ಅಂಗಾಳೆ ಬಿಂಗಾಳೆ : ಉತ್ತರ ಕನ್ನಡದ ಸುತ್ತಾಟದ ಒಂದು ಬಗೆ.

ಅಂಟುಕಾಲಿನ ಓಟ : ದಕ್ಷಿಣ ಕನ್ನಡದ ಒಂದು ಹೊರಾಂಗಣ

ಅಂಟುರೋಗ : ತುಮಕೂರಿನ ಹುಳಿಯಾರು ಪರಿಸರದಲ್ಲಿ ಆಡುವ ಆಟ.

ಅಂಡೆಆಟ : ಮೈಸೂರು ಪರಿಸರದ ಗೋಲಿ ಆಟದಲ್ಲಿನ ಒಂದು ಬಗೆ.

ಅಂಡೆ ಉಂಡೆ : ಉತ್ತರ ಕನ್ನಡದ ಬೆರಳಾಟದ ಒಂದು ಬಗೆ.

ಅಂಡ್ಯಾಳಾಟ : ಬೆಳಗಾವಿ ಕಡೆ ಆಡುವ ಒಂದು ಹರಳಾಟದ ಬಗೆ

ಅಂದರ್ ಬಾಹರ್ : ಮೈಸೂರು ಪ್ರದೇಶದ ಗೋಲಿ ಆಟದ ಒಂದು ಬಗೆ.

ಅಂಬುಗಾಯಿ : ದಕ್ಷಿಣ ಕನ್ನಡದಲ್ಲಿ ತೆಂಗಿನಕಾಯಿ ಬಳಸಿ ಆಡುವ ಒಂದು ಆಟ.

ಅಗ್ಗದಾಟ : ಮೈಸೂರು ಪ್ರದೇಶದ  ಅಣ್ಣೆಕಲ್ಲಾಟದ ಒಂದು ಬಗೆ.

ಅಚ್ಚಂಗಾಯಿ : ಕೋಲಾರ ಪರಿಸರದಲ್ಲಿ ಹೆಣ್ಣು ಮಕ್ಕಳು ಆಡುವ ಆಟ. ಇತರೆಡೆ ಆಣೆಕಲ್ಲು, ಗುಚ್ಚಿ ಆಟ ಹೆಸರುಗಳಿಂದ ಪರಿಚಿತ ಆಟ.

ಅಚ್ಚಚ್ಚೊ ಬೆಲ್ಲದಚ್ಚೊ : ಮಂಡ್ಯ ಪರಿಸರದಲ್ಲಿ  ಹೆಣ್ಣು ಮಕ್ಕಳು ಆಡುವ ಆಟ.

ಅಚ್ಚಾಬೋಕಿ : ರಾಯಚೂರು, ಸಿಂಧುನೂರು ಪರಿಸರದ ಕುಂಟೋ ಬಿಲ್ಲೆ ಆಟದ ಒಂದು ಬಗೆ.

ಅಜ್ಜಿ ಮೊಮ್ಮಗಳು : ಉತ್ತರ ಕನ್ನಡದ ಬೆನ್ನಟ್ಟುವ ಆಟದ ಒಂದು ಬಗೆ.

ಅಜ್ಜಿಸೂಜಿ : ಉತ್ತರ ಕನ್ನಡದ ಬೆನ್ನಟ್ಟುವ ಆಟದ ಒಂದು ಬಗೆ.

ಆಟ್ ಪಾಟ್ ಮುಗಿಲ್ ಪಾಟ್ : ಉತ್ತರ ಕನ್ನಡದ ಬೆನ್ನಟ್ಟುವ ಆಟದ ಒಂದು ಬಗೆ.

ಆಟ್ಟಕ್ಕಿ ಮಟ್ಟಕ್ಕಿ : ಉತ್ತರ ಕನ್ನಡದ  ಹುಡುಕುವ ಆಟದ ಒಂದು ಬಗೆ.

ಆಟ್ಟಗುಳಿ : ಮಂಡ್ಯ ಪರಿಸರದಲ್ಲಿ ಹಿರಿಯರಾಡುವ ಆಟ, ಇತರೆಡೆ ಚೆನ್ನೆಮಣೆ,  ಅಳಗುಳಿ ಮನೆ ಆಟ ಎನ್ನುತ್ತಾರೆ.

ಅಟ್ಟಗೋಲು : ಉತ್ತರ ಕನ್ನಡದ  ಎಳೆದಾಟದ ಒಂದು ಬಗೆ.

ಅಟ್ಟಚಮ್ಮ : ಬೀದರ್ ಪರಿಸರದ ಚೌಕಾಬಾರ ಆಟದ ಒಂದು ಬಗೆ. ಹುಣಸೆ ಬೀಜಗಳನ್ನು ತೇಯ್ದು ಆಟಕ್ಕೆ ಬಳಸುತ್ತಾರೆ.

ಅಟ್ಟಮುಟ್ಟ : ದಕ್ಷಿಣ ಕನ್ನಡದ ಒಂದು ಒಳಾಂಗಣ ಆಟ.

ಆಡಂ ತಡಂ : ಉತ್ತರ ಕನ್ನಡದ  ಬೆನ್ನಟುವ  ಆಟದ ಒಂದು ಬಗೆ.

ಆಡ್ಗಲ್ ಗಡ್ಗೆ ಆಟ : ಬೆಳಗಾವಿ ಕಡೆಯಲ್ಲಿ ಇಬ್ಬರು ಹುಡುಗ ಅಥವಾ ಹುಡುಗಿಯರು ಕೈ ಕೈಹಿಡಿದು ಎದುರುಬದರಾಗಿ ವಿರುದ್ಧ ದಿಕ್ಕಿಗೆ ಚಕ್ರಾಕಾರವಾಗಿ ಸುತ್ತುವ ಒಂದು ಆಟ.

ಅಣ್ಣೆ ಕಲ್ಲಾಟ : ಕರ್ನಾಟಕದ ಬಹುಪಾಲು ಭಾಗಗಳಲ್ಲಿ ಹೆಣ್ಣು ಮಕ್ಕಳಾಡುವ ಕಲ್ಲಾಟದ ಒಂದು ಬಗೆ.

ಅತ್ರಂಬೆ ಗಾಣ್ನರಂಬೆ : ಉತ್ತರ ಕನ್ನಡದ  ತುಳಿದಾಟದ  ಒಂದು ಬಗೆ.

ಅತ್ತೆಸೊಸೆ ಆಟ : ಬೀದರ್ ಪರಿಸರದಲ್ಲಿ ಹೆಣ್ಣುಮಕ್ಕಳು ಆಡುವ ಗುಂಪು ಆಟದ ಒಂದು ಬಗೆ. ಇಬ್ಬರು ಹೆಣ್ಣು ಮಕ್ಕಳು  ಅತ್ತೆಸೊಸೆಯರಾಗಿ ಉಳಿದವರು ದನಗಳಾಗುತ್ತಾರೆ. ಸೊಸೆ ಹಾಲು ಕರೆಯುವುದು, ಹಸು ಕೊಡದಿರುವುದು ಅತ್ತೆ ಮೊದಲೇ ಹಾಲು ಕರೆದಿಟ್ಟು ಹೊಲಕ್ಕೆ ಹೋಗುವುದು ಹೀಗೆ ಕೌಟುಂಬಿಕ ವಿಡಂಬನೆಯಾಗಿ ಸಾಗುವ ಆಟ.

ಅತ್ತಿಕಟಿಗೆ ಬಿತ್ತಿಕಟಿಗೆ : ಹೊಸಪೇಟೆ, ಬಳ್ಳಾರಿ ಪರಿಸರದಲ್ಲಿ ಮಕ್ಕಳಿಗೆ ಆಡಿಸುವ ಒಂದು ಆಟ. ಮಕ್ಕಳನ್ನು ಸುತ್ತಾಕೂರಿಸಿ ಕೈಗಳನ್ನು ನೆಲಕ್ಕೆ ಊರಿಸಿ ಕೆಲವು ಪದಗಳನ್ನು ಉಚ್ಚರಿಸುತ್ತಾ ಆಡುವ ಆಟ.

ಅದಲು ಬದಲು : ಉತ್ತರ ಕನ್ನಡದ ಹುಡುಕುವ ಆಟದ ಒಂದು ಬಗೆ.

ಅಪ್ಪಚೆಂಡು : ದಕ್ಷಿಣ ಕನ್ನಡದಲ್ಲಿ ಹುಡುಗರು ಆಡುವ ಚೆಂಡಾಟದ ಒಂದು ಬಗೆ, ಇತರೆಡೆ ಬೀರ್ ಚೆಂಡು, ತೂರ್ ಚೆಂಡು, ರಾಮಭೀಮ ಸೋಮ, ಹೆಸರುಗಳಿಂದ ಪರಿಚಿತ ಆಟ.

ಅಪ್ಪಡದಪ್ಪಡ : ಉತ್ತರ ಕನ್ನಡದ ತುಳಿದಾಟದ ಒಂದು ಬಗೆ.

ಅಪ್ಪದ ಆಟ : ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳು ಆಡುವ ಆಟ. ಇದು ಪೊಕ್ಕು, ಕಲ್ಲಾಟದ ಮಾದರಿಯದೇ ಆಟವಾಗಿದೆ.

ಅಪ್ಪಪ್ ಮಳ್ಳೇ : ಉತ್ತರ ಕನ್ನಡದ ತುಳಿದಾಟದ ಒಂದು ಬಗೆ.

ಅಪ್ಪಳೇ ಮಾವಳೇ : ಉತ್ತರ ಕನ್ನಡದ ತುಳಿದಾಟದ ಒಂದು ಬಗೆ.

ಅಪ್ಪೀಟ್ಟು ಆಟ : ಮೈಸೂರು ಪರಿಸರದ ಬುಗುರಿ ಆಟದ ಒಂದು ಬಗೆ.

ಅಪ್ಳೆ ತುಪ್ಳೇ : ಉತ್ತರ ಕನ್ನಡದ ಹುಡುಕುವ ಆಟದ ಒಂದು ಬಗೆ.

ಅಪ್ಪೆದೊಪ್ಪೆ : ಉತ್ತರ ಕನ್ನಡದ ಎಳೆದಾಟದ ಒಂದು ಬಗೆ.

ಅಪ್ಪೆನ್ ತುಪ್ಪನ್ : ಉತ್ತರ ಕನ್ನಡದ  ಬೆನ್ನಟುವ ಆಟದ ಒಂದು ಬಗೆ.

ಅಮುತ್ ಗುಮುತ್ನಾಟ : ಮೈಸೂರು, ಮಂಡ್ಯ ಭಾಗದಲ್ಲಿ ಆಡುವ ಅವಿತುಕೊಳ್ಳುವ ಆಟದ ಒಂದು ಬಗೆ.

ಅರ್ಗೋಲು : ಮೈಸೂರು ಪರಿಸರದ ಕೋಲು ತಳ್ಳುವ ಆಟದ ಒಂದು ಬಗೆ.

ಅಲೀರ್ಗುಡುಗುಡು : ಮಂಡ್ಯ ಪರಿಸರದಲ್ಲಿ ಗಂಡುಮಕ್ಕಳಾಡುವ ಆಟ.

ಅಳ್ಗುಳಿ ಮಣೆ : ಹಳೇ ಮೈಸೂರು ಪ್ರದೇಶದಲ್ಲಿ ಹುಣಸೆ ಬೀಜಗಳನ್ನು ಬಳಸಿ ಗುಳಿ ಇರುವ ಮಣೆಗಳಲ್ಲಿ ಕಾಳು ತುಂಬುವ  ಆಟದ ಒಂದು ಬಗೆ.

ಅಳ್ಳುಮನೆಯಾಟ : ಮೈಸೂರು ಪರಿಸರದಲ್ಲಿರುವ ಒಂದು ಆಟ, ಇತರೆಡೆಯ ಅಳ್ಗುಳಿ ಮನೆ, ಚೆನ್ನೆ ಮಣೆ ಆಟದ ಮಾದರಿಯ ಆಟ.

ಆನಿಯಾಟ : ಬೆಳಗಾಂವ, ಬೀದರ್ ಪರಿಸರದಲ್ಲಿ ಮಕ್ಕಳಿಗೆ ಆಡಿಸುವ ಒಂದು ಆಟ.

ಆನೆಮನೆ : ಬಳ್ಳಾರಿ ಪರಿಸರದ ಹರಳಾಟದ ಒಂದು ಬಗೆ.

ಆನೇಕಟ್ಟೋ ಆಟ : ತುಮಕೂರು ಜಿಲ್ಲೆಯ, ಶಿರಾ ಹುಳಿಯಾರು ಪ್ರದೇಶದಲ್ಲಿ ಚಿಕ್ಕ ಅಂಕಣ ಬರೆದು ಸಣ್ಣಕಲ್ಲುಗಳನ್ನು ಬಳಸಿ ಆಡುವ ಆಟ. ಇತರೆಡೆ ಆಡುವ ಹುಲಿಕುರಿ, ಹುಲಿಕಟ್ಟೋ ಆಟದ ಮಾದರಿಯನ್ನು ಹೋಲುತ್ತದೆ.

ಆನ್ಬಂತಾನೆ : ಉತ್ತರ ಕನ್ನಡದ  ಅನುಕರಣದ ಆಟಗಳಲ್ಲಿ ಒಂದು ಬಗೆ.

ಆರಾರಾಟ : ಮೈಸೂರು ನಗರದ ಬುಗುರಿ ಆಟದ ಒಂದು ಬಗೆ ಸೋತ ವ್ಯಕ್ತಿಯ ಬುಗುರಿಗೆ ಈ ಆಟದಲ್ಲಿ ಗುನ್ನ ಹೊಡೆಯಲಾಗುತ್ತದೆ.

ಇಟ್ಟೀನ್ ಆಟ : ಕಲ್ಲಿನ ಮೇಲೆ ಮಾತ್ರ ಕೋಲಿಟ್ಟು ಹಿಡಿಯಲು ಬರುವರನ್ನು ತಪ್ಪಿಸುತ್ತಾ ಓಡಾಡುವ ಕಡ್ಡಿ ಆಟದ ಬಗೆ ಯಾದಗೀರ ಪ್ರದೇಶದಲ್ಲಿ ಆಡುತ್ತಾರೆ.

ಇಟ್ಟುಇಟ್ಟುಗುಂಜಿ : ಉತ್ತರ ಕನ್ನಡದ  ಅನುಕರಣದ ಆಟದ ಒಂದು ಬಗೆ.

