ಗರ್ಭಾವಸ್ಥೆಯಲ್ಲಿ ತಾಯಿಯ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಮಗು ಗರ್ಭದಲ್ಲಿ ಅತಿ ಶೀಘ್ರದಲ್ಲಿ ಬೆಳೆಯುತ್ತಿರುತ್ತದೆ. ಭ್ರೂಣದ ಬೆಳವಣಿಗೆ ಹಾಗೂ ತಾಯಿಯ ದೈಹಿಕ ಬದಲಾವಣೆಗಳನ್ನು ನಿರ್ವಹಿಸಲು ತಾಯಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇದೆ.

ಅಂಡಾಣು ಗರ್ಭಕೋಶಕ್ಕೆ ಅಂಟಿಕೊಂಡಿದ್ದು, ಆಮ್ಲಜನಕ ಮತ್ತು ಪೋಷಕಾಂಶಗಳು ಭ್ರೂಣದ ಬೆಳವಣಿಗೆಗೆ ತಾಯಿಯ ದೇಹದಿಂದ ಸರಬರಾಜಾಗುತ್ತವೆ. ಇದಲ್ಲದೆ, ಈ ಕೆಳಗೆ ಕಾಣಿಸಿರುವ ಕಾರ್ಯಗಳ ನಿರ್ವಹಣೆಗಾಗಿಯೂ ಗರ್ಭಿಣಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇದೆ.

  • ಭ್ರೂಣದ ಬೆಳವಣಿಗೆ
  • ಗರ್ಭಚೀಲದ ಬೆಳವಣಿಗೆ
  • ಸ್ತನ ಹಾಗೂ ಗರ್ಭಕೋಶದ ಜೀವಕೋಶಗಳ ಅಭಿವೃದ್ಧಿ
  • ಹೆಚ್ಚುವರಿ ರಕ್ತಪ್ರಮಾಣ
  • ಆಮ್ನಿಯಾಟಿಕ್ ಫ್ಲೂಯಿಡ್‌ನ ಉತ್ಪಾದನೆ
  • ದೇಹದಲ್ಲಿ ಆಹಾರಾಂಶಗಳ ಶೇಖರಣೆ
  • ಭ್ರೂಣದ ಅಸ್ಥಿ ಹಾಗೂ ಹಲ್ಲಿನ ರಚನೆ

ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಪೂರೈಸುವ ಮೂಲಕ ಗರ್ಭಿಣಿಯ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಬಹುದು.

ಗರ್ಭಿಣಿಯರಿಗೆ ಪೋಷಕಾಂಶಗಳ ಅವಶ್ಯಕತೆ

ಸಸಾರಜನಕ

ಗರ್ಭಿಣಿಯರಿಗೆ ಸಾಮನ್ಯ ಮಹಿಳೆಯರಿಗಿಂತ ಶೇ.೩೦ರಷ್ಟು ಹೆಚ್ಚು ಸಸಾರಜನಕದ ಅವಶ್ಯಕತೆ ಇದೆ. ಹಾಲು ಮತ್ತು ಹಾಲಿನ ಪದಾರ್ಥಗಳು, ಮಾಂಸಾಹಾರಿಗಳಾಗಿದ್ದರೆ ಮೀನು, ಮೊಟ್ಟೆ ಸೇವಿಸುವುದು ಉತ್ತಮ. ಮಾಂಸದ ಸೇವನೆಯಿಂದ ಒಳ್ಳೆಯ ಗುಣಮಟ್ಟದ ಸಸಾರಜನಕ ಲಭಿಸುತ್ತದೆ. ಸಸ್ಯಾಹಾರಿಗಳು ಹಾಲು ಮತ್ತು ಹಾಲಿನ ಪದಾರ್ಥಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೇಳೆಕಾಳು ಹಾಗೂ ಎಣ್ಣೆ ಬೀಜಗಳನ್ನು ಸೇವಿಸಬಹುದು.

