ಗ್ರಾಮೀಣ ಆಟಗಳಲ್ಲಿ ಬಳಕೆಯಾಗುವ ಭಾಷೆ ವಿಶಿಷ್ಟವಾಗಿದೆ. ಒಂದು ಧ್ವನಿ, ಪದ, ಪದ ಪುಂಜ, ವಾಕ್ಯದವರೆವಿಗೂ ಭಾಷಿಕ ಘಟಗಳನ್ನು ಆಟಗಳಲ್ಲಿ ಬಳಸುತ್ತಾರೆ. ಆಟಗಳಲ್ಲಿ ಬಳಕೆಯಾಗುವ ಭಾಷಾರೂಪಗಳ ಉಚ್ಚಾರಣೆಯನ್ನು ಬಿಟ್ಟು ಯಾವ ವಿವರಗಳೂ ಆಟ ಆಡುತ್ತಾ ಅವುಗಳನ್ನು ಬಳಸುತ್ತಿರುವವರಿಗೆ ತಿಳಿಯದಿರಬಹುದು, ಅಂದರೆ ಸಂಬಂಧಿಸಿದ ಭಾಷಾ ಘಟಕದ ವ್ಯಾವಹಾರಿಕ ಅರ್ಥ, ಅನ್ಯದೇಶ್ಯ ರೂಪವಾಗಿದ್ದರೆ ಅದರ ಮೂಲಭಾಷೆಯ ಆರ್ಥ, ಸ್ವೀಕೃತಗೊಂಡ ಭಾಷೆಯಲ್ಲಿ ಆ ಭಾಷಾರೂಪದ ಬಳಕೆಯ ಸ್ವರೂಪಗಳು ಆಟ ಆಡುತ್ತಿರುವವರಿಗೆ ತಿಳಿಯದಿರಬಹುದು. ಉದಾ : ‘ಬಾರಾ’ ಎನ್ನುವ ಪದ ಹಿಂದಿ ಅಥವಾ ಉರ್ದು ಭಾಷೆಗಳಲ್ಲಿ ‘ಹನ್ನೆರಡು’ ಸಂಖ್ಯೆಯನ್ನು ಸೂಚಿಸುತ್ತಿದ್ದರೆ ಈಗ ಆಡುತ್ತಿರುವ ಭಾಷಿಕ ಪರಿಸರದಲ್ಲಿ ಎಂಟು ಸಂಕ್ಯೆಯ ಸೂಚಕವಾಗಿ ಬಳಕೆಯಾಗುತ್ತಿರಬಹುದು. ಅಥವಾ ಯಾವುದೇ ಸಂಖ್ಯಾ ಸೂಚಕವಾಗದೆ ಕೇವಲ ಆಟದ ಹೆಸರಾಗಿರಬಹುದು. ಈ ವಿವರಣೆಯ ಉದ್ದೇಶವಿಷ್ಟೇ ಭಾಷೆಯನ್ನು ಮತ್ತು ಅದರ ಕೆಲಸಗಳನ್ನು ವಿವರಿಸುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಸಂವಹನ ಮಾಧ್ಯಮವಾಗಿ, ಅಭಿಪ್ರಾಯಗಳನ್ನು ದಾಖಲಿಸುವ, ಪ್ರಕಟಪಡಿಸುವ ಸಾಧನವಾಗಿ ವಿವರಿಸಲಾಗುತ್ತಿದೆ. ಭಾಷೆ, ಭಾಷಿಕ ಘಟಗಳು ಈ ಉದ್ದೇಶಗಳನ್ನು ಹೊರತು ಪಡಿಸಿಯೂ ಬೇರೆ ಬೇರೆ ಉದ್ದೇಶಕ್ಕಾಗಿ ಬಳಕೆಯಾಗುವ ಸಂದರ್ಭಗಳನ್ನು, ಆಟ ಆಚರಣೆಗಳಂತಹ ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಬಳಕೆಯಾಗುವ, ಭಾಷಾ ರೂಪಗಳಲ್ಲಿ ಸಂಚಯಗೊಂಡಿರಬಹುದಾದ ಸಾಮಾಜಿಕ, ಸಾಂಸ್ಕೃತಿಕ ಪರಂಪರೆಯ ವಿವರಗಳನ್ನು ನಾವಿನ್ನೂ ಪರಿಶೀಲಿಸಬೇಕಿದೆ. ಇಂತಹ ಅಧ್ಯಯನದ ಉದ್ದೇಶಗಳಿಗೆ ವ್ಯಾವಹಾರಿಕವಲ್ಲದ ವಲಯಗಳ ಭಾಷಿಕ ಆಕರಗಳನ್ನು ಸಂಗ್ರಹಿಸುವುದು ಅಗತ್ಯವೆನಿಸಿದೆ. ಈ ಹಿನ್ನೆಲೆಯಲ್ಲಿ ‘ನಮ್ಮ ಆಟಗಳು – ನುಡಿಕಟ್ಟು’ ಎಂಬ ಹೆಸರಿನಲ್ಲಿ ಈ ಸಂಗ್ರಹವನ್ನು ಮಾಡಲಾಗಿದೆ.

ಈ ಪದ ಸಂಗ್ರಹ ಆಟಗಳ ಪದಕೋಶವಾಗಲೀ, ನಿಘಂಟು ಅರ್ಥಕೋಶದ ಮಾದರಿಯಲ್ಲಿ ಬಳಸಬಹುದಾದ ಕೋಶವಾಗಲೀ ಅಲ್ಲ. ಇಲ್ಲಿ ಪದ ಸಂಗ್ರಹವಿದೆಯಾದರೂ ನಿಘಂಟು ರಚನೆಯ ಮಾದರಿಗಳನ್ನು ಅನುಸರಿಸಿಲ್ಲ. ದಾಖಲಿಸಿರುವ ಎಲ್ಲಾ ನಮೂದುಗಳನ್ನು ಪ್ರಧಾನ ನಮೂದುಗಳನ್ನಾಗಿಯೇ ನೀಡಲಾಗಿದೆ. ಈ ಭಾಷಾರೂಪಗಳ ವ್ಯಾಕರಣ ವಿವರಗಳನ್ನು ಬರೆಯಲು ಹೋಗಿಲ್ಲ. ಕಾರಣ ಈ ಭಾಷಿಕ ರೂಪಗಳನ್ನು ವರ್ಗೀಕರಿಸಿಕೊಳ್ಳುವ ಮತ್ತು ಅವುಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಬಳಕೆಯಾಗುವಂತೆ ಸಂಕಲಿಸುವ ಕೆಲಸಗಳು ಇನ್ನೂಹೆಚ್ಚಿನ ಮಾಹಿತಿ ಸಂಗ್ರಹದೊಂದಿಗೆ ಆಗಬೇಕಾಗಿದೆ. ಸಂಗ್ರಹಿತ ಪದ, ಭಾಷಾರೂಪಗಳಿಗೆ ಅವುಗಳ ಮುಂದೆ ಅವುಗಳು ಯಾವ ಆಟದಲ್ಲಿ, ಯಾವ ಹಂತದಲ್ಲಿ ಯಾರಿಂದ ಯಾವ ಪ್ರದೇಶದಲ್ಲಿ ಬಳಕೆಯಾಗುತ್ತವೆ ಎಂಬ ವಿವರಗಳನ್ನು ಮಾತ್ರ ನೀಡಲಾಗಿದೆ. ಹಲವಾರು ರೂಪಗಳು ಒಂದು ಪ್ರಧಾನ ನಮೂದಿನ ಸಾಧಿತ ರೂಪಗಳಾಗಿದ್ದರೂ ಅವುಗಳನ್ನೂ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಕಾರಣ ಎಷ್ಟೋ ವೇಳೆ ಪದರೂಪಗಳು ಒಂದೇ ಇದ್ದು ಅದರಿಂದ ಸಾಧಿತ ರೂಪಗಳು ಹೊರಡಿಸುವ ಆರ್ಥಚ್ಛಾಯೆಗಳು ಪೂರ್ಣ ಭಿನ್ನವಾಗಿರುತ್ತವೆ. ಹಾಗೆಯೇ ಒಂದು ಪದ ಬೇರೆ ಬೇರೆ ಆಟಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ  ಬೇರೆ ಬೇರೆ ಅರ್ಥ ವಿನ್ಯಾಸಗಳಲ್ಲಿ ಬಳಕೆಯಾಗುತ್ತವೆ. ಅದ್ದರಿಂದ, ಧ್ವನಿ ವ್ಯತ್ಯಾಸವುಳ್ಳ ರೂಪಗಳನ್ನೂ ಧ್ವನಿ ವ್ಯತ್ಯಾವಿಲ್ಲದೇ  ಬೇರೆ ಬೇರೆ ವಲಯಗಳಲ್ಲಿ ಅರ್ಥವ್ಯತ್ಯಾಸವನ್ನು ಪಡೆದುಕೊಳ್ಳುವ ಭಾಷಿಕ ಆಕೃತಿಗಳನ್ನೂ ಪ್ರತ್ಯೇಕ ನಮೂದುಗಳನ್ನಾಗಿಯೇ ನೀಡಲಾಗಿದೆ. ಮೊದಲ ಭಾಗದಲ್ಲಿ ಸಂಗ್ರಹಿತ ಮಾಹಿತಿಯನ್ನು ಆಧರಿಸಿ ಆಟದ ಭಾಷೆಯ ಸ್ವರೂಪವನ್ನು ವಿವರಿಸಲು ಪ್ರಯತ್ನಿಸಲಾಗಿದೆ. ಎರಡನೇ ಭಾಗದಲ್ಲಿ ಆಟದ ಹೆಸರುಗಳನ್ನು ಯಾವ ಪ್ರದೇಶದಲ್ಲಿ ಆಡುವ ಆಟ ಯಾವ  ಬಗೆಯ ಆಟ ಎಂಬ ವಿವರಣೆಯೊಂದಿಗೆ ನೀಡಲಾಗಿದೆ. ಮೂರನೇ ಭಾಗದಲ್ಲಿ ಆಟದಲ್ಲಿ ಬಳಕೆಯಾಗುವ ಸಲಕರಣೆ ಆಟಿಕೆ, ವಿಧಾನ, ಮುಂತಾದ ವಿಷಯಗಳಿಗೆ ಸಂಬಂಧಿಸಿದ ಭಾಷಿಕ ರೂಪಗಳನ್ನು ನೀಡಲಾಗಿದೆ.

