ಹುಂಜಾಹ್ಯಾಟೆ ಆಟ : ಮಂಡ್ಯ ಪರಿಸರದಲ್ಲಿ ಹುಡುಗರು ಆಡುವ ಆಟ.

ಹಗಲುರಾತ್ರಿ : ರಾಮನಗರ, ಕನಕಪುರ ಪರಿಸರದಲ್ಲಿ ಮಕ್ಕಳು ಆಡುವ ಆಟದ ಒಂದು ಬಗೆ. ಸುತ್ತಾಟದ ಒಂದು ವಿಧ. ಹಗಲು ಎಂದಾಗ ಸುತ್ತುತ್ತಿರುತ್ತಾರೆ. ರಾತ್ರಿ ಎಂದರೆ ನಿಶ್ಚಲವಾಗಿ ನಿಲ್ಲಬೇಕು.

ಹತ್ತೊಂಬಳ್ಳಾಟ : ಬೆಳಗಾವಿ ಪರಿಸರದ ಒಂದು ಹೊರಾಂಗಣ ಆಟ.

ಹಣಪೇ ಆಟ : ಶಿಕಾರಿಪುರ, ಸಾಗರ ಪರಿಸರದ ಕುಂಟಾಟದ ಒಂದು ಬಗೆ.

ಹಳಮನೆ ಗುಳಿ : ಮಂಡ್ಯ ಪರಿಸರದಲ್ಲಿ ಹಿರಿಯರಾಡುವ ಆಟ ಇತರೆಡೆ ಚೆನ್ನೆಮಣೆ ಆಟ ಎನ್ನುತ್ತಾರೆ.

ಹಳ್ಮಣೆ : ಹಳೇ ಮೈಸೂರು ಪ್ರದೇಶದಲ್ಲಿ ಹುಣಸೆ ಬೀಜಗಳನ್ನು ಬಳಸಿ ಗುಳಿ ಇರುವ ಮಣೆಗಳಲ್ಲಿ ಗುಳಿ ತುಂಬುವ ಒಂದು ಬಗೆ.

ಹಳ್ಳಾಟ : ಬಳ್ಳಾರಿ ಪ್ರದೇಶದಲ್ಲಿ  ಹೆಚ್ಚಾಗಿ  ಹೆಣ್ಣು ಮಕ್ಕಳು ಆಡುವ ಆಟ. ಇತರೆ ಕಡೆ ಆಣೆಕಲ್ಲಾಟ ಎಂದು ಕರೆಯುವ ಆಟದ ಮಾದರಿಯ ಆಟ.

ಹಾಣೆ ಆಟ : ಉತ್ತರ ಕನ್ನಡದ ಒಂದು ಆಟ ಇತರೆಡೆ ಚಿಣ್ಣಿ ಕೋಲು, ಗಿಲ್ಲಿದಾಂಡು ಹೆಸರುಗಳಿಂದ ಕರೆಯುವ ಆಟ.

ಹುಲಿಕಟ್ಟೋ ಆಟ : ಕೊಳ್ಳೆಗಾಲ ಪರಿಸರದಲ್ಲಿ ಕಲ್ಲುಗಳನ್ನು ಬಳಸಿ ಆಡುವ ಒಳಾಂಗಣ ಆಟದ ಒಂದು ಬಗೆ.

ಹುಲಿಕುರಿ ಆಟ : ಕರ್ನಾಟಕದ ಬಹುಪಾಲು ಭಾಗಗಳಲ್ಲಿ ಚದುರಂಗದ ಮಾದರಿಯ ನಕ್ಷೆ ಬರೆದು ಸಣ್ಣ ಕಲ್ಲುಗಳನ್ನು ಕಾಯಿಗಳಾಗಿ ಬಳಸಿ ಆಡುವ ಒಂದು ಒಳಾಂಗಣ ಆಟ.

ಹುಲಿದನ : ಕರಾವಳಿ ಕರ್ನಾಟಕದ ಹಿಡಿಯುವ ಆಟದ ಒಂದು ಬಗೆ.

ಹುಲಿಮನೆ ಆಟ : ಯಾದಗೀರ್ ಪ್ರದೇಶದಲ್ಲಿ ಪುರುಷರು ಹೆಚ್ಚಾಗಿ ಆಡುವ ಆಟ ಸಣ್ಣ ಕಲ್ಲುಗಳನ್ನು ಬಳಸಿ ವಿಶಿಷ್ಟವಾದ ಗೆರೆಗಳನ್ನು ಬರೆದು ಅವುಗಳ ಮೇಲೆ ನಡೆಸುವ ನಿಯಮ ಸಹಿತವಾಗಿರುವ ಆಟ.

ಹುಲಿಮೇಕೆ : ಕೋಲಾರ ಪರಿಸರದಲ್ಲಿ ಆಡುವ ಕಾಯಿ ನಡೆಸುವ ಒಂದು ಆಟ, ಇತರೆಡೆ ಹುಲಿ ಮನೆ, ಹುಲಿಕುರಿ, ಹುಲಿ ಕಟ್ಟೋ ಆಟ ಮುಂತಾದ ಹೆಸರುಗಳಿಂದ ಪರಿಚಿತ ಆಟ.
ಆಟದ ಪದ, ನುಡಿಕಟ್ಟುಗಳು

 

ಅಂಕಣದಾಟು : ಉತ್ತರ ಕನ್ನಡದ ಗುಲುಗುಲುಗುಲಕ್‌ ಆಟದಲ್ಲಿ ಬಳಸುವ ಪದ.

ಅಂಡಿ : ಬಳ್ಳಾರಿ ಪ್ರದೇಶದಲ್ಲಿ ಗೋಲಿ ಆಟದಲ್ಲಿ ನಿರ್ದಿಷ್ಟ ಅಂಕಣಕ್ಕೆ ಒಂದು ಜಾಗದಿಂದ ಪ್ರತಿಸ್ಪರ್ಧಿಗಳು ಗೋಲಿ ಬಿಟ್ಟಾಗ, ಅಂಕಣದಿಂದ ತುಂಬಾ ದೂರ ಉಳಿಯುವ ಗೋಲಿ.

ಅಂತರ್ ಪೆಂಗ : ಹೊಸದುರ್ಗ ಪರಿಸರದ ಬುಗರಿ ಆಟದಲ್ಲಿ ಬುಗರಿಯನ್ನು ಗಾಳಿಯಲ್ಲಿ ತೂರಿ ತಿರುಗಿಸುತ್ತಾ ನೆಲಕ್ಕೆ ತಾಗಿಸದೆ ಕೈಯಲ್ಲಿ ತೆಗೆದುಕೊಳ್ಳುವುದು.

ಅಂದರ್ : ಮೈಸೂರು ಪ್ರದೇಶದ ಮೀರಿ ಗೋಲಿ ಆಟದಲ್ಲಿ ಬಳಕೆಯಾಗುವ ಪದ . ಗೋಲಿ ಆಟದ ಅಂಕಣದ ಒಳ ಆವರಣ.

ಅಂಬಾರಿ : ಮೈಸೂರು ಪರಿಸರದ ಗುಳಿತುಂಬುವ ಗೋಲಿ ಆಟದಲ್ಲಿ ಒಂಟಿ ಕಾಲಿನಲಿ ನಿಂತು ಮಡಚಿದ ಕಾಲಿನಮೇಲೆ ಕೈಯಿಟ್ಟು ಗೋಲಿ ಹೊಡೆಯುವುದು.

ಅಂಬಿಗರೆಣ್ಣು : ಮೈಸೂರು ಪರಿಸರದ ಗುಳಿತುಂಬುವ ಗೋಲಿ ಆಟದಲ್ಲಿ  ಒಂದೊಂದು ಏಟಿಗೂ ಒಂದೊಂದು ಉಚ್ಚಾರಗಳಿರುತ್ತವೆ ಅದರಲ್ಲಿ ಒಂದು.

ಅಕ್ಕಮ್ಮಜ್ಜಾರು : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಒಂದು ಪದ.

ಅಚ್ ಗಂಧ : ಉತ್ತರ ಕನ್ನಡದ ಅಕ್ಕಕ್ಕಚೆಂಡು ಎಂಬ ಹರಳಿನಾಟದಲ್ಲಿ ಹದಿನೆಂಟು ಹಂತಗಳ ಒಂದು ಹಂತದಲ್ಲಿ ಉಚ್ಚರಿಸುವ ಪದ.

ಅಚ್ಚು : ಉತ್ತರ ಕನ್ನಡದ ಹರಳಿನಾಟದ ಒಂದು ಹಂತದಲ್ಲಿ ಕಲ್ಲನ್ನು ಮೇಲೆಸೆದು ಹಿಡಿಯುವಾಗ ಹೇಳುವ ಪದ.

ಅಚ್ಚು : ಸಿಂಧನೂರು, ರಾಯಚೂರು ಪರಿಸರದ ಕುಂಟಾಟದ ಒಂದು ಬಗೆಯಲ್ಲಿ ಆಡುವ ಬಿಲ್ಲೆ (ಬೋಕಿ) ಗೆರೆ ತಗುಲದೆ ಮನೆಯೊಳಗೆ ಸರಿಯಾಗಿ ಬಿದ್ದರೆ ಅಚ್ಚು ಎನ್ನುವರು.

ಅಜ್ಜಿ : ಕಣ್ಣಾ ಮುಚ್ಚಾಲೆ ಆಟದಲ್ಲಿ ಸಾಮಾನ್ಯವಾಗಿ ಆಟವನ್ನು ನಿಯಂತ್ರಿಸುವ ಹಿರಿಯ ವ್ಯಕ್ತಿ. ಕರ್ನಾಟಕದ ಎಲ್ಲಾ ಕಡೆ. ಈ ಪದವಿದೆ.

ಅಜ್ಜಿಮನೆ : ಉತ್ತರ ಕನ್ನಡದ ಕುಂಟಾಟದ ಬೆಟ್ಟೆ ಆಟದಲ್ಲಿ ಬಳಕೆಯಾಗುವ ಪದ.

ಅಜ್ಜಿಮನೆ : ಮಲೆನಾಡಿನ ಪರಿಸರದಲ್ಲಿ ಆಡುವ ಕುಂಟಾಬಿಲ್ಲೆ ಆಟದ ಅಂಕಣದಲ್ಲಿ ಒಂದು ಭಾಗ. ಇದರಲ್ಲಿ ಕುಂಟಾಟ ಆಡುವವರು ಕಾಲು ಬಿಡಬಹುದು. ಇತರೆ ಮನೆಗಳನ್ನು ಹಾರಿ ದಾಟಬೇಕು.

ಅಟ್ಟಲ್ ಬಿಟ್ಟಲ್ ಚಳ್ : ಉತ್ತರ ಕನ್ನಡದ ಸಾದುಗೋದು ಎಂಬ ಆಟದಲ್ಲಿ ಬಳಕೆ ಯಾಗುವ ಭಾಷಾರೂಪ.

ಅಡ್ಡಂ : ಬೀದರ್ ಪರಿಸರದ ಕವಡಿ ಆಟದಲ್ಲಿ ಒಂದು ಕವಡೆಯಿಂದ ಇನ್ನೊಂದು ಕವಡೆಗೆ ಹೊಡೆದು ಕವಡೆಯಿಂದ ಮತ್ತೊಂದು ಕವಡೆಗೆ ಹೊಡೆಯುವುದಕ್ಕೆ ಅಡ್ಡಂ ಎನ್ನುತ್ತರೆ.

ಅಣ್ಣಿ : ಮೈಸೂರು ನಗರದ ವಟ್ಟಗೋಲಿ ಆಟದಲ್ಲಿ ವೃತ್ತದೊಳಗಿರುವ ಗೋಲಿಯನ್ನು ಆಟಗಾರ ಗೋಲಿಯಿಂದ ಹೊಡೆದಾಗ ಅದು ಹೊರಬಂದರೆ ಅಣ್ಣಿ ಎನ್ನುತ್ತಾರೆ.

ಅಣ್ಣೈಲತ್ಗೆ : ಉತ್ತರ ಕನ್ನಡದ ಹರಳಿನಾಟದಲ್ಲಿ ಮೇಲೆಸೆದ ಹರಳು ಕೆಳಗೆ ಬೀಳುವ ಮೊದಲೇ ಹೇಳಬೇಕಾದ ಶಬ್ದ ಮಾಲೆಯಲ್ಲಿ ಬಳಕೆಯಾಗುವ ಒಂದು ಶಬ್ದ.

ಅಣ್ಣೈಲರ : ಉತ್ತರ ಕನ್ನಡದ ಹರಳಿನಾಟದಲ್ಲಿ ಮೇಲೆಸೆದ ಹರಳು ಕೆಳಗೆ ಬೀಳುವ ಮೊದಲೇ ಹೇಳಬೇಕಾದ ಶಬ್ದ ಮಾಲೆಯಲ್ಲಿ ಬಳಕೆಯಾಗುವ ಒಂದು ಶಬ್ದ.

ಅರ್ಧಗಂಧ : ಉತ್ತರ ಕನ್ನಡದ ಹರಳಿನಾಟದ ಒಂದು ಹಂತದಲ್ಲಿ ಬಳಸುವ ಪದ.

ಅಪ್ಪನ್ತಗ್ಗು : ಮಧ್ಯಕರ್ನಾಟಕದ ಉಪ್ಪಾಟದಲ್ಲಿ ಆಟದ ಅಂಕಣದಲ್ಲಿ ಒಂದು ಭಾಗದ ಹೆಸರು.

ಅಪ್ಪಪ್ರಾಣಿ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಅಪ್ಪಾಟ್‌ : ಟಿ. ನರಸೀಪುರ ಪ್ರದೇಶದ ಬುಗುರಿ ಆಟದಲ್ಲಿ ಬುಗುರಿಯನ್ನು ನೆಲದಲ್ಲಿ ತಿರುಗಿಸಿ ದಾರಸುತ್ತಿ ಮೇಲೆತ್ತಿ ಕೈಯಲ್ಲಿ ಹಿಡಿಯುವುದು.

ಅಪ್ಪೀಟ್‌ : ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಪರಿಸರದ ಬುಗುರಿ ಆಟದಲ್ಲಿ ಬುಗುರಿಯನ್ನು ನೆಲದಲ್ಲಿ ತಿರುಗಿಸಿ ದಾರಸುತ್ತಿ ಮೇಲೆತ್ತಿ ಕೈಯಲ್ಲಿ ಹಿಡಿಯುವುದು.

ಅಬೇಸ್‌ : ದಕ್ಷಿಣ ಕನ್ನಡದ ಒಂದು ಬುಗುರಿಯಾಟದಲ್ಲಿ ಆಟಗಾರರು ಬುಗುರಿಯನ್ನು ನೆಲಕ್ಕೆ ಬಿಡುವಾಗ ಅಬೇಸ್‌ ಎಂದು ಹೇಳಿ ಬಿಡಬೇಕು.

ಅಬ್ಲಕ್‌ : ಬಳ್ಳಾರಿ ಪರಿಸರದ ಜೂಜಿನಾಟದಲ್ಲಿ ಬಳಕೆಯಾಗುವ ಒಂದು ಬಗೆಯ ಪಾರಿವಾಳ.

ಅಮಟೆ : ಕನಕಪುರ, ಮೈಸೂರು, ಮಂಡ್ಯ, ಭಾಗದಲ್ಲಿ ಕುಂಟೋಬಿಲ್ಲೆ ಆಟದಲ್ಲಿ ಕಣ್ಣು ಮುಚ್ಚಿ ಮನೆದಾಟುವಾಗ ದಾಟುತ್ತಿರುವವರು ಸರಿಯಾಗಿದೆಯಾ ಅಂದರೆ ಗೆರೆ ತುಳಿಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಎದುರಿನವರನ್ನು ಕೇಳುವಾಗ ಉಚ್ಚರಿಸುವ ಪದ.

ಅರಸ : ದಕ್ಷಿಣ ಕನ್ನಡದ ಅಪ್ಪದ ಆಟದಲ್ಲಿ ‘ಆರು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ.

ಅರಿಶಿನ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಅವ್ಲಕ್ಕಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಅವ್ವನ್ತಗ್ಗು : ಮಧ್ಯಕರ್ನಾಟಕದ ಉಪ್ಪಾಟದಲ್ಲಿ ಆಟದ ಅಂಕಣದ ಒಂದು ಭಾಗದ ಹೆಸರು.

ಅಳಿಯ : ಉತ್ತರ ಕನ್ನಡದ ಕುಂಟಾಟದ ಬೆಟ್ಟೆ ಆಟದ ನಕ್ಷೆಯಲ್ಲಿ ಒಂದು ಸ್ಥಳವನ್ನು ಗುರುತಿಸುವ ಪದ.

ಅಳುಕು : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ಆಟಕ್ಕೆ ಇಟ್ಟ ಗೋಲಿಗಳನ್ನು ಆಟಗಾರ ಹೊಡೆದಾಗ ಅವು ಚದುರುವುದನ್ನು ಅಳುಕು ಎನ್ನುತ್ತಾರೆ.

ಅಳುಕುಸು : ಬಳ್ಳಾರಿ ಪ್ರದೇಶದ ಹುಣಿಸೇ ಬೀಜಗಳನ್ನು ಬಳಸಿ ಆಡುವ ಆಟದಲ್ಲಿ ತೇಯ್ದು ಬೀಜಗಳನ್ನು ನೆಲಕ್ಕೆ ಬಿಟ್ಟು ಎರಡು ಬೀಜಗಳ ನಡುವೆ ಬೆರಳು ತೂರಿಸಿ ಗೆರೆ ಎಳೆಯುವ ವಿಧಾನವಿದೆ. ಇಲ್ಲಿ ಯಾವ ಬೀಜಕ್ಕೂ ಬೆರಳು ತಾಗಬಾರದು ಹೀಗೆ ಬೆರಳನ್ನು ಎರಡು ಬೀಜಗಳ ನಡುವೆ ತೂರಿಸುವ ಕ್ರಿಯೆಯನ್ನು ಅಳುಕುಸು ಎನ್ನುತ್ತಾರೆ.

ಅಳ್ಳು : ಮೈಸೂರು ಪರಿಸರದ ಅಳ್ಳುಮನೆಯಾಟ, ಅಳಗುಳಿ ಮನೆಯಾಟದಲ್ಲಿ ಗುಳಿಗೆ ತುಂಬಲು ಬಳಸುವ ಹುಣಿಸೇಬೀಜ, ಕವಡೆ ಇತ್ಯಾದಿ ಕಾಳುಗಳು.

ಅಚಾರಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಆಟ್ : ಬೀದರ ಪರಿಸರದ ಅಟ್ಟ ಚಮ್ಮದಾಟದಲ್ಲಿ ನಾಲ್ಕು ಹುಣಸೆ ಬೀಜಗಳು  ಕಪ್ಪು ಮೈ ಮೇಲ್ಮುಖವಾಗಿ ಬಿದ್ದರೆ ಆಟ್ ಎನ್ನುತ್ತಾರೆ. ಇದು ಎಂಟು ಸಂಖ್ಯೆಯನ್ನು ಸೂಚಿಸುತ್ತದೆ.

ಆಣಿ : ತುಮಕೂರಿನ ಹುಳಿಯಾರು ಪ್ರದೇಶದಲ್ಲಿ ಗೋಲಿ ಆಟದ ಸಂದರ್ಭದಲ್ಲಿ ಇತರೆ ಗೋಲಿಗಳನ್ನು ಹೊಡೆಯಲು ಬಳಸುವ ದಪ್ಪಗೋಲಿ.

ಆಣಿ : ದಕ್ಷಿಣ ಕನ್ನಡದಲ್ಲಿ ಬುಗುರಿಯ ಮೊಳೆ.

ಆನೆ : ಉತ್ತರ ಕರ್ನಾಟಕದ ಆನೆ ಆಟದಲ್ಲಿ ಬಳಕೆಯಾಗುವ ದೊಡ್ಡ ಕಲ್ಲು.

ಆರ್ ಪಾರ್ : ಮೈಸೂರು ಹಾಸನ, ಪರಿಸರದಲ್ಲಿ ತನ್ನಾರಿ ಬುಗುರಿ ಆಟದಲ್ಲಿ ಬುಗುರಿಯನ್ನು ಗೆರೆಯಿಂದ ಆಚೆ ದಾಟಿಸುವುದು.

ಆರೆಪಟ್ಗ : ಬಳ್ಳಾರಿಯ ಹಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಎಡಗೈನ ಮೊಳಕೈ ಮೇಲೆ ಚಿನ್ನಿಯನ್ನು ಇಟ್ಟು ದಾಂಡಿನಿಂದ ಹೊಡೆಯುವುದು.

ಆಲ್ :  ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ ಒಂದು ಪದ.

ಇಕ್ಕ : ದಕ್ಷಿಣ ಕನ್ನಡದ ಅಪ್ಪದ ಆಟದಲ್ಲಿ ‘ಎರಡು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ.

ಇಕ್ಕಳ್ಳು : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಹರಳೆತ್ತಿದ ಮನೆಯಲ್ಲಿ ಎರಡು ಹರಳು ಉಳಿದರೆ ಇಕ್ಕಳ್ಳು ಎನ್ನುತ್ತಾರೆ.

ಇಚ್ಚಿ : ಬಾಗಲಕೋಟೆ ಪ್ರದೇಶದ ಚಕ್ಕಾ ಆಟದಲ್ಲಿ ಬಳಕೆಯಾಗುವ ಸಂಖ್ಯಾವಾಚಿ.

ಇಟ್ಟುಗಂಬಾ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಸಂಖ್ಯಾವಾಚಿಗಳ ಜತೆ ಸೇರಿಬರುವ ಪದ.

ಇಡೀ ಗಂಧ : ಉತ್ತರ ಕನ್ನಡದ ಅಕ್ಕಕ್ಕಚೆಂಡು ಎಂಬ ಹರಳಿನಾಟದಲ್ಲಿ ಸರದಿಯಲ್ಲಿ ಬರು ಪ್ರಾಸ ಪದಗಳಲ್ಲಿ ಒಂದು.

ಇಬ್ಬ : ದಕ್ಷಿಣ ಕನ್ನಡದ ಐದು ಜನರಾಡುವ ಕಂಬದಾಟದಲ್ಲಿ ಹಿಡಿಯುವವರು ಯಾರು ಹಿಡಿಸಿಕೊಳ್ಳುವವರು ಯಾರು ಎಂಬುದನ್ನು ನಿರ್ಧರಿಸಲು ಜನರನ್ನು ಎಣಿಸುವ ವಿಧಾನದಲ್ಲಿ ಎರಡನೆಯವನಿಗೆ ಬಳಸುವ ಶಬ್ಧ.

ಉಟಾಸ್‌ : ಸಿಂಧನೂರು ಪರಿಸರದ ಗೋಲಿ ಆಟದಲ್ಲಿ ಆಟ ಆಡುವವನು ಸ್ವ ಇಚ್ಚೆಯಿಂದ ಆಟ ಬಿಟ್ಟು ಕೊಡುವುದು.

ಉಡುಪಿ : ಹೊಸದುರ್ಗ ಪರಿಸರದ ಗೋಲಿ ಆಟದಲ್ಲಿ ಗೋಲಿ ಇಡಲು ಬರೆಯುವ ವೃತ್ತಾಕಾರದ ಅಂಕಣ.

ಉತ್ತಿ ಮನೆ : ಮಧ್ಯಕರ್ನಾಟಕದ ಉಪ್ಪಾಟದ ಒಂದು ವಿಧಾನದಲ್ಲಿ ಅಂಕಣದ ಕೇಂದ್ರಭಾಗ.

ಉಫ್‌ : ಮಂಡ್ಯ, ಮೈಸೂರು ಪ್ರದೇಶದ ಕೆಲವು ಆಟಗಳಲ್ಲಿ ನಿಯಮಗಳನ್ನು ಆಕಸ್ಮಿಕವಾಗಿ ಆಟಗಾರನು ಮುರಿದಾಗ ಉಫ್‌ ಎಂದು ತಕ್ಷಣ ಹೇಳಿದರೆ ಅವರಿಗೆ ಜೀವದಾನ ಸಿಗುತ್ತದೆ. ಇಲ್ಲದಿದ್ದರೆ ಎದುರಾಳಿ ಮೊದಲು ಉಫ್‌ ಎಂದರೆ ಆಟ ಹೋಗುತ್ತದೆ.

ಉಫಿ : ಮೈಸೂರು ಪರಿಸರದ ಚಿಣ್ಣಿ ದಾಂಡು ಆಟದಲ್ಲಿ ಸ್ಕೋರ್ ಹೇಳುವಾಗ ಅಂದರೆ ಅದುವರೆಗಿನ ಸ್ಕೋರು ಹೇಳುವಾಗ ತಪ್ಪಾದರೆ ತಕ್ಷಣ ಉಫಿ ಎನ್ನಬೇಕು. ಇಲ್ಲದಿದ್ದರೆ ಗಳಿಸಿರುವ ಸ್ಕೋರನ್ನು ಕಳೆದುಕೊಳ್ಳಬೇಕು.

ಉಯಿರೆಲ್ಲಾ : ಉತ್ತರ ಕನ್ನಡದ ಕಣ್ಣೆ ಕಟ್ಟೆ ಕಾರೇ ಮುಳ್ಳೇ ಆಟದಲ್ಲಿ ಬಳಸುವ ಪದ.

ಊಬು : ಒಂದು ಕ್ರಿಯಾಪದ, ಉತ್ತರ ಕನ್ನಡದ ಹಂಗರಕನ ಕಾಳು ಬಳಸಿ ಆಡುವ ಆಟದಲ್ಲಿ ಊಬಿ ಕಾಳು ಹೆಕ್ಕಬೇಕು.

ಎಂಜಲು : ಉತ್ತರ ಕನ್ನಡದ ಕಣ್ಣೆ ಕಟ್ಟೆ ಕಾರೇ ಮುಳ್ಳೇ ಆಟದಲ್ಲಿ ಬಳಸುವ ಪದ.

ಎದಿ ಉಕ್ಕಾ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಹರಳನ್ನು ಎದೆಗೆ ಬಡಿದು ಬಿಟ್ಟು ಆಡುವುದು.

ಎತ್ತಿನ್ಕೊಂಬು : ಮೈಸೂರು ಪ್ರದೇಶದ ಕಾರೇ ಬಿರೇ ಗೋಲಿ ಆಟದಲ್ಲಿ ಆಟಗಾರ ಇನ್ನೊಂದು ಗೋಲಿಗೆ ಹೊಡೆಯುವಾಗ ಸರಣಿಯಲ್ಲಿ ಬಳಸುವ ಪದ.

ಎತ್ಕೊಂಡೋಡು : ಮೈಸೂರು ಪ್ರದೇಶದ ಕಾರೇ ಬಿರೇ ಗೋಲಿ ಆಟದಲ್ಲಿ ಆಟಗಾರ ಇನ್ನೊಂದು ಗೋಲಿಗೆ ಹೊಡೆಯುವಾಗ ಸರಣಿಯಲ್ಲಿ ಬಳಸುವ ಪದ.

ಎತ್ತೇಟು : ರಾಮನಗರ, ಕನಕಪುರ ಪರಿಸರದ ಮೀರಿ ಗೋಲಿ ಆಟದಲ್ಲಿ ಗೋಲಿಯನ್ನು ಮೇಲಿನಿಂದ ಹೊಡೆಯುವುದು.

ಎದುರಕೋಲು : ಸಿಂಧುನೂರು ಪರಿಸರದ ಚಿನ್ನಿಕೋಲು ಆಟದಲ್ಲಿ ಆಟಗಾರ ಚಿನ್ನಿಯನ್ನು ಹೊಡೆದ ಮೇಲೆ ಎದುರಿನವರು ಭುಜಕ್ಕೆ ಎಸೆಯುತ್ತಾರೆ ಆಟಗಾರ ಕೋಲು ಅಡ್ಡ ಇಟ್ಟು ತಡೆಯುವುದನ್ನು ಎದುರ ಕೋಲು ಎನ್ನುತ್ತಾರೆ.

