ಶಾಲಾಪೂರ್ವ ಮಕ್ಕಳು : ನಮ್ಮ ದೇಶದಲ್ಲಿ ಮೂವರಲ್ಲಿ ಇಬ್ಬರು ಶಾಲಾಪೂರ್ವ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಂದ ಅಪೌಷ್ಟಿಕತೆ ಇನ್ನೂ ಹೆಚ್ಚಾಗುತ್ತದೆ. ಈ ವಯಸ್ಸಿನ ಮಕ್ಕಳು ಶೀಘ್ರವಾಗಿ ಬೆಳೆಯುತ್ತಾರೆ. ಇವರು ದೈಹಿಕ ಹಾಗೂ ಮಾನಸಿಕವಾಗಿ ಅತಿಯಾದ ಚಟುವಟಿಕೆಯಿಂದಿದ್ದು ಹೊಸ ಹೊಸ ಅನುಭವಗಳಿಗನುಗುಣವಾಗಿ ಪರಿಪೂರ್ಣ ಬೆಳವಣಿಗೆಯನ್ನು ಹೊಂದುವರು. ಸ್ನಾಯುಗಳು ಹಾಗೂ ಮೂಳೆಗಳ ಬೆಳವಣಿಗೆಗೆ ಪ್ರೊಟೀನು, ಕ್ಯಾಲ್ಸಿಯಂ, ಕಬ್ಬಿಣಾಂಶದ ಅವಶ್ಯಕತೆ ಈ ಮಕ್ಕಳಿಗೆ ಹೆಚ್ಚಾಗಿರುತ್ತದೆ. ಜೀವಸತ್ವ ಸಿ ಮತ್ತು ಎ ಸಹ ಇವರಿಗೆ ಹೆಚ್ಚಾಗಿ ಒದಗಿಸಬೇಕಾಗುವುದು.

ಶಾಲಾ ಮಕ್ಕಳು ( ರಿಂದ ೧೨ ವರ್ಷಗಳು) : ಈ ವಯಸ್ಸಿನ ಮಕ್ಕಳಲ್ಲಿ ಬೆಳವಣಿಗೆ ನಿಧಾನವಾಗಿದ್ದರೂ ಕ್ರಮವಾಗಿ ಆಗುತ್ತಿರುತ್ತದೆ. ಹೆಣ್ಣುಮಕ್ಕಳಿಗೆ ಹೋಲಿಸಿದರೆ ಈ ವಯಸ್ಸಿನ ಗಂಡುಮಕ್ಕಳ ಬೆಳವಣಿಗೆ ನಿಧಾನವಾಗಿರುತ್ತದೆ. ತರುಣಾವಸ್ಥೆಯಲ್ಲಿ ಉಂಟಾಗುವ ಶೀಘ್ರ ಬೆಳವಣಿಗೆಗಾಗಿ ಈ ಮಕ್ಕಳಲ್ಲಿ ಪೋಷಕಾಂಶಗಳ ಶೇಖರಣೆಯಾಗುತ್ತದೆ. ಈ ವಯಸ್ಸಿನಲ್ಲಿ ದೈಹಿಕ ಬೆಳವಣಿಗೆಯು  ನಿಧಾನವಾಗಿರುವುದರಿಂದ ಕ್ಯಾಲೊರಿ ಮತ್ತು ಸಸಾರಜನಕದ ಅವಶ್ಯಕತೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಕುರುಕು ತಿಂಡಿ ಅಥವಾ ಜಂಕ್‌ಫುಡ್‌ಗಳನ್ನು ಇಷ್ಟಪಡುವುದರಿಂದ ಸಸಾರಜನಕದ ಹಾಗೂ ಜೀವಸತ್ವಗಳ ನ್ಯೂನತೆ ಉಂಟಾಗುವ ಸಂಭವ ಹೆಚ್ಚು. ಆದ್ದರಿಂದ ತಾಯಿಯು ಇವರ ಊಟದ ಕಡೆಗೆ ಗಮನಕೊಟ್ಟು ಆರೋಗ್ಯಕರ ಆಹಾರ ತಿನಿಸುಗಳನ್ನು ಕೊಡಬೇಕು.

