ಚಕೋರಿ ಆಟ : ಸೀಧನೂರು ಪರಿಸರದಲ್ಲಿ ಮನೆ ಬರೆದು ತೇಯ್ದ ಹುಣಿಸೇ ಬೀಜಗಳನ್ನು ಬಳಸಿ ಆಡುವ ಆಟ.

ಚಕ್ಕರ ಆಟ : ಬಿಜಾಪುರ ಪರಿಸರದಲ್ಲಿ ಹುಣಿಸೇ ಬೀಜಗಳನ್ನು ಬಳಸಿ ಆಡುವ ಆಟ ಇತರೆಡೆ ಇದನ್ನು ಕಟ್ಟೇಮನೆ ಚೌಕಾಬಾರ ಹೆಸರುಗಳಿಂದ ಕರೆಯುತ್ತಾರೆ.

ಚಕ್ಕೇರಿ : ರಾಯಚೂರು, ಮಾನ್ವಿ ಪರಿಸರದಲ್ಲಿ ಆಡುವ ಆಟ ಇದನ್ನು ಇತರೆಡೆ ಕಟ್ಟೆ ಮನೆ, ಚೌಕಮನೆ, ಚೌಕಾಬಾರ ಇತರೆ ಹೆಸರುಗಳಿಂದ ಕರೆಯುತ್ತಾರೆ.

ಚಣಮಣಿ : ಶಿಕಾರಿಪುರ, ಸಾಗರ ಪರಿಸರದಲ್ಲಿ ಚೆನ್ನಮಣೆ ಆಟದ ಹೆಸರು.

ಚನ್ನೆ ಆಟ : ಉತ್ತರ ಕನ್ನಡ ಹರಳಾಟದ ಒಂದು ಬಗೆ. ಮಣೆಯಲ್ಲಿ ಸಣ್ಣ ಸಣ್ಣ ೧೪ ಕುಳಿಗಳಿರುತ್ತವೆ. ಇದರಲ್ಲಿ ಚನ್ನೆ ಕಾಳು ಬಳಸಿ ಇಬ್ಬರು ಆಡುಬಹುದಾದ ಆಟ. ಇದೇ ಆಟ ಅಟ್ಟಗುಳಿ ಮಣೆ ಹಳ್ಳುಮಣೆ, ಅಳಗುಳಿ ಮಣೆ, ಇತ್ಯಾದಿ ಹೆಸರುಗಳಿಂದ ಕರ್ನಾಟಕದ ಬಹುಪಾಲು ಕಡೆ ಈ ಆಟವನ್ನು ಆಡುತ್ತಾರೆ.

ಚವ್ವಾ : ಬಳ್ಳಾರಿ, ಹೊಸಪೇಟೆ ಪರಿಸರದಲ್ಲಿ ಆಡುವ ಇತರೆಡೆ ಕಟ್ಟೆ ಮನೆ, ಚೌಕಾಬಾರಾ ಹೆಸರಿನಿಂದ ಕರೆಯುವ ಆಟ.

ಚಾಟಿ ಆಟ : ಹಗರಿಬೊಮ್ಮನಹಳ್ಳಿ ಪರಿಸರದ ಬುಗುರಿ ಆಟದ ಒಂದು ಬಗೆ.

ಚಾವಂಗ್ದಾಟ : ಉತರ ಕನ್ನಡದಲ್ಲಿ ಪರಿಸರದಲ್ಲಿ ಹುಣಿಸೇ ಬೀಜಗಳನ್ನು ತೇಯ್ದು ಆಡುವ ಒಂದು ಆಟ. ಇತರೆಡೆ ಇದನ್ನು ಚೌಕಾಬಾರ, ಗಟ್ಟದಮನೆ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಚಾವಿ : ಹುಣಸೇ ಬೀಜುಗಳನ್ನು ತೇಯ್ದು ಬೇರೆ ಭಾಗಗಳಲ್ಲಿ ಆಡುವ ಜೌಕಾಬಾರ ಆಟದ ಮಾದರಿಯ ಆಟ ಬಳ್ಳಾರಿ ಜಿಲ್ಲೆಯ ಪರಿಸರದಲ್ಲಿ ಆಡುತ್ತಾರೆ.

ಚಿಚಾಪ್ಆಟ : ಮೈಸೂರು ಪರಿಸರದ ಕುಂಟೆ ಬಿಲ್ಲೆ ಆಟದ ಒಂದು ಬಗೆ.

ಚಿಣಿಪಣಿ : ಬಾಗಲಕೋಟೆ ಹುನಗುಂದ ಪರಿಸರದ ಒಂದು ಆಟ ಇತರ ಕಡೆಯ ಚಿಣ್ಣಿ ಕೋಲು, ಗಿಲ್ಲಿದಾಂಡು ಮಾದರಿಯ ಆಟಗಳಾಗಿವೆ.

ಚಿಣ್ಣಿಕೋಲು ಆಟ : ಈ ಆಟವನ್ನು ಕರ್ನಾಟಕದಾದ್ಯಂತ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಕುಟ್ಟಿದೊಣ್ಣೆ, ಬೀದರ್ ನಲ್ಲಿ ಗಿಲ್ಲಿಪಣಿ, ಮೈಸೂರಿನಲ್ಲಿ ಗಿಲ್ಲಿದಾಂಡು, ಚಿಣ್ಣಿದಾಂಡು, ಇತರೆ ಹೆಸರುಗಳಿವೆ.

ಚಿಣ್ಣಿಗಾರ : ತುಮಕೂರಿನ ಹುಳಿಯಾರು ಪರಿಸರದಲ್ಲಿ ಹುಡುಗರು ಆಡುವ ಆಟ, ಇತರೆಡೆ ಚಿಣ್ಣಿಕೋಲು ಗಿಲ್ಲಿದಾಂಡು ಇತರೆ ಹೆಸರುಗಳಿಂದ ಜನಪ್ರಿಯ.

ಚಿಣ್ಣಿದಾಂಡಗ : ತುಮಕೂರು ಗುಬ್ಬಿ ಪರಿಸರದಲ್ಲಿ ಆಡುವ ಚಿಣ್ಣಿಕೋಲು ಆಟ.

