ಆಹಾರ ಹಸಿವಿಗೆ ತೃಪ್ತಿ ನೀಡಿದರೆ, ಪೋಷಕಾಂಶಗಳು ಆರೋಗ್ಯಕ್ಕೆ ಕಾರಣವಾಗುತ್ತವೆ. ಆರೋಗ್ಯಕ್ಕೆ ಎಲ್ಲಾ ಪೋಷಕಾಂಶಗಳು ಸೂಕ್ತಪ್ರಮಾಣದಲ್ಲಿರಬೇಕಾದುದು ಅವಶ್ಯಕ. ವೈಜ್ಞಾನಿಕವಾಗಿ ಪೋಷಕಾಂಶಗಳ ವಿಂಗಡಣೆ ಮತ್ತು ಕಾರ್ಯನಿರ್ವಹಣೆಗಳು ಕೆಳಗಿನಂತಿವೆ.

) ಶಾಖ ಮತ್ತು ಶಕ್ತಿಯನ್ನು ಕೊಡುವ ಪೋಷಕಾಂಶಗಳು:

ಶರ್ಕರ ಪಿಷ್ಟ, ಕೊಬ್ಬು ಅಥವಾ ಮೇದಸ್ಸು ಮತ್ತು ಸಸಾರಜನಕಗಳು.

) ದೇಹದ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು:

ಸಸಾರಜನಕಗಳು, ಖನಿಜ ಮತ್ತು ಜೀವಸತ್ವಗಳು.

) ದೈಹಿಕ ಕ್ರಿಯೆಗಳನ್ನು ನಿಯಂತ್ರಿಸುವ ಮತ್ತು ಸಂರಕ್ಷಿಸುವ ಪೋಷಕಾಂಶಗಳು:

ಜೀವಸತ್ವಗಳು, ಸಸಾರಜನಕ, ಮೇದಸ್ಸು ಮತ್ತು ಶರ್ಕರ ಪಿಷ್ಟಗಳು.

ಶರ್ಕರ ಪಿಷ್ಟಗಳು: ಶಕ್ತಿಯೇ ದೇಹದ ಸಮಸ್ತ ಕ್ರಿಯೆಗಳಿಗೆ ಮೂಲ ಕಾರಣ. ಒಂದು ಗ್ರಾಂ ಶರ್ಕರಪಿಷ್ಟ ನಾಲ್ಕು ಕ್ಯಾಲೊರಿ ಶಕ್ತಿಯನ್ನು ದೇಹದಲ್ಲಿ ಉತ್ಪತ್ತಿಮಾಡುತ್ತದೆ. ಶರ್ಕರಪಿಷ್ಟಗಳನ್ನು ವಿಜ್ಞಾನಿಗಳು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ:

) ಏಕಶರ್ಕರಗಳು: ಗ್ಲೂಕೋಸು, ಫ್ರಕ್ಟೋಸು ಮತ್ತು ಗೆಲಾಕ್ಟೋಸು

) ದ್ವಿಶರ್ಕರಗಳು: ಸೂಕ್ರೋಸು, ಮಾಲ್ಟೋಸು ಮತ್ತು ಲ್ಯಾಕ್ಟೋಸು

) ಬಹುಶರ್ಕರಗಳು: ಪಿಷ್ಟ, ಡೆಕಾಸ್ಟ್ರಿನ್‌ ಮತ್ತು ಸೆಲ್ಯುಲೋಸ್

ಮೊದಲ ಎರಡು ವರ್ಗಗಳಿಗೆ ಸೇರಿದ ಶರ್ಕರಪಿಷ್ಟಗಳನ್ನು ಸಕ್ಕರೆಗಳೆಂದು ಕರೆಯುತ್ತಾರೆ. ಸಾಧಾರಣವಾಗಿ ಈ ಸಕ್ಕರೆಗಳು ಆಹಾರಗಳಲ್ಲಿ ಲಭಿಸುತ್ತವೆ. ಪಿಷ್ಟವು ದೇಹದಲ್ಲಿ ಜೀರ್ಣವಾಗಿ ಗ್ಲೂಕೋಸಾಗಿ ಪರಿವರ್ತನೆಗೊಂಡು ರಕ್ತದ ಮೂಲಕ ದೇಹದ ಇತರ ಭಾಗಗಳಲ್ಲಿ ಸೇರಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಸೆಲ್ಯುಲೋಸ್ ಮತ್ತು ಪೆಕ್ವಿನ್‌ಗಳನ್ನು ಮನುಷ್ಯ ದೇಹವು ಶಕ್ತಿ ಉತ್ಪಾದನೆಗೆ ಬಳಸಿಕೊಳ್ಳಲಾರದು.

ಶರ್ಕರಪಿಷ್ಟಗಳ ಕಾರ್ಯಗಳು

೧) ದೇಹಕ್ಕೆ ಅತಿಮುಖ್ಯವಾದ ಶಕ್ತಿಯನ್ನು ಕೊಡುವ ಇಂಧನ ಶರ್ಕರಪಿಷ್ಟ ರಕ್ತದಲ್ಲಿ ಗ್ಲೂಕೋಸು ಆಮ್ಲಜನಕದ ಸಹಾಯದಿಂದ ಉತ್ಕರ್ಷಣೆ ಹೊಂದುವ ಕ್ರಿಯೆಯಿಂದಲೇ ಶಕ್ತಿಯ ಉತ್ಪಾದನೆಯಾಗುತ್ತದೆ.

೨) ಗ್ಲೂಕೋಸು ನರಮಂಡಲದ ಪ್ರತಿ ಕ್ಷಣದ ಕಾರ್ಯಕ್ಕೆ ಅವಶ್ಯಕವಾದ ಅಂಶ.

೩) ಶರ್ಕರಪಿಷ್ಟಗಳ ಸೇವನೆಯಿಂದ ಪ್ರೊಟೀನುಗಳ ಮಿತವ್ಯಯವಾಗುತ್ತದೆ.

ಸಸಾರಜನಕ: ಜೀವರಾಶಿಗಳ ಪ್ರತಿಯೊಂದು ಜೀವಕೋಶದಲ್ಲೂ ಪ್ರೊಟೀನು ಅಥವಾ ಸಸಾರಜನಕ ಪ್ರಮುಖವಾದ ಅಂಶ, ಹಾಲು, ಮಾಂಸ, ಮೀನು, ಮೊಟ್ಟೆ ಮತ್ತು ದ್ವಿದಳ ಧಾನ್ಯಗಳಲ್ಲಿ ಸಸಾರಜನಕ ಯಥೇಚ್ಛವಾಗಿ ಲಭಿಸುವುದು. ಸಸಾರಜನಕ ರೂಪುಗೊಳ್ಳುವುದು ಅಮೈನೋ ಆಮ್ಲಗಳಿಂದ. ಸುಮಾರು ೨೦ಕ್ಕೂ  ಮೇಲ್ಪಟ್ಟು ಇರುವ ಅಮೈನೋ ಆಮ್ಲಗಳಿಂದ ಪ್ರೊಟೀನುಗಳು ರಚಿತವಾಗಿವೆ. ಎಂದು ವಿಜ್ಞಾನಿಗಳು ತೋರಿಸಿದ್ದಾರೆ. ರಚನೆ ಮತ್ತು ಗುಣಗಳಲ್ಲಿ ಭಿನ್ನವಾಗಿರುವ ವಿವಿಧ ಪ್ರೊಟೀನುಗಳಿವೆ. ಈ ಭಿನ್ನತೆ ಅವುಗಳಲ್ಲಿರುವ ಅಮೈನೋ ಆಮ್ಲಗಳು ಮತ್ತು ಅವುಗಳ ಪ್ರಮಾಣಗಳನ್ನು ಅವಲಂಬಿಸಿವೆ.

ಆಹಾರದಲ್ಲಿರುವ ಸಸಾರಜನಕಗಳು ಜೀರ್ಣಕ್ರಿಯೆಯ ಕೊನೆಯ ಹಂತದಲ್ಲಿ ಅಮೈನೋ ಆಮ್ಲಗಳಾಗಿ ಮಾರ್ಪಡುತ್ತವೆ. ಕೆಲವು ಅಮೈನೋ ಆಮ್ಲಗಳು ಆಹಾರದಿಂದ ಒದಗುವ ಇತರ ಅಮೈನೋ ಆಮ್ಲಗಳ ಸಹಾಯದಿಂದ ದೇಹದಲ್ಲಿಯೇ ತಯಾರಾಗುತ್ತವೆ. ಆದರೆ ಮತ್ತೆ ಕೆಲವು ಅಮೈನೋ ಆಮ್ಲಗಳ ತಯಾರಿಕೆ ನಮ್ಮ ದೇಹದಲ್ಲಿ ಸಾಧ್ಯವಿಲ್ಲ. ಆದ್ದರಿಂದ ಆವುಗಳು ಆಹಾರದ ಮೂಲಕವೇ ಶರೀರಕ್ಕೆ ಒದಗಬೇಕು. ಅವುಗಳನ್ನು ಅವಶ್ಯಕ ಅಮೈನೋ ಆಮ್ಲಗಳೆಂದು ಹೆಸರಿಸಿದ್ದಾರೆ.

