ಗಂಗೆ ಪೆಟ್ಟಿಗೆ : ಉತ್ತರ ಕನ್ನಡದ ಜಿಪ್ಪಿ ಆಟದಲ್ಲಿ  ಆಟದ ನಕ್ಷೆಯ ಒಂದು ಭಾಗ.

ಗಂಜಿ : ಮೈಸೂರು ನಗರದ ಚಿಣ್ಣಿ ದಾಂಡು ಆಟದ ಗಂಜೀ ಕುಣೀಸ್ ಆಟದಲ್ಲಿ ಚಿಣ್ಣಿ ಹೊಡೆಯುವವನು ಹೊಡೆಯುವ ಮೊದಲು ಗಂಜೀ ಎನ್ನಬೇಕು.  

ಗಂಜಿ ಕಾಯಿಸು : ಮೈಸೂರು ನಗರದ ಚಿಣ್ಣಿ ದಾಂಡು ಆಟದ ಒಂದು ಪ್ರಕಾರದಲ್ಲಿ ಆಟಗಾರನು ಚಿಣ್ಣಿ ಹೊಡೆದಾಗ ಯಾರ ಚಿಣ್ಣಿ ದೂರ ಹೋಗಿರುತ್ತದೋ ಅವನಿಗೆ ಸಿಗುವ ಅವಕಾಶ.

ಗಂಜಿ ಕುಡಿ : ಮೈಸೂರು ನಗರದ ಚಿಣ್ಣಿ ದಾಂಡು ಆಟದ ಒಂದು ಪ್ರಕಾರದಲ್ಲಿ ಆಟಗಾರನು ಚಿಣ್ಣಿ ಹೊಡೆದ ಮೇಲೆ ಯಾರದು ಹತ್ತಿರದಲ್ಲೆ ಬಿದ್ದಿರುತ್ತದೋ ಅವನು ಮಾಡಬೇಕಾದ ಕ್ರಿಯೆ.

ಗಂಡು ಮಾಡುವುದು : ಬಿಜಾಪುರ ಪರಿಸರದ ಚೌಕಮಣಿ ಆಟದಲ್ಲಿ ಎರಡು ಕಾಯಿಗಳನ್ನು ಒಟ್ಟು ಸೇರಿಸಿ ಕೊಳ್ಳುವುದು.

ಗಂಡ್ನಮೀಯ್ತು : ಉತ್ತರ ಕನ್ನಡದ ಹಕ್‌ಬಂತ್‌ ಎಂಬ ಆಟದಲ್ಲಿ ಬಳಸುವ ಮಾತು.

ಗಂಡ್ನಕಾಣಿಸಪ್ಪಾ : ಉತ್ತರ ಕನ್ನಡದ ಅಟ್ಟಕ್ಕಿಮುಟ್ಟಕ್ಕಿ ಆಟದಲ್ಲಿ ಬಳಸುವ ಮಾತು.

ಗಂಧ : ಉತ್ತರ ಕರ್ನಾಟಕದ ಹರಳಿನಾಟದ ನಿಯಮಾನುಸಾರ ಆಟದ ಒಂದು ಹಂತದಲ್ಲಿ ಹೇಳಬೇಕಾದ ಪದ.

ಗಕ್ಕ್ಬೇಕು : ಹೊಸದುರ್ಗ ಪರಿಸರದ ಚಿಣ್ಣಿಕೋಲು ಆಟದಲ್ಲಿ ಸೋತವರಿಗೆ ಕೊಡುವ ಶಿಕ್ಷೆ. ಒಂದೇ ಉಸಿರಿನಲ್ಲಿ ಚಿಪ್ಕೊಕೊಟ್ಟೆ ಮುಕಳಿ ಹಟ್ಟೆ ಅಥವಾ ಹಗ್ಗಹನ್ನೆರಡು ಮರ ತಗ್ಗಿನಕ್ಕೆ ಬನ್ನಿಮರ, ಅಥವಾ ಜಿಕಟ್ಟೆ ಜೀ ಜೋ ಗಕ್ಕಣ್ಣ ಮುಕ್ಕಣ್ಣ ಈ ಜೋಡಿರಚನೆಗಳಲ್ಲಿ ಯಾವುದಾದರೂ ಒಂದನ್ನು ಹೇಳುತ್ತಾ ಕೇಂದ್ರ ಮುಟ್ಟಬೇಕು.

ಗಕ್ಕೋ ಚಿನ್ನಿಗಕ್ಕೋ : ಬಳ್ಳಾರಿ ಪ್ರದೇಶದ ಚಿಣ್ಣಿ ಕೋಲಾಟದಲ್ಲಿ ಆಟಗಾರರು ಆಟದ ಸಂದರ್ಭದಲ್ಲಿ ಹೇಳುವ ಮಾತುಗಳು.

ಗಜ್ಜಿಬಜ್ಜಿತಾಂಬಳ್‌ : ಉತ್ತರ ಕನ್ನಡದ ಅಪ್ಪಳೇ ಮಾಳೇ ಆಟದಲ್ಲಿ ಬಳಸುವ ಮಾತು.

ಗಟ್ಟ : ಮೈಸೂರು, ಮಂಡ್ಯ ಪರಿಸರದ ಗಟ್ಟದ ಮನೆ ಆಟದಲ್ಲಿ ಕಾಯಿ ಇಟ್ಟುಕೊಳ್ಳುವ ಸ್ಥಾನ.

ಗಟ್ಟಕ್ಕೆ : ದಕ್ಷಿಣ ಕನ್ನಡದ ಚೆನ್ನೆ ಮಣೆ ಆಟದಲ್ಲಿ ರಾಜನ ನಾಲ್ಕು ಮನೆ ಖಾಲಿ ಆದರೆ ಸೋತಹಾಗೆ, ಅದನ್ನು ‘ಗಟ್ಟ’ಕ್ಕೆ ಹೋದಹಾಗೆ ಎನ್ನುತ್ತಾರೆ.

ಗಪ್ಪ್‌ : ರಾಯಚೂರು ಮಾನ್ವಿ ಪರಿಸರದ ಬುಗುರಿ ಆಟದಲ್ಲಿ ತಿರುಗುತ್ತಿರುವ ಬುಗುರಿಯನ್ನು ದಾರದ ಸಹಾಯದಿಂದ ಮೇಲೆತ್ತಿ ಹಿಡಿದುಕೊಳ್ಳುವುದು.

ಗಾಯತ್ರಿನಾಲ್ಕೊ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಲೆಕ್ಕ ಹಾಕುವ ವಿಧಾನದಲ್ಲಿ ಬಳಕೆಯಾಗುವ ಮಾತು.

ಗಾರಾ : ತುಮಕೂರಿನ, ಶಿರಾ ಪ್ರದೇಶದ ಚಿಣ್ಣಿಗಾರಾ ಆಟದಲ್ಲಿ ಚಿಣ್ಣಿಯನ್ನು ಹೊಡೆಯುವ ಕೋಲು ಇತರೆಡೆ ದಾಂಡು, ಕೋಲು ಎನ್ನುತ್ತಾರೆ.

ಗಾಳಿಆಗುವುದು : ಕೊಳ್ಳೇಗಾಲ ಪರಿಸರದ ಗಟ್ಟದಮನೆ ಆಟದಲ್ಲಿ ಖಾಲಿ ಮನೆ ಉಳಿದರೆ ಗಾಳಿ ಆಗುವುದು ಎನ್ನುತ್ತಾರೆ.

ಗಾಳಿಯಾಗುವುದು : ಚಾಮರಾಜನಗರ ಪರಿಸರದ ಗಟ್ಟಾಟ (ಇತರೆಡೆ ಚೌಕಾಬಾರ)ದಲ್ಲಿ ಕಾಯಿ ಹೊಡೆಯದಿದ್ದರೆ ಅದನ್ನು ಗಾಳಿಯಾಗುವುದು ಎನ್ನುತ್ತಾರೆ.

ಗಿಚ್ಚ : ಉತ್ತರ ಕರ್ನಾಟಕದ ಬುಗುರಿ ಆಟದಲ್ಲಿ ಸೋತ ವ್ಯಕ್ತಿಯ ಬುಗುರಿಗೆ ಗೆದ್ದ ವ್ಯಕ್ತಿಯ ಬುಗುರಿಯ ಮೊಳೆಯಿಂದ ಕುಟ್ಟಿ, ಚುಚ್ಚಿ ಗಾಯ ಮಾಡುವುದು.

ಗಿಡಗ : ಉತ್ತರ ಕರ್ನಾಟಕದ ಗುಲು ಗುಲು ಗುಲಕ್‌ ಎಂಬ ಆಟದಲ್ಲಿ ಆಟಗಾರನೊಬ್ಬನಿಗೆ ಇಡುವ ಹೆಸರು.

ಗಿಲಿಗಿಲಿಗಿಲಿ : ಉತ್ತರ ಕನ್ನಡದ ಸಾದುಗೋದು ಆಟದಲ್ಲಿ ಬಳಕೆಯಾಗುವ ಉಚ್ಚಾರ.

ಗಿಲ್ಲಿ : ಉತ್ತರಕರ್ನಾಟಕದ ಹರಳಿನಾಟದ ಒಂದು ಹಂತ.

ಗಿಲ್ಲಿ : ಮೈಸೂರು ಪರಿಸರದ ಗಿಲ್ಲಿ ದಾಂಡು ಆಟದಲ್ಲಿ ಬಳಕೆಯಾಗುವ ಎರಡು ಕಡೆ ಕೆತ್ತಿ ಚೂಪು ಮಾಡಿರುವ ನಾಲ್ಕರಿಂದ ಐದು ಇಂಚು ಉದ್ದವಿರುವ ಮರದ ತುಂಡು.

ಗಿಲ್ಲಿ ಎತ್ತು : ಗಿಲ್ಲಿ ಆಟದಲ್ಲಿ ಮೈಸೂರು ಪ್ರದೇಶದಲ್ಲಿ ಗಿಲ್ಲಿಯನ್ನು ದಾಂಡಿನಿಂದ ಎರಡು ಬಾರಿ ಅಂದರೆ ಒಮ್ಮೆ ಮೇಲೆತ್ತಿ ನೆಲಮುಟ್ಟುವ ಮುಂಚೆಯೇ ದೂರ ಹೊಡೆಯುವುದು.

ಗಿಳಿ : ದಕ್ಷಿಣ ಕನ್ನಡದ ಹುಡುಗಿಯರು ಆಡುವ ಕಕ್ಕೆ ಗಿಳಿ ಆಟದಲ್ಲಿ ಗಿಳಿಯಾಗುವವರಿಗೆ ನಿಯೋಜಿಸುವ ಹೆಸರು.

ಗುಂಡು ಜೂಜು : ಪಂಚಮಿ ಹಬ್ಬದ ಸಂದರ್ಭದಲ್ಲಿ ಬಳ್ಳಾರಿ ಹಂಪಿ ಪ್ರದೇಶದಲ್ಲಿ ಆಡುವ ಒಂದು ಬಗೆಯ ಜೂಜಿನಾಟ. ನಿಗದಿತ ದೂರಕ್ಕೆ ಇಂತಿಷ್ಟು ಎಸೆತಗಳಲ್ಲಿ ಗುಂಡು ಎಸೆದು ಗುರಿ ಮುಟ್ಟಬೇಕು.

ಗುಡ್ಡೆ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಆಟದ ನಡೆವೆ ಹೇಳಬೇಕಾದ ಪದ. ಗುಡ್ಡೆ ಬೆಟ್ಟ ಎಂದು ಹೇಳುತ್ತಾ ಆಟ ಮುಂದುವರಿಯುತ್ತದೆ.

ಗುಣಿ : ಮೈಸೂರು ಪರಿಸರದ ಹಳ್ಳುಮಣೆ ಆಟದ ಮಣೆಯಲ್ಲಿ ಕಾಳು ಹಾಕಲು ಇರುವ ಸಣ್ಣ ಕುಳಿ.

ಗುಣಿ : ಮೈಸೂರು ಪರಿಸರದ ಗೋಲಿ ಆಟದ ಅಂಕಣದಲ್ಲಿ ಗೋಲಿ ಬಿಟ್ಟು ತುಂಬಲು ಇರುವ ಸಣ್ಣ ಕುಳಿ.

ಗುಣ್ಣ : ದಕ್ಷಿಣ ಕನ್ನಡದ ಬುಗುರಿ ಆಟದಲ್ಲಿ ಒಂದು ಬುಗುರಿಯ ಮೊಳೆಯಿಂದ ಮತ್ತೊಂದು ಬುಗುರಿಗೆ ಏಟುಬಿದ್ದು ಸಣ್ಣ ಕುಳಿಯಾಗುವುದು.

ಗುತ್ತಿಗೆ : ಯಾದಗೀರ, ಗುಲ್ಬರ್ಗಾ ಪರಿಸರದ ಬುಗುರಿ ಆಟದಲ್ಲಿ ತಿರುಗುತ್ತಿರುವ ಬುಗುರಿಯನ್ನು ದಾರದಿಂದ ಸುತ್ತಿ ಮೇಲೆತ್ತಿ ಹಿಡಿಯುವುದು.

ಗುದ್ದು : ಬಿಜಾಪುರ ಪರಿಸರದ ಗೋಲಿ ಆಟದ ಅಂಕಣದಲ್ಲಿ ಮಾಡಿರುವ ಕುಳಿ.

ಗುನ್ನ : ಮೈಸೂರು, ಮಂಡ್ಯ, ಬೆಂಗಳೂರು ಪರಿಸರದ ಬುಗುರಿ ಆಟಗಳಲ್ಲಿ ಒಂದು ಬುಗುರಿಯ ಮೊಳೆಯಿಂದ ಎದುರಾಳಿಯ ಬುಗುರಿಗೆ ನಾಟುವುದು.

ಗುಪ್ಪ : ಸಿಂಧನೂರು ಪರಿಸರದ ಬುಗುರಿ ಆಟದ ನೆಲದಲ್ಲಿ ತಿರುಗುತ್ತಿರುವ ಬುಗುರಿಯನ್ನು ಎರಡು ಕೈಗಳಿಂದ ನೆಲದಲ್ಲಿಯೇ ಹಿಡಿಯುವುದು.

ಗುಮ್ಚಿ : ಮೈಸೂರು ಪರಿಸರದ ಗೆಜ್ಜುಗ, ಗೋಲಿ ಆಟಗಳನ್ನು ಆಡುವಾಗ ಸಾಲಾಗಿ ಇಟ್ಟ ಗೋಲಿ ಅಥವಾ ಗೆಜ್ಜುಗಗಳನ್ನು ಹೊಡೆದು ಹಾರಿಸಲು ಬಳಕೆಯಾಗುವ ಚಪ್ಪಟೆಯಾಕಾರದ ಸಣ್ಣ ಕಲ್ಲು.

ಗುಲಗಂಜಿ : ಉತ್ತರ ಕನ್ನಡದ ಸರಿಯೋ ಮಿಗ್ಲೋ ಆಟದಲ್ಲಿ ಬಳಸುವ ಕಾಳು.

ಗುಲಗಂಜಿ : ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರಿಗೆ ಆಟವಾಡಿಸುವ ಹಿರಿಯರೋ ಅಥವಾ ಆಟದ ಕೇಂದ್ರವಾಗಿರುವವರು ಒಂದೊಂದೇ ಕೈಮುಟ್ಟಿ ಮಾತನ್ನು ಅನುಕ್ರಮಣಿಕೆಯಲ್ಲಿ ಹೇಳುವಾಗ ಆರನೇ ಸಾರಿಗೆ ಬಳಸುವ ಪದ.

ಗುಲಗುಡುಗುಮ್ಮ : ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರಿಗೆ ಆಟವಾಡಿಸುವ ಹಿರಿಯರೋ ಅಥವಾ ಆಟದ ಕೇಂದ್ರವಾಗಿರುವವರು ಒಂದೊಂದೇ ಕೈಮುಟ್ಟಿ ಅನುಕ್ರಮಣಿಕೆಯಲ್ಲಿ ಈ ಮಾತನ್ನು ಏಳನೇ ಸಾರಿಗೆ ಬಳಸುತ್ತಾರೆ.

ಗುಳಿಯಪ್ಪ : ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರಿಗೆ ಆಟವಾಡಿಸುವ ಹಿರಿಯರೋ ಅಥವಾ ಆಟದ ಕೇಂದ್ರವಾಗಿರುವವರು ಒಂದೊಂದೇ ಕೈಮುಟ್ಟಿ ಮಾತನ್ನು ಅನುಕ್ರಮಣಿಕೆಯಲ್ಲಿ ಹೇಳುವಾಗ ಆರನೇ ಸಾರಿಗೆ ಬಳಸುತ್ತಾರೆ.

ಗೂಕ್‌ : ಉತ್ತರ ಕರ್ನಾಟಕದ ಊಪುರಂಗಿ ಊರೂರಂಗಿ ಆಟದ ನಡುವೆ ಹಾಡಿನಲ್ಲಿ ಬಳಸುವ ಉಚ್ಚಾರ.

ಗೆಂಡೆ : ಉತ್ತರ ಕನ್ನಡದ ಹಾಣೆ ಆಟ (ಚಿಣಿಫಣಿ)ದಲ್ಲಿ ಬಳಕೆಯಾಗುವ ಎರಡೂ ತುದಿಗಳನ್ನು ಕೆತ್ತಿ ಚೂಪು ಮಾಡಿರುವ ಚಿಕ್ಕ ಕೋಲು ಇತರೆಡೆ, ಚಿಣ್ಣಿ ಅಥವಾ ಗಿಲ್ಲಿ ಎಂದು ಕರೆಯುತ್ತಾರೆ.

ಗೆಜ್ಜುಗ : ಮೈಸೂರು, ಬೀದರ್, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗಜ್ಜುಗದ ಕಾಯಿಗಳು ಗೋಲಿಗಳಂತೆ ಕೆಲವು ಆಟದಲ್ಲಿ ಬಳಕೆಯಾಗುತ್ತವೆ.

ಗೆಬ್ಲಿಸ್‌ : ಹುಳಿಯಾರು ಪರಿಸರದ ತಂಡದ ಆಟಗಳಿಗೆ ಆಟಗಾರರನ್ನು ವಿಭಜಿಸುವ ರೀತಿ.

ಗೇಣು : ಮೈಸೂರು ಪರಿಸರದ ಗೋಲಿ ಆಟದಲ್ಲಿ ಅಳತೆ ಮಾಪನ ಪರಿಮಾಣ. ಹೆಬ್ಬೆರಳ ತುದಿಯಿಂದ ಕಿರುಬೆರಳ ತುದಿಯವರೆಗೆ ಅಗಲಿಸಿದಾಗ ಬರುವ ಅಳತೆಯ ಪ್ರಮಾಣ.

