ಪೋಷಣಾ ಶಾಸ್ತ್ರದ ನಿಯಮಗಳಿಗನುಸಾರವಾಗಿ ಹಾಗೂ ಬೇರೆ ಬೇರೆ ಆರ್ಥಿಕ ಮಟ್ಟ ಹಾಗೂ ಸ್ಥಳೀಯ ಸಂಸ್ಕೃತಿಗಳಿಗೆ ಬದ್ಧವಾಗಿ ಮತ್ತು ಆರೋಗ್ಯ ಅನಾರೋಗ್ಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಹಾರವನ್ನು ನಿಯೋಜಿಸಬೇಕು. ಸುಸ್ಥಿತಿಯಲ್ಲಿರುವ ಹಾಗೂ ಅಸ್ವಸ್ಥ ವ್ಯಕ್ತಿಯ ಆರ್ಥಿಕ, ಸಾಮಾಜಿಕ, ಶಾರೀರಿಕ ಹಾಗೂ ಮಾನಸಿಕ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಆಹಾರದ ಆಯ್ಕೆ, ಸಂಗ್ರಹ, ತಯಾರಿಕೆ ಹಾಗೂ ಸೇವನಾಕ್ರಮವನ್ನು ಯೋಜಿಸುವ ಪ್ರಕ್ರಿಯೆಯನ್ನು ಇದು ಒಳಗೊಂಡಿದೆ.

ಆಹಾರ ಪದಾರ್ಥಗಳ ಬೆಲೆ, ಆಯಾ ಕಾಲಕ್ಕೆ ಸಿಗುವಂತಹ ಆಹಾರ ಪದಾರ್ಥಗಳು, ರಜಾ ದಿನಗಳು, ಹಬ್ಬ ಹರಿದಿನಗಳು ಹಾಗೂ ಕುಟುಂಬದವರ ರುಚಿಯನ್ನು ಗಮನದಲ್ಲಿಟ್ಟುಕೊಂಡು ಆಹಾರ ನಿಯೋಜನೆಯನ್ನು ಮಾಡಬೇಕು.

ಆರೋಗ್ಯ ಸ್ಥಿತಿ ಹಾಗೂ ವಯಸ್ಸಿಗೆ ಅನುಗುಣವಾಗಿ ಆಹಾರ ವಸ್ತುಗಳ ಪ್ರಮಾಣ ಬೇರೆಯಾದರೂ ಕುಟುಂಬದ ಸದಸ್ಯರಿಗೆ ಎಲ್ಲಾ ತರಹದ ಆಹಾರಗಳ ಅವಶ್ಯಕತೆ ಇದೆ. ಉದಾಹರಣೆಗೆ ಮಕ್ಕಳಿಗೆ ಹಾಲಿನ ಅವಶ್ಯಕತೆ ಹೆಚ್ಚು. ಸ್ಥೂಲಕಾಯಿಗಳಿಗೆ ಶರ್ಕರಪಿಷ್ಟ ಹಾಗೂ ಕೊಬ್ಬನ್ನು ಕಡಿಮೆ ಮಾಡಬೇಕಾಗುವುದು.