ಇಬ್ಬರಮುಟ್ಟು : ದಕ್ಷಿಣ ಕನ್ನಡದ ಒಂದು ಹೊರಾಂಗಣ ಆಟ.

ಇಸ್ಟಾಪ್ : ಉತ್ತರ ಕರ್ನಾಟಕದ ಗುಳ್ಳವ್ವನ ಆರಾಧನೆಯ ವಿಸರ್ಜನೆಯ ಸಂದರ್ಭದಲ್ಲಿಯೂ ಬೇರೆ ಸಂದರ್ಭದಲ್ಲಿಯೂ  ಆಡುವ ಆಟ.

ಇಷ್ಟೋಪ್ ಆಟ : ಬೆಳಗಾಂವ, ಬೀದರ್ ಕಡೆ ಒಂದು ಹೊರಾಂಗಣ ಆಟ.

ಉಂಗುರದಾಟ : ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಆಡುವ ಆಣೆ ಕಲ್ಲಾಟದ ಒಂದು ಬಗೆ.

ಉಂಗುರದಾಟ : ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಾಟ.

ಉಡಾಮಣೆ : ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ತೇಯ್ದ ಹುಣಸೆ ಬೀಜಗಳನ್ನು ಬಳಸಿ ಪಗಡೆ ಮಾದರಿಯಲ್ಲಿ ನಕ್ಷೆ ಬರೆದು ಜೂಜಿಗಾಗಿ ಆಡುವ ಆಟ.

ಉಡುಪಿಗೋಲಿಯಾಟ : ಹೊಸದುರ್ಗ ಪರಿಸರದ ಗೋಲಿ ಆಟದ ಒಂದು ಬಗೆ.

ಉಪ್ಪ್ ಕಡ್ಡಿ : ತುಮಕೂರು ಪರಿಸರದಲ್ಲಿ ಮಣ್ಣಿನಲ್ಲಿ ಬಚ್ಚಿಟ್ಟ ಕಡ್ಡಿಯನ್ನು ಹುಡುಕಾಡುವ ಆಟದ ಒಂದು ಬಗೆ.

ಉಪ್ಪ್ ಕೊಡೋ ಆಟ : ಹೊಸದುರ್ಗ, ಪರಿಸರದಲ್ಲಿ ಆಡುವ ವಸ್ತುಗಳನ್ನು ಮರಳಿನಲ್ಲಿ ಬಚ್ಚಿಟ್ಟು ಹುಡುಕಾಡುವ ಆಟ.

ಉಪ್ಪಾಟ : ಬೀದರ್ ಮತ್ತು ಮೈಸೂರು ಪ್ರದೇಶದ ಕೆಲವು ಬುಡಕಟ್ಟು ಮಕ್ಕಳು ಮತ್ತು ಬಳ್ಳಾರಿ ಪ್ರದೇಶದ ಹಗರಿಬೊಮ್ಮನಹಳ್ಳಿ ಕೊಟ್ಟೂರು ಪರಿಸರದಲ್ಲಿ ಮಕ್ಕಳು ಆಡುವ ಆಟ.

ಉಪ್ಪುಂಡು ಉಪ್ಪುಂಡು ಉಪ್ಪುಂಡೇ : ಮೈಸೂರು ಪ್ರದೇಶದಲ್ಲಿ ಉಪ್ಪಿಗೆ ಸಂಬಂಧಿಸಿ ಕಡ್ಡಿಯನ್ನು ಬಚ್ಚಿಡುವ ಒಂದು ಬಗೆಯ ಆಟ.

ಉಪ್ಪುಗೋಣಿ : ದಕ್ಷಿಣ ಕನ್ನಡದ ಮಕ್ಕಳು ಆಡುವ ಒಂದು ಹೊರಾಂಗಣ ಆಟ. 

ಉಪ್ಪುಪ್ಪಾಟ : ಉತ್ತರ ಕನ್ನಡದಲ್ಲಿನ ಸುತ್ತಾಟದ  ಒಂದು ಬಗೆ.

ಉಪ್ಪುಪ್ಪುಕಡ್ಡಿ : ಮಂಡ್ಯ ಮತ್ತು ಮೈಸೂರು ಪರಿಸರದ ಒಂದು ಮಕ್ಕಳ ಆಟ.

ಉಪ್ಪುರ್ ಪೆಟ್ಲ್ : ಕೋಲಾರ ಪರಿಸರದ ಮಕ್ಕಳಾಡುತ್ತಿದ್ದ ಉಪ್ಪಾಟದ ಒಂದು ಬಗೆ.

ಊಪುರಂಗಿ ಊರುರಂಗಿ : ಉತ್ತರ ಕನ್ನಡದ ತುಳಿದಾಟದ ಒಂದು ಬಗೆ.

ಎಂಟ್ಗಾಲ್ ಗುಂಟೆ : ಮೈಸೂರು ಪರಿಸರದ  ಗೋಲಿ ಆಟದ ಒಂದು ಬಗೆ.

ಎಣ್ಣೆಗಾಣದಾಟ : ಬಳ್ಳಾರಿ ಪ್ರದೇಶದಲ್ಲಿ ಹುಡುಗರು ಆಡುವ ಆಟ.

ಎತ್ತಗಲ್ಲು : ಶಿಕಾರಿಪುರ, ಸಾಗರ ಪರಿಸರದಲ್ಲಿ ಹೆಣ್ಣು ಮಕ್ಕಳಾಡುವ ಆಣೆಕಲ್ಲಾಟದ ಒಂದು ಬಗೆ.

ಏಣುಗೇಣು : ಮೈಸೂರು ಪರಿಸರದ  ಗೋಲಿ ಆಟದ ಒಂದು ಬಗೆ.

ಏಟೊಡೆದ್ ಗೇಣಾರು : ಮೈಸೂರು ನಗರದ ಗೋಲಿ ಆಟದ ಒಂದು ಬಗೆ.

ಏತ್ ಗಲ್ಲು : ತೀರ್ಥಹಳ್ಳಿ ಪರಿಸರದಲ್ಲಿ ಹೆಣ್ಣು ಮಕ್ಕಳು ಕಲ್ಲುಗಳನ್ನು ಬಳಸಿ ಆಡುವ ಒಳಾಂಗಣ ಆಟ. ಇತರೆಡೆ ಬಹುಪಾಲು ಆಣೆಕಲ್ಲು, ಗುಚ್ಚಿ ಆಟವೆಂದು ಪ್ರಸಿದ್ಧಿಯಾಗಿದೆ.

ಐಸ್ ಪೈಸ್ : ಮಂಡ್ಯ, ಮೈಸೂರಿನಲಿ ಹೆಣ್ಣುಮಕ್ಕಳು ಆಡುವ ಆಟ.

ಒಂಟಿಜೋಡಿ : ಮೈಸೂರು ಪರಿಸರದ ಜೂಜಾಟದ ಒಂದು ಬಗೆ. ತೇಯ್ದ ಹುಣಸೆ ಬೀಜಗಳನ್ನು ಬಳಸುತ್ತಾರೆ.

ಒಂಭತ್ತಳ್ಳಿನ ಮನೆಆಟ : ಯಾದಗೀರ ಪರಿಸರದ ಹರಳಿನಾಟ ಒಂದು ಬಗೆ.