ಕ್ಯಾಲೊರಿಗಳು

ದೈಹಿಕ ಶಕ್ತಿಯ ಅವಶ್ಯಕತೆಗಳನ್ನು ಕ್ಯಾಲೊರಿಗಳು ಪೂರೈಸುತ್ತವೆ. ಸಾಮಾನ್ಯಕ್ಕಿಂತ ೩೦೦ಕಿ.ಕ್ಯಾ.ಗಳಷ್ಟು ಹೆಚ್ಚು ಕ್ಯಾಲೋರಿಗಳನ್ನು ಗರ್ಭಿಣಿಯರು ಸೇವಿಸಬೇಕು. ಶರ್ಕರ ಪಿಷ್ಟಗಳನ್ನು ಹೆಚ್ಚಾಗಿ ಒಳಗೊಂಡಿರುವಂತಹ ಧಾನ್ಯಗಳು, ಸಕ್ಕರೆ ಹಾಗೂ ಎಣ್ಣೆ/ಕೊಬ್ಬಿನ ಸೇವನೆಯಿಂದ ಕ್ಯಾಲೋರಿಗಳ ಅವಶ್ಯಕತೆಯನ್ನು ಪೂರೈಸಬಹುದು.

ಖನಿಜಾಂಶಗಳು

ಖನಿಜಾಂಶಗಳಲ್ಲಿ ಕ್ಯಾಲ್ಸಿಯಂ (ಸುಣ್ಣ) ಹಾಗೂ ಕಬ್ಬಿಣಾಂಶದ ಅವಶ್ಯಕತೆ ಗರ್ಭಿಣಿಯರಿಗೆ ಹೆಚ್ಚಾಗಿರುತ್ತದೆ. ಮಗುವಿನ ಮೂಳೆಗಳು ಹಾಗೂ ಹಲ್ಲಿನ ರಚನೆ ಮತ್ತು ಬಲವರ್ಧನೆಗಾಗಿ ಗರ್ಭಾವಸ್ಥೆಯ ಆರು ತಿಂಗಳ ನಂತರ ಕ್ಯಾಲ್ಸಿಯಂನ ಅವಶ್ಯಕತೆ ಹೆಚ್ಚಾಗುತ್ತದೆ. ಹಾಲು, ಕ್ಯಾಲ್ಸಿಯಂಭರಿತ ಆಹಾರ, ಸೊಪ್ಪನ್ನು ಹೆಚ್ಚಾಗಿ ಉಪಯೋಗಿಸಬೇಕು. ಇದರ ಜೊತೆಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕು.

ಕಬ್ಬಿಣಾಂಶದ ಅವಶ್ಯಕತೆ ಸಾಮಾನ್ಯವಾಗಿ ಮಹಿಳೆಯರಿಗೆ ಪುರಷರಿಗಿಂತ ಹೆಚ್ಚಾಗಿರುತ್ತದೆ. ಗರ್ಭಿಣಿಯರಿಗೆ ದಿನನಿತ್ಯ ೩೮ ಮಿ.ಗ್ರಾಂನಷ್ಟು ಕಬ್ಬಿಣಾಂಶ ಬೇಕಾಗುತ್ತದೆ. ಇದಲ್ಲದೆ ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸಬೇಕಾಗುವುದು.

ಜೀವಸತ್ವಗಳು

ಜೀವಸತ್ವ ಎ,ಬಿ,ಸಿ, ಮತ್ತು ಡಿ ಅಲ್ಲದೆ ಫೋಲಿಕ್ ಆಮ್ಲವನ್ನು ಗರ್ಭಿಣಿಯರಿಗೆ ಹೆಚ್ಚಾಗಿ ಕೊಡಬೇಕು. ಗರ್ಭಾವಸ್ಥೆಯಲ್ಲಿ ಜೀವಸತ್ವ ಎ ನ ಅವಶ್ಯಕತೆ ಶೇ. ೨೫ರಷ್ಟು ಹೆಚ್ಚಾಗುತ್ತದೆ. ಇದನ್ನು ಯಕೃತ್ತು, ಮೊಟ್ಟೆಯ ಹಳದಿ ಭಾಗ, ಹಸಿರು ತರಕಾರಿ, ಹಳದಿ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ಪೂರೈಸಬಹುದು.

