ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನ ಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸಧ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವ ಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದ್ರಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿವೆ.

ಭಾರತ ಪ್ರಧಾನವಾಗಿ ಒಂದು ಗ್ರಾಮ ಪ್ರಪಂಚ. ನಮ್ಮ ಇಂದಿನ ಎಲ್ಲ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಬೇರುಗಳು ಗ್ರಾಮ ಪ್ರತಿಭೆ, ಗ್ರಾಮ ಚಿಂತನೆ ಮತ್ತು ಗ್ರಾಮ ತಂತ್ರಜ್ಞಾನಗಳ ಮೂಲಬೇರುಗಳಿಂದ ಚಿಗುರೊಡೆದಿವೆ ಎಂಬುದನ್ನು ಮರೆಯುವಂತಿಲ್ಲ. ದುರಾಸೆಗಳಿಗೆ ಒಳಗಾಗದೆ ಸೀಮಿತ ಚೌಕಟ್ಟಿನಲ್ಲಿ ತಮ್ಮ ದೈನಂದಿನ ಬದುಕು ಹಸನಾಗಬೇಕು, ಅನ್ಯ ವಿದ್ವೇಷ ದೂರವಾಗಬೇಕು, ಶ್ರಮ, ಸಹನೆ, ಸಹಕಾರ, ಪ್ರೀತಿ, ವಿಶ್ವಾಸಗಳ ತಳಹದಿಯ ಆಲೋಚನೆಯ ಮೇಲೆ ಗ್ರಾಮ ಸಮಾಜ ಬೆಳೆಯಬೇಕು ಎಂಬ ಮೂಲ ಆಶಯಗಳು ಈ ಗ್ರಾಮ ಸಮಾಜದ ತಳಹದಿಯಾಗಿವೆ. ಆದ್ದರಿಂದಲೇ ದ್ವೇಷಕ್ಕಿಂತ ಪ್ರೇಮ, ಆಲಸ್ಯಕ್ಕಿಂತ ಅವಿರತ ಕರ್ಮಯೋಗ, ಸಂಕುಚಿತ ದೃಷ್ಟಿಕೋನಕ್ಕಿಂತ ಲೋಕ ಮಂಗಳಕರವಾದ ವಿಶಾಲವಾದ ಜೀವನ ದೃಷ್ಟಿ ಅವರದಾಗಿತ್ತು. ಈ ಕಾರಣದಿಂದಾಗಿಯೇ ಗ್ರಾಮದ ಒಬ್ಬ ವ್ಯಕ್ತಿ ಕುಟುಂಬದ ವ್ಯಕ್ತಿಯಂತೆಯೇ ಸಮಗ್ರ ಗ್ರಾಮದ ಕರುಳ ಕುಡಿಯಾಗುತ್ತಿದ್ದು, ಅವನ ನೋವು, ನಲಿವುಗಳಲ್ಲಿ ಇಡೀ ಗ್ರಾಮ ಸಮಾಜ ಭಾಗಿಯಾಗಿ ಸ್ಪಂದಿಸುತ್ತಿತ್ತು. ತಮ್ಮ ಪರಿಸರವನ್ನು ಆರೋಗ್ಯಪೂರ್ಣವಾಗಿ, ಚೊಕ್ಕಟವಾಗಿ ಅನ್ಯರಿಗೆ ಅಸಹ್ಯ ಉಂಟಾಗದ ರೀತಿಯಲ್ಲಿ ಮತ್ತು ನೋಡಿದವರಿಗೆ ಮನಸ್ಸು ಅರಳುವ ವಿನ್ಯಾಸದಲ್ಲಿ ಗ್ರಾಮ ಸಮಾಜವನ್ನು ಮತ್ತು ಪರಿಸರವನ್ನು ಕಟ್ಟುತ್ತಿದ್ದರು. ಕೌಟುಂಬಿಕ ಪರಿಸರವೆಂತೋ ಇಡೀ ಗ್ರಾಮದ ಮತ್ತು ಸಮಾಜದ ಪರಿಸರವೆಲ್ಲ ನ್ಯಾಯ ನಿಷ್ಟುರತೆ,ಆಳವಾದ ಪ್ರೀತಿಪೂರ್ಣ ಚಿಂತನೆ ಮತ್ತು ಸಹಕಾರ ಪ್ರಜ್ಞೆಗಳ ಆಧಾರದ ಮೇಲೆ ಬೆಳೆದು ನಳನಳಿಸುತ್ತಿತ್ತು. ಕುಟುಂಬದ ಮತ್ತು ಸಮಾಜದ ಸರ್ವರೂ ಪ್ರೀತಿ, ವಾತ್ಸಲ್ಯ ಮತ್ತು ಸಹಕಾರಗಳಿಂದ ಬಾಳುವುದಕ್ಕೆ ಅನುಕೂಲವಾದ ಸರಳ ನೈತಿಕ ಮತ್ತು ಜೀವನ ನಿಯಮಗಳು ರೂಪುಗೊಂಡಿದ್ದವು. ದೊಡ್ಡವರಿರಲಿ, ಚಿಕ್ಕವರಿರಲಿ ಈ ನ್ಯಾಯ ನಿಷ್ಠುರದ ಮತ್ತು ಸತ್ಯಪ್ರಿಯತೆ ಹಾಗೂ ದೈವ ಪ್ರೀತಿಯ ಚೌಕಟ್ಟಿನಲ್ಲಿ ಅವರೆಲ್ಲರೂ ಅನ್ಯ ಸ್ವಾತಂತ್ರ್ಯವನ್ನು ಧಿಕ್ಕರಿಸದೆ ತಮ್ಮ ಸ್ವಾತಂತ್ರ್ಯವನ್ನು ಮೆರೆಯಬಹುದಾಗಿತ್ತು ಮತ್ತು ಸಂತೋಷವನ್ನು ಪಡೆಯಬಹುದಾಗಿತ್ತು. ಬರಬರುತ್ತ ಮನುಷ್ಯನಲ್ಲಿ ಸ್ವಾರ್ಥ ಮನೋಧರ್ಮಗಳು ಬೆಳೆದು ವಿಕೃತ ರೂಪಗಳನ್ನು ಪಡೆಯುತ್ತಾ ಹೋದಂತೆಲ್ಲ ಸಹಕಾರದ ಸೌಧ ಕುಸಿದು ನೀತಿಯ ನೆಲೆಗಟ್ಟು ನೆಲಸಮವಾಗಿ ಪ್ರೀತಿ, ವಿಶ್ವಾಸ, ಪರಾನುಕಂಪಗಳ ಸಮಾಧಿಯಾಗ ತೊಡಗಿದಾಗ ಜೀವನದ ಸುಖ, ಸಂತೋಷಗಳು ಆವಿಯಾಗಿ ಪ್ರಾಕೃತಿಕ ಮಾತ್ರವಲ್ಲದೆ ಸ್ವಯಂಕೃತ ಅಪರಾಧದ ಸಂಕಷ್ಟಗಳ ಮುಳ್ಳುಗಾಡಿನಲ್ಲಿ ಗ್ರಾಮೀಣ ಜನ ಸಿಕ್ಕಿಕೊಂಡರು. ಅವರು ಕಲಿಯುವ ವಿದ್ಯೆ, ಮಾಡುವ ಕ್ರಿಯೆ, ನಡೆಸುವ ಚಿಂತನೆಗಳ ವಿನ್ಯಾಸ ಮತ್ತು ವಲಯಗಳು ಮಾರ್ಪಾಟಾಗುತ್ತಾ ಬಂದವು. ಮನುಷ್ಯ ಜೀವನದ ಕಲ್ಯಾಣಕ್ಕೆ ಕಾರಕವಾಗಬಹುದಾಗಿದ್ದ ಆಧುನಿಕ ನಾಗರಿಕತೆ ಮತ್ತು ಅದರ ಸೌಲಭ್ಯಗಳು ಮನಸ್ಸಿನ ಮತ್ತು ಜೀವನದ ಭೂಮಿಗಳಲ್ಲಿ ಬಿರುಕುಂಟಾಗುವಂತೆ ಮಾಡತೊಡಗಿದವು. ಸಮಾಜ ಸುಧಾರಕರು ಏನೆಲ್ಲ ತತ್ವ ಸಿದ್ದಾಂತಗಳನ್ನು ಹೇಳಿದರೂ, ಕುಟುಂಬ, ಸಮಾಜ, ಸಮೃದ್ಧ ವಾತ್ಸಲ್ಯದ ತಳಹದಿಯ ಜೀವನ ದೃಷ್ಟಿಗಳು ಪಂಗರಪಟ್ಟಾಗಿ ಹೋದವು. ಸ್ವತಂತ್ರ ಕರ್ಮಜೀವಿಗಳಾಗಿದ್ದ ಹಾಗೂ ಧರ್ಮ ದೃಷ್ಟಿಯುಳ್ಳವರಾಗಿದ್ದ ಗ್ರಾಮೀಣ ಜನ ಪ್ರತಿಯೊಂದಕ್ಕೂ ಸರ್ಕಾರದ, ಸಂಸ್ಥೆಗಳ ಮತ್ತು ಅನ್ಯರ ಸಹಾಯವನ್ನು ಬೇಡುತ್ತಾ ಪರಾವಲಂಬಿಗಳಾಗ ತೊಡಗಿದರು. ಈ ಪರಿಣಾಮವಾಗಿ ಶ್ರಮಜೀವನ ಮತ್ತು ಸಂಘ ಜೀವನಗಳು ಮಣ್ಣು ಮುಕ್ಕತೊಡಗಿದವು. ಇದು ನಾಗರಿಕತೆ ಮತ್ತು ಬೌದ್ದಿಕತೆ ತಂದುಕೊಟ್ಟ ವಿಷಮ ಫಲ ಎಂಬುದು ಕ್ರೂರ ವ್ಯಂಗ್ಯವೇ ಆಗಿದೆ.

ಮೇಲಿನ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಾಚೀನ ಗ್ರಾಮ ಜೀವನಕ್ಕೂ ವರ್ತಮಾನದ ಗ್ರಾಮ ಜೀವನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು; ಅವುಗಳ ಸ್ವರೂಪ ಮತ್ತು ಉದ್ದೇಶಗಳನ್ನು, ದೃಷ್ಟಿ, ದ್ಯೇಯಗಳನ್ನು ತೌಲನಿಕವಾಗಿ ಅಭ್ಯಾಸ ಮಾಡುವ ಮೂಲಕ ನಾವು ಕಳೆದುಕೊಂಡಿರುವ ಜೀವನ ಶಾಂತಿ ಯಾವುದು ಎಂಬುದು ಮನದಟ್ಟಾಗುತ್ತದೆ. ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಈ ಎರಡು ಕಾಲಮಾನಗಳಲ್ಲಿ ಗ್ರಾಮ ಜೀವನದಲ್ಲಿ ಆಗುತ್ತಿರುವ ಏರುಪೇರುಗಳನ್ನು ಮತ್ತು ಅದರ ಕಾರಣಗಳನ್ನು ತೌಲನಿಕವಾಗಿ ಈ ಕೃತಿಯಲ್ಲಿ ಶೋಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಅವರ ಸೂಕ್ಷ್ಮವೂ ಆಳವೂ ಆದ ಸಂಶೋಧನಾ ಪ್ರಜ್ಞೆ, ನಿಷ್ಪಕ್ಷಪಾತ ಕ್ಷೇತ್ರಕಾರ್ಯಕ್ಕೆ ಅಗತ್ಯವಾದ ಮಾನಸಿಕ ಸಮತೋಲನ ದೃಷ್ಟಿ. ಗ್ರಾಮ ಜೀವನದ ಪ್ರೀತಿಯಂತೆಯೇ ಅದರ ಪ್ರಕೃತ ಪರಿಸ್ಥಿತಿಗಳ ವ್ಯೆರುಧ್ಯವನ್ನು ಕುರಿತಾದ ಚಿಂತನ ಕ್ರಮದಲ್ಲಿನ ಅನಾಕ್ರೋಶಭರಿತವಾದ – ಆದರೆ ಕೆಲಮಟ್ಟಿಗೆ ಭಾವುಕವೂ ಆದ- ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆಗಳು ಇಲ್ಲಿ ಸಹಜತೆಯ ನೆಲೆಯಲ್ಲಿ ಮೂಡಿಬಂದಿವೆ. ಸ್ವತಃ ಗ್ರಾಮ ಪರಿಸರದಲ್ಲಿ ಮತ್ತು ಶತ ಶತಮಾನಗಳಿಂದ ಶೋಷಣೆ, ಆಕ್ರಮಣಗಳ ದಾರುಣ ಪರಿಸರದಲ್ಲಿ ಬೆಳೆದು ಅದರ ನೋವನ್ನು ಉಂಡು ಪರಿತಪಿಸಿದ ಈ ಲೇಖಕ ಅವುಗಳ ವಾಸ್ತವಾಂಶಗಳನ್ನು ದಟ್ಟವಾಗಿ ಮತ್ತು ಪ್ರಾಮಾಣಿಕವಾಗಿ ಇಲ್ಲಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯ ಸರಳವಾದ ಭಾಷೆ, ಅಕ್ಲಿಷ್ಟವಾದ ನಿರೂಪಣೆ, ಹಾಳತವಾದ ಮಾಹಿತಿ ಜೋಡಣೆ ಮತ್ತು ಹರಿತವಾದ ನಿಷ್ಠುರ ವಿಶ್ಲೇಷಣೆಗಳು ಓದುಗರ ಮನ ಸೆಳೆಯುತ್ತವೆ. ಗ್ರಾಮ ಜೀವನದ ಸ್ವಸ್ವರೂಪ ದರ್ಶನ ಮಾಡಿಸುವ ಇಂತಹ ಕೃತಿಯನ್ನು ಪರಿಶ್ರಮ ಮತ್ತು ಪ್ರಾಮಾಣಿಕತೆಗಳಿಂದ ರಚಿಸಿರುವ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಹಾರ್ದಿಕ ಅಭಿನಂದನೆಗಳು ಸಲ್ಲುತ್ತವೆ. ಅವರ ಮುಂದಿನ ಬರಹಗಳು ಇನ್ನಷ್ಟ್ಟು, ದಟ್ಟವಾದ ಆಧಾರಗಳನ್ನು ಮತ್ತು ಗಾಢವಾದ ವ್ಯೆಶಿಷ್ಟ್ಯ ಪೂರ್ಣ ಚಿಂತನೆಗಳನ್ನು ಒಳಗೊಂಡು ಪರಿಪುಷ್ಟಗೊಳ್ಳಲಿ ಎಂದು ಆಶಿಸುತ್ತೇನೆ.

ಡಾ. ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಯವರು