ಮಾನವನ ಇತಿಹಾಸದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಹೀಗೆ ವಿದ್ಯುದ್ವೇಗದಲ್ಲಿ ಸಾಮಾಜಿಕ ಬದಲಾವಣೆಗಳಾಗುತ್ತಿರುವಷ್ಟು ಹಿಂದೆ ಯಾವ ಯುಗದಲ್ಲಿಯೂ ಇರಲಿಲ್ಲವೆನ್ನಬಹುದು. ಈ ಬದಲಾವಣೆಗಳ ನೈಜತೆಯನ್ನು ಅರಿತು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕಾತರತೆಯನ್ನು ವ್ಯಕ್ತಪಡಿಸದಿರುವುದು, ಏನೂ ಅರಿಯದಂತಿರುವುದು ಹಾಗೂ ಭವಿಷ್ಯದಲ್ಲಿ ಏನು ಸಂಭವಿಸುತ್ತದೆ ಎಂಬ ಬಗ್ಗೆ ಅರಿಯದಿರುವುದು ನಮ್ಮ ತಟಸ್ಥ ಮನೋಭಾವವನ್ನು ಸೂಚಿಸುತ್ತದೆ. ಏಕೆಂದರೆ ಇಂದಂತು ಕಂಪ್ಯೂಟರ್ ಯುಗ. ಕಂಪ್ಯೂಟರ್ ಗಳು ಮಾನವನ ವ್ಯವಹಾರಗಳನ್ನು ನಿರ್ವಹಿಸುತ್ತಿವೆ ಯಲ್ಲದೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಹಾಯಕವಾಗುತ್ತಿವೆ. ಇಂಥ ದಿನಗಳಲ್ಲಿ ಭಾರತದ ಬೆನ್ನೆಲುಬೆಂದು ಕರೆಸಿಕೊಂಡಿರುವ ನಮ್ಮ ಗ್ರಾಮಗಳು ಇಂದಿನ ಜಾಗತೀಕರಣ, ನಗರೀಕರಣ, ಖಾಸಗೀಕರಣ, ಕಂಪ್ಯೂಟರೀಕರಣ ಇತ್ಯಾದಿ ಕಾರಣಗಳ ಧಾಳಿಯಲ್ಲಿ ಯಾವ ದಿಕ್ಕಿನಲ್ಲಿ. ಮುನ್ನಡೆಯುತ್ತಿವೆ ಹಾಗೂ ಹಿನ್ನೆಡೆಯುತ್ತಿವೆ, ನಮ್ಮ ಗ್ರಾಮಗಳು ಇಂದು ಯಾವ ಅತಂತ್ರ ಸ್ಥಿತಿಯಲ್ಲಿವೇ ಎಂಬ ಸಮಸ್ಯೆ ಅಧ್ಯಯನ ಇಂದು ಹೆಚ್ಚಾಗಿ ನಡೆಯಬೇಕಾಗಿದೆ.

