ವೃದ್ಧಾಪ್ಯ ಜೀವನದ ಕೊನೆಯ ಅಧ್ಯಾಯ. ಅದು ಜೀವನದ ಒಂದು ಘಟಕವೇ ವಿನಃ ರೋಗವಲ್ಲ. ವೃದ್ಧಾಪ್ಯದ ಪ್ರಭಾವದ ತೀವ್ರತೆಯನ್ನು ಕಡಿಮೆ ಮಾಡುವುದು ಸಾಧ್ಯವಿದೆ. ದೈಹಿಕ ಅಗತ್ಯಕ್ಕೆ ಸಾಕೆನಿಸುವ ಸಮತೋಲನ ಆಹಾರ ಸೇವನೆ, ಚಟುವಟಿಕೆಯುಳ್ಳ ಬಾಳುವೆ, ವ್ಯಾಯಾಮ ಇವು ದೇಹದ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಬಲ್ಲವು. ಯೋಗ್ಯ ಆಹಾರ ಶರೀರಕ್ಕೆ ಚೇತನವನ್ನು ಮತ್ತು ಬಲವನ್ನು ಕೊಡುತ್ತದೆ. ದೇಹ ಸದೃಢಗೊಳ್ಳುತ್ತದೆ. ರೋಗದ ವಿರುದ್ಧ ರಕ್ಷಣೆ ನೀಡುತ್ತದೆ. ದೈಹಿಕ ಅಗತ್ಯ, ಹಸಿವೆ ಮತ್ತು ಕಾರ್ಯ ಚಟುವಟಿಕೆಗಳನ್ನು ಅವಲಂಬಿಸಿ ಸೇವಿಸುವ ಪುಷ್ಟಿಕರ ಆಹಾರ ದೈಹಿಕ ಆರೋಗ್ಯಕ್ಕೆ ಪೂರಕವಾಗಿರಬೇಕು.

ಜೀವಕೋಶಗಳಲ್ಲಿನ ಬದಲಾವಣೆಯ ಫಲವಾಗಿ ದೈಹಿಕ ಬದಲಾವಣೆಗಳು ತೋರಿ ಬರುತ್ತವೆ. ಚರ್ಮ ಸುಕ್ಕುಗಟ್ಟಿ ತನ್ನ ಸ್ಥಿತಿ ಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಸ್ನಾಯುಗಳು ಸವಕಲುಗೊಂಡು ಶಕ್ತಿಗುಂದುತ್ತವೆ. ಹಲ್ಲುಗಳು ಉದುರುತ್ತವೆ. ಆಹಾರದ ಮೇಲಿನ ಬಯಕೆ, ಅದರ ಪಚನಕ್ರಿಯೆ ಕಡಿಮೆಯಾಗುತ್ತದೆ. ರಕ್ತದೆ ಪೂರೈಕೆ ಕುಂಠಿತಗೊಳ್ಳುವುದರಿಂದ ಮೆದುಳಿನ ಕಣಗಳು ಅನುವಳಿಕೆಯನ್ನು ತೋರ್ಪಡಿಸುತ್ತವೆ. ಮೂತ್ರ ಪಿಂಡೋತ್ತರ ಗ್ರಂಥಿ ದೊಡ್ಡದಾಗಿ ಮೂತ್ರ ವಿಸರ್ಜನೆಗೆ ಅಡ್ಡಿಯನ್ನುಂಟುಮಾಡುತ್ತದೆ. ನಿರ್ನಾಳ ಗ್ರಂಥಿಗಳ ಕಾರ್ಯ ಕುಗ್ಗುತ್ತದೆ. ರಕ್ತನಾಳಗಳು ಗಡಸುತನವನ್ನು ಹೊಂದುತ್ತವೆ. ಮೂಳೆಗಳಲ್ಲಿ ಸುಣ್ಣದಂಶ ಕಡಿಮೆಯಾಗಿ ಬೆನ್ನು ಮೂಳೆ ಕುಸಿಯುತ್ತಾ ಬೆನ್ನನ್ನು ಬಾಗಿಸುತ್ತದೆ. ಕೀಲುಗಳ ಸರಾಗ ಚಲನೆ ಕುಂಠಿತಗೊಳ್ಳುತ್ತದೆ. ದೈಹಿಕ ಸಾಮರ್ಥ್ಯವನ್ನು ಕುಗ್ಗಿಸಿ ದೈನಂದಿನ ಚಟುವಟಿಕೆಗಳನ್ನು ಪರಿಮಿತಗೊಳಿಸುತ್ತದೆ.