ಕುಟುಂಬದವರ ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಪೋಷಕಾಂಶಗಳ ಪಚನಕ್ರಿಯೆ ಹಾಗೂ ಆಹಾರಾಂಶಗಳ ಅವಶ್ಯಕತೆಗಳಲ್ಲಿ ಬದಲಾವಣೆ ಉಂಟಾಗುವುದರಿಂದ ರೋಗಿಗೆ ನೀಡುವ ಆಹಾರವನ್ನು ಸೂಕ್ತವಾಗಿ  ಬದಲಾಯಿಸಬೇಕು. ಸಕ್ಕರೆ ಕಾಯಿಲೆಯಲ್ಲಿ ಶರ್ಕರ ಪಿಷ್ಟಗಳ ಅಸಮರ್ಥ ಬಳಕೆ ಜ್ವರ ಬಂದಾಗ ಹೆಚ್ಚಿನ ಶರ್ಕರ ಪಿಷ್ಟಗಳ ಅವಶ್ಯಕತೆ ಹಾಗೂ ಮಾತ್ರ ರೋಗಗಳಲ್ಲಿ ಸೋಡಿಯಂ ಕ್ಲೋರೈಡ್ ನ್ನು ವಿಸರ್ಜಿಸುವಲ್ಲಿ ಮೂತ್ರಪಿಂಡಗಳ ಅಸಮರ್ಥತೆ, ಉಪ್ಪಿನ ಬಳಕೆಯಿಂದ ಏರುವ ರಕ್ತದೊತ್ತಡ ಇವು ಅನಾರೋಗ್ಯ ಸ್ಥಿತಿಯಲ್ಲಿ ಉಂಟಾಗುವ ಶಾರೀರಿಕ ಸ್ಥಿತಿಯ ಕೆಲವು ಉದಾಹರಣೆಗಳು. ಆದ್ದರಿಂದ ಕುಟುಂಬದವರ ದೇಹದ ಪರಿಸ್ಥಿತಿಗಳಿಗನುಸಾರವಾಗಿ ಆಹಾರವನ್ನು ತಯಾರಿಸಬೇಕು.

ಆಹಾರ ತಯಾರಿಕೆಗೆ ಮೊದಲು ಗಮನಿಸಬೇಕಾದ ಅಂಶಗಳು

ಆಹಾರದ ಐದು ಗುಂಪುಗಳಲ್ಲಿ ಸೇರಿದ ವಸ್ತುಗಳಲ್ಲಿ ಇರುವ ಪೋಷಕಾಂಶಗಳನ್ನು ನೆನಪಿನಲ್ಲಿಡಬೇಕು. ಈ ಐದು ಗುಂಪುಗಳಿಗೆ ಸೇರಿರುವಂತಹ ಆಹಾರವನ್ನು ದಿನನಿತ್ಯ ಬಳಸಬೇಕು. ಆಹಾರ ತಯಾರಿಕಾ ಕ್ರಮದಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ಅದರ ಗುಣಮಟ್ಟವನ್ನು ಹೆಚ್ಚಿಸಬಹುದು. ಉದಾ: ತರಕಾರಿಗಳನ್ನು ದೊಡ್ಡದಾಗಿ ಕತ್ತರಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹಾಳಾಗುವುದಿಲ್ಲ. ಕಾಳುಗಳನ್ನು ಮೊಳಕೆ ಬರಿಸಿ ಉಪಯೋಗಿಸುವುದು, ಧಾನ್ಯಗಳನ್ನು ಬೇಯಿಸಿದ ಮೇಲೆ ಉಳಿಯುವ ನೀರನ್ನು ಎಸೆಯದೆ ಬಳಸುವುದು ಹಾಗೂ ಆವಿಯಲ್ಲಿ  ಆಹಾರ ಪದಾರ್ಥಗಳನ್ನು ಬೇಯಿಸುವುದರಿಂದ ಅದರಲ್ಲಿರುವ ಗುಣಮಟ್ಟವನ್ನು ಸಂರಕ್ಷಿಸಬಹುದು. ಅಡಿಗೆಯಲ್ಲಿ ಹೆಚ್ಚು ಸಾಂಬಾರ ಪದಾರ್ಥಗಳು ಮತ್ತು ಸೋಡಾ ಬಳಸುವುದು ಸೂಕ್ತವಲ್ಲ.

