ್, ಡಬಲ್, ಟು – ದಾಂಡಲ್, ಸ್ಕ್ವೈಟ್, ಬ್ಯಾಂಕ್, ಸ್ಕೋರ್. ಕೋರ್ಟ್ ಇತ್ಯಾದಿ. ಸ್ಥಳೀಯ ಆಟದ ಒಳಗಿನ ಪದಗಳಲ್ಲಿ ಕನ್ನಡ ಪದಗಳೇ ಬಳಕೆಯಾಗುತ್ತವೆ. ಉದಾಹರಣೆಗೆ ಕುಟ್ಟ್, ಒಂದು ಕುಟ್ಟ್, ಮೂರ್ ಬೀಸ್ ಇತ್ಯಾದಿ. ಚಿಣ್ಣಿಪದ ಕರಾವಳಿಯನ್ನು ಹೊರತು ಪಡಿಸಿ ಎಲ್ಲಾ ಕಡೆ ಬಳಕೆಯಲ್ಲಿದ್ದರೂ ಇದಕ್ಕೆ ಜೋಡಿಯಾಗಿ ಬರುವ ಪದ ಕರ್ನಾಟಕದಾದ್ಯಂತ ಭಿನ್ನವಾಗಿದೆ. ಬೀದರ್, ಗುಲಬರ್ಗಾ, ಬಿಜಾಪುರ ಪರಿಸರದಲ್ಲಿ – ಫಣಿ (ಚಿಣಿ ಫಣಿ) ಎಂಬ ಪದದೊಂದಿಗೆ ಬಂದರೆ ಮೈಸೂರು, ಬೆಂಗಳೂರು ಪರಿಸರದಲ್ಲಿ – ಕೋಲು (ಚಿಣ್ಣಿ ಕೋಲು) – ದಾಂಡು (ಚಿಣ್ಣಿ ದಾಂಡು) ಎಂಬ ಪದಗಳೊಂದೊಗೆ ಮಾತ್ರ ಬರುತ್ತದೆ. ದಕ್ಷಿಣ ಕರ್ನಾಟಕ ಮತ್ತು ಮಧ್ಯಕರ್ನಾಟಕದಲ್ಲಿ ‘ಗಿಲ್ಲಿ’ ಎಂಬ ಪದ ಬಳಕೆಯಾದರೂ ಆಡು ಆಟದ ಸಾಧನವೂ ಹೌದು ಆಟದೊಳಗೆ ಆ ಸಾಧನವನ್ನು ಒಂದು ಬಾರಿ ಕೋಲಿನಿಂದ ಎತ್ತಿ ಎರಡನೇ ಬಾರಿಗೆ ಬೀಸಿ ಹೊಡೆಯುವ ಪ್ರಕ್ರಿಯೆನ್ನು ‘ಗಿಲ್ಲಿ’ ಎನ್ನುವುದು ಇದೆ. ಗಿಲ್ಲಿದಾಂಡು, ಚಿಣ್ಣಿಕೋಲು, ಕುಟ್ಟಿದೊಣ್ಣೆ ಮೂರು ರೂಪಗಳಲ್ಲಿನ ಗಿಲ್ಲಿ, ಚಿಣ್ಣಿ , ಕುಟ್ಟಿ ಮೂರು ರೂಪಗಳೂ ‘ಚಿಕ್ಕದು’ ಎಂಬ ಆರ್ಥದಲ್ಲಿಯೂ ಕೋಲು, ದಾಂಡು, ದೊಣ್ಣೆ, ಎಂಬ ರೂಪಗಳೂ ಒಂದೇ ಅರ್ಥವನ್ನು ಹೊಂದಿವೆ.

