ಹೃದಯದ ಮುಖ್ಯ ಕಾರ್ಯ ರಕ್ತದ ಮೂಲಕ ದೇಹಕ್ಕೆ ಆಮ್ಲಜನಕವನ್ನು ಒದಗಿಸುವುದು. ರಕ್ತಧಮನಿಗಳ ಮೂಲಕ ಪೋಷಕಾಂಶಗಳು ಹೃದಯ ಹಾಗೂ ದೇಹದ ಇತರ ಭಾಗಗಳಿಗೆ ಒದಗುತ್ತವೆ. ಆದ್ದರಿಂದ ಹೃದಯದ ಸ್ನಾಯುಗಳು, ರಕ್ತಧಮನಿಗಳು ಹಾಗೂ ರಕ್ತನಾಳಗಳು ಸುಸ್ಥಿತಿಯಲ್ಲಿರಬೇಕಾದುದು ಅವಶ್ಯಕ. ವಯಸ್ಸಾದಂತೆ, ಅಲ್ಲದೆ ಕೆಲವು ಅಭ್ಯಾಸಗಳಿಂದ ಹೃದಯ ಹಾಗೂ ರಕ್ತಸಂಚಲನೆಯಲ್ಲಿ ತೊಂದರೆಯುಂಟಾಗಿ ಕೆಳಗೆ ತಿಳಸಿರುವಂತಹ ಹೃದಯ ರೋಗಗಳು ಉಂಟಾಗುತ್ತವೆ.

ರಕ್ತಧಮನಿಗಳಿಗೆ ಸಂಬಂಧಿಸಿದ ಕಾಯಿಲೆಗಳು

ರಕ್ತ ಸಂಚಲನೆಯಲ್ಲಿ ಅಡ್ಡಿ ಉಂಟಾಗುವುದರಿಂದ ಹೃದಯದ ಸ್ನಾಯುಗಳಿಗಿ ಪೋಷಣೆ ದೊರೆಯದೆ ಆಂಜಿನ ಮತ್ತು ಹೃದಯಾಘಾತ ಸಂಭವಿಸುತ್ತವೆ.

.ಆಂಜಿನ : ರಕ್ತಧಮನಿಗಳು ಕಿರಿದಾಗುವುದರಿಂದ ರಕ್ತಸಂಚಾರ ಕಡಿಮೆಯಾಗಿ ಹೃದಯಕ್ಕೆ ಆಮ್ಲಜನಕದ ಕೊರತೆಯುಂಟಾಗುತ್ತದೆ. ಇದರಿಂದ ಎದೆನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಸ್ವಲ್ಪ ಹೊತ್ತಿನ ನಂತರ ಕಡಿಮೆಯಾದರೂ ಮುಂದೆ ಬರುವ ಅಪಾಯವನ್ನು ಸಂಕೇತಿಸುತ್ತದೆ.

. ಹೃದಯಾಘಾತ : ಒಂದು ಅಥವಾ ಹೆಚ್ಚು ರಕ್ತಧಮನಿಗಳಲ್ಲಿ ರಕ್ತ ಸಂ‌ಚಲನೆಯಲ್ಲಿ ಇದ್ದಕ್ಕಿದ್ದಂತೆ ತಡೆಯುಂಟಾದಾಗ, ಹೃದಯದ  ಸ್ನಾಯುಗಳಗೆ ರಕ್ತದ ಪೂರೈಕೆಯಲ್ಲಿ ಅಡ್ಡಿಯಾಗಿ ಹೃದಯ ಬಡಿತ ನಿಲ್ಲುವ ಸಂಭವವಿದೆ.