ನಮ್ಮ ರಾಷ್ಟ್ರದಲ್ಲಿ ಸುಮಾರು ೬೬,೯೦೦೦ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ದೇಶದ ಜನಸಂಖ್ಯೆಯ ಶೇಕಡ ೭೫ ರಷ್ಟು ಜನ ವಾಸವಾಗಿದ್ದಾರೆ. ಇವರೆಲ್ಲರ ಜೀವನದ ಪ್ರಮುಖ ಆಧಾರವೆಂದರೆ ಕೃಷಿ. ಪಾಶ್ಚಿಮಾತ್ಯರ ದೃಷ್ಟಿಯಿಂದ ಈ ಗ್ರಾಮಗಳಲ್ಲಿ ವಾಸವಾಗಿರುವ ಜನತೆಯ ಬದುಕನ್ನು ನಿರೀಕ್ಷಿಸಿದಾಗ ಭಾರತವು ಕಡು ದಾರಿದ್ರ್ಯದಿಂದಲೂ ತಮ್ಮನ್ನೆ ತಾವು ಪೋಷಿಸಿಕೊಳ್ಳಲಾಗದ ಜನತೆಯಿಂದಲೂ ತುಂಬಿದ ದೇಶವೆಂದು ಗೋಚರವಾಗುವುದು ಹೀಗೆ ಬಡತನ, ಕೊರತೆಯ ಬಾಳು ಗ್ರಾಮೀಣ ಜನರನ್ನು ಆವರಿಸಿದ್ದರೂ ಈ ಜನತೆ ದೇಶದ ಬೆನ್ನೆಲುಬಾಗಿಯೇ ಉಳಿದಿದ್ದಾರೆ ಎಂಬುವುದೇ ಸೋಜಿಗದ ಸಂಗತಿ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಆನಂತರ ಭಾರತೀಯರ, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಉದ್ದಾರಕ್ಕೆಂದು ನಮ್ಮ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವು ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡಿತು. ಪ್ರಾರಂಭದಲ್ಲಿ ಸರ್ಕಾರದ ಈ ಯೋಜನೆಗಳು ನಮ್ಮ ಗ್ರಾಮೀಣ ಜನರ ಬದುಕಿನಲ್ಲಿ ಕ್ರಾಂತಿಯನ್ನು ಸಾಧಿಸುವುದಕ್ಕೆ ಬರುತ್ತದೆ ಎಂದು ತಿಳಿಯಲಾಗಿತ್ತು. ಒಂದನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಬಗೆಯಲ್ಲಿ ಪ್ರಗತಿ ಕಂಡಿತ್ತಾದರೂ ನಂತರ ಅದರ ಪ್ರಗತಿ ಸ್ಥಗಿತಗೊಂಡಿತು. ಇಂದು ೧೦ನೇ ಪಂಚವಾರ್ಷಿಕ ಯೋಜನೆಯ ಪ್ರಗತಿಯಲ್ಲಿದ್ದರೂ ಸಹ ನಮ್ಮ ಗ್ರಾಮಗಳ ಸ್ಥಿತಿಗತಿ ಹೇಳತೀರಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಪ್ರಾಥಮಿಕವಾಗಿ ಬೇಕಾಗುವ ಸೌಕರ್ಯಗಳಂತೆ ಪ್ರತಿಯೊಂದು ಗ್ರಾಮಕ್ಕೂ ಪ್ರಾಥಮಿಕವಾಗಿ ಬೇಕಾಗಿರುವ ರಸ್ತೆ ಸೌಕರ್ಯ, ಬಸ್ಸಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪ್ರಾಥಮಿಕ ಶಿಕ್ಷಣದ ಕೊರತೆ, ಕುಡಿಯುವ ನೀರಿನ ತೊಂದರೆ, ಪ್ರಾಥಮಿಕ ಆರೋಗ್ಯದ ಸಮಸ್ಯೆ ಹೇಳತೀರಲಾಗಿದೆ. ಜಾಗತೀಕರಣ ಹಾಗೂ ಖಾಸಗೀಕರಣದಿಂದಾಗಿ ಗ್ರಾಮೀಣ ಜನರ ಮುಖ್ಯ ಕಸುಬುಗಳು ಮಾಯವಾಗಿ ಅವರ ಬದುಕು ನೀರಿನಿಂದ ಮೇಲೆ ತೆಗೆದ ಮೀನಿನಂತಾಗಿದೆ. ಇಂದಿಗೂ ನಮ್ಮ ಕೃಷಿಯು ಮಳೆಯೊಂದಿಗೆ ಕಣ್ಣುಮಚ್ಚಾಲೆ ಆಟವಾಡುವುದಾಗಿದೆ. ಬೃಹತ್ ನೀರಾವರಿ ಯೋಜನೆಗಳು ಇದ್ದರೂ ಸಹ ಸಕಾಲದಲ್ಲಿ ಮಳೆಯಾಗದೆ ನೀರಿನ ಕೊರತೆ ಉಲ್ಬಣಗೊಳ್ಳುತ್ತಿದೆ, ರೈತರು ದಿನಂಪ್ರತಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಇವೆಲ್ಲವುದಕ್ಕೂ ಸೂಕ್ತ ಕಾರಣ ಹಾಗೂ ಪರಿಹಾರ ಕಂಡುಹಿಡಿಯುವಲ್ಲಿ ಸರ್ಕಾರಗಳು ಎಷ್ಟೆ ಪ್ರಯತ್ನ ಪಡುತ್ತಿದ್ದರೂ ಸಹ ಆಪ್ರಯತ್ನಗಳು ವಿಫಲವಾಗುತ್ತಿವೆ. ರೈತರು ಮಾನಸಿಕವಾಗಿ ಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ನಮ್ಮ ಘನ ಸರ್ಕಾರಗಳು ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ನಿರ್ಮಿಸಿ ಅವುಗಳ ಮೂಲಕ ಗ್ರಾಮೀಣ ಪ್ರದೇಶವನ್ನು ಪ್ರಗತಿ ಸಾಧಿಸುವತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. ಅತಿಯಾದ ಜನಸಂಖ್ಯೆಯ ಒತ್ತಡದಿಂದಾಗಿ ಹಾಗೂ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನತೆಯು ತಿಳಿಯದಷ್ಟು, ಅಜ್ಞಾನಿಗಳಾಗಿರುವುದರಿಂದಾಗಿ, ಕೆಲವೇ ಕೆಲವು ಜನರಿಗೆ ಮಾತ್ರ ಅವು ದೊರಕುವಂತಾಗಿದೆ, ಏಕೆಂದರೆ ಮೊದಲೆ ತಿಳಿಸಿರುವ ಹಾಗೆ ನಮ್ಮ ಗ್ರಾಮಗಳ ಕಲ್ಯಾಣಕ್ಕೆಂದು ಸರ್ಕಾರವು ಅನೇಕ ಯೋಜನೆಗಳನ್ನು ಕೈಗೊಂಡಿದೆಯಷ್ಟೆ. ಈ ಯೋಜನೆಗಳನ್ನು ನಿರೂಪಿಸುವ ಮೊದಲು ಕಾರ್ಯರೂಪದಲ್ಲಿ ಜಾರಿಗೆ ತರುವ ಮುನ್ನ ಗ್ರಾಮೀಣ ಪ್ರದೇಶದ ಬದುಕಿನ ಬಗೆಗೆ ವಿವರಗಳನ್ನು ಸಂಪಾದಿಸುವ ಅವಶ್ಯಕತೆಯಿದೆ. ರೈತನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಜೀವನದ ಬಗ್ಗೆ ನಿರ್ದಿಷ್ಟವಾದ ವಿವರಗಳಿಲ್ಲದೆ ಹೋದಲ್ಲಿ ನಾವು ತಪ್ಪು ಗ್ರಹಿಕೆಯ ಮೇಲೆ ಯೋಜನೆಗಳನ್ನು ರಚಿಸಿ ನಾಳೆ ಅವುಗಳ ಸೋಲನ್ನು ಒಪ್ಪಿಕ್ಕೊಳ್ಳುವ ಸಂಭವವಿದೆ. ಉದಾಹರಣೆಗೆ ನಮ್ಮ ಗ್ರಾಮೀಣರು ವರ್ಷದುದ್ದಕ್ಕೂ ಸಾಲಗಾರರಾಗಿ ಅದರಲ್ಲಿಯೂ ದಲಿತವರ್ಗವೆಂದು ಕರೆಸಿಕೊಂಡವರ ಸ್ಥಿತಿಯಂತು ಹೇಳತೀರದಾಗಿದೆ. ಈ ಸಾಲವನ್ನು ಏತಕ್ಕಾಗಿ ಮಾಡುತ್ತಾರೆ? ಅದರಲ್ಲಿ ಅವರು ಕೃಷಿಯಿಂದ ಸಂಪಾದಿಸುವ ಹಣದ ಪ್ರಮಾಣವೆಷ್ಟು? ಇಂತಿವೆ ಮೊದಲಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳದೆ ಅವರ ಕೊರತೆಯ ಜೀವನವೊಂದರ ಕಾರಣವನ್ನಾಧರಿಸಿ ಸರ್ಕಾರವು ಸಾಲ (ಅಲ್ಪಾವಧಿ ಸಾಲ, ಮಧ್ಯಮಾವಧಿ ಸಾಲ, ದೀರ್ಘಾವಧಿ) ಕೊಟ್ಟರೆ ಆ ಹಣವನ್ನು ಆತನು ನಿರ್ದೇಶಿತ ಉದ್ದೇಶಕ್ಕೆ ಬಳಸುತ್ತಾನೆಂದು ಹೇಳುವುದು ಹೇಗೆ? ಗ್ರಾಮೀಣ ಪ್ರದೇಶದ ರೈತನು ಸಣ್ಣವನೇ ಇರಲಿ, ದೊಡ್ಡವನೇ ಇರಲಿ, ದಲಿತನೇ ಇರಲಿ, ಸವರ್ಣಿಯನೇ ಇರಲಿ ಸಾಲವನ್ನು ಮಾಡಿದರೆ ಅದನ್ನು ಭೂಮಿಯ ಸಾಗುವಳಿಗಾಗಿಯೇ ಮಾಡಿರಬೇಕೆಂದು ಗ್ರಹಿಸುವುದು ತಪ್ಪಾಗುತ್ತದೆ. ಏಕೆಂದರೆ ಅವರು ಬೆಳೆದು ಬಂದಿರುವ ಬದುಕಿನ ರಚನೆ ಬಹು ಜಟಿಲವಾಗಿದೆ. ತಾವುಗಳು ವಾಸಿಸುತ್ತಿರುವ ಜಗತ್ತಿನಲ್ಲಿ ಸಮಾಜದ ಜೀವನದ ಪ್ರತೀಕವಾಗಿ ಅವರು ಬಾಳಿಬೆಳೆದಿದ್ದಾರೆ. ಈ ಸಮಾಜ ಜೀವನದ ವಿವಿಧ ಕ್ಷೇತ್ರಗಳು ಒಂದಕ್ಕೊಂದು ಜೇಡರಬಲೆಯಂತೆ ತಳಕು ಹಾಕಿಕೊಂಡಿದೆ. ಮದುವೆ, ದೇವತಾಕಾರ್ಯ, ಕೌಟುಂಬಿಕ ಕಲಹ, ಸಾವುನೋವು ಮುಂತಾದ ಸಾಮಾಜಿಕ ಸಂಸ್ಥೆಗಳು ಒಂದನ್ನೊಂದು ಹಾಸು ಹೊಕ್ಕಾಗಿ ಹೆಣೆದುಕೊಂಡು ವ್ಯಕ್ತಿ ಜೀವನದ ಮೇಲೆ ನಮ್ಮ ನಿಚ್ಚಳವಾದ ಪ್ರಭಾವವನ್ನು ಪ್ರಾರಂಭದಿಂದಲೇ ಮೂಡಿಸುವವು. ಆದರೆ ಈ ಪ್ರಭಾವಕ್ಕೆ ವಿರುದ್ಧವಾಗಿ ಬೆಳೆಯುವವರು ಅಪವಾದವಾಗುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದ ರೈತನು ಸಾಲಗಾರನಾಗಿ ಬೆಳೆದಿದ್ದರೆ, ಅವನು ತನ್ನ ದುಡಿಮೆಯ ಫಲವನ್ನು ಮಗಳ ಮಗನ ಮದುವೆಗಾಗಿ, ಧಾರ್ಮಿಕ ಕಾರ್ಯಗಳಿಗಾಗಿ, ವರದಕ್ಷಿಣೆಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಿರಬಹುದು. ಹಾಗೆಯೇ ಕೃಷಿಯ ಸಲುವಾಗಿ ಅವರ ಅಭಿವೃದ್ಧಿಗೆಂದು ಸರ್ಕಾರವು ಸಾಲರೂಪದಲ್ಲಿ ಕೊಟ್ಟ ಹಣವನ್ನು ಆತನು ತಂದೆ ಮಾಡಿದ ಸಾಲವನ್ನು ತೀರಿಸುವುದಕ್ಕಾಗಿ ಅವರ ತಾಯಿಗೆ ಕೊಟ್ಟ ವಚನವನ್ನು ಪಾಲಿಸುವುದಕ್ಕಾಗಿ ವಿನಿಯೋಗಿಸಿರಬಹುದು. ಇಲ್ಲಿ ಹೇಳಬೇಕಾಗಿರುವ ಮಾತೆಂದರೆ; ಗ್ರಾಮಗಳ ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳು ಒಂದರಲ್ಲೊಂದು ಸೇರಿಕೊಂಡಿರುತ್ತವೆ. ಈ ಜೀವನದ ಅಭಿವೃದ್ದಿಗಾಗಿ ನಾವು ರೂಪಿಸುವ ಯೋಜನೆಗಳು ಒಟ್ಟು ಜೀವನದ ಸಮಗ್ರ ಪರಿಚಯದ ಆಧಾರದ ಮೇಲೆ ರೂಪಿತವಾಗಬೇಕೆಂಬುವುದಾಗಿದೆ.