ಕಂಚಿಗೋಲಿ : ಹೊಸದುರ್ಗ ಪರಿಸರದ  ಗೋಲಿ ಆಟದ ಒಂದು ಬಗೆ.

ಕಂಚಿನ ಆಟ : ಬೀದರ್ ಪರಿಸರದಲ್ಲಿ ಹೆಣ್ಣು ಮಕ್ಕಳು ಆಡುವ ಮುಟ್ಟುವ ಆಟದ ಒಂದು ಬಗೆ.

ಕಂಬದಾಟ : ಕರ್ನಾಟಕ ಎಲ್ಲಾ ಕಡೆಯೂ ಬೇರೆ ಬೇರೆ ವಿಧಾನ ನಿಯಮಗಳನ್ನು ಅನುಸರಿಸಿ ಹೆಣ್ಣು ಮಕ್ಕಳು ಆಡುವ ಒಳಾಂಗಣ ಆಟದ ಒಂದು ವಿಧ.

ಕಂಬದಾಟ : ಉತ್ತರ ಕನ್ನಡದ ಸುತ್ತಾಟದ ಒಂದು ಬಗೆ.

ಕುಂಟಕುಂಟ ಕೂರಿಗೆ : ಉತ್ತರ ಕನ್ನಡ ಕರಾವಳಿ ಪ್ರದೇಶದಲ್ಲಿ ಹುಡುಗರು ಆಡುವ ಒಂದು ಆಟದ ಹೆಸರು.

ಕುಂಟನ ತಂಟೆ : ದಕ್ಷಿಣ ಕನ್ನಡದ ಒಂದು ಹೊರಾಂಗಣ ಆಟ.

ಕುಂಟ್ ಮುಟ್ : ಬೀದರ್ ಪರಿಸರದಲ್ಲಿ ಕುಂಟುತ್ತಾ ಮುಟ್ಟುವ ಮಕ್ಕಳ ಆಟ.

ಕುಂಟಲ್ಪಿ : ಬಿಜಾಪುರ ಪರಿಸರದ ಹೆಣ್ಣು ಮಕ್ಕಳ ಕುಂಟಾಟದ ಒಂದು ಬಗೆ.

ಕುಂಟಾಟ ಮನೆ : ಕೊಳ್ಳೇಗಾಲ ಪರಿಸರದಲ್ಲಿ ಹೆಣ್ಣು ಮಕ್ಕಳು ಅಂಕಣ ಬರೆದು ಆಡುವ ಕುಂಟಾಟದ ಒಂದು ಬಗೆ.

ಕುಂಟಾಬಿಲ್ಲೆ : ಕರ್ನಾಟಕದ ಎಲ್ಲಾ ಕಡೆ ಇರುವ ಕುಂಟಾಟದ ಒಂದು ಬಗೆ. ತೀರ್ಥಹಳ್ಳಿ ಪರಿಸರದ ಹೆಣ್ಣು ಮಕ್ಕಳು ಆಡುವ ಆಟ ಇತರೆಡೆ, ಕುಂಟಾ ಹಲಪಿ, ಕುಂಟೋ ಬಿಲ್ಲೆ ಹೆಸರುಗಳಿವೆ.

ಕುಂಟಾ ಪಿಲ್ಲಿ : ಕರ್ನಾಟಕದ ಎಲ್ಲಾ ಕಡೆ ಇರುವ ಕುಂಟಾಟದ ಒಂದು ಬಗೆ.

ಕುಂಟ್ಲಿಪಿ : ಕರ್ನಾಟಕದ ಎಲ್ಲಾ ಕಡೆ ಇರುವ ಕುಂಟಾಟದ ಒಂದು ಬಗೆ.

ಕುಂಟೇ ಕುಂಟಕ್ಕ ಆಟ : ರಾಮನಗರ, ಕನಕಪುರ ಪರಿಸರದಲ್ಲಿ ವಿಶೇಷವಾಗಿ ಚಿಕ್ಕಮಕ್ಕಳಿಗೆ ಸುತ್ತ ಕೂರಿಸಿಕೊಂಡು ಹಿರಿಯರು ಆಡಿಸುವ ಆಟ. ಇತರೆಡೆ ದೋಸೆ ಹುಯ್ಯುವಾಟ, ತುಪ್ಪ ಕಾಯಿಸೋ ಆಟ ಇತರೆ ಹೆಸರುಗಳಿಂದು ಕರೆಯುತ್ತಾರೆ. ಈ ಬಗೆಯ ಆಟಗಳಲ್ಲಿ ಪ್ರತಿ ಮಗುವಿನ ಕೈ ಚಿವುಟುವಾಗ ವಿಶಿಷ್ಟವಾದ ನಿಗದಿತ ಪ್ರಾಸಬದ್ಧ ಪದಗಳನ್ನು ಉಚ್ಚರಿಸಿಸುತ್ತಾರೆ.

ಕುಂಬಳಕಳ್ಳ : ಉತ್ತರ ಕನ್ನಡದ ಅನುಕರಣದ ಆಟ.

ಕುಂಬಳಕಾಯಿ ಆಟ : ಮೈಸೂರು ಪ್ರದೇಶದ ಹುಡುಗರಾಡುವ ಹೋರುವ ಆಟ.

ಕಕ್ಕೆಗಿಳಿ : ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಹುಡುಗಿಯರು ಆಡುವ ಆಟ. ಹಿಡಿಯುವ ಆಟದ ಒಂದು ಬಗೆ.

ಕಟ್ಟೇಮನಿ : ಬಳ್ಳಾರಿ ಪರಿಸರದ ಹುಣಿಸೇ ಬೀಜಗಳನ್ನು ತೇಯ್ದು, ಮನೆ ಬರೆದು ಆಡುವ ಆಟ ಬೇರೆ ಭಾಗಗಳ ಚೌಕಾಬಾರ ಆಟದ ಮಾದರಿಯ ಆಟ.

ಕಡ್ಡಿಯಾಟ : ಉತ್ತರ ಕರ್ನಾಟಕದ ಗುರಿಯಾಟದ ಒಂದು ಬಗೆ.

ಕಣ್ಣಿನಾಟ : ಬಳ್ಳಾರಿ ಪ್ರದೇಶದ ಗುಚ್ಚಿ/ಆಣೆಕಲ್ಲಾಟದ ಒಂದು ಬಗೆ ಎಡಗೈನ ಎರಡು ಬೆರಳನ್ನು ಕಣ್ಣಿನ ಆಕಾರದಲ್ಲಿ ಇಟ್ಟು ಆ ಬೆರಳುಗಳ ನಡುವೆ ಕಲ್ಲುಗಳನ್ನು ತೂರುತ್ತಾರೆ.

ಕಣ್ಣು ಕಟ್ಟಾಟ : ಮಂಡ್ಯ ಪರಿಸರದ ಮಕ್ಕಳಾಟದ ಒಂದು ಬಗೆ.

ಕಣ್ಣು ಮುಚ್ಚಣಿಕೆ : ಉತ್ತರ ಕನ್ನಡದ ಒಂದು ಆಟ. ಇತರೆಡೆ ಕಣ್ಣಾಮುಚ್ಚಾಲೆ ಎಂಬ ಹೆಸರಿದೆ.

ಕಣ್ಣು ಮುಚ್ಚಾಲೆ : ಕರ್ನಾಟಕದ ಎಲ್ಲಾ ಕಡೆ ಬೇರೆ ಬೇರೆ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಹಿಡಿದಾಟದ ಒಂದು ಬಗೆ.