ಮೆಗಲೋಬ್ಲಾಸ್ಟಿಕ್ ರಕ್ತಹೀನತೆಯನ್ನು ತಡೆಗಟ್ಟಲು ಫೋಲಿಕ್ ಆಮ್ಲದ ಅವಶ್ಯಕತೆ ಇದೆ. ಇದರ ಜೊತೆಗೆ ಬಿ ಗುಂಪಿನ ಜೀವಸತ್ವಗಳಾದ ಥಯಾಮಿನ್, ರೈಬೋಫ್ಲೇವಿನ್ ಮತ್ತು ನಯಾಸಿನ್ ಅಲ್ಲದೆ ಜೀವಸತ್ವ ಸಿ ಯನ್ನು ಮೊಳೆತ ಕಾಳು ಹಾಗೂ ಹಣ್ಣುಗಳ ಸೇವನೆಯಿಂದ ಪಡೆಯಬಹುದು.

ಗರ್ಭಿಣಿಯ ದಿನದ ಮಾದರಿ ಆಹಾರ

ಬೆಳಗಿನ ಚಹ ಚಹ ೧ ಲೋಟ
ಬಿಸ್ಕತ್ತುಗಳು
ಬೆಳಗಿನ ತಿಂಡಿ ಹಾಲು ೧ ಲೋಟ
ಇಡ್ಲಿ
ಚಟ್ನಿ ೧ಟೇಬಲ್ ಚಮಚ
ಮೊಟ್ಟೆ
ಬಾಳೆಹಣ್ಣು ೧ ಚಿಕ್ಕದು
ಮಧ್ಯಾಹ್ನದ ಊಟ ಚಪಾತಿ
ಅನ್ನ ಅರ್ಧ ಬಟ್ಟಲು
ಬೇಳೆ ಸಾರು ೧ ಬಟ್ಟಲು
ಟೊಮೊಟೋ ೧ ಬಟ್ಟಲು
ಪಾಲಕ್ ಸೊಪ್ಪು ೧ ಬಟ್ಟಲು
ಮೊಸರು ೧ ಬಟ್ಟಲು
ತರಕಾರಿ ಪಲ್ಯ ೧ ಬಟ್ಟಲು
ಸಂಜೆ ಚಹ ಚಹ ೧ಲೋಟ
ಕಡಲೆ ಬೀಜ ೫೦ ಗ್ರಾಂ
ರಾತ್ರಿ ಊಟ ಚಪಾತಿ
ಅನ್ನ ಅರ್ಧಬಟ್ಟಲು
ಕಾಳಿನ ಉಸುಲಿ ೧ ಬಟ್ಟಲು
ಮೊಸರು ೧ ಬಟ್ಟಲು
ಮಲಗುವಾಗ ಹಣ್ಣಿನ ರಸ ೧ ಲೋಟ

ಗರ್ಭಿಣಿಯರಲ್ಲಿ ರಕ್ತಹೀನತೆ

ಗರ್ಭಣಿಯರು ಸಾಮಾನ್ಯವಾಗಿ ರಕ್ತಹೀನತೆಯಿಂದ ಬಳಲುತ್ತಾರೆ. ಗರ್ಭಿಣಿಯರಲ್ಲಿ ಬರುವ ರಕ್ತಹೀನತೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು.

. ಕಬ್ಬಿಣಾಂಶದ ಕೊರತೆಯಿಂದ ಬರುವ ರಕ್ತಹೀನತೆ

ಗರ್ಭಿಣಿಯರಲ್ಲಿ ಕಬ್ಬಿಣಾಂಶದ ಅವಶ್ಯಕತೆ ಹೆಚ್ಚಾಗಿರು‌ತ್ತದೆ. ಈ ಅವಶ್ಯಕತೆ ಇವರ ದೇಹದಲ್ಲಿ ಇರುವ ಕಬ್ಬಿಣಾಂಶದ ಸಂಗ್ರಹಕ್ಕಿಂತ ಅಧಿಕವಾಗಿ ಇರುವುದರಿಂದ ಈ ಖನಿಜಾಂಶವನ್ನು ಆಹಾರದ ಮೂಲಕ ಒದಗಿಸಬೇಕಾಗುವುದು. ಆಹಾರದಲ್ಲಿ ಕಬ್ಬಿಣಾಂಶದ ಕೊರತೆಯುಂಟಾದಾಗ ಈ ರಕ್ತಹೀನತೆ ತಲೆದೋರುತ್ತದೆ.