ಭಾರತದ ಗ್ರಾಮೀಣರು ಜಗತ್ತಿನ ಇತರ ಗ್ರಾಮೀಣರಂತೆಯೇ, ಸಂಪ್ರದಾಯ ಶೀಲರಾಗಿದ್ದಾರೆ. ಆದರೆ ಇವರು ಪ್ರಗತಿಯ ಜೊತೆಜೊತೆಗೆಯೇ ನಡೆಯುವವರಾಗಿದ್ದಾರೆನ್ನಬಹುದು. ಅವರ ಕೃಷಿ ಚಟುವಟಿಕೆಗಳು ಹಾಗೂ ಆರ್ಥಿಕ ವ್ಯವಸ್ಥೆಗಳು ಅವರು ಬೆಳೆದು ಬಂದಿರುವ ಸಾಮಾಜಿಕ ಕಟ್ಟುನಿಟ್ಟುಗಳಿಗೆ ಒಳಗಾಗಿವೆ. ಪರಂಪರಾಗತವಾಗಿ ಬಂದ ಆ ಪಧ್ದತಿ ಅವರಿಗಿರುವ ದುಃಸ್ಥಿತಿಯಲ್ಲಿ ರಕ್ಷಣೆಯನ್ನು, ಬದುಕುವ ಆಸೆಯನ್ನು ನೀಡಿದೆ. ಈ ರಕ್ಷಣೆ ಮತ್ತು ಆಶೋತ್ತರಗಳನ್ನು ಇದ್ದಕ್ಕಿದ್ದಂತೆ ತೀವ್ರವಾಗಿ ಪ್ರತಿಭಟಿಸುತ್ತಾ ಬಂದ ಸುಧಾರಣೆಗಳು ಯಾಂತ್ರೀಕೃತ ಜೀವನ, ನೂತನ ಕೃಷಿ ಪದ್ದತಿ ಮುಂತಾದವುಗಳು ಅವರನ್ನು ಸಂದೇಹಕ್ಕೀಡು ಮಾಡಲಿಲ್ಲವೆನ್ನಲು ಸಾಧ್ಯವೆ? ಹತ್ತಿರದ ಪಟ್ಟಣದ ಯಾಂತ್ರೀಕೃತ ಉದ್ಯಮಗಳು ಅವರ ಅವಿಭಕ್ತ ಕುಟುಂಬ ರಚನೆಯಲ್ಲಿ ತುಡಿತಗಳನ್ನುಂಟು ಮಾಡಿ ಮನೆಯ ಯುವಕ ಯುವತಿಯರು ಮೆಲ್ಲಮೆಲ್ಲನೆ ನಗರಗಳಿಗೆ ಸಾಗಿರುವುದನ್ನು-ಸಾಗುತ್ತಿರುವುದನ್ನು ಗ್ರಾಮದ ಹಿರಿಯರು ನೋಡುತ್ತಿದ್ದಾರೆ. ಬೃಹತ್ ಹಾಗೂ ಮಧ್ಯಮ ನೀರಾವರಿ ಯೋಜನೆ, ಬೃಹತ್ ಕೈಗಾರಿಕೆಗಳು, ಜಾಗತೀಕರಣ, ಖಾಸಗೀಕರಣ ಮುಂತಾದವುಗಳು ಗ್ರಾಮದ ಬಡವರನ್ನು ಹಾಗೂ ಅಸ್ಫೃಶ್ಯರನ್ನು ಇದ್ದ ಹಾಗೆಯೇ ಉಳಿಸಿಕೊಂಡಿದೆ. ಆದರೆ ಶ್ರೀಮಂತರನ್ನು ಇನ್ನೂ ಶ್ರೀಮಂತರನ್ನಾಗಿ ಮಾಡಿ ಅವರ ನಡುವಿನ ನಾಳೆಯ ಸಂಬಂಧಕ್ಕೆ ವ್ಯತ್ಯಯ ತಂದುದನ್ನು ಅವರು ಅನುಭವಿಸಿದ್ದಾರೆ. ಇಂದಿನ ಸಾರಿಗೆಸಂಪರ್ಕದ ಸೌಕರ್ಯದಿಂದಾಗಿ ಬ್ರಾಹ್ಮಣ-ಶೂದ್ರ-ಹೊಲೆಮಾದಿಗರೆನ್ನದೆ ಎಲ್ಲರೂ ಸರಿಸಮನಾಗಿ ಕುಳಿತು ಪ್ರವಾಸ ಮಾಡುವ ಸಂದರ್ಭವನ್ನು ಮನಗಂಡಿದ್ದಾರೆ. ಮಾರುಕಟ್ಟೆಯ ಸಲುವಾಗಿ ಕೃಷಿಯ ಉತ್ಪಾದನೆಯಲ್ಲಿ ತೊಡಗಿದ ರೈತ ಮಧ್ಯವರ್ತಿಗಳ ಸಂಬಂಧ ಕುಂಠಿತವಾದುದನ್ನು ನಿರೀಕ್ಷಿಸಿದ್ದಾರೆ. ಇವೆಲ್ಲವೂ ಹಳ್ಳಿಯ ನಾಳೆಯ ಜೀವನಕ್ಕೆ ಧಕ್ಕೆಯನ್ನುಂಟು ಮಾಡಿ ಇದ್ದ ಶಾಂತಿಯನ್ನು ಕದಡಿದುದನ್ನು ಮನಗಂಡು ಯಾಂತ್ರಿಕ ಜೀವನವನ್ನು, ನಗರೀಕರಣವನ್ನು, ಜಾಗತೀಕರಣವನ್ನು ವಿರೋಧಿಸುವ ದಿಕ್ಕಿನಲ್ಲಿ ನಮ್ಮ ಗ್ರಾಮಗಳನ್ನು ರಕ್ಷಿಸಬೇಕಾಗಿದೆ.

ಜಾತಿ ಶ್ರೇಣಿಯಲ್ಲಿ ಕೆಳಗಿನ ಹಂತದಲ್ಲಿರುವ ಜನರು, ಮುಖ್ಯವಾಗಿ ಹೊಲೆಯರು, ಮಾದಿಗರು, ಜಾಡಮಾಲಿಗಳು ಇಂದಿನ ಶಿಕ್ಷಣದ ಯೋಜನೆಗಳ ಫಲಾನುಭವದ ಲಾಭವನ್ನು ಪಡೆದು ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯ್ತಿ ಶಾಸನ ಸಭೆ, ಲೋಕಸಭೆ, ರಾಜ್ಯಸಭೆ, ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದವರೆಂಬ ಹೆಸರಿನಲ್ಲಿ ಪ್ರಾತಿನಿಧ್ಯವನ್ನು ಪಡೆದು ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. ಪಟ್ಟಣದ ರಸ್ತೆಗಳನ್ನು ತಮ್ಮ ಹಳ್ಳಿಯ ಎಡಬಲದಲ್ಲಿಯೇ ಕಾಣದ ಜನತೆ ಈಗ ತಮ್ಮ ಗ್ರಾಮಗಳಿಗೆ ಬರುವ ಬಸ್ಸುಗಳಲ್ಲಿ ಕುಳಿತು ಪಟ್ಟಣ ಸಂಪರ್ಕವನ್ನು ಹೆಚ್ಚುಹೆಚ್ಚಾಗಿ ಪಡೆದು ಜಾಗತಿಕ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಇಂಥ ಸನ್ನಿವೇಶದ ಕುರಿತೇ ಈ ಕೃತಿ ನಮ್ಮ ಗ್ರಾಮಗಳು ಅಂದು ಇಂದು ಎಂಬ ಶೀರ್ಷಿಕೆಯನ್ನೊತ್ತು ಕೆಲವು ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಹಾಗೂ ಪರಿಹಾರದ ಕ್ರಮಗಳನ್ನು ಚರ್ಚಿಸುತ್ತದೆ.