ಚಿಣ್ಣಿ ದಾಂಡಲ್‌ : ರಾಮನಗರ ಕನಕಪುರ ಪರಿಸರದಲ್ಲಿ ಗಂಡು ಮಕ್ಕಳು ಆಡುವ ಆಟ. ಇತರೆಡೆ ಚಿಣ್ಣಿಕೋಲು, ಗಿಲ್ಲಿದಾಂಡು ಆಟ ಎಂದು ಕರೆಯುತ್ತಾರೆ.

ಚಿತ್ತಟಪ್ಪ : ಬಿಜಾಪುರ ಪರಿಸರದಲ್ಲಿ ಹುಣೆಸೇ ಬೀಜಗಳನ್ನು ಬಳಸಿ ಆಡುವ ಆಟ. ಚಿತ್ತ ಎಂದರೆ ನಾಲ್ಕು ಟಪ್ಪ ಎಂದರೆ ಎಂಟು. ಚಿತ್ತ ಎಂದರೆ ಹುಣಿಸೆ ಬೀಜದ ನಾಲ್ಕು ಕಾಳುಗಳೂ ಬಿಳಿಭಾಗ ಮೇಲ್ಮುಖವಾಗಿ ಬೀಳುತ್ತವೆ. ಟಪ್ಪ ಎಂದರೆ ಕಪ್ಪು, ಭಾಗ ಮೇಲ್ಮಖವಾಗ ಬಿದ್ದಿರುತ್ತವೆ.

ಚಿನಿಪನಿ : ಕಷ್ಟಗಿ ಪರಿಸರದ ಚಿಣ್ಣಿದಾಂಡು ಆಟ.

ಚಿನ್ನಿಕೋಲು : ಕೊಳ್ಳೆಗಾಲದ ಪರಿಸರದಲ್ಲಿ ಹುಡುಗರಾಡುವ ಚಿಣ್ಣಿಕೋಲು ಆಟ.

ಚಿಪುಳು ಚಿಪುಳು : ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಾಟದ ಒಂದು ವಿಧ.

ಚೀಣಿ ಆಟ : ಯಾದಗೀರ ಪ್ರದೇಶದ ಆಟ ಇತರೆಡೆ ಚಿಣ್ಣಿ ಕೋಲು, ಗಿಲ್ಲಿದಾಂಡು ಹೆಸರಿನಿಂದ ಕರೆಯುವ ಆಟ.

ಚೂರ್ ಚೆಂಡು : ರಾಮನಗರ ಕನಕಪುರ ಪರಿಸರದ ಗಂಡು ಮಕ್ಕಳು ಹೊರಾಂಗಣದಲ್ಲಿ ಚೆಂಡಿನಿಂದ ಹೊಡೆದಾಡುವ ಆಟದ ಒಂದು ಬಗೆ, ಇತರೆಡೆ ತೂರ್ ಚೆಂಡು, ಬೀರ್ ಚೆಂಡು ಹೆಸರುಗಳಿವೆ.

ಚೆನ್ನೆಮಣೆ : ಗುಳಿಗಳಿರುವ ಮನೆ ಹಾಗೂ ಚೆನ್ನೆ ಬೀಜದ ಕಾಳುಗಳನ್ನು ಬಳಸಿ ಆಡುವ ಆಟ, ಮಲೆನಾಡು ಹಾಗೂ ಕರಾವಳಿ ಪರಿಸರದಲ್ಲಿ ಪ್ರಸಿದ್ಧ, ಇತರೆಡೆಗಳಲ್ಲಿ ಅಳಗುಳಿಮಣೆ ಇತರೆ ಹೆಸರುಗಳಿಂದ ಆಡುತ್ತಾರೆ.

ಚೆವೆ : ಶಿಕಾರಿಪುರ, ಸಾಗರ ಪರಿಸರದಲ್ಲಿ ತೇಯ್ದ ಹುಣೆಸೆಬೀಜಗಳನ್ನು ಬಳಸಿ ಆಡುವ ಆಟ, ಇತರೆಡೆ ಗಟ್ಟದ ಮನೆ, ಚೌಕಾಬಾರ ಮುಂತಾದ ಹೆಸರುಗಳಿವೆ.

ಚೌಕಮಣಿ : ಬಿಜಾಪುರ, ಬಾಗಲಕೋಟೆ ಪರಿಸರದ ಆಟ. ತೇಯ್ದ ನಾಲ್ಕು ಹುಣಸೇ ಬೀಜ ಬಳಸಿ ಮನೆ ಬರೆದು ಆಡುವ ಆಟ.

ಚೌಕಾಬಾರಾ : ನೆಲದಲ್ಲಿ ಒಂದು ಇಪ್ಪತೈದು ಚೌಕಾಕಾರದ ಮನೆಗಳುಳ್ಳ ನಕ್ಷೆ ಬರೆಯುತ್ತಾರೆ ಇದರಲ್ಲಿ ಐದು ಕಾಯಿ ಇಡುವ ಕಟ್ಟೆ ಮನೆ ಇರುತ್ತವೆ. ತೇಯ್ದ ನಾಲ್ಕು ಹುಣಸೇ ಬೀಜ ಅಥವಾ ಕವಡೆ, ಬಳಸಿ ಇಬ್ಬರು ಅಥವಾ ನಾಲ್ವರು ಆಡುವ ಆಟ. ಇದನ್ನು ಚೌಕಾ ಬಾರ, ಚಾವಿ ಆಟ, ಗಟ್ಟದ ಮನೆ ಇತ್ಯಾದಿ. ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದ ಎಲ್ಲಾ ಕಡೆಯೂ ಈ ಆಟ ಪ್ರಚಲಿತದಲ್ಲಿದೆ.

ಚೌರಿ : ಉತ್ತರ ಕನ್ನಡದ ಚಾವಂಗ ಆಟದಲ್ಲಿ ಬೀಜಗಳು ಬಿಳಿಭಾಗ ಮೇಲ್ಮುಖವಾಗಿ ಬಿದ್ದರೆ ಚೌರಿ ಎನ್ನುತ್ತಾರೆ.

ಚೌರಿ ಆಟ : ಗುಲ್ಬರ್ಗಾ ಪ್ರದೇಶದ ಬುಗುರಿ ಆಟದ ಒಂದು ಬಗೆ.

