ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಇಂದು ಬಹುಮುಖವಾಗಿ ಬೆಳೆದಿವೆ. ಕೃಷಿ ನಾಡಿನ ಗ್ರಾಮೀಣ ಜನತೆಯ ಮುಖ್ಯ ಜೀವನ ಮಾರ್ಗವಾಗಿರುವಂತೆಯೇ ಇತರ ಉದ್ಯಮ ಕ್ಷೇತ್ರಗಳೊಂದಿಗೆ ಕೃಷಿ ರಂಗವೂ ಕೂಡ ತನ್ನ ಪ್ರಗತಿ ಸಾಧನೆಯಲ್ಲಿ ಮುಂಚೂಣಿಯ ಸ್ಥಾನದಲ್ಲಿರುವುದು ದೇಶದ ಆಹಾರೋತ್ಪಾದನೆ ಸಾಮರ್ಥ್ಯವನ್ನು ಬೆಳೆಸುವ ದೃಷ್ಟಿಯಿಂದ ಅತಿ ಮುಖ್ಯವಾಗಿದೆ. ಹಾಗೆಯೇ ಅಧಿಕ ಲಾಭದಾಯಕತೆಯೊಂದಿಗೆ ಸುಸ್ಥಿರ ಮತ್ತು ಪರಿಸರಸ್ನೇಹಿ ಮೌಲ್ಯಯುಕ್ತವಾದ ಸಾಂಪ್ರದಾಯಕ ಕೃಷಿ ವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಎಲ್ಲ ಅಂಶಗಳನ್ನು ಕುರಿತಂತೆ ಕೃಷಿ ವಿದ್ಯಾರ್ಥಿಗಳು ಮತ್ತು ರೈತರಲ್ಲಿ ಪ್ರಜ್ಞಾಪೂರ್ವಕವಾದ ತಿಳಿವಳಿಕೆ ಮೂಡಿಸಲು ನೆರವಾಗುವಂತೆ ಕನ್ನಡ ಮಾತೃಭಾಷೆಯಲ್ಲಿ ಆಧುನಿಕ ಕೃಷಿ ವಿಜ್ಞಾನ ಸಾಹಿತ್ಯವನ್ನು ಪ್ರಕಟಿಸುವುದು ಕೃಷಿ ವಿಶ್ವವಿದ್ಯಾನಿಲಯದ ಒಂದು ವಿಶೇಷ ಹೊಣೆಯಾಗಿದೆ. ಈ ದಿಸೆಯಲ್ಲಿ ಭಾರತ ಸರ್ಕಾರದ ನೆರವಿನಿಂದ ೧೯೬೯-೭೦ರಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ವಿಭಾಗ ಕಾರ್ಯನಿರತವಾಗಿದೆ. ಶಿಕ್ಷಣ ಮಾಧ್ಯಮ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಬೇಕೆಂಬ ೧೯೮೪ರ ಸಂಸತ್ತಿನ ತೀರ್ಮಾನದಂತೆ, ಕೃಷಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ತರುವ ಪ್ರಥಮ ಹೆಜ್ಜೆಯಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಕನ್ನಡ ಪಠ್ಯಪುಸ್ತಕಗಳ ಪ್ರಕಟಣಾಕಾರ್ಯ  ನಡೆದಿದೆ. ಪಠ್ಯ ವಿಷಯವಾಗಿ ಅಲ್ಲದೆ ಈ ಪುಸ್ತಕಗಳು ಕೃಷಿ ವಿಜ್ಞಾನ ಪ್ರಸರಣೆಯ ಮಾಧ್ಯಮವೂ ಆಗಿವೆ. ವಿದ್ಯಾರ್ಥಿಗಳಿಗೆ, ರೈತರಿಗೆ, ಬೋಧಕರಿಗೆ ಹಾಗೂ ವಿಜ್ಞಾನಿಗಳೂ ಸಹ ಉಪಯುಕ್ತವಾಗುವಂತೆ ಈಗಾಗಲೇ ೨೭೫ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.