ಅವಶ್ಯಕ ಅಮೈನೋ ಆಮ್ಲಗಳು: ವೆಲಿನ್, ಲೈಸಿನ್, ಥ್ರಿಯೊನಿನ್, ಲ್ಯೂಸಿನ್, ಐಸೋಲೊಸಿನ್, ಟ್ರಿಪ್ಪೋಫೇನ್. ಫೀನೈಲ್ ಅಲನಿನ್ ಮತ್ತು ಮಿಥಿಯೋನಿನ್.

ಅಗತ್ಯ ಅಮೈನೋ ಆಮ್ಲಗಳಿರುವ ಆಹಾರ ವಸ್ತುಗಳೆಂದರೆ ಹಾಲು, ಮೊಟ್ಟೆ ಮತ್ತು ಮಾಂಸ, ಹಾಲಿನಲ್ಲಿ ಸಿಗುವ ಅಮೈನೋ ಆಮ್ಲಗಳು ಧಾನ್ಯಗಳಲ್ಲಿ ಸಾಕಷ್ಟು ಸಿಗುವುದಿಲ್ಲ. ಧಾನ್ಯದಲ್ಲಿರುವುವು ಬೇಳೆಯಲ್ಲಿ ಸಾಕಷ್ಟಿರುವುದಿಲ್ಲ. ಆದ್ದರಿಂದ ಮಿಶ್ರ ಆಹಾರ ಬಳಕೆಯಿಂದ ಅತ್ಯಾವಶ್ಯಕವಾದ ಎಲಲಾ ಅಮೈನೋ ಆಮ್ಲಗಳೂ ದೊರಕುತ್ತವೆ.

ಸಸಾರಜನಕದ ಕಾರ್ಯಗಳು

೧. ದೇಹದ ಬೆಳವಣಿಗೆ, ಸಂರಕ್ಷಣೆ ಮತ್ತು ದೈಹಿಕ ಕ್ರಿಯೆಗಳ ನಿಯಂತ್ರಣ.

೨. ಶರ್ಕರ ಪಿಷ್ಟದಂಶ ಕಡಿಮೆ ಇದ್ದಾಗ ಸಸಾರಜನಕವು ಶಕ್ತಿಯನ್ನು ಒದಗಿಸುತ್ತದೆ.

೩. ಟ್ರಿಪ್ಟೋಫೇನ್ ಎಂಬ ಅವಶ್ಯಕ ಅಮೈನೋ ಆಮ್ಲ ನಮ್ಮ ದೇಹದಲ್ಲಿ ನಯಾಸಿನ್ ಎಂಬ ಜೀವಸತ್ವವಾಗಿ ಪರಿವರ್ತನೆಗೊಳ್ಳುತ್ತದೆ.

೪. ದೇಹದಲ್ಲಿರುವ ಆಮ್ಲ ಮತ್ತು ಕ್ಷಾರಾಂಶಗಳ ಸಮತೋಲನಕ್ಕೆ ಸಸಾರಜನಕ ಸಹಾಯ ಮಾಡುತ್ತದೆ.

೫. ದೇಹದಲ್ಲಿ ನೀರಿನ ಪ್ರಮಾಣವನ್ನು ಸಸಾರಜನಕ ಸಮತೋಲನದಲ್ಲಿಡುತ್ತದೆ.

೬. ದೇಹಕ್ರಿಯೆಗಳ ನಿಯಂತ್ರಣಕ್ಕೆ ಬೇಕಾದ ಚೋದಕದ್ರವ ಹಾಗೂ ಕಿಣ್ವಗಳ ಉತ್ಪಾದನೆಗೆ ಸಸಾರಜನಕ ಅತ್ಯಾವಶ್ಯಕ

೭. ರೋಗದಿಂದ ದೇಹವನ್ನು ಸಂರಕ್ಷಿಸಲು ಪ್ರತಿಜೀವಿಗಳನ್ನು ತಯಾರಿಸಲು ಸಸಾರಜನಕ ಬೇಕು.

ಸಸಾರಜನಕ ಗುಣಮಟ್ಟ

ಆಹಾರದಲ್ಲಿರುವ ಸಸಾರಜನಕದ ಗುಣಮಟ್ಟವು ಅದರಲ್ಲಿರುವ ಅಗತ್ಯ ಅಮೈನೋ ಆಮ್ಲಗಳ ಪ್ರಮಾಣವನ್ನು ಅವಲಂಬಿಸಿದೆ. ಜಿಲ್ಯಾಟಿನ್‌ನ ಹೊರತುಪಡಿಸಿ ಎಲ್ಲಾ ಪ್ರಾಣಿಜನ್ಯ ಆಹಾರಗಳಲ್ಲಿ ಅಗತ್ಯ ಅಮೈನೋ ಆಮ್ಲಗಳು ಸಿಗುವುದಿಲ್ಲ. ಸಾಮಾನ್ಯವಾಗಿ ಧಾನ್ಯಗಳಲ್ಲಿ ಲೈಸಿನ್ ಇರುವುದಿಲ್ಲ. ಯಾವುದೇ ಒಂದು ಅಮೈನೋ ಆಮ್ಲದ ಕೊರತೆಯುಂಟಾದರೂ ದೇಹದಲ್ಲಿ ಸಸಾರಜನಕದ ಸಂಯೋಗದಲ್ಲಿ ತೊಂದರೆಯುಂಟಾಗುತ್ತದೆ. ಕೋಷ್ಟಕ ೨ ರಲ್ಲಿ ದೇಹಕ್ಕೆ ಬೇಕಾಗುವ ಅಗತ್ಯ ಅಮೈನೋ ಆಮ್ಲಗಳ ಪ್ರಮಾಣವನ್ನು ಕೊಡಲಾಗಿದೆ.

ಕೋಷ್ಟಕ. ದೇಹಕ್ಕೆಬೇಕಾಗುವಅಗತ್ಯಅಮೈನೋಆಮ್ಲಗಳಪ್ರಮಾಣ

ಅಮೈನೋ ಆಮ್ಲಗಳು ಪುರುಷರು (ಮಿ.ಗ್ರಾಂ / ದಿನಕ್ಕೆ) ಮಹಿಳೆಯರು ಮಿ.ಗ್ರಾಂ./ ದಿನಕ್ಕೆ) ಶಿಶುಗಳು (ಮಿ.ಗ್ರಾಂ / ಕೆ.ಜಿ.ದಿನಕ್ಕೆ)
ಹಿಸ್ಟಿಡಿನ್ ೨೮
ಐಸೋಲೂಸಿನ್ ೭೦೦ ೫೫೦ ೭೦
ಲ್ಯೂಸಿನ್ ೧೧೦೦ ೭೩೦ ೧೬೧
ಲೈಸಿನ್ ೮೦೦ ೫೪೫ ೧೦೩
ಮಿಥಿಯೋನಿನ್ ೧೧೦೦ ೭೦೦ ೫೮
ಫೀನೈಲ್‌ಅಲನಿನ್ ೧೧೦೦ ೭೦೦ ೧೨೫
ಥ್ರಿಯೋನಿನ್ ೫೦೦ ೩೭೫ ೮೭
ಟ್ರಿಪ್ಟೋನಿನ್ ೨೫೦ ೧೬೮ ೧೭
ವೆಲಿನ್ ೮೦೦ ೬೨೨ ೯೩

ಆಧಾರ: ಪಾಸ್ಮೋರ್ ಮತ್ತು ಈಸ್ಟ್‌ವುಡ್ (೧೯೮೬)

 

ಆಹಾರದಲ್ಲಿ ಪ್ರೋಟೀನಿನ ಮೌಲ್ಯ ಮತ್ತು ಅದನ್ನು ವೃದ್ಧಿಗೊಳಿಸುವ ವಿಧಾನ: ಆಹಾರದಲ್ಲಿ ಪ್ರೊಟೀನಿನ ಮೌಲ್ಯವನ್ನು ರಾಸಾಯನಿಕ ಎಣಿಕೆ, ಜೈವಿಕ ಉಪಯುಕ್ತತೆ, ದೇಹದಲ್ಲಿ ಪ್ರೊಟೀನುಗಳ ಬಳಸುವಿಕೆ ಮತ್ತು ಪ್ರೊಟೀನಿನ ಕಾರ್ಯ ಸಮರ್ಥತೆಯ ಪ್ರಮಾಣವನ್ನು ಅವಲಂಬಿಸಿ ನಿರ್ಧರಿಸಲಾಗುವುದು. ಕೋಷ್ಟಕ ೩ ರಲ್ಲಿ ಮೊಟ್ಟೆಯಲ್ಲಿರುವ ಅಮೈನೋ ಆಮ್ಲಗಳ ಪ್ರಮಾಣವನ್ನು ಆಧರಿಸಿದ ವಿವಿಧ ಆಹಾರ ಪದಾರ್ಥಗಳ ರಾಸಾಯನಿಕ ಎಣಿಕೆ, ಅವುಗಳಲ್ಲಿ ಇಲ್ಲದಿರುವ ಅಮೈನೋ ಆಮ್ಲಗಳು ಹಾಗೂ ಪ್ರೊಟೀನ್‌ನ ಕಾರ್ಯಸಮರ್ಥತೆಯ ಪ್ರಮಾಣವನ್ನು (ಪ್ರೊ.ಕಾ.ಪ್ರ) ಕೊಡಲಾಗಿದೆ.

