ಜಂಡ್ : ದಕ್ಷಿಣ ಕನ್ನಡದ  ಪಲ್ಲಿ ಆಟದಲ್ಲಿ ಆಟದ ಒಂದು ಹಂತದಲ್ಲಿ ಎಣಿಕೆ ಮಾಡುವ ಕ್ರಮವಿದೆ. ಅಲ್ಲಿ ಎರಡು ಎನ್ನಲು ಜಂಡ್ ಎನ್ನುವ ಶಬ್ಧ ಉಚ್ಚರಿಸಲಾಗುತ್ತೆದೆ.

ಜಂಪ : ರಾಮನಗರ, ಕನಕಪುರ ಪರಿಸರದಲ್ಲಿ  ಹುಣಸೆ ಬೀಜಬಳಸಿ ಆಡುವ ಚೌಕಾಬಾರಾ ಆಟದಲ್ಲಿ ತೇಯ್ದಿರುವ ಹುಣಸೆ ಬೀಜಗಳನ್ನು ಜಂಪ ಎನ್ನುತ್ತರೆ.

ಜಡೆಹೊಯ್ದೆ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಜಡೆ ಮುಟ್ಟಿಕೊಂಡು ಆಟವಾಡುವಾಗ ಹೇಳಬೇಕಾದ ಮಾತು.

ಜಪ್ಪಿಬಿಡು : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಹರಳನ್ನು ಆಟಕ್ಕಾಗಿಬಿಡುವುದು.

ಜಾಕಿಸೀನ : ಬಳ್ಳಾರಿ ಪರಿಸರದ ಜೂಜಿನಾಟದಲ್ಲಿ  ಬಳಕೆಯಾಗುವ ಮಿಶ್ರ ಬಣ್ಣದ ಪಾರಿವಾಳ.

ಜಾಡಿ : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ಆಟಕ್ಕೆ ಇಟ್ಟ ಎಲ್ಲಾ ಗೋಲಿಗಳನ್ನು ಆಟಗಾರ ಹೊಡೆದು ಆಂಕಣದಿಂದ ಚದುರಿಸುವುದನ್ನು ಜಾಡಿ ಎನ್ನುತ್ತಾರೆ.

ಜಾಯ್ ಕಾಯ್ : ಉತ್ತರ ಕನ್ನಡದ ಅಪ್ಪಡದದಪ್ಪಡ ಆಟದಲ್ಲಿ ಬಳಸುವ ವಸ್ತು.

ಜಾರುಗುಪ್ಪೆ : ಉತ್ತರ ಕನ್ನಡದ  ಜೋಗದ ಬೆಟ್ಟೆ ಆಟದಲ್ಲಿ  ಬಳಕೆಯಾಗುವ ಪದ.

ಜಾರೇಟು : ಉತ್ತರ ಕರ್ನಾಟಕದ  ಬುಗುರಿ ಆಟದಲ್ಲಿ ಬುಗುರಿಯ ಮೊಳೆಯಿಂದ ಇನ್ನೊಂದು ಬುಗರಿಗೆ ಬೀಳುವ ಏಟು.

ಜಾರೋ :ಕನಕಪುರ ಪರಿಸರದ ಕುಂಟೋ ಬಿಲ್ಲೆ ಆಟದ ಒಂದು ಹಂತದಲ್ಲಿ ಆಡುತ್ತಿರುವವರಿಗೆ ಎದುರಿನವರು ಜಾರೋ ಎಂದು ಸೂಚನೆ ನೀಡಿದರೆ ಒಂದೇ ಕಾಲಿನಿಂದ ಬಿಲ್ಲೆಯನ್ನು ಗೆರೆಯಿಂದ ಆಚೆ ಜಾರಿಸಬೇಕು.

ಜಾಳಿಗೆ : ಉತ್ತರ ಕರ್ನಾಟಕದಲ್ಲಿ ಬುಗುರಿ ತಿರುಗಿಸುವ ದಾರಕ್ಕೆ ಜಾಳಿಗೆ ಎನ್ನುತ್ತಾರೆ.

ಜಿಬ್ಲಿ : ಉತ್ತರ ಕನ್ನಡದ ಬೆಟ್ಟೆ ಆಟದ ನಕ್ಷೆಯಲ್ಲಿ ವಿವಿಧ ಸ್ಥಳಗಳನ್ನು ಗುರುತಿಸುವ ಪದಗಳಲ್ಲಿ ಒಂದು. ಸಾಮ್ರಾಜ್ಯ ಎನ್ನುವ ಮಾತು ಬಳಕೆಯಲ್ಲಿದೆ.

ಜಿಬ್ಲೆ : ಉತ್ತರ ಕನ್ನಡದ ಬೆಟ್ಟೆ ಆಟದ ನಕ್ಷೆಯಲ್ಲಿ ವಿವಿಧ ಸ್ಥಾನಗಳನ್ನು ಗುರುತಿಸುವ ಪದಗಳಲ್ಲಿ ಒಂದು .

ಜಿಲ್ಲ : ಬಿಜಾಪುರ ಪರಿಸರದ ಚಿಣ್ಣಿ ಕೋಲಾಟದಲ್ಲಿ ದಾಂಡಿನ ಮೇಲೆ ಚಿಣ್ಣಿ ಇಟ್ಟು ಹಾರಿಸಿ ಹೊಡೆಯುವುದು.

ಜಿಲ್ಲಿ : ಹುಳಿಯಾರು, ಶರಾ ಪರಿಸರದಲ್ಲಿ ಚಿಣ್ಣಿದಾಂಡಿನ ಆಟದಲ್ಲಿ ಚಿಣ್ಣಿಯನ್ನು ಮೂರು ಬಾರಿ ಮೇಲೆ ಹಾರಿಸಿ ಹೊಡೆಯುವುದು.

ಜೀ : ಉತ್ತರ ಕರ್ನಾಟಕದ ಕೆಲವು ಆಟಗಳಲ್ಲಿ ಸೋತವರು ಗೆದ್ದವರಿಗೆ ಹೇಳುವ ಮಾತು.

ಜೀಕು : ಮಲೆನಾಡಿನ ತೀರ್ಥ ಹಳ್ಳಿ ಪರಿಸರದಲ್ಲಿ ಆಡುವ ಕಡ್ಡಿ ಜೀಕಾಟದ ಆಟದಲ್ಲಿ ಬಳಕೆಯಾಗುವ ಕ್ರಿಯಾಪದ.

ಜೀಕು : ಉತ್ತರ ಕನ್ನಡದ,  ದಕ್ಷಿಣ ಕನ್ನಡದ ಕವಡೆ ಆಟದಲ್ಲಿ ಸಮೀಪವಿರುವ ಎರಡು ಕವಡೆಗಳ ನಡುವೆ ಕಿರುಬೆರಳನ್ನು ಹಾಯಿಸುವುದು. ಹೀಗೆ ಹಾಯಿಸುವಾಗ ಕವಡೆಗೆ ಬೆರಳು ಸೋಕಬಾರದು.

