ಆಹಾರದಲ್ಲಿ ಯಾವುದೇ ಪೋಷಕಾಂಶದ ಕೊರತೆ ಸತತವಾಗಿದ್ದರೆ ಅಪೌಷ್ಟಿಕತೆ ಉಂಟಾಗಿತ್ತದೆ. ಅಪೌಷ್ಟಿಕತೆಯನ್ನು ನ್ಯೂನ ಪೋಷಣೆಯಿಂದುಂಟಾಗುವ ಅನಾರೋಗ್ಯ ಸ್ಥಿತಿ ಎಂದು ಹೇಳಬಹುದು.

ಶಕ್ತಿ ಮತ್ತು ಸಸಾರಜನಕ ಕೊರತೆ

ಕ್ವಾಷಿಯಾರ್ಕರ್ (ಕಾರ್ದೊಗಲು) ಮತ್ತು ಮರಾಸ್ಮಸ್ (ಮೈಸವೆತ) ಎಂಬ ಕಾಯಿಲೆಗಳು ಶಕ್ತಿ ಮತ್ತು ಸಸಾರಜನಕದ ಕೊರತೆಯುಂಟಾದಾಗ ಬರುವ ಕಾಯಿಲೆಗಳು. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ತೂಕ ಕಡಿಮೆಯಾಗಿ ಬೆಳವಣಿಗೆ ಕುಂಠಿತವಾಗುವುದು ಈ ಕೊರತೆಯ ಮೊದಲನೆಯ ಲಕ್ಷಣ (ಚಿತ್ರ-೩)

ಶಕ್ತಿ ಮತ್ತು ಸಸಾರಜನಕದ ಕೊರತೆಗೆ ಕಾರಣಗಳು

ಮಗುವಿಗೆ ಬಹುಬೇಗ ಎದೆಹಾಲು ಬಿಡಿಸುವುದು, ನೀರು ಮಿಶ್ರಿತ ಹಾಲು ಕುಡಿಸುವುದು, ಸಕಾಲದಲ್ಲಿ ಘನ ಆಹಾರ ಪ್ರಾರಂಭಿಸದೇ ಇರುವುದು, ಕಡಿಮೆ ಆಹಾರ, ಸೋಂಕುರೋಗಗಳು ಮತ್ತು ಜಂತುಹುಳುಗಳಿಂದ ಮಕ್ಕಳಲ್ಲಿ ಈ ಅಪೌಷ್ಟಿಕತೆ ಉಂಟಾಗುತ್ತದೆ.

ರೋಗ ಲಕ್ಷಣಗಳು

  • ಚರ್ಮ ಸುಕ್ಕುಗಟ್ಟುವುದು, ಮೈಸವೆತದಿಂದ ತೂಕ ಕಡಿಮೆಯಾಗಿ ಮಗು ಅಸ್ಥಿಪಂಜರದಂತಾಗುವುದು, ಹಸಿವು ಮತ್ತು ಕೋಪದಿಂದ ಕಿರಿಕಿರಿ ಮಾಡುವ ಸ್ವಭಾವ.
  • ಕುಂಠಿತ ಬೆಳವಣಿಗೆ, ಕಾಲು ಮತ್ತು ಪಾದಗಳ ಮೇಲೆ ಬಾವು ಮತ್ತು ಮಾನಸಿಕ ದೌರ್ಬಲ್ಯ, ಒಣಗಿದ ಮತ್ತು ಒಡಕು ಚರ್ಮ, ಚರ್ಮದ ಭಾಗ ಸ್ವಲ್ಪ ಸ್ವಲ್ಪವಾಗಿ ಉದುರುವುದು, ಕೆಂಚು ಹಾಗೂ ಸುಲಭವಾಗಿ ಕಿತ್ತು ಬರುವ ಕೂದಲು, ಇವು ಈ ಕಾಯಿಲೆಗಳಲ್ಲಿ ಕಂಡು ಬರುತ್ತವೆ.
  • ಎ ಮತ್ತು ಬಿ ಅನ್ನಾಂಗಗಳ ಕೊರತೆ ಈ ಮಕ್ಕಳಲ್ಲಿ ಸಾಮಾನ್ಯವಾಗಿ ಇರುತ್ತದೆ.
  • ಅತಿ ಬೇಧಿ ಮತ್ತು ಉಸಿರಾಟದ ತೊಂದರೆಯಿಂದ ಈ ಮಕ್ಕಳು ನರಳುತ್ತಿರುತ್ತಾರೆ.