ಪ್ರಾಣಿಜನ್ಯ ಆಹಾರಗಳಲ್ಲಿರುವ ಸಸಾರಜನಕದ ಕಾರ್ಯ ಸಮರ್ಥತೆ ಹೆ‌ಚ್ಚಾಗಿದ್ದು ಉತ್ತಮ ಗುಣಮಟ್ಟದ್ದಾಗಿದೆ. ಹಾಲಿನಲ್ಲಿ ಪ್ರೊಟೀನಿನ ಪ್ರಮಾಣ ಕಡಿಮೆ ಇದ್ದರೂ, ಇದರ  ಗುಣಮಟ್ಟ ಉತ್ತಮವಾಗಿರುವುದರಿಂದ, ಇದು ಒಂದು ಮುಖ್ಯ ಪ್ರೊಟೀನ್‌ಯುಕ್ತ ಆಹಾರ.

ಸಸ್ಯಜನ್ಯ ಆಹಾರಗಳಲ್ಲಿ ಬೇಳೆಕಾಳುಗಳು, ಎಣ್ಣೆ ಬೀಜಗಳು ಪ್ರೊಟೀನ್‌ಯುಕ್ತ ಆಹಾರಗಳು. ಇವುಗಳ ಗುಣಮಟ್ಟ ಪ್ರಾಣಿಜನ್ಯ ಆಹಾರ ಅಥವಾ ವಿವಿಧ ಆಹಾರವಸ್ತುಗಳನ್ನು ಬಳಸಿ ಉತ್ತಮ ಗುಣಮಟ್ಟದ ಆಹಾರವನ್ನಾಗಿಸಿ ಸೇವಿಸಬಹುದು.

ಕೋಷ್ಟಕ. ವಿವಿಧಆಹಾರಪದಾರ್ಥಗಳರಾಸಾಯನಿಕಎಣಿಕೆ, ಇಲ್ಲದಿರುವಅಮೈನೋಆಮ್ಲಗಳುಮತ್ತುಪ್ರೊ. ಕಾ. ಪ್ರ.

ಆಹಾರ ಪದಾರ್ಥಗಳು

ರಾಸಾಯನಿಕ ಎಣಿಕೆ (ಮೊಟ್ಟೆಗೆ ಆಧರಿಸಿ)

ಇಲ್ಲದಿರುವ ಆಮ್ಲಗಳು ಅಮೈನೋ ಪ್ರೊ.ಕಾ.ಪ್ರ

ಮೊಟ್ಟೆ ೧೦೦ ೧೦೦  
ಮೊಟ್ಟೆಯ ಬಿಳಿಭಾಗ ೯೦ ಟ್ರಿಪ್ಟೋಫೇನ್ ೮೩
ಪಾಲಕ್ ೯೦ ಮಿಥಿಯೋನಿನ್ ಮತ್ತು ಸಿಸ್ಟಿನ್
ಬೀಫ್ ೮೦ ಮಿಥಿಯೋನಿನ್ ಮತ್ತು ಸಿಸ್ಟಿನ್ ೮೦
ಸಿಹಿ ಗೆಣಸು ೭೫ ಮಿಥಿಯೋನಿನ್ ಮತ್ತು ಸಿಸ್ಟಿನ್ ೭೨
ಮೀನು ೭೫ ಟ್ರಿಪ್ಟೋಫೇನ್ ೮೩
ಅಕ್ಕಿ ೭೫ ಮಿಥಿಯೋನಿನ್ ಮತ್ತು ಸಿಸ್ಟಿನ್ ೫೬
ಹಾಲು ೬೦ ಮಿಥಿಯೋನಿನ್ ಮತ್ತು ಸಿಸ್ಟಿನ್ ೭೫
ಬಟಾಣಿ ೬೦ ಮಿಥಿಯೋನಿನ್ ಮತ್ತು ಸಿಸ್ಟಿನ್ ೪೪
ಎಳ್ಳು ೫೦ ಲೈಸಿನ್ ೫೬
ಮೈದ ೫೦ ಲೈಸಿನ್ ೫೨
ಆಲೂಗಡ್ಡೆ ೪೮ ಮಿಥಿಯೋನಿನ್ ಮತ್ತು ಸಿಸ್ಟಿನ್ ೭೧

ಆಧಾರ : ಬಾಮ್ಜಿ, ರಾವ್ ಮತ್ತು ರೆಡ್ಡಿ (೨೦೦೩)

ಖನಿಜಗಳು

ಖನಿಜಾಂಶಗಳು ದೇಹಕ್ಕೆ ಲಭಿಸುವ ಮೂಲ ಆಹಾರದಲ್ಲಿರುವ ವಿವಿಧ ಲವಣ ರೂಪಗಳು. ನಮ್ಮ ದೇಹ ತೂಕದ ಶೇ. ೪ ಭಾಗ ಖನಿಜಗಳಿಂದ ಕೂಡಿದೆ (ಕೋಷ್ಟಕ ೪). ದೇಹದಲ್ಲಿರುವ ಇವುಗಳ ಪ್ರಮಾಣವನ್ನನುಸರಿಸಿ ಪ್ರಧಾನ ಮತ್ತು ಗೌಣ ಖನಿಜಗಳು ಎಂದು ವಿಂಗಡಿಸಿದ್ದಾರೆ.

ಖನಿಜಗಳು ಪ್ರಮುಖವಾಗಿ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಮತ್ತು ದೇಹದ ಆಮ್ಲ, ಕ್ಷಾರಾಂಶ ಮತ್ತು ನೀರಿನಂಶಗಳ ನಿಯಂತ್ರಣಗಳಿಗೆ ನೆರವಾಗುತ್ತವೆ.

ಕ್ಯಾಲ್ಸಿಯಂ/ಸುಣ್ಣ : ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ. ರಕ್ತದ ಹೆಪ್ಪುಗಟ್ಟುವಿಕೆಗೆ ಇದು ನೆರವಾಗುವುದು. ಜೀವಕೋಶದ ಸಂವಾಹಕ ಕಾರ್ಯ, ಹೃದಯ ಮತ್ತು ಸ್ನಾಯುಗಳ ಚಲನೆಯನ್ನು ಇದು ನಿಯಂತ್ರಿಸುವುದು. ಕ್ಯಾಲ್ಸಿಯಂ ಮುಖ್ಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ರಾಗಿಯಲ್ಲಿ ಹೇರಳವಾಗಿ ಮತ್ತು ಸೊಪ್ಪು, ಹಣ್ಣು ಹಾಗೂ ಧಾನ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಲಭಿಸುತ್ತದೆ.

ಕೋಷ್ಟಕ. ದೇಹದಲ್ಲಿನಖನಿಜಾಂಶಗಳಪ್ರಮಾಣ

ಕ್ರ. ಸಂ.

