ಬಂಟ : ದಕ್ಷಿಣ ಕನ್ನಡದ   ಕೋಳಿ ಜೂಜಿನಾಟದಲ್ಲಿ ಗೆದ್ದ ಕೋಳಿಗೆ ಬಂಟನೆಂದು ಕರೆಯುತ್ತಾರೆ.

ಬಂದ್ : ಟಿ. ನರಸೀಪುರ ಪ್ರದೇಶದಲ್ಲಿ ಗೋಲಿ ಆಟದಲ್ಲಿ ಬಳಸುವ ಸಣ್ಣ ಕುಳಿ.

ಬಕಳೆ : ಹೊಸದುರ್ಗ ಪರಿಸರದ  ಗೋಲಿ ಆಟದಲ್ಲಿ ಗೋಲಿಯನ್ನು ಮೇಲಿನಿಂದ ಹೊಡೆಯುವ ಬಗೆ.

ಬಕ್ಕರೆಕುಂಬೆ : ಮೈಸೂರು ಪ್ರದೇಶದ ಆಟಗಳಲ್ಲಿ ಯಾರು ಮೊದಲು ಆಡಬೇಕು ಎನ್ನುವುದನ್ನು ನಿರ್ಧರಿಸಲು ನಾಣ್ಯದಂತೆ ಚಿಮ್ಮುವ ಮಡಕೆ, ಹೆಂಚಿನ ಚೂರು.

ಬಕ್ರೆಪಿಲ್ಲಿ : ಹೆಂಚು ಅಥವಾ ಮಡಕೆಯ ಚೂರು ಮೈಸೂರು ಪರಿಸರದ ಕುಂಟೆ ಬಿಲ್ಲೆ ಆಟದಲ್ಲಿ ಬಳಸುತ್ತಾರೆ.

ಬಗರಿ ಸೆಳೆ : ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬುಗುರಿ ಆಡಿಸುವ ಕ್ರಿಯೆಗೆ ಬಳಕೆಯಾಗುವ ಪದ.

ಬಚ್ಚ : ಅಗಲವಾದ ಚಪ್ಪಟೆ ಕಲ್ಲು, ಮೈಸೂರು ಪರಿಸರದ ಗೋಲಿ ಗೆಜ್ಜುಗ ಆಟದಲ್ಲಿ ಗೋಲಿ ಗೆಜ್ಜುಗಗಳನ್ನು ಹೊಡೆಯಲು ಬಳಸುತ್ತಾರೆ.

ಬಚ್ಚ : ಮೈಸೂರು ಪರಿಸರದ ಗೋಲಿ  ಆಟಗಳಲ್ಲಿ ಗೋಲಿಗೆ ಗೋಲಿ ತಗಲಿದರೆ ಬಚ್ಚ ಎನ್ನುವರು.

ಬಚ್ಚಾಪ್ : ಮಧ್ಯ ಕರ್ನಾಟಕದ ಕುಂಟೇ ಬಿಲ್ಲೆ ಆಟದಲ್ಲಿ ಬಳಸುವ ಮಡಕೆ ಚೂರಿನ ಅಥವಾ ಕಲ್ಲಿನ ಬಿಲ್ಲೆ.

ಬಚ್ಚಿಗೋಲಿ : ಹೊಸದುರ್ಗ ಪರಿಸರದ  ಗೋಲಿ ಆಟದಲ್ಲಿ ಅಂಕಣದಲ್ಲಿ ಇಟ್ಟಿರುವ ಗೋಲಿಗಳ ಮುಂಭಾಗ ಇಡುವ ಸಣ್ಣ ಗೋಲಿಗಳು.

ಬಜಿಲ್ ದೋಸೆ : ಉತ್ತರ ಕನ್ನಡದ  ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರೆಗೆ ಆಟವಾಡಿಸುವ ಹಿರಿಯರೋ ಅಥವಾ ಆಟದ ಕೇಂದ್ರವಾಗಿರುವವರೋ ಒಂದೊಂದೇ ಕೈಮುಟ್ಟಿ ಈ ಮಾತನ್ನು ಅನುಕ್ರಮಣಿಕೆಯಲ್ಲಿ ಐದನೇ ಸಾರಿಗೆ ಬಳಸುವ ಪದ.

ಬಟ್ಟಕ್ಕೊ : ಉತ್ತರ ಕನ್ನಡದ ಅಪ್ಪಡ ದಪ್ಪಡ ಆಟದಲ್ಲಿ ಬಳಕೆಯಾಗುವ ಪದ.

ಬಟ್ಟಾವಳಿ : ಉತ್ತರ  ಕನ್ನಡದ ಹರಳಿನಾಟದಲ್ಲಿ ಆಟ ಆಡುವಾಗ ಆಟದ ನಡುವೆ  ಮೂರು ಸಂಖ್ಯಾವಾಚಿಯನ್ನು ಅನುಸರಿಸಿಕೊಂಡು ಬರುವ ಪದ.

ಬಡಿಗೆ : ಉತ್ತರ ಕರ್ನಾಟಕದ ಗಿಡಗಿಡಮಂಗ್ಯಾ ಆಟದಲ್ಲಿ ಬಳಕೆಯಾಗುವ ಕೋಲು.

ಬದ್ದ್ : ಮಲೆನಾಡಿನ ತೀರ್ಥಹಳ್ಳಿ ಪರಿಸರದ ಮರಕೋತಿ ಆಟದಲ್ಲಿ ಆಟದ ಕೇಂದ್ರಕ್ಕೆ ಬಳಸುವ ಪದ, ಇತರೆಡೆ ಗೋಲಿ ಆಟ, ಚೆಣ್ಣಿ ಆಟದ ಕುಳಿಗೆ ಬಳಸುತ್ತಾರೆ.

ಬದ್ಧ : ರಾಮನಗರ ಕನಕಪುರ ಪರಿಸರದಲ್ಲಿ ಗೋಲಿ ಆಟದ ಗುಳಿ.

ಬಯ್ ಗತ್ತಿ : ಉತ್ತರ  ಕರ್ನಾಟಕದ  ಹರಳಿನಾಟದಲ್ಲಿ ಬಳಕೆಯಾಗುವ ಪದ.

ಬಲ್ಟಾಪ್ : ಸೀಂಧನೂರು  ಪರಿಸರದ ಒಂದು ಗೋಲಿ ಆಟದ ಗೋಲಿ ಹೊಡೆಯುವ ವಿಧಾನ.

ಬಳಸು : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಆಟಗಾರರು ಆಡುವ ವಿಧಾನದಲ್ಲಿ ಮನೆಯಿಂದ ಮನೆಗೆ ಕಾಯಿಗಳನ್ನು ಸಾಗಿಸುವ ಕ್ರಮ.

ಬಳೆ ಓಡು : ಗಾಜಿನ ಬಳೆಯ ತುಂಡುಗಳು. ಕರ್ನಾಟಕದ ಎಲ್ಲಾ ಕಡೆ ಕೆಲವು ಒಳಾಂಗಣ ಆಟಗಳಲ್ಲಿ ಬಳಕೆಯಾಗುತ್ತವೆ.

ಬಳ್ಳಿಸಿಗ್ದೆ : ಉತ್ತರ  ಕರ್ನಾಟಕದ  ಹರಳಿನಾಟದಲ್ಲಿ ಆಟದ ನಡುವೆ ಹೇಳುವ ಮಾತು.

ಬಾಂಬೆಡಿಸ್ : ಬಾಗಲಕೋಟೆ ಪರಿಸರದ ಗೋಲಿ ಆಟದಲ್ಲಿ  ಬಳಕೆಯಾಗುವ ಪದ.

ಬಾರಾ : ಮಧ್ಯ ಕರ್ನಾಟಕದ ಚಾವಿ, ಕಟ್ಟಮನೆ ಆಟಗಳಲ್ಲಿ ಹುಣಸೇ ಬೀಜಗಳನ್ನು  ಬಿಟ್ಟಾಗ ನಾಲ್ಕು ಬೀಜಗಳೂ ಕಪ್ಪು ಮೇಲ್ಮುಖವಾಗಿ ಬಿದ್ದರೆ ಬಾರಾ ಎನ್ನುತ್ತಾರೆ.

ಬಾವಿ : ಉತ್ತರ  ಕರ್ನಾಟಕದ ಗುಯ್ದಾಟದ ನಕ್ಷೆಯಲ್ಲಿ ಒಂದು ಭಾಗ.

ಬಾಹರ್ : ಮೈಸೂರು ಪ್ರದೇಶದ ಮೀರಿ ಗೋಲಿ ಆಟದಲ್ಲಿ ಬಳಕೆಯಾಗುವ ಪದ. ಆಟದ ಅಂಕಣದ ಹೊರ ಅವರಣ.

ಬಾಳ್ : ದಕ್ಷಿಣ ಕನ್ನಡ, ಮಲೆನಾಡು ಪರಿಸರದ ಕೋಳಿ ಕಾದಾಟದಲ್ಲಿ ಕೋಳಿಗಳ ಕಾಲಿಗೆ ಬಾಳ್ ಕುಟ್ಟುತ್ತಾರೆ. ಹಳೆಗನ್ನಡ ರೂಪದಲ್ಲಿ ಬಾಳ್ ಎಂದರೆ ಕತ್ತಿ ಅದರ ರೂಪ ಈ ಆಟದಲ್ಲಿ ಉಳಿದಿದೆ.

ಬಾಳೆ ಕಂಬ : ಉತ್ತರ ಕನ್ನಡ ಪರಿಸರದ ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರೆಗೆ ಆಟವಾಡಿಸುವ ಹಿರಿಯರೋ ಆಟದ ಕೇಂದ್ರವಾಗಿರುವವರು  ಒಂದೊಂದೇ ಕೈ ಮುಟ್ಟಿ  ಅನುಕ್ರಮಣಿಕೆಯಲ್ಲಿ  ಮೂರನೆ ಸಾರಿಗೆ ಬಳಸುವ ಪದ.

ಬಿಂಗ್ : ಬಳ್ಳಾರಿ ಪರಿಸರದ ಒಂದು ಗೋಲಿ ಆಟದಲ್ಲಿ ದುಂಡಗೆ ಬರೆದು ಅದರಲ್ಲಿ ಗೋಲಿ ಇಟ್ಟು ಆಡುತ್ತಾರೆ ಅದನ್ನು ಬಿಂಗ್ ಎನ್ನುತ್ತಾರೆ.

ಬಿಂದಿ : ಸಿಂಧನೂರು ಪರಿಸರದ ಒಂದು ಗೋಲಿ ಆಟದಲ್ಲಿ ಅಂಕಣದಲ್ಲಿನ ತಗ್ಗು.

ಬಿಗು : ದಕ್ಷಿಣ ಕನ್ನಡದ ಉಂಗುರಾಟದಲ್ಲಿ ಏಟಿನ ಮೂಲಕ ಸೋತವರಿಗೆ ಶಿಕ್ಷಿಸುವಾಗ ನೀಡುವ ಗಟ್ಟಿಯಾದ ಏಟು.

ಬಿಚಾರಿ :  ಉತ್ತರ  ಕರ್ನಾಟಕದ  ಹರಳಿನಾಟದಲ್ಲಿ  ಬಳಕೆಯಾಗುವ ಪದ.

ಬಿಟ್ ಒಂದು : ಸಿಂಧನೂರು ಪರಿಸರದ  ಚಕೋರಿ ಆಟದಲ್ಲಿ ಮನೆಗಳನ್ನು ಎಣಿಸುವ ಒಂದು ಕ್ರಮ. ಬಿಟ್ ಒಂದು, ಬಿಟ್ ಎರಡು ಹೀಗೆ ಎಣಿಸುತ್ತಾರೆ.