ಎದೆನಿಕ್ಕಕ್ಕ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಎಬ್ಬ : ಮೈಸೂರು ಪ್ರದೇಶದ ಗೋಲಿ ಆಟದ ಒಂದು ಹಂತದಲ್ಲಿ ಹೆಬ್ಬೆರಳಿನಿಂದ ಮಾತ್ರ ಗೋಲಿ ಹೊಡೆಯಬೇಕಾಗುತ್ತದೆ ಆಗ ಮಾತ್ರ ಬಳಕೆಯಾಗುವ ಪದ.

ಎಮ್ಮ ಈಯು : ಮೈಸೂರು, ಕೊಳ್ಳೇಗಾಲ ಪರಿಸರದ ಅಳಿಗುಳಿ ಮನೆಯಾಟದಲ್ಲಿ ಗುಳಿಯಲ್ಲಿ ಕಾಯಿ ನಾಲ್ಕಾಗಿ ವಿರೋಧಿಗಳಿಗೆ ಕಾಯಿ ಸಿಗುವುದು.

ಎಮ್ಮೆ ಈಯ್ತು : ಮೈಸೂರು ಪ್ರದೇಶದ ಹಳ್ಳುಮಣೆ ಆಟದಲ್ಲಿ ಗುಳಿಯಲ್ಲಿ ಕಾಳು ಉಳಿದುಕೊಂಡರೆ ಬಳಕೆಯಾಗುವ ಪದ.

ಏಕ : ಬಿಜಾಪುರ ಪರಿಸರದ ಚಿಣ್ಣಿ ಕೋಲು ಆಟದಲ್ಲಿ ಚಿಣ್ಣಿಗೆ ಹೊಡೆಯುವ ಮೊದಲ ಏಟು, ಇದನ್ನು ಚಿಣ್ಣಿಯನ್ನು ಕೈ ಮೇಲೆ ಇಟ್ಟು ಹಾರಿಸಿ ಹೊಡೆಯಬೇಕು.

ಏಕೇಕ್‌ : ಮೈಸೂರು ಪ್ರಾಂತ್ಯದ ಟಿ. ನರಸೀಪುರ ಪ್ರದೇಶದ ಗಿಲ್ಲಿ ದಾಂಡು ಆಟದಲ್ಲಿ ‘ಗಿಲ್ಲಿ’ಯನ್ನು ಎತ್ತಿ ಎರಡು ಬಾರಿ ಹೊಡೆಯುವುದು.

ಏಟಿ : ಹೊಸದುರ್ಗ ಪರಿಸರದ ಗೋಲಿ ಆಟದಲ್ಲಿ ಬೆರಳಿನಲ್ಲಿ ಗೋಲಿಗುರಿ ಇಟ್ಟು ಹೊಡೆಯುವುದು.

ಏಟಿ : ಬಳ್ಳಾರಿಯ ಹಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಬಲಗೈನ ಮುಷ್ಟಿಯಲ್ಲಿ ದಾಂಡು ಹಿಡಿದು ಮೇಲ್‌ ತುದಿಯ ನಾಲ್ಕು ಇಂಚು ಅಂತರದಲ್ಲಿ ಚಿನ್ನಿ ಇಟ್ಟು ಹಾರಿಸಿ ದಾಂಡಿನ ಕೆಳ ತುದಿಯಿಂದ ಹೊಡೆಯುವುದು.

ಏಟು : ಬಳ್ಳಾರಿ ಪ್ರದೇಶದ ಹಂಪಿ ಪರಿಸರದಲ್ಲಿ ಗುಂಡು ಎಸೆಯುವ ಸ್ಪರ್ಧೆಯಲ್ಲಿ ಒಂದೊಂದು ಎಸೆತಕ್ಕೂ ಏಟು ಎನ್ನುತ್ತಾರೆ.

ಏಳಂ : ದಕ್ಷಿಣ ಕನ್ನಡದ ಅಪ್ಪದ ಆಟದಲ್ಲಿ ‘ಏಳು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ.

ಐದ : ದಕ್ಷಿಣ ಕನ್ನಡದ ಅಪ್ಪದ ಆಟದಲ್ಲಿ ‘ಐದು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ.

ಐದೇಗಿಲಿಗಿಲಿ : ಬಳ್ಳಾರಿ ಪಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಎಡಗೈನಲ್ಲಿ ಇರುವ ಚಿನ್ನಿಯನ್ನು ದಾಂಡಿನಿಂದ ಎತ್ತಿ ತಿರುಗಿಸಿ ಬೀಸಿ ಹೊಡೆಯುವುದು.

ಐಸಾ : ದಕ್ಷಿಣ ಕನ್ನಡದ ಕಂಬದಾಟದಲ್ಲಿ ಮೂಲೆಯಿಂದ ಮೂಲೆಗೆ ಚಲಿಸುತ್ತಿರುವ ಆಟಗಾರರು ಹೇಳುತ್ತಾ ಸಾಗಬೇಕಾದ ಪದ.

ಒಂಟಿ : ಮೈಸೂರು ಪ್ರದೇಶದಲ್ಲಿ ತೇಯ್ದ ಹುಣಿಸೇ ಬೀಜಗಳನ್ನು ಬಳಸಿ ಆಡುವ ಪಿಚ್ಚಿ ಆಟದಲ್ಲಿ ಬೆಸ ಸಂಖ್ಯೆಯನ್ನು ಸೂಚಿಸುವ ಪದ.

ಒಂದ ಕಯ್ಬೀಡ : ಉತ್ತರ ಕನ್ನಡದ ಗೋಧಿಬೀಸೋ ತೊಮ್ಮೆ ಆಟದಲ್ಲಿ ಬಳಕೆಯಾಗುವ ಮಾತು.

ಒಂದರಗಲ್ಲು : ಶಿಕಾರಿಪುರ ಪರಿಸರದ ಎತ್ತಗಲ್ಲು ಆಟದಲ್ಲಿ ಮೊದಲ ಹಂತದಲ್ಲಿ ಆಟಗಾರರು ಈ ಮಾತನ್ನು ಹೇಳಿ ಕಲ್ಲು ಎತ್ತುವರು.

ಒಂದಿಲಿಗ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಒಕಟಿ : ದಕ್ಷಿಣ ಕನ್ನಡದ ಪಲ್ಲಿ ಆಟದಲ್ಲಿ ಆಟದ ಒಂದು ಹಂತದಲ್ಲಿ ಎಣಿಕೆ ಮಾಡುವ ಕ್ರಮವಿದೆ ಅಲ್ಲಿ ಒಂದು ಎನ್ನಲು ಒಕಟಿ ಎನ್ನುವ ಶಬ್ಚ ಉಚ್ಚರಿಸಲಾಗುತ್ತದೆ.

ಒಕ್ಕ : ದಕ್ಷಿಣ ಕನ್ನಡದ ಅಪ್ಪದ ಆಟದಲ್ಲಿ ‘ಒಂದು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ.

ಒಟಿ : ಉತ್ತರ ಕರ್ನಾಟಕದ ಊಪುರಂಗಿ ಊರುರಂಗಿ ಆಟದಲ್ಲಿ ಬಳಕೆಯಾಗುವ ಪದ.

ಒಬ್ಬ : ದಕ್ಷಿಣ ಕನ್ನಡದ ಐದು ಜನರಾಡುವ ಕಂಬದಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ ಆಟಗಾರರ ಪ್ರಾರಂಭಿಕ ಸ್ಥಾನ ಅಂದರೆ ಹಿಡಿಯುವವರು ಯಾರು ಹಿಡಿಸಿಕೊಳ್ಳುವವರು ಯಾರು ಎಂಬುದನ್ನು ನಿರ್ಧರಿಸಲು ಜನರನ್ನು ಎಣಿಸುವ ವಿಧಾನದಲ್ಲಿ ಮೊದಲನೆಯವನಿಗೆ ಬಳಸುವ ಶಬ್ಧ.

ಕಂಟ : ಮೈಸೂರು ಪರಿಸರದ ಕಪ್ಪೆಗೂಡಿನಾಟದಲ್ಲಿ ಬಳಕೆಯಾಗುವ ತೆಂಗಿನ ಕಾಯಿಯ ಕರಟ.

ಕಂಚ : ಸಿಂಧನೂರು ಪರಿಸರದ ಗೋಲಿ ಆಟದ ಅಂಕಣದ ಒಂದು ಭಾಗ.

ಕಂಚಿನ ಮಿಣಿ ಮಿಣಿ : ಉತ್ತರ ಕನ್ನಡದ ಕಂಬಾಟದಲ್ಲಿ ಬಳಕೆಯಾಗುವ ಮಾತು.

ಕಂಚಿಹೊಡೆ : ಬಳ್ಳಾರಿ ಪ್ರದೇಶದ ಗೋಲಿ ಆಟದಲ್ಲಿ ಅಂಕಣದಲ್ಲಿ ಕೂಡಿಕೊಂಡಿರುವ ಗೋಲಿಗಳನ್ನು ಬಿಡಿಸುವಂತೆ ಇನ್ನೊಂದು ಗೋಲಿಯಿಂದ ಹೊಡೆಯುವುದು.