ಜುಕ್ಕ : ರಾಯಚೂರು ಪರಿಸರದ ಗಿಲ್ಲಿ ಆಟದಲ್ಲಿ ಹತ್ತು ಸಂಕ್ಯೆ ಎಣಿಕೆಯ ಘಟಕ.

ಜುಳ್ಕೊಂದ್ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ ಒಂದು ಸಂಖ್ಯಾವಾಚಿ.

ಜೂಗಮಾಡೂದು : ಬಿಜಾಪುರ ಪರಿಸರದ  ಚೌಕ ಮಣಿ ಚಕ್ಕಾರ ಆಟದಲ್ಲಿ ಜೋಡಿ ಕಾಯಿ ಒಟ್ಟಾಗಿ ನಡೆಸಿ ಹಣ್ಣು ಮಾಡುವುದು.

ಜೂಜಿನ ಗಂಡು : ಬಳ್ಳಾರಿ ಪರಿಸರದಲ್ಲಿ ಪಾರಿವಾಳ ಹಾರಿಸುವ ಜೂಜಿನಾಟದಲ್ಲಿ ಬಳಕೆಯಾಗುವ ಹಾರಿಬಿಡುವ ಪಾರಿವಾಳ.

ಜೋಡಿ : ಮೈಸೂರು ಪರಿಸರದ ಹುಣಸೇ ಬೀಜಗಳನ್ನು ಬಳಸಿ ಆಡುವ ಪಿಚ್ಚಿ ಆಟದಲ್ಲಿ ಎರಡು ಬೀಜಗಳು ಬಿಳಿಬಾಗ ಮೇಲ್ಮು ಖವಾಗಿ ಬಿದ್ದರೆ ಹೇಳುವ ಮಾತು. ಅದನ್ನು ಜೋಡಿ ಎನ್ನುತ್ತಾರೆ.

ಟಪಾಲು ಪಾರಿವಾಳ : ಬಳ್ಳಾರಿ ಪರಿಸರದ ಜೂಜಿನ ಆಟದಲ್ಲಿ ಮೊದಲು ಹಾರಿಬಿಡುವ ಪಾರಿವಾಳ.

ಟಪ್ಸ : ಬಿಜಾಪುರ ಪರಿಸರದಲ್ಲಿ  ಹುಣಸೇ ಬೀಜ ಬಳಸಿ ಆಡುವ ಆಟಗಳಲ್ಲಿ ತೇಯ್ದಿರುವ ಬಿಳೀ ಭಾಗ ಕೆಳಮುಖವಾಗಿ, ಕಪ್ಪು ಬಾಗ ಮೇಲ್ಮುಖವಾಗಿ ಬಿದ್ದರೆ  ಟಪ್ಪ ಎನ್ನುತ್ತಾರೆ.

ಟಾಂಗಾಟೋಂಗಾ : ಉತ್ತರ ಕನ್ನಡದ  ಕಂಬಾಟದಲ್ಲಿ ಬಳಕೆಯಾಗುವ  ಪದ.

ಟಿವ್ವರ ಗೋಟಿ : ಬೀದರ್ ಪರಿಸರದಲ್ಲಿ ಗೋಲಿ ಆಟದಲ್ಲಿ ಗೋಲಿಯನ್ನು ಹೊಡೆಯಲು  ಬಳಸುವ ಪ್ರತ್ಯೇಕ ಗೋಲಿ.

ಟೆಂಪಸ್ : ರಾಯಚೂರು, ಮಾನ್ವಿ ಪರಿಸರದ ಗೋಲಿ ಆಟದಲ್ಲಿ  ಕೈಯಲ್ಲಿ ಉಳಿದಿರುವ ಹೆಚ್ಚಿನ ಗೋಲಿಗೆ ಕರೆಯುವ ಹೆಸರು.

ಡಬಲ್ಎತ್ತು : ಮಧ್ಯ ಕರ್ನಾಟಕದ ಗಿಲ್ಲಿ ಆಟದಲ್ಲಿ ಗಿಲ್ಲಿಯನ್ನು ಎರಡು ಸಾರಿ ಎತ್ತಿ ಹೊಡೆಯುವುದಕ್ಕೆ ಬಳಸುವ ಹೆಸರು.

ಡಬಲ್ ಚಿನ್ನಿ : ಬಳ್ಳಾರಿ ಪ್ರದೇಶದ ಚಿನ್ನಿ ಕೋಲಾಟದಲ್ಲಿ ಚಿಣ್ಣಿ ಒಮ್ಮೆ ಎತ್ತಿ ಎರಡು ಬಾರಿ ಹೊಡೆಯುವುದು.

ಡಬ್ಬ : ಉತ್ತರ ಕರ್ನಾಟಕದ ಚಕ್ಕರ್ ಚೌಕಾಬಾರ ಆಟದಲ್ಲಿ ಹುಣಸೇ ಬೀಜಗಳು ಕಪ್ಪು ಮೈ ಮೇಲ್ಮುಖವಾಗಿ ಬಿದ್ದರೆ ಬಳಸುವ ಪದ. 

ಡಾಂ : ದಕ್ಷಿಣ ಕನ್ನಡದ ಕಂಬಾಟದಲ್ಲಿ  ಆಟ ಪ್ರಾರಂಭಕ್ಕೆ ಮುಂಚೆ, ಆಟಗಾರರಲ್ಲಿ ಹಿಡಿಯುವವರು ಯಾರು ತಪ್ಪಿಸಿಕೊಳ್ಳಬೇಕಾದವರು ಯಾರು  ಎನ್ನುವ ನಿರ್ಧಾರಕ್ಕಾಗಿ ವ್ಯಕ್ತಿಯನ್ನು ಹೆಸರಿಸಿ ಕೊಂಡು  ಬರುವ ವಿಧಾನದಲ್ಲಿ ಅನುಕ್ರಮಣಿಕೆಯಲ್ಲಿ  ಬಳಕೆಯಾಗುವ ಒಂದು ಪದ.

ಡಾಮ : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ದೊಡ್ಡ ಗೋಲಿಗೆ ಡಾಮ ಎನ್ನುತ್ತಾರೆ.

ಡಿಸ್ಬಾಗಲಕೋಟೆ ಪರಿಸರದ ಗೋಲಿ ಆಟದಲ್ಲಿ ಬಳಕೆಯಾಗುವ  ಪದ.

ಡೀ : ದಕ್ಷಿಣ ಕನ್ನಡದ ಕಂಬಾಟದಲ್ಲಿ  ಆಟ ಪ್ರಾರಂಭಕ್ಕೆ ಮುಂಚೆ, ಆಟಗಾರರಲ್ಲಿ ಹಿಡಿಯುವವರು ಯಾರು ತಪ್ಪಿಸಿಕೊಳ್ಳಬೇಕಾದವರು ಯಾರು ಎನ್ನುವ ನಿರ್ಧಾರಕ್ಕಾಗಿ ವ್ಯಕ್ತಿಯನ್ನು ಹೆಸರಿಸಿ ಕೊಂಡು  ಬರುವ ವಿಧಾನದಲ್ಲಿ ಅನುಕ್ರಮಣಿಕೆಯಲ್ಲಿ  ಬಳಕೆಯಾಗುವ ಒಂದು ಪದ.