ಜೊಂಪೆ ಆಟ : ಮೈಸೂರು ಪರಿಸರದ ಆಣೆಕಲ್ಲಿನ ಆಟದ ಒಂದು ಬಗೆ.

ಜಾದು ಆಟ : ಉತ್ತರ ಕನ್ನಡದ ಹರಳಾಟದ ಒಂದು ಬಗೆ.

ಜಾರಾಟ : ಬಳ್ಳಾರಿ ಪ್ರದೇಶದ ಕುಂಟೇ ಬಿಲ್ಲೆ ಆಟದ ಒಂದು ಬಗೆ. ಜಾರುತ್ತಾ ನಡೆದಂತೆ ಮನೆ ದಾಟಬೇಕು.

ಜಿಬ್ಬಿ ಆಟ : ಉತ್ತರ ಕನ್ನಡದ ಹರಳಾಟದ ಒಂದು ಬಗೆ.

ಜಿಬ್ಲಿ ಆಟ : ದಕ್ಷಿಣ ಕನ್ನಡದ ಕುಂಟಾಟದ ಒಂದು ಬಗೆ, ಇತರೆಡೆ ಕುಂಟೋ ಬಿಲ್ಲೆ ಹೆಸರಿನಿಂದ ಪರಿಚಿತ ಆಟ.

ಜೀಕಾಟ : ತೀಥಹಳ್ಳಿ ಪರಿಸರದಲ್ಲಿ ಕಡ್ಡಿಗಳನ್ನು ಬಳಸಿ ಹುಡುಗರಾಡುವ ಆಟದ ಒಂದು ಬಗೆ. ಮೊದಲು ಒಂದು ಕಡ್ಡಿಯನ್ನು ಹಾರಿಸಿ, ಕಲ್ಲು ಅಥವಾ ಮಣ್ಣಿನ ಮೇಲೆ ಆಟಗಾರರೆಲ್ಲರೂ ಕಡ್ಡಿಗಳನ್ನು ಇಡುತ್ತಾ ಆಡುವ ಆಟ.

ಜುಬುಲಿ : ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳು ಆಡುವ ಒಂದು ಆಟ.

ಜೂಟ್ಮುಟ್ಟೋ ಆಟ : ತುಮಕೂರಿನ, ಹುಳಿಯಾರು ಪರಿಸರದಲ್ಲಿ ಬೆನ್ನಟ್ಟಿ ಹಿಡಿಯುವ ಆಟದ ಒಂದು ಬಗೆ.

ಜೋಗದಬೆಟ್ಟೆ ಆಟ : ಉತ್ತರ ಕನ್ನಡದ ಕುಂಟಾಟದ ಒಂದು ಬಗೆ.

ಜೋಡುಗೋಲಿ ಆಟ : ಉತ್ತರ ಕರ್ನಾಟಕದ ಗೋಲಿ ಗುರಿಯಾಟದ ಒಂದು ಬಗೆ.

ಜೋಡು ಪೆರ್ಗ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದ ಒಂದು ವಿಧ.

ಝಾಡಫಣಿ ಆಟ :  ಬೀದರ್ ಪರಿಸರದ ಒಂದು ಆಟ ಇತರೆಡೆ ಇದು ಮರ ಕೋತಿ ಆಟ, ಗಿಡಮಂಗ್ಯ ಆಟ ಎಂದು ಪರಿಚಿತ.

ಟೊಂಬರಿ ಆಟ : ಬೀದರ್ ಪರಿಸರದ ಮಕ್ಕಳಾಟದ ಒಂದು ಬಗೆ.

ಟೋಪಿ ತಲೆಯ : ದಕ್ಷಿಣ ಕನ್ನಡದ ಚೆಂಡಾಟದ ಒಂದು ಬಗೆ. ತೆಳುವಾದ ಉದ್ದದ ಕೋಲು ಅಥವಾ ಇನ್ನಾವುದೇ ವಸ್ತುವನ್ನು ನೇರವಾಗಿ ನಿಲ್ಲಿಸಿ ಅದಕ್ಕೆ ವಿವಿಧ ರೀತಿಯಲ್ಲಿ ಚೆಂಡು ಎಸೆದು ಬಿದ್ದನಂತರ ಓಡಿ ಮತ್ತೆ ಬಂದು ನಿಲ್ಲಿಸುವ ಆಟ.

ಡಬ್ಬಾಟ : ರಾಯಚೂರು ಯಾದಗೀರಿ ಪರಿಸರದ ಗೋಲಿ ಆಟದ ಒಂದು ಬಗೆ.

ಡಿಗೀ ಆಟ : ಬಳ್ಳಾರಿ ಪ್ರದೇಶದ ಗೋಲಿ ಆಟದ ಒಂದು ಬಗೆ.

ಡಿಸ್ : ಕುಷ್ಟಗಿ ಪರಿಸರದ ಗೋಲಿ ಆಟದ ಒಂದು ಬಗೆ.

ಡೀಗು : ಉತ್ತರ ಕನ್ನಡದ ಗುರಿಯಾಟದ ಒಂದು ಬಗೆ.

ಡೀಸಿ ಆಟ : ಗೋಲಿ ಆಟದ ಒಂದು ಬಗೆ ಬಳ್ಳಾರಿ ಪ್ರದೇಶದಲ್ಲಿ ಆಡುತ್ತಾರೆ.

ಡುಬ್ಬಚೆಂಡು : ಕುಷ್ಟಗಿ ಪರಿಸರದ ಚೆಂಡಾಟದ ಒಂದು ಬಗೆ.

ಡೋಕೋ ಆಟ :ಬಳ್ಳಾರಿಯ ಹಂಪಿ ಪರಿಸರದ ಗೋಲಿ ಆಟದ ಒಂದು ಬಗೆ.

ತಪ್ಪಂಗಾಯಿ : ದಕ್ಷಿಣ ಕನ್ನಡದ ಹುಡುಗರು ಆಡುವ ಆಟ. ಬಲಪ್ರದರ್ಶನ ಅಂದರೆ ತೆಂಗಿನ ಕಾಯಿಯನ್ನು ಒಬ್ಬರ ಮೇಲೆ ಒಬ್ಬರು ಬಿದ್ದು ಕಿತ್ತುಕೊಳ್ಳುವ ಆಟ.

