ಶಿಶುವಿನ ಬೆಳವಣಿಗೆ ಅತಿ ಶೀಘ್ರವಾಗಿದ್ದು, ಅದರ ಪೋಷಕಾಂಶಗಳ ಅವಶ್ಯಕತೆ ನಾಲ್ಕು ತಿಂಗಳವರೆಗೆ ತಾಯಿ ಹಾಲಿನಿಂದಲೇ ಪೂರೈಸಲ್ಪಡುತ್ತದೆ. ನಾಲ್ಕು ತಿಂಗಳ ನಂತರ ಶಿಶುಗಳಿಗೆ ತಾಯಿ ಹಾಲಿನ ಜೊತೆಗೆ ಇತರ ಆಹಾರಗಳನ್ನು ಪ್ರಾರಂಭಿಸಬೇಕು. ಶಿಶುವಿಗೆ ಎಲ್ಲಾ ತರಹದ ಪೋಷಕಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಕೊಡಬೇಕು. ಯಾವುದೇ ಪೋಷಕಾಂಶದ ಕೊರತೆಯಾದರೂ ಇವರಿಗೆ ಅಪೌಷ್ಟಿಕತೆ ಬಹುಬೇಗ ಉಂಟಾಗುತ್ತದೆ. ಶಿಶುವಿಗೆ ಬೇಕಾಗುವ ಸಮತೋಲನ ಆಹಾರದ ವಿವರವನ್ನು ಕೋಷ್ಟಕ ೧೩ ರಲ್ಲಿ ಕೊಡಲಾಗಿದೆ.

ಕೋಷ್ಟಕ೧೩. ಶಿಶುವಿನಸಮತೋಲನಆಹಾರ (ಗ್ರಾಂಗಳಲ್ಲಿ)

ಆಹಾರ ಮಗು(೬-೧೨ ತಿಂಗಳು)
ಧಾನ್ಯಗಳು ೪೫
ಬೇಳೆಕಾಳುಗಳು ೧೫
ಹಾಲು(ಮಿ.ಲೀ) ೫೦೦
ಗೆಡ್ಡೆ ಗೆಣಸು ೫೦
ಸೊಪ್ಪು ೨೫
ತರಕಾರಿಗಳು ೨೫
ಹಣ್ಣು ೧೦೦

ಪೋಷಕಾಂಶಗಳು
ಕ್ಯಾಲೊರಿಗಳು

ಮಕ್ಕಳಿಗೆ ಕ್ಯಾಲೊರಿಗಳ ಅವಶ್ಯಕತೆ ಹೆಚ್ಚು. ಅವರ ದೈಹಿಕ ಚಟುವಟಿಕೆ ದೊಡ್ಡವರಿಗಿಂತ ಹೆಚ್ಚಿರುತ್ತದೆ. ಮಗುವಿನ ಕ್ಯಾಲೊರಿಗಳ ಅವಶ್ಯಕತೆಯನ್ನು ಶರ್ಕರ್ ಪಿಷ್ಟಗಳ ಮೂಲಕ ಒದಗಿಸಿದರೆ, ಸಸಾರಜನಕಗಳು ಬೆಳವಣಿಗೆಯ ಕೆಲಸವನ್ನು ನಿಭಾಯಿಸುತ್ತವೆ. ಕೊಬ್ಬಿನ ಮೂಲಕವೂ ಕ್ಯಾಲೊರಿಗಳನ್ನು ಒದಗಿಸಬಹುದು.

ನೀರು

ಮಗುವಿನ ದೇಹದಲ್ಲಿ ನೀರು ಅಧಿಕಾಂಶದಲ್ಲಿರುತ್ತದೆ. ಮಗುವಿನಲ್ಲಿ ನಿರ್ಜಲೀಕರಣವೂ ಅತಿಬೇಗ ಆಗುವ ಸಾಧ್ಯತಿಯಿದೆ. ಆದ್ದರಿಂದ ದ್ರವರೂಪದ ಆಹಾರವನ್ನು ಹೆಚ್ಚಾಗಿ ಕೊಡಬೇಕು.