ಬಿಳ್ಕೆರೆ : ಮೈಸೂರು ಪರಿಸರದ ಕಾರೇ ಬೀರೆ ಎಂಬ ಗೋಲಿ ಆಟದಲ್ಲಿ ಆಟದ ನಡುವೆ ಹೇಳಬೇಕಾದ ಮಾತುಗಳಲ್ಲಿ ಒಂದು.

ಬೀನ್ ಗೋಡ್ : ಉತ್ತರ  ಕರ್ನಾಟಕದ   ಅಪ್ಪಡ ದಪ್ಪಡ ಆಟದಲ್ಲಿ ಬಳಸುವ ಮಾತು.

ಬೀರಾ ಚೆಂಡು : ತುಮಕೂರು, ಗುಬ್ಬಿ ಪರಿಸರದಲ್ಲಿ ಗಂಡು ಮಕ್ಕಳ ಚೆಂಡಾಟ,

ಬೀರೆ : ಮೈಸೂರು ಪರಿಸರದ  ಕಾರೇ ಬೀರೆ ಎಂಬ  ಆಟದಲ್ಲಿ ಆಟದ ನಡುವೆ ಎದುರಾಳಿಯ ಗೋಲಿಗೆ ಹೊಡೆದಾಗ ಹೇಳಬೇಕಾದ ಮಾತುಗಳಲ್ಲಿ ಒಂದು.

ಬೀಸ್ : ಕನಕಪುರ ಪರಿಸರದ ಚಿಣ್ಣಿ ಆಟದಲ್ಲಿ ಆಡುತ್ತಿರುವವನು ಹೊಡೆಯುವ ಮೊದಲು ತುದಿ ಅಥವಾ ರಡೆ ಎಂದಾಗ ಎದುರಿನವರು ಹೊಡೆಯಲು ಅನುಮತಿ ನೀಡುವುದು. ಬೀಸ್ ಎಂದು ಅನುಮತಿ ದೊರೆಯುವ ಮುಂಚೆ ಹೊಡೆಯುವ ಹಾಗಿಲ್ಲ.

ಬೀಸುವುದುಬಳ್ಳಾರಿ ಪರಿಸರದ ಗುಚ್ಚಿ ಆಟದಲ್ಲಿ ಮೇಲೆ ಕಲ್ಲು  ತೂರಿ ನೆಲದಲ್ಲಿರುವ ಕಲ್ಲುಗಳನ್ನು ಬೀಸಿದಂತೆ ನಟಿಸಿ ಎತ್ತಿಕೊಂಡು ಮೇಲೆ ತೂರಿದ ಕಲ್ಲು ಹಿಡಿಯುವುದು.

ಬುಡುಮಿಂಚಾಲ್ : ಬಳ್ಳಾರಿಯ ಹಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಎಡಗೈನ ಮುಷ್ಟಿಯ ಮೇಲೆ ಚೆನ್ನಿಯನ್ನು ಇಟ್ಟು ದಾಂಡಿನಿಂದ ಹೊಡೆಯುವುದು.

ಬುತ್ತಿಹುಂಡಿ : ಶಿಕಾರಿಪುರದ ಪರಿಸರದ ಎತ್ತಗಲ್ಲು ಆಟದಲ್ಲಿ ಆಟದ ನಡುವೆ ಆಟಗಾರರು ಹೇಳಬೇಕಾದ ಮಾತು.

ಬುಳಬುಳಿ : ಉತ್ತರ ಕನ್ನಡದ ಕುಂಟಾಟದಲ್ಲಿ ಹಲಪಿ ನಿಗದಿತ ಜಾಗದಲ್ಲಿ ಬೀಳದೆ ಬೇರೆಡೆ ಬಿದ್ದರೆ ಆಟ ಹೋದಂತೆ ಅದನ್ನು ‘ಬುಳಬುಳಿ’ ಎಂದು ಕರೆಯುತ್ತಾರೆ.

ಬುಳ್ಯಾ :  ಉತ್ತರ  ಕರ್ನಾಟಕದ  ಹರಳಿನಾಟದಲ್ಲಿ   ಸಂಖ್ಯಾವಾಚಿಗಳೊಂದಿಗೆ ಸೇರಿಸಿ  ಹೇಳಬೇಕಾದ ಮಾತು.

ಬೂದಿ : ಉತ್ತರ  ಕರ್ನಾಟಕದ   ಕೂರ್ ಕೂರ್ ಆಟದಲ್ಲಿ ಬಳಕೆಯಾಗುವ ವಸ್ತು.

ಬೆಂಕಿಕಡ್ಡಿ : ಹುಳಿಯಾರು ಪರಿಸರದ ಚಿಣ್ಣಿದಾಂಡಿನ ಆಟದಲ್ಲಿ ನಾಲ್ಕು ಬಾರಿ ಚಿಣ್ಣಿಯನ್ನು ಎತ್ತಿ ಹೊಡೆಯುವುದು.

ಬೆಟ್ಟಾ : ಉತ್ತರ ಕನ್ನಡದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ಬೆಲ್ಲದೋಸೆ : ಉತ್ತರ ಕನ್ನಡ ಚಿಪುಳು ಚಿಪುಳು ಆಟದಲ್ಲಿ ಕೈಗಳನ್ನು  ಮಗುಚಿ ವೃತ್ತಾಕಾರದಲ್ಲಿ ಕುಳಿತಿರುವವರೆಗೆ ಆಟವಾಡಿಸುವ ಹಿರಿಯರೋ ಅಥವಾ ಆಟದ ಕೇಂದ್ರವಾಗಿರುವವರು ಒಂದೊಂದೇ ಕೈಮುಟ್ಟಿ ಅನುಕ್ರಮಣಿಕೆಯಲ್ಲಿ ನಾಲ್ಕನೇ ಸಾರಿಗೆ ಬಳಸುವ ಪದ.

ಬೆಳೆ : ದಕ್ಷಿಣ ಕನ್ನಡದ ಚೆನ್ನೆ ಮಣೆ ಆಟದಲ್ಲಿ ಕಾಯಿಗೆಲ್ಲುವ ಪ್ರಕ್ರಿಯೆಯಲ್ಲಿ ಮನೆ ಖಾಲಿ ಆಗಿ ನಾಲ್ಕು ಕಾಯಿ ಬಿದ್ದರೆ ಅದನ್ನು ಬೆಳೆ ಎನ್ನುತ್ತಾರೆ. ಅದನ್ನು ರಾಜ ಎತ್ತಿಕೊಳ್ಳಬಹುದು. ರಾಜನ ಆಟದ ವೇಳೆಯಲ್ಲಿ ಮಂತ್ರಿ, ಸೈನಿಕರ ಮನೆಗಳಲ್ಲಿ ಬೆಳೆಯಾದರೆ ಅದನ್ನು ಅವರು ಎತ್ತಿಕೊಳ್ಳಬಹುದು.

ಬೆಳೆಕೊಳೆ : ದಕ್ಷಿಣ ಕನ್ನಡದ ಚೆನ್ನೆ ಮಣೆ ಆಟದಲ್ಲಿ  ಬೆಳೆ ಆದಾಗ ಅದನ್ನು ಸಂಬಂಧಿಸಿದವರು ಗಮನಿಸದೆ ಎತ್ತಿಕೊಳ್ಳಲು ಮರೆತರೆ ಬೆಳೆ ಕೊಳೆಯಾಗುತ್ತದೆ.

ಬೆಳ್ಳಾಕ್ಕಿ : ಬೀದರ್ ಪರಿಸರದ ಕವಡಿ ಆಟದಲ್ಲಿ ಐದು ಕವಡೆ ಬಳಸುತ್ತಾರೆ. ಐದು ಕವಡೆ ಮೇಲ್ಮುಖವಾಗಿ ಬಿದ್ದರೆ ಬೆಳ್ಳಾಕ್ಕಿ ಎನ್ನುವರು.

ಬೈಟ್ : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ಆಟಗಾರ ಗೋಲಿಗಳನ್ನು ಹೊಡೆಯುವಾಗ ಬೈಟ್ ಎಂದು ಉಚ್ಚರಿಸುತ್ತಾನೆ.

ಬೈಟಾಪ್ : ಮೈಸೂರು ಪರಿಸರದ ಮೀರಿ ಎನ್ನುವ ಗೋಲಿ ಆಟದಲ್ಲಿ ಎದುರಾಳಿ ಗೋಲಿಗೆ ಮೇಲಿಂದ ಹೊಡೆಯುವುದು.

ಬೊಗಸೆ : ಉತ್ತರ ಕನ್ನಡದ ಕೋಲ್ ಕೊಚ್ನ ಆಟದಲ್ಲಿ  ಬಳಕೆಯಾಗುವ ಪದ.

ಬೊರೆಗಂಭ : ಉತ್ತರ ಕನ್ನಡದ ಹರಳಿನಾಟದ ನಡುವೆ ಹೇಳುವ ಮಾತು.

ಬೋಕ : ಕುಷ್ಟಗಿ ಪರಿಸರದ ಚಿನಿಪನಿ ಆಟದಲ್ಲಿ ಚಿನ್ನಿ ಇಟ್ಟು ಹೊಡೆಯುವ ಸ್ಥಳ .

ಬೋಕಿ : ಮಧ್ಯ, ಉತ್ತರ  ಕರ್ನಾಟಕದ ಭಾಗಗಳಲ್ಲಿ ಕುಂಟೇ ಬಿಲ್ಲೇ ಆಟ ಆಡಲು ಬಳಸುವ ಮಡಕೆಯ ಚೂರು ಬಿಲ್ಲೆ.

ಬೋಜ  : ದಕ್ಷಿಣ ಕನ್ನಡದ  ಕಂಬದಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ, ಆಟಗಾರರಲ್ಲಿ ಹಿಡಿಯುವರು ಯಾರು, ತಪ್ಪಿಸಿಕೊಳ್ಳಬೇಕಾದವರು ಯಾರು ಎನ್ನುವ ನಿರ್ಧಾರಕ್ಕಾಗಿ ವ್ಯಕ್ತಿಯನ್ನು ಹೆಸರಿಸಿ ಕೊಂಡು ಬರುವ ವಿಧಾನದ ಅನುಕ್ರಮಣಿಕೆಯಲ್ಲಿ ಬಳಕೆಯಾಗುವ  ಒಂದು ಪದ.

ಬೋಜ : ಸಿಂಧನೂರು, ರಾಯಚೂರು ಪರಿಸರದ ಗಿಲ್ಲಿ ಅಥವಾ ಚೆನ್ನಿಕೋಲು ಆಟದಲ್ಲಿ ಗಿಲ್ಲಿ / ಚಿಣ್ಣಿ ಹೊಡೆಯಲು ಇಟ್ಟುಕೊಳ್ಳುವ ಸ್ಥಳ.

ಬೋಜು : ರಾಯಚೂರು, ಮಾನ್ವಿ ಪರಿಸರದ ಗೋಲಿ ಆಟದ ಅಂಕಣದ ಗುಳಿ.

ಭರಿ : ಬೀದರ ಪರಿಸರದ ಕವಡಿ ಆಟದಲ್ಲಿ ಆಟಗಾರ ಎಡಗೈಯ ಬೆರಳು ಮುಚ್ಚಿ ತೆರೆದರೆ ಭರಿ ಎನ್ನುತ್ತಾರೆ.

ಮಂಗ : ಸಿಂಧನೂರು ಪರಿಸರದ ಬುಗುರಿ ಆಟದಲ್ಲಿ ತಿರುಗುತ್ತಿರುವ ಬುಗುರಿಯನ್ನು ದಾರದಲ್ಲಿ ಸುತ್ತಿ ಮೇಲೆತ್ತಿ ಹಿಡಿಯುವುದು.