ಕಂಚು ಕಣಿ ಕಣಿ : ಉತ್ತರ ಕನ್ನಡದ ಅಕ್ಕಕ್ಕ ಚೆಂಡು ಎಂಬ ಹರಳಿನಾಟದಲ್ಲಿ ಬಳಕೆಯಾಗುವ ಮಾತು.

ಕಂಚ್ನತಟ್ಟೆ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಆಡುವಾಗ ಹರಳು ಕೆಳಗೆ ಬೀಳುವ ಮುನ್ನ ಹೇಳಬೇಕಾದ ಮಾತು.

ಕಕ್ಕೆ : ಕಾಗಿ, ದಕ್ಷಿಣ ಕನ್ನಡದ ಹುಡುಗಿಯರು ಆಡುವ ಕಕ್ಕೆ ಗಿಳಿ ಆಟದಲ್ಲಿ ಕಾಗೆ ಯಾಗುವವರಿಗೆ ನಿಯೋಜಿಸುವ ಹೆಸರು.

ಕಚ್ಚಾ : ಸಿಂಧನೂರು, ರಾಯಚೂರು  ಪರಿಸರದ ಚಕೋರಿ ಆಟದಲ್ಲಿ ಎದುರಾಳಿ ಏಟು ತಿನ್ನುವುದು ಅಥವಾ ಸೋಲುವುದು.

ಕಟಗನ ನಚ್ಚಿ : ಮಧ್ಯಕರ್ನಾಟಕದ ಗಿಲ್ಲಿ ಆಟದಲ್ಲಿ ಆಟದ ನಡುವೆ ಒಂದು ಹಂತದಲ್ಲಿ ಗಿಲ್ಲಿ ಹೊಡೆಯುವ ಮುಂಚೆ ಹೊಡೆಯುವವನು ಹೇಳುತ್ತಾನೆ.

ಕಟ್ಟೆ : ಉತ್ತರ ಕರ್ನಾಟಕದ  ಚಕಾರ್ ಆಟದಲ್ಲಿ ಅಂಕಣದ ಕಾಯಿಕೂರಿಸುವ ಭಾಗ.

ಕಟ್ಟೆ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಸೀತ್ಯಾ ಮುತ್ಯಾ ಎನ್ನುವುದೊಂದು ಆಟ. ಇದರಲ್ಲಿ ಮಣೆಯ ಮೂಲೆಯ ನಾಲ್ಕು ಮನೆಗಳಿಗೆ ಕಟ್ಟೆ ಎನ್ನುತ್ತಾರೆ.

ಕಟ್ಟೆ ಹಾಕುವುದು : ಬಿಜಾಪುರ ಪರಿಸರದ ಚೌಕಮಣಿ ಆಟದಲ್ಲಿ ಆಟಕ್ಕಾಗಿ ಅಂಕಣ ಬರೆಯುವುದು.

ಕಟ್ದ್ : ಅಪ್ಪಪ್ ಮುಳ್ಳೇ ಎಂಬ ಉತ್ತರ ಕನ್ನಡದ ಆಟದಲ್ಲಿ ಬಳಕೆಯಾಗುವ ಪದ.

ಕಡತ : ಉತ್ತರ ಕರ್ನಾಟಕದ  ಚಕಾರ್ ಆಟದಲ್ಲಿ ಅಂಕಣದಲ್ಲಿ ಕಾಯಿ ನಡೆಸುವಾಗ ಎದುರಿನವರ ಕಾಯನ್ನು ಅಂಕಣದಿಂದ ಹೊರಹಾಕುವ ಪ್ರಕ್ರಿಯೆಗೆ ಕಡತ ಎನ್ನುತ್ತಾರೆ.

ಕಡತ ಲೋಪ :  ಉತ್ತರ ಕರ್ನಾಟಕದ  ಚಕಾರ ಆಟದಲ್ಲಿ ಎದುರಿನವರ ಕಾಯಿ ಹೊಡೆಯದೆ ಮನೆ ನುಗ್ಗಿದರೆ ಕಡತ ಲೋಪವೆನ್ನುತ್ತಾರೆ.

ಕಡತಹೊಡೆಯುವುದು : ಶಿಕಾರಿಪುರ ಪರಿಸರದ ಚೆವೆ ಆಟದಲ್ಲಿ ಎದುರಾಳಿಯ ಕಾಯಿಗಳನ್ನು ಮನೆಯಿಂದ ಹೊರಹಾಕುವುದು.

ಕಡಿ : ಸಿಂಧನೂರು, ಉತ್ತರ ಕರ್ನಾಟಕದ  ಚಕೋರಿ ಆಟ, ಹುಲಿಮನೆ ಆಟ ಮತ್ತಿತರ ಕಾಯಿ ನಡೆಸುವ ಆಟಗಳಲ್ಲಿ ಎದುರಿನವರ ಕಾಯಿಯನ್ನು ಅಂಕಣದಿಂದ ಹೊರಹಾಕುವ ಪ್ರಕ್ರಿಯೆಗೆ ಬಳಕೆಯಾಗುವ ಕ್ರಿಯಾ ಪದ.

ಕಣ್ಬೆಕಾಯಿ  : ಉತ್ತರ ಕನ್ನಡದ  ಜೋಗದ ಬೆಟ್ಟೆ ಆಟದಲ್ಲಿ ಬಳಕೆಯಾಗುವ ಪದ.

ಕತ್ತೆಸೂಳ್ಳೆ : ಉತ್ತರ ಕರ್ನಾಟಕ ಭಾಗದ ಹುಲಿಮನೆ ಆಟದಲ್ಲಿ ಕಾಯಿಯನ್ನು ಅಂಕಣದ ಹೊರಚಾಚಿದ  ಕಿವಿ ಎಂಬ ಭಾಗದಲ್ಲಿ ಕೂರಿಸಿದರೆ ಕತ್ತೆಸೂಳ್ಳೆ ಎನ್ನುತ್ತಾರೆ.

ಕರ್ತ : ಬೀದರ್ ಪರಿಸರದ ಆಟ್ಟ ಚಮ್ಮದಾಟದಲ್ಲಿ (ಇತರೆಡೆ ಚೌಕಾಬಾರ) ಎದುರಾಳಿಯ ಕಾಯಿಗಳನ್ನು ಹೊಡೆಯುವುದನ್ನು ಕರ್ತ ಎನ್ನುತ್ತಾರೆ. ಇತರೆಡೆ, ಕಾಯಿತಿನ್ನು , ಕಾಯಿಕಡಿ, ಕಾಯಿ ಹೊಡಿ, ರೂಪಗಳಿವೆ.

ಕಪ್ಡಾಬಡ್ದ : ಉತ್ತರ ಕನ್ನಡದ  ಹಕ್ ಬಂತ್ ಎಂಬ ಆಟದಲ್ಲಿ  ಬಳಕೆಯಾಗುವ ಮಾತು.

ಕಪ್ಪು : ರಾಮನಗರ, ಕನಕಪುರ ಪರಿಸರದ ಕುಂಟೋಬಿಲ್ಲೆ ಆಟದಲ್ಲಿ ಕೈಯನ್ನು ನೀಡಿ ಕಪ್ಪುಭಾಗ ಅಂದರೆ ಮಗುಚಿದ ಕೈ ನೀಡಿ ಆಡುವುದು ಎದುರಿನವರು ಕಪ್ಪು ಎಂದಾಗ ಆಡುವ ಆಟ.

ಕಪ್ಪೆ : ಕನಪುರ ಪರಿಸರದ ಕುಂಟೋ ಬಿಲ್ಲೆ ಆಟದ ಒಂದು ಹಂತದಲ್ಲಿ ಆಡುವವರಿಗೆ ಎದುರಿನವರು ಕಪ್ಪೆ ಎಂದು ಸೂಚನೆ ನೀಡಿದರೆ ಎರಡುಕಾಲಿನಿಂದ ಒಟ್ಟಿಗೆ ಬಿಲ್ಲೆಯನ್ನು ಮನೆಯಿಂದ ಮನೆಗೆ ದಾಟಿಸಬೇಕು.

ಕಪ್ಪೆ ಗೂಡು : ಮೈಸೂರು ಪರಿಸರದ ಕಪ್ಪೆಗೂಡಿನಾಟದಲ್ಲಿ ಮಕ್ಕಳು ಮರಳಿನಿಂದ ಕಟ್ಟಿದ ಕಪ್ಪೆಗೂಡು

ಕರಹಾಕ್ತು : ಮೈಸೂರು ಪರಿಸರದ ಹಳ್ಳು ಮಣೆ ಆಟದಲ್ಲಿ ಕುಳಿಯಲ್ಲಿ ಕಾಳು ಹೆಚ್ಚಾದಾಗ  ಬಳಕೆಯಾಗುವ ಮಾತು.

ಕರು : ಮಲೆನಾಡು ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಕುಳಿಗೆ ನಾಲ್ಕನೆ ಹರಳು ಬಿದ್ದಮೇಲೆ ಹೇಳುವ ಪದ.

ಕರುಕಟ್ಟಿದೆ : ಶಿಕಾರಿಪುರ ಪರಿಸರದ ಚಣಮಣಿ ಆಟದಲ್ಲಿ ಆಟದ ಪ್ರಕ್ರಿಯೆಯಲ್ಲಿ ಮಣೆಯ ಗುಳಿಯಲ್ಲಿ ನಾಲ್ಕು ಕಾಳು ಮಾತ್ರ ಇದ್ದರೆ ಕರುಕಟ್ಟಿದೆ ಎನ್ನುವರು.