ತಪ್ಪಿದರೆ ಮಂಗಾ : ಉತ್ತರ ಕರ್ನಾಟಕದ ಬುಗುರಿ ಆಟದ ಒಂದು ಬಗೆ.

ತಲೆ ಆಟ : ಬಳ್ಳಾರಿ ಪ್ರದೇಶದ ಕುಂಟೇ ಬಿಲ್ಲೆ ಆಟದ ಒಂದು ಬಗೆ. ತಲೆಯ ಮೇಲೆ ಬಿಲ್ಲೆಯನ್ನಿಟ್ಟು ಮನೆ ದಾಟುವ ಆಟ.

ತಾಬ್ಲ ಆಟ : ಉತ್ತರ ಕನ್ನಡದ ಹರಳಾಟದ ಒಂದು ಬಗೆ.

ತಾರಾತಿಂಬಾ ಆಟ : ಉತ್ತರ ಕನ್ನಡದ ಹರಳಾಟದ ಒಂದು ಬಗೆ.

ತಿಗಣೆ ತಿಕ್ಕಾಟ : ಮೈಸೂರು ಪರಿಸರದ ಆಣೆಕಲ್ಲಿನ ಆಟದ ಒಂದು ಬಗೆ.

ತುಪ್ಪಕಾಯಿಸೋ ಆಟ : ಸಣ್ಣ ಮಕ್ಕಳಿಗೆ ಹಿರಿಯರು ಆಡಿಸುವ ಸಲಕರಣೆ ರಹಿತವಾದ ಆಟ, ಬಳ್ಳಾರಿ ಮತ್ತಿತರ ಪ್ರದೇಶದಲ್ಲಿಯೂ ಆಡುತ್ತಾರೆ.

ತೂರ್ ಚೆಂಡು : ತುಮಕೂರಿನ ಶಿರಾ, ಹುಳಿಯಾರು ಪ್ರದೇಶಗಳಲ್ಲಿ ಹುಡುಗರು ಹೊಡೆದಾಡುವ ಚೆಂಡಾಟದ ಒಂದು ಬಗೆ, ಇತರೆಡೆ, ಬೀರ್ ಚೆಂಡು, ಹೊಡ್ತ ಇತರೆ ಹೆಸರುಗಳಿಂದ ಜನಪ್ರಿಯ ಆಟ.

ತೋಳು ತೊಟ್ಟಿಲಾಟ : ಕರಾವಳಿ ಕರ್ನಾಟಕದ ಪುರಷರ ಶಕ್ತಿ ಪ್ರದರ್ಶನದ ಆಟ.

ತೋಳ್ಮೆಟ್ಟಿಲು : ದಕ್ಷಿಣ ಕನ್ನಡ, ಕರಾವಳಿಯ ಒಳಾಂಗಣ ಆಟ.

ದಪ್ಪಲ್ದುಪ್ಪಲ್‌ : ರಾಯಚೂರು, ಯಾದಗೀರ ಪರಿಸರದ ಒಂದು ಚೆಂಡಾಟ.

ದಿಂಬಾಟ : ದಕ್ಷಿಣ ಕನ್ನಡದ ಹೊರಾಂಗಣ ಆಟದ ಒಂದು ಬಗೆ.

ದೊಡ್ಡ ಬಾವಿ ಆಟ : ಬಳ್ಳಾರಿ ಪ್ರದೇಶದಲ್ಲಿ ಆಡುವ ಆಣೆಕಲ್ಲಾಟ / ಗುಚ್ಚಿ ಆಟದ ಒಂದು ಬಗೆ. ಆಡುತ್ತಿರುವ ಇಬ್ಬರು ತಮ್ಮ ನಾಲ್ಕು ಕಾಲಿನ ಪದಗಳನ್ನು ಬಾವಿಯ ಆಕಾರದಲ್ಲಿ ಸೇರಿಸಿ ಕಲ್ಲುಗಳನ್ನು ಸೇರಿಸುವ ಆಟ.

ದೊಡ್ಡಭತ್ತಕುಟ್ಟಾಟ: ಮೈಸೂರು ಪರಿಸರದ ಆಣೆಕಲ್ಲಾಟದ ಒಂದು ಬಗೆ.

ದೋಸೆ ಆಟ : ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಾಟದ ಒಂದು ವಿಧ.

ನಾಗಕೇರಿ : ರಾಯಚೂರು ಮಾನ್ವಿ ಪರಿಸರದ ಗೋಲಿ ಆಟದ ಒಂದು ಬಗೆ.

ನೆತ್ತಿಗುಣ್ಣ : ದಕ್ಷಿಣ ಕನ್ನಡದ ಬುಗುರಿ ಆಟದಲ್ಲಿ ಇಬ್ಬರೇ ಹುಡುಗರು ಆಡುವ ಬುಗುರಿ ಆಟದ  ಒಂದು ಬಗೆ.

ನೆಲಮಂಗನಾಟ : ಉತ್ತರ ಕನ್ನಡದ  ಒಂದು ಆಟ ಇತರೆಡೆಯ ಮರಕೋತಿ ಆಟವನ್ನು ಹೋಲುತ್ತದೆ.

ಪಂಜ :  ಮೈಸೂರು ಪರಿಸರದಲ್ಲಿ ಆರು ತೇಯ್ದ ಹುಣಸೇ ಬೀಜಗಳನ್ನು ಬಳಸಿ ಆಡುವ ಜೂಜಿನ ಆಟ.

ಪಂಡಿ ಆಟ : ಗುಲ್ಬರ್ಗಾ ಪ್ರದೇಶದ ಹೆಣ್ಣು ಮಕ್ಕಳು ಆಡುವ ಆಟ.

ಪಗಡೆ : ಮಲೆನಾಡಿನಲ್ಲಿ ಕವಡೆಗಳನ್ನು ಬಳಸಿ ಇತರೆಡೆ ಆಡುವ ಚೌಕಾ ಬಾರಾ, ಗಟ್ಟದ ಮನೆ ಆಟದ ಮಾದರಿಯ ಆಟ.

ಪಗ್ಗದಾಟ : ಉತ್ತರ ಕನ್ನಡದ ಹರಳಾಟದ ಒಂದು ಬಗೆ.