ಮಂಜಟೆ : ಕರಾವಳಿಯ ಚೆನ್ನೆಮಣೆ ಆಟದಲ್ಲಿ ಕಾಯಿಯಾಗಿ ಬಳಕೆಯಾಗುವ ಗುಲಗಂಜಿಯಂತಹ ಬಣ್ಣದ ಸ್ಪಲ್ಪ ದೊಡ್ಡಕಾಯಿ.

ಮಂಡೆಕಟ್ಟು : ಉತ್ತರ ಕನ್ನಡದ ಹರಳಿನಾಟದಲ್ಲಿ ತಲೆ ಕೂದಲನ್ನು ಕಟ್ಟಿದಂತೆ ನಟಿಸಿ ಆಡುವುದು.

ಮಂತ್ರಿ : ದಕ್ಷಿಣ ಕನ್ನಡದ ಉಂಗುರದಾಟದಲ್ಲಿ ಚೆನ್ನೆ ಮಣೆ ಆಟಗಳಲ್ಲಿ ಭಾಗಿಯಾಗುವ ಆಟಗಾರನಿಗೆ ಆಟದ ಸಮಯದಲ್ಲಿ ಆಟದ ವಿಧಾನದಲ್ಲಿ ನಿಗದಿತ ಸ್ಥಾನ.

ಮಕ್ಳೀಗ್ ಅಂಗಿ ಹಾಕ್ತ್ : ಉತ್ತರ ಕನ್ನಡದ ಹಕ್ ಬಂತ್ ಆಟದಲ್ಲಿ ಆಟದ ನಡುವೆ ಬಳಕೆಯಾಗುವ ಮಾತು.

ಮಕ್ಳೀಗ್ ಮೀಯ್ಸ್ತ್ : ಉತ್ತರ ಕನ್ನಡದ ಹಕ್ ಬಂತ್ ಆಟದಲ್ಲಿ ಆಟದ ನಡುವೆ ಬಳಕೆಯಾಗುವ ಮಾತು.

ಮಡ್ಕೆ : ಮೈಸೂಸು ಪರಿಸರದ ಮೊಗಚಾಡೋ ಕುಂಟೆ ಬಿಲ್ಲೆ ಆಟದಲ್ಲಿ ಅನುಕ್ರಮವಾಗಿ ಉಚ್ಚರಿಸಬೇಕಾದ ಪದಗಳಲ್ಲಿ ಒಂದು.

ಮಣೆ : ಮೈಸೂರು, ಮಂಡ್ಯ, ಬೆಂಗಳೂರು ಪರಿಸರಗಳಲ್ಲಿ ಹಳ್ಳು ಮಣೆ ಆಟ ಆಡಲು ಮರದಿಂದ ಮಾಡಿರುವ ಕುಳಿ ಇರುವ ಮಣೆ.

ಮತ್ತಿಗೋಲಿ : ಹೊಸದುರ್ಗ ಪರಿಸರದ ಗೋಲಿ ಆಟದಲ್ಲಿ ಸಾಲಾಗಿ ಅಂಕಣದಲ್ಲಿ ಇಟ್ಟಿರುವ ಗೋಲಿಗಳ ಹಿಂಭಾಗ ಇಟ್ಟಿರುವ ದೊಡ್ಡ ಪ್ರಧಾನ ಗೋಲಿ.

ಮನೆ : ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಪರಿಸರದ ಚನ್ನಮಣೆ ಆಟದಲ್ಲಿ ಕಾಳು ಹಾಕಲು ಇರುವ ಸ್ಥಳ.

ಮನೆ : ಚೆನ್ನೆ ಮಣೆ, ಚೌಕಾಬಾರಾ, ಕಟ್ಟಿಮನೆ ಆಟಗಳಲ್ಲಿ ಆಟ ಪ್ರಾರಂಭಿಸುವ ಮೊದಲು ಆಟಗಾರರು ತಮ್ಮ ತಮ್ಮ ಕಾಯಿಗಳನ್ನು ಇರಿಸಿಕೊಳ್ಳುವ ನಕ್ಷೆಯ ಸ್ಥಾನ, ಮಣೆಯಲ್ಲಿನ ನಿಗದಿತ ಸ್ಥಾನಗಳು.

ಮನೆಕಟ್ಟು : ಮೈಸೂರು ಪರಿಸರದ ಹಳ್ಳು ಮಣೆಯ ಮೂಲೆ ಆಟದಲ್ಲಿ ಹರಳು ಹಾಕುವಾಗ ನಾಲ್ಕು ಹರಳುಗಳು ಸಂಗ್ರಹವಾದರೆ ಈ ಮಾತನ್ನು ಹೇಳುತ್ತಾರೆ.

ಮನೆಕಾಯಿ : ಚೆನ್ನೆಮಣೆ ಆಟದಲ್ಲಿ ಕೈಯಲ್ಲಿಲ್ಲದ, ಆಟದ ಮಣೆಯಲ್ಲಿ ಮನೆಯಲ್ಲಿ ಇರುವ ಕಾಯಿ.

ಮನೆದಾಟು : ಮೈಸೂರು ಪರಿಸರದ ಚೌಕಾಬಾರಾ, ಇನ್ನಿತರ ಕಾಯಿ ನಡೆಸುವ ಆಟಗಳಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಕಾಯಿನಡೆಸುವಾಗ ಮಧ್ಯದ ಮನೆಯಲ್ಲಿ ಎದುರಾಳಿಯ ಕಾಯಿ ಇದ್ದರೆ ಅದನ್ನು ದಾಟಬೇಕಾಗುತ್ತದೆ. ಇದನ್ನು ಮನೆ ದಾಟುವುದು ಎನ್ನುತ್ತಾರೆ.

ಮರ್ ಬಟ್ಲೊಂದ್ : ಉತ್ತರ ಕರ್ನಾಟಕ ಹರಳಿನಾಟದ ಒಂದು ಬಗೆಯಲ್ಲಿ ಕೈಕೈ ತಾಗಿಸದೆ ಆಟವಾಡುವಾಗ ಬಳಸುವ ಮಾತು.

ಮರ್ ಮೂರೊಂದ್ : ಉತ್ತರ ಕನ್ನಡದ ಹರಳಿನಾಟದಲ್ಲಿ  ಒಂದು ಕೈಯಿಂದ ಹರಳು ಹಾರಿಸಿ ಮತ್ತೊಂದು ಕೈಯಿಂದ ಹರಳು ಹಿಡಿಯುವಾಗ ಹೇಳುವ ಮಾತು.

ಮರಿ ಉಡೀತ್ : ಉತ್ತರ ಕನ್ನಡದ ಹಕ್ ಬಂತ್ ಆಟದಲ್ಲಿ ಬಳಕೆಯಾಗುವ ಪದ.

ಮರ್ ಕಳ್ಳಾ ಒಂದು : ಉತ್ತರ ಕನ್ನಡದ ಹರಳಿನಾಟದ ಒಂದು ಬಗೆಯಲ್ಲಿ ಕೈ ಕೈತಾಗಿಸದೆ ಆಟವಾಡುವಾಗ ಬಳಸುವ ಮಾತು.

ಮರಿಟ್ಟುಗಂಬ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಮರಿಬಿಡಕ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಮಲ್ಲರೆ ಮತಕ : ಅಕ್ಕಕ್ಕ ಚೆಂಡು ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಸುವ ಪದ.

ಮಳ್ಳು : ಹುಳಿಯಾರು ಪರಿಸರದ ಚಿಣ್ಣಿದಾಂಡಿನ ಆಟದಲ್ಲಿ ಚಿಣ್ಣಿಯನ್ನು ಐದು ಬಾರಿ ಹೊಡೆಯುವುದು.

ಮಾಂಕಾಳಯ್ದೊ : ಉತ್ತರ ಕನ್ನಡದ ಹರಳಿನಾಟದಲ್ಲಿ ಐದು ಸಂಖ್ಯಾವಾಚಿಯೊಂದಿಗೆ ಹೇಳುವ ಮಾತು.

ಮಾಲಕ್ಷ್ಮಯ್ದೊ : ಉತ್ತರ ಕನ್ನಡದ ಹರಳಿನಾಟದಲ್ಲಿ ಐದು ಸಂಖ್ಯಾವಾಚಿಯೊಂದಿಗೆ ಹೇಳುವ ಮಾತು.

ಮಿಂಚು ಮಿಣಿಮಿಣಿ : ಉತ್ತರ ಕನ್ನಡದ ಅಕ್ಕಕ್ಕ ಚೆಂಡು ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತುಗಳು.

ಮಿತ್ರೆಶನಿವಾರ : ಉತ್ತರ ಕನ್ನಡದ ಅಕ್ಕಕ್ಕ ಚೆಂಡು ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಮುಂಗೈಮುಷ್ಟಿ : ಉತ್ತರ ಕನ್ನಡದ ಅಕ್ಕಕ್ಕ ಚೆಂಡು ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಮುಂಗೈ ಹಸ್ತ : ಉತ್ತರ ಕನ್ನಡದ ಅಕ್ಕಕ್ಕ ಚೆಂಡು ಹರಳಿನಾಟದಲ್ಲಿ ಆಟದ ನಡುವೆ ಉಚ್ಚರಿಸುವ ಮಾತು.

ಮುಂತಿ : ಮೈಸೂರು ಪರಿಸರದ ಮೀರಿ ಎಂಬ ಗೋಲಿ ಆಟದಲ್ಲಿ ಆಟದ ಅಂಕಣಕ್ಕೆ ಆಡುವವನು ಎರಡು ಗೋಲಿಗಳನ್ನು ಬಿಟ್ಟಾಗ ಅವನಿಗೆ ಹತ್ತಿರದಲ್ಲಿರುವ ಗೋಲಿಗೆ ಮುಂತಿ ಎನ್ನುತ್ತಾರೆ.

ಮುಕ್ಕ : ದಕ್ಷಿಣ ಕನ್ನಡದ ಅಪ್ಪದಾಟದಲ್ಲಿ ‘ಮೂರು’ ಸೂಚಿಸಲು ಬಳಸುವ ವಿಶಿಷ್ಟ ಸಂಖ್ಯಾವಾಚಿ.

ಮುಕ್ಕಳ್ಳು : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಹರಳೆತ್ತಿದ ಮನೆಯಲ್ಲಿ ಮೂರು ಹರಳಾದರೆ ಮುಕ್ಕುಳ್ಳು ಎನ್ನುತ್ತಾರೆ.

ಮುಕ್ಕುಂಜಿ : ಉತ್ತರ ಕನ್ನಡದ ಚಿಪ್ಪಿ ಆಟದಲ್ಲಿ ಚಿಪ್ಪಿ ಒಂದು ಕವಚಿ ಬಿದ್ದರೆ ಅದನ್ನು ಮುಕ್ಕುಂಜಿ ಎನ್ನುತ್ತಾರೆ.

ಮುಕ್ಕೆ : ಉತ್ತರ ಕನ್ನಡದ ಕವಡೆ ಆಟದಲ್ಲಿ ಕವಡೆ ಬಿಟ್ಟಾಗ ಮೂರು ಕವಡೆಗಳು ಕೆಳಮುಖವಾಗಿ ಬಿದ್ದರೆ ಮುಕ್ಕೆ ಎನ್ನುತ್ತಾರೆ.

ಮುತ್ತಿನದಂಡು : ಉತ್ತರ ಕನ್ನಡದ  ಅಕ್ಕಕ್ಕ ಚೆಂಡು ಎನ್ನುವ  ಹರಳಿನಾಟದಲ್ಲಿ  ಮೊದಲು ಆಡುವವರು ಹೇಳುವ ಮಾತು.

