ಸಾರವರ್ಧಿತ ಆಹಾರ ಅತ್ಯಾವಶ್ಯಕ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆಹಾರದ ಸ್ವಾದವನ್ನು ಪ್ರತಿಯೊಬ್ಬರೂ ಸವಿಯುತ್ತಾರೆ. ನಾವು ಸೇವಿಸುವ ಆಹಾರದ ಪರಿಣಾಮ ನಮ್ಮ ದೇಹದ ಮೇಲೆ ಯಾವ ರೀತಿಯಲ್ಲಿ ಆಗುತ್ತದೆ? ಆಹಾರದ ಅವಶ್ಯಕತೆ ನಮಗೆ ಎಷ್ಟಿದೆ? ಈ ವಿಷಯಗಳ ಅರಿವು ಅತ್ಯಾವಶ್ಯಕ. ಇದರ ಬಗೆಗಿನ ವಿವರವಾದ ಅಧ್ಯಯನವೇ ನಮ್ಮ ಆಹಾರ. ಆಹಾರದಿಂದ ದೇಹಕ್ಕೆ ಬೇಕಾದ ಶಕ್ತಿ ದೊರಕಬೇಕಲ್ಲದೆ ಬೆಳವಣಿಗೆಯ ಪ್ರಕ್ರಿಯೆ ಹಾಗೂ ಸವೆದ ದೇಹದ ಭಾಗಗಳ ಪುನಶ್ಚೇತನಕ್ಕೆ ಪೋಷಕಾಂಶಗಳೂ ಸಹ ಬೇಕಾಗುತ್ತವೆ.

ನಮ್ಮ ದೇಶದಲ್ಲಿ ಸನಾತನ ಕಾಲದಿಂದಲೂ ವೈದ್ಯರು ಚಿಕಿತ್ಸೆಯಲ್ಲಿ ಆಯುರ್ವೇದವನ್ನು ಬಳಸಿತ್ತಿದ್ದಾರೆ. ಆಯುರ್ವೇದದಲ್ಲಿ ರೋಗಿಗಳಿಗೆ ಔಷಧ ಚಿಕಿತ್ಸೆ ಜೊತೆಗೆ ಪಥ್ಯಾಹಾರವನ್ನು ಬಳಸಲು ತಿಳಿಸಲಾಗುತ್ತಿತ್ತು. ಈಗ ಹೊಸ ಹೊಸ ಅಧ್ಯಯನಗಳ ಮೂಲಕ ಚಿಕತ್ಸೆಯಲ್ಲಿ ರೋಗಕ್ಕೆ ತಕ್ಕ ಪಥ್ಯಾಹಾರಗಳ ಬಳಕೆಯ ಅವಶ್ಯಕತೆಯ ಬಗ್ಗೆ ಅರಿವು ಮೂಡುತ್ತಿದೆ.

ಆಹಾರದಿಂದ ಇಂಧನವಲ್ಲದೆ ದೇಹ ರಚನಾ ಪೋಷಕಾಂಶಗಳೂ ಸಹ ದೊರಕುತ್ತವೆ. ಪೋಷಕದ್ರವ್ಯಗಳಾದ ಜೀವಸತ್ವಗಳು ಮತ್ತು ಖನಿಜಲವಣಗಳೂ ಸಹ ಆಹಾರದಿಂದ ಲಭಿಸುತ್ತವೆ. ಮನುಷ್ಯ ತನ್ನ ಬುದ್ಧಿವಂತಿಕೆ ಹಗೂ ಮುಂಜಾಗರೂಕತೆಯನ್ನು ಬೇರೆ ಬೇರೆ ವಿಧದ ಧಾನ್ಯ, ಬೇಳೆಕಾಳುಗಳು, ತರಕಾರಿಗಳು ಮತ್ತು ಹಣ್ಣು ಹಂಪಲುಗಳನ್ನು ಆಹರಕ್ಕಾಗಿ ಬೆಳೆಯುವುದರ ಮೂಲಕ ಹಾಗೂ ಪಶುಸಂಗೋಪನೆ ಮಾಡುವುದರ ಮೂಲಕ ತೋರಿಸಿಕೊಂಡಿದ್ದಾನೆ. ಸಮತೋಲನ ಆಹಾರ ಪಡೆಯಲು ಸರಿಯಾದ ಪ್ರಮಾಣದಲ್ಲಿ ಹಲವು ವಿಧದ ಆಹಾರ ಸೇವನೆ ಅತ್ಯಾವಶ್ಯಕವಾಗಿದೆ.

ಪೋಷಣಾ ಶಾಸ್ತ್ರ

ದೇಹದ ಬೆಳವಣಿಗೆ, ಸಂರಕ್ಷಣೆ ಹಾಗೂ ದೈಹಿಕ ಕ್ರಿಯೆಗಳು ಸುಗಮವಾಗಿ ಸಾಗುವಂತೆ ನಿಯಂತ್ರಿಸಲು ಬೇಕಾಗುವ ಪೋಷಕಾಂಶಗಳನ್ನು ಆಹಾರದ ಮೂಲಕ ಸೇವಿಸುವ ಮತ್ತು ಬಳಸಿಕೊಳ್ಳುವ ಪ್ರಕ್ರಿಯೆಗೆ ಪೋಷಣೆ ಅಥವಾ ಪೋಷಣಾಶಾಸ್ತ್ರ ಎನ್ನಲಾಗುವುದು. ಇದು ರಸಾಯನ ಶಾಸ್ತ್ರ, ಜೈವಿಕ ರಾಸಾಯನ ಶಾಸ್ತ್ರ ಹಾಗೂ ಮಾನವ ಶರೀರದ ಆರೋಗ್ಯ ಶಾಸ್ತ್ರದೊಂದಿಗೆ ಸಂಬಂಧವನ್ನು ಹೊಂದಿದೆ.

ಮನುಷ್ಯರು ತಿನ್ನುವ ಆಹಾರ ಹಸಿವನ್ನು ನೀಗಿಸಿ ತೃಪ್ತಿ ಕೊಡುವುದಲ್ಲದೆ ಪಚನಾಂಗಗಳಲ್ಲಿ ಜೀರ್ಣಗೊಂಡು ಕರುಳಿನಲ್ಲಿ ಹೀರಲ್ಪಟ್ಟು ದೇಹದ ಬೆಳವಣಿಗೆ, ಪೋಷಣೆ, ಮಾನಸಿಕ ಬೆಳವಣಿಗೆ ಹಾಗೂ ಕಾರ್ಯಶಕ್ತಿಗಾಗಿ ಉಪಯುಕ್ತವಾಗುತ್ತದೆ. ಹಸಿವನ್ನು ಸಾಮಾನ್ಯವಾಗಿ  ಆಹಾರ ಸೇವನೆಯ ಒರೆಗಲ್ಲಾಗಿ ತಿಳಿಯಲಾಗುತ್ತದೆ. ಆಹಾರವು ಪೋಷಕಾಂಶಗಳಿಂದ ಕೂಡಿದ್ದು, ಆರೋಗ್ಯವನ್ನು ನೀಡುತ್ತದೆ. ಆದ್ದರಿಂದ ಆಹಾರವನ್ನು ನಿಯೋಜಿಸುವಾಗ ಪೋಷಣಾಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡರೆ ಮನುಷ್ಯನು ದೈಹಿಕವಾಗಿ ಹಾಗೂ ಸಾಮಾಜಿಕವಾಗಿ ಆರೋಗ್ಯವಂತನಾಗಿ ದೇಶದ ಸತ್ಪ್ರಜೆಯಾಗಲು ಅನುಕೂಲವಾಗುತ್ತದೆ.

ಪೋಷಕಾಂಶಗಳು

ಆಹಾರದಲ್ಲಿರುವ ರಾಸಾಯನಿಕ ವಸ್ತಗಳೇ ಪೊಷಕಾಂಶಗಳು. ಇವುಗಳನ್ನು ದೇಹದ ಅವಶ್ಯಕತೆಗೆ ಅನುಸಾರವಾಗಿ ಸರಿಯಾದ ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸಬೇಕು. ಸಸಾರಜನಕ, ಶರ್ಕರ ಪಿಷ್ಟಗಳು, ಕೊಬ್ಬು, ಖನಿಜಾಂಶಗಳು, ಜೀವಸತ್ವಗಳು ಹಾಗೂ ನೀರು ಇವು ಆಹಾರದ ಮೂಲಕ ನಾವು ಸೇವಿಸುವ ಪೋಷಕಾಂಶಗಳು. ಈ ಪೋಷಕಾಂಶಗಳು ದೇಹದಲ್ಲಿ ಮೂರು ಬಗೆಯ ಕಾರ್ಯಗಳನ್ನು ಕೆಳಗಿನಂತೆ ನಿರ್ವಹಿಸುತ್ತವೆ:

೧. ದೈಹಿಕ ಕಾರ್ಯಗಳ ನಿರ್ವಹಣೆ

೨. ದೇಹದ ಬೆಳವಣಿಗೆ ಹಾಗೂ ಸಂರಕ್ಷಣೆ

೩. ದೇಹಕ್ಕೆ ಶಕ್ತಿಯನ್ನು ಒದಗಿಸುವುದು

ಪೋಷಕಾಂಶಗಳ ಅವಶ್ಯಕತೆ

ಮಗವು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೊಂದುತ್ತಿರುವಾಗ ಅಂದರೆ, ಭ್ರೂಣಾವಸ್ಥೆಯಲ್ಲಿಯೇ ಅದರ ಶರೀರದ ಆರೋಗ್ಯಕರ ಬೆಳವಣಿಗೆ ಹಾಗೂ ಬಲಸಂವರ್ಧನೆಗೆ ಯೋಗ್ಯ ಆಹಾರದ ಅಗತ್ಯ ಇರುತ್ತದೆ. ದೇಹದ ಅಂಗಗಳು ರೂಪುಗೊಳ್ಳುವ ಆ ಸಮಯದಲ್ಲಿ ಎಲ್ಲಾ ಪೌಷ್ಟಿಕಾಂಶಗಳು ತಾಯಿಯಿಂದಲೇ ದೊರೆಯುವುದರಿಂದ ಗರ್ಭಿಣಿಯ ಆಹಾರ ಸಮರ್ಪಕವಾಗಿದ್ದು ಆಕೆಯ ಆರೋಗ್ಯದ ಸಂರಕ್ಷಣೆಯಾಗಬೇಕು.