ಪಚ್ಚಿ ಆಟ : ಮೈಸೂರು ಕೊಳ್ಳೇಗಾಲ ಪರಿಸರಗಳಲ್ಲಿ  ತೇಯ್ದ ಹುಣಸೇ ಬೀಜಗಳನ್ನು ಬಳಸಿ ಆಡುವ ಆಟಗಳಿಗೆ ಪಚ್ಚಿ ಆಟ ಎನ್ನುವರು.

ಪಟ್ಟಿ ಪೆಂಗ : ಹೊಸದುರ್ಗ ಪರಿಸರದ ಬುಗುರಿ ಆಟದ  ಒಂದು ಬಗೆ.

ಪಟ್ಟಮಂಗ : ಹೊಸದುರ್ಗ ಪರಿಸರದ ಬುಗುರಿ ಆಟದ  ಒಂದು ಬಗೆ.

ಪದ್ದಾಟ : ಮೈಸೂರು ನಗರದ ಗೋಲಿ ಆಟದ ಒಂದು ಬಗೆ ಗೋಲಿಯಿಂದ ಗುಳಿತುಂಬುವ ಆಟ.

ಪಲ್ಲಿ : ದಕ್ಷಿಣ ಕನ್ನಡ ಭಾಗದಲ್ಲಿ ಹುಡುಗರು ಆಡುವ, ಬಲಪ್ರದರ್ಶನ, ಓಡಾಟವನ್ನು ಬಯಸುವ ಆಟ. ಗೋಡೆಯ ಹಲ್ಲಿಯ ಚಲನ ವಲನಗಳನ್ನು ಆಧರಿಸಿ ರೂಪುಗೊಂಡಿರುವ ಆಟವಿರಬಹುದು.

ಪಲ್ಲೆಯಾಟ : ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳು ಆಡುವ ಕುಂಟಾಟದ ಒಂದು ಬಗೆ. ಪಲ್ಲೆ ಮರದ ಚಪ್ಪಟೆ ಕಾಯಿಯನ್ನು ಬಳಸುವುದರಿಂದ ಈ ಹೆಸರು ಬಂದಿದೆ.

ಪಾರಾಟ : ಬಳ್ಳಾರಿಯ ಹಂಪಿ ಪರಿಸರದ ಗೋಲಿ ಆಟದ ಒಂದು ಬಗೆ.

ಪಾರಿವಾಳ ಜೂಜು : ಬಳ್ಳಾರಿಯ ಹಂಪಿ ಪರಿಸರದಲ್ಲಿ ಜೂಜು ಕಟ್ಟಿ ಪಾರಿವಳಗಳನ್ನು ಹಾರುವ ಸ್ಪರ್ಧೆಗೆ ಬಿಡುವ ಜೂಜಾಟ.

ಪಿಚ್ಚಿ ಆಟ : ಮೈಸೂರು, ಹುಣಸೂರು  ಪರಿಸರದಲ್ಲಿ   ತೇಯ್ದ ಹುಣಸೇ ಬೀಜಗಳನ್ನು ಬಳಸಿ ಆಡುವ ಆಟ.

ಪುಗಡಿ ಆಟ : ಬೀದರ್ ಪರಿಸರದ ಮಕ್ಕಳಾಟದ ಒಂದು ಬಗೆ.

ಪುಳ್ಳಿ ಮೂಟೆ : ಮೈಸೂರು ಪ್ರದೇಶದಲ್ಲಿ ಹುಡುಗರಾಡುವ ಹೊರುವ ಆಟ.

ಪೇಂದ :  ಮೈಸೂರು ಪರಿಸರದಲ್ಲಿ  ಹುಡುಗರಾಡುವ ಗೋಲಿ ಆಟದ  ಒಂದು ಬಗೆ.

ಪೇಂದಿ : ಕೊಳ್ಳೇಗಾಲ ಪರಿಸರದಲ್ಲಿ  ಹುಡುಗರಾಡುವ ಗೋಲಿ ಆಟದ  ಒಂದು ಬಗೆ.

ಪೊಕ್ಕು : ಗಜ್ಜುಗದ ಕಾಯಿಗಳನ್ನು ಬಳಸಿ ದಕ್ಷಿಣ ಕನ್ನಡದಲ್ಲಿ  ಹೆಣ್ಣು ಮಕ್ಕಳು ಆಡುವ ಆಟ. ಇದನ್ನು ಕಲ್ಲಾಟ ಎಂದೂ ಕರೆಯುತ್ತಾರೆ. ಕರ್ನಾಟಕದ ಇತರೆ ಕಡೆಯ ಆಣೆಕಲ್ಲಾಟದ ಮಾದರಿಯ ಆಟ.

ಬಂದ್ಮನೆ ಆಟ : ರಾಮನಗರ, ಕನಕಪುರ ಪರಿಸರದ ಕುಂಟೋಬಿಲ್ಲೆ ಆಟದ ಒಂದು ಬಗೆ, ಪ್ರಕಾರ.

ಬಂದಾಟ : ಟಿ. ನರಸೀಪುರ ಭಾಗದಲ್ಲಿ ಗೋಲಿ ಆಟದ ಒಂದು ಬಗೆ ಗೋಲಿಯನ್ನು ಗುಳಿತುಂಬಿಸುವ ಆಟ.

ಬಗಾಟ್ ಬಗರಿಯಾಟ : ಬೆಳಗಾವಿ  ಪರಿಸರದ ಬುಗುರಿಯಾಟದ ಒಂದು ಬಗೆ.

ಬಚ್ಚ : ಕೊಳ್ಳೇಗಾಲ ಪರಿಸರದಲ್ಲಿ  ಹುಡುಗರಾಡುವ ಗೋಲಿ ಆಟದ  ಒಂದು ಬಗೆ.

ಬಟ್ಗುಣಿ ಆಟ : ತುಮಕೂರಿನ ಹುಳಿಯಾರು ಪ್ರದೇಶದಲ್ಲಿ ಹುಣಸೆ ಬೀಜಗಳನ್ನು ಗುಳಿಗಳಿರುವ ಮಣೆಯನ್ನು  ಬಳಸಿ ಆಡುವ ಆಟ ಚೆನ್ನೆಮಣೆ, ಆಳಿಗುಳಿ ಮಣೆ  ಇತ್ಯಾದಿ ಆಟಗಳನ್ನು ಹೋಲುತ್ತದೆ.