ಗೇರ್ವ : ಬಳ್ಳಾರಿ ಪರಿಸರದ ಜೂಜಿನಾಟದಲ್ಲಿ ಬಳಕೆಯಾಗುವ ಕಪ್ಪು ಬಣ್ಣದ ಪಾರಿವಾಳ.

ಗೇವಾ : ಬಾಗಲಕೋಟೆ ಪರಿಸರದ ಗೋಲಿ ಆಟದಲ್ಲಿ ಬಳಕೆಯಾಗುವ ಪದ.

ಗೊಗ್ಗವ್ವ : ಗುಳ್ಳವ್ವನ ಆರಾಧನೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಗುಳ್ಳವ್ವನ ಎದುರು ಕೂರಿಸುವ ಕುರೂಪಿ ಸ್ತ್ರೀ ಮೂರ್ತಿ ಇದನ್ನು ಆಚರಣಾತ್ಮಕ ಆಟದ ಸಂದರ್ಭದಲ್ಲಿ ಕುಟ್ಟಿ ಕುಟ್ಟಿ ಸಾಯಿಸುತ್ತಾರೆ.

ಗೊಟ್ಟ : ಬಳ್ಳಾರಿ ಪರಿಸರದ ಕಲ್ಲಾಟದಲ್ಲಿ ಬಳಸುವ ಚಪ್ಪಟೆ, ದುಂಡನೆ ಕಲ್ಲು.

ಗೋಟಿ : ಬಳ್ಳಾರಿ ಪರಿಸರದಲ್ಲಿ ಗಾಜಿನ ಗೋಲಿಗೆ ಗೋಟಿ ಎಂಬ ಹೆಸರಿದೆ.

ಗೋಸ್‌ : ದಕ್ಷಿಣ ಕನ್ನಡದ ಬುಗುರಿ ಆಟದಲ್ಲಿ ನೆಲದಲ್ಲಿ ತಿರುಗುತ್ತಿರುವ ಬುಗುರಿಯನ್ನು ದಾರದ ಸಹಾಯದಿಂದ ಮೇಲೆತ್ತಿ ಹಿಡಿಯುವುದು. ತಿರುಗುತ್ತಿರುವ ಬುಗುರಿಯನ್ನು ಆಟಗಾರರು ಹಗ್ಗದಿಂದ ಎತ್ತಿ ಹಿಡಿಯುವಾಗ ‘ಗೋಸ್‌’ ಎಂದು ಉಚ್ಚರಿಸುವುದು ನಿಯಮ.

ಗೋಸುತ್ತೆ ಒಂದು : ಉತ್ತರ ಕನ್ನಡದ ಹರಳಿನಾಟದಲ್ಲಿ ಆಟದ ನಡುವೆ ಹೇಳಬೇಕಾದ ಮಾತು.

ಗೋಳ್ಯಾ : ಉತ್ತರ ಕನ್ನಡದ ಸೋಡ್ಯಾ ಆಟದಲ್ಲಿ ಬಳಕೆಯಾಗುವ ಪದ.

ಚಂದ್ರಾಣಿ : ಹುಳಿಯಾರು ಪರಿಸರದಲ್ಲಿ ನೀಲಿಬಣ್ಣದ ಗೋಲಿಗೆ ಕರೆಯುವ ಹೆಸರು.

ಚಂಯ್ಕಾ : ಉತ್ತರ ಕನ್ನಡದ ಚಟ್ಕಾಮುಟ್ಕಾ ಆಟದಲ್ಲಿ ಆಟದ ನಡುವೆ ಬಳಕೆಯಾಗುವ ಉಚ್ಚಾರ.

ಚಕ್ಕ : ಹುಳಿಯಾರು ಪರಿಸರದಲ್ಲಿ ಆಟಕ್ಕಾಗಿ ಬಳಸುವ ತೇಯ್ದ ಹುಣಸೇ ಬೀಜ.

ಚಕ್ಕ : ಬಿಜಾಪುರ ಪರಿಸರದ ಚೌಕಮಣಿ, ಚಕ್ಕಾರ ಆಟದಲ್ಲಿ ನಾಲ್ಕು ಹುಣಿಸೇ ಬೀಜಗಳು ಬಿಳೇಬಾಗ ಮೇಲ್ಮುಖವಾಗಿ ಬಿದ್ದರೆ ಚಕ್ಕ ಎನ್ನುತ್ತಾರೆ ನಾಲ್ಕು ಎಂದರ್ಥ.

ಚಕ್ಕಾ : ಬಾಗಲಕೋಟೆ ಪರಿಸರದ ಚಕ್ಕಾ ಆಟದಲ್ಲಿ ನಾಲ್ಕು ಎಣಿಸಲು ಬಳಸುವ ಪದ.

ಚಕ್ಕಾರ : ಬಿಜಾಪುರ ಪರಿಸರದಲ್ಲಿ ಚೌಕಮಣಿ ಆಟದಲ್ಲಿ ಬಳಕೆಯಾಗುವ ತೇಯ್ದಿರುವ ಹುಣಿಸೆ ಬೀಜಗಳು.