೭೦ಕಿ.ಗ್ರಾಂ ತೂಕದ ಮನುಷ್ಯನ ದೇಹದಲ್ಲಿರುವ ಖನಿಜಗಳು

ಖನಿಜಗಳು

ಪ್ರಮಾಣ (ಗ್ರಾಂ)

ಪ್ರಮುಖವಾಗಿ ಇರುವ ಅಂಶಗಳು

೧. ಕ್ಯಾಲ್ಸಿಯಂ/ಸುಣ್ಣ ೧೦೫೦ ಮೂಳೆ ಮತ್ತು ಹಲ್ಲು
೨. ರಂಜಕ ೭೦೦ ಮೂಳೆ ಮತ್ತು ಹಲ್ಲು
೩. ಪೊಟ್ಯಾಸಿಯಂ ೨೪೫ ಜೀವಕೋಶದಲ್ಲಿರುವ ದ್ರವ
೪. ಗಂಧಕ ೧೭೫ ಸಸಾರಜನಕದಲ್ಲಿ
೫. ಕ್ಲೋರಿನ್ ೧೦೫ ಜೀವಕೋಶದ ಹೊರ ದ್ರವ
೬. ಸೋಡಿಯಂ ೧೦೫ ಜೀವಕೋಶದ ಹೊರ ದ್ರವ
೭. ಮೆಗ್ನೀಷಿಯಂ ೨೦-೩೦ ಮೂಳೆ ಮತ್ತು ಹಲ್ಲು
೮. ಕಬ್ಬಿಣ ೪-೫ ರಕ್ತಕಣ
೯. ಮ್ಯಾಂಗನೀಸ್ ೦.೨೧
೧೦. ತಾಮ್ರ ೦.೧೧
೧೧. ಅಯೊಡಿನ್ ೦.೦೨೮ ಥೈರಾಯ್ಡ್‌ಗ್ರಂಥಿ

ರಂಜಕ : ಮೂಳೆ ಮತ್ತು ಹಲ್ಲುಗಳ ರಚನೆ, ಆಮ್ಲ ಮತ್ತು ಕ್ಷಾರಾಂಶಗಳ ಸಮತೋಲನ ಕಾರ್ಯಕ್ಕೆ ಇದು ಸಹಕಾರಿಯಾಗಿದೆ. ಜೀವಕೋಶಗಳ ರಚನೆ, ಕಿಣ್ವಗಳ ರಚನೆ ಹಾಗೂ ಮೆದುಳಿನ ಬೆಳವಣಿಗೆಗೆ ರಂಜಕ ಅವಶ್ಯಕ. ಹಾಲು, ಮಾಂಸ, ಮೊಟ್ಟೆಯ ಹಳದಿ ಭಾಗ, ದ್ವಿದಳ ಧಾನ್ಯ, ಕಡಲೆಕಾಯಿ ಮೊದಲಾದ ಬೀಜಗಳಲ್ಲಿ ರಂಜಕವು ಹೇರಳವಾಗಿದೆ.

ಪೊಟ್ಯಾಸಿಯಂ : ಇದು ಮುಖ್ಯವಾಗಿ ಜೀವಕೋಶದ ಒಳಗಿರುವ ದ್ರವದಲ್ಲಿ ಲೀನವಾಗಿರುತ್ತದೆ. ಜೀವದ್ರವಗಳ ನಿಯಂತ್ರಣ, ಸ್ನಾಯುಗ: ಪ್ರಚೋದಕ ಕ್ರಿಯೆ ಮತ್ತು ಜೀವಕೋಶದೊಳಗಿರುವ ಕಿಣ್ವಗಳ ಕ್ರಿಯೆಗಳಿಗೆ ಇದು ಸಹಾಯ ಮಾಡುತ್ತದೆ. ಸಾಧಾರಣವಾಗಿ ನಾವು ತಿನ್ನುವ ಸಸ್ಯ ಆಹಾರಗಳಲ್ಲಿ ಪೊಟ್ಯಾಸಿಯಂ ಹೆಚ್ಚಾಗಿ ಇದ್ದೇ ಇರುತ್ತದೆ.

ಗಂಧಕ : ಗಂಧಕಾಂಶ ಇತರ ಎಲ್ಲಾ ಖನಿಜಗಳಿಗಿಂತಲೂ ಭಿನ್ನವಾಗಿ ದೇಹಕ್ಕೆ ಲಭಿಸುತ್ತದೆ. ಇದು ಸಾಮಾನ್ಯವಾಗಿ ಅಮೈನೋಆಮ್ಲಗಳಾದ ಮಿಥಿಯೋನಿನ್, ಸಿಸ್ಟೀನ್‌ಗಳೊಡಗೂಡಿ ದೇಹಕ್ಕೆ ಲಭಿಸುತ್ತದೆ. ಜೀವಸತ್ವಗಳಲ್ಲೊಂದಾದ ಥಯಾಮಿನ್(ಬಿ೧)ನಲ್ಲೂ ಗಂಧಕವಿದೆ. ಮೊಟ್ಟೆ, ಹಾಲು ಮತ್ತು ಧಾನ್ಯಗಳಲ್ಲಿ ಗಂಧಕ ದೊರೆಯುತ್ತದೆ. ಮಿಶ್ರಆಹಾರ ಸೇವನೆಯಿಂದ ಗಂಧಕದ ಕೊರತೆಯುಂಟಾಗದಂತೆ ನೋಡಿಕೊಳ್ಳಬಹುದು.

ಸೋಡಿಯಂ : ಇದು ಹೆಚ್ಚಾಗಿ ಜೀವಕೋಶದ ಬಾಹ್ಯ ದ್ರವದಲ್ಲಿ ಲೀನವಾಗಿದೆ. ಇದರ ಮುಖ್ಯ ಕಾರ್ಯವೆಂದರೆ ಆಮ್ಲ ಮತ್ತು ಕ್ಷಾರಗಳ ಸಮತೋಲನೆಯಲ್ಲಿ ಭಾಗವಹಿಸುವುದು. ಸೋಡಿಯಂ ಉಪ್ಪಿನಿಂದ ಅಧಿಕವಾಗಿ ಲಭಿಸುತ್ತದೆ. ಇದಲ್ಲದೆ ಅಡಿಗೆಗೆ ಉಪಯೋಗಿಸುವ ಸೋಡದಲ್ಲಿ ಹಾಗೂ ಮಾಂಸ, ಮೀನು ಮೊಟ್ಟೆಗಳಲ್ಲಿಯೂ ಹೇರಳವಾಗಿದೆ.

ಮೆಗ್ನೀಷಿಯಂ : ದೇಹದ ಮೂಳೆ ಮತ್ತು ಹಲ್ಲುಗಳ ರಚನೆಗೆ, ನರಗಳ ಪ್ರಚೋದನೆಗೆ, ಸ್ನಾಯುಗಳ ಸಂಕೋಚನಾ ಕಾರ್ಯಕ್ಕೆ ಮತ್ತು ಕಿಣ್ವಗಳನ್ನು ಕ್ರಿಯಾಶಕ್ತವಾಗಿ ಮಾಡುವುದರಲ್ಲಿ ಇದರ ಪಾತ್ರ ಬಹು ಮುಖ್ಯ. ಹಸುರು ಸೊಪ್ಪುಗಳು, ಧಾನ್ಯಗಳು ಮತ್ತು ಸಮುದ್ರದಿಂದ ಲಭಿಸುವ ಆಹಾರ ಪದಾರ್ಥಗಳಲ್ಲಿ ಮೆಗ್ನೀಷಿಯಂ ಹೇರಳವಾಗಿ ದೊರಕುತ್ತದೆ.

ಕಬ್ಬಿಣ : ನಮ್ಮ ದೇಹದಲ್ಲಿ ಸುಮಾರು ಮೂರರಿಂದ ಐದು ಗ್ರಾಂ ಗಳಷ್ಟು ಕಬ್ಬಿಣಾಂಶ ಇದೆ. ಇದು ಮುಖ್ಯವಾಗಿ ರಕ್ತಕಣಗಳಲ್ಲಿರುವ ಹೀಮ್ ಎಂಬ ವರ್ಣ ವಸ್ತುವಿನಲ್ಲಿದೆ. ಈ ಅಂಶವೇ ರಕ್ತದ ಕೆಂಪು ಬಣ್ಣಕ್ಕೆ ಮೂಲ ಕಾರಣ. ಮಾಂಸಖಂಡಗಳಲ್ಲಿರುವ ಕೆಂಪು ವಸ್ತುಗಳಲ್ಲಿಯೂ ಕಬ್ಬಿಣಾಂಶ ಇದೆ. ಕಬ್ಬಿಣವು ರಕ್ತದ ಮೂಲಕ ಆಮ್ಲಜನಕವನ್ನು ದೇಹದ ಭಾಗಗಳಲ್ಲಿ ತಲುಪಿಸುವುದರಲ್ಲಿ ಸಹಕಾರಿ. ಮಾಂಸ, ಮೊಟ್ಟೆಯ ಹಳದಿ ಭಾಗ ಮತ್ತು ಹಸಿರು ಸೊಪ್ಪುಗಳಲ್ಲಿ ಕಬ್ಬಿಣಾಂಶ ದೊರೆಯುತ್ತದೆ. ಇದಲ್ಲದೆ ದ್ವಿದಳಧಾನ್ಯಗಳು, ಹಣ್ಣುಗಳು ಅಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಒದಗಿಸುತ್ತವೆ.

ಅಯೋಡಿನ್ : ಅಯೋಡಿನ್ ನಮ್ಮ ದೇಹದ ಎಲ್ಲಾ ಕ್ರಿಯೆಗಳ ನಿಯಂತ್ರಣ ಕಾರ್ಯದಲ್ಲಿ ಸಹಕಾರಿಯಾಗಿದೆ. ಇದು ಸಮುದ್ರದಲ್ಲಿ ದೊರಕುವ ಆಹಾರದಲ್ಲಿ ಯಥೇಚ್ಛವಾಗಿ ಇರುತ್ತದೆ. ಅಯೋಡಿನ್ ಹೇರಳವಾಗಿರುವ ಭೂಮಿಯಲ್ಲಿ ಬೆಳೆದ ತರಕಾರಿ ಮತ್ತು ಬೇಳೆಗಳಲ್ಲೂ ಸಹ ಅಯೋಡಿನ್ ಇರುತ್ತದೆ. ಥೈರಾಯ್ಡ್ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಅಯೋಡಿನ್‌ಯುಕ್ತ ತೈರಾಕ್ಸಿನ್‌ ದೇಹದ ಎಲ್ಲಾ ಜೀವಕೋಶಗಳಲ್ಲಿಯೂ ನಡೆಯುವ ಪಚನಕಾರ್ಯಗಳನ್ನು ನಿಯಂತ್ರಿಸುತ್ತದೆ.

ಪ್ಲೋರಿನ್ : ಇದು ಅತ್ಯಲ್ಪ ಪ್ರಮಾಣದಲ್ಲಿದ್ದು, ಹಲ್ಲಿನ ಶಿಥಿಲೀಕರಣವನ್ನು ತಡೆದು ರಕ್ಷಿಸುವ ಕೆಲಸವನ್ನು ಮಾಡುತ್ತದೆ. ಮೂಳೆಗಳ ರಚನೆಯ ವಿನ್ಯಾಸವನ್ನು ಉಳಿಸಿಕೊಂಡು ಬರುವುದರಲ್ಲಿ ಇದು ಸಹಾಯಕವೆಂದು ತಿಳಿದುಬಂದಿದೆ. ಸಾಧಾರಣವಾಗಿ ಪ್ಲೋರಿನ್‌ ನೀರಿನಿಂದ ದೊರೆಯುತ್ತದೆ.

ಮೇಲೆ ತಿಳಿಸಿದ ಖನಿಜಗಳಲ್ಲದೆ ತಾಮ್ರ, ಮ್ಯಾಂಗನೀಸ್, ಕ್ರೋಮಿಯಮ್, ಮಾಲಿಬ್ಡಿನಮ್, ಪೆಲೇನಿಯಂ, ಸತುವು ಮುಂತಾದ ಖನಿಜಗಳು ದೇಹದ ಅನೇಕ ಕಿಣ್ವಗಳ ಕಾರ್ಯಕ್ಕೆ ಸಹಾಯಕವಾಗಿವೆ. ಇದಲ್ಲದೆ ಕೋಬಾಲ್ಟ್ ಖನಿಜವು ಜೀವಸತ್ವ ಬಿ/೧೨ ಅಂದರೆ ಸಯನೋಕೋಬಾಲ್ ಅಮೀನ್ ರಚನೆಗೆ ಬೇಕಾದ ಅಂಶ. ಸಿಲಿನಿಯಮ್ ಖನಿಜವು ಜೀವಸತ್ವ ಕಾರ್ಯಕ್ಕೆ ಸಹಾಯಕ ಎಂದು ತಿಳಿದು ಬಂದಿದೆ.

ಜೀವಸತ್ವಗಳು

ಆಹಾರಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದೊರಕುವ ಅತಿ ಮುಖ್ಯವಾದ ಆಹಾರಾಂಶಗಳೆಂದರೆ ಜೀವಸತ್ವಗಳು. ಇವು ಅತ್ಯಲ್ಪ ಪ್ರಮಾಣದಲ್ಲಿ ನಮಗೆ ಬೇಕಾಗಿದ್ದರೂ ಅವುಗಳ ಕಾರ್ಯ ಮಹತ್ತರವಾಗಿದೆ. ನಮ್ಮ ದೇಹದ ಭಾಗಗಳಲ್ಲಿ ಇತರ ಆಹಾರಾಂಶಗಳನ್ನು ಪ್ರಮಾಣದಲ್ಲಿ ಜೀವಸತ್ವ ಇರದಿದ್ದರೂ ಅವು ನಮ್ಮ ದೇಹದ ಪ್ರತಿ ಜೀವಕೋಶದಲ್ಲೂ ನಡೆಯುವ ರಾಸಾಯನಿಕ ಕ್ರಿಯೆಗಳಿಗೆ ಅತ್ಯವಶ್ಯಕವಾದ ಕಿಣ್ವಗಳ ಜೀವಾಳ. ವೈಜ್ಞಾನಿಕವಾಗಿ ಜೀವಸತ್ವಗಳನ್ನು ಮೇದಸ್ಸಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಿದ್ದಾರೆ.

ಮೇದಸ್ಸಿನಲ್ಲಿ ಕರಗುವ ಜೀವಸತ್ವಗಳು

ಜೀವಸತ್ವ: ಆರೋಗ್ಯಕರವಾದ ಬೆಳವಣಿಗೆಗೆ, ಚರ್ಮ, ಮೂಳೆ, ಹಲ್ಲುಗಳ ರಚನೆಗೆ ಜೀವಸತ್ವ ಅವಶ್ಯಕ. ಕಣ್ಣುಗಳಲ್ಲಿರುವ ದೃಷ್ಟಿಧೂಮ್ರ ಎಂಬ ವಸ್ತುವಿನ ಸಹಾಯದಿಂದ ಮಂದ ಬೆಳಕಿನಲ್ಲಿ ನೋಡಲು ಸಾಧ್ಯವಾಗುತ್ತದೆ. ಈ ಧೂಮ್ರವರ್ಣದ ವಸ್ತುವನ್ನು ರೂಪಿಸುವುದಕ್ಕೆ ಜೀವಸತ್ವ-ಎ ಅವಶ್ಯಕ. ಇದು ಹಾಲು, ಮೊಟ್ಟೆ,ಸೊಪ್ಪು, ಗಜ್ಜರಿ ಹಾಗೂ ಹಳದಿ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಯಥೇಚ್ಛವಾಗಿ ಲಭಿಸುತ್ತದೆ.

ಜೀವಸತ್ವಡಿ: ಕರುಳಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕಗಳ ಹೀರುವಿಕೆಗೆ ಹಾಗೂ ಮೂಳೆಗಳು ಕ್ಯಾಲ್ಸಿಯಂನಿಂದ ಗಟ್ಟಿಯಾಗುವ ಕಾರ್ಯಕ್ಕೆ ಜೀವಸತ್ವ-ಡಿ ಅವಶ್ಯಕ. ಈ ಜೀವಸತ್ವ ಹಾಲು, ಮೊಟ್ಟೆ ಮತ್ತು ಮೀನಿನ ಎಣ್ಣೆಯಲ್ಲಿ ಲಭಿಸುತ್ತದೆ. ಸೂರ್ಯ ಪ್ರಕಾಶದಲ್ಲಿರುವ ನೇರಳಾತೀತ ಕಿರಣಗಳು ನಮ್ಮ ದೇಹದ ಚರ್ಮದಡಿಯಲ್ಲಿರುವ ೭-ಡಿ ಹೈಡ್ರೋಕೊಲೆಸ್ಟರಾಲ್ ಎಂಬ ರಾಸಾಯನಿಕವನ್ನು ಜೀವಸತ್ವ-ಡಿ ಯನ್ನಾಗಿ ಮಾರ್ಪಡಿಸುತ್ತವೆ.

ಜೀವಸತ್ವ : ಇದು ಉತ್ಕರ್ಷಣ ವಿರೋಧಿಯಾದುದರಿಂದ ದೇಹದಲ್ಲಿರುವ ಜೀವಸತ್ವ-ಕೆ ಮತ್ತು ಮೇದಾಮ್ಲಗಳು ಆಮ್ಲಜನಕದೊಡನೆ ಸಂಯೋಗ ಹೊಂದಿ ಉತ್ಕರ್ಷಿತವಾಗದಂತೆ ಅವುಗಳನ್ನುರಕ್ಷಿಸುತ್ತದೆ. ಇದಲ್ಲದೆ ಕೆಂಪು ರಕ್ತಕಣಗಳ ನಾಶವನ್ನು ತಡೆಗಟ್ಟುತ್ತದೆ. ಇದು ಪ್ರಾಣಿಗಳ ಸಂತಾನೋತ್ಪತ್ತಿಗೆ ಅವಶ್ಯಕವೆಂದು ತಿಳಿದುಬಂದಿದೆ. ಜೀವಸತ್ವ-ಇ ಅನೇಕ ಎಣ್ಣೆಗಳಲ್ಲಿ ಹಾಗೂ ಧಾನ್ಯಗಳು, ಬೇಳೆಗಳು ಮತ್ತು ಹಸಿರು ತರಕಾರಿಗಳಲ್ಲಿ ಯಥೇಚ್ಛವಾಗಿ ಲಭಿಸುತ್ತದೆ.