ಕರುಹಾಕ್ತು : ಮಲೆನಾಡಿನ ಪರಿಸರದ ಚೆನ್ನೆ ಮಣೆ ಆಟದಲ್ಲಿ ಗುಳಿಯಲ್ಲಿ ಎರಡು ಬೀಜದ ಜೊತೆಗೆ ಒಂದು ಬೀಜ ಸೇರಿದರೆ ಬಳಕೆಯಾಗುವ ಪದ.

ಕರ್ವಾ :ಉತ್ತರ ಕನ್ನಡದ  ಅಪ್ಪಪ್ ಮುಳ್ಳೇ  ಆಟದಲ್ಲಿ ಬಳಕೆಯಾಗುವ ಪದ.

ಕಲ್ಜುಜಾಣಿ : ಉತ್ತರ ಕನ್ನಡದ   ಹರಳಿನಾಟದಲ್ಲಿ ಮೇಲೆಸೆದ ಹರಳು ಕೆಳಗೆ ಬೀಳುವ ಮುನ್ನ ಹೇಳಬೇಕಾದ ಮಾತು.

ಕಲ್ಲುಚುವ್ಯ : ಹೊಸದುರ್ಗ ಪರಿಸರದ ಒಂದು ಆಟದಲ್ಲಿ ಆಟಗಾರರು ಸಗಣಿ ಮೇಲೆ ಅಥವಾ ಕಲ್ಲಿನ ಮೇಲೆ ಕಡ್ಡಿ ಇಡುತ್ತಾರೆ ಆಗ ಸೋತವರು ಹಾಗೆ ಹೇಳುತ್ತಿರುತ್ತಾರೆ.

ಕವಚಿ : ಉತ್ತರ ಕನ್ನಡದ ಕವಡೆ ಆಟದಲ್ಲಿ ಕವಡೆ ಮಗುಚಿ ಬೀಳುವುದು.

ಕವಡೆ : ಹಲವು ಒಳಾಂಗಣ ಆಟಗಳಲ್ಲಿ ಬಳಕೆಯಾಗುವ ವಸ್ತು.

ಕವಿಲೆ : ಉತ್ತರ ಕನ್ನಡದ ಹುಲಿಕವಿಲೆ ಒಳಾಂಗಣ ಆಟದಲ್ಲಿ  ಬಳಕೆಯಾಗುವ ಪದ. ಸಣ್ಣ ಸಣ್ಣ ಕಲ್ಲುಗಳನ್ನು ಇಟ್ಟು ಹುಲಿಯಾಗಿ ಮತ್ತು ಹಸುವಾಗಿ ಭಾವಿಸಿ ನಕ್ಷೆಯೊಳಗೆ ನಡೆಸುತ್ತಾ ಆಟವಾಡುತ್ತಾರೆ.

ಕಳ : ದಕ್ಷಿಣ ಕನ್ನಡದ  ಬುಗುರಿ ಆಟದ ವೃತ್ತಕಾರದ ಅಂಕಣ, ಬುಗುರಿಗಳನ್ನು ಈ ವೃತ್ತಕಾರದ ಅಂಕಣದಲ್ಲಿ ಇಡಬೇಕು.

ಕಳಂಜಿಕಾಯಿ : ಉತ್ತರ ಕನ್ನಡ ಭಾಗದಲ್ಲಿ ಆಟಕ್ಕಾಗಿ ಬಳಸುವ ಗಿಡವೊಂದರ ಬೀಜ.

ಕಳ್ಳಿ : ಉತ್ತರ ಕರ್ನಾಟಕದ ಗಿಡಮಂಗ್ಯಾ ಆಟದ ಸಂಧರ್ಭದಲ್ಲಿ ಮೊದಲ ಹಂತದಲ್ಲಿ ಸೋತು ಇತರರನ್ನು ಸೋಲಿಸಲು ನಿಯೋಜಿಸುವ ವ್ಯಕ್ತಿಗೆ ನಿಯೋಜಿತ ಹೆಸರು.

ಕಾಚ : ಹುಳಿಯಾರು ಪರಿಸರದ ಚಿಣ್ಣಿ ದಾಂಡಿನಾಟದಲ್ಲಿ ಆಟಗಾರ ಹೊಡೆದ ಚಿಣ್ಣಿಯನ್ನು ಎದುರಾಳಿ ಹಿಡಿಯುವುದು (ಕ್ಯಾಚ್ ನ ವಿಕಲ್ಪವಿರಬಹುದು).

ಕಾಜು : ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಗಾಜಿನ ಗೋಲಿಗೆ ಇರುವ ಹೆಸರು. ಕಾಜು (ಗಾಜು?)

ಕಾನ ಜೀರ್ಗೆ :  ಉತ್ತರ ಕರ್ನಾಟಕದ ಚಟ್ಕಾ ಮುಟ್ಕಾ ಆಟದಲ್ಲಿ ಬಳಕೆಯಾಗುವ ಪದ.

ಕಾರ್ಪುಡಿಗೋಲಿ : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ಬಳಸು ಹಳದಿ ಬಣ್ಣದ ಗೋಲಿ.

ಕಾಯಿ : ಕರ್ನಾಟಕದ  ಎಲ್ಲಾ ಕಡೆ ಚೌಕಾಕಾಬಾರ, ಗಟ್ಟದ ಮನೆ, ಹುಲಿ ಮನೆ ಇತರೆ ಆಟಗಳಲ್ಲಿ ಆಟವಾಡಲು ನಕ್ಷೆಯ ಮನೆಗಳಲ್ಲಿ ಇಟ್ಟುಕೊಳ್ಳುವ ವಸ್ತುಗಳು. ಇವುಗಳನ್ನು ಮನೆಗಳಲ್ಲಿ ನಡೆಸುತ್ತಾ ಆಟ ಮುಂದುವರಿಸುತ್ತಾರೆ.

ಕಾಯಿ ಎತ್ತು : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಆಟಗಾರ ಆಟದ ಕಾಯಿಗಳನ್ನು ಬಳಸುವ ಒಂದು ವಿಧಾನ.

ಕಾಯಿಕೊಲ್ಲು : ಮಧ್ಯ ಕರ್ನಾಟಕ, ಮಲೆನಾಡು ಪ್ರದೇಶಗಳ ಚೌಕಾಬಾರ, ಗಟ್ಟದ ಮನೆ, ಚವೆ ಆಟಗಳಲ್ಲಿ ಎದುರಾಳಿಯ ಕಾಯಿಗಳನ್ನು ಆಟದ ಕ್ರಮದಲ್ಲಿ ಮನೆಯಿಂದ ಹೊರ ಹಾಕುವುದು.

ಕಾಯಿತಿನ್ನು : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಆಟಗಾರನ ಕೈಯಕಾಯಿಗಳು ಮುಗಿದು ಮುಂದಿನ ಮನೆಯ ಕಾಯಿ ಬಳಸುವುದಕ್ಕೆ  ಬಳಸುವ ಪದ.

ಕಾಯಿನಡೆಸು : ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ  ಚೌಕಾಬಾರ, ಗಟ್ಟದ ಮನೆ,  ಇತರೆ ಆಟಗಳಲ್ಲಿ ಆಟದ ಕ್ರಮದಲ್ಲಿ ಮನೆಯಿಂದ ಮನೆಗೆ ಕಾಯಿನಡೆಸುವುದು.

ಕಾಯಿಮನಿ : ಬಾಗಲಕೋಟೆ ಪ್ರದೇಶದ ಚಕ್ಕಾ ಆಟದಲ್ಲಿ ಆಟದ ಅಂಕಣದಲ್ಲಿ ಕಾಯಿಯಿಡುವ ಸ್ಥಾನ.

ಕಾಯಿಮುರಿ : ಕೊಳ್ಳೆಗಾಲ, ಚಾಮರಾಜನಗರ ಪರಿಸರದ ಅಳಿಗುಳಿ ಮನೆ ಆಟದಲ್ಲಿ ಗುಳಿಯಲ್ಲಿರುವ ಎದುರಾಳಿಯ ಕಾಯಿ ಎತ್ತುವುದು.

ಕಾರೆ : ಮೈಸೂರು ಪರಿಸರದ ಕಾರೇ ಬೀರೆ ಎಂಬ ಗೋಲಿ ಆಟದಲ್ಲಿ ಎದುರಾಳಿ ವ್ಯಕ್ತಿಯ ಗೋಲಿಗೆ ಮೊದಲನೆ ಏಟು ಹೊಡೆದಾಗ ಹೇಳುವ ಪದ. ಹೀಗೆ ಒಂದೊಂದು ಏಟಿಗೂ ಒಂದೊಂದು ಪದವನ್ನು ಉಚ್ಚರಿಸುತ್ತಾರೆ.

ಕಾರೆ ಮುಳ್ಳೆ : ಉತ್ತರ ಕರ್ನಾಟಕದ  ಕಣ್ಣೆಕಟ್ಟೆ ಕಾರೆಮುಳ್ಳೇ ಆಟದಲ್ಲಿ ಬಳಸುವ ಪದ.

ಕಾಲ್ಗಂಧ : ಉತ್ತರ ಕರ್ನಾಟಕದ  ಹರಳಿನಾಟದಲ್ಲಿ ಬಳಕೆಯಾಗುವ ಒಂದು ಪದ.