ಚಕ್ಕಾರ ಕಟ್ಟೆ : ಬಿಜಾಪುರ ಪರಿಸರದಲ್ಲಿ ಆಡುವ ಚೌಕಮಣಿ ಆಟದ ಅಂಕಣ.

ಚಕ್ರಪಡಿ : ಉತ್ತರ ಕನ್ನಡದ ಚಟ್ಕಾಮುಟ್ಕಾ ಆಟದಲ್ಲಿ ಕುಳಿತುಕೊಳ್ಳುವ ರೀತಿ.

ಚವೆ : ಉತ್ತರ ಕನ್ನಡದ ಜಿಬ್ಬೆ ಆಟದಲ್ಲಿ ಬಳಕೆಯಾಗುವ ವಸ್ತು.

ಚವರ : ಉತ್ತರ ಕನ್ನಡದ ಅತ್ರಂಬೆಗಾಣ್ನರಂಬೆ, ಚಟ್ಕಾಮುಟ್ಕಾ ಆಟದಲ್ಲಿ ಬಳಸುವ ಪದ.

ಚಾರ್ : ಬಿಜಾಪುರ ಪರಿಸರದ ಚೌಕಮಣಿ, ಚಕ್ಕಾರ ಆಟದಲ್ಲಿ ನಾಲ್ಕು ಹುಣಿಸೇ ಬೀಜಗಳು ಬಿಳೇಭಾಗ ಮೇಲ್ಮುಖವಾಗಿ ಬಿದ್ದರೆ ಚಾರ್ ಎನ್ನುತ್ತಾರೆ ನಾಲ್ಕು ಎಂದರ್ಥ.

ಚಾರ್ : ದಕ್ಷಿಣ ಕನ್ನಡದ ಪಲ್ಲಿ ಆಟದಲ್ಲಿ ಆಟದ ಒಂದು ಹಂತದಲ್ಲಿ ಎಣಿಕೆ ಮಾಡುವ ಕ್ರಮವಿದೆ ಅಲ್ಲಿ ನಾಲ್ಕು ಎನ್ನಲು ಚಾರ್ ಎನ್ನುವ ಶಬ್ದ ಉಚ್ಚರಿಸಲಾಗುತ್ತದೆ.

ಚಿಕ್ಕನಡ್ಕಯ್ದು : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಹರಳು ಮೇಲೆಸೆದು ಕೈಗೆ ತೆಗದುಕೊಳ್ಳುವ ಮೊದಲು ಹೇಳಬೇಕಾದ ಮಾತು.

ಚಿತ್‌ : ಬೀದರ್ ಪರಿಸರದ ಕವಡಿ ಆಟದಲ್ಲಿ ಮೇಲ್ಮುಖವಾಗಿ ಬಿದ್ದ ಕವಡೆಯನ್ನು ಚಿತ್‌ ಎನ್ನುವರು.

ಚಿತ್ತ್‌ : ಉತ್ತರ ಕರ್ನಾಟಕದ ಚಕ್ಕರ್, ಚೌಕಾಬಾರ ಆಟದಲ್ಲಿ ಹುಣಿಸೇ ಬೀಜಗಳನ್ನು ಬಿಟ್ಟಾಗ ಬಿಳೀ ಮೈ ಮೇಲ್ಮುಖವಾಗಿ ಬಿದ್ದರೆ ಚಿತ್ತ್ ಎನ್ನುತ್ತಾರೆ.

ಚಿತ್ತ : ಬಿಜಾಪುರ ಪರಿಸರದಲ್ಲಿ ಹುಣೆಸೇ ಬೀಜಗಳನ್ನು ಬಳಸಿ ಆಡುವ ಆಟದಲ್ಲಿ ತೇಯ್ದಿರುವ ಹುಣಿಸೆ ಬೀಜದ ಬಿಳೀಭಾಗ ಮೇಲ್ಮುಖವಾಗಿ ಬಿದ್ದರೆ ಚಿತ್ತ ಎನ್ನುತ್ತಾರೆ.