. ರಕ್ತಸ್ರಾವದಿಂದ ಬರುವ ರಕ್ತಹೀನತೆ

ಹೆರಿಗ ಸಮಯದಲ್ಲಿ ಅಥವಾ ಗರ್ಭಪಾತವಾದಾಗ ಆಗುವ ರಕ್ತಸ್ರಾವದಿಂದ ಈ ರಕ್ತಹೀನತೆ ಸಾಮಾನ್ಯವಾಗಿ ಬರುತ್ತದೆ.

. ಮೆಗಲೋಬ್ಲಾಸ್ಟಿಕ್ ರಕ್ತಹೀನತೆ

ಫೋಲಿಕ್ ಆಮ್ಲದ ಕೊರತೆಯುಂಟಾದಾಗ ರಕ್ತಕೋಶಗಳ ಗಾತ್ರ ದೊಡ್ಡದಾಗುತ್ತದೆ. ಆದರೆ ಇದರಲ್ಲಿ ಹಿಮೋಗ್ಲೋಬಿನ ಅಂಶ ಕಡಿಮೆ ಅಥವಾ ಇರುವುದೇ ಇಲ್ಲ. ಈ ಸ್ಥಿತಿಗೆ ಮೆಗಲೋಬ್ಲಾಸ್ಟಿಕ್ ರಕ್ತಹೀನತೆ ಎನ್ನುತ್ತಾರೆ. ಈ ವಿಧದ ರಕ್ತಹೀನತೆಯುಂಟಾದಾಗ ಗರ್ಭಿಣಿಯರಲ್ಲಿ ಹಸಿವು ಇಲ್ಲದಿರುವುದು ಹಾಗೂ ವಾಂತಿ ಹೆಚ್ಚಾಗುತ್ತದೆ. ಫೋಲಿಕ್ ಆಮ್ಲ ಹೆಚ್ಚಾಗಿರುವ ಆಹಾರವನ್ನು ಆಗಾಗ್ಗೆ ಸ್ವಲ್ಪ ಸ್ವಲ್ಪವಾಗಿ ಕೊಟ್ಟರೆ ಈ ಸ್ಥಿತಿ ಸುಧಾರಿಸುತ್ತದೆ.

ಬಾಣಂತಿಯರಿಗೆ ಪೌಷ್ಟಿಕ ಆಹಾರ

ತಾಯಿಹಾಲು ಶಿಶುಗಳಿಗೆ ಪ್ರಕೃತಿದತ್ತವಾದ ಸಹಜ ಆಹಾರ. ಇದು ಮಗುವಿನ ದೈಹಿಕ ಹಾಗೂ ಮಾನಸಿಕ ಅವಶ್ಯಕತೆಗಳನ್ನು ಪೂರೈಸುವ ಅತ್ಯುತ್ತಮ ಆಹಾರ. ಮಗುವಿಗೆ ಹಾಲುಣಿಸುವ ಮೂಲಕ ತಾಯಿಯು ತೃಪ್ತಿಯನ್ನು ಅನುಭವಿಸುತ್ತಾಳೆ. ಹಾಲುಣಿಸುವುದರಿಂದ ಗರ್ಭಾವಸ್ಥೆಯಲ್ಲಿ ವಿಕಸಿತಗೊಂಡಿದ್ದ ಗರ್ಭಕೋಶವು ಸಂಕುಚಿತಗೊಂಡು ತನ್ನ ಮೊದಲಿನ ಗಾತ್ರವನ್ನು ಪಡೆಯುತ್ತದೆ.

ಗರ್ಭಾವಸ್ಥೆಯಲ್ಲಿ ಇದ್ದ  ಹೆಚ್ಚುವರಿ ಪೋಷಕಾಂಶಗಳ ಅವಶ್ಯಕತೆ ಬಾಣಂತನದಲ್ಲಿ ಮುಂದುವರಿಯುತ್ತದೆ. ಬಾಣಂತನದಲ್ಲಿ ಹಾಲೂಡುವ ತಾಯಂದರಿಗೆ ಗರ್ಭಾವಸ್ಥೆಗಿಂತ ಹೆಚ್ಚಿನ ಆಹಾರದ ಅವಶ್ಯಕತೆ ಇದೆ.