ಡೀಲಿ : ಮೈಸೂರು ಪರಿಸರದ ಗೋಲಿ, ಬುಗುರಿ ಆಟಗಳಲ್ಲಿ ಗೋಲಿ ಅಥವಾ ಬುಗುರಿಯನ್ನು ಕೈ ಕೆಳಗೆ ಮಾಡಿ ಸಡಿಲವಾಗಿ ಬಿಡುವುದು.

ಡುಳ್ಳಿಉತ್ತರ ಕರ್ನಾಟಕದ  ಚಕಾರ, ಹುಲಿಮನೆ ಆಟದ ಒಂದು ಹಂತದಲ್ಲಿ ಬಳಕೆಯಾಗುವ  ಪದ.

ಡೂಕು : ಉತ್ತರ ಕರ್ನಾಟಕದ  ಗೋಲಿ ಆಟಗಳಲ್ಲಿ ಸೋತವರಿಗೆ ಕೊಡುವ ಶಿಕ್ಷೆ ಅವರು ಗೋಲಿಯನ್ನು ಗುಳಿಯವರೆಗೆ ಮೊಳಕೈಯಿಂದ ತಳ್ಳಬೇಕು ಅದನ್ನು ಡೂಕು ಎನ್ನುತ್ತಾರೆ.

ಡೂಸಾ : ಮೈಸೂರು ಪ್ರದೇಶದ ಗೋಲಿ ಆಟದಲ್ಲಿ ಗೋಲಿ ಹೊಡೆಯಲು ಬಳಸುವ ದಪ್ಪ ಗೋಲಿ.

ಡೊಂಪೆ : ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳು ಆಡುವ ಕಾಗೆ ಗಿಳಿ ಆಟದಲ್ಲಿ ಗಿಳಿಯಾಗಿರುವವರು ಕಾಗೆ ಹತ್ತಿರ ಬಂದ ತಕ್ಷಣ ಡೊಂಪೆ ಎಂದು ಹೇಳಿ ಕುಳಿತುಕೊಳ್ಳುತ್ತಾರೆ ಆಗ ಕಾಗೆಗಳು ಗಿಳಿಗಳನ್ನು ಮುಟ್ಟುವಂತಿಲ್ಲ.

ತಂದಿಲಿಗ : ಉತ್ತರ ಕರ್ನಾಟಕದ  ಹರಳಿನಾಟದಲ್ಲಿ ಒಂದಿಲಿಗ ಎಂಬ ಪದ ಬಳಕೆಯ ನಂತರ ಬಳಕೆಯಾಗುವ  ಪದ. ಇದು ಪ್ರಾಸಕ್ಕಗಿ ಇರಬಹುದು.

ತಗಣಿ ಉಕ್ಕಾ : ಉತ್ತರ ಕರ್ನಾಟಕ  ಹರಳಿನಾಟದಲ್ಲಿ  ತಗಣಿ ತಿಕ್ಕುವಂತೆ ಕೈಯನ್ನು ನೆಲದಲ್ಲಿ ತಿಕ್ಕಿ ತಗಣಿ ಉಕ್ಕಾ ಎನ್ನುತ್ತಾ ಹರಳನ್ನು ಹಿಡಿಯಬೇಕು.

ತಗ್ಗು : ದಕ್ಷಿಣ  ಕನ್ನಡದ ಚೆನ್ನೆಮಣೆ ಆಟದ ಮಣೆಯಲ್ಲಿ ಕಾಯಿಹಾಕುವ ಕುಳಿ.

ತಟ್ಟೆ ಕಟ್ಟು : ಉತ್ತರ ಕನ್ನಡದ ಅಪ್ಪಡದಪ್ಪಡ ಆಟದಲ್ಲಿ ಬಳಕೆಯಾಗುವ ಮಾತು.

ತಣ್ಣೆ ಅನ್ನಾ : ಉತ್ತರ ಕನ್ನಡದ ಕಣ್ಣೆಕಟ್ಟೇ ಕಾರೆ ಮುಳ್ಳೇ ಆಟದಲ್ಲಿ ಬಳಸುವ ಪದ.

ತಲೆಮಾಟ : ಮೈಸೂರು ಪರಿಸರದ  ಕುಂಟೇ ಬಿಲ್ಲೆ ಆಟದ ನಡುವೆ ಬಳಸುವ ಪದ.

ತಲೆಮುಂದೆ : ಉತ್ತರ ಕರ್ನಾಟಕದ  ಹರಳಿನಾಟದ ಒಂದು ಹಂತದಲ್ಲಿ ಬಳಸುವ ಮಾತು.

ತಲೆಯ : ದಕ್ಷಿಣ ಕನ್ನಡದ ಟೋಪಿ ತಲೆಯ ಚೆಂಡಾಟದಲ್ಲಿ ಹಿಂದಿರುಗಿ ಚೆಂಡನ್ನು  ತಲೆಯ ಮೇಲಿಂದ ನಿಲ್ಲಿಸಿರುವ ವಸ್ತುವಿಗೆ ಹೊಡೆಯುತ್ತಾನೆ ಇದನ್ನು ತಲೆಯ ಎನ್ನುತ್ತಾರೆ.

ತಾಂಬಳ : ಉತ್ತರ ಕನ್ನಡದ ಅಪ್ಪಡದಪ್ಪಡ ಆಟದಲ್ಲಿ ಬಳಕೆಯಾಗುವ ಪದ.

ತಾಕೊಟ್ಟ : ಉತ್ತರ ಕರ್ನಾಟಕದ  ಹರಳಿನಾಟದ ಒಂದು ಹಂತದಲ್ಲಿ ಬಳಕೆಯಾಗುವ ಮಾತು.

ತಾಬ್ಲಕಾಯಿ : ಉತ್ತರ ಕನ್ನಡದ ತಾಬ್ಲ ಆಟದಲ್ಲಿ ಬಳಕೆಯಾಗುವ  ಚೂಪಾದ ವಸ್ತು.

ತಾಬ್ಲಕೊಚ್ಚು : ಉತ್ತರ ಕನ್ನಡದ ತಾಬ್ಲ ಆಟದಲ್ಲಿ ಬಳಕೆಯಾಗುವ ವಸ್ತು.

ತಾಬ್ಲಮಣೆ : ಉತ್ತರ ಕನ್ನಡದ ತಾಬ್ಲ ಆಟದಲ್ಲಿ ಬಳಕೆಯಾಗುವ ಪದ.

ತಾಮೆಂತ್ : ಉತ್ತರ ಕನ್ನಡದ ಹಕ್ ಬಂತ್ ಆಟದಲ್ಲಿ ಬಳಕೆಯಾಗುವ ಪದ.

ತಾರಾಉತ್ತರ ಕರ್ನಾಟಕದ  ಹರಳಿನಾಟದಲ್ಲಿ ನಾಲ್ಕು ಹರಳುಗಳು ಒಟ್ಟಾದಾಗ ತಾರಾ ಎನ್ನುವರು.

ತಾಳಾ : ಉತ್ತರ  ಕನ್ನಡದ  ಹರಳಿನಾಟದಲ್ಲಿ ಬಳಕೆಯಾಗುವ ಪದ.

ತೀನಿ : ಬಾಗಲಕೋಟೆ ಪರಿಸರದಲ್ಲಿ ಚಕ್ಕಾ ಆಟದಲ್ಲಿ ಮೂರು ಎಣಿಸಲು ಬಳಕೆಯಾಗುವ ಪದ.

ತೀಲು : ಬಳ್ಳಾರಿ ಪರಿಸರದಲ್ಲಿ ಗೋಲಿ ಆಟದಲ್ಲಿ ಗೋಲಿ ಹೊಡೆಯುವ ಒಂದು ವಿಧಾನ.

ತುದಿ : ಕನಪುರ ಪರಿಸರದ ಚಿಣ್ಣಿ ಕೋಲು ಆಟದಲ್ಲಿ ಚಿಣ್ಣಿ ಹೊಡೆಯುವವನು ಹೊಡೆಯುವ ಮುಂಚೆ ಎದುರಿನವರಿಗೆ ಹೇಳುವ ಪದ. ಪರ್ಯಾಯವಾಗಿ ‘ರಡೆ’ ಎಂದು ಕೂಡಾ ಅನ್ನುತ್ತಾರೆ.

ತೂತಕಂಡಿ : ಬಳ್ಳಾರಿಯ ಹಂಪಿ ಪರಿಸರದ ಚೆನ್ನಿದಾಂಡು ಆಟದಲ್ಲಿ ಎಡಗೈನ ಮಧ್ಯಬೆರಳು ಮತ್ತು ತೋರು ಬೆರಳನ್ನು ಕೂಡಿಸಿ ಅದರ ಮೇಲೆ ಚಿನ್ನಿಯನ್ನು ಇಟ್ಟು ದಾಂಡಿನಿಂದ ಹೊಡೆಯುವುದು .

ತೂದಾಂಡಲ್ : ಮೈಸೂರು ಪರಿಸರದ ಚಿಣ್ಣಿ ದಾಂಡು ಆಟದಲ್ಲಿ ಚಿಣ್ಣಿ  ಹೊಡೆಯುತ್ತಿರುವ ವ್ಯಕ್ತಿ ಮೊದಲಿಗೆ ಚಿಣ್ಣಿಯ ತುದಿಗೆ ಹೊಡೆದಾಗ ಚಿಣ್ಣಿಗೆ ಏಟು ಬೀಳದೆ ನೆಲಕ್ಕೆ ಬಿದ್ದರೆ ತಕ್ಷಣ ತೂದಾಂಡಲ್ ಎನ್ನ ಬೇಕು.

ತೂರು : ಬಳ್ಳಾರಿ, ಹಗರಿ ಬೊಮ್ಮನಹಳ್ಳಿ ಪರಿಸರದಲ್ಲಿ ಗುಚ್ಚಿ ಆಟದಲ್ಲಿ (ಇತರೆಡೆ ಆಣೆಕಲ್ಲಾಟ) ಕಲ್ಲನ್ನು ಮೇಲೆ ಎಸೆಯುವುದನ್ನು ತೂರು ಎನ್ನುತ್ತಾರೆ.

ತೂರು : ಚಾಮರಾಜನಗರ, ಬೊಂಗಳೂರು, ಮಂಡ್ಯ ಪರಿಸರಗಳಲ್ಲಿ ಚೆಂಡಾಟದಲ್ಲಿ ಚೆಂಡನ್ನು ಬೀಸಿ ಎಸೆಯುವುದನ್ನು ತೂರು ಎನ್ನುವರು.

ತೊಟ್ಯಾ : ಉತ್ತರ  ಕರ್ನಾಟಕದಲ್ಲಿ  ಹರಳಿನಾಟದಲ್ಲಿ ಬಳಕೆಯಾಗುವ ಪದ.

ತೊಟ್ಟಿಲು : ಉತ್ತರ  ಕರ್ನಾಟಕದ  ಹರಳಿನ ಆಟದ ವಿಧಾನದಲ್ಲಿ  ಬಳಸುವ ಪದ.

ತೋಳಣ್ಣಾ : ಕರಾವಳಿ ಕರ್ನಾಟಕದ ತೋಳಕುರಿ ಆಟದಲ್ಲಿ ಕುರಿಯಾದವರು ತೋಳನಾದವನನ್ನು ಸಂಬೋಧಿಸುವ ರೀತಿ

ತ್ರಿಬಲ್ ಚಿನ್ನಿ : ಬಳ್ಳಾರಿ ಪ್ರದೇಶದ ಚಿನ್ನಿ ಕೋಲಾಟದಲ್ಲಿ ಚಿಣ್ಣಿ ಒಮ್ಮೆ ಎತ್ತಿ ಮೂರು ಬಾರಿ ಹೊಡೆಯುವುದು.

ದಂಡೆಕಟ್ಟೆಉತ್ತರ  ಕನ್ನಡದ  ಹರಳಿನಾಟದಲ್ಲಿ  ಹೂವಿನ ದಂಡೆಕಟ್ಟಿದಂತೆ ನಟಿಸುತ್ತಾ ಆಡುವಾಗ ಹೇಳಬೇಕಾದ ಮಾತು.

ದನ : ಕರಾವಳಿ ಕರ್ನಾಟಕದ  ಹುಲಿದನ ಆಟದಲ್ಲಿ ದುರ್ಬಲ ನಾಗಿರುವವನಿಗೆ ಆಟದ ನಿಯಮದಂತೆ ಕರೆಯುವ ಹೆಸರು.

ದಪ್ಪೇಟಿ : ತಿಪಟೂರು, ಹುಳಿಯಾರು ಪರಿಸರದಲ್ಲಿ ಆಟಕ್ಕಾಗಿ ಬಳಸುವ ದಪ್ಪಗೋಲಿ.

ದಪ್ಯಾಉತ್ತರ  ಕರ್ನಾಟಕದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ದರುಶನ : ಉತ್ತರ  ಕನ್ನಡದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ದಳವೈದಡ್ಡ : ಮೈಸೂರು ಪರಿಸರದ ಗುಳಿ ತುಂಬುವ ಒಂದು ಗೋಲಿ ಆಟದ ನಡುವೆ ಬಳಕೆಯಾಗುವ  ಮಾತು.

ದೀಪಮುಟ್ಟಿಸು :  ಉತ್ತರ  ಕರ್ನಾಟಕದ ಚಕ್ಕರ್ / ಚೌಕಾಬಾರಾ ಆಟಗಳಲ್ಲಿ ಎದುರಿನವರ ಕಾಯಿ ಕಡೆಯುವ ವಿಧಾನದಲ್ಲಿ  ಬಳಕೆಯಾಗುವ ಪದ.

ದುಬ್ಬಗೋಲಿ : ಹೊಸದುರ್ಗ ಪರಿಸರದ ಗೋಲಿ ಆಟದಲ್ಲಿ ಗುಳಿಗೆ ಗೋಲಿಯನ್ನು ಕೈ ಬೆರಳುಗಳಿಂದ ದೂಡುತ್ತಾರೆ ಆ ದೂಡುವ ಗೋಲಿಯನ್ನು ದುಬ್ಬಗೋಲಿ ಎನ್ನುತ್ತಾರೆ.

ದೂನಿ : ಬಾಗಲಕೋಟೆ ಪರಿಸರದ ಚಕ್ಕಾ ಆಟದಲ್ಲಿ ಎರಡರ ಸಂಖ್ಯಾವಾಚಿ.

ದೂರಬಾವಿ : ಉತ್ತರ  ಕರ್ನಾಟಕದ ಹರಳಿನಾಟದಲ್ಲಿ  ಬಳಕೆಯಾಗುವ ಪದ .

ದೇಕು : ಮೈಸೂರು ನಗರದ ಪದ್ದಾಟ ಗೋಲಿ ಆಟದಲ್ಲಿ ಸೋತವರು, ಗೋಲಿಯನ್ನು ಕೈಯಿಂದ ವಿವಿಧ ರೀತಿಯಲ್ಲಿ ತಳ್ಳಿಕೊಂಡು ಬಂದು ಗುಳಿತುಂಬಬೇಕು ಇದನ್ನು ದೇಕು ಎನ್ನುತ್ತಾರೆ.

ದೇಯೋದು : ಹೊಸದುರ್ಗ ಪರಿಸರದ ಗೋಲಿ ಆಟಗಳಲ್ಲಿ ಆಟಕ್ಕೆ ಸ್ಪರ್ದಿಗಳೆಲ್ಲ ಮೊದಲಿಗೆ ಗೋಲಿಗಳನ್ನು ಬಿಡುವುದಕ್ಕೆ ದೇಯೋದು ಎನ್ನುತ್ತಾರೆ.

ದೇವರಿಗೆ : ಮೈಸೂರು, ಮಂಡ್ಯ ಭಾಗದ ಕೆಲವು ಆಟಗಳಲ್ಲಿ ಆಟಗಾರರು ತಾವುಗಳಿಸಿದ ಮೊದಲ ಅಂಕಗಳನ್ನು ದೇವರಿಗೆ ಎಂದು ಹೇಳಿ ಬಿಟ್ಟು ಬಿಡುತ್ತಾರೆ. ಉದಾ ಚಿಣ್ಣಿ ಆಟದಲ್ಲಿ ಮೊದಲಿಗೆ ತುಂಬಾ ಕಡಿಮೆ ಸ್ಕೋರ್ ಆದರೆ ದೇವರಿಗೆ ಎಂದು ಬಿಟ್ಟು ಬಿಡುತ್ತಾರೆ.

ದೊಡ್ಡಗೆರಸಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ದೊಡ್ಡಸಿಂಗಿ : ಶಿಕಾರಿಪುರ ಪರಿಸರದ ಎತ್ತಗಲ್ಲು ಆಟದ ಆಟದ ನಡುವೆ ಆಟಗಾರರು ಹೇಳಬೇಕಾದ ಮಾತು.

ದೊಣ್ಣೆ : ದಕ್ಷಿಣ ಕನ್ನಡದ ಕುಟ್ಟಿ ದೊಣ್ಣೆ ಆಟದಲ್ಲಿ ಕುಟ್ಟಿಯನ್ನು ಹೊಡೆಯಲು ಬಳಸುವ ಕೋಲು. ಇತರೆಡೆ ಕೋಲು, ದಾಂಡು, ದಾಂಡಲ್ ಹೆಸರುಗಳಿವೆ.

ದೊಣ್ಣೆಗೋಲಿ : ಕುಷ್ಟಗಿ ಪರಿಸರದಲ್ಲಿ ಆಟಕ್ಕಾಗಿ ಬಳಸುವ ದಪ್ಪ ಗೋಲಿ.

ದೊಸೆ : ಉತ್ತರ  ಕನ್ನಡದ ಹರಳಿನಾಟದಲ್ಲಿ   ಹರಳು ಮೇಲೆಸೆದು ಕೈಯಲ್ಲಿ ಹಿಡಿಯುವಾಗ ಹೇಳುವ ಮಾತು.

ದೊಸೆ : ಉತ್ತರ  ಕರ್ನಾಟಕದ ಚುಟ್ಕಾಮಟ್ಕಾ ಆಟದಲ್ಲಿ ಬಳಕೆಯಾಗುವ ಪದ .

ದೋ : ಬಿಜಾಪುರ ಪರಿಸರ ಚಿಣ್ಣಿಕೋಲು ಆಟದಲ್ಲಿ ಚಿಣ್ಣಿಯನ್ನು ಎರಡು ಬೆರಳುಗಳ ಮೇಲೆ ಇಟ್ಟು ಹಾರಿಸಿ ಕೋಲಿನಿಂದ ಹೊಡೆಯಬೇಕು.

ದೋನಿಬಿಜಾಪುರ ಪರಿಸರ ಚೌಕಮಣಿ, ಚಕ್ಕಾರ ಆಟದಲ್ಲಿ ಎರಡು ಹುಣಸೆ ಬೀಜ ಬಿಳಿಭಾಗ ಮೇಲ್ಮುಖವಾಗಿ ಬಿದ್ದರೆ ದೋನಿ ಎನ್ನುತ್ತಾರೆ. ಎರಡು ಎಂದರ್ಥ.

ದೋಸೆ ಮಾಸುವೆ : ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಕಾರದಲ್ಲಿ ಕುಳಿತಿರುವವರಿಗೆ ಆಟವಾಡಿಸುವ ಹಿರಿಯರೋ ಆಥವಾ ಆಟದ ಕೇಂದ್ರವಾಗಿರುವವರು ಒಂದೊಂದೇ ಕೈಮುಟ್ಟಿ ಮಾತನ್ನು ಅನುಕ್ರಮಣಿಕೆಯಲ್ಲಿ ಹೇಳುವಾಗ ಎಂಟನೇ ಸಾರಿಗೆ ಬಳಸುವ ಪದ.

ನಕ್ಕ : ದಕ್ಷಿಣ ಕನ್ನಡದ  ಅಪ್ಪದ ಆಟದಲ್ಲಿ ‘ನಾಲ್ಕು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ .

ನಕ್ರೆನಾಲ್ : ಬಳ್ಳಾರಿಯ ಹಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಎಡಗೈಯನ್ನು ಮುಷ್ಟಿ ಮಾಡಿ ಮಣಿಕಟ್ಟಿನ ಮೇಲೆ ಚೆನ್ನಿಯನ್ನು ಇಟ್ಟು ದಾಂಡಿನಿಂದ ಹೊಡೆಯುವುದು.

ನಡುಮನೆ : ಉತ್ತರ  ಕನ್ನಡದ ಜಿಬ್ಬಿ ಆಟದ ಮನೆಯಲ್ಲಿನ ಒಂದು ಭಾಗ.

ನಾಗ : ರಾಯಚೂರು, ಮಾನ್ವಿ ಪರಿಸರದ ಗೋಲಿ ಆಟದಲ್ಲಿ ಮೊದಲ ಸರಳವಾದ ಏಟು ಗೋಲಿಯಿಂದ ಗೋಲಿಗೆ ಹೊಡೆಯುವುದು.

ನಾಗರ : ಸಿಂಧನೂರು ಪರಿಸರದ ಒಂದು ಗೋಲಿ ಆಟದಲ್ಲಿ ಆಟಗಾರ ಗೋಲಿ ಹೊಡೆಯಲು ಸಿದ್ಧವಾದಾಗ ಉಚ್ಚರಿಸುವ ಪದ.

ನಿಕ್ಕಕ್ಕಾ : ಉತ್ತರ  ಕನ್ನಡದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ನೀಡಕ್ಕಾ : ಉತ್ತರ  ಕನ್ನಡದ ಹರಳಿನಾಟ ಚುಟ್ಕಾಮಟ್ಕಾದಲ್ಲಿ ಬಳಸುವ ಪದ.

ನೀರಿಗೆ ಬಂತು : ಮೈಸೂರು ಪರಿಸರದ ಗುಳಿ ತುಂಬುವ ಒಂದು ಗೋಲಿ ಆಟದಲ್ಲಿ ಆಟದ ನಡುವೆ ಗೋಲಿ ಹೊಡೆಯುವವನು ಹೇಳಬೇಕಾದ ಮಾತು.

ನೀರುಗೋಲಿ : ಹುಣಸೂರು ಪರಿಸರದಲ್ಲಿ ಒಳಗೆ ಯಾವುದೇ ಆಕಾರವಿಲ್ಲದ ಬಣ್ಣವಿಲ್ಲದ ಸಾದಾ ಗಾಜಿನ ಗೋಲಿ.

ನೆಕ್ಕನೆ : ಉತ್ತರ  ಕನ್ನಡದ ಕವಡೆ ಆಟದಲ್ಲಿ ಕವಡೆ ಬಿಟ್ಟಾಗ ನೇರವಾಗಿ ಬಿದ್ದರೆ ನೆಕ್ಕನೆ ಎನ್ನುವರು.

ನೆತ್ತಿಗುಣ್ಣ : ದಕ್ಷಿಣ ಕನ್ನಡದ  ಬುಗುರಿ ಆಟದಲ್ಲಿ ಇಬ್ಬರೇ ಆಡುವ ಆಟದ ಒಂದು ಬಗೆಯಲ್ಲಿ ಒಬ್ಬನ ಬುಗರಿ ತಿರುಗುತ್ತಿದ್ದರೆ ಅದರ ಮೇಲೆ ಗುರಿಯಿಟ್ಟು ಇನ್ನೊಬ್ಬ ತನ್ನ ಬುಗುರಿಯಿಂದ (ತಿರುಗಿಸುತ್ತಾ) ಹೊಡೆಯುವುದು.

ಪಂಜ : ದಕ್ಷಿಣ ಕನ್ನಡದ  ಪಲ್ಲಿ ಆಟದಲ್ಲಿ ಆಟದ ಒಂದು ಹಂತದಲ್ಲಿ ಎಣಿಕೆ ಮಾಡುವ ಕ್ರಮವಿದೆ ಅಲ್ಲಿ ಐದು ಎನ್ನಲು ಪಂಜ ಎನ್ನುವ ಶಬ್ಧ ಉಚ್ಚರಿಸಲಾಗುತ್ತಿದೆ.

ಪಂಜಾ : ಮೈಸೂರು ಪರಿಸರದ ಹುಣಸೇ ಪಿಚ್ಚಿ ಆಟದಲ್ಲಿ ಐದು ಹುಣಸೆ ಕಾಳುಗಳು ಬಿಳಿ ಭಾಗ ಮೇಲ್ಮುಖವಾಗಿ ಬಿದ್ದರೆ ಪಂಜಾ ಎನ್ನುವರು.

ಪಂಯ್ಕಾ : ಉತ್ತರ  ಕರ್ನಾಟಕದ ಚುಟ್ಕಾ ಮಟ್ಕಾ ಆಟದಲ್ಲಿ ಬಳಕೆಯಾಗುವ ಅನುಕರಣ ವಾಚಿ ಶಬ್ಧ.

ಪಗ್ಗ : ಉತ್ತರ  ಕರ್ನಾಟಕದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ಪಚ್ಚಿ : ಕನಪುರ ಪರಿಸರದ ಕುಂಟೋ ಬಿಲ್ಲೇ ಆಟದಲ್ಲಿ ಕಾಲಿನಿಂದ ತಳ್ಳಲು ಬಳಸುವ ಹೆಂಚಿನ ಚೂರು ಅಥವಾ ಮಡಕೆ ಚೂರು.

ಪಜೇವು : ಬಳ್ಳಾರಿಯ ಹಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಚೆನ್ನಿ ಇಟ್ಟು ಹೊಡೆಯಲು ಮಾಡಿಕೊಳ್ಳುವ ಸಣ್ಣ ಕುಳಿ.

ಪಟ : ಉತ್ತರ  ಕನ್ನಡದ ಹಾಣೆ ಆಟದಲ್ಲಿ ಅಂಕಗಳನ್ನು ಸೂಚಿಸುವ ಪರಿಮಾಣವಾಚಕ. ಹಂಡಿ ಎಂದರೂ ಪರಿಮಾಣವಾಚಕ ಇಂತಹ ಹತ್ತು ಹಂಡಿಗೆ ಒಂದು ಪಟ.

ಪಟ್ಟ : ಬಳ್ಳಾರಿ ಪರಿಸರದಲ್ಲಿ ಗುಚ್ಚಿ ಆಟದಲ್ಲಿ ತಪ್ಪು ಮಾಡುವುದು.

ಪಟ್ಟಿ : ಹೊಸದುರ್ಗ ಪರಿಸರದ ಗೋಲಿ ಆಟಗಳಲ್ಲಿ ಗೋಲಿ ಇಡುವ ಅಂಕಣ.

ಪಟ್ಟು : ಬೀದರ ಪರಿಸರದ ಕವಡಿ ಆಟದಲ್ಲಿ ಕೆಳಮುಖವಾಗಿ ಬಿದ್ದ ಕವಡೆಯನ್ನು ಪಟ್ಟು ಎನ್ನುವರು.

ಪಟ್ಟೆ : ಮೈಸೂರು ಪರಿಸರದ ಗೋಲಿ ಆಟದಲ್ಲಿ ಬರೆಯುವ ಗೆರೆ, ಮೈಸೂರು ಪರಿಸರದ ಮೀರಿ ಎಂಬ ಗೋಲಿ ಆಟದಲ್ಲಿ ಗೋಲಿ ಬಿಟ್ಟಾಗ ಹೋಗಿ ಗೆರೆ ಮೇಲ್ಲೆ ಕುಳಿತರೆ ಪಟ್ಟೀ ಎನ್ನುತ್ತಾರೆ.

ಪತಿ : ದಕ್ಷಿಣ ಕನ್ನಡದ ಕೋಳಿ ಅಂಕ ಜೂಜಿನಾಟದಲ್ಲಿ ಆಟದ ಎರಡು ಕೋಳಿಗಳನ್ನು ಜೊತೆ ಗೂಡಿಸುವುದನ್ನು ಪತಿ ಮಾಡುವುದು ಎನ್ನುತ್ತಾರೆ.

ಪತ್ತ : ಮೈಸೂರು ಪ್ರದೇಶದ ಹಲಗುಳಿ ಮಣೆ ಆಟದಲ್ಲಿ ಗುಳಿಗಳಲ್ಲಿ ಹೆಚ್ಚು ಕಾಳು ಇರುವ ಗುಳಿ, ಒಂದು ಪರಿಮಾಣವಾಚಿ. ಒಂದು ಪತ್ತ ಎರಡು ಪತ್ತ ಎಂದು ಲೆಕ್ಕ ಹಾಕುತ್ತಾರೆ.

ಪತ್ರೆ ಪರಿಮಳ : ಉತ್ತರ  ಕನ್ನಡದ ಹರಳಿನಾಟದಲ್ಲಿ  ಆಟದ ನಡುವೆ ಉಚ್ಚರಿಸುವ ಮಾತು.

ಪದ್ದು : ಉತ್ತರ  ಕರ್ನಾಟಕ, ಮೈಸೂರು, ಚಾಮರಾಜನಗರ ಪರಿಸರದ ಗೋಲಿ ಆಟದ ಅಂಕಣದಲ್ಲಿರುವ ಗುಳಿ.

ಪದ್ದು : ಚಾಮರಾಜನಗರ ಪರಿಸರದ ಚಿಣ್ಣಿ ಆಟದಲ್ಲಿ ಚಿಣ್ಣಿ ಇಡುವ ಉದ್ದಗುಳಿ.

ಪಲ್ಲಿ : ದಕ್ಷಿಣ ಕನ್ನಡದ  ಪಲ್ಲಿ ಆಟದಲ್ಲಿ  ಆಟಗಾರರಿಗೆ ಆಟದ ಒಂದು ಹಂತದಲ್ಲಿ  ನೀಡುವ ಹೆಸರು.

ಪಲ್ಲೆ : ಕುಂಟಾಟಕ್ಕಾಗಿ ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳು ಬಳಸುವ ಪಲ್ಲೆ ಮರದ ಚಪ್ಪಟೆ ಕಾಯಿ.

ಪವ್ಲಕ್ಕಿ :  ಉತ್ತರ  ಕನ್ನಡದ  ಕಂಬಾಟದಲ್ಲಿ ಬಳಕೆಯಾಗುವ ಪದ.

ಪಾಂಡಿ ಕಟ್ಟು : ಕನಕಪುರ ಪರಿಸರದ ಕುಂಟೋ ಬಿಲ್ಲೆ ಆಟದಲ್ಲಿ ಆಟದ ಒಂದು ಹಂತದಲ್ಲಿ ಒಂದು ಮನೆಗೆ ಗುರುತು ಮಾಡುತ್ತಾರೆ. ಅದನ್ನು ಪಾಂಡಿ ಕಟ್ಟುವುದು ಎನ್ನುತ್ತಾರೆ. ಆಡುತ್ತಿರುವವರು ಪಾಂಡಿಕಟ್ಟಿದ ಮನೆಯನ್ನು ಕುಂಟುತ್ತಾ ದಾಟಬೇಕಿಲ್ಲ. ಅಲ್ಲಿ ಕಾಲು ಬಿಟ್ಟುಕೊಳ್ಳುಬಹುದು.

ಪಾಜ : ಬಿಜಾಪುರ ಪರಿಸರದಲ್ಲಿ ಗೋಲಿ ಆಟ ಪ್ರರಂಭ ಮಾಡಲು ಒಂದು ಕಡೆ ನಿಂತು ಎಲ್ಲರೂ ಗೋಲಿ ಉರುಳಿಸಬೇಕು. ಗೋಲಿ ಉರುಳಿಸಲು ಸಾಲಾಗಿ ನಿಲ್ಲುವ ಸ್ಥಳ, ಆಟ ಪ್ರಾರಂಭವಾಗುವ ಸ್ಥಳ.

ಪಾಜ : ಉತ್ತರ ಕರ್ನಾಟಕದ ಚಿಣ್ಣಿ ಕೋಲಾಟದಲ್ಲಿ ಚಿಣ್ಣಿ ಇಟ್ಟುಕೊಳ್ಳಲು ಮಾಡುವ ತಗ್ಗು.

ಪಾದ : ಉತ್ತರ  ಕನ್ನಡದ ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಪಿಗ್ಗಿ ಬಿದ್ದೆ : ಮೈಸೂರು ಪರಿಸರದ ಹುಣಸೆ ಪಿಚ್ಚಿ ಆಟ, ಹಳ್ಳುಮಣೆ ಆಟದಲ್ಲಿ ಸೋಲುವುದನ್ನು ಸೂಚಿಸುವ ಪದ.

ಪಿಚ್ಚಿ : ಮೈಸೂರು, ಹುಣಸೂರು ಪರಿಸರದಲ್ಲಿ ಆಟಕ್ಕಾಗಿ ಬಳಸುವ ತೇಯ್ದು ಹುಣಸೇ ಬೀಜ.

ಪಿತ್ತ : ತುಮಕೂರಿನ ಶಿರಾ ಪರಿಸರದಲ್ಲಿ ಆಟವಾಡಲು ಬಳಸುವ ತೇಯ್ದ ಹುಣಸೇ ಬೀಜಗಳನ್ನು ಪಿತ್ತ ಎನ್ನುತ್ತಾರೆ.

ಪಿತ್ತರಿ : ಸಿಂದನೂರು ಪರಿಸರದ ಗೋಲಿ ಆಟದಲ್ಲಿ ಆಡಲು ಬಿಟ್ಟ ಎರಡು ಗೋಲಿಗಳು ಒಂದಕ್ಕೊಂದು ಅಂಟಿಕೊಂಡಿದ್ದರೆ ಬಳಸುವ ಪದ.

ಪಿದ್ದಿ : ಬಳ್ಳಾರಿ ಪರಿಸರದ ಗೋಲಿ ಆಟದ ಆಂಕಣದಲ್ಲಿ ಇರುವ ಗುಳಿ.

ಪಿರಂಗಿಚಾರಿ : ಉತ್ತರ  ಕನ್ನಡದ  ಸಾದು ಗೋದು ಎಂಬ ಆಟದಲ್ಲಿ ಬಳಸುವ ಪದ.

ಪೀಟ್ : ಉತ್ತರ  ಕನ್ನಡದ  ಅತ್ ರಂಬೆ ಗಾಣ್ನರಂಬೆ ಆಟದಲ್ಲಿ ಬಳಸುವ ಪದ.

ಪೀಟ್ : ಚಾಮರಾಜನಗರ ಪರಿಸರದ  ಬುಗುರಿ ಆಟದಲ್ಲಿ ತಿರುಗುತ್ತಿರುವ ಬುಗುರಿಯನ್ನು ದಾರದ ಸಹಾಯದಿಂದ ಮೇಲೆಸೆದು ಹಿಡಿಯುವುದು ಇತರೆಡೆ ಅಪಿಟ್ ಎನ್ನುತ್ತಾರೆ.

ಪೀತ್ಗಮನೆ : ಚಾಮರಾಜನಗರ ಪರಿಸರದ ಅಳಿಗುಳಿ ಮನೆ ಆಟದಲ್ಲಿ ಗುಳಿಯಲ್ಲಿ ಕಾಯಿ ಖಾಲಿ ಆದರೆ ಅದನ್ನು ಪೀತ್ಗಮನೆ  ಎನ್ನುತ್ತಾರೆ. ನಿಯಮದ ಪ್ರಕಾರ ಈ ಮನೆಗೆ ಕಾಯಿ ಹಾಕುವಂತಿಲ್ಲ.

ಪುಂಗಿ ಬೀಳುವುದು : ಶಿಕಾರಿಪುರ ಪರಿಸರದ ಚಣಮಣಿ ಆಟದಲ್ಲಿ ಆಟಗಾರನಿಗೆ ಒಂದೂ ಕಾಳು ಲಾಭ ಬರದೆ ಖಾಲಿ ಮನೆ ಸಿಕ್ಕರೆ ಪುಂಗಿ ಬೀಳುವುದು ಎನ್ನುವರು.

ಪುಗ್ಗ : ಉತ್ತರ  ಕನ್ನಡದ ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಪುಚ್ ಗಂಧ : ಉತ್ತರ  ಕನ್ನಡದ ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಪುಚ್ಚಿ : ಬಿಜಾಪುರ ಪರಿಸರದ ಚಿಣ್ಣಿ ದಾಂಡಿನ ಆಟದಲ್ಲಿ ಚಿಣ್ಣಿ ಇಡಲು ಮಾಡುವ ಸಣ್ಣ ತಗ್ಗು.

ಪುಟಿಸು : ಬಿಜಾಪುರ ಪರಿಸರದ ಚಿಣ್ಣಿ ಕೋಲು ಆಟದಲ್ಲಿ ಚಿಣ್ಣಿ ಹಾರಿಸುವುದನ್ನು ಪುಟಿಸು ಎನ್ನುತ್ತಾರೆ.

ಪುಸ್ : ಉತ್ತರ ಕನ್ನಡದ ಹಿಡಿದಾಟದಲ್ಲಿ ಹೀಗೆ ಪುಸ್ ಶಬ್ಧದಿಂದ ಹೆಸರಿಸಲ್ಪಟ್ಟವರು ಇತರರನ್ನು ತಪ್ಪಿಸಿಕೊಳ್ಳದ ಹಾಗೆ ಹಿಡಿಯಬೇಕು.

ಪೂರ್ಣ ಗಂಧ : ಉತ್ತರ  ಕನ್ನಡದ ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಪೊಗ್ದೆ : ಉತ್ತರ ಕನ್ನಡದ ಅತ್‌ರಂಬೆಗಾಣ್ನರಂಬೆ ಆಟದಲ್ಲಿ ಕಾಲು ಮುಂದೆ ಬರುವುದಕ್ಕೆ ಬಳಸುವ ಮಾತು.

ಪಂಗ : ಹೊಸದುರ್ಗ ಪರಿಸರದ  ಬುಗುರಿ ಆಟದಲ್ಲಿ ತಿರುಗತ್ತಿರುವ ಬುಗುರಿಯನ್ನು ದಾರದ ಸಹಾಯದಿಂದ ಎತ್ತಿ ಹಿಡಿಯುವುದು.

ಪೆರ್ಗ : ದಕ್ಷಿಣ ಕನ್ನಡದ ಚೆನ್ನೆ ಮಣೆ ಆಟದಲ್ಲಿ ಆಟಗಾರನ ಸ್ವಾಧೀನದಲ್ಲಿ ನಾಲ್ಕಕ್ಕಿಂತ ಹೆಚ್ಚು ಕಾಯಿ ಇದ್ದಲ್ಲಿ ಬಳಕೆಯಾಗುವ ಪರಿಮಾಣವಾಚಕ.

ಪೆತ್ತಕಂಜಿ : ಉತ್ತರ ಕನ್ನಡದ ಚಿಪುಳು ಚೆಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರಿಗೆ ಆಟವಾಡಿಸುವ ಹಿರಿಯರೋ, ಆಟದ ಕೇಂದ್ರವಾಗಿರುವವರು ಒಂದೊಂದೇ ಕೈ ಮುಟ್ಟಿ ಮಾತನ್ನು ಅನುಕ್ರಮಣಿಕೆಯಲ್ಲಿ ಹೇಳುವಾಗ ಎರಡನೆ ಸಾರಿಗೆ ಬಳಸುವ ಪದ.

ಪೈಕ : ಉತ್ತರ ಕನ್ನಡದ ಉಂಗುರದಾಟದಲ್ಲಿ ಚೆನ್ನೆಮಣೆ ಆಟದ ವಿಧಾನದಲ್ಲಿ ಆಟಗಾರನೊಬ್ಬನಿಗೆ ನಿಗದಿಯಾದ ಸ್ಥಾನ ಮಾನ.

ಪೋಕಣಿ : ಉತ್ತರ  ಕನ್ನಡದ ಹರಳಿನಾಟದಲ್ಲಿ ಸೋತು ದಿವಾಳಿಯಾದರೆ ಹೇಳುವ ಮಾತು.

ಪ್ರಾಣ್ : ಉತ್ತರ ಕನ್ನಡದ ಅತ್‌ರಂಬೆಗಾಣ್ನರಂಬೆ ಆಟದಲ್ಲಿ ಬಳಸುವ ಪದ.

ಫಣಿ : ಬೀದರ್ ಜಿಲ್ಲೆಯ ಗಿಲ್ಲಿ, ಚೆಂಡಾಟಗಳಲ್ಲಿ ಗಿಲ್ಲಿ ಹೊಡೆಯಲು, ಚೆಂಡು ಹೊಡೆಯಲು ಬಳಸುವ ಕೋಲು.

ಫೌಂಟ್ : ಉತ್ತರ ಕನ್ನಡದ ಅಪ್ಪಳೇ ಮಾವಳೇ ಆಟದಲ್ಲಿ ಬಳಕೆಯಾಗುವ ಪದ.

ಪೂಟು : ಬಳ್ಳಾರಿ ಪರಿಸರದ ಜೂಜಿನಾಟದಲ್ಲಿ ಬಳಕೆಯಾಗುವ ನೀಲಿ ಬಣ್ಣದ ಪಾರಿವಾಳ.

ಫ್ರೀ : ಸಿಂಧನೂರು ಪರಿಸರದ ಗೋಲಿ ಆಟದಲ್ಲಿ ಆಡಲು ಬಿಟ್ಟ ಗೋಲಿಗಳಲ್ಲಿ  ಎರಡು ಗೋಲಿಗಳ ನಡುವೆ ಬೆರಳಿನಷ್ಟು ಅಂತರವಿದ್ದರೆ ಫ್ರೀ ಎನ್ನುತ್ತಾರೆ.