ಬುಗುರಿ ಎಂಬ ಪದ ಕರ್ನಾಟಕದಾದ್ಯಂತ ಬಳಕೆಯಲ್ಲಿದ್ದರೂ ಬಗರಿ ಎಂಬ ವಿಕಲ್ಪರೂಪ ಉತ್ತರ, ಮಧ್ಯ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಆಟದ ಕ್ರಮದಲ್ಲಿ ಒಂದು ಬುಗುರಿಯ ಮೊಳೆಯಿಂದ ಎದುರಾಳಿಯ ಬುಗುರಿಗೆ ಗುದ್ದಿ ಅಥವಾ ಹೊಡೆದು ಮಾಡುವ ಏಟಿಗೆ ದಕ್ಷಿಣ ಕರ್ನಾಟಕದಲ್ಲಿ ಗುನ್ನ, ಗುಣ್ಣ ಎಂಬ ರೂಪಗಳಿದ್ದರೆ ಉತ್ತರ ಮಧ್ಯ ಕರ್ನಾಟಕದಲ್ಲಿ  ಗಿಚ್ಚಿ, ಗಿಚ್ಚ, ಗಿರ್ಚ ರೂಪಗಳೂ ಬಳಕೆಯಲ್ಲಿವೆ. ಬುಗುರಿ ಆಟದ ವೈಶಿಷ್ಟ್ಯವೆಂದರೆ ಅಪ್ಪೀಟ್ ಎನ್ನುವ ಒಂದು ಇಂಗ್ಲಿಷ್ ಪದ ಮಾತ್ರ ದಕ್ಷಿಣ, ಮಧ್ಯ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಳಕೆಯಲ್ಲಿದೆ. ಕೆಲವು ಕಡೆ ಅಪಾಟ್, ಪೀಟ್ ಎನ್ನುವ ವಿಕಲ್ಪ ರೂಪಗಳಿದ್ದರೂ ಬೇರೆ ಯಾವ ಇಂಗ್ಲಿಷ್ ಪದವೂ ಬುಗುರಿ ಆಟದೊಳಗಡೆ ಕಾಣಿಸುತ್ತಿಲ್ಲ. ದಕ್ಷಿಣ ಕರ್ನಾಟಕದ ಮೈಸೂರು, ಮಂಡ್ಯ ಹಾಸನ ಪರಿಸರದ ಬುಗುರಿ ಆಟದಲ್ಲಿ ಆಟದ ಒಳಗೆ ಬಳಕೆಯಾಗುವ ನಿಯಮಗಳಿಗೆ, ವಿಧಾನಗಳಿಗೆ ಸಂಬಂಧಿಸಿ ಉರ್ದು, ಹಿಂದಿ ಮೂಲದ ಪದಗಳಿವೆ. ಉದಾಹರಣೆಗೆ ಚಾಟಿ, ಡೀಲಿ, ಗುನ್ನ, ಆರ್ ಪಾರ್ ಇತ್ಯಾದಿ. ಹಾಗೆಯೇ ಗೋಲಿ ಆಟಕ್ಕೆ ಸಂಬಂಧಿಸಿಯೂ  ಆಟದ ಒಳಗೆ ಆಟದ ವಿಧಾನಗಳಿಗೆ  ಸಂಬಂಧಿಸಿ ಅನೇಕ ಇಂಗ್ಲಿಶ್ ಭಾಷಾ ರೂಪಗಳು ಬಳಕೆಯಾಗುತ್ತವೆ. ಇದನ್ನು ಅನ್ಯಭಾಷಾ ರೂಪಗಳ ವಿವರಣೆ ನೀಡಿರುವ ಭಾಗದಲ್ಲಿ ವಿವರಿಸಲಾಗಿದೆ.