ಆಹಾರ ಪದಾರ್ಥಗಳ ಬೆಲೆ ಹೆಚ್ಚಾದಲ್ಲಿ ವೆಚ್ಚದ ಅದೇ ಆಹಾರದ ಗುಂಪಿಗೆ ಸೇರಿದ ಬೇರೆ ಪದಾರ್ಥಗಳನ್ನು ಸೇವಿಸುವುದರಿಂದ ಜೀವಸತ್ವ, ಖನಿಜ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ದಿನನಿತ್ಯ ಹೆಚ್ಚಾಗಿ ಸೊಪ್ಪು ಮತ್ತು ತರಕಾರಿಗಳನ್ನು ಹಾಗೂ ಸ್ಥಳೀಯವಾಗಿ ದೊರಕುವ ಕಡಿಮೆ ಬೆಲೆಯ ಹಣ್ಣುಗಳನ್ನು ಸೇವಿಸುವುದರಿಂದ ಜೀವಸತ್ವ, ಖನಿಜ ಮತ್ತು ಲವಣಗಳ ಕೊರತೆಯನ್ನು ನಿವಾರಿಸಬಹುದು.

ಒಂದೇ ಆಹಾರ ಧಾನ್ಯವನ್ನು ಬಳಸುವುದಕ್ಕೆ ಬದಲಾಗಿ ೨-೩ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಬೆರೆಸಿ ಬಳಸುವುದರಿಂದ ದೊರಕುವ ಪೋಷಕಾಂಶಗಳು ಹೆಚ್ಚು.

ದಿನದ ಆಹಾರ ನಿಯೋಜನೆ

ಇಡೀ ದಿನದ ಊಟದ ತಯಾರಿಕೆಯನ್ನು ಮುಂಚೆಯೇ ಯೋಚಿಸಿ ನಿಗದಿಪಡಿಸಿಟ್ಟುಕೊಂಡರೆ, ಸಮತೋಲನ ಆಹಾರವನ್ನು ಬೆಳಗಿನ ಉಪಾಹಾರ ಮತ್ತು ಎರಡು ಹೊತ್ತಿನ ಊಟದಲ್ಲಿ ಸಮರ್ಪಕವಾಗಿ ಹಂಚಬಹುದು.

ಸರಳ ಮತ್ತು ವೈವಿಧ್ಯಮಯ ಅಡಿಗೆಯನ್ನು ತಯಾರಿಸಿದರೆ ಉತ್ತಮೆ. ಇದರಿಂದ ಪಚನಕ್ರಿಯೆ ಉತ್ತಮಗೊಳ್ಳುವುದು.

ಸೊಪ್ಪು ಹಾಗೂ ತರಕಾರಿಗಳನ್ನು ಒಂದೇ ಊಟದಲ್ಲಿ ಒಟ್ಟಿಗೆ ಬಳಸುವ ಬದಲು, ಯಾವುದೇ ಒಂದು ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೇರೆ ಬೇರೆ ಹೊತ್ತಿನಲ್ಲಿ ಬಳಸಬೇಕು.

ಸಿಹಿ ಪದಾರ್ಥಗಳು ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸ್ಥೂಲ ಕಾಯದವರು ಮತ್ತು ಮಧ್ಯ ವಯಸ್ಕರು ಕಡಿಮೆ ಉಪಯೋಗಿಸಬೇಕು.

ಆಹಾರದ ಬಣ್ಣ ಕಣ್ಣಿಗೆ ಹಿತವಾಗಿದ್ದು, ಒಳ್ಳೆಯ ಸ್ವಾದ ಹಾಗೂ ಹಿತವಾದ ವಾಸನೆಯನ್ನೊಳಗೊಂಡಿರಬೇಕು. ಆಹಾರವನ್ನು ಮೊದಲೇ ಯೋಜಿಸಿಕೊಂಡರೆ ಅವಶ್ಯಕತೆಗೆ ಹೊಂದಿಕೊಂಡು ಸಮತೂಕ ಹಾಗೂ ಆಕರ್ಷಕ ಆಹಾರವನ್ನು ತಯಾರಿಸಿ ಕುಟುಂಬದ ಸದಸ್ಯರ ಆರೋಗ್ಯವನ್ನು ಕಾಪಾಡಬಹುದು