ಬಡಿಗೆ : ಉತ್ತರ ಕರ್ನಾಟಕದ ಗಿಡಮಂಗ್ಯಾ ಆಟದಲ್ಲಿ ಬಳಸುವ ಕೋಲು.

ಬಲ್ಲಾ : ರಾಯಚೂರು, ಯಾದಗೀರ ಪರಿಸರದ ಗೋಲಿ ಆಟದ  ಒಂದು ಬಗೆ.

ಬಾವಿ ಆಟ : ಬಳ್ಳಾರಿ ಪ್ರದೇಶದಲ್ಲಿ ಆಣೆಕಲ್ಲು ಅಥವಾ ಗುಚ್ಚಿ ಆಟ ಆಡುತ್ತಿರುವ ವ್ಯಕ್ತಿ ಎರಡುಕಾಲಿನ ಪಾದಗಳನ್ನು ಬಾವಿ ಆಕಾರದಲ್ಲಿ ಕೂಡಿಸಿ ಆಡುವ ಕಲ್ಲುಗಳನ್ನು ಅದರೊಳಗೆ ಸೇರಿಸುವ ಆಟ.

ಬಿಂಗ್ ಆಟ : ಹಗರಿಬೊಮ್ಮನಹಳ್ಳಿ, ಬಳ್ಳಾರಿ ಪ್ರದೇಶದ ಗೋಲಿ ಆಟದ ವಿಧ.

ಬಿಳಿಕೈ ಆಟ : ಬಳ್ಳಾರಿ ಪ್ರದೇಶದ ಕುಂಟೆ ಬಿಲ್ಲೆ ಆಟದ ಒಂದು ಬಗೆ. ಅಂಗೈ ಮೇಲೆ ಬಿಲ್ಲೆಯನ್ನು ಇಟ್ಟು ಕುಂಟುತ್ತಾ ಮನೆದಾಟುವ ಆಟ.

ಬೀಜಾಟ : ಗೇರು ಬೀಜ ಗಜ್ಜುಗಗಳನ್ನು ಬಳಸಿ ದಕ್ಷಿಣ ಕನ್ನಡ ಪರಿಸರದಲ್ಲಿ ಗೋಲಿ ಆಟದ ಮಾದರಿಯಲ್ಲಿ ಆಡುವಾಟ.

ಬೀರ್ ಚೆಂಡು : ಚಾಮರಾಜನರ ಪರಿಸರದಲ್ಲಿ ಹುಡುಗರು ಆಡುವ ಚಂಡಾಟದ  ಒಂದು ಬಗೆ.

ಬೂರಬೂರ ಚಂಡೋಕ್ಕಿ : ಉತ್ತರ ಕನ್ನಡ ಚಂಡಾಟದ  ಒಂದು ಬಗೆ.

ಬೆಟ್ಟೆ ಆಟ : ಉತ್ತರ ಕನ್ನಡದ ಕುಂಟಾಟದ  ಒಂದು ಬಗೆ.

ಬೆಟ್ಟೆನಾಟ : ಉತ್ತರ ಕನ್ನಡದಲ್ಲಿ  ಹೆಣ್ಣು ಮಕ್ಕಳು ಆಡುವ ಒಂದು ಕುಂಟಾಟ ಇತರೆಡೆ ಕುಂಟೇಬಿಲ್ಲೆ ಎನ್ನುತ್ತಾರೆ.

ಬೆನ್ನ ಚೆಂಡಾಟ : ರಾಯಚೂರು, ಸಿಂಧುನೂರು ಪರಿಸರದ ಚೆಂಡಾಟದ ಒಂದು ಬಗೆ.

ಬೇಂದೆ : ಬಿಜಾಪುರ ಪರಿಸರದ ಗೋಲಿ ಆಟದ  ಒಂದು ಬಗೆ.

ಬೋಕ ಆಟ : ಕುಷ್ಟಗಿ ಪರಿಸರದ ಗೋಲಿ ಆಟದ  ಒಂದು ಬಗೆ.

ಬ್ಯಾಂಕಾಟ : ಚಿತ್ರದುರ್ಗ  ಪರಿಸರದ ಚಿಣ್ಣಿ ಕೋಲು ಆಟದ  ಒಂದು ಬಗೆ.

ಭುಜದಾಟ : ಬಳ್ಳಾರಿ ಪ್ರದೇಶದ ಕುಂಟೇಬಿಲ್ಲೆ ಆಟದ ಒಂದು ಬಗೆ. ಭುಜದ ಮೇಲೆ ಬಿಲ್ಲೆಯನ್ನು ಇಟ್ಟು ಮನೆ ದಾಟಬೇಕು.

ಮಗು ಸಾಕುವ ಆಟ : ಕರ್ನಾಟಕದ ಬಹುಪಾಲು ಭಾಗಗಳಲ್ಲಿ ಮಕ್ಕಾಳಾಡುವ ಅನುಕರಣೆಯ ಆಟ.

ಮದುವೆ ಆಟ : ಕರ್ನಾಟಕದಾದ್ಯಂತ ಮಕ್ಕಳಾಡುವ ಅನುಕರಣೆಯ ಆಟ.

ಮಣಕನಾಟ : ಉತ್ತರ ಕನ್ನಡದ ಹಿಡಿದಾಟದ ಒಂದು ಬಗೆ ಮಣಕ ಎಂದರೆ ಮೊಸಳೆ.

ಮನೆಕಟ್ಟುವ ಆಟ : ಕರ್ನಾಟಕದ ಎಲ್ಲಡೆ ಮಕ್ಕಳಾಡುವ ಅನುಕರಣೆಯ ಆಟ.

ಮರಕೋತಿ ಆಟ : ಕರ್ನಾಟಕದ ಎಲ್ಲ ಕಡೆ ಚಾಲ್ತಿಯಲ್ಲಿರುವ ಹಿಡಿದಾಟದ ಒಂದು ಬಗೆ. ಗಿಡಮಂಗ್ಯ ಎನ್ನುವ ಹೆಸರು ಇದೆ.

ಮರಮಂಗ : ದಕ್ಷಿಣ ಕನ್ನಡದಲ್ಲಿ  ಆಡುವ ಮರಕೋತಿ ಮಾದರಿಯ ಒಂದು ಆಟ.