ಮುತ್ತೆ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಆಟಗಾರನ ಸ್ವಾಧೀನದಲ್ಲಿ ಮೂರು ಕಾಯಿಗಳಿದ್ದರೆ ಬಳಕೆಯಾಗುವ ವಿಶಿಷ್ಟ ಸಂಖ್ಯಾವಾಚಕ .

ಮುದುಕ : ದಕ್ಷಿಣ ಕನ್ನಡದ  ಐದು ಜನರಾಡುವ ಕಂಬಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ ಆಟಗಾರರ ಪ್ರಾರಂಭಿಕ ಸ್ಥಾನ ಅಂದರೆ ಹಿಡಿಯುವವರು ಯಾರು ಹಿಡಿಸಿಕೊಳ್ಳುವವರು ಯಾರು ಎಂಬುದನ್ನು ನಿರ್ಧರಿಸಲು ಜನರನ್ನು ಎಣಿಸುವ ವಿಧಾನದಲ್ಲಿ ನಾಲ್ಕನೆಯವನಿಗೆ ಬಳಸುವ ಶಬ್ದ.

ಮುರಿ : ದಕ್ಷಿಣ ಕನ್ನಡದ ಚನ್ನೆಮಣೆ ಆಟದಲ್ಲಿ ಮನೆಯಿಂದ ಹರಳೆತ್ತುವುದನ್ನು ಮುರಿ ಎನ್ನುತ್ತಾರೆ.

ಮುರ್ಗಾ ತಿರ್ಗಾ : ಉತ್ತರ ಕನ್ನಡದ ಕಂಬಾಟದಲ್ಲಿ ಬಳಕೆಯಾಗುವ ಪದ.

ಮುಷ್ಟಿ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಮೂಂಜಿದಕ್ಷಿಣ ಕನ್ನಡದ ಪಲ್ಲಿ ಆಟದಲ್ಲಿ ಆಟದ ಒಂದು ಹಂತದಲ್ಲಿ ಎಣಿಕೆ ಮಾಡುವ ಕ್ರಮವಿದೆ ಅಲ್ಲಿ ಮೂರು ಮೂಂಜಿ ಎನ್ನುವ ಶಬ್ಧ ಉಚ್ಚರಿಸಲಾಗುತ್ತದೆ.

ಮೂಕಿಗೆರೆ : ಉತ್ತರ ಕರ್ನಾಟಕ ಗುಯ್ಬಾಟದ ನಕ್ಷೆಯಲ್ಲಿ ಎಳೆಯುವ ಗೆರೆ.

ಮೂರ್ ಶಿದ್ಧಕ್ಕಿ : ಉತ್ತರ ಕನ್ನಡದ  ಕಣ್ಣೇಕಟ್ಟೇ ಕಾರೆಮುಳ್ಳೇ ಆಟದಲ್ಲಿ ಬಳಸುವ ಪದ.

ಮುರುಕೊಳ್ಳು : ಮೈಸೂರು ಪರಿಸರದ ಹಳ್ಳು ಆಟದಲ್ಲಿ ಕಾಳು ತೆಗೆಯುವ ವಿಧಾನಕ್ಕೆ ಮುರುಕೊಳ್ಳು ಎನ್ನುತ್ತಾರೆ.

ಮೂರ್ಲುಗಿವಿ : ಉತ್ತರ ಕರ್ನಾಟಕದ ಹುಲಿಮನೆ ಆಟದಲ್ಲಿ ಕಾಯಿಗಳನ್ನು ಅಂಕಣದ ಹೊರಚಾಚಿದ ಕಿವಿ ಎಂಬ ಭಾಗದಲ್ಲಿ ಕೂರಿಸಿದರೆ ಮೂರ್ಲುಗಿವಿ ಎನ್ನುತ್ತಾರೆ.

ಮೂವದಕ್ಷಿಣ ಕನ್ನಡದ  ಐದು ಜನರಾಡುವ ಕಂಬದಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ ಆಟಗಾರರ ಪ್ರಾರಂಭಿಕ ಸ್ಥಾನ ಅಂದರೆ ಹಿಡಿಯುವವರು ಯಾರು. ಹಿಡಿಸಿಕೊಳ್ಳುವವರು ಯಾರು ಎಂಬುದನ್ನು ನಿರ್ಧರಿಸಲು ಜನರನ್ನು ಎಣಿಸುವ ವಿಧಾನದಲ್ಲಿ ಮೂರನೆಯವನಿಗೆ ಬಳಸುವ ಶಬ್ಧ.

ಮೂವೆ : ಉತ್ತರ ಕನ್ನಡದ  ಚುಟ್ಕಾ ಮುಟ್ಕಾ ಆಟದಲ್ಲಿ ಬಳಕೆಯಾಗುವ ಪದ,

ಮೂಸುತ್ತೆ ಮಲ್ಲಾರೆ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಮಾತು.

ಮೆಟ್ಗತ್ತಿ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಮಾತು.

ಮೇಲಿನ ತಿರ್ಪಿ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಮಾತು.

ಮೇಲೆ : ದಕ್ಷಿಣ ಕನ್ನಡದ  ಕಂಬಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ, ಆಟಗಾರರಲ್ಲಿ ಹಿಡಿಯುವವರು ಯಾರು ತಪ್ಪಿಸಿಕೊಳ್ಳಬೆಕಾದವರು ಯಾರು ಎನ್ನುವ ನಿರ್ಧಾರಕ್ಕಾಗಿ ವ್ಯಕ್ತಿಯನ್ನು ಹೆಸರಿಸುವ ವಿಧಾನದ ಅನುಕ್ರಮಣಿಕೆಯಲ್ಲಿ ಬಳಕೆಯಾಗುವ ಒಂದು ಪದ.

ಮೊರ್ಚಿ : ತುಮಕೂರಿನ ಶಿರಾ ಪರಿಸರದ ಚಿಣ್ಣಿದಾಂಡು ಆಟದಲ್ಲಿ ಬಳಸುವ ಪದ.

ಮೊಟ್ಟೆ ಕಟ್ತ್‌ : ಉತ್ತರ ಕನ್ನಡದ ಹಕ್‌ಬಂತ್‌ ಎಂಬ ಆಟದಲ್ಲಿ ಬಳಸುವ ಪದ.

ಮೊಟ್ಟೆ ಹಾಕ್ತ್‌ : ಉತ್ತರ ಕನ್ನಡದ ಹಕ್‌ಬಂತ್‌ ಎಂಬ ಆಟದಲ್ಲಿ ಬಳಸುವ ಮಾತು.

ಮ್ಯಾಗ : ಮೈಸೂರು ಪರಿಸರದ ಮೀರಿ ಎನ್ನುವ ಗೋಲಿ ಆಟದಲ್ಲಿ ಎರಡು ಗೋಲಿಗಳನ್ನು ಬಿಟ್ಟಾಗ ಹೊಡೆಯುವವನಿಂದ ದೂರವಿರುವ ಗೋಲಿಗೆ ಮ್ಯಾಗ ಎನ್ನುತ್ತಾರೆ.

ಯಕ್ಕಿಚ್ಚ : ಬಳ್ಳಾರಿ ಪರಿಸರದ ಗೋಲಿ ಆಟದ ಆಟಕ್ಕೆ ಇಟ್ಟ ಗೋಲಿಗಳನ್ನು ಆಟಗಾರ ಹೊಡೆದು ಅಂಕಣದಲ್ಲಿ ಒಂದೇ ಗೋಲಿ ಉಳಿಯುವುದು.

ಯಸಟೆ : ಕನಕಪುರ ಮಂಡ್ಯ ಮೈಸೂರು ಭಾಗಗಳಲ್ಲಿ ಕುಂಟೋ ಬಿಲ್ಲೆ ಆಟದಲ್ಲಿ ಆಡುತ್ತಿರುವವರು ಮನೆದಾಟುವಾಗ ಅಮಟೆ ಎನ್ನುತ್ತಾರೆ ಪ್ರತಿಸ್ಪರ್ಧಿ ಯಸಟೆ ಎಂದರೆ ಸರಿಯಾಗಿದೆ ಎಂದು ಅರ್ಥ.

ರಂಡಿಸ್ಕಾಟ : ಬಳ್ಳಾರಿಯ ಹಂಪಿ ಪರಿಸರದ ಚಿನ್ನಿದಾಂಡು ಆಟದಲ್ಲಿ ಎಡಗೈನ ಕಿರುಬೆರಳು ಮತ್ತು ತೋರು ಬೆರಳನ್ನು ಕೂಡಿಸಿ ಅದರ ಮೇಲೆ ಚಿನ್ನಿಯನ್ನು ಇಟ್ಟು ದಾಂಡಿನಿಂದ ಹೊಡೆಯುವುದು.

ರಡಿ : ಹುಳಿಯಾರು ಪರಿಸರದ ಚಿಣ್ಣಿದಾಂಡಿನ ಆಟದಲ್ಲಿ ಆಟಗಾರ ರಡಿ ಎಂದು ಇಂಗ್ಲಿಶನಲ್ಲಿ ಹೇಳಿದರೆ ಎದುರಾಳಿ ಹೊಡಿ ಎಂದು ಕನ್ನಡದಲ್ಲಿ ಹೇಳುತ್ತಾನೆ. ಅಂದರೆ ಆಟಗಾರ ಎದುರಾಳಿ ಸಿದ್ಧವೇ ಎಂದು ಕೇಳುತ್ತಾನೆ.

ರಾಗಿಬೀಸುತೊಮ್ಮೆ : ಉತ್ತರ ಕರ್ನಾಟಕದ ಗೋಧಿ ಬೀಸುತೊಮ್ಮೆ ಎಂಬ ಆಟದಲ್ಲಿ ಹೇಳುವ ಮಾತು.

ರಾಜ : ದಕ್ಷಿಣ ಕನ್ನಡದ ಉಂಗುರದಾಟದಲ್ಲಿ ತೆಂಗಿನ ಗರಿಯ ಉಂಗುರವನ್ನು ನಡು ಬೆರಳಿಗೆ ಸಿಕ್ಕಿಸಿಕೊಂಡ ಆಟಗಾರನಿಗೆ ಆಟದಲ್ಲಿ ದೊರೆಯುವ ಸ್ಥಾನಮಾನ.

ರಾಜ : ದಕ್ಷಿಣ ಕನ್ನಡದ ಐದು ಜನರಾಡುವ ಕಂಬದಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ ಆಟಗಾರರ ಪ್ರಾರಂಭಿಕ ಸ್ಥಾನ ಅಂದರೆ ಹಿಡಿಯುವುದನ್ನು ಯಾರು, ಹಿಡಿಸಿಕೊಳ್ಳುವವರು ಯಾರು ಎಂಬುದನ್ನು ನಿರ್ಧರಿಸಲು ಜನರನ್ನು ಎಣಿಸುವ ವಿಧಾನದಲ್ಲಿ ಐದನೆಯವನಿಗೆ ಬಳಸುವ ಶಬ್ದ.

ರಾಜಾ : ಉತ್ತರ ಕನ್ನಡದ ಜೋಗದ ಬೆಟ್ಟೆ ಆಟದಲ್ಲಿ ಆಟದ ಒಂದು ಹಂತದ ಹೆಸರು.

ರಾಜ್ಯಕಟ್ಟು : ಉತ್ತರ ಕರ್ನಾಟಕದ ಗುಲುಗುಲುಗುಲಕ್‌ ಆಟದಲ್ಲಿ ಹೇಳುವ ಮಾತು.