ಜೀವಸತ್ವಕೆ: ಇದು ರಕ್ತದ ಹೆಪ್ಪುಗಟ್ಟುವಿಕೆಗೆ ಮೂಲ ವಸ್ತುವಾದ ಪ್ರೋಥಾಂಬಿನ್ ಉತ್ಪತ್ತಿಗೆ ನೆರವಾಗುತ್ತದೆ. ಈ ಜೀವಸತ್ವವಿಲ್ಲದೆ ರಕ್ತದ ಹೆಪ್ಪುಗಟ್ಟುವಿಕೆ ಸಾಧ್ಯವೇ ಇಲ್ಲ.

ನೀರಿನಲ್ಲಿ ಕರಗುವ ಜೀವಸತ್ವಗಳು

ಜೀವಸತ್ವಸಿ (ಅಸ್ಕಾರ್ಬಿಕ್ ಆಮ್ಲ) : ಜೀವಕೋಶಗಳು ಮತ್ತು ಸ್ನಾಯುಗಳನ್ನು ಬಂಧಿಸುವಲ್ಲಿ, ಕಬ್ಬಿಣಾಂಶದ ಹೀರುವಿಕೆಗೆ ಜೀವಸತ್ವ-ಸಿ ಅವಶ್ಯಕ. ಪ್ರೊಟೀನ್ ಚಯಾಪಚಯ ಕಾರ್ಯದಲ್ಲಿ ಈ ಜೀವಸತ್ವ ಭಾಗಿಯಾಗಿರುತ್ತದೆ. ಅಡ್ರಿನಲ್ ಗ್ರಂಥಿಯ ಚೋದಕಗಳ ಉತ್ಪಾದನೆ ಅಂಟುರೋಗಗಳ ನಿರೋಧಕತೆ ಮತ್ತು ಗಾಯ ಮಾಯುವುದಕ್ಕೆ ಈ ಜೀವಸತ್ವ ಬಹು ಮುಖ್ಯ ಕಾರಣ. ಜಂಬೀರ ಜಾತಿಯ ಹಣ್ಣುಗಳು, ತಾಜಾ ತರಕಾರಿ, ಸೀಬೆಹಣ್ಣು ಮತ್ತು ನೆಲ್ಲಿಕಾಯಿಯಲ್ಲಿ ಜೀವಸತ್ವ-ಸಿ ಅತ್ಯಧಿಕವಾಗಿ ಲಭಿಸುತ್ತದೆ.

ಬಿಗುಂಪಿನ ಜೀವಸತ್ವಗಳು: ಥಯಾಮಿನ್, ರೈಬೊಪ್ಲೇವಿನ್, ನಯಾಸಿನ್, ಪಿರಿಡಾಕ್ಸಿನ್, ಪೋಲಿಕ್ ಆಮ್ಲ, ಜೀವಸತ್ವ ಬ/೧೨, ಬಯೋಟಿನ್ ಮತ್ತು ಪ್ಯಾಂಟೋಥೆನಿಕ್ ಆಮ್ಲ, ಇವು ಬಿ ಕಾಂಪ್ಲೆಕ್ಸ್‌ಜೀವಸತ್ವಗಳು ಹಾಲು, ಮಾಂಸ, ಯಕೃತ್ತು, ಹಸಿರು ಸೊಪ್ಪು, ಎಣ್ಣೆ ಬೀಜಗಳು ಮತ್ತು ಧಾನ್ಯಗಳಲ್ಲಿ ಹೇರಳವಾಗಿ ಲಭಿಸುತ್ತವೆ.

ನೀರುಒಂದು ಅವಶ್ಯಕ ಪೋಷಕಾಂಶ

ನೀರು ದೈಹಿಕ ಕಾರ್ಯಗಳಿಗೆ ಅನೇಕ ವಿಧಗಳಲ್ಲಿ ಚಾಲನೆಯನ್ನು ನೀಡುವುದಲ್ಲದೆ, ಕೋಶಿಕೆಗಳ ಒಳಗೆ ಮತ್ತು ಹೊರಗೆ ಇರುವ ಜೀವರಸಕ್ಕೆ ಮೂಲಾಧಾರವೂ ಆಗಿದೆ. ನೀರು ದೇಹದಲ್ಲಿ ಉಂಟಾಗುವ ರಸಸ್ರವಿಕೆ ಮತ್ತು ವಿಸರ್ಜನೆಗೆ ಮುಖ್ಯ ಭಾಗವಾಗಿದೆ. ಪಚನಾಂಗದಲ್ಲಿ ಜೀರ್ಣಗೊಂಡ ಆಹಾರವು ದ್ರವರೂಪದಲ್ಲಿ ಕರುಳಿನಿಂದ ಹೀರಲ್ಪಡಲು ಹಾಗೂ ಜೀವವಸ್ತುಕರಣ ಕ್ರಿಯೆಗೆ ಚಾಲನೆ ನೀಡುವ ಎಲ್ಲ ರಾಸಾಯನಿಕ ಕ್ರಿಯೆಗಳಲ್ಲೂ ನೀರು ಪಾತ್ರವಹಿಸುತ್ತದೆ. ದೈಹಿಕ ಕ್ರಿಯೆಯಿಂದ ಉದ್ಭವವಾಗುವ ಎಲ್ಲ ಕಲ್ಮಶಗಳನ್ನೂ ರಕ್ತದ ಮೂಲಕವಾಗಿ ಮೂತ್ರಪಿಂಡ ಮತ್ತು ಶ್ವಾಸಕೋಶಗಳಿಗೆ ಕೊಂಡೊಯ್ದ ವಿಸರ್ಜನೆಯಲ್ಲಿ ಸಹಾಯಕವಾಗುತ್ತದೆ. ಮೆದುಳು ಬಳ್ಳಿಯ ದ್ರವ ಮತ್ತು ನರಮಂಡಲದ ಮೇಲೆ ಬೀಳುವ ಆಘಾತಗಳನ್ನು ತಡೆಗಟ್ಟುತ್ತದೆ.

ನೀರಿನ ಅವಶ್ಯಕತೆ

ಒಬ್ಬ ವ್ಯಕ್ತಿ ಒಂದು ದಿನದಲ್ಲಿ ೨.೫ ರಿಂದ ೩ ಲೀ.ವರೆಗೆ ನೀರನ್ನು ಸೇವಿಸಬೇಕು. ಉಳಿದ ನೀರಿನ ಪ್ರಮಾಣವು ಕಾಫಿ, ಟೀ, ತಂಪುಪಾನೀಯ ಮುಂತಾದವುಗಳನ್ನು ಸೇವಿಸಿದಾಗ ದೇಹಕ್ಕೆ ಒದಗುತ್ತದೆ. ಆಹಾರ ಪದಾರ್ಥಗಳ ಮೂಲಕ ವಿಶೇಷವಾಗಿ ಹಣ್ಣು ಮತ್ತು ತರಕಾರಿಗಳ ಮೂಲಕ ನೀರು ದೇಹವನ್ನು ಪ್ರವೇಶಿಸುತ್ತದೆ. ಸೇವಿಸಿದ ಆಹಾರ ಜೀರ್ಣಗೊಂಡಾಗ ದೇಹಕ್ಕೆ ನೀರಿನಾಂಶ ಬಿಡುಗಡೆಯಾಗುತ್ತದೆ.

ನೀರಿನ ಕೊರತೆಯ ಪರಿಣಾಮಗಳು

ಶರೀರದ ನೀರಿನಂಶವು ಬೆವರು, ಮಲಮೂತ್ರಗಳ ಮುಖಾಂತರ ಅಧಿಕವಾಗಿ ವಿಸರ್ಜಿತವಾದರೆ ಶರೀರವು ಒಣಗುವುದಲ್ಲದೆ, ಶಕ್ತಿಹೀನತೆ, ದೇಹದೌರ್ಬಲ್ಯ, ಆಲಸ್ಯ ಉಂಟಾಗುತ್ತದೆ. ಸುಕ್ಕುಗಟ್ಟಿದ ಚರ್ಮ, ಕಾಂತಿಹೀನವಾದ ಕಣ್ಣುಗಳು, ಬಾಯಿ ಒಣಗುವುದು, ಕಷ್ಟದಿಂದ ಉಸಿರಾಡುವುದು ಮುಂತಾದ ಲಕ್ಷಣಗಳನ್ನೂ ಗಮನಿಸಬಹುದು. ರಕ್ತದ ಪ್ರಮಾಣ ಕಡಿಮೆಯಾಗಿ ರಕ್ತಚಲನೆಯ ವೇಗದಲ್ಲಿ ಅಸಮಾನತೆ ಉಂಟಾಗುತ್ತದೆ. ಅಂಗಾಂಗಳಿಗೆ ಸಾಕಷ್ಟು ಆಮ್ಲಜನಕ ಒದಗುವುದಿಲ್ಲ. ಸೇವಿಸದ ಆಹಾರವೂ ಸಂಪೂರ್ಣವಾಗಿ ಜೀರ್ಣವಾಗದೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುವುದರಿಂದ ಮಲೀನಾಂಶಗಳು ಶರೀರದಲ್ಲಿಯೇ ಉಳಿದುಕೊಳ್ಳುತ್ತವೆ. ನೀರು ಮತ್ತು ಖನಜಲವಣಗಳ ಸಮತೋಲನೆಯಲ್ಲಿ ಅಸಮಾನತೆ ಕಂಡು ಬರುತ್ತದೆ.