ಚಿತ್ತು ಪಟ್ಟು : ಬೀದರ್ ಪರಿಸರದ ಗುಂಪು ಆಟಗಳಲ್ಲಿ ಆಟ ಪ್ರಾರಂಭಕ್ಕೆ ಮುಂಚೆ ಆಟವನ್ನು ಯಾರು ಪ್ರಾರಂಭಿಸಬೇಕೆನ್ನುವುದನ್ನು ನಿರ್ಣಯಿಸಲು ಎಲ್ಲರೂ ಕೈ ಕೈ ಹಿಡಿದು ಒಮ್ಮೆಲೆ ಬಿಟ್ಟು ಎಡಗೈ ಅಂಗೈ ಮೇಲೆ ಬಲಗೈ ಅಂಗೈಯನ್ನು ಚಪ್ಪಾಳೆಯಂತೆ ಹೊಡೆಯುತ್ತಾರೆ ಹೀಗೆ ಹೊಡೆಯುವಾಗ ಕೆಲವರು ಹಸ್ತ ಮೇಲ್ಮುಖವಾಗಿ ಕೆಲವರು ಚರ್ಮಭಾಗ ಮೇಲ್ಮುಖವಾಗಿ ಹಾಕುತ್ತಾರೆ. ಇದರಿಂದ ಹೆಚ್ಚು ಜನರು ಯಾವುದು ಹಾಕಿರುತ್ತಾರೋ ಅವರು ಗೆದ್ದಂತೆ ಇದನ್ನು ಒಬ್ಬರು ಉಳಿಯುವವರೆಗೂ ಮುಂದುವರಿಸುತ್ತಾರೆ. ಇದನ್ನೆ ಚಿತ್ತು ಪಟ್ಟು ಎನ್ನುತ್ತಾರೆ.

ಚಿನ್ನಗೊಬ್ಬಳ್ಳಿನನ್ನಾಟ : ಕೊಳ್ಳೆಗಾಲ, ಯಳಂದೂರು ಪರಿಸರದ ಕೆಲವು ಆಟಗಳು (ಅಳಗುಳಿ ಮನೆ, ಪಚ್ಚಿ ಆಟ) ಮೊದಲು ಆಟ ಪ್ರಾರಂಭಿಸಬೇಕಾದವರನ್ನು ನಿರ್ಧರಿಸಲು ಮೊದಲು ಯಾರು ಚಿನ್ನಗೊಬ್ಬಳಿನನ್ನಾಟ ಎನ್ನುತ್ತಾರೋ ಅವರು ಆಟ ಪ್ರಾರಂಭಿಸುವ ಅವಕಾಶ ಪಡೆಯುತ್ತಾರೆ.

ಚಿಪುಳು ಚಿಪುಳು : ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರಿಗೆ ಆಟವಾಡಿಸುವ ಹಿರಿಯರೋ, ಆಟದ ಕೇಂದ್ರವಾಗಿರುವವರು ಒಂದೊಂದೇ ಕೈಮುಟ್ಟಿ ಅನುಕ್ರಮಣಿಕೆಯಲ್ಲಿ ಮೊದಲಿಗೆ ಬಳಸುವ ಪದ.

ಚಿಪ್ಪೆ : ಉತ್ತರ ಕನ್ನಡದ ಜಿಬ್ಬಿ ಆಟದಲ್ಲಿ ಬಳಕೆಯಾಗುವ ವಸ್ತು.

ಚಿಬ್ಬಿ : ಸಮುದ್ರದ ಚಿಪ್ಪುಗಳನ್ನು ಬಳಸಿ ಉತ್ತರ ಕನ್ನಡದಲ್ಲಿ ಆಡುವ ಒಂದು ಆಟದಲ್ಲಿ ಚಿಪ್ಪುಗಳನ್ನು ಚಿಬ್ಬಿ ಎನ್ನುತ್ತಾರೆ.

ಚೀಕಲ : ಬಿಜಾಪುರ ಪರಿಸರದ ಚಿಣ್ಣಿ ದಾಂಡಿನ ಆಟದಲ್ಲಿ ಚಿಣ್ಣಿ ಎಗರಿಸುವುದನ್ನು ಸೂಚಿಸಲು ಜೀಕು ಎನ್ನುವ ಕ್ರಿಯಾ ಪದ ಬಳಸುತ್ತಾರೆ. ಅದರ ಸಾಧಿತ ರೂಪ.

ಚುಟಕಿ : ಉತ್ತರ ಕರ್ನಾಟಕದ  ಹರಳಿನಾಟದಲ್ಲಿ ಬಳಕೆಯಾಗುವ ವಸ್ತು.

ಚುಟ್ಕಾ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಆಟದ ನಡುವೆ ಎಣಿಸುವ ಕ್ರಮದಲ್ಲಿ ಬಳಕೆಯಾಗುವ  ಒಂದು ಪದ.

ಚುಟ್ಟಾ : ಮೈಸೂರು ನಗರದ ಗೋಲಿ ಆಟದಲ್ಲಿ ಗೋಲಿಯನ್ನು ಹೆಬ್ಬೆರಳಿನಿಂದ ಹೊಡೆಯುವುದನ್ನು ಚುಟ್ಟಾ ಎನ್ನುತ್ತಾರೆ.

ಚುರ್ಕಾ : ಉತ್ತರ ಕನ್ನಡದ ಚಟ್ಕಾ ಮುಟ್ಕಾ ಆಟದಲ್ಲಿ ಬಳಕೆಯಾಗುವ  ಪದ.