ರಾತ್ರಿ : ರಾಮನಗರ, ಕನಕಪುರ ಪರಿಸರದಲ್ಲಿ ಆಡುವ ಹಗಲು ರಾತ್ರಿ ಆಟದಲ್ಲಿ ಗುಂಪಿನ ಮಕ್ಕಳೆಲ್ಲಾ ಹಗಲು ಎಂದಾಗ ಸುತ್ತುತ್ತಿರುತ್ತಾರೆ ರಾತ್ರಿ ಎಂದಾಗ ನಿಶ್ಯಬ್ಧವಾಗಿ ನಿಲ್ಲುತ್ತಾರೆ.

ರಾಮತೊಟ್ಟಿಲು : ಬೀದರ್‌ ಪರಿಸರದ ಕವಡೆ ಆಟದಲ್ಲಿ ಐದು ಕವಡೆಗಳನ್ನು ಬಲಗೈಯಲ್ಲಿ ಇಟ್ಟುಕೊಂಡು ರಾಮ ಎನ್ನುವ ಕವಡೆಯನ್ನು ಮಧ್ಯದಲ್ಲಿ ಇಟ್ಟು ಮೇಲ್ಮುಖವಾಗಿ ನೆಲಕ್ಕೆ ಉರುಳಿಸುವುದು.

ರಾಮಪಟ್ಟು : ಬೀದರ್‌ ಪರಿಸರದ ಕವಡೆ ಆಟದಲ್ಲಿ ಆಟಗಾರರು ಐದು ಕವಡೆಗಳಲ್ಲಿ ಒಂದು ಕವಡೆಯನ್ನು ರಾಮನಾಗಿ ಮಾಡಿಕೊಳ್ಳುತ್ತಾರೆ. ನಾಲ್ಕು ಕವಡೆಗಳು ಒಂದು ರೀತಿ ಬಿದ್ದು ರಾಮನಾಗಿ ಮಾಡಿಕೊಂಡ ಕವಡೆ ಒಂದು ರೀತಿ ಬಿದ್ದರೆ ರಾಮಪಟ್ಟು ಎನ್ನುತ್ತಾರೆ.

ರಿಂಗ್‌ : ಮೈಸೂರು ಪರಿಸರದ ಮೀರಿ ಎಂಬ ಗೋಲಿ ಆಟದಲ್ಲಿ ಗೋಲಿ ಹೊಡೆಯುವವನು ಗೋಲಿಗೆ ಮೇಲಿನಿಂದ ಹೊಡೆಯುವ ಒಂದು ವಿಧಾನ.

ರಿಂಗ್ಬಾಪ್‌ : ಮೈಸೂರು ಪರಿಸರದ ಮೀರಿ ಎಂಬ ಗೋಲಿ ಆಟದಲ್ಲಿ ಗೋಲಿ ಹೊಡೆಯುವವನು ಗೋಲಿಗೆ ಮೇಲಿನಿಂದ ಹೊಡೆಯುವ ಒಂದು ವಿಧಾನ.

ರಿಂಗ್ಬಾಪ್ಜೂದೆ : ಮೈಸೂರು ಪ್ರದೇಶದ ಗೋಲಿ ಆಟದಲ್ಲಿ ಎರಡು ಗೋಲಿ ಆವರಣದ ಒಳಗಡೆ ಇರುವಾಗ ಗೋಲಿಯನ್ನು ಮೇಲಿನಿಂದ ಎತ್ತಿ ಹೊಡೆಯುವಾಗ ಹೇಳುವುದು.

ರುಕ್ಮಿಣಿ : ಕನಕಪುರ ಪರಿಸರದ ಕುಂಟೋ ಬಿಲ್ಲೆ ಆಟದ ಒಂದು ಹಂತದಲ್ಲಿ ಆಡುವವರಿಗೆ ಎದುರಿನವರು ರುಕ್ಮಿಣಿ ಎಂದು ಸೂಚಿಸಿದರೆ, ಆಡುವವರು ಗಲ್ಲದ ಮೇಲೆ ಬೆರಳಿಟ್ಟು ರುಕ್ಮಿಣಿಯಂತೆ ನಟಿಸುತ್ತಾ ಮನೆ ದಾಟಬೇಕು.

ಲಚ್ಚೆ : ದಕ್ಷಿಣ ಕನ್ನಡದ ಚೆನ್ನೆಮಣೆ ಆಟದಲ್ಲಿ ಆಟಗಾರನ ಸ್ವಾಧೀನದಲ್ಲಿ ಎರಡು ಕಾಯಿಗಳಿದ್ದರೆ ಬಳಕೆಯಾಗುವ ವಿಶಿಷ್ಟ ಸಂಖ್ಯಾವಾಚಕ .

ಲಘು : ದಕ್ಷಿಣ ಕನ್ನಡದ ಉಂಗುರದಾಟದಲ್ಲಿ ಏಟಿನ ಮೂಲಕ ಸೋತವರಿಗೆ ಶಿಕ್ಷಿಸುವಾಗ ನೀಡುವ ಮೆತ್ತನೆ ಏಟು.

ಲಗೋರಿಹಚ್ಚು : ಬಾಗಲಕೋಟೆ ಪರಿಸರದ ಲಗೋರಿ ಆಟದಲ್ಲಿ ಚೆಂಡಿನ ಏಟು ತಪ್ಪಿಸಿ ಲಗೋರಿ ಕಟ್ಟುವುದನ್ನು ಲಗೋರಿ ಹಚ್ಚು ಎನ್ನತುತಾರೆ.

ಲಗ್ಗೆ : ಲಗೋರಿ ಮಾದರಿಯ ಚೆಂಡಾಟದಲ್ಲಿ ಲಗ್ಗೆ ಎನ್ನುವ ಪದವನ್ನು ಮೈಸೂರು ಕಡೆ ಬಳಸುತ್ತಾರೆ. ಬಳ್ಳಾರಿ ಪ್ರದೇಶದ ಕೆಲವು ಕಡೆ ಮರ ಕೋತಿ ಆಟದಲ್ಲಿಯೂ ಕೋಲನ್ನು ಇಡುವ ವೃತ್ತಕ್ಕೆ ಲಗ್ಗೆ ಎನ್ನುತ್ತಾರೆ.

ಲಡ್ಗೊಂದು ಹೊಡೆತ : ಮಧ್ಯ ಕರ್ನಾಟಕದ ಲಗೋರಿ ಮಾದರಿಯ ಚೆಂಡಾಟದಲ್ಲಿ ಆಟಗಾರರು ಚಂಡಿನಿಂದ ಬಡಿದಾಡುವಾಗ ಹೇಳುವ ಮಾತು.

ಲಡಿಲಡಿ ಚಿಮ್ಮಣ್ಣ : ಮಧ್ಯ ಕರ್ನಾಟಕದ ಲಗೋರಿ ಮಾದರಿಯ ಚೆಂಡಾಟದಲ್ಲಿ ಆಟಗಾರರು ಚಂಡಿನಿಂದ ಬಡಿದಾಡುವಾಗ ಹೇಳುವ ಮಾತು.

ಲಪ್ಪಲಪ್ಪಪೋಡಿಲೋ : ಮೈಸೂರು ಪರಿಸರದ ಲಗ್ಗೆ ಆಟದಲ್ಲಿ ಚೆಂಡಿನಿಂದ ಏಟು ತಿನ್ನುವವನು ಈ ಮಾತುಗಳನ್ನು ಆಡುತ್ತಾ ಕಿರುಚುತ್ತಾ ಓಡುತ್ತಿರುತ್ತಾನೆ.

ಲಾಟ್ಲಾಟ್ಕುದುರೆ : ಕರಾವಳಿ ಕರ್ನಾಟಕದ ಕುಂಟಿಕುಂಟಿಕೂರಿಗೆ ಆಟದಲ್ಲಿ ಆಟಗಾರರು ಕುದುರೆಯಾಗಿ ಓಡುವಾಗ ಹೇಳುವ ಮಾತುಗಳು.

ಲೊಡ್ಡು : ಉತ್ತರ ಕರ್ನಾಟಕದ ಹುಲಿ ಮನೆ ಆಟದಲ್ಲಿ ಸೋಲಿನ ವಿಧಾನ ಅಥವಾ ಸೋತವರಿಗೆ ಲೊಡ್ಡಾಯಿತು ಎನ್ನುತ್ತಾರೆ.

ವಚ್ಚಿ : ಬಿಜಾಪುರ ಪರಿಸರದ ಚೌಕ ಮಣಿ, ಚಕ್ಕಾರ ಮತ್ತು ಮಧ್ಯಕರ್ನಾಟಕದ ಕಟ್ಟೆಮನಿ, ಚಾವಿ ಆಟಗಳಲ್ಲಿ ಹುಣಿಸೆ ಬೀಜಗಳನ್ನು ಬಳಸುತ್ತಾರೆ. ಇದರಲ್ಲಿ ಬೀಜಗಳನ್ನು ಬಿಟ್ಟಾಗ ಮೂರು ಕಪ್ಪು ಮೇಲ್ಮುಖವಾಗಿ ಒಂದು ಬಿಳಿಮುಖವಾಗಿ ಬಿದ್ದರೆ ವಚ್ಚಿ ಎನ್ನುತ್ತಾರೆ. ಇದು ಒಂದು ಸಂಖ್ಯೆಯನ್ನು ಸೂಚಿಸುತ್ತದೆ.

ವಟಾಕ್‌ : ಮೈಸೂರು ಪರಿಸರದ ಗುಳಿ ತುಂಬು ಗೋಲಿ ಆಟದಲ್ಲಿ ಗೋಲಿ ಬಿಟ್ಟು ತುಂಬಲು ಇರುವ ಸಣ್ಣ ಕುಳಿ.

ವಟ್ಟ : ಉತ್ತರ ಕರ್ನಾಟಕದಲ್ಲಿ ಆಡುವ ಗೋಲಿ ಆಟದಲ್ಲಿ ಹೊಡೆಯುವ ಗೋಲಿಯ ಹೆಸರು.

ವಟ್ಟಾಟ : ರಾಮನಗರ, ಕನಕಪುರ ಪರಿಸರದ ಗೋಲಿ ಆಟದ ಒಂದು ಬಗೆ.

ವಟ್ಟೆಪ್ಪ : ಕುಷ್ಟಗಿ ಪರಿಸರದಲ್ಲಿ ಆಟಕ್ಕಾಗಿ ಬಳಸುವ ಬಣ್ಣ ಬಣ್ಣದ ಗಾಜಿನ ಗೋಲಿ.

ವಡ್ಡಿ : ಮೈಸುರು ಪರಿಸರದಲ್ಲಿ ಗೆಜ್ಜುಗ, ಹುಣಸೆ ಬೀಜಗಳನ್ನು ಪಣಕಟ್ಟಿ ಆಟವಾಡುವಾಗ ನಾಲ್ಕು ಸಂಖ್ಯೆಯ ಗೆಜ್ಜುಗ ಅಥವಾ ಹುಣಸೆ ಬೀಜಗಳಿಗೆ ವಡ್ಡಿ ಎನ್ನುತ್ತಾರೆ. ಇದೊಂದು ಪರಿಮಾಣ ವಾಚಿ.

ವಡ್ಡಿ : ಬಿಜಾಪುರ ಪರಿಸರದ ಗೋಲಿ ಆಟದಲ್ಲಿ ನಾಲ್ಕು ಗೋಲಿಗಳ ಪ್ರಮಾಣವನ್ನು ಸೂಚಿಸಲು ಬಳಸುವ ಪರಿಮಾಣ ವಾಚಕ.

ವಡ್ತ : ಹುಳಿಯಾರು ಪರಿಸರದ ಗೋಲಿ ಆಟದ ಮತ್ತು ಚಿಣ್ಣಿದಾಂಡು ಆಟದ ಅಂಕಣದಲ್ಲಿ ಇರುವ ಗಾಳಿ.