ಖನಿಜಾಂಶಗಳು

ಮಗುವಿನ ಬೆಳವಣಿಗೆ ಸಮರ್ಪಕವಾಗಿ ಆಗಬೇಕಾದರೆ ಎಲ್ಲ ಕಹ್ನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರಕಬೇಕು. ಇವುಗಳಲ್ಲಿ ಕ್ಯಾಲ್ಸಿಯಂ ಶಿಶುವಿನ ಮೂಳೆ ಹಾಗೂ ಹಲ್ಲುಗಳ ಬೆಳವಣಿಗೆಗೆ ಹಾಗೂ ಕಬ್ಬಿಣಾಂಶ ಹಿಮೊಗ್ಲೋಬಿನ್ ಉತ್ಪತ್ತಿಗೆ ಮುಖ್ಯವಾಗಿ ದೊರಕಬೇಕು. ಆದ್ದರಿಂದ ಈ ಎರಡು ಖನಿಜಾಂಶಗಳನ್ನು ಮಗುವಿಗೆ ಆಹಾರದ ಮೂಲಕ ಒದಗಿಸಬೇಕು.

ಜೀವಸತ್ವಗಳು

ಕೊಬ್ಬಿನಲ್ಲಿ ಕರಗುವಂತಹ ಜೀವಸತ್ವ ಎ, ಡಿ ಮತ್ತು ಕೆ ಹಾಗೂ ನೀರಿನಲ್ಲಿ ಕರಗುವಂತಹ ಜೀವಸತ್ವಗಳಾದ ಸಿ ಹಾಗೂ ಬಿ ಗುಂಪಿನ ಜೀವಸತ್ವಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮಗುವಿಗೆ ಕೊಡಬೇಕು.

ಪೂರಕ ಆಹಾರಗಳು

ತಾಯಿ ಹಾಲಿನ ಜೊತೆಗೆ ಕೊಡುವ ಇತರ ಆಹಾರಕ್ಕೆ ಪೂರಕ ಆಹಾರವೆಂದು ಕರೆಯುತ್ತಾರೆ. ತಾಯಿಹಾಲು ಮಗುವಿಗೆ ೪ ತಿಂಗಳು ಮಾತ್ರ ಸಾಕಾಗುವಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಅನಂತರ ತಾಯಿಯ ಹಾಲಿನ ಜೊತೆಗೆ ಇತರ ಪುಷ್ಟಿಕರ ಆಹಾರವನ್ನು ಪ್ರಾರಂಭಿಸಬೇಕು.