ಯುವಕರು ಅಥವಾ ತರುಣರು (೧೨ ರಿಂದ ೧೮ ವರ್ಷಗಳು ):  ಈ ವಯಸ್ಸಿನ ಮಕ್ಕಳಲ್ಲಿ ಬೆಳವಣಿಗೆ ಅತಿ ಶೀಘ್ರವಾಗಿರುತ್ತದೆ. ಹುಡುಗಿಯರಿಗೆ ಹೋಲಿಸಿದರೆ ಹುಡುಗರಲ್ಲಿ ಬೆಳವಣಿಗೆ ನಿಧಾನವಾಗಿದ್ದರೂ, ಸ್ನಾಯುಗಳು ಹಾಗೂ ಮೂಳೆಗಳ ಬೆಳವಣಿಗೆಯಿಂದಾಗಿ ಹುಡುಗರು ಹುಡುಗಿಯರಿಗಿಂತ ತೂಕ ಹಾಗೂ ಎತ್ತರದಲ್ಲಿ ಹೆಚ್ಚಿರುತ್ತಾರೆ. ಈ ವಯಸ್ಸಿನಲ್ಲಿ ಕ್ಯಾಲೊರಿ ಹಾಗೂ ಪ್ರೊಟೀನುಗಳ ಅವಶ್ಯಕತೆ ಹೆಚ್ಚು. ಮೂಳೆಗಳ ಬೆಳವಣಿಗೆ ಸುಣ್ಣ ಹಾಗೂ ಕಬ್ಬಿಣದ ಅಂಶವನ್ನು ಹೆಚ್ಚಿಸಬೇಕು. ತರುಣಿಯರಲ್ಲಿ ಋತುಸ್ರಾವದಿಂದಾಗಿ ಕಬ್ಬಿಣದ ಅವಶ್ಯಕತೆ ಹೆಚ್ಚಾಗುವುದು. ಈ ವಯಸ್ಸಿನಲ್ಲಿ ಪಚನಕ್ರಿಯೆ ಶೀಘ್ರವಾಗುವುದರಿಂದ ಅಯೋಡಿನ್ ಹಾಗೂ ಸ್ನಾಯುಗಳ ಬೆಳವಣಿಗೆಗೆ ಬಿ ಜೀವಸತ್ವಗಳ ಅವಶ್ಯಕತೆ ಇದೆ.

ಪ್ರೌಢರು ಅಥವಾ ವಯಸ್ಕರು (೧೯ ರಿಂದ ೫೦ ವರ್ಷಗಳು) : ಪ್ರೌಢರು ದೇಶದ ದುಡಿಯುವ ಕೈಗಳು. ಅನಾರೋಗ್ಯ ಪ್ರಜೆಗಳಿಂದ ದೇಶದ ಅಭಿವೃದ್ಧಿ ಅಸಾಧ್ಯ. ಪ್ರೌಢಾವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ವ್ಯಕ್ತಿಯು ಹಲವು ಒತ್ತಡ, ಮಕ್ಕಳು ಹಾಗೂ ಕುಟುಂಬವನ್ನು ಸಲಹುವ ಒತ್ತಡ, ಮಹಿಳೆಯರಿಗೆ ಮಕ್ಕಳನ್ನು ಹೆರುವ ಹಾಗೂ ಸಾಕುವ ಒತ್ತಡ. ಇವುಗಳನ್ನೆಲ್ಲ ಸಮರ್ಪಕವಾಗಿ ನಿರ್ವಹಿಸಬೇಕು. ಈ ವಯಸ್ಸಿನಲ್ಲಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರಿಯಾದ ಆಹಾರದ ಜೊತೆಗೆ ಒಳ್ಳೆಯ ವ್ಯಾಯಾಮ ಈ ವಯಸ್ಸಿನಲ್ಲಿ ಅತಿ ಮುಖ್ಯ.

ತರುಣಾವಸ್ಥೆಯಲ್ಲಿ ಇದ್ದಂತಹ ಆಹಾರದ ಅವಶ್ಯಕತೆ ಈ ವಯಸ್ಸಿನಲ್ಲಿಯೂ ಮುಂದುವರೆಯುತ್ತದೆ. ವ್ಯಕ್ತಿಯ ಎತ್ತರ, ತೂಕ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕ್ಕೆ ತಕ್ಕಂತೆ ಪೋಷಕಾಂಶಗಳ ಪ್ರಮಾಣವನ್ನು ಹೊಂದಿಸಿಕೊಳ್ಳಬೇಕು.

ಶಕ್ತಿ ಅಥವಾ ಕ್ಯಾಲೊರಿಗಳ ಅವಾಶ್ಯಕತೆ : ವಯಸ್ಸಾದಂತೆ ಕ್ಯಾಲೊರಿಗಳ ಅವಶ್ಯಕತೆ ಕಡಿಮೆಯಾಗುತ್ತದೆ. ಎತ್ತರಕ್ಕೆ ತಕ್ಕ ತೂಕವನ್ನು ನಿರ್ವಹಿಸುವಷ್ಟು ಕ್ಯಾಲೊರಿಗಳನ್ನು ಒದಗಿಸಬೇಕು. ದೈಹಿಕ ಚಟುವಟಿಕೆ ಹೆಚ್ಚಾಗಿದ್ದರೆ ಅದಕ್ಕೆ ತಕ್ಕಂತೆ ಕ್ಯಾಲೊರಿಗಳನ್ನು ಹಚ್ಚಿಸಬೇಕು.