ವಾಲು : ಮೈಸೂರು ಪರಿಸರದ ಗುಮ್ಚಿ, ಬಚ್ಚ, ಗೋಲಿ ಆಟಗಳಲ್ಲಿ ಯಾರು ಮೊದಲು ಆಡಬೇಕು. ಎನ್ನುವ ನಿರ್ಧಾರಕ್ಕೆ ನಿರ್ದಿಷ್ಟ ಸ್ಥಾನದಿಂದ ದೂರವಿರುವವರನ್ನು ವಾಲು ಎನ್ನುತ್ತಾರೆ ಹತ್ತಿರವಿರುವವರನ್ನು ಕುಳ್ಳಿ ಎನ್ನುತ್ತಾರೆ.

ವ್ಹಂಡಿ : ಬಳ್ಳಾರಿ ಪರಿಸರದ ಗುಚ್ಚಿ ಆಟದಲ್ಲಿ ಆಟ ಪೂರ್ಣಗೊಳ್ಳುವುದು.

ವ್ಹಂಡೆ : ಮಧ್ಯಕರ್ನಾಟಕದ ಕೆಲವು ಆಟಗಳಲ್ಲಿ ಉದಾಹರಣೆಗೆ ವಟ್ಟಪ್ಪನ್‌ ಆಟದಲ್ಲಿ ಗೆಲುವಿನ ಅಂಕಗಳನ್ನು ಎಣಿಸುವ ವಿಧಾನ, ಉದಾಹರಣೆ ಒಂದು ವ್ಹಂಡ, ಎರಡು ವ್ಹಂಡೆ.

ವ್ಹಂಡೆ : ಮಧ್ಯ ಕರ್ನಾಟಕದ ಕೆಲವು ಆಟಗಳಲ್ಲಿ ಎದುರಿನವರಿಗೆ ‘ಸಾಲ’ ಹೊರಿಸುವ ವಿಧಾನ. (ನಿನ್ನ ಕಡೆ ವ್ಹಂಡೆ ಆಯಿತು.)

ಶೇಮಂಡೋಳು : ಬಿಜಾಪುರ ಪರಿಸರದ ಚಿಣಿ ಕೋಲು ಆಟದಲ್ಲಿ ಕಣ್ಣಿನ ಮೇಲೆ ಚಿಣ್ಣಿ ಇಟ್ಟು ಹಾರಿಸಿ ಕೋಲಿನಿಂದ ಹೊಡೆಯುವ ವಿಧಾನ.

ಶ್ರೀಗಂಧ :  ಉತ್ತರ ಕರ್ನಾಟಕದ ಹರಳಿನಾಟದ ನಡುವೆ ಆಡುವವರು ಆಟ ಆಡುತ್ತಾ ಒಂದು ಹಂತದಲ್ಲಿ ಉಚ್ಚರಿಸಬೇಕಾದ ಪದ.

ಸಂಟ್ಯಾ ಎತ್ತು : ಮಧ್ಯ ಕರ್ನಾಟಕದ  ಹಲವು ಭಾಗಗಳಲ್ಲಿ ಬುಗುರಿ ಆಟದಲ್ಲಿ ತಿರುಗುತ್ತಿರುವ ಬುಗುರಿಯನ್ನು ದಾರದ ಸಹಾಯದಿಂದ ಮೇಲೆತ್ತಿ ಹಿಡಿಯುವುದು.

ಸಂಪೂರ್ಣ ಗಂಧ : ಉತ್ತರ ಕನ್ನಡದ ಹರಳಿನಾಟದ ನಡುವೆ ಆಡುವವರು ಆಟ ಆಡುತ್ತಾ  ಕಡೆಯ ಹಂತದಲ್ಲಿ ಉಚ್ಚರಿಸಬೇಕಾದ ಪದ. ಈ ಆಟದಲ್ಲಿ ಒಟ್ಟು ಹದಿನೆಂಟು ಹಂತಗಳಿರುತ್ತವೆ.

ಸಂಪ್ಲೆ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಸಣಗೆರಸಿ :ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಸಣ ಬಾವಿ : ಉತ್ತರ ಕನ್ನಡದ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಸಣ್ಣಸಿಂಗಿ : ಶಿಕಾರಿಪುರ ಪರಿಸರದ ಎತ್ತಗಲ್ಲು ಆಟದಲ್ಲಿ ಆಟದ ನಡುವೆ ಆಟಗಾರರು ಹೇಳಬೇಕಾದ ಮಾತು.

ಸತ್ತಪೀಟು : ಮೈಸೂರು, ಹುಳಿಯಾರು ಪರಿಸರದ ಬುಗುರಿ ಆಟದಲ್ಲಿ ಬಳಕೆಯಾಗುವ ಪದ. ತಿರುಗುತ್ತಿಲ್ಲದ ಬುಗುರಿಯನ್ನು ದಾರದಿಂದ ಮೇಲೆತ್ತಿ ಹಿಡಿಯುವುದು.

ಸತ್ತ ಬುಗುರಿ : ದಕ್ಷಿಣ ಕನ್ನಡದ ಬುಗುರಿ ಆಟದಲ್ಲಿ  ಸೋತವನ ಬುಗುರಿಗೆ ಇಡುವ ಹೆಸರು.

ಸತ್ತಿಕಲ್ಲು :ಕರಾವಳಿ ಕರ್ನಾಟಕದ ಭಾರ ಎತ್ತುವ ಆಟದ ಹೆಸರು.

ಸಪ್ಪೆತನ್ನಾರಿ : ಮೈಸೂರು ಪರಿಸರದ ಬುಗುರಿ ಆಟದಲ್ಲಿ  ತನ್ನಾರಿ ಎನ್ನುವುದು ಒಂದು ಆಟ. ಅದರಲ್ಲಿ ಎದುರಿನವರ ಬುಗುರಿಗೆ ಆಡುವ ಬುಗರಿ ಮೊಳೆಯಿಂದ ನಾಟಿದರೆ ಗುನ್ನಾ ಎನ್ನುತ್ತಾರೆ. ಗುನ್ನರಹಿತವಾದ ಆಟವಾಡಿದರೆ ಅದನ್ನು ಸಪ್ಪೆತನ್ನಾರಿ ಎನ್ನುತ್ತಾರೆ.

ಸಮುದ್ರ : ಉತ್ತರ ಕನ್ನಡದ ಗುಯ್ಬಾಟದ ನಕ್ಷೆಯಲ್ಲಿ ಒಂದು ಸ್ಥಾನದ ಪದ.

ಸರ್ಮನೆ : ಉತ್ತರ ಕನ್ನಡದ ಹರಳಿನ ಒಂದು ಆಟದಲ್ಲಿ ಕಾಳುಗಳು ಸಮಭಾಗವಾದಾಗ ಹೇಳುವ ಮಾತು.

ಸರಸ್ವತ್ತೈದೋ : ಉತ್ತರ ಕನ್ನಡದ ಹರಳಿನಾಟದ ಒಂದು ಬಗೆಯಲ್ಲಿ ಆಟದ ಒಂದು ಹಂತದಲ್ಲಿ ಉಚ್ಚರಿಸುವ ಮಾತು.

ಸವಾರಿ : ದಕ್ಷಿಣ ಕನ್ನಡದ ಬುಗುರಿ ಆಟದಲ್ಲಿ ದಾರ ಸುತ್ತಿದ ಬುಗುರಿಯನ್ನು ಮೇಲೆ ಚಿಮ್ಮಿ ನೆಲಕ್ಕೆ ತಾಗಿಸದೆ ತಿರುಗಿಸುವುದನ್ನು ಸವಾರಿ ಎನ್ನುತ್ತಾರೆ.

ಸವಾರಿ : ಮೈಸೂರು ಭಾಗದ ಬುಗುರಿ ಆಟದಲ್ಲಿ ಬುಗುರಿಯನ್ನು ನೆಲಕ್ಕೆ ಬಿಟ್ಟಾಗ ಒಂದು ಕಡೆ ನಿಂತು ತಿರುಗದೆ ತಿರುಗುತ್ತಾ ವಾರೆಯಾಗಿ ಓಡುವುದನ್ನು ಸವಾರಿ ಎನ್ನುತ್ತಾರೆ.

ಸಾದರಿ : ದಕ್ಷಿಣ ಕನ್ನಡದ  ಕಂಬದಾಟದಲ್ಲಿ ಆಟ ಪ್ರಾರಂಭಕ್ಕೆ ಮುಂಚೆ, ಆಟಗಾರರಲ್ಲಿ ಹಿಡಿಯುವವರು ಯಾರು, ತಪ್ಪಿಸಿಕೊಳ್ಳಬೇಕಾದವರು ಯಾರು ಎನ್ನುವ ನಿರ್ಧಾರಕ್ಕಾಗಿ ವ್ಯಕ್ತಿಯನ್ನು ಹೆಸರಿಸಿಕೊಂಡು ಬರುವ ವಿಧಾನದ ಅನುಕ್ರಮಣಿಕೆಯಲ್ಲಿ ಬಳಕೆಯಾಗುವ ಒಂದು ಪದ.

ಸಾದಾ : ರಾಮನಗರ, ಕನಪುರ ಪರಿಸರದ ಮೀರಿ ಗೋಲಿ ಆಟದಲ್ಲಿ ಗೋಲಿಯನ್ನು ಕೆಳಗಿನಿಂದ ಬೀಸಿ ಒಗೆದು ಗೋಲಿ ಹೊಡೆಯುವುದು.

ಸಾಮ್ರಾಜ್ಯ : ಉತ್ತರ ಕನ್ನಡದ  ಬೆಟ್ಟೆ ಆಟದ ನಕ್ಷೆಯಲ್ಲಿ ವಿವಿಧ ಸ್ಥಾನಗಳನ್ನು ಗುರುತಿಸುವ ಪದಗಳಲ್ಲಿ ಒಂದು.

ಸಾವಿತ್ರಿಮೂರು : ಉತ್ತರ ಕನ್ನಡದ ಹರಳಿನಾಟದಲ್ಲಿ ಆಟದ ನಡುವೆ ಒಂದು ಹಂತದಲ್ಲಿ ಹೇಳಬೇಕಾದ ಮಾತು.

ಸಿದ್ಗೆ ಅಕ್ಕಿ : ಉತ್ತರ ಕನ್ನಡದ ಕಳ್ಳಾಟದಲ್ಲಿ ಬಳಕೆಯಾಗುವ ಪದ.

ಸಿಯ್ಯಾ : ಮಂಡ್ಯ, ಮೈಸೂರು ಪ್ರದೇಶದ ಕೆಲವು ಆಟಗಳಲ್ಲಿ ನಿಯಮಗಳನ್ನು ಆಕಸ್ಮಿಕವಾಗಿ ಆಟಗಾರರು ಮುರಿದಾಗ ಸಿಯ್ಯಾ ಎಂದು ತಕ್ಷಣ ಹೇಳಿದರೆ ಅವರಿಗೆ ಜೀವದಾನ ಸಿಗುತ್ತದೆ. ಇಲ್ಲದಿದ್ದರೆ ಎದುರಾಳಿ ಮೊದಲು ಸಿಯ್ಯಾ ಎಂದರೆ ಆಟ ಹೋಗುತ್ತದೆ ಇದು ಆಣೇ ಕಲ್ಲಾಟ, ಬಳೆಗಾಜಾಟಗಳಲ್ಲಿ ಬಳಕೆಯಾಗುತ್ತದೆ.