ಈ ಸಂಗ್ರಹಿತ ವಿವರಗಳು ಕೆಲವು ಶೇಕಡಾ ಒಂದರಷ್ಟು ಮಾತ್ರ ಯಾಕೆಂದರೆ ಕರ್ನಾಟಕದಲ್ಲಿರುವ ಎಲ್ಲಾ ಊರುಗಳಲ್ಲಿಯೂ ವಿಭಿನ್ನವಾದ ವಿಶಿಷ್ಟವಾದ ಆಟಗಳಿವೆ. ಆಟದ ವಿಧಾನಗಳಿವೆ, ಆಟದ ಭಾಷೆಯಿದೆ, ಅವೆಲ್ಲವನ್ನೂ ಕಾಲಮಿತಿಯೊಳಗೆ ಒಬ್ಬ ವ್ಯಕ್ತಿಯಿಂದ ಸಂಗ್ರಹಿಸಿ ದಾಖಲಿಸುವುದು ಕಷ್ಟಸಾಧ್ಯ. ಈ ಸಂಗ್ರಹದಲ್ಲಿ ಸಿಕ್ಕಷ್ಟು ಮಾಹಿತಿಗಳನ್ನು ಪ್ರಾತಿನಿಧಿಕವಾಗಿ ಸಂಕಲಿಸಲಾಗಿದೆ. ಪ್ರಸ್ತುತ ಗ್ರಾಮೀಣ ಆಟಗಳ ಸ್ಥಾನವನ್ನು ಜಾಗತಿಕವಾಗಿ, ಆರ್ಥಿಕವಾಗಿ ಮನ್ನಣೆ ಪಡೆದಿರುವ ಆಟಗಳು ಆವರಿಸಿವೆ. ಇದಕ್ಕಾಗಿ ತರಬೇತಿ ನೀಡುವ, ವೃತ್ತಿಪರವಾಗಿ ತಯಾರು ಮಾಡುವ, ತರಬೇತಿ ನೀಡುವ ಸಂಸ್ಥೆಗಳೇ ಹುಟ್ಟಿವೆ. ಗ್ರಾಮೀಣ ಆಟಗಳು ಉಳಿಯಬಹುದಾದ ಸಾಮಾಜಿಕ ಸಾಂಸ್ಕೃತಿಕ ಪರಿಸರ ಈಗ ಕಾಣುತ್ತಿಲ್ಲ, ಪ್ರಸ್ತುತ ಮಾಹಿತಿಯನ್ನು ಆಯಾಪ್ರದೇಶದಲ್ಲಿ ಒಂದು ಕಾಲದಲ್ಲಿ ಆಟವಾಡಿರುವ ವ್ಯಕ್ತಿಹಳಿಂದ ಹಾಗೂ ಆಟಗಳನ್ನು ನೋಡಿರುವ ವ್ಯಕ್ತಿಗಳಿಂದಲೂ ಸಂಗ್ರಹಿಸಲಾಗಿದೆ. ಹಾಗೆಯೇ ಕರಾವಳಿ ಜಿಲ್ಲೆಗಳ ಮಾಹಿತಿಗಳನ್ನು ಹೆಚ್ಚಾಗಿ ಲಿಖಿತ ಆಕರಗಳಿಂದ ಪಡೆಯಲಾಗಿದೆ. ಹೀಗೆ ಮಾಹಿತಿಗಾಗಿ ಬಳಸಿದ ಲೇಖನ, ಗ್ರಂಥಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಡಿ. ಪಾಂಡುರಂಗಬಾಬು.