ಏರು ರಕ್ತದೊತ್ತಡ

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ರಕ್ತದ ಪರಿಚಲನೆಯಲ್ಲಿ ಒತ್ತಡವಿರುತ್ತದೆ. ರಕ್ತದ  ಒತ್ತಡವಿಲ್ಲದೆ ಶರೀರದಲ್ಲಿ ರಕ್ತಪರಿಚಲನೆ ಆಗುವುದಿಲ್ಲ. ಸಾಮಾನ್ಯ ರಕ್ತದ ಒತ್ತಡ ೧೨೦:೮೦ಮಿ.ಮೀ. ಪಾದರಸ ಮತ್ತು ಗರಿಷ್ಠ ಮಿತಿ ೨೧೪೦:೯೦ ಇರಬೇಕು. ಯಾವಾಗ ರಕ್ತದ ಒತ್ತಡವು ಸಾಮಾನ್ಯಕ್ಕಿಂತ ಹೆಚ್ಚುತ್ತದೆಯೋ ಅಂತಹ ಸ್ಥಿತಿಗೆ ಅಧಿಕ ಒತ್ತಡ ಅಥವಾ ಏರೊತ್ತಡ ಎನ್ನಬಹುದು. ಏರೊತ್ತಡವನ್ನು ಔಷಧಿ ಹಾಗೂ ಮೂತ್ರಪಿಂಡಗಳಿಗೆ ಹಾನಿ ಸಂಭವಿಸಬಹುದು. ರಕ್ತದೊತ್ತಡದ ಪರಿಮಿತಿಯನ್ನು ಕೋಷ್ಟಕ ೧೬ ರಲ್ಲಿ ಕೊಡಲಾಗಿದೆ.

ಕೋಷ್ಟಕ೧೬: ವಯಸ್ಕರಲ್ಲಿಇರಬೇಕಾದರಕ್ತದೊತ್ತಡದಪರಿಮಿತಿ (ಮಿ.ಮೀ.ಪಾದರಸ)

ವರ್ಗ ಸಿಸ್ಟೋಲಿಕ್ ಡಯಾಸ್ಟೋಲಿಕ್
ಸಾಮಾನ್ಯ ೧೪೦ ೯೦
ಪ್ರಥಮ ಏರುರಕ್ತದೊತ್ತಡ ೧೪೦-೧೬೦ ೯೦-೧೦೫
ಪ್ರಥಮ ಏರುರಕ್ತದೊತ್ತಡ ೧೪೦-೧೬೦ ೧೦೫-೧೧೫
ಅಧಿಕ ಏರುರಕ್ತದೊತ್ತಡ ೧೬೦ ೧೧೫

ಆಧಾರ : ಜಾಯಿಂಟ್ ನ್ಯಾಷನಲ್ ಕಮಿಟಿ, ಯು,ಎಸ್.ಎ.ವರದಿ ೧೯೮೮

ಪಾರ್ಶ್ವವಾಯು

ಮೆದುಳಿನಲ್ಲಿರುವ ರಕ್ತನಾಳಗಳ ರಕ್ತದ ಹರಿಯುವಿಕೆಯಲ್ಲಿ ತಡೆಯುಂಟಾದಾಗ ಅಥವಾ ಮೆದುಳಿನಲ್ಲಿ ರಕ್ತಸ್ರಾವವಾದಾಗ ಪಾರ್ಶ್ವವಾಯು ಉಂಟಾಗುತ್ತದೆ. ಇದು ಸಾಮಾನ್ಯವಾಗಿ ರಕ್ತದ ಏರೊತ್ತಡವಿರುವ ರೋಗಿಗಳಲ್ಲಿ ಸಂಭವಿಸುತ್ತದೆ.

ಗ್ಯಾಂಗ್ರೀನ್

ಕಾಲುಗಳಿಗೆ ರಕ್ತವನ್ನೊದಗಿಸುವಂತಹ ರಕ್ತನಾಳಗಳಲ್ಲಿ ತಡೆಯುಂಟಾದಾಗ ಅಲ್ಲಿರುವ ಜೀವಕೋಶಗಳಿಗೆ ಹಾನಿಯುಂಟಾಗಿ ಈ ರೋಗ ಬರುತ್ತದೆ.

ಸಾಮಾನ್ಯವಾಗಿ ಅಥೆರೋಸ್ಕ್ಲೆರೋಸಿಸ್ ಎಂಬ ಸ್ಥಿತಿಯಿಂದಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಸಂಭವಿಸುತ್ತವೆ.