ವೃದ್ಧಾಪ್ಯದಲ್ಲಿ ಪೋಷಕಾಂಶಗಳ ಅವಶ್ಯಕತೆ

ಸಸಾರಜನಕ : ಹಸಿವು ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇರುವ ಕಾರಣ ಹಿರಿಯರು ಕಡಿಮೆ ಊಟ ಸೇವಿಸುವರು. ಇದರಿಂದ ಅವರಲ್ಲಿ ಸಸರಜನಕದ ಕೊರತೆ ತಲೆದೋರಬಹುದು. ಆದ್ದರಿಂದ ಅವರು ಸರಿಯಾದ ಪ್ರಮಾಣದಲ್ಲಿ ಸಸಾರಜನಕ ತೆಗೆದುಕೊಳ್ಳಬೇಕು. ದಿನಕ್ಕೆ ೧ಕಿ.ಗ್ರಾಂ ದೇಹ ತೂಕಕ್ಕೆ ೧.೦ರಿಂದ೧.೪ ಗ್ರಾಂ ಸಸಾರಜನಕದ ಸೇವನೆಯಾಗಬೇಕು.

ಕ್ಯಾಲೊರಿಗಳು : ವೃದ್ಧಾಪ್ಯದಲ್ಲಿ ದೇಹದ ಚಟುವಟಿಕೆ ಕುಗ್ಗುವುದರಿಂದ ಶಕ್ತಿಯ ಅವಶ್ಯಕತೆ ಸಾಮಾನ್ಯ ವ್ಯಕ್ತಿಯ ಅವಶ್ಯಕತೆಗಿಂತ ಶೇ. ೨೫ರಷ್ಟು ಕಡಿಮೆಯಾಗುತ್ತದೆ. ಆರೋಗ್ಯಕರ ಮೈತೂಕವುಳ್ಳ ವೃದ್ಧರಿಗೆ ತೂಕ ಕಾಪಾಡಿಕೊಳ್ಳಲು ಬೇಕಾಗುವಷ್ಟು ಹಾಗೂ ದಪ್ಪಗಿರುವವರು ಸಾಮಾನ್ಯ ತೂಕ ಪಡೆದುಕೊಳ್ಳುವಷ್ಟು ಮಾತ್ರ ಕ್ಯಾಲೊರಿಗಳ ಸೇವನೆಯಾಗಬೇಕು.

ಖನಿಜಾಂಶಗಳುಸಾಮಾನ್ಯವಾಗಿ ವೃದ್ಧರಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಪ್ರತಿದಿನ ೫೦೦ ಮಿ.ಗ್ರಾಂ ಕ್ಯಾಲ್ಸಿಯಂ ಹಾಗೂ ೨೦ ಮಿ.ಗ್ರಾಂ ನಷ್ಟು ಕಬ್ಬಿಣವನ್ನು ಸೇವಿಸಬೇಕು.

ಜೀವಸತ್ವಗಳು : ಜೀವಸತ್ವಗಳ ಕೊರತೆ ವೃದ್ಧಾಪ್ಯದಲ್ಲಿ ಸಾಮಾನ್ಯ. ಆದ್ದರಿಂದ ಆಹಾರದ ಜೊತೆ ಜೀವಸತ್ವಗಳ ಮಾತ್ರೆಗಳನ್ನು ಕೊಟ್ಟರೆ ಒಳ್ಳೆಯದು. ಪ್ರತಿದಿನ ೪೦೦ ಐ.ಯು. ಜೀವಸತ್ವ-ಡಿ ಕೊಟ್ಟರೆ ಕ್ಯಾಲ್ಸಿಯಂ ದೇಹಕ್ಕೆ ದಕ್ಕುವುದರಿಂದ ಆಸ್ಟಿಯೋಪೊರೋಸಿಸ್ ಕಾಯಿಲೆಯನ್ನು ತಪ್ಪಿಸಬಹುದು.