ಕಾವೇರಮ್ಮ ಬಂತು : ಉತ್ತರ ಕನ್ನಡದ ಗೋಧಿ ಬೀಸೋ ತೊಮ್ಮೆ ಆಟದಲ್ಲಿ ಬಳಕೆಯಾಗುವ ಭಾಷಾ ರೂಪ.

ಕಾಶ್ಮೀರ ದಾರ :  ಉತ್ತರ  ಕನ್ನಡದ  ಹರಳಿನಾಟದಲ್ಲಿ  ಮೇಲೆಸೆದ ಹರಳು ಕೆಳಗೆ ಬೀಳುವ ಮೆದಲೆ ಹೇಳಬೇಕಾದ ಮಾತು.

ಕಾಳು : ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಆಟಗಳಿಗೆ ಬಳಸುವ ಹರಳು, ಹುಣಸೆ ಬೀಜ, ಚೆನ್ನೆಕಾಳು ಹಾಗೂ ಇತರೆ ಕಾಳುಗಳನ್ನು ಕಾಳು ಎಂದು ಮಾತ್ರ ಕರೆಯುತ್ತಾರೆ.

ಕಿಟ್ಟೆ : ಚಾಮರಾಜನಗರ ಯಳಂದರೂ ಪರಿಸರದಲ್ಲಿ ಆಟಕ್ಕಾಗಿ ಬಳಸುವ ಒಂದು ಬೀಜ. ಇತರೆಡೆ ಗಜ್ಜುಗ ಬಳಸಿ ಆಡುವ ಆಟಗಳನ್ನು ಈ ಬೀಜ ಬಳಸಿ ಆಡುತ್ತಾರೆ.

ಕಿಟ್ಟಕ್ಕಾ :  ಉತ್ತರ ಕನ್ನಡದ   ಹರಳಿನಾಟದ ನಡುವೆ ಬಳಕೆಯಾಗುವ ಪದ.

ಕಿಡಕಣೆಬೆಟ್ಟು : ಕಿರಿಬೆರಳು ಉತ್ತರ ಕನ್ನಡದ ಬೆಟ್ಟೆಯಾಟದಲ್ಲಿ ಆಟದ ನಡುವೆ ಬಳಕೆಯಾಗುವ ಪದ.

ಕಿರ್ಟ್ಟೋಟ : ಮೈಸೂರು ಪರಿಸರದ ಗೋಲಿ ಆಟದಲ್ಲಿ ಹೆಬ್ಬೆರಳನ್ನು ತೋರುಬೆರಳು ಮತ್ತು ನಡುವಿನ ಬೆರಳಿನ ನಡುವೆ ಸಿಕ್ಕಿಸಿ ಅಲ್ಲಿಂದ ಗೋಲಿ ಹೊಡೆಯಬೇಕು ಇದನ್ನು ಕಿರ್ಟ್ಟೋಟ ಎನ್ನುತ್ತಾರೆ.

ಕೀಲಾಟ : ಮೈಸೂರು ಪರಿಸರದ ಬಿಲ್ಲೆಯನ್ನು ಮೊಗಚಿ ಆಡುವ ಕುಂಟೇ ಬಿಲ್ಲೆ ಆಟದಲ್ಲಿ ಉಚ್ಚರಿಸುವ ಪದ. ಬಿಲ್ಲೆಯನ್ನು ಕಾಲಿನ ಮೇಲೆ ಇಟ್ಟು ಆಡಬೇಕು.

ಕಿವಿ : ಯಾದಗೀರ ಪರಿಸರದಲ್ಲಿ ಹುಲಿಮನೆ ಆಟದ ಅಂಕಣದಲ್ಲಿ ಬರೆದಿರುವ ಅಂಕಣದ ಹೊರಚಾಚಿದ ಭಾಗ.

ಕುಕ್ಕ : ತುಮಕೂರು ಜಿಲ್ಲೆಯ ಹುಳಿಯಾರು ಪರಿಸರದ ಚೌಕಾಬಾರ ಆಟದಲ್ಲಿ ಒಂದು ಬಿದ್ದರೆ ಕುಕ್ಕ ಎನ್ನುತ್ತಾರೆ.

ಕುಟುಕುಟಿ : ಉತ್ತರ ಕನ್ನಡದ   ಹರಳಿನಾಟದ ನಡುವೆ ಬಳಕೆಯಾಗುವ ಪದ.

ಕುಟ್ಟಿ : ದಕ್ಷಿಣ ಕನ್ನಡದ ಕುಟ್ಟಿ ದೊಣ್ಣೆ ಆಟದಲ್ಲಿ ಎರಡು ತುದಿ ಚೂಪುಮಾಡಿರುವ ಮರದ ಕೋಲಿನಿಂದ ಮಾಡಿದ ಸಣ್ಣ ತುಂಡು ಇತರೆಡೆ, ಚಿಣ್ಣಿ, ಗಿಲ್ಲಿ ಇತರೆ ಹೆಸರುಗಳಿಂದ ಪರಿಚಿತ.

ಕುಟ್ಟು : ದಕ್ಷಿಣ ಕನ್ನಡದ ಚೆಂಡಿನ ಆಟದಲ್ಲಿ  ಚೆಂಡನ್ನು ನೆಲಕ್ಕೆ ಒಗೆದು ಪುಟ ಹಾರಿಸುವುದು.

ಕುಟ್ಟುವುದು : ಬಳ್ಳಾರಿ ಪರಿಸರದ ಗುಚ್ಚಿ ಆಟದಲ್ಲಿ ಒಂದು ಕಲ್ಲನ್ನು ಮೇಲೆಸೆದು ಉಳಿದ ಕಲ್ಲುಗಳನ್ನು ನೆಲಕ್ಕೆ ಕುಟ್ಟಿ ಎಸೆದ ಕಲ್ಲನ್ನು ಹಿಡಿಯುವುದು.

ಕುಡ್ಕೆ : ಮೈಸೂರು ಪರಿಸರದ ಮಗಚಿ ಆಡುವ ಕುಂಟೇ ಬಿಲ್ಲೆ ಆಟದಲ್ಲಿ ಬಳಸುವ ಪದ. ಕೈಯನ್ನು ಮುಷ್ಟಿ ಮಾಡಿ ಕುಡಿಕೆಯಂತೆ ಹಿಡಿದು ಅದರ ಮೇಲೆ ಬಿಲ್ಲೆ ಇಟ್ಟು ಆಡಬೇಕು.

ಕುಡ್ಡಿ : ಬೀದರ್ ಪರಿಸರದ ಕವಡಿ ಆಟದಲ್ಲಿ ಐದು ಕವಡೆಗಳಲ್ಲಿ ಒಂದು ಕೆಳ ಮುಖವಾಗಿ ನಾಲ್ಕು ಮೇಲ್ಮುಖವಾಗಿ ಬಿದ್ದರೆ ಕುಡ್ಡಿ ಎನ್ನುವರು.

ಕುಣಿಗೆರೆ : ಮಧ್ಯ ಕರ್ನಾಟಕದ ಗೋಲಿ ಆಟಗಳಲ್ಲಿ ಆಟದ ಆಂಕಣದ ಒಂದು ಹೆಸರು.

ಕುದ್ರೆಕಣ್ಕ : ಉತ್ತರ ಕನ್ನಡದ ಹರಳಿನಾಟದಲ್ಲಿ ಹರಳು ಮೇಲೆಸೆದು ಹಿಡಿಯುವಾಗ ಉಚ್ಚರಿಸುವ ಪದ.

ಕುರ್ರ : ಸಿಂಧೂರು ಪರಿಸರದ ಚಿನ್ನಿಕೋಲು ಆಟದಲ್ಲಿ ಸೋತವರು ಗೆದ್ದವರನ್ನು ಬೆನ್ನ ಮೇಲೆ ಹೊತ್ತು ನಡೆಯಬೇಕು ಅದನ್ನು ಕುರ್ರ ಎನ್ನುವರು.

ಕುಸ್ನಕುಪ್ಪ : ಉತ್ತರ ಕನ್ನಡದ ಹರಳಿನಾಟದಲ್ಲಿ ಹರಳು ಮೇಲೆಸೆದು ಕೆಳಗೆ ಹಿಡಿಯುವಾಗ ಆರು ಎಂಬ ಸಂಖ್ಯಾವಾಚಿಯೊಂದಿಗೆ ಸೇರಿ ಬರುವ ಪದ. (ಕುಸ್ನಕುಪ್ಪಾರು)

ಕುಳವೈಕುಂಟಾ : ಮೈಸೂರು ಪರಿಸರದ ಗುಳಿ ತುಂಬುವ ಗೋಲಿ ಆಟದಲ್ಲಿ ಪ್ರತಿಸ್ಪರ್ಧಿಯ ಗೋಲಿಗೆ ಹೊಡೆದ ನಂತರ ಆಡುತ್ತಿರುವವರು ಉಚ್ಚರಿಸುವ ಪದ.

ಕುಲ್ಲ : ಮೈಸೂರು ಪ್ರದೇಶದ ಮೀರಿ ಗೋಲಿ ಆಟದ ಒಂದು ಪ್ರಕಾರದಲ್ಲಿ ಎರಡು ಗೋಲಿಗಳು ಹತ್ತಿರವಿದ್ದು ನಡುವೆ ಜಾಗವಿದ್ದರೆ ಕುಲ್ಲ ಎನ್ನುವರು.

ಕುಳಿ : ಚೆನ್ನೆಮಣೆ, ಗೋಲಿ ಆಟಗಳಲ್ಲಿ ಕಾಳು ಅಥವಾ ಗೋಲಿ ಹಾಕುವ ಕುಳಿ.

ಕುಳಿಲ್‌ : ಉತ್ತರ ಕನ್ನಡದ ಅಪ್ಪಪ್‌ ಮುಳ್ಳೆ ಆಟದಲ್ಲಿ ಬಳಕೆಯಾಗುವ ಪದ.

ಕುಳ್ಡಿ : ತುಮಕೂರು ಜಿಲ್ಲೆಯ ಚಿತ್ರದುರ್ಗ ಗಡಿ ಪ್ರದೇಶಗಳ ಚೌಕಾಬಾರ ಆಟದಲ್ಲಿ ಒಂದು ಬಿದ್ದರೆ ಕುಳ್ಡಿ ಎನ್ನುತ್ತಾರೆ.

ಕುಳುಕು : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ಆಟಕ್ಕೆ ಇಟ್ಟ ಗೋಲಿಗಳನ್ನು ಆಟಗಾರ ಹೊಡೆದಾಗ ಅವು ಚದುರುವುದನ್ನು ಕುಳುಕು ಎನ್ನುತ್ತಾರೆ.

ಕುಳ್ಳಿ : ಮೈಸೂರು ಪರಿಸರದ ಗೋಲಿ ಗಜ್ಜುಗ, ಗುಮ್ಚಿ ಆಟದಲ್ಲಿ, ಆಟವಾಡಲು ಸ್ಪರ್ಧಿಗಳೆಲ್ಲ ಗೋಲಿ ಗುಮ್ಚಿ ಗೆಜ್ಜುಗಗಳನ್ನು ಬಿಟ್ಟಾಗ ಯಾರದು ಆಟದ ಕೇಂದ್ರಕ್ಕೆ ಹತ್ತಿರದಲ್ಲಿ ಬೀಳುವುದೊ ಅದನ್ನು ಕುಳ್ಳಿ ಎನ್ನುತ್ತಾರೆ.

ಕೆಪ್ಪೆ : ಉತ್ತರ ಕನ್ನಡದ ಜೊಗದ ಬೆಟ್ಟೆ ಆಟದಲ್ಲಿ ಆಟದ ಹಂತದ ಒಂದು ಹೆಸರು.

ಕೆರಕ : ಮಲೆನಾಡಿನ ಪರಿಸರದಲ್ಲಿ ದೀಪಾವಳಿ ಸಂದರ್ಭದ ಮೂರು ದಿನಗಳು ವಿಶೇಷವಾಗಿ ಆಡುವ ಮಾತಿನ ಆಟ. ಇದರಲ್ಲಿ ಕೆಲವು ನಿರ್ದಿಷ್ಟ ಉಚ್ಚಾರಗಳನ್ನು ಮಾಡಬಾರದು ಮಾಡಿದರೆ ಅವರು ಸೋತಂತೆ. ಮಾತಿನ ನಡುವೆ  ‘ಓ’ ಎಂದರೆ ಒಂಭತ್ತು ಅಂಕಗಳು ಸೋತಂತೆ, ಆಂ ಅಂದರೆ ಆರು ಅಂಕಗಳು ಸೋತತಂತೆ. ಹುಂ ಎಂದರೆ ಒಂದು ಅಂಕ ಸೋತತಂತೆ ಇದು ಸಾಮಾನ್ಯವಾಗಿ ಅತ್ತಿಗೆ ನಾದಿನಿ, ಅತ್ತಿಗೆ ಮೈದುನರು ಆಡುತ್ತಾರೆ, ಎದುರಿನವರು ಇದೇ ಮಾದರಿಯಲ್ಲಿ ಪ್ರತಿಸ್ಪರ್ಧಿಯ ಬಾಯಿಂದ ಈ ಉದ್ಗಾರಗಳು ಬಂದಂತೆ ನಿಗದಿತ ಅಂಕಗಳನ್ನು ತೀರಿಸುತ್ತಾರೆ. ಕೆರಕ ಕೊಟ್ಟವರು ಕೆರಕ ತೆಗೆದುಕೊಂಡವರ ಕೈಯನ್ನು ಕೆರೆಯುತ್ತಾರೆ. ಕೆರಕ ಎನ್ನುವ ಪದ ದೀಪಾವಳಿಯಲ್ಲಿ ಸೆಗಣಿಯಿಂದ ಮಾಡಿ ಮನೆ ಮುಂದೆಯಿಡುವ ಬಲೀಂದ್ರನ ಪ್ರಕೃತಿಗೆ ಕರೆಯುವ ಹೆಸರಾಗಿದೆ.

ಕೆರೆ : ಉತ್ತರ ಕನ್ನಡದ ಬೆಟ್ಟ ಆಟದ ನಕ್ಷೆಯಲ್ಲಿ ಒಂದು ಸ್ಥಳ ಗುರುತಿಸುವ ಪದ.

ಕೆಳತಿರ್ಪಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಎರಡು ಬಗೆ ಇದೆ. ಮೇಲ್ ತಿರ್ಪಿ ಮತ್ತು ಕೆಳತಿರ್ಪಿ ಅದರಲ್ಲಿ ಇದು ಒಂದು ಬಗೆ.

ಕೆಳ್ಗ : ಮೈಸೂರು ಪರಿಸರದ ಮೀರಿ ಎಂಬ ಗೋಲಿ ಆಟದಲ್ಲಿ ಗೋಲಿ ಬಿಟ್ಟಾಗ, ಗೋಲಿ ಹೊಡೆಯುವವರಿಗೆ ಹತ್ತಿರವಿರುವ ಗೋಲಿ.

ಕೇರಿ : ರಾಯಚೂರು ಮಾನ್ವಿ ಪರಿಸರದ ಗೋಲಿ ಆಟದಲ್ಲಿ ಎರಡನೆಯ ಮುಖ್ಯವಾದ ಏಟು ಗೋಲಿಯಿಂದ ಗೋಲಿಗೆ ಹೊಡೆಯುವುದು.

ಕೈಯಕಾಯಿ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಕೈಯಲ್ಲಿರುವ ಕಾಯಿ.

ಕೊಂಕೆ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ  ಆಟಗಾರನ ಸ್ವಾಧೀನದಲ್ಲಿ ಒಂದು ಕಾಯಿಯಿದ್ದರೆ ಬಳಕೆಯಾಗುವ ವಿಶಿಷ್ಟ ಸಂಖ್ಯಾವಾಚಕ.

ಕೊಂತ್ತಾ : ಶಿಕಾರಿಪುರ ಪರಿಸರದ ಚಣಮಣಿ ಆಟದಲ್ಲಿ ಆಟದ ಪ್ರಕ್ರಿಯೆಯಲ್ಲಿ ಒಂದು ಗುಳಿ ತುಂಬಾ ಕಾಳು ಇದ್ದರೆ ಕೊಂತ್ತಾ ಎನ್ನುವರು.

ಕೊಣ : ಉತ್ತರ ಕರ್ನಾಟಕದ ಸಾದುಗೋದು ಎಂಬ ಆಟದಲ್ಲಿ ಬಳಸುವ ಪದ.

ಕೋಟೆ : ಕರಾವಳಿ  ಕರ್ನಾಟಕದ ಹುಲಿದನ ಆಟದಲ್ಲಿ ಬಳಕೆಯಾಗುವ ಆಟದ ಅಂಕಣದ ಒಂದು ಭಾಗದ ಹೆಸರು.

ಕೋರ್ಟು : ರಾಮನಗರ, ಮಂಡ್ಯ, ಮೈಸೂರು ಭಾಗದ ಚಿಣ್ಣಿದಾಂಡಲ್ ಆಟದಲ್ಲಿ ಆಟವಾಡುವ ಅಂಕಣಕ್ಕೆ ಹೇಳುವ ಹೆಸರು.

ಕೋಳಿಗೂಡು : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ  ಮಾತು.

ಕೋಳ್ಗಂಬ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಬಳಕೆಯಾಗುವ  ಮಾತು.

ಕೃಷ್ಣ : ಕನಪುರದ ಪರಿಸರದ ಕುಂಟೋ ಬಿಲ್ಲೆ ಆಟದ ಒಂದು ಹಂತದಲ್ಲಿ ಮನೆ ದಾಟುವಾಗ ಆಡುವವರು ಕೃಷ್ಣನಂತೆ ಬಾಯಿ ಬಳಿ ಕೊಳಲನ್ನು ಊದುವ ಹಾಗೆ ಕೈ ಇಟ್ಟು ಕುಂಟುತ್ತಾ ಮನೆದಾಟಬೇಕು ಇದನ್ನು ಎದುರಿನವರು ಸೂಚಿಸುತ್ತಾರೆ.

ಕ್ಯಾರೆ : ಸಿಂಧನೂರು ಪರಿಸರದ ಗೋಲಿ ಆಟದಲ್ಲಿ ಹೊಡೆಯುವ ಮುಂಚೆ ಆಟಗಾರ ಹೇಳುವ ಪದ.

ಖಾಜಿನಗುಂಡು : ಬಿಜಾಪುರ ಪರಿಸರದಲ್ಲಿ ಗೋಲಿಗೆ ಬಳಸುವ ಪದ.