ಪೂರಕ ಆಹಾರಗಳನ್ನು ಪ್ರಾರಂಭಿಸುವಾಗ ಗಮನಿಸಬೇಕಾದ ಅಂಶಗಳು

 • ಮಗುವಿನ ಬೆಳವಣಿಗೆಗೆ ಅನುಗುಣವಾಗಿ ೪-೫ ತಿಂಗಳಲ್ಲಿ ಅರೆಘನ ಆಹಾರವನ್ನು ಪ್ರಾರಂಭಿಸಬೇಕು.
 • ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು ತರಹದ ಆಹಾರವನ್ನು ಪ್ರಾರಂಭಿಸಬಾರದು.
 • ಮೊದಲು ಪ್ರಾರಂಭಿಸುವ ಪೂರಕ ಆಹಾರ ಕಬ್ಬಿಣಾಂಶವನ್ನು ಹೊಂದಿದ್ದು ಮೃದುವಾಗಿರಬೇಕು.
 • ಧಾನ್ಯವನ್ನು ಗಂಜಿಯ ರೂಪದಲ್ಲಿ ಬೇಯಿಸಿ ಶೋಧಿಸಿದ ಹಣ್ಣಿನ ಜೊತೆಗೆ ಪ್ರಾರಂಭಿಸಬೇಕು.
 • ಮೊಟ್ಟೆಯನ್ನು ಮೊದಲು ಬಿಳಿಭಾಗ, ಅನಂತರ ಹಳದಿಭಾಗ, ಅನಂತರ ಎರಡನ್ನೂ ಸೇರಿಸಿ ಕೊಡಬೇಕು.
 • ಚೆನ್ನಾಗಿ ಬೇಯಿಸಿದ ತರಕಾರಿ, ಮಾಂಸ ಮತ್ತು ಆಲೂಗಡ್ಡೆಯನ್ನು ಪ್ರಾರಂಭಿಸಿ, ಒಂದು ವರ್ಷ ತುಂಬಿದಾಗ ಮಗು ದಿನಕ್ಕೆ ಮೂರು ಸಲ ಊಟ ಮಾಡುವಂತಾಗಬೇಕು.
 • ಮಗು ಆಹಾರವನ್ನು ತಿರಸ್ಕರಿಸಿದರೆ ಬಲವಂತ ಮಾಡಬಾರದು.
 • ಪ್ರಾರಂಭದಲ್ಲಿ ಅರ್ಧದಿಂದ ಒಂದು ಚಮಚದಷ್ಟು ಆಹಾರವನ್ನು ಕೊಟ್ಟು ನಿಧಾನವಾಗಿ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು.
 • ಆಹಾರ ಅತಿ ಬಿಸಿ ಅಥವಾ ತಣ್ಣಗೆ ಇರದಂತೆ ಎಚ್ಚರವಹಿಸಬೇಕು.
 • ಜಾಸ್ತಿ ಖಾರ ಅಥವಾ ಸಾಂಬಾರ ಪದಾರ್ಥಗಳನ್ನು ಉಪಯೋಗಿಸಬಾರದು.
 • ಸಮಯಕ್ಕೆ ಸರಿಯಾಗಿ, ಒಂದೇ ಕೊಠಡಿಯಲ್ಲಿ ಇತರ ಕುಟುಂಬದ ಸದಸ್ಯರ ಜೊತೆಗೆ ಊಟ ಮಾಡಿಸುವುದರಿಂದ ಮಗುವಿಗೆ ಆಹಾರದ ಮೇಲೆ ಆಸಕ್ತಿ ಹೆಚ್ಚುತ್ತದೆ.
 • ಆರು ತಿಂಗಳ ನಂತರ ಕ್ಯಾರಟ್, ಸೌತೆಕಾಯಿ, ಮಾಂಸ ಅಥವಾ ಬ್ರೆಡ್ ತುಂಡನ್ನು ಮಗುವಿನ ಕೈಯಲ್ಲಿ ಕೊಟ್ಟರೆ, ಅದು ತಾನೇ ತಿನ್ನುವುದನ್ನು ಕಲಿಯುತ್ತದೆ.
 • ಮಗು ಯಾವುದೇ ಹೊಸ ಆಹಾರವನ್ನು ತಿರಸ್ಕರಿಸಿದರೆ, ಅದನ್ನು ಕೆಲವು ದಿನಗಳ ನಂತರ, ಹಸಿದುಕೊಂಡಾಗ ಪುನಃ ತಿನ್ನಲು ಕೊಟ್ಟರೆ, ಮಗು ಆಹಾರವನ್ನು ಇಷ್ಟಪಟ್ಟು ತಿನ್ನಬಹುದು.

ಈ ರೀತಿ ಸರಿಯಾದ ಸಮಯದಲ್ಲಿ ಸರಿಯಾದ ಪೌಷ್ಟಿಕ ಆಹಾರವನ್ನು ಕೊಟ್ಟು ಮಗುವನ್ನು ಅಪೌಷ್ಟಿಕತೆಯಿಂದ ರಕ್ಷಿಸಬಹುದು. ಪೂರಕ ಆಹಾರಗಳನ್ನು ಯಾವ ರೀತಿ ಯಾವ ಸಮಯದಲ್ಲಿ ಪ್ರಾರಂಭಿಸಬೇಕು ಎನ್ನುವ ಪಟ್ಟಿಯನ್ನು ಕೋಷ್ಟಕ ೧೪ರಲ್ಲಿ ಕೊಡಲಾಗಿದೆ.

ಬಿಸ್ಕತ್ತು, ಬೇಳೆ ಅಥವಾ ಹಾಲಿನಲ್ಲಿ ನೆನೆಸಿದ ಚಪಾತಿ, ಮೂಳೆಗಳ ಸೂಪು ಹಾಗೂ ತುಂಡರಿಸಿ ಬೇಯಿಸಿದ ಮಾಂಸವನ್ನು ಕೊಡಬಹುದು.

ಕೆಲವು ಪೂರಕ ಆಹಾರಗಳನ್ನು ತಯಾರಿಸುವ ವಿಧಾನ

ರಾಗಿಯ ಮಾಲ್ಟ್

ಬೇಕಾಗುವ ಪದಾರ್ಥಗಳು

ರಾಗಿ ೫೦೦ಗ್ರಾಂ
ಗೋಧಿ ೧೦೦ಗ್ರಾಂ
ಹೆಸರುಕಾಳು ೧೦೦ಗ್ರಾಂ

ತಯಾರಿಸುವ ವಿಧಾನ

೧) ರಾಗಿ, ಗೋಧಿ ಹಾಗೂ ಹೆಸರುಕಾಳುಗಳನ್ನು ಬೇರೆ ಬೇರೆಯಾಗಿ ೧೨-೧೬ ಗಂಟೆಗಳ ಕಾಲ ನೆನೆಸಿಡಬೇಕು.

೨) ನೀರನ್ನು ಬಸಿದು, ರಾಗಿಯನ್ನು ೪೮ ಗಂಟೆಗಳ ಕಾಲ ಹಾಗೂ ಗೋಧಿ ಮತ್ತು ಹೆಸರುಕಾಳುಗಳನ್ನು ೨೪ ಗಂಟೆಗಳ ಕಾಲ ಮೊಳಕೆಯೊಡೆಯಲು ಬಿಡಬೇಕು.

೩) ಅನಂತರ ಚೆನ್ನಾಗಿ ಒಣಗಿಸಿ ಮೊಳಕೆಗಳನ್ನು ತಿಕ್ಕಿ, ಕೇರಿ, ಹದವಾಗಿ ಹುರಿಯಬೇಕು.

೪) ಇದನ್ನು ಹಿಟ್ಟು ಮಾಡಿಸಿ, ಸಣ್ಣ ಕಣ್ಣಿನ ಜಾಲರಿಯ ಮೂಲಕ ಶೋಧಿಸಿ ಡಬ್ಬದಲ್ಲಿ ತುಂಬಡಬೇಕು.

ಈ ಹಿಟ್ಟನ್ನು ಗಂಜಿಯ ರೂಪದಲ್ಲಿ ಮಗುವಿಗೆ ಕೊಡಬಹುದು. ಇದರಲ್ಲಿ ಚೆನ್ನಾಗಿ ಬೇಯಿಸಿದ ತರಕಾರಿ ಅಥವಾ ಹಣ್ಣಿನ ರಸ ಮುಂತಾದವುಗಳನ್ನು ಹಾಕಿ ಮಗುವಿಗೆ ತಿನ್ನಿಸಬಹುದು.

ಗೋಧಿ ಪಾಯಸ

ಬೇಕಾಗುವ ಪದಾರ್ಥಗಳು

ಗೋಧಿ ೪೦ಗ್ರಾಂ
ಹೆಸರು ಕಾಳು ೨೫ಗ್ರಾಂ
ಕಡಲೆಬೀಜ ೧೦ಗ್ರಾಂ
ಬೆಲ್ಲ ೩೦ಗ್ರಾಂ

ತಯಾರಿಸುವ ವಿಧಾನ

 • ಎಲ್ಲಾ ಪದಾರ್ಥಗಳನ್ನು ಪ್ರತ್ಯೇಕವಾಗಿ ಮೊಳಕೆ ಬರಿಸಿ ಪುಡಿ ಮಾಡಿ ಬೆರೆಸಿ ಇಟ್ಟುಕೊಳ್ಳಬೇಕು.
 • ಪುಡಿಮಾಡಿ ಇಟ್ಟುಕೊಂಡಿರುವ ಈ ಮಿಶ್ರಣವನ್ನು ಮೂರು ದೊಡ್ಡ ಚಮಮದಷ್ಟು ತೆಗೆದುಕೊಂಡು ನೀರಿನಲ್ಲಿ ಬೆಲ್ಲ ಹಾಕಿ ಬೇಯಿಸಿ ಪಾಯಸ ಮಾಡಿ ಮಗುವಿಗೆ ಕೊಡಬಹುದು.

ಕಿಚಡಿ

ಬೇಕಾಗುವ ಪದಾರ್ಥಗಳು

ಅಕ್ಕಿ -೫೦ಗ್ರಾಂ
ಹೆಸರು ಬೇಳೆ -೩೦ಗ್ರಾಂ
ಸೊಪ್ಪು (ಮೆಂತ್ಯ/ಪಾಲಕ್) -೧೫ಗ್ರಾಂ
ಉಪ್ಪು -ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

 • ಅಕ್ಕಿಯನ್ನು ಹೆಸರು ಬೇಳೆಯ ಜೊತೆಗೆ ಬೇಯಿಸಿ
 • ಸೊಪ್ಪನ್ನು ಬೇಯಿಸಿ ಅಕ್ಕಿ ಮತ್ತು ಬೇಳೆಯ ಮಿಶ್ರಣದಲ್ಲಿ ಹಾಕಿ ಕಲಸಿ
 • ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಗುವಿಗೆ ತಿನ್ನಿಸಿ.

ಮಗುವಿನ ತೂಕ : ಬೆಳವಣಿಗೆಯ ಸೂಚಕ

ಮಗುವಿನ ತೂಕ ಬೆಳವಣಿಗೆಯನ್ನು ತಿಳಿಸುವ ಮುಖ್ಯ ಸೂಚಕ. ಮಗು ಸಮರ್ಪಕವಾಗಿ ಬೆಳೆಯುತ್ತಿದ್ದರೆ ಅದರ ತೂಕ ವಯಸ್ಸಿಗನುಗುಣವಾಗಿ ಕಾಲ ಕಾಲಕ್ಕೆ ಹೆಚ್ಚುತ್ತಿರಬೇಕು. ಮಗು ಹುಟ್ಟಿದಾಗ ಇದ್ದ ತೂಕ ಆರು ತಿಂಗಳಿಗೆ ಎರಡರಷ್ಟು ಮತ್ತು ಒಂದು ವರ್ಷಕ್ಕೆ ಮೂರರಷ್ಟು ಆಗುತ್ತದೆ. ಸಾಮಾನ್ಯವಾಗಿ ಒಂದು ವರ್ಷದ ಮಗುವಿನ ತೂಕ ಒಂಭತ್ತು ಕಿ.ಗ್ರಾಂ ಗಳಷ್ಟು. ಪ್ರತಿ ವರ್ಷಕ್ಕೆ ಎರಡರಿಂದ ಎರಡೂವರೆ ಕಿ.ಗ್ರಾಂ ಗಳಷ್ಟು ಐದು ವರ್ಷದವರೆಗೆ ಹೆಚ್ಚುತ್ತಿರುತ್ತದೆ. ತಾಯಿಯು ಮಗುವಿನ ತೂಕ ನೋಡಿಸುವುದರಿಂದ, ಮಗುವಿನ ತೂಕದಲ್ಲಿ ಹೆಚ್ಚು ಕಡಿಮೆಯಾಗಿರುವುದು ತಿಳಿಯುತ್ತದೆ. ಕಡಿಮೆಯಾದರೆ ಮಗುವಿನ ಬೆಳವಣಿಗೆ ಸಮರ್ಪಕವಾಗಿಲ್ಲ ಎಂದು ತಿಳಿಯಬಹುದು.

ಅಪೌಷ್ಟಿಕತೆ ಅಥವಾ ಇದಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳಿಂದ ಮಗು ನರಳುತ್ತಿದ್ದರೆ ತೂಕವು ಹೆಚ್ಚಾಗುವುದಿಲ್ಲ. ತೂಕದಲ್ಲಿ ಕೊರತೆ ಕಂಡು ಬಂದರೆ ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹರವನ್ನು ಕೊಟ್ಟು ಅಪೌಷ್ಟಿಕತೆಯನ್ನು ನಿವಾರಿಸಬಹುದು. ಮಗುವಿನ ತೂಕದ ಕೊರತೆಗೆ ಇತರ ಕಾರಣಗಳನ್ನು ಸಹ ಗುರುತಿಸಿ ಶೀಘ್ರವಾಗಿ ಆರೋಗ್ಯವನ್ನು ಸುಸ್ಥಿತಿಗೆ ತರಬಹುದು. ಅಂಗನವಾಡಿ, ಆರೋಗ್ಯಕೇಂದ್ರ, ಉಪ ಕೇಂದ್ರಗಳಲ್ಲಿ ತಾಯಂದಿರು ತಮ್ಮ ಮಕ್ಕಳ ತೂಕವನ್ನು ನೋಡಿಸಿಕೊಳ್ಳಲು ಸೌಲಭ್ಯವಿದೆ. ಪ್ರತಿ ಸಾರಿ ಮಗುವನ್ನು ತೂಕ ಮಾಡಿದಾಗ ಅದನ್ನು ತೂಕದ ನಕ್ಷೆಯಲ್ಲಿ ಗುರುತಿಸುತ್ತಾರೆ. ಇದರಿಂದ ಮಗುವಿನ ಬೆಳವಣಿಗೆಯ ಬಗ್ಗೆ ತಾಯಿಗೆ ಸೂಕ್ತ ಮಾಹಿತಿ ದೊರೆಯುತ್ತದೆ. ತಾಯಂದಿರು ತಿಂಗಳಿಗೊಮ್ಮೆ ತಮ್ಮ ಮಕ್ಕಳ ತೂಕ ನೋಡಿಸಬೇಕು.

ಸಾಕಷ್ಟು ಪೌಷ್ಟಿಕ ಆಹಾರ ಕೊಡುವುದರಿಂದ ಮಗುವಿನ ಬೆಳವಣಿಗೆ ಸಮರ್ಪಕವಾಗಿರುತ್ತದೆ. ಆಹಾರದ ಕೊರತೆಯಿಂದ ಅಪೌಷ್ಟಿಕತೆಯಾಗಿ ಮಗುವಿನ ತೂಕವು ಕಡಿಮೆಯಾಗುತ್ತದೆ. ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ.

ಕೋಷ್ಟಕ೧೪. ಶಿಶುಗಳಿಗೆಪೂರಕಆಹಾರ

ಆಹಾರ

ಪ್ರಾರಂಭಿಸಬಹುದಾದ ವಯಸ್ಸು

ಕೊಡಬೇಕಾದ ಪ್ರಮಾಣ

ಕೊಡುವ ವಿಧಾನ

೧. ಹಣ್ಣಿನ ರಸ, ಟೊಮೊಟೋ ಈರುಳ್ಳಿ, ಗಜ್ಜರಿ, ಸೊಪ್ಪುಗಳ ಸೂಪು, ಬೇಯಿಸಿದ ಹೆಸರುಬೇಳೆ, ಅನ್ನ ೫ ತಿಂಗಳು ೧ರಿಂದ ೨ಚಮಚ, ದಿನಕ್ಕೆ ೨ ಸಲ ಸಕ್ಕರೆ ಬೆರಸದೆ ಹಣ್ಣಿನ ರಸವನ್ನು ಕೊಡಬಹುದು. ಸೂಪಿನಲ್ಲಿ ಸ್ವಲ್ಪ ಉಪ್ಪು, ಮೆಣಸಿನಪುಡಿ ಹಾಗೂ ಬೆಣ್ಣೆ ಹಾಕುವುದರಿಂದ ರುಚಿ ಹೆಚ್ಚಿಸಬಹುದು. ಮಗು ಇಷ್ಟಪಟ್ಟರೆ ತಿನ್ನುವ ಪ್ರಮಾಣವನ್ನು ಹೆಚ್ಚಿಸಬಹುದು.
೨. ಬಾಳೆಹಣ್ಣು, ಸಪೋಟ, ಬೇಯಿಸಿದ ಸೇಬನ್ನು ಹಾಲು ಅಥವಾ ಕೆನೆಯಲ್ಲಿ ಹಾಕಿ ತಿನ್ನಿಸಬಹುದು. ಪಪಾಯ, ಮಾವು ಮುಂತಾದ ಹಣ್ಣುಗಳು ೫ ತಿಂಗಳು ೧ರಿಂದ ೨ಟೀ ಚಮಚ, ದಿನಕ್ಕೆ ೨ ಸಲ ಬಾಳೆಹಣ್ಣು ಮತ್ತು ಹುಳಿಯಾದ ಹಣ್ಣುಗಳಿಂದ ಮಗುವಿಗೆ ಕೆಮ್ಮು ಬರುವ ಸಾಧ್ಯತೆ ಇದೆ. ಆದ್ದರಿಂದ ಇವುಗಳನ್ನು ಬೇಸಿಗೆಯಲ್ಲಿ ಪ್ರಾರಂಭಿಸಿದರೆ ಒಳ್ಳೆಯದು.
೩. ರವೆ ಹಾಗೂ ತುಪ್ಪದಿಂದ ತಯಾರಿಸಿದ ಗಂಜಿ, ಗೋಧಿ ನುಚ್ಚು, ರಾಗಿ ಹಾಗೂ ಅಕ್ಕಿಯಿಂದ ತಯಾರಿಸಿದ ಮೆದುವಾದ ಖಾದ್ಯಗಳು. ಹಣ್ಣುಗಳನ್ನು ಕೊಡಲು ಪ್ರಾರಂಭಿಸಿದ ೧ ವಾರದ ಬಳಿಕ ೧ರಿಂದ ೨ಟೀ ಚಮಚ, ದಿನಕ್ಕೆ ೨ಸಲ ಕೊಡಬೇಕಾದ ಪ್ರಮಾಣವನ್ನು ಮೂರು, ನಾಲ್ಕು ದಿನಕ್ಕೊಮ್ಮೆ ಹೆಚ್ಚಿಸಬೇಕು.
೪. ಬೇಯಿಸಿದ ಮೊಟ್ಟೆ ಗಂಜಿಯನ್ನು ಕೊಡಲು ಪ್ರಾರಂಭಿಸಿದ ೧ ವಾರದ ನಂತರ ೧ ಟೀ ಚಮಚ ಮೊಟ್ಟೆಯನ್ನು ೫ ನಿಮಿಷ ಬೇಯಿಸಿ ತಕ್ಷಣ ತಣ್ಣೀರಿನಲ್ಲಿ ತಂಪುಗೊಳಿಸಿ. ಮೊದಲು ಮೊಟ್ಟೆಯ ಬಿಳಿಭಾಗವನ್ನು ಪ್ರರಂಭಿಸಿ. ಕೊಡುವ ಪ್ರಮಾಣವನ್ನು ಹೆಚ್ಚಿಸಿ ಅನಂತರ ಹಳದಿಭಾಗವನ್ನು ಪ್ರರಂಭಿಸಿ. ಮೊಟ್ಟೆಯನ್ನು ಪ್ರಾರಂಭಿಸಿದ ನಾಲ್ಕು ವಾರಗಳಲ್ಲಿ ಮಗು ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸಬೇಕು.
೫. ಚೆನ್ನಾಗಿ ಬೇಯಿಸಿದ ತರಕಾರಿಗಳು ಮೊಟ್ಟೆಯನ್ನು ಪ್ರಾರಂಭಿಸಿದ ೧ವಾರದ ನಂತರ ೧ರಿಂದ ೨ಟೀ ಚಮಚ ದಿನಕ್ಕೆ ಎರಡು ಸಲ ಆಲೂಗಡ್ಡೆ, ಸಿಹಿಗುಂಬಳ, ಸೊಪ್ಪು, ಗಜ್ಜರಿ ಮತ್ತು ಬಟಾಣಿ ಮೆದುವಾಗಿ ಬೇಯಿಸಿ ಕೊಡಬೇಕು.
೬. ಮೊಸರು ತರಕಾರಿಗಳನ್ನು ಪ್ರಾರಂಭಿಸಿದ ೧ವಾರದ ನಂತರ ೨ರಿಂದ ೪ಟೀ ಚಮಚ ಮೊಸರು ಸಿಹಿಯಾಗಿರಬೇಕು
೭. ಚೆನ್ನಾಗಿ ಬೇಯಿಸಿದ ಅನ್ನ ಬೇಳೆ ಅಥವಾ ಕಿಚಡಿ ಮೊಸರು ಪ್ರಾರಂಭಿಸಿದ ೧ವಾರದ ನಂತರ ೧ರಿಂದ ೨ಟೀ ಚಮಚ ತುಪ್ಪದಲ್ಲಿ ಒಗ್ಗರಣೆ, ಉಪ್ಪು, ಮೆಣಸಿನಪುಡಿ, ಬೆಣ್ಣೆ ಮುಂತಾದವುಗಳನ್ನು ಹಾಕಿ ರುಚಿಯಾಗಿ ತಯಾರಿಸಿ. ಮಗು ಬೆಳೆದಂತೆ ತಿನ್ನಿಸುವ ಪ್ರಮಾಣವನ್ನು ಹೆಚ್ಚಿಸಬೇಕು.