ಕಣ್ಣೆಕಟ್ಟೇಕಾರೆ ಮುಳ್ಳೇ : ಉತ್ತರ ಕನ್ನಡದ ಹುಡುಕಾಟದ ಒಂದು ಬಗೆ.

ಕತ್ತರಿಯಾಟ : ಮೈಸೂರು ಪ್ರದೇಶದ ಅಣ್ಣೆ ಕಲ್ಲಾಟದ ಒಂದು ಬಗೆ.

ಕತ್ತಿ ಆಟ : ಕುಷ್ಟಗಿ ಪರಿಸರದ ಗೋಲಿ ಆಟದ ಒಂದು ಬಗೆ.

ಕತ್ತೆ ಆಟ : ಮೈಸೂರು ಪರಿಸರದ ಅಳ ಗುಳಿಮಣೆಯಾಟದಲ್ಲಿ ನಾಲ್ಕು ಗುಳಿಗಳಲ್ಲಿ ಮಾತ್ರ ಆಡುವ ಆಟ.

ಕಪ್ಪೆ ಆಟ : ಕರಾವಳಿಯಲ್ಲಿ ಕಪ್ಪೆಯಂತೆ ಕುಪ್ಪಳಿಸುತ್ತಾ ಆಡುವ ಒಂದು ಆಟ.

ಕಪ್ಪೆಆಟ : ಬಳ್ಳಾರಿ ಪರಿಸರದಲ್ಲಿ ಹೆಣ್ಣು ಮಕ್ಕಳು ಆಡುವ ಆಣೆಕಲ್ಲು, ಗುಚ್ಚಿ ಆಟದ ಒಂದು ಬಗೆ. ಎರಡು ಬೆರಳನ್ನು ಕಪ್ಪೆ ಆಕಾರದಲ್ಲಿ ಇಟ್ಟು ಕಲ್ಲುಗಳನ್ನು ಆ ಬೆರಳುಗಳ ನಡುವೆ ತೂರುತ್ತಾರೆ.

ಕಪ್ಪೆಕಾಲು : ದಕ್ಷಿಣ ಕನ್ನಡದ ಒಂದು ಹೊರಾಂಗಣ ಆಟ.

ಕಪ್ಪೆಲಾಗ : ಕರಾವಳಿಯಲ್ಲಿ ಕಪ್ಪೆಯಂತೆ ಕುಪ್ಪಳಿಸುತ್ತಾ ಆಡುವ ಒಂದು ಆಟ.

ಕರುಬರುವ ಆಟ : ಉತ್ತರ ಕರ್ನಾಟಕದ ಹರಳಾಟದ ಒಂದು ಬಗೆ.

ಕಲ್ಲಹರಳಿನ ಆಟ : ಬೀದರ್ ಪರಿಸರದ ಹೆಣ್ಣುಮಕ್ಕಳು ಆಡುವ ಒಳಾಂಗಣ ಆಟ ಇತರೆಡೆ ಆಣೆಕಲ್ಲಾಟ, ಹರಳಾಟ ಇತ್ಯಾದಿ ಹೆಸರುಗಳಿಂದ ಪರಿಚಿತ.

ಕಲ್ಲಾಟ : ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಬೇರೆ ಬೇರೆ ಬೇರೆ ವಿಧಾನ ನಿಯಮಗಳನ್ನು ಅನುಸರಿಸಿ ಆಡುವ ಆಟ.

ಕಲ್ಲುಕುಟಿಕುಟಿ : ಮಂಡ್ಯ ಪರಿಸರದ ಮಕ್ಕಳು ಆಡುವ ಕೋಲು ಎಸೆಯುವ ಆಟ.

ಕಲ್ಲುಕುಟುಕುಟ : ರಾಮನಗರ ಜಿಲ್ಲೆಯ ಕನಕಪುರ ಪರಿಸರದಲ್ಲಿ ಹೆಣ್ಣು ಮಕ್ಕಳು  ಗಂಡು ಮಕ್ಕಳು ಆಡುವ ಆಟ. ಇತರೆಡೆ ಕಡ್ಡಿ ಆಟ, ಜೀಕೋ ಆಟ ಎಂಬ ಹೆಸರುಗಳಿವೆ.

ಕವಡಿ ಆಟ : ಬೀದರ್ ಪರಿಸರದಲ್ಲಿ ಐದು ಕವಡೆ ಬಳಸಿ ಆಡುವ ಒಳಾಂಗಣ ಆಟ.

ಕಳಸದಾಟ : ಉತ್ತರ ಕನ್ನಡದ ಅನುಕರಣದ ಆಟ.

ಕಳ್ಳಮನೆ ಆಟ : ಸಿಂಧನೂರು ಪರಿಸರದ ಕಣ್ಣಾಮುಚ್ಚಾಲೆ ಆಟದ ಒಂದು ಬಗೆ.

ಕಳ್ಳಾಟ : ಉತ್ತರ ಕರ್ನಾಟಕದ  ಹುಡುಕುವ ಆಟದ ಒಂದು ಬಗೆ.

ಕಾಗೆ ಗಿಳಿ : ಕರಾವಳಿ ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಆಡುವ ಮುಟ್ಟುವ ಆಟ (ಅಸ್ಪೃಶ್ಯತೆಯನ್ನು ಪ್ರತಿನಿಧಿಸುತ್ತದೆ)

ಕಾಗೆಗಿಳಿ ಆಟ : ದಕ್ಷಿಣ ಕನ್ನಡದ ಆಟ. ಕೈಯನ್ನು ಮುಷ್ಟಿಯಂತೆ ಹಿಡಿದು ಮಧ್ಯದ ಕಿಂಡಿಯಲ್ಲಿ ಉಗುಳುವುದು ಉಗುಳು ಕೈತಾಕಿದರೆ ಕಾಗೆ. ಇಲ್ಲದಿದ್ದರೆ ಗಿಳಿ.

ಕಾಟದಾಟ : ಬೀದರ್ ಪರಿಸರದ ಮಕ್ಕಳಾಟದ ಒಂದು ಬಗೆ.

ಕಾನ್ಕಾನ್ಕತ್ತೆತ್ತಿ : ಮೈಸೂರು ಪ್ರದೇಶದಲ್ಲಿ ಹುಡುಗರು ಆಡುವ ಆಟದ ಒಂದು ಬಗೆ ಇಬ್ಬರು ಸೇರಿ ಕೈಗಳ ಮೇಲೆ ಒಬ್ಬರನ್ನು ಹೊರುವ ಆಟ.

ಕಾಲಕಟ್ಟಿಗೆ : ಗುಲ್ಬರ್ಗಾ ಪ್ರದೇಶದ ಬಗರಿ ಆಟದ ಒಂದು ಬಗೆ.

ಕಾರವಾರ ಆಟ : ಉತ್ತರ ಕನ್ನಡದ ಕುಂಟಾಟದ ಒಂದು ಬಗೆ.

ಕಾರೇಬೀರೇ : ಮೈಸೂರು ಪರಿಸರದ ಗೋಲಿ ಆಟದ ಒಂದು ಬಗೆ.