ಬೇಸಿಗೆ ಕಾಲದಲ್ಲಿ ಹಾಗೂ ಅತೀ ಕಷ್ಟಕರ ಕೆಲಸ ಮಾಡಿದಾಗ ಹೆಚ್ಚಾಗಿ ಶರೀರದಿಂದ ನೀರು ಬೆವರಿನ ರೂಪದಲ್ಲಿ ವಿಸರ್ಜಿತವಾಗುತ್ತದೆ. ಈ ಸಂದರ್ಭದಲ್ಲಿ ಕೂಡಲೇ ತಕ್ಕಷ್ಟು ನೀರನ್ನು ಪುನಃ ಒದಗಿಸಬೇಕು ಇಲ್ಲವಾದಲ್ಲಿ ‌ದುರಂತಕ್ಕೆ ಕಾರಣವಾಗುವುದು. ಸುಮಾರು ೧೦ ಲೀ.ನಷ್ಟು ನೀರು ಶರೀರದಿಂದ ವಿಸರ್ಜನೆಗೊಂಡಿರುವಾಗ ಅಷ್ಟು ಪ್ರಮಾಣದಲ್ಲಿ ಪುನಃ ಸೇವಿಸದಿದ್ದರೆ ವ್ಯಕ್ತಿಯು ಮೂರ್ಛೆ ಹೋಗಬಹುದು. ಅದೇ ರೀತಿ ೧೫ ಲೀ. ನಷ್ಟು ನೀರು ನಷ್ಟವಾದರೆ ವ್ಯಕ್ತಿಯು ಸಾಯುವ ಸಂದರ್ಭವೂ ಇದೆ.

ನೀರಿನ ಅಥವಾ ಸೆಲ್ಯುಲೋಸ್

ನಾರು ಅಥವಾ ಸೆಲ್ಯುಲೋಸ್ ದೇಹದಲ್ಲಿ ಪಚನವಾಗಿವುದಿಲ್ಲ. ಆದ್ದರಿಂದ ಇದು ಒಂದು ಪೋಷಕಾಂಶ ಅಲ್ಲದಿದ್ದರೂ, ದೈಹಿಕ ನಿಯಂತ್ರಣ ಕಾರ್ಯದಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ಕಾರ್ಯಗಳು: ನಾರು ದೇಹದಲ್ಲಿ ಜೀರ್ಣವಾಗುವುದಿಲ್ಲ. ಆದರೂ ಇದು ಸೆಲ್ಯಲೋಸ್ ಪಚನವಾಗದೆ ಇರುವಂತಹ ಪದಾರ್ಥಗಳೊಂದಿಗೆ ಬಂಧಿಸಲ್ಪಟ್ಟು ನೀರನ್ನು ಹೀರಿಕೊಂಡು ಕರುಳಿನಲ್ಲಿ ಮಲದ ಗಾತ್ರವನ್ನು ಹೆಚ್ಚಿಸುತ್ತದೆ. ಇದರಿಂದ ಮಲವು ಗಟ್ಟಿಯಾಗದೆ ಮಲವಿಸರ್ಜನೆ ಸುಲಭವಾಗುತ್ತದೆ.

ದೊಡ್ಡ ಕರುಳಿನ ಚಲನೆಯನ್ನು ನಾರು ಉತ್ತೇಜಿಸುತ್ತದೆ. ಇದರಿಂದ ದೊಡ್ಡ ಕರುಳು ಸಂಕುಚಿತಗೊಂಡು ದೇಹಕ್ಕೆ ಬೇಡವಾದ ಪದಾರ್ಥವನ್ನು ಹೊರದೂಡುತ್ತದೆ.

ನಾರಿನ ಕೊರತೆಯ ಪರಿಣಾಮಗಳು

ಆಹಾರದಲ್ಲಿ ನಾರಿನಾಂಶದ ಕೊರತೆಯುಂಟಾದಾಗ ಮಲವು ಗಟ್ಟಿಯಾಗಿ ಮಲಬದ್ಧತೆಯುಂಟಾಗುತ್ತದೆ. ಇದರಿಂದ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು.

ನಾರಿನಾಂಶಭರಿತ ಆಹಾರಗಳು

ಹಣ್ಣು ಮತ್ತು ತರಕಾರಿಗಳು ಸುಮಾರು ೧-೨ಗ್ರಾಂ ಸೆಲ್ಯೂಲೋಸನ್ನು ಒದಗಿಸುತ್ತವೆ. ಹೊಟ್ಟು ಅಥವಾ ಸಿಪ್ಪೆ ತೆಗೆಯದ ಧಾನ್ಯಗಳು, ಕಾಳುಗಳು ಮತ್ತು ಎಣ್ಣೆ ಬೀಜಗಳೂ ಸಹ ನಾರಿನಾಂಶವನ್ನೊದಗಿಸುತ್ತವೆ. ಒಂದು ದಿನಕ್ಕೆ ೫-೭ ಗ್ರಾಂ ಸೆಲ್ಯುಲೋಸ್ ದೇಹಕ್ಕೆ ಬೇಕಾಗುತ್ತದೆ. ಇದನ್ನು ಸುಲಭವಾಗಿ ಬೇಳೆಕಾಳುಗಳು ಮತ್ತು ಹಣ್ಣು ತರಕಾರಿಗಳ ಮೂಲಕ ಒದಗಿಸಬಹುದು.

ಆಹಾರ ಪಚನವಾಗುವಿಕೆ ಮತ್ತು ಪೋಷಕಾಂಶಗಳ ಹೀರುವಿಕೆ

ನಮ್ಮ ದೇಹದಲ್ಲಿರುವ ಜೀರ್ಣಾಂಗಗಳು ಆಹಾರದ ಪಚನಕ್ರಿಯೆ ಹಾಗೂ ಪೋಷಕಾಂಶಗಳ ಹೀರುವಿಕೆಯಲ್ಲಿ ಮಹತ್ತರ ಪಾತ್ರವಹಿಸುತ್ತವೆ. ನಮ್ಮ ದೇಹದಲ್ಲಿರುವ ಜೀರ್ಣಾಂಗಗಳೆಂದರೆ, ಬಾಯಿ, ಅನ್ನನಾಳ, ಜಠರ, ಸಣ್ಣಕರುಳು ಮತ್ತು ದೊಡ್ಡಕರುಳು.

ಬಾಯಿ : ಬಾಯಿಯ ಮೂಲಕ ಸೇವಿಸಿದ ಆಹಾರ ಹಲ್ಲುಗಳಿಂದ ಜಗಿಯಲ್ಪಟ್ಟು ಎಂಜಲೊಂದಿಗೆ ಮಿಶ್ರಿತವಾಗಿ ನುಣ್ಣಗಾಗುತ್ತದೆ. ಈ ಕಾರ್ಯಕ್ಕೆ ನಾಲಗೆಯೂ ಸಹ ಸಹಾಯ ಮಾಡುತ್ತದೆ. ತುಟಿಗಳು ಆಹಾರ ಹೊರಗೆ ಹೋಗದಂತೆ ಬಾಯಿಯಲ್ಲಿಯೇ ಇರುವಂತೆ ತಡೆಹಾಕುತ್ತವೆ.

ಅಗಿಯುವುದು, ಹಸಿವಾಗುವುದು, ಊಟದ ಆಹ್ಲಾದಕರ ವಾಸನೆ ಅಥವಾ ಇಷ್ಟ ಪದಾರ್ಥಗಳ ಬಯಕೆಯಿಂದ ಬಾಯಲ್ಲಿರುವ ಜೊಲ್ಲುಗ್ರಂಥಿಗಳಿಂದ ಜೊಲ್ಲುರಸ ಉತ್ಪತ್ತಿಯಾಗುತ್ತದೆ. ಇದು ಆಹಾರವನ್ನು ನೀರಾಗಿಯೂ, ಮೆತ್ತಗೂ, ತೆಳುವಾಗಿಯೂ ಮಾಡುತ್ತದೆ. ಇದರಲ್ಲಿರುವ ಟಯಲಿನ್ ಕಿಣ್ವ, ಪಿಷ್ಟ ಪದಾರ್ಥಗಳು ಜೀರ್ಣವಾಗಲು ಸಹಾಯಮಾಡುತ್ತವೆ.