ಅಥೆರೋಸ್ಕ್ಲೆರೋಸಿಸ್

ರಕ್ತಧಮನಿಗಳ ಗಡಸಾಗುವಿಕೆಗೆ ಅಥೆರೋಸ್ಕ್ಲೆರೋಸಿಸ್ ಎನ್ನುತ್ತಾರೆ. ಇದಕ್ಕೆ ಕಾರಣ ರಕ್ತನಾಳಗಳಲ್ಲಿ ಕೊಲೆಸ್ಟರಾಲ್ ಎಂಬ ಜಿಡ್ಡಿನ ಜಾತಿಗೆ ಸೇರಿದ ರಾಸಾಯನಿಕ ಪದಾರ್ಥ ಸಂಗ್ರಹವಾಗಿ ರಕ್ತಚಲನೆಗೆ ಅಡ್ಡಿಯನ್ನುಂಟು ಮಾಡುವುದು. ಕೊಲೆಸ್ಟರಾಲ್ ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ಪದಾರ್ಥ. ಇದು ದೇಹದಲ್ಲೇ ಪ್ರತಿನಿತ್ಯವೂ ಒಂದು ಗ್ರಾಂನಷ್ಟು ಉತ್ಪತ್ತಿಯಾಗುತ್ತದಲ್ಲದೆ ನಾವು ಸೇವಿಸುವ ಆಹಾರದ ಮೂಲಕವೂ ೦.೩೫ ಗ್ರಾಂ ನಷ್ಟು ಸೇರುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ನ ಸಾಮಾನ್ಯ ಪ್ರಮಾಣ ಶೇ. ೧೫೦-೧೮೦ ಮಿ.ಗ್ರಾಂ. ಆದರೆ, ನಾವು ಸೇವಿಸುವ ಆಹಾರದಿಂದ ಅಗತ್ಯಕ್ಕಿಂತ ಅಧಿಕ ಕೊಲೆಸ್ಟರಾಲ್ ನಮ್ಮ ದೇಹವನ್ನು ಸೇರಿದಾಗ ರಕ್ತದಲ್ಲಿ ಅದರ ಪ್ರಮಾಣ ಜಾಸ್ತಿಯಾಗುತ್ತದೆ. ಇದು ರಕ್ತನಾಳಗಳ ಒಳಗೋಡೆಗಳಲ್ಲಿ ಸಂಗ್ರಹಗೊಂಡು ರಕ್ತಪರಿಚಲನೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ರಕ್ತದ ಒತ್ತಡ ಅಧಿಕಗೊಂಡು ಹೃದಯ ದುರ್ಬಲವಾಗಿ ತೀವ್ರ ಹೃದ್ರೋಗದ ತೊಂದರೆಗಳು, ಮೆದುಳಿನಲ್ಲಿ ರಕ್ತಸ್ರಾವ ಅಥವಾ ಪಾರ್ಶ್ವವಾಯುವಿನಂತಹ ಪರಿಣಾಮಗಳುಂಟಾಗುತ್ತವೆ.

ಹೃದಯದ ರೋಗಗಳಿಗೆ ಕಾರಣಗಳು

ರಕ್ತದಲ್ಲಿ ಹೆಚ್ಚುವರಿ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್‌ಗಳ ಪ್ರಮಾಣ, ರಕ್ತದ ಏರೊತ್ತಡ, ಸ್ಥೂಲಕಾಯ, ಸಕ್ಕರೆ ಕಾಯಿಲೆ, ಧೂಮಪಾನ, ಶಾರೀರಿಕ ವ್ಯಾಯಾಮದ ಕೊರತೆ ಹಾಗೂ ಉದ್ವೇಗಕ್ಕೆ ಒಳಗಾಗುವುದು, ಇವು ಹೃದ್ರೋಗಕ್ಕೆ ಮುಖ್ಯ ಕಾರಣಗಳು.

ಹೃದ್ರೋಗಗಳ ಲಕ್ಷಣಗಳು

ಹೃದಯಾಘಾತ

 • ಇದ್ದಕ್ಕಿದ್ದಂತೆ ಉಂಟಾಗುವ ಎದೆನೋವು
 • ಎದೆಯಲ್ಲಿ ಎರಡು-ಮೂರು ನಿಮಿಷಗಳವರೆಗೆ ಕಾಣಿಸಿಕೊಳ್ಳುವ ತೀವ್ರ ನೋವು ಹಾಗೂ ಅಹಿತಕರ ಒತ್ತಡ.
 • ಎದೆಯಲ್ಲಿ ಕಾಣಿಸಿಕೊಳ್ಳುವ ನೋವು ಕತ್ತು, ಬೆನ್ನು, ಎಡಭುಜ ಹಾಗೂ ಎಡಬಾಹುವಿಗೆ ಹರಡುವುದು.
 • ಅತಿಯಾಗಿ ಬೆವರುವುದು.
 • ವಾಕರಿಕೆ ಹಾಗೂ ವಾಂತಿ
 • ಕ್ಷಣಿಕವಾಗಿ ಎಚ್ಚರ ತಪ್ಪುವುದು
 • ಅತಿಯಾದ ಹೃದಯ ಸ್ಪಂದನ ಹಾಗೂ ಕ್ರಮರಹಿತ ಹೃದಯ ಬಡಿತ.

ಈ ಎಲ್ಲಾ ಲಕ್ಷಣಗಳು ಕ್ಷಣಿಕವಾಗಿದ್ದು, ವಿಶ್ರಾಂತಿಯ ನಂತರ ವಾಸಿಯಾಗುತ್ತವೆ. ಆದರೆ ಈ ಲಕ್ಷಣಗಳನ್ನು ಕಡೆಗಣಿಸದೆ, ಸೂಕ್ತಚಿಕಿತ್ಸೆ ಪಡೆಯಬೇಕು.

ರಕ್ತ ಏರೊತ್ತಡ

ರಕ್ತದ ಏರೊತ್ತಡದಲ್ಲಿ ಸಾಮಾನ್ಯವಾಗಿ ಯಾವ ಲಕ್ಷಣಗಳೂ ಕಂಡು ಬರುವುದಿಲ್ಲ. ಆದರೆ ಕೆಲವರಿಗೆ ಈ ಮುಂದಿನ ತೊಂದರೆಗಳು ಕಾಣಿಸಿಕೊಳ್ಳಬಹುದು:

 • ನಿರಂತರ ತಲೆನೋವು
 • ಕೈಕಾಲುಗಳು ಜಡಹಿಡಿಯುವುದು
 • ಎಚ್ಚರ ತಪ್ಪುವುದು
 • ಕ್ಷಣಕಾಲ ಮರೆವು
 • ತೊದಲುವುದು
 • ಇದ್ದಕ್ಕಿದ್ದಂತೆ ತೂಕಡಿಕೆ ಬಂದಂತಾಗುವುದು
 • ಕಣ್ಣುಗಳಲ್ಲಿ ಕತ್ತಲೆ ಬಂದಂತಾಗುವುದು
 • ನಡೆಯುವಾಗ ಕಾಲುಗಳಲ್ಲಿ ಅತಿಯಾದ ನೋವು

ಮೇಲಿನ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಸೂಕ್ತ.