ಸಸಾರಜನಕ : ತಾಯಿ ಹಾಲಿನಲ್ಲಿ ಸಸಾರಜನಕ ಶೇ. ೧.೨ ಗ್ರಾಂ/ಡಿ.ಎಲ್. ಇರುತ್ತದೆ. ತಾಯಿಯ ದೇಹದಲ್ಲಿರುವ ಸಸಾರಜನಕ ಮತ್ತು ಬೇರೆ ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ಹಾಲು ಉತ್ಪತ್ತಿಯಾಗುತ್ತದೆ. ದಿನಕ್ಕೆ ಸರಾಸರಿ ೮೫೦ ಮಿ.ಲೀ. ಹಾಲು  ಉತ್ಪಾದನೆಯಾಗುವುದರಿಂದ ಬಾಣಂತನದಲ್ಲಿ ಸಸಾರಜನಕದ ಅವಶ್ಯಕತೆ ೫೦ ಗ್ರಾಂ ನಿಂದ ೭೦ ಗ್ರಾಂನಷ್ಟು ಇರುತ್ತದೆ. ಅಂದರೆ  ಸುಮಾರು ೨೦ ಗ್ರಾಂ ಸಸಾರಜನಕದ ಹೆಚ್ಚು ಅವಶ್ಯಕತೆ ಬಾಣಂತಿಯರಿಗಿದೆ.

ಕ್ಯಾಲೊರಿಗಳು

ದಿನಕ್ಕೆ ಸರಾಸರಿ ೭೫೦-೮೫೦ ಮಿ.ಲೀ. ಹಾಲು ತಾಯಿ ದೇಹದಿಂದ ಉತ್ಪತ್ತಿಯಾಗುತ್ತದೆ. ಇದರಲ್ಲಿ ಒಟ್ಟು ಕ್ಯಾಲೊರಿಗಳು ೫೦೦-೬೦೦ (೧೦೦ಮಿ. ಲೀ. ಹಾಲಿನಲ್ಲಿ ಸುಮಾರು ೬೫ ಕ್ಯಾಲೊರಿಗಳು ಇರುತ್ತವೆ.) ಇಷ್ಟು ಹಾಲನ್ನು ಉತ್ಪತ್ತಿ ಮಾಡಲು ದೇಹಕ್ಕೆ ೨೦೦-೪೦೦ ಕ್ಯಾಲೊರಿಗಳು ಬೇಕಾಗುತ್ತದೆ. ಒಟ್ಟಿನಲ್ಲಿ ಮಗುವಿಗೆ ಬೇಕಾಗುವ ಹಾಲಿನ ಉತ್ಪಾದನೆಗಾಗಿ ತಾಯಿಗೆ ೪೦೦-೫೫೦ ಕ್ಯಾಲೋರಿಗಳ ಹೆಚ್ಚಿನ ಅವಶ್ಯಕತೆಯಿದೆ.

ಖನಿಜಾಂಶಗಳು

ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಅವಶ್ಯಕತೆ ಗರ್ಭಿಣಿಯರಿಗಿದ್ದಷ್ಟೇ ಬಾಣಂತಿಯರಿಗೂ ಇದೆ. ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಮಗುವಿನ ಅಸ್ಥಿ ಹಾಗೂ ಹಲ್ಲಿನ ರಚನೆಯಲ್ಲಿ ಉಪಯೋಗಿಸಲ್ಪಡುತ್ತದೆ. ಬಾಣಂತಿಯರಿಗೆ ಕ್ಯಾಲ್ಸಿಯಂ ಮಗುವಿನ ಹಾಲಿನ ಉತ್ಪಾದನೆಗೆ ಅವಶ್ಯಕವಾಗಿರುತ್ತದೆ.

ತಾಯಿ ಹಾಲಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದಿಲ್ಲ. ಆದ್ದರಿಂದ ಕಬ್ಬಿಣಾಂಶ ಬಾಣಂತಿಯರಿಗೆ ೩೮ ಮಿ.ಗ್ರಾಂ ಗಳಷ್ಟು ಸಾಕು.