ಅನ್ನನಾಳ : ಗಂಟಲು ಕುಳಿಯಲ್ಲಿ ಗಾಳಿ ಹಾಗೂ ಆಹಾರ ಎರಡೂ ಪ್ರವೇಶಮಾಡಿ ಅನಂತರ ಆಹಾರ ಅನ್ನನಾಳಕ್ಕೂ ಗಾಳಿಯು ಶ್ವಾಸಕೋಶಗಳಿಗೂ ಹೋಗುತ್ತದೆ. ಅನ್ನನಾಳ ಸುಮಾರು ಹತ್ತು ಅಂಗುಲ ಉದ್ದವುಳ್ಳ ಒಂದು ಮಾಂಸದ ಕೊಳವೆ. ಇದು ಆಹಾರವನ್ನು ಜಠರಕ್ಕೆ ಸೇರಿಸುತ್ತದೆ.

ಜಠರ : ಜಠರದಲ್ಲಿ ಪಿಷ್ಟ, ಸಸಾರಜನಕ ಹಾಗೂ ಜಿಡ್ಡು ಜೀರ್ಣವಾಗುವುದು ಮುಂದುವರಿಯುತ್ತದೆ. ಆಹಾರವು ಜಠರದಲ್ಲಿ ೩ ರಿಂದ ೪ ತಾಸಿನವರೆಗೆ ಇರುತ್ತದೆ.

ಸಣ್ಣಕರುಳು : ಜಠರದಿಂದ ಆಹಾರವು ಸಣ್ಣಕರುಳಿಗೆ ಬರುತ್ತದೆ. ಸಣ್ಣಕರುಳಿನ ಪ್ರಥಮ ಭಾಗಕ್ಕೆ ದುರಾರ್ಗರುಳು ಎಂದು ಹೆಸರು. ಈ ಭಾಗಕ್ಕೆ ಪಿತ್ತಜನಕಾಂಗದಿಂದ ಪಿತ್ತರಸವೂ, ಮೇಧೋಜೀರಕದಿಂದ ಜೀರ್ಣರಸವೂ ಹರಿಯುತ್ತದೆ. ಆಹಾರವು ಸಣ್ಣಕರುಳಿನಲ್ಲಿ ಈ ರಸಗಳ ಸಹಾಯದಿಂದ ಪಚನವಾಗಿ ರಕ್ತ ಮತ್ತು ಹಾಲ್ರಸದ ಮೂಲಕ ದೇಹದ ನಾನಾ ಭಾಗಗಳಿಗೆ ಹೋಗುತ್ತದೆ.

ದೊಡ್ಡಕರುಳು : ಆಹಾರವು ದೊಡ್ಡಕರುಳನ್ನು ದ್ರವರೂಪದಲ್ಲಿ ಪ್ರವೇಶಿಸುತ್ತದೆ. ದ್ರವಭಾಗ ಬಹುಮಟ್ಟಿಗೆ ಹೀರಲ್ಪಟ್ಟು ಗಟ್ಟಿಯಾಗಿ ಮಲರೂಪದಲ್ಲಿ ಗುದನಾಳದ ಮೂಲಕ ವಿಸರ್ಜಿತವಾಗುತ್ತದೆ.

ಪಿತ್ತಜನಕಾಂಗ : ಇದು ನಮ್ಮ ದೇಹದ ಜೀವರಾಸಾಯನಿಕ ಕಾರ್ಯಾಗಾರ. ಇಲ್ಲಿ ಉತ್ಪತ್ತಿಯಾಗುವ ಪಿತ್ತರಸವು ಕೊಬ್ಬನ್ನು ಜೀರ್ಣಗೊಳಿಸಲು ಸಹಕರಿಸುತ್ತದೆ.

ಪಿತ್ತಕೋಶ : ಇದು ಪಿತ್ತಜನಕಾಂಗದ ಹಿಂದುಗಡೆ ಇರುವ ಮಾಂಸದ ಚೀಲ. ಇದರಲ್ಲಿ ಪಿತ್ತರಸವು ಶೇಖರಣೆ ಹೊಂದುತ್ತದೆ ಮತ್ತು ಸಮಯೋಚಿತವಾಗಿ ಸಣ್ಣಕರುಳಿಗೆ ಸೇರಿಸಿ ಆಹಾರದಲ್ಲಿರುವ ಜಿಡ್ಡನ್ನು ಪಚನಮಾಡಲು ಸಹಾಯ ಮಾಡುತ್ತದೆ.

ಮೇದೋಜೀರಕಾಂಗ :  ಇದು ಜಠರದ ಹಿಂದೆ ಇರುವ ಅಂಗ. ಇದರಿಂದ ಉತ್ಪತ್ತಿಯಾಗುವ ಮೇದೋಜೀರಕ ರಸದಿಂದ ಆಹಾರದಲ್ಲಿರುವ ಪಿಷ್ಟ. ಕೊಬ್ಬು ಮತ್ತು ಪ್ರೊಟೀನುಗಳು ಸರಳ ವಸ್ತುಗಳಾಗಿ ಪರಿವರ್ತಿಸಲ್ಪಡುತ್ತವೆ. ಜೀರ್ಣಾಂಗಗಳಿಂದ ನಾವು ಸೇವಿಸುವ ಆಹಾರವು ದೇಹದ ಜೀವಕೋಶಗಳಿಗೆ ಬೇಕಗುವ ಮಾದರಿಯಲ್ಲಿ ಸರಳವಸ್ತುವಾಗಿ ಪರಿವರ್ತನೆಗೊಂಡು ದುಗ್ಧಗ್ರಂಥಿಗಳ ಮೂಲಕ ದೇಹದ ನಾನಾ ಭಾಗಗಳಿಗೆ ಹೋಗುತ್ತದೆ.

ಕೋಷ್ಟಕ. ಕಿಣ್ವಗಳುಮತ್ತುಆಹಾರದಮೇಲೆಅವುಗಳಪರಿಣಾಮ

ಕ್ರ.
ಸಂ.

ಕಿಣ್ವಗಳು

ಉತ್ಪತ್ತಿಯಾಗುವ ಭಾಗ

ಕಾರ್ಯಕ್ಷೇತ್ರ

ಪರಿಣಾಮ

೧. ಟಯಲಿನ್ ಜೊಲ್ಲುಗ್ರಂಥಿಗಳು ಬಾಯಿ ಪಿಷ್ಟವನ್ನು ಗ್ಲೂಕೋಸ್‌ಆಗಿ ಪರಿವರ್ತಿಸಲು ಸಹಾಯಕ
೨. ಪೆಪ್ಸಿನ್ ಜಠರ ಜಠರ ಸಸಾರಜನಕ (ಪ್ರೊಟೀನ್) ಜೀರ್ಣಕ್ರಿಯೆಯ ಆರಂಭ
೩. ಟ್ರಿಪ್ಸಿನ್ ಮೇದೋಜೀರಕಾಂಗ ಚಿಕ್ಕಕರುಳು ಸಸಾರಜನಕಗಳ ಜೀರ್ಣಕ್ರಿಯೆ ಪೂರ್ಣಗೊಳ್ಳುವುದು.
೪. ಅಮೈಲೇಸ್ ಮೇದೋಜೀರಕಾಂಗ ಚಿಕ್ಕಕರುಳು ಪಿಷ್ಟವನ್ನುಗ್ಲೂಕೋಸ್‌ಆಗಿ ಪರಿವರ್ತಿಸಲು ಸಹಾಯಕ
೫. ಲೈಪೇಸ್ ಮೇದೋಜೀರಕಾಂಗ ಚಿಕ್ಕಕರುಳು ಇದು ಕೊಬ್ಬನ್ನು ಫ್ಯಾಟಿಆಸಿಡ್‌ ಆಗಿ ಪರಿವರ್ತಿಸಲು ಸಹಾಯಕ
೬. ಎಂಟೆರೋಕೈನೇಸ್ ಬದಿ ಕರುಳು ಚಿಕ್ಕಕರುಳು ಸಸಾರಜನಕದ ಜೀರ್ಣಕ್ರಿಯೆ ಮತ್ತು ಅಮೈನೋ ಆಮ್ಲಗಳ ಉತ್ಪಾದನೆ
೭. ಸುಕ್ರೋಸ್ ಬದಿಕರುಳು ಚಿಕ್ಕಕರುಳು ಪಿಷ್ಟದಿಂದ ಗ್ಲೂಕೋಸ್ ಉತ್ಪಾದನೆ