ಕರಾವಳಿಯ ಚೆನ್ನೆಮಣೆ ಆಟದ ವಿವಿಧ ಮಾದರಿಗಳು ಕರ್ನಾಟಕದ ಮಧ್ಯಭಾಗ, ಮಲೆನಾಡು, ದಕ್ಷಿಣ ಕರ್ನಾಟಕದಲ್ಲಿ ಬೇರೆ ಬೇರೆ ಹೆಸರುಗಳಿಂದ ಬಳಕೆಯಲ್ಲಿವೆ. ದಕ್ಷಿಣ ಕನ್ನಡದಲ್ಲಿ ಚೆನ್ನೆ ಬೀಜಗಳನ್ನು ಬಳಸಿ ಆಡುವ ಆ ಆಟವನ್ನು ಚೆನ್ನೆಮಣೆ ಎನ್ನುವ ಹೆಸರಿನಿಂದ ಕರೆಯುತ್ತಾರೆ. (ಚೆನ್ನೆ ಆಟ ಎಂಬ ಹೆಸರೂ ಇರುವುದರಿಂದ ಆಟದ ಮೂಲದಿಂದ ಆ ಬೀಜಗಳಿಗೆ ಆ ಹೆಸರು ಪ್ರಾಪ್ತವಾಗಿದೆಯೋ ಅಥವಾ ಆ ಬೀಜಗಳ ಹೆಸರಿನಿಂದ ಆಟಕ್ಕೆ ಹೆಸರು ಬಂದಿದೆಯೋ ಎನ್ನುವ ಪ್ರಶ್ನೆ ಇದೆ.) ತುಮಕೂರು ಪರಿಸರದಲ್ಲಿ ಈ ಆಟವನ್ನು ಹಂಗಾರಕನ ಕಾಳು ಬಳಸಿ ಆಡುತ್ತಾರೆ. ಇಲ್ಲಿ ಬಟ್ಗುಳಿ ಮಣೆ ಎಂಬ ಹೆಸರಿದೆ. ಈ ರಚನೆಯಲ್ಲಿ ಆಟಕ್ಕೆ ಬಳಸುವ ಮಣೆ ಪ್ರಧಾನವಾಗಿದೆ. ಮೈಸೂರು, ಚಾಮರಾಜನಗರ ಪರಿಸರಗಳಲ್ಲಿ ಹಳ್ಗುಳಿ / ಅಳ್ಗುಳಿ ಮಣೆ ಎಂಬ ಹೆಸರುಗಳೂ ಬಳಕೆಯಲ್ಲಿವೆ. ಇಲ್ಲಿ ಹುಣಸೇ ಬೀಜಗಳನ್ನು ಪ್ರಧಾನವಾಗಿ ಆಟಕ್ಕೆ ಬಳಸಲಾಗುತ್ತದೆ.

ಚೌಕಾಬಾರಾ ಆಟದಲ್ಲಿ ಬಳಕೆಯಾಗುವ ತೇಯ್ದ ಹುಣಸೇ ಬೀಜಗಳಿಗೆ ಮೈಸೂರು ಪರಿಸರದಲ್ಲಿ ಪಿಚ್ಚಿ / ಪಚ್ಚಿ, ಬ್ಯಾಳೆ ಎಂಬ ಹೆಸರುಗಳಿದ್ದರೆ ಶಿರಾ, ಹುಳಿಯಾರು ಪ್ರದೇಶಗಳಲ್ಲಿ ಪಿಕ್ಕ, ಪಿತ್ತ ಎಂಬ ಹೆಸರುಗಳಿವೆ.

ಆಟದ ವಲಯಗಳಲ್ಲಿ ಬಳಕೆಯಾಗುವ ಭಾಷಾರೂಪಗಳು ಪೂರ್ಣವಾಗಿ ಪ್ರದೇಶ ನಿಷ್ಠವಲ್ಲ. ಅಂದರೆ ಮೇಲೆ ಉದಾಹರಿಸಿದ ಆಟಗಳ ಹಿನ್ನೆಲೆಯಲ್ಲಿ ಎಷ್ಟೋ ಪದಗಳು ಆಟ ಮತ್ತು ಆಟದ ವಿಧಾನಗಳಲ್ಲಿ ಆಟದೊಂದಿಗೆ ಬೇರೆ ಪ್ರದೇಶಗಳಿಂದ ಬಂದು ಇನ್ನೊಂದು ಪ್ರದೇಶದ ಆಟದ ವಲಯಕ್ಕೆ ಪ್ರವೇಶಿಸಿ ಆಟದ ಬಳಕೆಗೆ ಸೀಮಿತವಾಗಿವೆ.