ಜೀವಸತ್ವಗಳು: ತಾಯಿ ಹಾಲಿನಲ್ಲಿ ಜೀವಸತ್ವಗಳಾದ ಎ ಮತ್ತು ಬಿ ಇರುತ್ತದೆ. ಆದುದರಿಂದ ಹಾಲಿನ ಉತ್ಪತ್ತಿಗೆ ಅನುಗುಣವಾಗಿ ಈ ಜೀವಸತ್ವಗಳನ್ನು ಹೆಚ್ಚಾಗಿ ಸೇವಿಸಬೇಕು.

ದ್ರವ ಪದಾರ್ಥಗಳ ಅವಶ್ಯಕತೆ

ತಾಯಿ ಹಾಲಿನಲ್ಲಿ ನೀರಿನಾಂಶ ಹೆಚ್ಚಾಗಿ ಇರುತ್ತದೆ. ಇದರ ಅವಶ್ಯಕತೆಯನ್ನು ನೀರು, ಹಣ್ಣಿನರಸ್ಸ, ಚಹ, ಕಾಫಿ ಮತ್ತು ಹಾಲು ಮುಂತಾದ ದ್ರವ ಪದಾರ್ಥಗಳನ್ನು ಸೇವಿಸುವುದರ ಮೂಲಕ ಪೂರೈಸಬೇಕು.

ವಿಶ್ರಾಂತಿ

ಬಾಣಂತಿಯರಿಗೆ ದೈಹಿಕ ವಿಶ್ರಾಂತಿ ಬೇಕು, ಸರಿಯಾದ ವ್ಯಾಯಾಮ ಮತ್ತು ವಿಶ್ರಾಂತಿಯಿಂದ ಹಾಲಿನ ಉತ್ಪತ್ತಿ ಹಾಗೂ ಮಗುವಿಗೆ ಬೇಕಾಗುವ ಲಾಲನೆ ಪಾಲನೆಗೆ ಸಹಾಯಕವಾಗುತ್ತದೆ.

ಬಾಣಂತಿಯ ದಿನದ ಮಾದರಿ ಆಹಾರ

ಬೆಳಗಿನ ಚಹ ಚಹ ೧ ಲೋಟ
ರವೆ ಗಂಜಿ ೧ ಬಟ್ಟಲು
ಮೊಟ್ಟೆ
ಬಾಳೆಹಣ್ಣು
ಕಿತ್ತಲೆಹಣ್ಣು
ಉಪಾಹಾರ ಲಾಡು
ಮಧ್ಯಾಹ್ನದ ಊಟ ಚಪಾತಿ/ರೊಟ್ಟಿ
ಕಾಳಿನ ಉಸುಲಿ ೧ ಬಟ್ಟಲು
ಬೇಳೆ ಸಾರು ೧ ಬಟ್ಟಲು
ಅನ್ನ ೧ ಬಟ್ಟಲು
ಮೊಸರು ೧ ಬಟ್ಟಲು
ಸಾಯಂಕಾಲದ ಚಹ ಚಹ ೧ ಲೋಟ
ಆಲೂಗಡ್ಡೆ ಚಿಪ್ಸ್ ೧ ಬಟ್ಟಲು
ಹಣ್ಣು
ಮುಸ್ಸಂಜೆ ಹಣ್ಣಿನ ರಸ ೧ ಲೋಟ
ರಾತ್ರಿ ಊಟ ಚಪಾತಿ
ಸಿಹಿಗುಂಬಳ ಕ್ಯಾರೆಟ್ ಪಲ್ಯ ೧ ಬಟ್ಟಲು
ಕಾಳಿನ ಪಲ್ಯ ೧ ಬಟ್ಟಲು
ಬೇಳೆ ತರಕಾರಿ ಸಾರು ೧ ಕಟೋರಿ / ಬಟ್ಟಲು
ಅನ್ನ ೧  ಬಟ್ಟಲು
ಮೊಟ್ಟೆ
ಮಜ್ಜಿಗೆ ೧ ಲೋಟ
ಮಲಗುವ ಮುಂಚೆ ಹಾಲು ೧ ಲೋಟ