ನೀರು : ವೃದ್ಧರು ದಿನಕ್ಕೆ ಕನಿಷ್ಠ ೧.೫ ಲೀ. ನಷ್ಟು ಮೂತ್ರ ವಿಸರ್ಜನೆಯಾಗುವಷ್ಟು ನೀರನ್ನು ಸೇವಿಸಬೇಕು. ನೀರಿನ ಮೂಲಕವಲ್ಲದೆ ಮಜ್ಜಿಗೆ, ಹಣ್ಣಿನರಸ, ಗಂಜಿ ಮುಂತಾದವುಗಳ ಮೂಲಕವೂ ನೀರನ್ನು ಸೇವಿಸಬಹುದು.

ನಾರು : ವೃದ್ಧರಲ್ಲಿ ಮಲಬದ್ಧತೆ ಸಾಮಾನ್ಯವಾಗಿ ಕಂಡುಬರುವ ತೊಂದರೆ. ಇದನ್ನು ತಪ್ಪಿಸಲು ನಾರಿನಾಂಶ ಹೆಚ್ಚಾಗಿರುವಂತಹ ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಸೂಕ್ಷ್ಮಸ್ಥಿತಿಯನ್ನು ತಲುಪಿರುವ ಕರುಳು, ಬಲಿತ ತರಕಾರಿಯಲ್ಲಿರುವ ನಾರು ಹಾಗೂ ಹೊಟ್ಟನ್ನು ತಡೆದುಕೊಳ್ಳದೆ ಇರುವುದರಿಂದ ಎಳೆಯ ತರಕಾರಿಯನ್ನು ಸೇವಿಸುವುದು ಒಳ್ಳೆಯದು.

ಹಿರಿಯರ ಆಹಾರ ದೇಹಕ್ಕೆ ಅವಶ್ಯಕವಿರುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರಬೇಕು. ಅನಾರೋಗ್ಯದಿಂದ ಬಳಲುವ ವೃದ್ಧರು ಹಾಗೂ ಆಹಾರ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು. ಆರೋಗ್ಯಕರ ಆಹಾರವೇ ಹಿರಿಯರ ಅನೇಕ ಸಮಸ್ಯೆಗಳ ಪರಿಹಾರವಾಗಿದೆ.

ವೃದ್ಧರಲ್ಲಿ ಕಾಣಬರುವ ಅಪೌಷ್ಟಿಕತೆಗೆ ಸಂಬಂಧಿಸಿದ ಸಮಸ್ಯೆಗಳು

ಆರ್ಥಿಕ ಪರಿಸ್ಥಿತಿ, ಓಡಾಡಲು ಸಾಧ್ಯವಾಗದೇ ಇರುವುದು. ಏಕಾಂಗಿತನ, ಹಲ್ಲಿಲ್ಲದೆ ಇರುವುದು ಹಾಗೂ ದೈಹಿಕ ನಿಶ್ಯಕ್ತಿಯಿಂದಾಗಿ ಕಾಣಬರುವ ಆಹಾರದ ಕೊರತೆಯಿಂದ ಅಪೌಷ್ಟಿಕತೆಗೆ ಸಂಬಂಧಿಸಿದ ಸಮಸ್ಯೆಗಳು ವೃದ್ಧರಲ್ಲಿ ಉಂಟಾಗುತ್ತವೆ.

ಅತಿ ಆಹಾರದ ಸೇವನೆ, ಶಾರೀರಕ ವ್ಯಾಯಾಮದ ಕೊರತೆ ಹಾಗೂ ಆರೋಗ್ಯದ ಬಗ್ಗೆ ಉದಾಸೀನ ಭಾವದಿಂದಲೂ ಕೆಲವು ಹಿರಿಯರು ತೊಂದರೆಗಳನ್ನು ಅನುಭವಿಸುತ್ತಾರೆ. ವೃದ್ಧರಲ್ಲಿ ಸಾಮಾನ್ಯವಾಗಿ ಕಂಡು ಬರುವ ಆಹಾರ ಮತ್ತು ಅಪೌಷ್ಟಿಕತೆಗೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಕೆಳಗೆ ವಿವರಣೆ ಕೊಡಲಾಗಿದೆ.