ಪಠ್ಯಪುಸ್ತಕ ಪ್ರಕಟಣಾಕಾರ್ಯದ ಜೊತೆಯಲ್ಲಿಯೇ ಕನ್ನಡದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಲೇಖಕರಿಗೆ ಹಾಗೂ ಬೋಧಕರಿಗೆ ಅನುವಾಗಲೆಂದು ಸಂಶೋಧನಾ ಕಾರ್ಯಕ್ರಮದ ಅಂಗವಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಪಾರಿಬಾಷಿಕ ಶಬ್ದಕೋಶಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ ಕೃಷಿ ವಿಜ್ಞಾನ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ವರ್ಷ ಆಯ್ದ ವಿಷಯಗಳಲ್ಲಿ ಪುಸ್ತಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ನೀಡುವ ಯೋಜನೆಯನ್ನು ನಡೆಸಲಾಗುತ್ತಿದೆ.

೨೦೦೩ನೇ ವರ್ಷದಿಂದ ಕನ್ನಡ ಅಧ್ಯಯನ ವಿಭಾಗವು ಕೃಷಿ ಜ್ಞಾನ ಭಂಡಾರ ಮಾಲಿಕೆ ಎಂಬ ಒಂದು ವಿನೂತನ ಜನಪ್ರಿಯ ಮಾಲಿಕೆಯನ್ನು ಪ್ರಾರಂಭಿಸಿದ್ದು ಇದರಲ್ಲಿ ಈಗಾಗಲೇ ೨೫ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ ಮಾಲಿಕೆಯ ಪ್ರಕಟಣೆಗಳನ್ನು ರೈತರಿಗೆಂದೇ ವಿಶೇಷವಾಗಿ  ವಿನ್ಯಾಸಿತಗೊಳಿಸಲಾಗಿದ್ದು ಸರಳ, ಸುಂದರ ರೂಪದಲ್ಲಿ ಹೊರತರಲಾಗಿದೆ.

ಇಂದು ಹೆಚ್ಚು ಶಿಕ್ಷಕರು, ವಿಜ್ಞಾನಿಗಳು ಹಾಗೂ ಲೇಖಕರು ತಮ್ಮ ತಜ್ಞತೆಯ ವಿಷಯದಲ್ಲಿ ಕನ್ನಡ ಕೃತಿಗಳನ್ನು ರಚಿಸಿ ಕೃಷಿ ವಿಜ್ಞಾನದ ಆಧುನಿಕ ಅವಿಷ್ಕಾರ, ತಂತ್ರಜ್ಞಾನ ಹಾಗೂ ಆಲೋಚನೆಗಳನ್ನು ಕನ್ನಡ ನಾಡಿನ ಪ್ರತಿ ಮೂಲೆಗೂ ತಲುಪಿಸಲು ಸಹಕರಿಸಬೇಕಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ರೈತನ ಆಡುಭಾಷೆಯಾದ ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಕಟಣೆಗಳಿಗೆ ಮಹತ್ತರವಾದ ಸ್ಥಾನ  ನೀಡಲಾಗಿದೆ.

ಪ್ರಸ್ತುತ ಪ್ರಕಟವಾಗುತ್ತಿರುವ ನಮ್ಮ ಆಹಾರ (ದ್ವಿ.ಮು.) ಪುಸ್ತಕವು ರೈತರಿಗೆ, ಕೃಷಿ ವಿಜ್ಞಾನಿಗಳಿಗೆ, ಬರಹಗಾರರಿಗೆ ಹಾಗೂ ಇತರ ಆಸಕ್ತರಿಗೆ ಹೆಚ್ಚು ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ. ಪಿ.ಜಿ.ಚಂಗಪ್ಪ
ಕುಲಪತಿಗಳು
ಕೃಷಿ ವಿಶ್ವವಿದ್ಯಾನಿಲಯ
ಗಾಂಧಿ ಕೃಷಿ ವಿಜ್ಞಾನ ಕೇಂದ್ರ
ಬೆಂಗಳೂರು-೫೬೦ ೦೬೫.