ಮರಾಟ : ದಕ್ಷಿಣ ಕನ್ನಡದಲ್ಲಿ ಹಿಡಿಯುವ ಆಟದ ಒಂದು ಬಗೆ ಇತರೆಡೆ ಮರಕೋತಿ ಆಟವೆಂದು ಪ್ರಸಿದ್ಧವಾಗಿದೆ.

ಮಳೆ ಬಂದೋ ಗಿಳ್ಳಿಪ್ಪೋ : ಮಂಡ್ಯ ಪರಿಸರದ ಮಕ್ಕಳಾಟದ ಒಂದು ಬಗೆ.

ಮಾಯಿನ್ ಗೊಟ್ಟ : ಬೆಳಗಾವಿ ಪರಿಸರದ ಗೊಟ್ಟದಾಟದ ಒಂದು ಬಗೆ.

ಮಿಂಡನಾಟ : ಬೆಳಗಾವಿ ಕಡೆಯಲಿ ಚಪ್ಪಟೆ ಕಲ್ಲುಗಳನ್ನು ಬಳಸಿ ಹುಡುಗರು ಆಡುವ ಒಂದು ಹೊರಾಂಗಣ ಆಟ.

ಮೀರಿ : ಮೈಸೂರು ಪರಿಸರದ ಗೋಲಿ ಆಟದ ಒಂದು ಬಗೆ.

ಮುಟಾ ಆಟ : ಗುಲ್ಬರ್ಗಾ ಪರಿಸರದ ಹೆಣ್ಣು ಮಕ್ಕಳು ಆಡುವ ಆಟ.

ಮುತ್ತೆ ಆಟ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದ ಒಂದು ವಿಧ.

ಮೂರಳ್ಳಿನ ಮನೆಯಾಟ : ಯಾದಗೀರ ಪರಿಸರದ ಹರಳಿನಾಟದ ಒಂದು ಬಗೆ.

ಮೂರ್ ಗೀರ್ ಪಾಲು : ಬಳ್ಳಾರಿ ಪರಿಸರದ ಬುಗುರಿ ಆಟದ ಒಂದು ಬಗೆ.

ಮೂಲಿಮನಿ ಆಟ : ಬಳ್ಳಾರಿ ಪ್ರದೇಶದ ಕುಂಟೆ ಬಿಲ್ಲೆ ಆಟದ ಒಂದು ಬಗೆ. ಆಟವನ್ನು ಚೌಕಾಕಾರದ ಅಂಕಣದ ಒಂದು ಮೂಲೆಯಿಂದ ಪ್ರಾಂರಂಭಿಸುತ್ತಾರೆ.

ಮೂಲೆ ಕಟ್ಟು ಆಟ : ಮೈಸೂರು ಪರಿಸರದಲ್ಲಿ ಆಡುವ ಅಳ್ಳು ಮಣೆ ಆಟದ ಒಂದು ಪ್ರಕಾರ.

ಮೇರಿ : ಕೊಳ್ಳೆಗಾಲದ ಪರಿಸರದಲ್ಲಿ ಹುಡುಗರಾಡುವ ಗೋಲಿ ಆಟದ ಬಗೆ.

ಮೈಸೂರು ಚಂಡು : ಮಂಡ್ಯ ಪರಿಸರದಲ್ಲಿ ಹುಡುಗರ ಚೆಂಡಾಟದ ಒಂದು ಬಗೆ.

ಮೊಸಳೆ : ಕರಾವಳಿ ಕರ್ನಾಟಕದ ಆಟದ ಒಂದು ಬಗೆ.

ರಮ್ಮಿ ಆಟ : ಗೋಲಿ ಆಟದ ಒಂದು ಬಗೆ. ಮೈಸೂರು, ಟಿ. ನರಸೀಪುರ ಸುತ್ತಮುತ್ತಲ ಭಾಗಗಳಲ್ಲಿ ಆಡುತ್ತಾರೆ.

ರಾಜನ ಮನೆಯಾಟ : ಅಳಗುಳಿ ಮನೆಯಾಟ ಅಥವಾ ಚೆನ್ನೆಮಣೆ ಆಟದ ಒಂದು ಪ್ರಕಾರ ಹಾಸನ ಪರಿಸರದಲ್ಲಿ ಆಡುತ್ತಾರೆ.

ರಾಜಮಂತ್ರಿ ಆಟ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದ ಒಂದು ವಿಧ.

ರೀಂಚ್ಆಟ : ಕಾಲಿನಿಂದ ಕಲ್ಲು ತಳ್ಳುವ ಆಟದ ಒಂದು ಬಗೆ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಆಡುತ್ತಾರೆ.

ಲಕ್ಕಿಮಟ್ಟಿ : ಬಿಜಾಪುರ ಪರಿಸರದಲ್ಲಿ ಆಡುವ ಗೋಲಿ ಆಟದ ಒಂದು ಬಗೆ.

ಲಗ್ಗೇ ಆಟ : ಮೈಸೂರು ಮತ್ತು ಉತ್ತರ ಕನ್ನಡ ಪರಿಸರದ ಲಗೋರಿ ಮಾದರಿಯ ಒಂದು ಚೆಂಡಾಟ.

ಲಗೋರಿ ಆಟ : ಕರ್ನಾಟಕದಾದ್ಯಂತ ಹುಡುಗರು ಆಡುವ ಹೊರಾಂಗಣ ಆಟ.

ಲಡ್ಡುಲಡ್ಡಾಟ : ಬೆಳಗಾವಿ ಪರಿಸರದ ಒಂದು ಹೊರಾಂಗಣ ಆಟ.

ಲೈನಾಟ : ಯಾದಗೀರ, ರಾಯಚೂರು ಪರಿಸರದ ಗೋಲಿ ಆಟದ ಬಗೆ.

ಲೈನಾಟ : ಗೋಲಿ, ಕಲ್ಲು, ಅಥವಾ ಚರ್ರಗುಂಡು ಬಳಸಿ ಸಿಂಧನೂರು ಪರಿಸರದಲ್ಲಿ ಆಡುವ ಒಂದು ಆಟ.