ಸೀದು ಹೋಗುವುದು : ಮೈಸೂರು ಮಂಡ್ಯದ ಕೆಲವು ಆಟಗಳಲ್ಲಿ ಉದಾ : ಚೌಕಾಬಾರ ನಿಗದಿತ ಅಂಕಗಳನ್ನು ಸೇರಿಸುತ್ತಿರುತ್ತಾರೆ. ಆತದ ಯಾವುದೋ ನಿಯಮವನ್ನು ಮುರಿದಾಗ ಅದುವರೆಗೆ ಗಳಿಸಿದ್ದ ಎಲ್ಲಾ ಅಂಕಗಳನ್ನು ಕಳೆದು ಕೊಳ್ಳುತ್ತಾರೆ. ಇದನ್ನು ಸೀದು ಹೋಗುವುದು ಎನ್ನುತ್ತಾರೆ.

ಸೀಮೆಣ್ಣೆಗೋಲಿ : ಹುಣಸೂರು ಪರಿಸರದಲ್ಲಿ ತೆಳು ಹಸಿರು ಬಣ್ಣದ ಗೋಲಿ.

ಸೀಸ : ಬಳ್ಳಾರಿ ಪರಿಸರದ ಪಾರಿವಾಳದ ಜೂಜಿನಾಟದಲ್ಲಿ ಬಳಕೆಯಾಗುವ ಬಿಳಿಯ ಬಣ್ಣದ ಪಾರಿವಾಳ.

ಸುರಂಗದವರ ಬತ್ತಿ : ರಾಮನಗರ, ಕನಕಪುರ ಪರಿಸರದ ಸುರ್ ಸುರಬತ್ತಿ ಆಟದಲ್ಲಿ ಬಳಕೆಯಾಗುವ ಭಾಷಾ ರೂಪ, ಸುರ್ ಸುರ್ ಸುರಬತ್ತಿ ಸುರಂಗದವರ ಬತ್ತಿ ಎಂದು ಹೇಳುತ್ತಾ ಸಾಲಾಗಿ ಕುಳಿತಿರುವ ಒಂದು ಗುಂಪಿನ ಯಾರದಾದರೂ ಕೈಯಲ್ಲಿ ಸುರ್ ಸುರ್ ಬತ್ತಿ ಎಂದು ಹೆಸರಿಸುವ ವಸ್ತುವನ್ನು ಬಚ್ಚಿಡುತ್ತಾರೆ.

ಸುರ್ ಸುರ್ ಬತ್ತಿ : ರಾಮನಗರ, ಕನಕಪುರ ಪರಿಸರದಲ್ಲಿ ಮಕ್ಕಳಾಡುವ ವಸ್ತು ಹುಡುಕಾಟದ ಆಟದಲ್ಲಿ ಬಚ್ಚಿಟ್ಟುಕೊಳ್ಳುವ ಯಾವುವುದೇ ವಸ್ತು.

ಸುರ್ಮ : ಬಳ್ಳಾರಿ ಪರಿಸರದ ಪಾರಿವಾಳಗಳನ್ನು ಹಾರಿಸುವ ಜೂಜಿ ಆಟದಲ್ಲಿ ಬಳಸುವ ಒಂದು ಪಾರಿವಾಳದ ಹೆಸರು.

ಸುಳ್ಳಾ : ಉತ್ತರ ಕನ್ನಡದ ಒಂದು ಹರಳಿನಾಟದಲ್ಲಿ ಸಂಖ್ಯಾವಚಾಕಗಳೊಂದಿಗೆ ಕೂಡಿ ಬರುವ ಪದ. (ಸುಳ್ಳಾ ಒಂದು, ಸುಳ್ಳಾ ಎರಡು)

ಸೂಜ್ಯೋ : ಉತ್ತರ ಕನ್ನಡದ ಅಪ್ಪಡದಪ್ಪಡ ಎಂಬ ಆಟದಲ್ಲಿ ಬಳಸುವ ಪದ.

ಸೂರ್ಯ : ತುಮಕೂರು, ಹುಳಿಯಾರು ಪರಿಸರದಲ್ಲಿ ಒಳಗೆ ನೀಲಿಬಣ್ಣ ಇರುವ ಗಾಜಿನ ಗೋಲಿ.

ಸೇಬೆ : ಬಳ್ಳಾರಿ ಪರಿಸರದ ಗೋಲಿ ಆಟದಲ್ಲಿ ಎರಡು ಗೋಲಿಗಳ ನಡುವಿನ ಅಂತರ ಎರಡು ಬೆರಳು ತೂರುವಷ್ಟಿದ್ದರೆ ಸೇಬೆ ಎನ್ನುತ್ತಾರೆ.

ಸೊಣೆಪೆ : ಬಳ್ಳಾರಿ, ಹಗರಿಬೊಮ್ಮನಹಳ್ಳಿ ಪರಿಸರದ ಗುಚ್ಚಿ ಆಟದಲ್ಲಿ ಮೇಲೆ ಎಸೆದ ಕಲ್ಲನ್ನು ಕೈಯನ್ನು ತಿರುಗಿಸಿ ಹಿಡಿಯುವ ವಿಧಾನ.

ಸೋಡಾಗೋಲಿ : ಬಳ್ಳಾರಿ, ಮೈಸೂರು ಪರಿಸರದ ಗೋಲಿ ಆಟದಲ್ಲಿ ಬಳಸುವ ದಟ್ಟ ನೀಲಿ ಬಣ್ಣದ ಗೋಲಿ.

ಸೋಮಾರಿ : ಕೊಳ್ಳೇಗಾಲ ಪರಿಸರದ ಲಗೋರಿ ಆಟದಲ್ಲಿ ನಾಯಕನ ಹೆಸರು.

ಸೋರ್ ಕಾಲ್ : ಉತ್ತರ ಕರ್ನಾಟಕದ ಅತ್ ರಂಬೆ ಗಾಣ್ನರಂಬೆ ಆಟದಲ್ಲಿ ತುದಿಗಾಲಿಗೆ ಬಳಸುವ ಪದ.

ಸೋಸು : ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಸಾಮಾನ್ಯವಾಗಿ ಚಿಕ್ಕ ಮಕ್ಕಳಾಡುವ ಕೈಗಳಿಗೆ ಹೊಡೆತ ಕೊಡುವ ಆಟದಲ್ಲಿ  ಬಳಕೆಯಾಗುವ ಪದ. ಇದೇ ಬಗೆಯ ಆಟದಲ್ಲಿ ಇತರೆಡೆ ಕಾಯಿಸು ಎನ್ನುತ್ತಾರೆ ಮೇಲೆ ಅಂಗೈಗಳನ್ನು ಉಜ್ಜುತ್ತಾ ಇದ್ದರೆ ಇನ್ನೊಬ್ಬ ಸಮಯ ನೋಡಿ ಕೈಗೆ ಹೊಡೆಯುತ್ತಾನೆ.

ಸ್ಕೇಲು : ಹುಳಿಯಾರು ಪರಿಸರದ ಚಿಣ್ಣಿ ದಾಂಡಿನ ಆಟದಲ್ಲಿ ಅಂಕಮಾಪನದ ಪರಿಮಾಣ.

ಸೃಷ್ಟಿಗೆರಡುಬಟ್ಟು : ಉತ್ತರ ಕನ್ನಡದ   ಹರಳಿನಾಟದಲ್ಲಿ  ಒಂದು ಹರಳು ಮೇಲೆಸೆದು ಕೆಳಗಿನ ಹರಳುಗನ್ನೆತ್ತಿ ಆಟದ ಒಂದು ಹಂತ ಮುಗಿದಾಗ ಎಣಿಸುವಾಗಿನ ಎಣಿಕೆಯಲ್ಲಿನ ಒಂದು ಮಾತು.

ಹಂಗಾರಕನ ಕಾಳು : ಉತ್ತರ ಕನ್ನಡ, ಹಳೇ ಮೈಸೂರು ಪ್ರದೇಶಗಳಲ್ಲಿ ಚನ್ನಮಣೆ ಹರಳು ಮಣೆ ಆಟಗಳಿಗೆ ಬಳಸುವ ಒಂದು ಬಗೆಯ ಕಾಳು.

ಹಂಡಿ : ಉತ್ತರ ಕನ್ನಡದ ಚಿಬ್ಬಿ ಆಟದಲ್ಲಿ ಒಂದು ಅಂಕದ ಪರಿಮಾಣವಾಚಕ.

ಹಂಡಿಯಾಗು : ಉತ್ತರ ಕರ್ನಾಟಕದ  ಕಾಲುಚೆಂಡಾಟದಲ್ಲಿ ಸೋತ ಪಕ್ಷಕ್ಕೆ ಹಂಡಿಯಾಗುವುದು ಎನ್ನುತ್ತಾರೆ.

ಹಂದು: ಅಲುಗಾಡು, ಒಂದು ಬಗೆಯ ಕವಡೆ ಆಟದ ಒಂದು ನಿಯಮದಲ್ಲಿ ಎರಡು ಕವಡೆಗಳ ನಡುವೆ ಕಿರು ಬೆರಳು ತೂರಿಸಿ ಎಳೆಯಬೇಕಾಗುತ್ತದೆ. ಹಾಗೆ ಬೆರಳು ತೂರಿಸುವಾಗ ಬೆರಳು ತಗಲಿ ಕವಡೆ ಅಲುಗಾಡಿದರೆ ಹಂದು ಎನ್ನುತ್ತಾರೆ.

ಹಗಲು : ರಾಮನಗರ, ಕನಕಪುರ ಪರಿಸರದಲ್ಲಿ  ಆಡುವ ಹಗಲು ರಾತ್ರಿ ಆಟದಲ್ಲಿ ಗುಂಪಿನ ಮಕ್ಕಳೆಲ್ಲಾ ಹಗಲು ಎಂದಾಗ ಸುತ್ತುತ್ತಿರುತ್ತಾರೆ, ರಾತ್ರಿ ಎಂದಾಗ ನಿಶ್ಯಬ್ಧವಾಗಿ ನಿಲ್ಲುತ್ತಾರೆ.

ಹಣತಮುಳುಗುವುದು : ಬಿಜಾಪುರ ಪರಿಸರದ ಚೌಕಮಣಿ ಆಟದಲ್ಲಿ ಎದುರಿನವರ ಎಲ್ಲಾ ಕಾಯಿ ಹೊಡೆದು ಹೊರಗೆ ಹಾಕುವುದು.

ಹಣ್ಣ ಎತ್ತುವುದು : ಶಿಕಾರಿಪುರ ಪರಿಸರದ ಎತ್ತಗಲ್ಲು ಆಟದಲ್ಲಿ ಆಟದ ನಡುವೆ ಆಟಗಾರರು ಹೇಳಬೇಕಾದ ಮಾತು.

ಹಣ್ಣುಮನೆ : ಉತ್ತರ ಕನ್ನಡದ ಜಿಪ್ಪಿ ಆಟದಲ್ಲಿ ಕಾಯಿ ಹಣ್ಣು ಮಾಡುವ ಮನೆ.

ಹತ್ತಕ್ಕೋ : ಉತ್ತರ ಕನ್ನಡದ ಕಳ್ಳಾಟದಲ್ಲಿ ಬಳಕೆಯಾಗುವ ಒಂದು ಪದ.

ಹನ್ಮನೆ : ಸಿಂಧನೂರು ಪರಿಸರದ ಚಕೋರಿ ಆಟದ ಅಂಕಣದ ಕೇಂದ್ರಭಾಗ.

ಹರಳು : ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಾಮಾನ್ಯವಾಗಿ ಆಟಗಳಿಗೆ ಬಳಕೆಯಾಗುವ ಸಣ್ಣಕಲ್ಲುಗಳು ಅಥವಾ ಯಾವುದೇ ಸಸ್ಯದ ಬೀಜಗಳು.