ಆಹಾರೋಪಚಾರ ಕೊಬ್ಬಿನ ಸೇವನೆಯನ್ನು ಮಿತಗೊಳಿಸುವುದು

ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅಧಿಕ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿಯಂತ್ರಿಸಬಹುದು. ನಮ್ಮ ದೈನಂದಿನ ಆಹಾರ ಒದಗಿಸುವ ಒಟ್ಟು ಶಕ್ತಿಯ ಮೂರನೆಯ ಒಂದು ಭಾಗದಷ್ಟು ಮಾತ್ರ ಜಿಡ್ಡು/ಕೊಬ್ಬು ಪದಾರ್ಥಗಳಿಂದ ಬರುವಂತೆ ನೋಡಿಕೊಳ್ಳಬೇಕು. ವನಸ್ಪತಿ, ಬೆಣ್ಣೆ, ತುಪ್ಪ ಮುಂತಾದವು ದೇಹದಲ್ಲಿ ಕೊಲೆಸ್ಟ್ರರಾಲ್ ಅಂಶವನ್ನು ಹೆಚ್ಚಿಸುವುದರಿಂದ ಸಸ್ಯಮೂಲ ತೈಲಗಳಾದ ಕುಸುಬೆ, ಸೋಯಾ ಅವರೆ, ಕಡಲೆ, ಸೂರ್ಯಕಾಂತಿ ತೈಲಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಅಧಿಕ ನಾರಿನಾಂಶವುಳ್ಳ ಆಹಾರದ ಸೇವನೆ

ನಾರಿನಂಶ ಆಹಾರದಲ್ಲಿರುವ ಶರ್ಕರ ಪಿಷ್ಟ ಹಾಗೂ ಕೊಬ್ಬಿನ ಹೀರುವಿಕೆಯನ್ನು ವಿಶಂಬಿಸುವುದಲ್ಲದೆ ಕೊಲೆಸ್ಟ್ರಾಲ್ ಇಳಿಸಲು ಸಹಾಯ ಮಾಡುತ್ತದೆ. ಹಸಿ ತರಕಾರಿ, ಸೊಪ್ಪು, ಇಡಿಯಾದ ಬೇಳೆಕಾಳುಗಳು, ಜರಡಿಯಾಡದ ಹಿಟ್ಟುಗಳು, ಮೆಂತ್ಯಕಾಳು, ಸೋಯಾ ಅವರೆ ಇವುಗಳನ್ನು ಅಡಿಗೆಗೆ ಅಧಿಕವಾಗಿ ನಿತ್ಯ ಉಪಯೋಗಿಸುವುದು ಸೂಕ್ತ.

ಹಸಿ ತರಕಾರಿ ಹಾಗೂ ಹಣ್ಣುಗಳ ಸೇವನೆ

ಹಸಿ ತರಕಾರಿ ಹಾಗೂ ಹಣ್ಣುಗಳನ್ನು ಜೀವಸತ್ವ ಹಾಗೂ ಖನಿಜಾಂಶಭರಿತ ಪ್ರಕೃತಿದತ್ತ ಮಾತ್ರೆಗಳು ಎಂದು ಹೇಳಬಹುದು. ಇವುಗಳ ಸೇವನೆ ಹೃದ್ರೋಗ ಹಾಗೂ ಕ್ಯಾನ್ಸರ್ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನೊದಗಿಸುತ್ತದೆ. ಇವುಗಳಲ್ಲಿ ಶರ್ಕರಪಿಷ್ಟ ಕಡಿಮೆ ಇದ್ದು ನಾರಿನಾಂಶ ಹೆಚ್ಚಿರುತ್ತದೆ. ತರಕಾರಿಗಳನ್ನು ಹಸಿಯಾಗಿ ಸಲಾಡ್ ರೂಪದಲ್ಲಿ ಸೇವಿಸಿದರೆ ದೇಹಕ್ಕೆ ಒಳ್ಳೆಯದು.

ಹೃದಯಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಆಹಾರೋಪಚಾರ

ಮೀನು ಹೃದಯಕ್ಕೆ ಒಳ್ಳೆಯದು

ವಾರದಲ್ಲಿ ಎರಡು ಸಲ ೧೦೦-೨೦೦ ಗ್ರಾಂ ಮೀನಿನ ಸೇವನೆ ಒಳ್ಳೆಯದು. ಮೀನಿನಿಂದ ದೇಹಕ್ಕೆ ಎನ್ ೩ ಎಂಬ ಅಸಂತೃಪ್ತ ಮೇದೋಆಮ್ಲ ದೊರೆಯುತ್ತದೆ. ಇದು ಹೃದಯ, ಕೀಲುರೋಗ ( ಆರ್ಥರೈಟಿಸ್) ಹಾಗೂ ಕ್ಯಾನ್ಸರ್ ಕಾಯಿಲೆಗಳ ವಿರುದ್ಧ ರಕ್ಷಣೆ ಕೊಡುತ್ತದೆ.

ಅತಿ ಉಪ್ಪಿನ ಹೃದಯಕ್ಕೆ ಒಳ್ಳೆಯದಲ್ಲ

ಉಪ್ಪು ಅಥವಾ ಸೋಡಿಯಂ ಕ್ಲೋರೈಡ್ ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. ಸೋಡಿಯಂ ದೆಹದಲ್ಲಿರುವ ದ್ರವಗಳ ಸಮತೋಲನೆಯನ್ನು ಕಾಪಾಡುತ್ತದೆ. ಸೋಡಿಯಂ ನಾವು ತಿನ್ನುವ ಆಹಾರದಲ್ಲೇ ಲಭಿಸುವುದರಿಂದ, ಉಪ್ಪಿನ ಹೆಚ್ಚುವರಿ ಬಳಕೆಯ ಅವಶ್ಯಕತೆ ಇಲ್ಲ. ಹೆಚ್ಚುವರಿ ಸೋಡಿಯಂನ ಸೇವನೆಯಿಂದ ರಕ್ತದೊತ್ತಡ ಹೆಚ್ಚುತ್ತದೆ. ನಾವು ಆಹಾರಕ್ಕೆ ಹಾಕುವ ಉಪ್ಪು ಸ್ವಾದಕಾಗಿಯೇ ಹೊರತು ದೈಹಿಕ ಅವಶ್ಯಕತೆಗೆ ಅಲ್ಲ. ಆರೋಗ್ಯವಂತ ವಯಸ್ಕರು ದಿನಕ್ಕೆ ೩-೭ ಗ್ರಾಂ ಉಪ್ಪನ್ನು ಸೇವಿಸಬಹುದು.

ಉಪ್ಪಿನ ಸೇವನೆಯನ್ನು ಮಿತಗೊಳಿಸುವುದರಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. ಆದ್ದರಿಂದ ಉಪ್ಪು ಹೆಚ್ಚಾಗಿ ಇರುವಂತಹ ಆಹಾರಗಳನ್ನು ರಕ್ತದೊತ್ತಡ ಇರುವವರು ಹಾಗೂ ಹೃದ್ರೋಗಿಗಳು ವರ್ಜಿಸಬೇಕು.

ಸಾಕಷ್ಟು ವ್ಯಾಯಮಾಮವಿಲ್ಲದಿರುವುದು, ಸಿಗರೇಟ್ ಮತ್ತು ಮದ್ಯಪಾನದಂತಹ ದುಶ್ಚಟಗಳು, ಮಿತಿಮೀರಿದ ಅನುಚಿತ ಆಹಾರ ಸೇವನೆ ಮುಂತಾದ ಹಲವು ಹವ್ಯಾಸಗಳು ಅಧಿಕ ರಕ್ತದೊತ್ತಡದ ತೊಂದರೆಯನ್ನು ಹೆಚ್ಚಿಸುತ್ತವೆ. ಸರಳ ಜೀವನ ಹಾಗೂ ಸರಳವಾದ ಆಹಾರಾಭ್ಯಾಸಗಳು ಆರೋಗ್ಯ ಭಾಗ್ಯಕ್ಕೆ ನಾಂದಿ.

ವರ್ಜಿಸಬೇಕಾದ ಆಹಾರಗಳು

೧. ಅಡಿಗೆ ಉಪ್ಪು

೨. ಚೀಸ್, ಬೆಣ್ಣೆ ಹಾಗೂ ಬೇಕರಿ ತಿನಿಸುಗಳು

೩. ಅಡಿಗೆ ಉಪ್ಪು ಹಾಗೂ ಅಡಿಗೆ ಸೋಡಾ ಬೆರೆಸಿರುವಂತಹ ಆಹಾರ

೪. ಉಪ್ಪು ಬೆರೆಸಿ ಒಣಗಿಸಿದ ಮೀನು, ಯಕೃತ್ತು

೫. ಉಪ್ಪಿನಕಾಯಿ ಹಾಗೂ ಚಟ್ನಿ