ವಂಟಿಕಾಲಾಟ : ಬೆಳಗಾವಿ ಪರಿಸರದ ಒಂದು ಹೊರಾಂಗಣ ಆಟ.

ವಟ್ಚಪನ್ಆಟ : ಹಗರಿಬೊಮ್ಮನಹಳ್ಳಿ ಪರಿಸರದ ಆಟ.

ಸಕ್ಕಕಲ್ಲಾಟ : ಶಿಕಾರಿಪುರ, ಸಾಗರ ಪರಿಸರದ ಹೆಣ್ಣುಮಕ್ಕಳಾಡುವ ಆಣೆಕಲ್ಲಾಟದ ಒಂದು ಬಗೆ.

ಸಗಣಿಕೋಲು : ಶಿಕಾರಿಪುರ, ಸಾಗರ ಪರಿಸರದ ಕೋಲು ಸರಿಸುವ ಆಟದ ಒಂದು ಹೆಸರು. ಆಟಗಾರರು ಕೋಲನ್ನು ಸಗಣಿ ಅಥವಾ ಕಲ್ಲಿನ ಮೇಲೆ ಮಾತ್ರ ಇಡಬೇಕು.

ಸತ್ತ : ಹುಳಿಯಾರು ಪರಿಸರದ ಗೋಲಿ ಆಟದ ಒಂದು ಬಗೆ.

ಸರಗೋಲು : ಶಿಕಾರಿಪುರ, ಸಾಗರ ಪರಿಸರದ ಕೋಲು ಸರಿಸುವ ಆಟ.

ಸರಬಡಿಗೆ ಆಟ : ಬಿಜಾಪುರ ಪರಿಸರದಲ್ಲಿ ಆಡುವ ಕಡ್ಡಿ ಆಟದ ಒಂದು ಬಗೆ.

ಸರಸ್ವತಿ ಆಟ : ಬಳ್ಳಾರಿ ಪ್ರದೇಶದ ಕುಂಟೇ ಬಿಲ್ಲೆ ಆಟದ ಒಂದು ಬಗೆ.

ಸರಾಪ್ಆಟ : ಮಂಡ್ಯ ಪರಿಸರದ ಮಕ್ಕಳಾಟದ ಒಂದು ಬಗೆ.

ಸರಿಬೆಸ : ಗೋಲಿ ಆಟದ ಒಂದು ಬಗೆ ಬಳ್ಳಾರಿ, ರಾಯಚೂರು ಪ್ರದೇಶದಲ್ಲಿ ಆಡುತ್ತಾರೆ.

ಸಾಯೋ ಆಟ : ತುಮಕೂರು ಜಿಲ್ಲೆ ಹುಳಿಯಾರು ಪರಿಸರದ ಗೋಲಿ ಆಟದ ಒಂದು ಬಗೆ.

ಸಾಲ್ಚೆಂಡು : ದಕ್ಷಿಣ ಕರ್ನಾಟಕದ ಚೆಂಡಾಟದ ಒಂದು ಬಗೆ.

ಸಿಕ್ಕವರಿಗೆ ಚೆಂಡು : ಬಳ್ಳಾರಿ ಪರಿಸರದ ಚೆಂಡಾಟದ ಒಂದು ಬಗೆ.

ಸೀಟ್ಕೈ ಆಟ : ಬಳ್ಳಾರಿ ಪ್ರದೇಶದ ಕುಂಟೇಬಿಲ್ಲೆ ಆಟದ ಒಂದು ಬಗೆ ಕೈಯನ್ನು ನೇರವಾಗಿ ಪಕ್ಕಕ್ಕೆ ಚಾಚಿ ಮೊಳಸಂದಿನ ಬಳಿ ಬಿಲ್ಲೆಯನ್ನು ಇಟ್ಟು ಮನೆ ದಾಟುವ ಆಟ.

ಸೀತೆ ಆಟ : ಮೈಸೂರು ಪ್ರದೇಶದ ಅಳಗುಳಿ ಮನೆ ಆಟದ ಒಂದು ಬಗೆ. ಸೀತೆ ಆಶೋಕವನದಲ್ಲಿ ಕಾಲ ಹರಣಕ್ಕಾಗಿ ಆಡಿದ ಆಟ ಎನ್ನುವ ನಂಬಿಕೆ ಇದೆ.

ಸುರ್ ಸುರ್ ಬತ್ತಿ : ಮೈಸೂರು, ರಾಮನಗರ, ಕನಕಪುರ ಪರಿಸರದಲ್ಲಿ ಮಕ್ಕಳು ಆಡುವ ಹುಡುಕಾಟದ ಆಟದ  ಒಂದು ಬಗೆ.

ಸೆರಮನೆ ಆಟ : ಸಿಂಧುನೂರು, ಪರಿಸರದ ಕಣ್ಣಾಮುಚ್ಚಾಲೆ ಆಟದ ಒಂದು ಬಗೆ.

ಸೊಟ್ ಕೈ ಆಟ : ಬಳ್ಳಾರಿ ಪ್ರದೇಶದ ಕುಂಟೇಬಿಲ್ಲೆ ಆಟದ ಒಂದು ಬಗೆ. ಕೈ ಪಕ್ಕಕ್ಕೆ ನೀಡಿ ಸೊಟ್ಟವಾಗಿ ಮಡಚಿ ಅದರ ಮೇಲೆ ಇಟ್ಟು ಮನೆ ದಾಟುವ ಆಟ.

ಸೊನೆ ಆಟ : ಕೊಳ್ಳೆಗಾಲ ಪರಿಸರದ ಹೆಣ್ಣು ಮಕ್ಕಳಾಡುವ ಆಣೆಕಲ್ಲು ಆಟದ ಒಂದು ಬಗೆ.

ಸೋಮಾರಿ ಆಟ : ಕೊಳ್ಳೆಗಾಲ ಪರಿಸರದಲ್ಲಿ ಹುಡುಗರಾಡುವ ಗೋಲಿ ಆಟದ ಒಂದು ಬಗೆ.

ಸೈಕಲ್ಲಾಟ : ಬಳ್ಳಾರಿ ಪ್ರದೇಶದ ಕುಂಟೆ ಬಿಲ್ಲೆ ಆಟದ ಒಂದು ಬಗೆ ತಿರುಗುತ್ತಾ ಮನೆ ದಾಟುವ ಆಟ.