ಈ ಕೃತಿಯನ್ನು ಪ್ರಕಟಿಸಲು ಒಪ್ಪಿಗೆ ಸೂಚಿಸದ ಮಾನ್ಯ ಕುಲಪತಿಗಳಾದ ಪ್ರೊ. ಲಕ್ಕಪ್ಪಗೌಡರಿಗೂ, ಮಾನ್ಯ ಕುಲಸಚಿವರಾದ ಪ್ರೊ. ಕೆ. ವಿ. ನಾರಾಯಣ, ಅಧ್ಯಯನಾಂಗದ ನಿರ್ದೇಶಕರಾದ ಪ್ರೊ. ಕರೀಗೌಡ ಬೀಚನಹಳ್ಳಿ, ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಹಿ. ಚಿ. ಬೋರಲಿಂಗಯ್ಯನವರಿಗೆ ಕೃತಜ್ಞನಾಗಿರುತ್ತೇನೆ.

ಈ ಕೃತಿಯ ಹಸ್ತಪ್ರತಿಯನ್ನು ಪರಿಶೀಲಿಸಿ ಕೆಲವು ಸೂಚನೆಗಳನ್ನು ನೀಡಿ ಪ್ರಕಟಣೆಗೆ ಸೂಚಿಸಿದ ಕರ್ನಾಟಕ ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಸಿಂದಗಿ ರಾಜಶೇಖರ್ ರವರಿಗೆ ಕೃತಜ್ಞನಾಗಿರುತ್ತೇನೆ. ನನ್ನ ಸಂಶೋಧನಾ ಕಾರ್ಯದಲ್ಲಿ ಅನೇಕ ಸಲಹೆಗಳನ್ನು ನೀಡಿ ಸಹಕರಿಸುತ್ತಿರುವ ವಿಭಾಗದ ಸಹೋದ್ಯೋಗಿ ಮಿತ್ರರಿಗೆ ಕೃತಜ್ಞನಾಗಿರುತ್ತೇನೆ. ನನ್ನ ಶೈಕ್ಷಣಿಕ ಬದುಕಿಗೆ ಆಸರೆಯಾಗಿರುವ ತಂದೆ, ತಾಯಿ ಹಾಗೂ ಹೆಂಡತಿ ಬಿ. ಎ. ನಾಗವೇಣಿ, ಮಗಳು ಸ್ಪೂರ್ತಿಗೆ ಅಭಾರಿಯಾಗಿರುತ್ತೇನೆ.

ಪುಸ್ತಕ ಪ್ರಕಟಣೆಗೆ ಸಹಕರಿಸಿದ ಗೆಳೆಯ ಸುಜ್ಞಾನಮೂರ್ತಿ, ಕೆ. ಎಲ್. ರಾಜಶೇಖರ್, ಕೆ. ಕೆ. ಮಕಾಳಿ ಹಾಗೂ ಅಕ್ಷರ ಸಂಯೋಜಿಸಿದ ವೈ. ಎಂ. ಶರಣಬಸವ ಅವರಿಗೆ ಆಭಾರಿಯಾಗಿರುತ್ತೇನೆ.

– ಎನ್ಚಿನ್ನಸ್ವಾಮಿ ಸೋಸಲೆ