ಕಾಲಾಟ : ಬಳ್ಳಾರಿ ಪ್ರದೇಶದ ಕುಂಟೇಬಿಲ್ಲೆ ಆಟದ ಒಂದು ಬಗೆ.  ಕಾಲಿನ ಹೆಬ್ಬೆರಳಿನ ಮೇಲೆ ಬಿಲ್ಲೆಯನ್ನಿಟ್ಟು ಮನೆ ದಾಟುವ ಆಟ.

ಕಾಲುದಾಟುವ ಆಟ : ಬೀದರ್ ಪರಿಸರದ ಹೆಣ್ಣುಮಕ್ಕಳು ಆಡುವ ಒಳಾಂಗಣ ಆಟ.

ಕಾಲ್ಕಣಿ ಆಟ : ರಾಯಚೂರು, ಯಾದಗೀರ ಪರಿಸರದಲ್ಲಿ ಇತರ ಕಡೆಗಳಲ್ಲಿ ಆಡುವ ಮರಕೋತಿ ಆಟದ ಮಾದರಿಯ ಆಟ.

ಕಾಶಿಮಣೆಯಾಟ : ಹರಳು ಮನೆಯಾಟದ ಒಂದು ಬಗೆ. ಬೆಂಗಳೂರು ಉತ್ತರ ಕನ್ನಡ ಪರಿಸರದಲ್ಲಿ ಆಡುತ್ತಾರೆ, ಆಟಗುಳಿ, ಮಣೆಯಾಟ, ಅಳಗುಳಿ, ಚನ್ನಮಣೆ ಇತರೆ ಹೆಸರುಗಳೂ ಇವೆ.

ಕಾಶಿ ಮನೆಯಾಟ : ಮೈಸೂರು ಪರಿಸರದಲ್ಲಿ ಆಡುವ ಅಳ್ಳು ಮನೆಯಾಟದ ಒಂದು ಪ್ರಕಾರ.

ಕಾಳ್ಮಣೆ ಆಟ : ತುಮಕೂರು ಪರಿಸರದಲ್ಲಿ ಹುಣಸೆ ಬೀಜಗಳನ್ನು ಬಳಸಿ ಆಡುವ ಆಟ. ಇತರೆಡೆ ಅಳಗುಳಿಮಣೆ, ಚೆನ್ನೆಮಣೆ ಆಟ ಎಂದು ಜನಪ್ರಿಯವಾಗಿದೆ.

ಕಿಟ್ಟೆಆಟ : ಕೊಳ್ಳೇಗಾಲ ಪರಿಸರದ ಒಂದು ಆಟ. ಗೋಲಿ, ಗೆಜ್ಜುಗದ ಆಟದ ಮಾದರಿಯಲ್ಲಿ ಕಿಟ್ಟೆ ಕಾಯಿಗಳನ್ನು ಬಳಸಿ ಆಡುತ್ತಾರೆ.

ಕುಂಟುಮುಟ್ಟಾಟ : ಶಿಕಾರಿಪುರ, ಸಾಗರ ಪರಿಸರದ ಕುಂಟಾಟದ ಒಂದು ಬಗೆ.

ಕುಕ್ಕರು ಬಸವಿ : ಮಂಡ್ಯ ಪರಿಸರದಲ್ಲಿ ಹೆಣ್ಣು ಮಕ್ಕಳು ಆಡುವ ಆಟ.

ಕುಟ್ಟಿ ದೊಣ್ಣೆ : ದಕ್ಷಿಣ ಕನ್ನಡ ಭಾಗದಲ್ಲಿ ಹುಡುಗರು ಆಡುವ ಒಂದು ಆಟ. ಇತರೆಡೆ ಚಿಣ್ಣಿಕೋಲು, ಗಿಲ್ಲಿದಾಂಡು ಎಂಬ ಹೆಸರುಗಳಿವೆ.

ಕುಡಿಕೆ ಆಟ : ಬಳ್ಳಾರಿ ಪ್ರದೇಶದ ಕುಂಟೇ ಬಿಲ್ಲೆ ಆಟದ ಒಂದು ಬಗೆ.  ಕೈಯನ್ನು ಮುಷ್ಟಿ ಮಾಡಿ ಕುಡಿಕೆಯಂತೆ ಹಿಡಿದು ಅದರ ಮೇಲೆ ಬಿಲ್ಲೆಯನ್ನು ಇಟ್ಟು ಮನೆದಾಟುವ ಆಟ.

ಕುತ್ತಿಮರಿ ಆಟ : ಬೆಳಗಾಂವ ಕಡೆಯ ಒಂದು ಮಕ್ಕಳಾಟ.

ಕುದುರೆ ಯಾಟ : ಮಾದಗೀರ ಪರಿಸರದಲ್ಲಿ ಹುಡುಗರು ಆಡುವ ಆಟ.

ಕುಪ್ಪನ್ನಾಟ : ಉತ್ತರ ಕನ್ನಡದ ಅನುಕರಣದ ಆಟ.

ಕೂರ್ ಕೂರ್ ಆಟ : ಉತ್ತರ ಕನ್ನಡದ  ತುಳಿದಾಟದ ಒಂದು ಬಗೆ.

ಕೃಷ್ಣನಾಟ : ಬಳ್ಳಾರಿ ಪ್ರದೇಶದ ಕುಂಟೇಬಿಲ್ಲೆ ಆಟದ ಒಂದು ಬಗೆ.

ಕೃಷ್ಣರುಕ್ಮಿಣಿ : ರಾಮನಗರ, ಕನಕಪುರ ಪರಿಸರದಲ್ಲಿ ಹೆಣ್ಣು ಮಕ್ಕಳಾಡುವ ಕುಂಟೋಬಿಲ್ಲೆ ಆಟದ ಒಂದು ಬಗೆ.

ಕೈಮಕಡೆ ಆಟ : ದಕ್ಷಿಣ ಕರ್ನಾಟಕ ಸೇರಿ ಬಹುಪಾಲು ಪ್ರದೇಶಗಳಲ್ಲಿ ಸಾಧನಾರಹಿತವಾಗಿ ಮಕ್ಕಳು ಆಡುವ ಒಳಾಂಗಣ ಆಟ. ವೃತ್ತಾಕಾರದಲ್ಲಿ ಮಕ್ಕಳು ನೆಲಕ್ಕೆ ಕೈಗಳನ್ನು ಊರಿ ಕೈಗಳನ್ನು ಮಡಚುತ್ತಾ ಆಡುವ ಆಟ.

ಕೊಕ್ಕೆಆಟ : ಹುಳಿಯಾರು ಪರಿಸರದ  ಕಲ್ಲು ತಳ್ಳುವ ಆಟ.

ಕೊಪ್ಪರಗಡಿಗೆ : ಉತ್ತರ ಕನ್ನಡದ  ಬೆನ್ನುಟ್ಟುವ ಆಟದ ಒಂದು ಬಗೆ.

ಕೋಡಗನ ಆಟ : ಉತ್ತರ ಕನ್ನಡದ  ಬೆನ್ನುಟ್ಟುವ ಆಟದ ಒಂದು ಬಗೆ.

ಕೋತಿ ಕೊಮ್ಮಾ : ಕೋಲಾರ ಪರಿಸರದ ಹಿಡಿದಾಟದ ಒಂದು ಬಗೆ ಇತರೆಡೆ ಮರಕೋತಿ ಹೆಸರಿನಿಂದ ಪರಿಚಿತ ಆಟ.