ಅಪೌಷ್ಟಿಕತೆಯ ನಿವಾರಣೆ

  • ನಾಲ್ಕು ತಿಂಗಳಲ್ಲಿ ಮಗುವಿಗೆ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ಪ್ರಾರಂಭಿಸಬೇಕು. ಸ್ಥಳೀಯವಾಗಿ ದೊರೆಯುವ ಧಾನ್ಯಗಳು ಮತ್ತು ಸಸಾರಜನಕಯುಕ್ತ ಆಹಾರ ಪದಾರ್ಥಗಳಾದ ಬೇಳೆಕಾಳುಗಳು, ಕಡಲೆಬೀಜ ಮುಂತಾದವುಗಳಿಂದ ತಯಾರಿಸಿದ ಆಹಾರ ಕೊಡುವುದರಿಂದ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು.
  • ಸೋಂಕು ರೋಗಗಳ ವಿರುದ್ಧ ಕೊಡುವ ಲಸಿಕೆಗಳನ್ನು ಸಕಾಲದಲ್ಲಿ ಮಗುವಿಗೆ ಹಾಕಿಸಬೇಕು.
  • ಬೇಧಿ, ಉಸಿರಾಟದ ತೊಂದರೆ ಅಥವಾ ಜೀವಸತ್ವಗಳ ಕೊರತೆ ಇದ್ದರೆ ಕೂಡಲೆ ಚಿಕಿತ್ಸೆ ಕೊಡಿಸಬೇಕು.

ಪೋಷಕರು ಮತ್ತು ಮಗುವನ್ನು ನೋಡಿಕೊಳ್ಳುವವರು ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳ ಉಪಯುಕ್ತತೆಯನ್ನು ತಿಳಿದು ಮಗುವಿಗೆ ಸರಿಯಾದ ಪೌಷ್ಟಿಕ ಅಹಾರವನ್ನು ಸಕಾಲದಲ್ಲಿ ಕೊಟ್ಟರೆ ಅಪೌಷ್ಟಿಕತೆ ಬರದಂತೆ ತಡೆಯಬಹುದು.

ಸಂಜೆ ಕುರುಡು ಜೀವಸತ್ವದ ಮಹತ್ವ

ಜೀವಸತ್ವಗಳು ಜೀವ ರಕ್ಷಣೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಬೇಕಾದಂತಹ ರಕ್ಷಕ ಆಹಾರಗಳು. ಇವುಗಳಲ್ಲಿ ಎ ಜೀವಸತ್ವವೂ ಒಂದು. ಮಕ್ಕಳಲ್ಲಿ, ಅದರಲ್ಲೂ ಒಂದರಿಂದ ಐದು ವರ್ಷದ ಮಕ್ಕಳಲ್ಲಿ ಬರುವ ಅಂಧತ್ವಕ್ಕೆ ಎ ಜೀವಸತ್ವ ಕೊರತೆ ಒಂದು ಮುಖ್ಯ ಕಾರಣ. ಈ ರೀತಿಯ ಅಂಧತ್ವವನ್ನು ಸುಲಭವಾಗಿ ತಡೆಗಟ್ಟಬಹುದು. ಶಾಲಾ ಪೂರ್ವ ವಯಸ್ಸಿನ ಮಕ್ಕಳ ಬೆಳವಣಿಗೆ ತ್ವರಿತವಾಗಿರುವುದರಿಂದ ಈ ಅವಧಿಯಲ್ಲಿ ಎ ಜೀವಸತ್ವದ ಅವಶ್ಯಕತೆ ಹೆಚ್ಚು. ವಯಸ್ಕರಿಗೆ ಹೋಲಿಸಿದರೆ ಶಾಲಾ ಪೂರ್ವ ವಯಸ್ಸಿನ ಮಕ್ಕಳಿಗೆ ಎ ಜೀವಸತ್ವ ಸಾಕಷ್ಟು ಪ್ರಮಾಣದಲ್ಲಿ ಸ್ವಲ್ಪ ಕಾಲ ದೊರೆಯದಿದ್ದರೂ ಸಹ ಎ ಜೀವಸತ್ವದ ಕೊರತೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುವ ಸಂಭವವಿರುತ್ತದೆ.

ಜೀವಸತ್ವದ ಅವಶ್ಯಕತೆ : ಕಣ್ಣು ಗುಡ್ಡೆಯ ಮೇಲಿರುವ ಪೊರೆಯು ಸದಾ ಸುಸ್ಥಿತಿಯಲ್ಲಿರಲು, ಮಂದ ಬೆಳಕಿನಲ್ಲಿ ಸರಿಯಾದ ದೃಷ್ಟಿಗೆ, ಚರ್ಮದ ರಕ್ಷಣೆಗೆ ಮತ್ತು ಅಂಗಾಂಶಗಳು ಸಮರ್ಪಕವಾಗಿರಲು ಎ ಜೀವಸತ್ವವು ಅವಶ್ಯಕ. ಎ ಜೀವಸತ್ವ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಸಂರಕ್ಷಣೆಗೆ ನೆರವಾಗುತ್ತದೆ.

ಜೀವಸತ್ವದ ಕೊರತೆಯ ಕಾರಣಗಳು :  ಎ ಜೀವಸತ್ವ ಹೆಚ್ಚು ದೊರೆಯುವ ಆಹಾರ ಪದಾರ್ಥಗಳನ್ನು ಆಹಾರದಲ್ಲಿ ಉಪಯೋಗಿಸದೆ ಇದ್ದರೆ, ಎ ಜೀವಸತ್ವದ ಕೊರತೆ ಕಂಡುಬರುತ್ತದೆ. ಬೇಧಿ, ದಡಾರ ಮತ್ತು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿರುವ ಮಕ್ಕಳಿಗೆ ಎ ಜೀವಸತ್ವದ ಕೊರತೆ ಬರಬಹುದು.

ಕೊರತೆಯ ಪರಿಣಾಮಗಳು : ಎ ಜೀವಸತ್ವದ ಕೊರತೆ ಕಣ್ಣಿನಲ್ಲಿ ಮೊದಲು ಕಂಡು ಬರುತ್ತದೆ. ಸಂಜೆ ಕುರುಡು, ಕಣ್ಣಿನ ಬಿಳಿಯ ಭಾಗ ಒಣಗಿ ಸುಕ್ಕುಗಟ್ಟುವುದು, ಆ ಭಾಗದಲ್ಲಿ ತ್ರಿಕೋನಾಕಾರದ ನೊರೆಯಂತಿರುವ ಬಿಳಿಯ ಚುಕ್ಕೆಗಳು (ಬೈಟಾಟ್‌ಸ್ಪಾಟ್) ಕಂಡು ಬರುತ್ತವೆ.

ಕೊರತೆಯ ಚಿಹ್ನೆಗಳು :  ಎ ಕೊರತೆ ತೀವ್ರವಾದಾಗ ಕಣ್ಣಿನ ಕಪ್ಪು ಭಾಗ (ಕಾರ್ನಿಯ) ಒಣಗಿದಂತಾಗುತ್ತದೆ. ಸ್ವಲ್ಪ ಕಾಲದಲ್ಲಿ ಕಣ್ಣು ಗುಡ್ಡೆಯ ಮೃದುವಾದಂತಾಗಿ ಅಂಧತ್ವ ಪ್ರಾರಂಭವಾಗುತ್ತದೆ.

ಜೀವಸತ್ವ ಕೊರತೆಯ ನಿವಾರಣೆ :  ಹಸಿರು ಸೊಪ್ಪುಗಳಲ್ಲಿ ಎ ಜೀವಸತ್ವ ಹೇರಳವಾಗಿ ದೊರೆಯುತ್ತದೆ. ಇದನ್ನು ಉಪಯೋಗಿಸುವುದರಿಂದ ಎ ಜೀವಸತ್ವದ ಕೊರತೆಯಿಂದುಂಟಾಗುವ ಅಂಧತ್ವವನ್ನು ತಡೆಗಟ್ಟಬಹುದು.