ಹಲಗತ್ತಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ಹಲಪಿ : ಉತ್ತರ ಕನ್ನಡದಲ್ಲಿ ಹೆಣ್ಣು ಮಕ್ಕಳು ಕುಂಟಾಟದಲ್ಲಿ ಕುಂಟುತ್ತಾ, ಕಾಲಿನಿಂದ ತಳ್ಳುತ್ತಾ ಆಟದ ಮನೆಗಳಲ್ಲಿ ಜಾರಿಸುವ ವಸ್ತು.

ಹಸ್ತ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ  ಬಳಕೆಯಾಗುವ ಪದ.

ಹಾಣೆ : ಉತ್ತರ ಕನ್ನಡದ ಹಾಣೆ ಆಟ ಅಥವಾ ಚಿಣಿಫಣಿ ಆಟದಲ್ಲಿ ಹೆಂಡೆ ಹೊಡೆಯಲು ಬಳಸುವ ಕೋಲು ಇತರೆಡೆ ‘ದಾಂಡು’ ಎನ್ನುತ್ತಾರೆ.

ಹಾಯು : ಉತ್ತರ ಕರ್ನಾಟಕದ ಗುಲುಗುಲುಗಲಕ್ ಆಟದಲ್ಲಿ ಬಳಸುವ ಪದ.

ಹಾಲಕ್ಕೋ : ಉತ್ತರ ಕನ್ನಡದ ಕಳ್ಳಾಟದಲ್ಲಿ ಬಳಕೆಯಾಗುವ ಪದ.

ಹಾವೋ : ಉತ್ತರ ಕನ್ನಡದ ಹಳ್ಳ ಕಾಟಾ ಆಟದಲ್ಲಿ ಬಳಕೆಯಾಗುವ ಪದ.

ಹಿಂತಿ : ಮೈಸೂರು ಪರಿಸರದ ಮೀರಿ ಎನ್ನುವ ಗೋಲಿ ಆಟದಲ್ಲಿ ಅಂಕಣಕ್ಕೆ ಗೋಲಿಗಳನ್ನು ಬಿಟ್ಟಾಗ ಹೊಡೆಯುವವನಿಗೆ ದೂರದಲ್ಲಿರುವ ಗೋಲಿ.

ಹಿರೇಗಡಿ : ಬೀದರ್ ಪರಿಸರದ ಟೊಂಬರಿ ಆಟದಲ್ಲಿ ಆಟಗಾರನೊಬ್ಬನ ಸ್ಥಾನ.

ಹೀರೆಕಾಯಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಹೇಳುವ ಮಾತು.

ಹುಂಡು : ಉತ್ತರ ಕನ್ನಡದ ಕೂರ್ ಕೂರ್ ಆಟದಲ್ಲಿ ಬೂದಿ ಅಥವಾ ಹೊಗೆ ಇಟ್ಟಾಗ ಅದನ್ನು ಹುಂಡು ಎನ್ನುವರು.

ಹುಚೋಟ್ : ಉತ್ತರ ಕರ್ನಾಟಕದ ಸಾದು ಗೋದು ಆಟದಲ್ಲಿ ಬಳಸುವ ಪದ.

ಹುಣಿಸೆ ಪಿಕ್ಕ : ಶಿರಾ, ಹುಳಿಯಾರು ಪರಿಸರದ ವಿವಿಧ ಆಟಗಳಲ್ಲಿ ತೇಯ್ದ ಹುಣೆಸೇ ಬೀಜಗಳನ್ನು ಬಳಸುತ್ತಾರೆ. ಇವುಗಳನ್ನು ಹುಣಿಸೇ ಪಿಕ್ಕ ಎನ್ನುತ್ತಾರೆ.

ಹುತ್ತುತ್ತು : ಬೀದರ್ ಪರಿಸರದ ಟೊಂಬರಿ ಆಟದಲ್ಲಿ ಆಡುತ್ತಿರುವ ಆಟಗಾರ ಇತರರನ್ನು ವಸ್ತ್ರದಿಂದ ಹೊಡೆಯುವಾಗ ಹುತ್ತುತ್ತು ಎಂದು ಉಚ್ಛರಿಸುತ್ತಲೇ ಇರಬೇಕು.

ಹುತ್ಯಾ : ಉತ್ತರ ಕರ್ನಾಟಕದ ಒಂದು ಬಗೆಯ ಹರಳಿನಾಟದಲ್ಲಿ ಬಳಕೆಯಾಗುವ ಪದ.

ಹುಯ್ಲ : ಉತ್ತರ ಕರ್ನಾಟಕದ ಗುಲುಗುಲುಗಲಕ್ ಆಟದಲ್ಲಿ ಗಿಡಗ ಮುಟ್ಟುವ ಒಂದು ಹಂತವಿದೆ. ಗಿಡಗ ಮುಟ್ಟಿದರೆ ಹುಯ್ಲ ಆಯ್ತು ಎನ್ನುವರು.

ಹುರಿ : ಬಳ್ಳಾರಿ ಪರಿಸರದಲ್ಲಿ ಬುಗುರಿ ಆಡಿಸಲು ಬಳಸುವ ದಾರ.

ಹುಲಿ : ಕರ್ನಾಟಕದ ಬಹುಭಾಗಗಳಲ್ಲಿ ಆಡುವ ಹುಲಿದನ, ಹುಲಿ ಕವಿಲೆ, ಹುಲಿ, ಹಸು, ಆಟಗಳಲ್ಲಿ ಹಿಡಿಯುವವರು ಹುಲಿಯಾಗಿರುತ್ತಾರೆ. ಹುಲಿಕುರಿ ಕಟ್ಟುವ ಆಟ, ಹುಲಿಮೇಕೆ ಕಟ್ಟುವ ಆಟ, ಹುಲಿದನ ಕಟ್ಟುವ ನಕ್ಷೆ ಬರೆದು ಆಡುವ ಆಟದಲ್ಲಿ ಹುಲಿ ಎಂದು ಕಲ್ಪಿಸಿಕೊಂಡ ಸಣ್ಣ ಕಲ್ಲು.

ಹುಲಿ : ಕರಾವಳಿ ಕರ್ನಾಟಕದ ಹುಲಿದನ ಆಟದಲ್ಲಿ ಬಲಿಷ್ಠನಾಗಿರುವವನಿಗೆ ಆಟದ ನಿಯಮದಂತೆ ಕರೆಯುವ ಹೆಸರು.

ಹುಲಿ : ಉತ್ತರ ಕರ್ನಾಟಕ ಭಾಗದಲ್ಲಿ ಆಡುವ ಹುಲಿಮನೆ ಆಟದಲ್ಲಿ ನಡೆಸುವುದಕ್ಕಾಗಿ ಬಳಕೆಯಾಗುವ ದೊಡ್ಡ ಹರಳು ಕಲ್ಲು.

ಹುಲಿಕಟ್ಟು : ಕೊಳ್ಳೇಗಾಲ ಪರಿಸರದ ಹುಲಿಮನೆ ಆಟದಲ್ಲಿ ಬಳಕೆಯಾಗುವ ಮಾತು.

ಹುಲಿಮನೆ : ಯಾದಗೀರ ಮತ್ತು ಕರ್ನಾಟಕದ ಉತ್ತರ ಭಾಗದಲ್ಲಿ ಆಡುವ ಹುಲಿಮನೆ ಆಟಕ್ಕಾಗಿ ಬರೆದುಕೊಳ್ಳುವ ಅಂಕಣ.

ಹುಳಸೇಬಟ್ಟಾ : ಉತ್ತರ ಕನ್ನಡದ ಸಾದು ಗೋದು ಆಟದಲ್ಲಿ  ಬಳಕೆಯಾಗುವ ಪದ.

ಹುಳಿಯಿತು : ಶಿಕಾರಿಪುರ ಪರಿಸರದ ಚಣಮಣೆ ಆಟದಲ್ಲಿ ಆಟದ ಪ್ರಕ್ರಿಯೆಯಲ್ಲಿ ಗುಳಿಯಲ್ಲಿ ಐದು ಕಾಳು ಉಳಿದರೆ ಹುಳಿಯಿತು ಎನ್ನುತ್ತಾರೆ.

ಹೂಕೊಯ್ದೆ : ಉತ್ತರ ಕನ್ನಡದ ಹರಳಿನಾಟದಲ್ಲಿ ಒಂದು ಹರಳು ಮೇಲೆಸೆದು ಕೆಳಗಿನ ಹರಳುಗಳನ್ನು ಹೂಕೊಯ್ದಂತೆ ನಟಿಸಿ ಹಿಡಿಯುವ ಬಗೆ. ಹೂಕೊಯ್ದೆ ಎಂದು ಉಚ್ಚರಿಸಿ ಹರಳು ಹಿಡಿಯಬೇಕು.

ಹೆಂಚು : ಮೈಸೂರು ಪರಿಸರದ ಲಗ್ಗೇ ಆಟದಲ್ಲಿ ಆಟಕ್ಕೆ ಬಳಸುವ ಕೈ ಹಂಚು.

ಹೆಂಡ್ತಿಕಾಣಿಸಪ್ಪಾ : ಉತ್ತರ ಕನ್ನಡದ ಆಟ್ಟಕ್ಕಿ ಮುಟ್ಟಕ್ಕಿ ಆಟದಲ್ಲಿ ಆಟದ ನಡುವೆ ಹೇಳುವ ಮಾತು.

ಹೆಗ್ಗ : ಮೈಸೂರು ಪ್ರದೇಶದ ಹಳಗುಳಿ ಮನೆ ಆಟದಲ್ಲಿ ಒಂದೇ ಗುಳಿಯಲ್ಲಿ ಹೆಚ್ಚು ಕಾಳು ಶೇಖರವಾಗುವುದು.

ಹೆಗ್ಗಬರುವುದು : ಮೈಸೂರು, ಟಿ. ನರಸೀಪುರ, ಕೊಳ್ಳೇಗಾಲ ಪ್ರದೇಶದ ಅಳಗುಳಿ ಮನೆಯಾಟದಲ್ಲಿ ಬಳಕೆಯಾಗುವ ಮಾತು.

ಹೆಗ್ಗಣಗುತ್ರಿ : ಉತ್ತರ ಕರ್ನಾಟಕದ ಹರಳಿನಾಟದಲ್ಲಿ ಒಂದೇ ಮನೆಯಲ್ಲಿ ಹರಳು ರಾಶಿಯಾದರೆ ಈ ಮಾತು ಹೇಳುವರು.

ಹೆಗ್ಗೆತಿನ್ನು : ದಕ್ಷಿಣ ಕನ್ನಡದ ಚನ್ನೆಮಣೆ ಆಟದ ಒಂದು ಹಂತಕ್ಕೆ ಹೇಳುವ ಮಾತು.

ಹೊಡ್ತಾ : ಮೈಸೂರು ಪರಿಸರದ ಲಗ್ಗೆ ಎಂಬ ಬಟ್ಟೆ ಚೆಂಡಿನಾಟದಲ್ಲಿ ಎದುರಿನವರಿಗೆ ಚೆಂಡಿನಿಂದ ಹೊಡೆಯುವವರು ಹೊಡ್ತಾ ಎನ್ನುತ್ತಾ ಹೊಡೆಯುತ್ತಿರುತ್ತಾರೆ.

ಹೊರಬೈಲು : ಉತ್ತರ ಕನ್ನಡದ ಗುಯ್ಬಾಟದ ನಕ್ಷೆಯಲ್ಲಿ ಒಂದು ಸ್ಥಾನವನ್ನು ಗುರುತಿಸುವ ಪದ.

ಹೊಳೆ : ಉತ್ತರ ಕನ್ನಡದ ಗುಯ್ಬಾಟ ಮತ್ತು ಬೆಟ್ಟೆ ಆಟದಲ್ಲಿ ವಿವಿಧ ಸ್ಥಳಗಳನ್ನು ಗುರುತಿಸುವ ಪದ.