ಕೋರದ ಕಟ್ಟೆ : ದಕ್ಷಿಣ ಕನ್ನಡ ಜಿಲ್ಲೆಯ ಕೋಳಿ ಕಾದಾಟದ ಒಂದು ಬಗೆ.

ಕೋಲು ಉಗ್ಗೋ ಆಟ : ತುಮಕೂರಿನ ಶಿರಾ ಪರಿಸರದಲ್ಲಿ ಆಡುವ ಕಡ್ಡಿ ಆಟದ ಒಂದು ಬಗೆ. ಇತರೆಡೆ ಕಡ್ಡಿ ಆಟ, ಜೀಕೋ ಆಟ ಎಂದು ಕರೆಯುತ್ತಾರೆ.

ಕೋಳಿ ಅಂಕ : ದಕ್ಷಿಣ ಕನ್ನಡದಲ್ಲಿ ಕೋಳಿಗಳನ್ನು ಕಾಳಗಕ್ಕೆ ಬಿಟ್ಟು ಜೂಜಾಡುವ ಒಂದು ಆಟ.

ಕೋಳಿ ಕಾದಾಟ : ದಕ್ಷಿಣ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೋಳಿಗಳ ಕಾಲಿಗೆ ಬಾಳ್ (ಕತ್ತಿ) ಕಟ್ಟಿ ಪರಸ್ಪರ ಕಾದಾಡಿಸುವ ಆಟ. ಇದೊಂದು ಬಗೆಯ ಜೂಜಿನ ಆಟ.

ಕೋಳಿಕೋತಿ ಆಟ : ಉತ್ತರ ಕನ್ನಡದ ಮಕ್ಕಳಾಟದ ಒಂದು ಬಗೆ.

ಕೋಳಿ ಪಡೆ : ಕರಾವಳಿ ಕರ್ನಾಟಕ, ಮಲೆನಾಡು ಭಾಗಗಳಲ್ಲಿ ನಡೆಯುವ ಕೋಳಿ ಜೂಜಿನ ಆಟದ ಬಗೆ.

ಖಾಲಿಪೇಂದ : ಮೈಸೂರು ಪರಿಸರದ ಗೋಲಿ ಆಟದ ಒಂದು ಬಗೆ.

ಗಂಜಿಕುಡಕ ಆಟ : ಚಿತ್ರದುರ್ಗ, ಹೊಸದುರ್ಗ ಪರಿಸರದ ಚಿಣ್ಣಿ ಕೋಲು ಆಟದ ಒಂದು ಬಗೆ.

ಗಂಜೀ ಕುಣಿಸ್‌ : ಮೈಸೂರು ನಗರದ ಚಿಣ್ಣಿದಾಂಡು ಆಟದ  ಒಂದು ಬಗೆ.

ಗುಂಡಾಟ : ರಾಮನಗರ, ಕನಕಪುರ ಪರಿಸರದ ಬುಗರಿ ಆಟದ ಒಂದು ಬಗೆ.

ಗಟ್ಟಬಾರಾ : ತೇಯ್ದು ನಾಲ್ಕು ಹುಣಸೇ ಬೀಜ ಅಥವಾ ಕವಡೆ, ನೆಲದಲ್ಲಿ ಒಂದು ಇಪ್ಪತ್ತೈದು ಚೌಕಾಕಾರದ ಮನೆಗಳುಳ್ಳ ನಕ್ಷೆ, ಐದು ಕಾಯಿ ಇಡುವ ಕಟ್ಟೆ ಮನೆ ಬಳಸಿ ಇಬ್ಬರು ಅಥವಾ ನಾಲ್ವರು ಆಡುವ ಆಟ. ಇದನ್ನು ಚೌಕಾಬಾರ, ಚಾವಿ ಆಟ, ಗಟ್ಟದ ಮನೆ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದ ಎಲ್ಲಾ ಕಡೆಯೂ ಈ ಆಟ ಪ್ರಚಲಿತದಲ್ಲಿದೆ.

ಗಟ್ಟಮನೆ : ಮೈಸೂರು ನಗರದಲ್ಲಿ ಚೌಕಾಬಾರ ಆಟಕ್ಕೆ ಗಟ್ಟಮನೆ ಆಟ ಎಂದೂ ಕರೆಯುವರು. ಆದರೆ ಈ ಆಟದಲ್ಲಿ ಐದು ಗಟ್ಟದ ಮನೆಗಳು ಮಾತ್ರ ಇರುತ್ತವೆ.

ಗಟ್ಟಾಟ : ಕೊಳ್ಳೇಗಾಲ ಪರಿಸರದ ಒಂದು ಆಟ. ಇತರೆಡೆ ಚೌಕಾ ಬಾರ ಆಟ ಎನ್ನುತ್ತಾರೆ.

ಗಟ್ಟಾಬಾರ : ಮೈಸೂರು ಪರಿಸರದ ಚೌಕಾಬಾರ ಗಟ್ಟದಮನೆ ಆಟದ ಮಾದರಿಯ ಆಟವೇ ಆದರೂ ಇದರಲ್ಲಿ ಏಳುಮನೆಗಳಿರುತ್ತವೆ.

ಗಾರೆಚೆಂಡು : ಉತ್ತರ ಕನ್ನಡ ಚೆಂಡಾಟದ ಒಂದು ಬಗೆ.

ಗಿಚ್ಚಹೊಡೆ ಆಟ : ಬೀದರ್‌ ಪರಿಸರದ ಬುಗುರಿಯಾಟದ ಒಂದು ಪ್ರಕಾರ.

ಗಿಚ್ಚಿಕ್ಆಟ : ಬಳ್ಳಾರಿ, ಹೊಸಪೇಟೆ ಪರಿಸರದ ಬುಗುರಿ ಆಟದ ಒಂದು ಬಗೆ. ಇತರೆಡೆ ಗುನ್ನದಾಟ ಎಂದು ಕರೆಯುತ್ತಾರೆ.

ಗಿಡಗಿಡಮಂಗ್ಯಾ : ಉತ್ತರ ಕರ್ನಾಟಕದ ಆಟ. ಕೆಲವು ಆಚರಣಾತ್ಮಕ ಸಂದರ್ಭದಲ್ಲಿಯೂ ಸಾಮಾನ್ಯ ಸಂದರ್ಭದಲ್ಲಿಯೂ ಆಡುತ್ತಾರೆ. ಮರಕೋತಿ ಆಟದ ಮಾದರಿಯ ಆಟ.

ಗಿರ್ ಗಿರ್ ಪಂತ : ಉತ್ತರ ಕನ್ನಡದ ಗುರಿಯಾಟದ ಒಂದು ಬಗೆ.

ಗಿರಗಿಟ್ಟೆ : ಮಂಡ್ಯ ಪರಿಸರದಲ್ಲಿ ಹೆಣ್ಣು ಮಕ್ಕಳು ಆಡುವ ಆಟ.

ಗಿಲ್ಲಿ ಆಟ : ಮೈಸೂರು ಪರಿಸರದಲ್ಲಿ ಆಡುವ ಗಿಲ್ಲಿದಾಂಡು ಆಟಕ್ಕೆ ಗಿಲ್ಲಿ ಆಟ ಎಂದೂ ಕರೆಯುತ್ತಾರೆ.