ದೈಹಿಕ ಕೋಶರಚನಾ ಕಾರ್ಯ ಮತ್ತು ಬೆಳವಣಿಗೆಯ ಪ್ರಕ್ರಿಯೆಗಳು ಬಾಲ್ಯಾವಸ್ಥೆಯಿಂದ ಪ್ರರಂಭವಾಗಿ ಹರೆಯದವರೆಗೂ ಜರುಗುತ್ತಿರುತ್ತವೆ. ಕೋಶಿಕೆಗಳು ಮತ್ತು ಜೀವರಸದ  ಮುಖ್ಯವಸ್ತು ಸಸಾರಜನಕ. ಬೆಳವಣಿಗೆಯ ಕಾಲದಲ್ಲಿ ದೇಹಕ್ಕೆ ಹೆಚ್ಚು ಪ್ರಮಾಣದಲ್ಲಿ ಸಸಾರಜನಕ, ಖನಿಜಾಂಶಗಳು ಮತ್ತು ಪೋಷಕದ್ರವ್ಯಗಳು ಲಭಿಸಬೇಕು

ಆಹಾರ ದೇಹರಚನೆಯಲ್ಲಿ ಭಾಗವಹಿಸುವುದಲ್ಲದೆ ಅಂಗಾಂಗಳ ಕಾರ್ಯಚಟುವಟಿಕೆ ಸರಾಗವಾಗಿ ನಡೆಯುವಂತೆ ಮಾಡಿ ಅದಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ವ್ಯಕ್ತಿಯ ಅಗತ್ಯತೆ, ವಯಸ್ಸು, ಲಿಂಗ, ತೂಕ, ಎತ್ತರ ಮತ್ತು ವೃತ್ತಿಗಳಿಗನುಗುಣವಾಗಿ ಶಕ್ತಿಯನ್ನು ಹಾಗೂ ಇತರ ಪೋಷಕಾಂಶಗಳ ಬೇಡಿಕೆಯನ್ನು ಪೂರೈಸಬೇಕು. ಆಹಾರದಿಂದ ಲಭಿಸುವ ಶಕ್ತಿಯು ಪ್ರತಿಯೊಂದು ಕೋಶಿಕೆಗಳ ಕಾರ್ಯ ಚಟುವಟಿಕೆಗಳಿಗೆ, ದೈಹಿಕ ಶಾಖ ರಕ್ಷಣೆಗೆ, ಸ್ವಾಯತ್ತ ಸ್ನಾಯು ಕಾರ್ಯಗಳಾದ ಹೃದಯದ ಬಡಿತ, ಕರುಳಿನ ಚಲನೆ ಮತ್ತು ಉಸಿರಾಟಕ್ಕೆ ಬೇಕು.

ಜೀವಸತ್ವಗಳು ಮತ್ತು ಅನೇಕ ಖನಿಜಗಳು ತೀರ ಅತ್ಯಲ್ಪ ಪ್ರಮಾಣದಲ್ಲಿ ದೇಹಕ್ಕೆ ಬೇಕಾಗಿದ್ದರೂ, ದೇಹದ ಆರೋಗ್ಯದ ದೃಷ್ಟಿಯಿಂದ ಇವುಗಳ ಸೇವನೆ ಅತ್ಯಾವಶ್ಯಕ. ಈ ಪೋಷಕಾಂಶಗಳು ಅಲ್ಪಪ್ರಮಾಣದಲ್ಲಿ ಸಾಮಾನ್ಯವಾಗಿ ನಾವು ಸೇವಿಸುವ ಎಲ್ಲ ಆಹಾರವಸ್ತುಗಳಲ್ಲೂ ಅಡಕವಾಗಿರುತ್ತವೆ.

ಈ ಪುಸ್ತಕದಲ್ಲಿ ಸಮತೂಕ ಆಹಾರದ ಅವಶ್ಯಕತೆ, ಆಹಾರದ ಗುಂಪುಗಳು ಹಾಗೂ ಇವುಗಳಲ್ಲಿರುವ ಪೋಷಕಾಂಶಗಳು, ವಯಸ್ಸು ಮತ್ತು ದೈಹಿಕ ಪರಿಸ್ಥಿತಿಗನುಗುಣವಾಗಿ ತೆಗೆದುಕೊಳ್ಳಬೇಕಾದ ಸಮತೋಲನ ಆಹಾರ, ನ್ಯೂನಪೋಷಣೆ, ಸಕ್ಕರೆ ಕಾಯಿಲೆ ಹಾಗೂ ಹೃದಯದ ರೋಗಗಳಿಂದ ಬಳಲಿತ್ತಿರುವವರು ಸೇವಿಸಬೇಕಾದ ಆಹಾರದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕೊಡಲಾಗಿದೆ.