ನಾವು ಸೇವಿಸುವ ಆಹಾರ ಹೇಗಿರಬೇಕು ಎಂಬುದರ ಮೂಲಭೂತ ತಿಳಿವಳಿಕೆ ಪ್ರತಿಯೊಬ್ಬರಿಗೂ ಇರುವುದು ಅತ್ಯವಶ್ಯಕ. ಇಂದಿನ ಆಧುನಿಕ ಜಗತ್ತಿನ ಪರಿಸರದಲ್ಲಿ ನೈಸರ್ಗಿಕ ಸುರಕ್ಷತೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ನಾವು ಕೈಗೊಳ್ಳಬೇಕಾದ ಹಲವು ಎಚ್ಚರಗಳಲ್ಲಿ ಆಹಾರದ ಕ್ರಮಬದ್ಧತೆ ಹಾಗೂ ಆಹಾರದ ವೈವಿಧ್ಯತೆ ಎರಡೂ ಸಹ ಪ್ರಧಾನವಾದವು.

ಪ್ರಸ್ತುತ ಪುಸ್ತಕದಲ್ಲಿ ವೈಜ್ಞಾನಿಕ ಅಂಕಿ ಅಂಶ ಸಹಿತವಾಗಿ ಪೌಷ್ಟಿಕ ಆಹಾರದ ಪ್ರಸ್ತುತೆಯನ್ನು ಕುರಿತಂತೆ ಪೀಠಿಕೆ, ಆಹರದ ಗುಂಪುಗಳು, ಪೋಷಕಾಂಶಗಳ ಪರಿಚಯ ಮತ್ತು ಅವುಗಳ ಕಾರ್ಯನಿರ್ವಹಣೆ, ಸಾಮಾನ್ಯವಾಗಿ ಕಂಡುಬರುವ ನ್ಯೂನಪೋಷಣೆಗಳು, ಸಮತೋಲನ ಆಹಾರ, ಗರ್ಭಿಣಿ ಹಾಗೂ ಪ್ರೌಢರ ಆಹಾರ, ವೃದ್ಧರ ಆಹಾರ, ಸಕ್ಕರೆ ಕಾಯಿಲೆಯವರಿಗೆ ಆಹಾರ, ಹೃದಯಕ್ಕೆ ಸಂಬಂಧಿಸಿದ ರೋಗಗಳು, ಸೂಕ್ತ ಆಹಾರ ಸಂಸ್ಕರಣೆ ಹಾಗೂ ಅಡಿಗೆ ವಿಧಾನಗಳು, ಸಮತೋಲನ ಆಹಾರ ನಿಯೋಜನೆ ಹೀಗೆ ೧೩ ಅಧ್ಯಾಯಗಳಲ್ಲಿ ವಿಷಯ ಚರ್ಚಿಸಲಾಗಿದೆ.

ಈ ಕೃತಿಯನ್ನು ಈ ಹಿಂದೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗ್ರಾಮೀಣ ಗೃಹ ವಿಜ್ಞಾನ ವಿಭಾಗದಲ್ಲಿ ಪ್ರಾಯೋಜನಾ ಸಹಾಯಕರಾಗಿದ್ದ ಡಾ. ಚಮನ್ ಫರ್ಜಾನ ಇವರು  ರಚಿಸಿದ್ದು, ಡಾ. ಎಚ್.ಬಿ.ಶಿವಲೀಲ, ಮುಖ್ಯಸ್ಥರು ಹಾಗೂ ಸಂಯೋಜಕರು, ಬೇಕರಿ ತರಬೇತಿ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ತಾಂತ್ರಿಕವಾಗಿ ಪರಿಶೀಲಿಸಿದ್ದಾರೆ.

ನಮ್ಮ ಆಹಾರ ಕೃತಿಯ ಉಪಯುಕ್ತತೆ ಹಾಗೂ ಜನಪ್ರಿಯತೆಯಿಂದಾಗಿ ಅದರ ಮೊದಲ ಮುದ್ರಣದ ಪ್ರತಿಗಳು ಮುಗಿದಿದ್ದು ಈಗ ದ್ವಿತೀಯ ಮುದ್ರಣವನ್ನು ಕಾಣುತ್ತಿದೆ.

ಡಾ.ಉಷಾಕಿರಣ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ, ಬೆಂಗಳೂರು-೫೬೦೦೨೪