ಗಿಲ್ಲಿಪಣಿ ಆಟ : ಬೀದರ್ ಪರಿಸರದ ಒಂದು ಆಟ. ಇತರೆಡೆ ಗಿಲ್ಲಿದಾಂಡು, ಚಿಣ್ಣಿಕೋಲು ಎಂಬ ಹೆಸರಿನಿಂದ ಪರಿಚಿತ ಆಟ.

ಗುಚ್ಚಿಆಟ : ಹಗರಿಬೊಮ್ಮನಹಳ್ಳಿ, ಕೊಳ್ಳೇಗಾಲ ಪರಿಸರದ ಹೆಣ್ಣುಮಕ್ಕಳ ಆಟ. ಅಣೆಕಲ್ಲು ಆಟದ ಒಂದು ವಿಧ.

ಗುಟಾರಿ ಆಟ : ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪರಿಸರದಲ್ಲಿ ಕತ್ತಲಲ್ಲಿ ಅವಿತುಕೊಳ್ಳುವ ಮಕ್ಕಳಾಟ.

ಗುಟ್ಟದ ಆಟ : ಉತ್ತರ ಕನ್ನಡದ ಗುರಿಯಾಟದ ಒಂದು ಬಗೆ.

ಗುಡುಗುಡುಚಂಡಕ್ಕೆ : ಉತ್ತರ ಕರ್ನಾಟಕದ ಎಳೆದಾಟದ ಒಂದು ಬಗೆ.

ಗುಣಿ ಆಟ : ಹಳೇ ಮೈಸೂರು ಪರಿಸರದ ಗೋಲಿ ಆಟದ ಒಂದು ಬಗೆ.

ಗುನ್ನದಾಟ : ರಾಮನಗರ, ಕನಕಪುರ ಪರಿಸರದ ಬುಗುರಿ ಆಟದ ಒಂದು ಬಗೆ.

ಗುನ್ನೆ ಆಟ : ಕೊಳ್ಳೆಗಾಲ ಪರಿಸರದ ಬುಗುರಿ ಆಟದ ಒಂದು ಬಗೆ.

ಗುಮ್ಮ ಆಟ : ಕುಷ್ಟಗಿ ಪರಿಸರದ ಚೆಂಡಾಟದ ಒಂದು ಬಗೆ.

ಗುಮ್ಚಿ ಆಟ : ಮೈಸೂರು ಪರಿಸರದಲ್ಲಿ ಗೆಜ್ಜುಗಗಳನ್ನು ಸಾಲಿನಲ್ಲಿ ಇಟ್ಟು ಅವಕ್ಕೆ ಚಿಕ್ಕದಾದ ಚಪ್ಪಟೆಯಾದ ಸಣ್ಣಕಲ್ಲಿನಿಂದ ಹೊಡೆದು ಗೆದ್ದುಕೊಳ್ಳುವ ಆಟ. (ಗುಮ್ಚಿ ಎಂದರೆ ಸಣ್ಣದಾದ ಚಪ್ಪಟೆ ಕಲ್ಲು)

ಗುಲುಗುಲುಗುಲಕ್‌ : ಉತ್ತರ ಕರ್ನಾಟಕದ ಸುತ್ತಾಟದ ಒಂದು ಬಗೆ.

ಗುಳ್ಳವ್ವನ ಆಟ : ಉತ್ತರ ಕರ್ನಾಟಕದ ಬಾಗಲಕೋಟೆ ಪರಿಸರದಲ್ಲಿ ಗುಳ್ಳವ್ವನ ಆರಾಧನೆಯ ಸಂದರ್ಭದಲ್ಲಿ ಆಡುವ ಸ್ತ್ರೀಯರ ಆಚರಣಾತ್ಮಕ ಆಟ.

ಗೆರೆ ಆಟ್ಮಂಗಣ್ಣ : ಬಳ್ಳಾರಿ ಪರಿಸರದ ಬುಗುರಿ ಆಟದ ಒಂದು ಬಗೆ.

ಗೇಣಿನಾಟ : ಬಳ್ಳಾರಿ ಪ್ರದೇಶದ ಗೋಲಿ ಆಟದ ಒಂದು ಬಗೆ.

ಗೂಡುಗೂಡು ಚನ್ನಡಕಿ ಆಟ : ಬೀದರ್ ಭಾಲ್ಕಿ ಪರಿಸರದ ಗುಂಪಾಟದ ಹೆಸರು.

ಗೂಳಿಕಾಳಗ : ರಾಮನಗರ ಕನಕಪುರ ಪರಿಸರದಲ್ಲಿ ಗಂಡು ಮಕ್ಕಳು ಆಡುವ ಬಲಪ್ರದರ್ಶನ ಒಂದು ಆಟ.

ಗೊಗ್ಗಿ ಕುಟ್ಟುವ ಆಟ : ಉತ್ತರ ಕರ್ನಾಟಕ ಬಾಗಲಕೋಟೆ ಪ್ರದೇಶದಲ್ಲಿ ಗುಳ್ಳವ್ವನ ಆರಾಧನೆ ನಂತರ ವಿಸರ್ಜನೆಯ ಸಂದರ್ಭದಲ್ಲಿ ಆಡುವ ಸ್ರೀ ನಿಷ್ಟವಾದ ಆಚರಣಾತ್ಮಕ ಆಟ.

ಗೊಜ್ಲಾಂ ಬಿಜ್ಲಿ : ಮಂಡ್ಯ ಪರಿಸರದ ಮಕ್ಕಳಾಟದ ಒಂದು ಬಗೆ.

ಗೊಮ್ಮಟ್ಗೋಲಾ : ಹಳೇಮೈಸೂರು ಪರಿಸರದ ಗೋಲಿ ಆಟದ ಒಂದು ಬಗೆ.

ಗೋಟಿ ಆಟ : ಗುಲ್ಬರ್ಗಾ ಪರಿಸರದ ಗೋಲಿ ಆಟದ ಒಂದು ಬಗೆ.

ಗೋಪುರದಾಟ : ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಾಟದ ಒಂದು ವಿಧ.

ಗೋರಿ : ದಕ್ಷಿಣ ಕನ್ನಡದಲ್ಲಿ ಹುಡುಗರು ಚೆಂಡು ಹಾಗೂ ಚಪ್ಪಟೆ ಕಲ್ಲುಗಳನ್ನು ಬಳಸಿ ಆಡುವ ಆಟ. ಇತರೆಡೆ ಲಗೋರಿ ಎಂಬ ಹೆಸರಿನಿಂದ ಪರಿಚಿತ.

ಗೋಲಕ್ಗೋಲಾ : ಹಳೇ ಮೈಸೂರು ಪರಿಸರದ ಗೋಲಿ ಆಟದ ಒಂದು ಬಗೆ.

ಗೋಲಿ ಆಟ : ಕರ್ನಾಟಕದ ಎಲ್ಲಾ ಕಡೆ ಮುಖ್ಯವಾಗಿ ಗಾಜಿನ ಗುಂಡು ಕೆಲವು ಕಡೆ ಉಕ್ಕಿನ ಗುಂಡು ಬಳಸಿ ಆಡುವ ಆಟ

ಘಟ್ಟಾಬಾರ : ಮಂಡ್ಯ ಪರಿಸರದಲ್ಲಿ ಹಿರಿಯರು ಆಡುವ ಆಟ ಇತರೆಡೆ ಜೌಕಾ ಬಾರ ಆಟ ಎನ್ನುತ್ತಾರೆ.