ಶರ್ಕರ ಪಿಷ್ಟಗಳು :  ಶರ್ಕರ ಪಿಷ್ಟಗಳು ಕ್ಯಾಲೊರಿಗಳನ್ನು ಒದಗಿಸುವಂತಹ ಪೋಷಕಾಂಶಗಳು, ಕ್ಯಾಲೊರಿಗಳ ಅವಶ್ಯಕತೆ ಈ ವಯಸ್ಸಿನಲ್ಲಿ ಕಡಿಮೆ ಆಗುವುದರಿಂದ ಶರ್ಕರ ಪಿಷ್ಟ ಭರಿತ ಸಕ್ಕರೆ ಮತ್ತು ಗ್ಲೂಕೋಸ್‌ಗಳನ್ನು ಕಡಿಮೆ ಮಾಡಿ ಕ್ಲಿಷ್ಟ ಶರ್ಕರ ಪಿಷ್ಟಗಳನ್ನೊದಗಿಸುವಂತಹ ಆಹಾರಗಳನ್ನು ಕೊಡಬೇಕು. ಶೇ. ೪೦ ರಿಂದ ೫೦ ರಷ್ಟು ಕ್ಯಾಲೊರಿಗಳು ಶರ್ಕರ ಪಿಷ್ಟಗಳಿಂದೊದಗಬೇಕು.

ಕೊಬ್ಬು : ಶೇ. ೧೦-೧೫ ರಷ್ಟು ಕ್ಯಾಲೊರಿಗಳು ಕೊಬ್ಬಿನಿಂದ ಒದಗುವಂತಿರಬೇಕು. ರಕ್ತದಲ್ಲಿ ಕೊಲೆಸ್ಟರಾಲ್‌ನ ಅಂಶ ಈ ವಯಸ್ಸಿನಲ್ಲಿ ಹೆಚ್ಚಾಗುವದರಿಂದ ಮೊಟ್ಟೆಯ ಹಳದಿಭಾಗ, ಕೆನೆ, ಕೊಬ್ಬಿನಿಂದೊಡಗೂಡಿದ ಮಾಂಸವನ್ನು ವರ್ಜಿಸಿದರೆ ಉತ್ತಮ.

ಪ್ರೊಟೀನ್ :  ಶೇ. ೧೫-೨೦ಭಾಗ ಕ್ಯಾಲೊರಿಗಳು ಪ್ರೊಟೀನಿನಿಣದ ಒದಗುವಂತಿರಬೇಕು.

ಜೀವಸತ್ವಗಳು : ಜೀವಸತ್ವಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕು. ಕೊಬ್ಬಿನಲ್ಲಿ ಕರಗುವಂತಹ ಜೀವಸತ್ವಗಳನ್ನು ಶೇಖರಿಸುವ ದೈಹಿಕ ಕ್ಷಮತೆ ಕುಗ್ಗುವುದರಿಂದ ಆಹಾರದ ಮೂಲಕ ಇವುಗಳನ್ನು ಒದಗಿಸುವುದು ಸೂಕ್ತ. ಈ ವಯಸ್ಸಿನಲ್ಲಿ ಆಹಾರದ ಪಚನಕ್ರಿಯೆ ಹಾಗೂ ಹೀರುವಿಕೆಯ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿ ಗುಂಪಿನ ಜೀವಸತ್ವಗಳನ್ನು ಕೊಡಬೇಕಾಗುವುದು.

ಖನಿಜಾಂಶಗಳು :  ಆಹಾರದಲ್ಲಿ ಕಬ್ಬಿಣ ಹಾಗೂ ಸುಣ್ಣದಂಶ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಮಹಿಳೆಯರಿಗೆ ಈ ಪೋಷಕಾಂಶಗಳ ಅವಶ್ಯಕತೆ ಅತಿ ಹೆಚ್ಚಾಗಿರುತ್ತದೆ. ವಯಸ್ಸಾದಂತೆ ಕ್ಯಾಲ್ಸಿಯಂನ ಹೀರುವಿಕೆ ಕ್ಷಯಿಸುವದರಿಂದ ಆಸ್ಟಿಯೋಪೊರೋಸಿಸ್ ರೋಗ ಬರುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಈ ವಯಸ್ಸಿನಲ್ಲಿ ಅತ್ಯಾವಶ್ಯಕವಾಗಿ ಬೇಕಾಗುವಂತಹ ಒಂದು ಪೋಷಕಾಂಶ.