ನುಗ್ಗೆಸೊಪ್ಪು ಹೆಚ್ಚು ಪ್ರಮಾಣದಲ್ಲಿರುತ್ತದೆ. ಸ್ಥಳೀಯವಾಗಿ ದೊರೆಯುವ ಯಾವುದೇ ಹಸಿರು ಸೊಪ್ಪನ್ನು ಉಪಯೋಗಿಸಬೇಕು. ಇದನ್ನು ಮನೆ ಬಳಿ ಸ್ವಲ್ಪ ಸ್ಥಳವಿದ್ದಲ್ಲಿ ಸುಲಭವಾಗಿ ಬೆಳೆಸಿಕೊಳ್ಳಬಹುದು. ಹಳದಿ ತರಕಾರಿಗಳಾದ ಕ್ಯಾರೆಟ್, ಕುಂಬಳಕಾಯಿ ಮತ್ತು ಹಳದಿ ಹಣ್ಣುಗಳಾದ ಪರಂಗಿ ಹಣ್ಣು ಮತ್ತು ಮಾವಿನ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ ಎ  ಜೀವಸತ್ವವನ್ನೊದಗಿಸುತ್ತವೆ. ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ದಿನನಿತ್ಯದ ಆಹಾರದಲ್ಲಿ ತಗೆದುಕೊಳ್ಳುವುದರಿಂದ ಎ  ಜೀವಸತ್ವದ ಕೊರತೆಯನ್ನು ತಡೆಗಟ್ಟಬಹುದು. ಹಾಲು ಮತ್ತು ಹಾಲಿನ ಪದಾರ್ಥಗಳು, ಮೊಟ್ಟೆ, ಮೀನು ಯಕೃತ್  ಮುಂತಾದವುಗಳು ಸಹ ಎ ಜೀವಸತ್ವವಿರುವ ಆಹಾರ ಪದಾರ್ಥಗಳು. ಹೆರಿಗೆಯಾದ ತಕ್ಷಣ ಬರುವ ತಾಯಿಯ ಮೊದಲ ಹಾಲಿನಲ್ಲಿ (ಕೊಲೆಸ್ಟ್ರಮ್) ಎ ಜೀವಸತ್ವ ಸಮೃದ್ಧವಾಗಿರುತ್ತದೆ. ಈ ಹಾಲನ್ನು ಮಗುವಿಗೆ ಕುಡಿಸಬೇಕು.

ನಿವಾರಣಾ ಕ್ರಮಗಳು :  ಒಂದರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಎರಡು ಲಕ್ಷ ಇಂಟರ್‌ನ್ಯಾಷನಲ್ ಯೂನಿಟ್‌ಗಳಷ್ಟು ಇರುವ  ಎ ಜೀವಸತ್ವ ದ್ರವವನ್ನು ಬಾಯಿ ಮೂಲಕ ಕೊಡಲಾಗುತ್ತದೆ. ಇದನ್ನು ಪ್ರಥಮ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರ ಮುಖಾಂತರ ಕೊಡಲಾಗುತ್ತದೆ.

ಬಿ ಗುಂಪಿನ ಕೊರತೆಯಿಂದುಂಟಾಗುವ ನ್ಯೂನ ಪೋಷಣೆಗಳು

ಥಯಾಮಿನ್

ಥಯಾಮಿನ್ ಶರ್ಕರ ಪಿಷ್ಟಗಳ ಪಚನಕ್ರಿಯೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಥಯಾಮಿನ್‌ನ ಕೊರತೆಯಿಂದ ಬೆರಿಬೆರಿ ಎಂಬ ರೋಗ ಬರುತ್ತದೆ. ಬೆರಿಬೆರಿಯಲ್ಲಿ ಎರಡು ವಿಧಗಳಿವೆ. ಒಣ ಅಥವಾ ಡ್ರೈಬೆರಿಬೆರಿ ನರಗಳಿಗೆ ಸಂಬಂಧಿಸಿದ್ದು ಹೃದಯದ ಕಾಯಿಲೆಯುಂಟಾಗುತ್ತದೆ. ವೆಟ್ ಬೆರಿಬೆರಿಯುಂಟಾದರೆ ಸ್ನಾಯುಗಳ ಹಿಡಿತ ಮುಂತಾದ ತೊಂದರೆಗಳು ತಲೆದೋರುತ್ತವೆ.

ಧಾನ್ಯಗಳು ಮತ್ತು ತರಕಾರಿಗಳಲ್ಲಿ ಸಾಕಷ್ಟು ಥಯಾಮಿನ್ ಇರುತ್ತದೆ. ಆದರೆ ಆಹಾರದ ಸಂಸ್ಕರಣೆ ಹಾಗೂ ತಯಾರಿಕೆಯಲ್ಲಿ ಈ ಅವಶ್ಯಕ ಜೀವಸತ್ವ ನಷ್ಟವಾಗುತ್ತದೆ. ಆದ್ದರಿಂದ ಧಾನ್ಯಗಳನ್ನು ಹೊಟ್ಟು ತೆಗೆಯದೆ ಹಾಗೂ ಹೆಚ್ಚಾಗಿ ಪಾಲಿಷ್ ಮಾಡಿಸದೆ ಬಳಸುವುದು ಉತ್ತಮ.

ರೈಬೋಫ್ಲೇವಿನ್

ಭಾರತದಲ್ಲಿ ರೈಬೋಪ್ಲೇವಿನ್‌ನ ನ್ಯೂನಪೋಷಣೆ ಹೆಚ್ಚಾಗಿ ಕಂಡುಬರುತ್ತದೆ. ಖಿಲೋಸಿಸ್, ಆಂಗುಲಾರ್ ಸ್ಟಮಟೋಸಿಸ್‌ಗಳು ಈ ಜೀವಸತ್ವದ ನ್ಯೂನಪೋಷಣೆಯ ಮುಖ್ಯ ಲಕ್ಷಣಗಳು.

ಪ್ರಾಣಿಜನ್ಯ ಆಹಾರ, ಬೇಳೆಕಾಳುಗಳು, ಹಸಿರು ತರಕಾರಿಗಳು ಮತ್ತು ಕಡಲೆಬೀಜಗಳು ರೈಬೋಫ್ಲೇವಿನ್ ಅನ್ನು ಒದಗಿಸುತ್ತವೆ.

ನಯಾಸಿನ್

ನಯಾಸಿನ್‌ನ ನ್ಯೂನಪೋಷಣೆಯಿಂದ ಪೆಲಾಗ್ರ ಎಂಬ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯುಂಟಾಗುತ್ತದೆ. ಇದು ಸಾಮಾನ್ಯವಾಗಿ ಬಿಳಿಜೋಳವನ್ನು ಉಪಯೋಗಿಸುವ ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಪ್ರಾಣಿಜನ್ಯ ಆಹಾರಗಳು ನಯಾಸಿನ್ ಅನ್ನು ಹೆಚ್ಚಾಗಿ ಒದಗಿಸುತ್ತವೆ. ಧಾನ್ಯಗಳಲ್ಲೂ ಇದು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.

ಬಿ ಗುಂಪಿನ ಇತರ ಜೀವಸತ್ವಗಳು

ಬಿ ಗುಂಪಿನ ಇತರ ಜೀವಸತ್ವಗಳಾದ ಪಿರಿಡಾಕ್ಸಿನ್, ಪೋಲಿಕ್ ಆಮ್ಲ ಮತ್ತು ಜೀವಸತ್ವ ಬಿ(೧೨) ಗಳ ನ್ಯೂನಪೋಷಣೆಯಿಂದ ನೂರೈಟಿಸ್, ರಕ್ತಹೀನತೆ, ಗ್ಲಾಸಿಟಿಸ್ ಖಿಲೋಸಿಸ್ ಮತ್ತು ಸೆಬೋರಿಕ್ ಡರ‍್ಮಟಿಟಿಸ್‌ಗಳುಂಟಾಗುತ್ತವೆ.

ಬಿ ಗುಂಪಿನ ಜೀವಸತ್ವಗಳ ನ್ಯೂನಪೋಷಣೆಯನ್ನು ಆಹಾರದಲ್ಲಿ ಹೆಚ್ಚಾಗಿ ಪ್ರಾಣಿಜನ್ಯ ಆಹಾರಗಳಾದ ಹಾಲು, ಮೊಟ್ಟೆ ಮತ್ತು ಮಾಂಸದ ಉಪಯೋಗದಿಂದ ತಡೆಗಟ್ಟಬಹುದು. ಮೊಳೆತ ಬೇಳೆಕಾಳುಗಳು, ಹೊಟ್ಟನ್ನು ಹೆಚ್ಚಾಗಿ ತೆಗೆಯದ ಧಾನ್ಯಗಳು ಹಾಗೂ ಆದಷ್ಟು ಹಸಿ ತರಕಾರಿಗಳನ್ನು ಸೇವಿಸುವುದರಿಂದಲೂ ಬಿ ಗುಂಪಿನ ಜೀವಸತ್ವಗಳು ದೊರೆಯುತ್ತವೆ.

ರಕ್ತಹೀನತೆ (ಕಬ್ಬಿಣಾಂಶದ ಕೊರತೆ)

ಕಬ್ಬಿಣಾಂಶವು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದು ಮುಖ್ಯ ಅಂಶ. ನಾವು ಸೇವಿಸುವ ಆಹಾರವು ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿರಬೇಕು. ಮಾಂಸಾಹಾರದಲ್ಲಿ ಸಾಕಷ್ಟು ಕಬ್ಬಿಣಾಂಶ ದೊರೆಯುತ್ತದೆ. ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಇದೆ.