ಚೆನ್ನೆಕಾಳು : ದಕ್ಷಿಣ ಕನ್ನಡದ ಚೆನ್ನೆಮಣೆ ಆಟಕ್ಕೆ ಬಳಸುವ ಕಾಳು.

ಚೇಳು : ರಾಮನಗರ, ಕನಕಪುರ ಪರಿಸರದಲ್ಲಿ ಆಡುವ ಹಗಲು ರಾತ್ರಿ ಆಟದಲ್ಲಿ ಗುಂಪಿನ ಮಕ್ಕಳೆಲ್ಲಾ ಹಗಲು ಎಂದಾಗ ಸುತ್ತುತ್ತಿರುತ್ತಾರೆ ರಾತ್ರಿ ಎಂದಾಗ ನಿಶ್ಯಬ್ಧವಾಗಿ ನಿಲ್ಲುತ್ತಾರೆ. ಹಾಗೆ ನಿಲ್ಲುವುದನ್ನು ಚೇಳು ಎನ್ನುತ್ತಾರೆ.

ಚೆನ್ನೆ ಬೀಜ : ಮಲೆನಾಡಿನ ಪರಿಸರದ ಒಂದು ಗಿಡದ ಬೀಜ ಚೆನ್ನೆ ಆಟದಲ್ಲಿ ಬಳಸುತ್ತಾರೆ.

ಚೋಟ : ಮೈಸೂರು ಪರಿಸರದ ಗೋಲಿ ಆಟದಲ್ಲಿ ಅಳತೆ ಹಾಕುವಾಗ ತೋರು ಬೆರಳು ಮತ್ತು ಹೆಬ್ಬೆರಳಿನ ಅಂತರದ ಆಳತೆ.

ಚೋರ್ ಪಾಸ್ : ಉತ್ತರ ಕರ್ನಾಟಕದ ಆಟಗಳಲ್ಲಿ ಮೊದಲು ಯಾರು ಆಟ ಪ್ರಾರಂಭಿಸಬೇಕು ಅಥವಾ ಕಡೆಯಲ್ಲಿ ಆಡಬೇಕಾದವರು ಯಾರು ಎಂಬುದನ್ನು ನಿರ್ಧರಿಸುವ ಸಲುವಾಗಿ ಅನುಸರಿಸುವ ವಿಧಾನ, ಚೋರ್ ಆದವನು ಹಿಡಿಯಬೇಕು ಪಾಸ್ ಆದವರು ಮೊದಲ ಹಂತದಲ್ಲಿ ಗೆದ್ದಂತೆ ಅವರು ಓಡಬೇಕಾಗುತ್ತದೆ.

ಚೋರಿ : ಕಣ್ಣಾಮುಚ್ಚಾಲೆ ಆಟದಲ್ಲಿ ಮೊದಲ ಹಂತದಲ್ಲಿ ಸೋತು ಇತರರನ್ನು ಹಿಡಿಯಲು ನಿಯೋಜಿತವಾಗಿರುವ ಹುಡುಗಿ ಅಥವಾ ಹುಡುಗ.

ಚೌಕಾಮೈಸೂರು ಪರಿಸರದ  ಹುಣಸೆ ಬೇಳೆಗಳನ್ನು ಬಳಸಿ ಆಡುವ ಆಟಗಳಲ್ಲಿ ನಾಲ್ಕು ಕಾಳುಗಳು ಬಿಳಿಮುಖ ಮೇಲ್ಮುಖವಾಗಿ ಬಿದ್ದರೆ ಹೇಳುವ ಮಾತು. ನಾಲ್ಕು ಸಂಖ್ಯೆಯನ್ನು ಸೂಚಿಸುತ್ತದೆ.

ಚೌಪಟ್ಟೆ : ಯಾದಗೀರ ಉತ್ತರ ಕರ್ನಾಟಕದ  ಬಹುಭಾಗಳಲ್ಲಿ ಆಡುವ ಹುಲಿ ಮನೆ ಆಟದ ಅಂಕಣದ ಒಂದು ಭಾಗ.

ಚೌರಿ : ಉತ್ತರ ಕನ್ನಡದ ಚಾವಂಗ ಆಟದಲ್ಲಿ ತೆಯ್ದ ನಾಲ್ಕು ಹುಣಸೆ ಬೀಜಗಳು ಬಿಳಿಯಭಾಗ ಮೇಲ್ಮುಖವಾಗಿ ಬಿದ್ದರೆ ಚೌರಿ ಎನ್ನುತ್ತಾರೆ.

ಛಕ್ಕ : ಬೀದರ್ ಪರಿಸರದ ಕವಡಿ ಆಟದಲ್ಲಿ ಐದು ಕವಡೆ ಬಳಸುತ್ತಾರೆ. ಐದು ಕವಡೆ ಕೆಳಮುಖವಾಗಿ ಬಿದ್ದರೆ ಛಕ್ಕ ಎನ್ನುವರು.