ಸ್ಥೂಲಕಾಯ ಮತ್ತು ಹೆಚ್ಚಿನ ದೈಹಿಕ ತೂಕ

ದೈಹಿಕ ತೂಕ ಹೆಚ್ಚಾಗಿದ್ದರೆ ಅಥವಾ ವೃದ್ಧರು ಸ್ಥೂಲಕಾಯಿಗಳಾಗಿದ್ದರೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಂಭವ ಹೆಚ್ಚು. ವೃದ್ಧರಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆ ಆಗುವುದರಿಂದ ಇವರು ಸೇವಿಸುವ ಕ್ಯಾಲೊರಿಗಳು ಕೊಬ್ಬಿನ ರೂಪದಲ್ಲಿ ಶೇಖರಣೆ ಆಗಿ ತೂಕ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದ ಕ್ಯಾಲೊರಿಗಳನ್ನು ಒದಗಿಸುವ ಆಹಾರಗಳನ್ನು ಆದಷ್ಟು ಕಡಿಮೆ ಸೇವಿಸಲು ಇವರ ಮನವೊಲಿಸುವುದು ಅತ್ಯಾವಶ್ಯಕ.

ಮಧುಮೇಹ ರೋಗ

ದೇಹದಲ್ಲಿ ಇನ್ಸುಲಿನ್‌ನ ಉತ್ಪನ್ನ ಕಡಿಮೆಯಾದರೆ ರಕ್ತ ಹಾಗೂ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಸಾಮಾನ್ಯವಾಗಿ ೪೦ ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸರಿಯಾದ ಆಹಾರ ಸೇವನೆ,ತೂಕದ ನಿಯಂತ್ರಣ ಹಾಗೂ ವೈದ್ಯರ ಸಲಹೆಯ ಮೇರೆಗೆ ಔಷಧಿಗಳ ಸೇವನೆಯಿಂದ ವಯಸ್ಕರು ಹಾಗೂ ವೃದ್ಧರು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿ ಇಡಬಹುದು.

ಪಚನಾಂಗಗಳಲ್ಲಿ ಹುಣ್ಣು

ಇದು ಸಾಮಾನ್ಯವಾಗಿ ಜಠರ ಅಥವಾ ಸಣ್ಣಕರುಳಿನಲ್ಲಿ ಕಂಡುಬರುತ್ತದೆ. ಊಟದ ನಂತರ ಹಲವು ‌‌ಗಂಟೆಗಳ ಕಾಲ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯನ್ನು ಹೆಚ್ಚು ಸಮಯ  ಖಾಲಿ ಇಟ್ಟರೂ ಜಠರದಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್‌ ಆಮ್ಲ ಹುಣ್ಣಿಗೆ ತಾಕಿ ಉರಿ ಹೆಚ್ಚಾಗುತ್ತದೆ.

ವಿಶ್ರಾಂತಿ, ಪ್ರತ್ಯಾಮ್ಲಗಳ ಸೇವನೆ ಹಾಗೂ ಸಪ್ಪೆ ಆಹಾರವನ್ನು ಸ್ವಲ್ಪ ಸ್ವಲ್ಪವಾಗಿ ಆಗಾಗ ಸೇವಿಸುವುದರಿಂದ ಈ ತೊಂದರೆಯನ್ನು ನಿವಾರಿಸಬಹುದು.

ಪಿತ್ತಜಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು

ವಯಸ್ಸಿನ ಜೊತೆಗೆ ಈ ಕಾಯಿಲೆಗಳು ಹಿರಿಯರಲ್ಲಿ ಬರುವ ಸಂಭವ ಹೆಚ್ಚು. ಪಿತ್ತಕೋಶದಲ್ಲಿ ಕೊಲೆಸ್ಟ್ರಾಲ್‌ನಿಂದೊಡಗೂಡಿದ ಹರುಳುಗಳ ಶೇಖರಣೆಯಾದರೆ, ಶಸ್ತ್ರಚಿಕಿತ್ಸೆಯ ಮೂಲಕ ಪಿತ್ತಕೋಶವನ್ನು ತೆಗೆಯಬೇಕಾಗುವುದು. ಕೊಬ್ಬಿನ ಸೇವನೆ ನೋವನ್ನು ಹೆಚ್ಚಿಸುವುದರಿಂದ, ಕೊಬ್ಬನ್ನು ಆದಷ್ಟು ಮಿತವಾಗಿ ಸೇವಿಸಬೇಕು.

ಆಸ್ಟಿಯೋಪೊರೋಸಿಸ್ ಮತ್ತು ಆಸ್ಟಿಯೋಮಲೇಸಿಯ

ವಯಸ್ಸಾದಂತೆ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದ ಮೂಳೆಗಳು ಮುರಿಯುವ ಸಂಭವ ಅಧಿಕ. ಸು‌ಣ್ಣದಂಶ ಅಥವಾ ಕ್ಯಾಲ್ಸಿಯಂನ ಕೊರತೆಯುಂಟಾದಾಗ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಆಸ್ಟಿಯೋಪೊರೋಸಿಸ್ ಸಾಮಾನ್ಯವಾಗಿ ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಈಸ್ಟ್ರೋಜನ್ ಎಂಬ ಚೋದಕದ ಕೊರತೆಯ ಜೊತೆಗೆ ಕ್ಯಾಲ್ಸಿಯಂ ಸೇವನೆ ಹಾಗೂ ದೈಹಿಕ ಚಟುವಟಿಕೆಗಳು ಕಡಿಮೆಯಾದಾಗ ಉಂಟಾಗುತ್ತದೆ. ಯಕೃತ್ತು ಹಾಗೂ ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸೇವಿಸಿದ ಕ್ಯಾಲ್ಸಿಯಂ ದೇಹಕ್ಕೆ ದಕ್ಕುವುದಿಲ್ಲ. ಇವರಿಗೆ ಹಾಗೂ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಜೀವಸತ್ವಗಳ ಕೊರತೆಯಿರುವವರಿಗೆ ಆಸ್ಟಿಯೋ ಮಲೇಷಿಯ ಎಂಬ ಕಾಯಿಲೆ ಬರುತ್ತದೆ.

ವೃದ್ಧರಿಗೆ ಸಾಕಷ್ಟು ಚಟುವಟಿಕೆಯಿಂದಿರಲು ಪ್ರೋತ್ಸಾಹಿಸಬೇಕು. ಇವರು ದಿನಕ್ಕೆ ಒಂದರಿಂದ ಎರಡು ಲೋಟ ಹಾಲು ಸೇವಿಸಬೇಕು. ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಿದರೆ ಉತ್ತಮ. ಕ್ಯಾಲ್ಸಿಯಂನ ಜೊತೆಗೆ ಸಾಕಷ್ಟು ಸಸಾರಜನಕದ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ.

ಮಲಬದ್ಧತೆ

ನಾರಿನಾಂಶ ಕಡಿಮೆಯಿರುವ ಆಹಾರವನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗತ್ತದೆ. ಪ್ರತ್ಯಾಮ್ಲಗಳ ನಿರಂತರ ಸೇವನೆಯಿಂದಲೂ ಈ ಸ್ಥಿತಿ ತಲೆದೋರಬಹುದು. ಸಾಕಷ್ಟು ನಾರಿನಾಂಶ ಇರುವ ಆಹಾರ ಹಾಗೂ ಹೆಚ್ಚಾಗಿ ನೀರನ್ನು ಸೇವಿಸುವದರ ಮೂಲಕ ಮಲಬದ್ಧತೆಯನ್ನು ತಡೆಗಟ್ಟಬಹುದು.

ರಕ್ತಹೀನತೆ

ವೃದ್ಧರಲ್ಲಿ ಕಬ್ಬಿಣಾಂಶದ ಜೊತೆಗೆ ಸಸಾರಜನಕ, ಜೀವಸತ್ವ ಬಿ(೧೨), ಫೆಲೋಸಿನ್ ಹಾಗೂ ಜೀವಸತ್ವ ಸಿ ಗಳ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ. ಆದ್ದರಿಂದ ಈ ಆಹಾರಾಂಶಗಳನ್ನು ಸೇವಿಸಬೇಕು.

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು

ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಎಂಬ ಕೊಬ್ಬಿನ ಸಂಗ್ರಹವಾಗುವುದರಿಂದ ರಕ್ತಪರಿಚಲನೆಯಲ್ಲಿ ತೊಂದರೆಯುಂಟಾಗುತ್ತದೆ. ಈ ಕಾರಣ ರಕ್ತದ ಸರಬರಾಜು ದೇಹದ ಅಂಗಗಳಿಗೆ ಸರಿಯಾಗಿ ಆಗುವುದಿಲ್ಲ. ಕೊಲೆಸ್ಟ್ರಾಲ್ ಸಂಗ್ರಹ ಹೃದಯದ ರಕ್ತನಾಳಗಳಲ್ಲಿ ಆದರೆ ಹೃದಯಾಘಾತವಾಗುವ ಸಂಭವ ಹೆಚ್ಚು. ಸ್ಥೂಲಕಾಯ, ದೈಹಿಕ ಹಾಗೂ ಮಾನಸಿಕ ಒತ್ತಡ, ವ್ಯಾಯಾಮ ಮಾಡದೆ ಇರುವುದು, ಧೂಮಪಾನ, ಮದ್ಯಪಾನ ಮುಂತಾದವು ಹೃದಯದ ಕಾಯಿಲೆ ಬರಲು ಕೆಲವು ಕಾರಣಗಳು. ಇವರು ಸರಿಯಾದ ಸಮಯದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ, ತೂಕ ಕಡಿಮೆ ಮಾಡಿಕೊಂಡು, ಸಮತೂಕ ಆಹಾರವನ್ನು ಸೇವಿಸಬೇಕು. ಉಪ್ಪನ್ನು ಕಡಿಮೆ ಬಳಸುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡಬಹುದು. ವೃದ್ಧರಿಗೆ ಆಹಾರ ಕ್ರಮ ರಚನೆ ಮಡುವಾಗ ಅವರ ದೇಹಾರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ. ಇವರು ಸಕ್ಕರೆ ಕಾಯಿಲೆ, ರಕ್ತದೊತ್ತಡ ಅಥವಾ ಬೇರೆ ಯಾವುದೇ ಕಾಯಿಲೆಗಳಿಂದ ಬಳಲುತ್ತಿದ್ದರೆ ಆಹಾರದ ಪ್ರಮಾಣವನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬೇಕು. ಸಾಮಾನ್ಯ ದೇಹಾರೋಗ್ಯ ಹೊಂದಿರುವವರಿಗೆ ಅವರ ಚಟುವಟಿಕೆಗೆ ತಕ್ಕಂತೆ ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕು. ಪ್ರೊಟೀನು ಮತ್ತು ಕ್ಯಾಲ್ಸಿಯಂನ ಅವಶ್ಯಕತೆಗಳನ್ನು ಹಾಲು ಹಾಗೂ ರಾಗಿಯ ಸೇವನೆಯಿಂದ ಪೂರೈಸಬಹುದು. ವೃದ್ಧರು ಸಾಮಾನ್ಯವಾಗಿ  ಜೀವಸತ್ವಗಳ ಅಪೌಷ್ಟಿಕತೆಗೆ ಒಳಗಾಗುತ್ತಾರೆ. ಆದ್ದರಿಂದ ಇವರು ಆಹಾರದಲ್ಲಿ ಹಸಿರು ತರಕಾರಿ, ಹಣ್ಣುಹಂಪಲುಗಳನ್ನು ಉಪಯೋಗಿಸಬೇಕು. ಇದರಿಂದ ಮಲಬದ್ಧತೆಯನ್ನೂ ಸಹ ತಡೆಗಟ್ಟಬಹುದು.