ರಕ್ತಹೀನತೆಗೆ ಕಾರಣಗಳು

ಸಾಮಾನ್ಯವಾಗಿ ಆಹಾರದಲ್ಲಿ ಕಬ್ಬಿಣಾಂಶದ ಕೊರತೆಯುಂಟಾದಾಗ ರಕ್ತ  ಹೀನತೆ ಸಂಭವಿಸುತ್ತದೆ. ಸಸ್ಯಾಹಾರಿಗಳ ಆಹಾರದಲ್ಲಿ ಕಬ್ಬಿಣಾಂಶ ಸಾಕಷ್ಟು ಪ್ರಮಾಣದಲ್ಲಿದ್ದರೂ ಸಸ್ಯಾಹಾರದಲ್ಲಿರುವ ಫೈಟೇಟ್ ಮತ್ತು ಟ್ಯಾನಿನ್ ಅಂಶ ಕಬ್ಬಿಣಾಂಶದ ಹೀರುವಿಕೆಯಲ್ಲಿ ತಡೆಯುಂಟುಮಾಡುತ್ತದೆ. ಆಸ್ಕಾರ್ಬಿಕ್ ಆಮ್ಲ, ಬಿ ಅನ್ನಾಂಗಗಳು, ಕ್ಯಾಲ್ಸಿಯಂ ಹಾಗೂ ಪ್ರೋಟಿನುಗಳ ಕೊರತೆಯುಂಟಾದಾಗಲೂ ಕಬ್ಬಿಣಾಂಶದ ಹೀರುವಿಕೆ ಸಾಕಷ್ಟು ಪ್ರಮಾಣದಲ್ಲಿ ಆಗುವುದಿಲ್ಲ. ಇದರಿಂದ ರಕ್ತಹೀನತೆಯುಂಟಾಗುವುದು. ಕಬ್ಬಿಣಾಂಶದ ಶೇಖರಣೆ ದೇಹದಲ್ಲಿ ಸಾಕಷ್ಟು ಇಲ್ಲದಿರುವಾಗ, ಅತಿಯಾದ ಬೆವರುವಿಕೆ, ಜಂತುಹುಳುಗಳ ಸೋಂಕು, ಜೀರ್ಣಾಂಗಗಳಲ್ಲಿ ಹುಣ್ಣು ಮತ್ತು ಗರ್ಭಾವಸ್ಥೆಯಲ್ಲಿ ನ್ಯೂನಪೋಷಣೆಯಿಂದ ರಕ್ತಹೀನತೆಯುಂಟಾಗುವುದು. ಮಕ್ಕಳಲ್ಲಿ ಕಡಿಮೆ ಅಂತರ ಹಾಗು ವರ್ಷಗಟ್ಟಲೆ ಹಾಲುಣಿಸುವುದರಿಂದಲೂ ರಕ್ತಹೀನತೆ ಬರುವುದು.

ಹೀಮೋಗ್ಲೋಬಿನೊಪತಿಸ್, ಬೋನ್ ಮ್ಯಾರೊ ಹೈಪೋಫ್ಲೇಸಿಯ, ಕೆಂಪು ರಕ್ತಕಣಗಳ ಸಂಖ್ಯೆ ಕ್ಷೀಣಿಸುವುದು, ಸೀಸ ಮುಂತಾದ ನಂಜುವಸ್ತುಗಳು ಹಾಗೂ ಮೂತ್ರಕೋಶಗಳ ತೊಂದರೆಯಿಂದಲೂ ರಕ್ತಹೀನತೆಯುಂಟಾಗುತ್ತದೆ.

ರಕ್ತಹೀನತೆಯಿಂದುಂಟಾಗುವ ಪರಿಣಾಮಗಳು

ರಕ್ತಹೀನತೆ ಇರುವವರಲ್ಲಿ ಬಹುಬೇಗ ಬಳಲಿಕೆ, ನಿಶ್ಯಕ್ತಿ ಮತ್ತು ಸುಸ್ತು ಕಂಡುಬರುತ್ತದೆ. ಉಸಿರಾಟ ಕಷ್ಟವಾಗುತ್ತದೆ ಹಾಗೂ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ರಕ್ತಹೀನತೆ ತೀವ್ರವಾದರೆ ಪಾದಗಳ ಮೇಲೆ ಬಾವು ಕಂಡು ಬರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಇದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗಬಹುದು. ಗರ್ಭಿಣಿಯರಲ್ಲಿ ರಕ್ತಹೀನತೆಯುಂಟಾದರೆ ಗರ್ಭಸ್ರಾವ ಮತ್ತು ಅಕಾಲ ಪ್ರಸವವಾಗುವ ಸಾಧ್ಯತೆ ಇದೆ. ಇವರು ಹೆರಿಗೆಯ ನಂತರ ಸುಲಭವಾಗಿ ಸೋಂಕು ರೋಗಗಳಿಗೆ ಬಲಿಯಾಗಬಹುದು. ರಕ್ತಹೀನತೆ ಇರುವ ಗರ್ಭಿಣಿಗೆ ಜನಿಸುವ ಮಗುವಿನ ತೂಕ ಕಡಿಮೆ. ಹುಟ್ಟುವ ಮಗುವಿಗೂ ರಕ್ತಹೀನತೆ ಉಂಟಾಗಬಹುದು.

ಲಕ್ಷಣಗಳು :  ಕಣ್ಣಿನ ರೆಪ್ಪೆಯ ಒಳಭಾಗ, ತುಟಿಗಳು, ನಾಲಿಗೆ, ಉಗುರು, ಅಂಗೈ ಮುಂತಾದವು ಬಿಳಿಚಿಕೊಂಡಿರುತ್ತವೆ. ಉಗುರುಗಳಲ್ಲಿ ಚಮಚದಂತೆ ತಗ್ಗು ಬೀಳುವುದು, ಕಬ್ಬಿಣಾಂಶದ ಕೊರತೆಯಿಂದಾಗುವ ರಕ್ತಹೀನತೆಯ ಲಕ್ಷಣ.

ರಕ್ತಹೀನತೆಯ ನಿವಾರಣೆ: ಹಸಿರು ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಸೊಪ್ಪನ್ನು ದಿನನಿತ್ಯದ ಆಹಾರದಲ್ಲಿ ಉಪಯೋಗಿಸುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು. ಧಾನ್ಯ, ಕಾಳುಗಳು, ಕಡಲೆಬೀಜ, ಎಳ್ಳು, ಬೆಲ್ಲ ಮುಂತಾದ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶ ಹೆಚ್ಚಾಗಿ ದೊರೆಯುತ್ತವೆ. ರಾಗಿಯಲ್ಲಿಯೂ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಈ ಮೇಲಿನ ಆಹಾರ ಪದಾರ್ಥಗಳನ್ನು ದಿನನಿತ್ಯದ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉಪಯೋಹಿಸುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು. ರಕ್ತಹೀನತೆ ತೀವ್ರವಾದರೆ ವೈದ್ಯರ ಸಲಹೆ ಪಡೆಯಬೇಕು.

ರಕ್ತಹೀನತೆ ನಿವಾರಣಾ ಕಾರ್ಯಕ್ರಮ:

ರಕ್ತಹೀನತೆ ನಿವಾರಣಾ ಕಾರ್ಯಕ್ರಮದನ್ವಯ ಆರೋಗ್ಯ ಕೇಂದ್ರಗಳ ಮುಖಾಂತರ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲದ ಅಂಶವಿರುವ ಮಾತ್ರೆಗಳನ್ನು ಶಾಲಾ ಪೂರ್ವ ವಯಸ್ಸಿನ ಮಕ್ಕಳಿಗೆ ೨೦ ಮಿ.ಗ್ರಾಂ ಕಬ್ಬಿಣಾಂಶ ಮತ್ತು ೦.೧ ಮಿ.ಗ್ರಾಂ ಫೋಲಿಕ್ ಆಮ್ಲದ ಅಂಶವಿರುವ ಮಾತ್ರೆ ಅಥವಾ ದ್ರಾವಣ, ಗರ್ಭಿಣಿ ಮತ್ತು ಬಾಣಂತಿಯರಿಗೆ ೬೦-೧೦೦ ಮಿ.ಗ್ರಾಂ ಕಬ್ಬಿಣಾಂಶ ಮತ್ತು ೦.೫ ಮಿ.ಗ್ರಾಂ ಫೋಲಿಕ್ ಆಮ್ಲದ ಅಂಶವಿರುವ ಮಾತ್ರೆಗಳನ್ನು ದಿನಕ್ಕೊಂದರಮ್ತೆ ನೂರು ದಿನಗಳು ಹಂಚುವ ವ್ಯವಸ್ಥೆಯಿದೆ. ಇದರ ಪ್ರಯೋಜನವನ್ನು ಸ್ಥಳೀಯ ಆರೋಗ್ಯ ಸಹಾಯಕರಿಂದ ಪಡೆಯಬಹುದು.

ಗಳಗಂಡ ರೋಗಅಯೋಡಿನ್ ಅಂಶದ ಕೊರತೆ: ನಮ್ಮ ದೇಹಕ್ಕೆ ಆಯೋಡಿನ್ ಅಂಶವು ಸ್ವಲ ಪ್ರಮಾಣದಲ್ಲಿಯೇ ಅಗತ್ಯವಿದ್ದರೂ ಸಹ ಅದು ನಾವು ಸೇವಿಸುವ ಆಹಾರದಲ್ಲಿ ದೊರಕುವುದು ಅವಶ್ಯಕ. ಅಗತ್ಯ ಪ್ರಮಾಣದಲ್ಲಿ ಅಯೋಡಿನ್ ದೊರೆಯದಿದ್ದರೆ ಗಳಗಂಡ ರೋಗ, ಬುದ್ಧಿಮಾಂದ್ಯತೆ, ಮೂಗತನ ಮುಂತಾದ ಅಯೋಡಿನ್ ಕೊರತೆಯ ನ್ಯೂನತೆಗಳುಂಟಾಗುತ್ತವೆ. ಗಳಗಂಡ ರೋಗವು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಹೆಣ್ಣು ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಅರಣ್ಯಪ್ರದೇಶಗಳಲ್ಲಿ, ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ಹಾಗೂ ಹೆಚ್ಚು ಮಳೆಯಿಂದ ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಲ್ಲಿ ಇದು ಕಂಡು ಬರುತ್ತದೆ. ಏಕೆಂದರೆ, ಈ ನೆಲದಲ್ಲಿ ಅಯೋಡಿನ್ ಅಂಶ ಕಡಿಮೆ ಇರುತ್ತದೆ. ಆದ್ದರಿಂದ ಇಲ್ಲಿ ಬೆಳೆದ ಆಹಾರ ಪದಾರ್ಥಗಳಲ್ಲಿ ಅಯೋಡಿನ್ ಕಡಿಮೆ ಇರುವುದರಿಂದ ಈ ಪ್ರದೇಶಗಳಲ್ಲಿ ಗಳಗಂಡ ರೋಗ ಹೆಚ್ಚು.

ಅಯೋಡಿನ್ ಅಂಶದ ಕೊರತೆಯಿಂದುಂಟಾಗುವ ಇತರ ರೋಗಗಳು: ಗರ್ಭಪಾತ, ಅಕಾಲ ಪ್ರಸವ, ಸತ್ತುಹುಟ್ಟುವ ಮಕ್ಕಳು, ಶಿಶುಗಳ ಮರಣ, ಹುಟ್ಟಿದ ಮಗುವಿನಲ್ಲಿ ಸ್ನಾಯುಗಳು ಮರಗಟ್ಟುವಿಕೆ, ಕಿವುಡುತನ, ಮೂಕತನ ಅಲ್ಲದೆ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಕುಂಠಿತವಾಗುವುದು ಮತ್ತು ಬುದ್ಧಿಮಾಂದ್ಯತೆ ಉಂಟಾಗುವುದು.

ಗಳಗಂಡ ರೋಗ ನಿವಾರಣೆ: ಆಹಾರದಲ್ಲಿ ಅಯೋಡಿನ್ ಯುಕ್ತ ಅಡಿಗೆ ಉಪ್ಪನ್ನು ಬಳಸಬೇಕು. ಸಮುದ್ರದಲ್ಲಿ ದೊರಕುವ ಮೀನು, ಸೀಗಡಿ ಮುಂತಾದವುಗಳಲ್ಲಿ ಅಯೋಡಿನ್ ಹೆಚ್ಚು ದೊರೆಯುತ್ತದೆ. ಆದ್ದರಿಂದ ಊಟದಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಬೇಕು.

 ರಾಷ್ಟ್ರೀಯ ಗಳಗಂಡ ರೋಗ ನಿವಾರಣಾ ಕಾರ್ಯಕ್ರಮ: ಈ ಕಾರ್ಯಕ್ರಮವು ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆ. ಅಯೋಡಿನ್ ಅಂಶದ ಕೊರತೆಯಿಂದ ಉಂಟಾಗುವ ನ್ಯೂನತೆಗಳು ನಮ್ಮ ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ ಎಂಬ ಸಮೀಕ್ಷೆ ನಡೆಸಲಾಗುತ್ತಿದೆ. ಈ ನ್ಯೂನತೆಗಳನ್ನು ತಡೆಗಟ್ಟುವ ಸಲುವಾಗಿ ಇಂತಹ ಪ್ರದೇಶಗಳಲ್ಲಿ ಅಯೋಡಿನ್ ಯುಕ್ತ ಅಡಿಗೆ ಉಪ್ಪನ್ನು ಉಪಯೋಗಿಸುವಂತೆ ಶಿಕ್ಷಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಅಯೋಡಿನ್ ಯುಕ್ತ ಉಪ್ಪನ್ನು ಆ ಪ್ರದೇಶಗಳಲ್ಲಿ ದೊರೆಯುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.